ದೂರ ತೀರ ಯಾನನಡಿಗೆ ನಮ್ಮ ಖುಷಿಗೆಬೆರಗಿನ ಪಯಣಿಗರುಮ್ಯಾಜಿಕ್ ತಾಣಗಳುವಿಂಗಡಿಸದಸೂಪರ್ ಗ್ಯಾಂಗುಸ್ಮರಣೀಯ ಜಾಗ

ಕೋವಿಡ್ ನಿರ್ಬಂಧದ ಸಡಿಲಿಕೆಯಿಂದ ಕೊಂಚ ಸುಧಾರಿಸಿಕೊಳ್ಳಲು ಕೊಡಚಾದ್ರಿಯ ಪಯಣ..

ಕೋವಿಡ್ ನಿರ್ಬಂಧನೆ ಸಡಿಲಗೊಂಡ ಮೇಲೆ ಹೆಚ್ಚಿನವರು ಮನಸ್ಸನ್ನು ಪ್ರಶಾಂತಗೊಳಿಸಲು ಆರಿಸಿದ ಜಾಗ ಪ್ರಸಿದ್ಧ ಚಾರಣ ತಾಣ ಕೊಡಚಾದ್ರಿ. ಹಸಿರಿನ ಮಡಿಲಲ್ಲಿ, ಜಲಪಾತದ ಬುಡದಲ್ಲಿ ಸಮಯ ಕಳೆದ ಪ್ರವಾಸಿ ಪ್ರಿಯ ತಂಡದ ಕಥೆಯಿದು.

  • ವಿಜಯ್ ಮಾಗಡಿ

ದಿನಾಂಕ 12ನೇ ಜುಲೈ 2021, ಬುಧವಾರ ಬೆಳ್ಳಂಬೆಳಿಗ್ಗೆ ಏನೋ ಜೀವನವನ್ನೇ ಕಳೆದುಕೊಂಡಂತೆ ಹಾಸಿಗೆಯ ಸಂದಿಗೊಂದಿಯಲ್ಲಿ ಹುಡಿಕಿ ಹೆಕ್ಕಿ ತೆಗೆದ ಜಂಗಮಗಂಟೆ (ಮೊಬೈಲ್) ತೆರೆದು ವಾಟ್ಸಾಪ್ನಲ್ಲಿ ಸ್ನೇಹಿತರ ಸ್ಟೇಟಸ್ ನೋಡುವಾಗ ನನ್ನ ಕಣ್ಣಿಗೆ ಬಿದ್ದು ನಿದ್ದೆಯಿಂದ ಎದ್ದು ಕೂರಿಸಿದ್ದೇ “ಸಂದೀಪನ ಕೊಡಚಾದ್ರಿ ಚಾರಣದ ಕೊನೆ ನಾಲ್ಕು ಸೀಟ್ ಮಾತ್ರ ಬಾಕಿಯಿದೆ” ಅನ್ನೋ ಪೋಸ್ಟ್, ವಿಶೇಷವಾಗಿ ಅದು ವಾರದ ಕೊನೆಯ ದಿನಗಳಾದ್ದರಿಂದ ನನ್ನ ಮನಸ್ಸಿಗೆ ಎರಡನೆ ಯೋಚನೆಯೇ ಬರಲಿಲ್ಲ.

ಕಳೆದ ಮೂರು ತಿಂಗಳಿನಿಂದ ಕೋವಿಡ್ ನಿರ್ಬಂಧ ಹಾಗೂ ಅದರಿಂದಾದ ದುರ್ಘಟನೆಗಳಿಂದ ಮನೆಯಲ್ಲಿ ಬೇಡವೆಂದರೂ ಬೇಕೇಬೇಕೆನ್ನುವ ಹಾಗೆ ನಮ್ಮನ್ನೆಲ್ಲ ನಾವೇ ಕೂಡಿಹಾಕಿಕೊಂಡು ತುಸು ಅತಿಯಾದ ಮಾನಸಿಕ ಒತ್ತಡದಿಂದ ಕೊಂಚ ಸುಧಾರಿಸಿಕೊಳ್ಳಲು ನಾನು ನನ್ನ ಗೆಳತಿ ದೀಪ ಜೊತೆ ಕೊಡಚಾದ್ರಿಯ ಪಯಣ ಮಾಡಿಬರೋದು ಉತ್ತಮ ಎನಿಸಿತು.

“ವಿಜಯ್ ನೀ ಎಲ್ಲಾದರೂ ಹೋಗು, ಹೇಗಾದರೂ ಹೋಗು, ಪ್ಲೀಸ್ ನಿನ್ನ ಜೊತೆಯಲ್ಲಿ ನನ್ನನ್ನು ಕರೆದುಕೊಂಡು ಹೋಗೋ !!!! ಇದು ನನ್ನ ಹ್ಯಾಪಿ ಸೋಲ್ (ದೀಪ) ಸ್ಟ್ಯಾಂಡರ್ಡ್ ಸ್ಟೇಟ್ಮೆಂಟ್ !!!! ಹಾಗೆಯೇ ಯೋಚಿಸುತ್ತ ಮತ್ತೆ ಯಾರನ್ನಾದರೂ ಕರೆದುಕೊಂಡು ಹೋಗೋ ಮನಸ್ಸಿನಿಂದ ನನ್ನ ಸ್ನೇಹಿತನಿಗೆ ಫೋನ್ ಮಾಡಿ ವಿನಯ್ ವೀಕೆಂಡ್ ಏನಮ್ಮ ಪ್ಲಾನ್ ಅಂತ ನೆಪಮಾತ್ರಕ್ಕೆ ಕೇಳಿದ್ದಷ್ಟೇ ಯಾಕೆಂದರೆ ಅವನ ಸೀಟ್ ಆಗಾಗಲೇ ನನ್ನ ಕಡೆಯಿಂದ ಬುಕ್ ಆಗಿದ್ದಾಗಿತ್ತು ಮತ್ತೆ ಅವನನ್ನು ಒಪ್ಪಿಸಿಯಾಗಿತ್ತು. ತಡಮಾಡದೆ ಸಂದೀಪನಿಗೆ ಸಂದೇಶ ಹರಿಬಿಟ್ಟು ಮೂರು ಜನರಿಗೆ ಜಾಗ ಕಾಯ್ದಿರಿಸಪ್ಪಾ ಅಂತ ಹೇಳಿ ಆ ದಿನದ ಕೆಲಸ ಆರಂಭ ಮತ್ತೆ ಯಾವಾಗ ಶುಕ್ರವಾರ ಸಂಜೆಯಾಗುತ್ತೋ ಅನ್ನೋ ಕಾತುರ.

ಶುಕ್ರವಾರ ರಾತ್ರಿ 9.30ಕ್ಕೆ ನಾವು ಮೊದಲೇ ಕಾದಿರಿಸಿದಂತೆ ಗೊರಗುಂಟೆಪಾಳ್ಯದ ಪಿಕಪ್ ಪಾಯಿಂಟ್ನಲ್ಲಿ  ಸಂದೀಪನ “MAD ADVENTURERS” ತಂಡ ಸೇರಿಕೊಳ್ಳೋ ಆತುರ ಹಾಗು ವಾರಾಂತ್ಯದ ಟ್ರಾಫಿಕ್ ಭಯದಿಂದ ಸ್ವಲ್ಪ ಬೇಗನೆ ಹೋಗಿದ್ದರಿಂದ ಅಲ್ಲೇ ಹತ್ತಿರದ “ಶೆಲ್ ಸೆಲೆಕ್ಟ್” ಕಾಫಿ ಶಾಪಿನಲ್ಲಿ ಕುಳಿತು ನನ್ನ ನೆಚ್ಚಿನ ಗೆಳತಿ ದೀಪ ಜೊತೆ ಬಿಸಿ ಕಾಫಿ ಜೊತೆ ಹರಟೆ ಹೊಡೆಯೋ ಅವಕಾಶ ಕೂಡ ಅಂದು ನನ್ನ ಪಾಲಿಗೊದಗಿತ್ತು, ಕೆಲವೊಮ್ಮೆ ಅಂದುಕೊಳ್ಳದಿದ್ದರು ಸಂಧರ್ಭ ಸರಿಹೋಗಿಸುತ್ತೆ.

ಅದರ ನಡುವೆ ಹಾಗೇ ಒಂದೆರಡು ಸೆಲ್ಫಿ ಚಿತ್ರಗಳನ್ನು ತೆಗೆದು ನನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಹಾಕಿ ಸ್ನೇಹಿತರ ಹೊಟ್ಟೆಗೆ ಬೆಂಕಿ ಹಚ್ಚಿ ಅಲ್ಲಿಂದ ಪಿಕಪ್ ಪಾಯಿಂಟ್ ಬಳಿಗೆ ಬಂದು ಸುಮಾರು ಅರ್ಧ ಗಂಟೆ ಕಾಲ ಕಾದನಂತರ ಸ್ನೇಹಿತ ವಿನಯ್ ಕೂಡ ನಮ್ಮ ಒಟ್ಟಿಗೆ ಸೇರಿಕೊಂಡ, ಸ್ವಲ್ಪ ಹೊತ್ತಿನಲ್ಲೇ ಟ್ರೆಕಿಂಗ್ ತಂಡದ ಜೊತೆ ಸೇರಿಕೊಂಡಾಗ ಮನಸ್ಸಿಗೆ ಒಂತರಾ ಸಂತೋಷ ಯಾಕೆಂದರೆ ನಾವು ಹೊರಟಿದ್ದು ಬೆಂಗಳೂರಿನಿಂದ ಮೈಸೂರಿಗಲ್ಲ, ಅದು ಕೊಡಚಾದ್ರಿ ಅನ್ನೋ ನಿಸರ್ಗದ ಸೊಬಗಿನ ಮಾಯಾ ಲೋಕಕ್ಕೆ !!!

“MAD ADVENTURERS” ಕ್ಯಾಪ್ಟನ್ ಸಂದೀಪ್ ಮತ್ತು ಗಂಗಾಧರ್ ತಡರಾತ್ರಿ 11.30ರ ಹೊತ್ತಿಗೆ ತುಮಕೂರು ಬಳಿಯ ಕೋಸ್ಟಲ್ ಡೈನ್ ಹೋಟೆಲ್ ಹತ್ತಿರ ತಂಡದ ಎಲ್ಲ ಸದಸ್ಯರ ಪರಿಚಯ ಮತ್ತು ಟ್ರೆಕ್ಕಿಂಗ್ ನೀತಿ ನಿಯಮಗಳ ತಿಳಿ ಹೇಳುವ ಅವರ ಕೆಲಸ ಮಾಡಿ ನಮಗೆಲ್ಲ ಸ್ವಲ್ಪ ಸಮಯ ಕೊಟ್ಟು ಕಾಫಿ ತಿಂಡಿ ಮುಗಿಸಿ ಬನ್ನಿ ಎನ್ನುವಷ್ಟರಲ್ಲಿ ನನ್ನಾಕೆ ಅಲ್ಲೇ ಇದ್ದ “ಪೋಲಾರ್ ಬೇರ್” ಐಸ್ ಕ್ರೀಮ್ ಶಾಪ್ ಒಳಗೆ ಐಸ್ ಕ್ರೀಮ್ ಮೆತ್ತಲು ಕಾದು ನಿಂತಿದ್ದಳು. ಅವಳಿಗೆ ಚಳಿ ಮತ್ತೆ ಮಳೆಯಲ್ಲಿ ಐಸ್ ಕ್ರೀಮ್ ತಿನ್ನೋದು ಅಂದರೆ ಹೇಳತೀರದ ಆಸೆ !!!

ಅಲ್ಲಿಂದ ರಾತ್ರಿ ಸುಮಾರು 12 ಗಂಟೆಗೆ ಹೊರಟು ಬೆಳಿಗ್ಗೆ 6 ಗಂಟೆಗೆ ದೂರದ ಕೊಡಚಾದ್ರಿ ತಲುಪುವ ಗುರಿ ಇಟ್ಟುಕೊಂಡಿದ್ದ ಕ್ಯಾಪ್ಟನ್ ಗಂಗಾಧರ್ ಬೆಳಿಗ್ಗಿನ ತಯಾರಿಗಳ ಬಗ್ಗೆ ಹೇಳುವಾಗ ನನಗೆ ಅನಿಸಿದ್ದು ಖಂಡಿತ ಅದು ಅಸಾಧ್ಯ !!!! ನಮ್ಮ ಬಸ್ ಡ್ರೈವರ್ ಅವರ ಅಡ್ವೆಂಚರ್ ಡ್ರೈವಿಂಗ್ ಹೇಗೋ ನಮ್ಮನ್ನು ಬೆಳಿಗ್ಗೆ 8 ಗಂಟೆಗೆ ಕೊಡಚಾದ್ರಿ ಹತ್ತಿರದಲ್ಲೇ ಇರುವ ಕಟ್ಟಿನಹೊಳೆ ಗ್ರಾಮದ ಶ್ರೀ ಕೆ ಆರ್ ರವೀಶ್ ಕುಮಾರ್ ಅವರ ಹಳ್ಳಿಮನೆ ಹೋಂ ಸ್ಟೇ ತಲುಪಿಸಿ ಅವರ ಕೆಲಸ ಅಚ್ಚುಕಟ್ಟಾಗಿ ಮುಗಿಸಿದರು.

ನಾವು ಸುಮಾರು 23 ಜನರ ತಂಡ ಕೊಡಚಾದ್ರಿಯ ನಿಸರ್ಗದ ಮಾಯಾ ಲೋಕಕ್ಕೆ ಬಸ್ಸಿನಿಂದ ಹೊರಗಡೆ ಕಾಲಿಟ್ಟಾಗ ನಮ್ಮನ್ನೆಲ್ಲ ಸ್ವಾಗತಿಸಿದ್ದು ಅಲ್ಲಿನ ಜನಕ್ಕೆ ಸಾಮಾನ್ಯವಾದರೂ ನಮಗೆಲ್ಲ ವಿಶೇಷವಾದ “ಜಡಿ ಮಳೆ” ಯಾಕೆಂದರೆ ಬೆಂಗಳೂರಿನಲ್ಲಿ ಮಳೆ ಬಂದರೆ ಮನೆ ಒಳಗೆ ಸೇರುವ ನಾವು ಮಲೆನಾಡಿಗೆ ಹೋದಾಗ ಮಳೆಗೆ ದೇಹ ಒಡ್ಡಿ ಸಂತೋಷ ಪಡುತ್ತೇವೆ. ನಾವೆಲ್ಲ ನಮ್ಮ ಬ್ಯಾಗ್ ಹಿಡಿದು ನಮಗೆ ಕಾದಿರಿಸಿದ್ದ ರೂಮ್ ತಲುಪಿ ನಿತ್ಯಕರ್ಮ ಮುಗಿಸಿ, ರವೀಶ್ ಅವರ ಧರ್ಮಪತ್ನಿಯವರು ಮಾಡಿದ್ದ ಉಪ್ಪಿಟ್ಟು ಚಿತ್ರಾನ್ನ ತಿಂದು, ನಾವೇ ತೆಗುದುಕೊಂಡು ಹೋಗಿದ್ದ ಡಬ್ಬಗಳಲ್ಲಿ ಪುಳಿಯೋಗರೆ ತುಂಬಿಸಿಕೊಂಡು ಬಿಸಿ ಕಾಫಿ ಕುಡಿದು ಮುಗಿಸುವಷ್ಟರಲ್ಲಿ ಬೆಳಿಗ್ಗೆ 10 ಗಂಟೆಯಾಗಿತ್ತು.

kodachadri Western Ghats Shivamogga

ನನಗೆ ಚಾರಣ ಅನ್ನೋದು ಅಷ್ಟೊಂದು ಹೊಸತಲ್ಲವಾದ್ದರಿಂದ ಎಲ್ಲೋ ನಾವು ಸ್ವಲ್ಪ ನಿದಾನವಾಗಿ ನಮ್ಮ ಚಾರಣದ ಆರಂಭ ಮಾಡುತಿದ್ದೇವೆ ಅನ್ನೋ ಪಿಸು ಮಾತುಗಳಿಂದ ಹಾಗೆ ಎಲ್ಲರನ್ನು ಒಟ್ಟುಗೂಡಿಸಿಕೊಂಡು ಕ್ಯಾಪ್ಟನ್ ಗಂಗಾಧರ್ ನಮ್ಮನೆಲ್ಲ ಕೊಡಚಾದ್ರಿಯ ಚೆಕ್ ಪೋಸ್ಟ್ ಬಳಿಗೆ ಕರೆದುಕೊಂಡು ಹೋಗಿ ನಮ್ಮ ಚಾರಣ ಆರಂಭಿಸಿದರು.

ಕೊಡಚಾದ್ರಿ ಅಂದರೆ ಸಾಮಾನ್ಯವಾಗಿ ಎಲ್ಲರಿಗು ಗೊತ್ತಿರೋದು ಚೆಕ್ ಪೋಸ್ಟ್ ಹತ್ತಿರ ಹೋಗಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಟಿಕೆಟ್ ಪಡೆದು ಸುಮಾರು ಹತ್ತು ಕಿಲೋಮೀಟರ್ ದುರ್ಗಮ ರಸ್ತೆಯ ಜೀಪ್ ಪ್ರಯಾಣ ಮತ್ತೆ ಅಲ್ಲಿಂದ ಸುಮಾರು ಎರಡು ಕಿಲೋಮೀಟರ್ ಕಾಲ್ನಡಿಗೆ ನಡೆದರೆ ಗೋಚರಿಸುವುದೇ ಹಸಿರನ್ನೇ ಹಾಸುಹೊದ್ದಿರುವ ಬೆಟ್ಟದ ಸಾಲುಗಳು ಮತ್ತೆ ಪುರುಸೊತ್ತು ಕೊಡದೆ ತಂಪಾದ ಗಾಳಿಯ ಜೊತೆ ಸದಾ ಸುರಿಯುವ ಮಳೆ ಮಳೆ ಮಳೆ !!!!

ಯಾರೇ ಆದರೂ ನಿಜವಾದ ಕೊಡಚಾದ್ರಿಯ ಚಾರಣ ಪ್ರವಾಸದ ಆನಂದ ಅನುಭವಿಸಬೇಕೆಂದರೆ ಜೀಪ್ ದಾರಿಯ ಚೆಕ್ ಪೋಸ್ಟ್ ಬಳಿಯಿಂದ ಸುಮಾರು ಮೂರು ಕಿಲೋ ಮೀಟರ್ ಕಾಡಿನ ದಾರಿಯಲ್ಲಿ ನಡೆದರೆ ಮತ್ತೊಂದು ಸಣ್ಣ ಚೆಕ್ ಪೋಸ್ಟ್ ಸಿಗುತ್ತೆ ಯಾಕೆಂದರೆ ನಾವೆಲ್ಲ ಕೊಂಡು ಹೋಗಿರೋ ಪ್ಲಾಸ್ಟಿಕ್ ಚೀಲ, ನೀರಿನ ಬಾಟಲಿ ಮತ್ತು ಊಟದ ಡಬ್ಬಗಳ ಲೆಕ್ಕ ಹಾಕಿ ಅದಕ್ಕೆ ಹಣ ಕಟ್ಟಿಸಿಕೊಂಡು ರಸೀದಿ ಕೊಟ್ಟು ದಯವಿಟ್ಟು ನಿಮ್ಮ ಪ್ಲಾಸ್ಟಿಕ್ ಚೀಲ ಮತ್ತು ಡಬ್ಬಗಳನ್ನು ಎಲ್ಲೆಂದರಲ್ಲಿ ಎಸೆದು  ನಿಸರ್ಗವನ್ನು ಹಾಳು ಮಾಡಬೇಡಿ, ಅವನ್ನೆಲ್ಲ ಹಾಗೆ ತಂದು ನಿಮ್ಮ ಹಣವನ್ನು ಮತ್ತೆ ಹಿಂತಿರುಗಿ ಪಡೆಯಿರಿ ಅನ್ನೋ ಸರ್ಕಾರದ ನಿಯಮ ತಿಳಿ ಹೇಳೋ ಪ್ರಯತ್ನ.

ಅಲ್ಲೇ ಒಂಟಿ ಮನೆಯಲ್ಲಿ ಸಣ್ಣ ಕಿರಾಣಿ ಅಂಗಡಿ ಮಾಡಿಕೊಂಡು ಅದರಲ್ಲಿ ಬಿಸ್ಕೆಟ್ ಮತ್ತು ಮಜ್ಜಿಗೆಯಿಂದ  ನಮ್ಮಂತಹ ಚಾರಣಿಗರ ಹಸಿವು ಮತ್ತು ದಾಹವನ್ನು ನೀಗಿಸುವ ಮಹತ್ಕಾರ್ಯ ಕೂಡ ಉಂಟು.

ನೀವುಇದನ್ನುಇಷ್ಟಪಡಬಹುದು: ಅದ್ಭುತ ಅನುಭವಗಳ ಮೂಟೆ ದೇವರ ಕಾಡು ಚಾರಣ

ಅಲ್ಲಿಂದ ಸುಮಾರು ಒಂದು ಕಿಲೋ ಮೀಟರ್ ದಟ್ಟ ಕಾಡಿನಲ್ಲಿ ನಡೆದು ಸಾಗಿದರೆ ನಮಗೆ ಹಿಡಿಲುಮನೆ ಜಲಪಾತದ ಅಂತಿಮ ಘಟ್ಟದ ದರ್ಶನ ಆರಂಭ ಆದರೆ ಅದರ ವಿಸ್ತೀರ್ಣ ಸುಮಾರು ಐನೂರು ಮೀಟರ್ ವರೆಗೂ ವಿಸ್ತರಿಸಿದೆ, ಮೇಲೆ ಸಾಗಿದಂತಲ್ಲ ಹಿರಿದಾಗುವ ಜಲಪಾತ ತನ್ನ ಸೌಂದರ್ಯದಿಂದ ನಮ್ಮ ದೇಹದ ಹಾಗೂ ಮನಸ್ಸಿನ ಎಲ್ಲ ನೋವುಗಳನ್ನು ಮರೆಸುವಷ್ಟು ಅತ್ಯದ್ಭುತವಾಗಿದೆ. ಜಲಪಾತ ಅಂದಮೇಲೆ ಆ ನೀರಿಗೆ ದೇಹವನ್ನೊಡ್ಡದೆ ಬಟ್ಟೆ ಒದ್ದೆ ಮಾಡಿಕೊಳ್ಳದೆ ಮುನ್ನಡೆದರೆ ಅವರಿಗೆ ಅದರ ಮಜಾ ಗೊತ್ತಿಲ್ಲ ಹಾಗು ಗೊತ್ತು ಮಾಡಿಕೊಳ್ಳಲು ತಯಾರಿಲ್ಲ ಅನ್ನಬಹುದಷ್ಟೇ.

kodachadri Western Ghats Shivamogga

ಸುಮಾರು ಒಂದು ಗಂಟೆ ಕಾಲ ನೀರಿನಲ್ಲಿ ಆಟವಾಡಿ ಮೈ ನವಿರೇಳಿಸಿಕೊಂಡು ಫೋಟೋ ತೆಗೆಸಿಕೊಂಡು ಹೊರಡುವಾಗ ಕಾಲು ಜಾರಿ ಬಿದ್ದು ಅಯ್ಯೋ ಸದ್ಯ ಕೆಳಗೆ ಹೋಗಲಿಲ್ಲ ಅಂತ ನನ್ನ ಮನಸ್ಸಿಗೆ ನಾನು ಹೇಳಿಕೊಳ್ಳುತ್ತಿದ್ದರೆ, ಎಲ್ಲಿ ಹೋದರು ಬೀಳೋದು ತಪ್ಪಲಿಲ್ವ ನಿಂದು ಅಂತ ನನ್ನ ಚಿರ ಯುವತಿ ಹೆಂಡತಿಯ ಬಾಯಿಂದ ಮಂತ್ರ ಪಠಿಸಿಕೊಂಡು ಮುಂದೆ ನಡೆಯೋ ಮಾರ್ಗದಲ್ಲಿ ದಟ್ಟ ಕಾಡಿನ ಪ್ರಕೃತಿಯ ಸೌಂದರ್ಯವನ್ನು ಅನುಭವಿಸುವದಕ್ಕಿಂತ ಹೆದರಿದ್ದೆ ಜಾಸ್ತಿ ಯಾಕೆಂದರೆ ಅಲ್ಲೆಲ್ಲ ಜಿಗಣೆ ಕಾಟ.

ಅಲ್ಲಿಂದ ಸುಮಾರು 3  ಕಿಲೋ ಮೀಟರ್ ಕಾಡುದಾರಿ ಸವೆಸಿದರೆ ನಮಗೆ ಎದುರಾಗುವುದೇ ಒಂಟೆಯ ದೇಹ ಹೋಲುವ ಸಾಲು ಸಾಲು ಏರಿಳಿತದ ಬೆಟ್ಟ ಗುಡ್ಡಗಳು, ಅದರ ಮೇಲೆ ಹಸಿರು ಹುಲ್ಲು ಹಾಸು. ಅದರಿಂದಾಚೆಗೆ ಬಂದ ಕೂಡಲೇ ಜೀಪ್ ಓಡಾಡುವ ಶಬ್ದ ಹಾಗು ರಸ್ತೆ ಕಾಣಿಸಿದಾಗ ಮನಸ್ಸಿಗೆ ಒಂತರಾ ಖುಷಿ ಯಾಕೆಂದರೆ ಪ್ರಾಯಶಃ ನಾವು ಇನ್ನೇನು ಬೆಟ್ಟದ ತುದಿ ತಲುಪಿದ್ದೇವೇನೋ ಅನ್ನೋ ಅಪನಂಬಿಕೆ.

ಅಷ್ಟೋತ್ತಿಗಾಗಲೇ ಮಧ್ಯಾಹ್ನ ಸುಮಾರು 2.30 ಗಂಟೆ, ಹೊಟ್ಟೆ ಚುರುಗುಟ್ಟಲಾರಂಭಿಸಿತ್ತು, ಯಾಕೆಂದರೆ ನಾವೇ ತಂದಿದ್ದ ಪುಳಿಯೋಗರೆ ಡಬ್ಬಗಳು ನಮ್ಮನು ಕೆಣಕಲಾರಂಭಿಸಿತ್ತು. ಕೊನೆಗೆ ಮುಕ್ಕಾಲುಭಾಗ ಮಾರ್ಗ ಮುಗಿಸಿದ ಮೇಲೆ ಮಳೆಯಲ್ಲಿಯೇ ನಿಂತು ಮಳೆ ಪುಳಿಯೋಗರೆ ಸವಿದು ಹೊಟ್ಟೆ ತುಂಬಿಸಿಕೊಂಡು ಅಲ್ಲಲ್ಲೇ ಮಧ್ಯ ದಾರಿಯಲ್ಲಿ ತುಂಡಾಗಿದ್ದ ಎಲ್ಲ ತಂಡದವರನ್ನು ಸೇರಿ ಮಾತಾಡಿಸಿಕೊಂಡು ಮತ್ತೆ ನಮ್ಮ ಪಯಣ ಬೆಟ್ಟದ ತುದಿಯಕಡೆಗೆ ಆರಂಭ.

ನಮ್ಮ ಕಣ್ಣ ಮುಂದೆ ಕಂಡ ದುರ್ಘಮ ದಾರಿಯ ಚಿತ್ರಣ ಮತ್ತು ಜೀಪ್ ಮಾಡುತ್ತಿದ್ದ ತಳುಕು ಬಳುಕಿನ ನೃತ್ಯ ಹಾಗೂ ಅದರಲ್ಲಿ ಕೂತಿದ್ದವರ ಸಂಕಟ ಹೇಳತೀರದು. ಹೇಗೋ ಅಲ್ಲೇ ದಾರಿಯಲ್ಲಿ ಸಿಗುವವರಿಗೆಲ್ಲ ಇಲ್ಲಿಂದ ಇನ್ನು ಎಷ್ಟು ದೂರ ಅಂತ ಕೇಳಿದರೆ ಸುಮಾರು ಒಂದು ಕಿಲೋ ಮೀಟರ್ ಅನ್ನೋರು ಆದರೆ ಅದು ಎಷ್ಟೇ ನಡೆದರು ಎಲ್ಲರ ಬಾಯಲ್ಲೂ ದೂರ ಮಾತ್ರ ಒಂದು ಕಿಲೋ ಮೀಟರ್ನಿಂದ  ಬದಲಾಗಲೇ ಇಲ್ಲ. ಕೊನೆಗೆ ಜೀಪ್ ನಿಲ್ದಾಣ ಕಣ್ಣಿಗೆ ಕಂಡದ್ದೇ ಅಲ್ಲೇ ದೂರದಲ್ಲಿ ಒಂದು ದೇವಸ್ಥಾನ ಕೂಡ ಇತ್ತು ಅವೆರಡರಿಂದ ಮನಸ್ಸು ಒಂತರಾ ನಿರಾಯಾಸದೆಡೆಗೆ ಜಾರಿತು “ಸದ್ಯ ಬಂದೆವಲ್ಲ ಅಂತ”!!!

ಅಲ್ಲಿ ನೋಡಿದರೆ ಮತ್ತೆ ಒಂದು ಕಿಲೋ ಮೀಟರ್ ಅಂತ ಕಿವಿಗೆ ಶಬ್ದ ಕೇಳಿಸಿತು ಮತ್ತೆ ಪ್ರಯಾಣ ಶುರು, ಸುಮಾರು ನಾಲ್ಕು ಸ್ಥಳಗಳಲ್ಲಿ ಇಲ್ಲಿಗೆ ಮುಗಿಯಿತು ಅನ್ನೋ ಅಷ್ಟರಲ್ಲಿ ಮತ್ಯಾರಾದರು ಮೇಲಿಂದ ಕಾಣಿಸೋರು. ಕೊನೆಗೆ ಇದೆ ತುತ್ತ ತುದಿ ಅಂತ ಮಾತಾಡಿಕೊಂಡು ಹಿಂದಿರುಗೋಣ ಅನ್ನೋ ಅಷ್ಟರಲ್ಲಿ ಮತ್ತಿಬ್ಬರು ಬಂದು ಹೇಗೋ ಇಲ್ಲಿಯವರೆಗೂ ಬಂದಿದ್ದೀರಾ ಇನ್ನು ಸುಮಾರು ಇನ್ನೂರು ಮೀಟರ್ ನೆಡೆದರೆ ಅಲ್ಲೇ ಶ್ರೀ ಶಂಕರಾಚಾರ್ಯರ ಸರ್ವಜ್ಞ ಪೀಠ ಇದೆ ಅಂತ ಹೇಳಿದ ಮೇಲೆ ಬಿಟ್ಟು ಹೋಗೋದು ಹೇಗೆ ಅಂತ ಮತ್ತೆ ಪ್ರಯಾಣ ಶುರು ಆದರೆ ಮತ್ತೆ ಅರ್ಧ ಗಂಟೆ ನಡೆಯೋ ಭಾಗ್ಯ.

Sri Shankaracharya Sarvajna Peeta, Kodachadri

ಕೊನೆಗೂ ಶ್ರೀ ಶಂಕರಾಚಾರ್ಯರ ಸರ್ವಜ್ಞ ಪೀಠ ತಲುಪಿ ದರ್ಶನ ಪಡೆದು ಎಷ್ಟು ದೂರ ಬಂದಿದ್ದೇವೆ ಎಂದು ಮೊಬೈಲ್ ತೆಗೆದು ನೋಡಿದರೆ ಸುಮಾರು 13 ಕಿಲೋ ಮೀಟರ್ ಚಾರಣ ಪೂರ್ಣಗೊಂಡಿತ್ತು. ಎಲ್ಲರು ಒಟ್ಟಾಗಿ  ಫೋಟೋ ತೆಗೆದುಕೊಂಡು ಅಲ್ಲಿಂದ ಹೊರಡೋ ಆತುರ ಯಾಕೆಂದರೆ ಸಂಜೆ 4 ಗಂಟೆ ನಂತರ ಕೆಳಗಿನಿಂದ ಯಾವುದೇ ಜೀಪ್ ಮೇಲೆ ಬರೋಲ್ಲ, 5 ಗಂಟೆ ನಂತರ ಕೆಳಗೆ ಹೋಗಲು ಜೀಪ್ ಸಿಗೋದು ವಿರಳ ಸಿಕ್ಕರೂ ಗಂಟೆಗೆ 100 ರೂಪಾಯಿ ದಂಡ ಕಟ್ಟೋದು ಖಾಯಂ !!!! ಅಂದಹಾಗೆ ಒಂದು ಕಡೆಯ ಜೀಪ್ ಪ್ರಯಾಣದ ವೆಚ್ಚ ಒಬ್ಬರಿಗೆ ಸುಮಾರು 300 ರೂಪಾಯಿಗಳು.

ಕೊನೆಗೆ ಜೀಪ್   ಸ್ಟ್ಯಾಂಡಿಗೆ ಬಂದರೆ ಯಾರೋ ಕಾದಿರಿಸಿದ ಎರಡು ಜೀಪ್ ಮಾತ್ರ ಇತ್ತು, ಅವರು ಬೇರೆ ಸಂಜೆ ಸುಮಾರು 4 ರಿಂದ ಯಾವುದೇ ಜೀಪ್ ಮೇಲೆ ಬರುತ್ತಿಲ್ಲ, ಮಧ್ಯ ದಾರಿಯಲ್ಲಿ ರಸ್ತೆ ಹಾಗು ಬಂಡೆಗೆ ಜೀಪ್ ಸಿಕ್ಕಿಹಾಕಿಕೊಂಡಿದೆ ಅನ್ನೋ ವಿಚಾರ, ಕೊನೆಗೆ ಸಂಜೆ 6 ಗಂಟೆ ಹೊತ್ತಾದಾಗ ಜೀಪ್ ಶಬ್ದ ಕೇಳಿಸಿದರೆ ಸಾಕು ಅನ್ನೋ ಕಾತುರ, ಅತಿಯಾದ ಚಳಿ ಹಾಗು ಮಳೆ, ಸಂಜೆ ಹೊತ್ತಾಗುತ್ತ ಬೆಟ್ಟದ ತುದಿಯ ಕೊರೆಯುವ ಚಳಿ ತಡೆಯಲಾರದ ಸ್ಥಿತಿ.

ಹೇಗೋ ಕ್ಯಾಪ್ಟನ್ ಗಂಗಾಧರ್ ಅವರ ಪ್ರಯತ್ನದಿಂದ ಸುಮಾರು ಏಳು ಮಂದಿ ಹೆಣ್ಣು ಮಕ್ಕಳನ್ನು ಆ ಎರಡು ಜೀಪ್ನಲ್ಲಿ ಕೂರಿಸಿ ಕೆಳಗೆ ಕಳುಹಿಸಿ ನಾವು ಹೇಗೋ ತಲುಪಿದರಾಯಿತು ಅಂತ ಜೀಪಿಗಾಗಿ ಮತ್ತೆ ಒಂದೂವರೆ ಗಂಟೆ ಕಾದು ಕುಳಿತೆವು, ಕೊನೆಗೆ ರಾತ್ರಿ 7.30ಕ್ಕೆ ಸಾಲಾಗಿ ಜೀಪ್ ಬಂದಾಗ ಬದುಕಿದೆಯಾ ಬಡ ಜೀವವೇ ಅನ್ನಿಸಿದ್ದುಂಟು. ಜೀಪ್ನಲ್ಲಿ ಮೇಲಿಂದ ಕೆಳಗೆ ಬಂದ ಅನುಭವ ವರ್ಣಿಸಲಸಾಧ್ಯ, ಜೀವವೇ ಬಾಯಲ್ಲಿ ಬಂದು ಕೂತಹಾಗಿತ್ತು, ಅಲ್ಲಿ ಜೀಪ್ ಓಡಿಸುವ ಪ್ರತಿಯೊಬ್ಬ ಡ್ರೈವರ್ ಕೂಡ ಗಿನ್ನೆಸ್ ರೆಕಾರ್ಡ್ ಸರ್ಟಿಫಿಕೇಟ್ ತೆಗೆದುಕೊಳ್ಳೋ ಯೋಗ್ಯತೆ ಉಳ್ಳವರು. ಹೇಗೋ ಬಂದು ನಮ್ಮನ್ನೆಲ್ಲ ಕೆಳಗೆ ಕರೆದುಕೊಂಡು ಹೋಗಿ ಪುಣ್ಯ ಕಟ್ಟಿಕೊಂಡರು.

ಕತ್ತಲ ರಾತ್ರಿಯಲ್ಲಿ ನಮ್ಮ ಹೋಂಸ್ಟೇ ರೂಮ್ ತಲುಪಿ ಬಿಸಿನೀರಿನ ಸ್ನಾನ ಮಾಡಿ, ಹೊಟ್ಟೆ ತುಂಬಾ ಊಟ ಮಾಡಿ ಮಲಗಿದ್ದಷ್ಟೇ ನಮಗೆ ಗೊತ್ತು, ಮತ್ತೆ ಬೆಳಿಗ್ಗೆಯೇ ಎದ್ದಿದ್ದು. ಸ್ನೇಹಿತ ವಿನಯ್ ಎಲ್ಲರನ್ನು ಎಬ್ಬಿಸಿ ತಿಂಡಿ ಕಾಫಿ ಮುಗಿಸಿ ತಂಡದ ಜೊತೆ ಸೇರಿಕೊಂಡು ಅಲ್ಲಿಂದ ಸುಮಾರು 10 ಗಂಟೆಗೆ ದೇವಗಂಗೆ ದೇವಸ್ಥಾನ ಹಾಗು ಪುಷ್ಕರಣೆಯ ಕಡೆಗೆ ಪ್ರಯಾಣ ಬೆಳೆಸಿ ದರ್ಶನ ಮಾಡಿ ಅಲ್ಲಿಂದ ನಗರದ ಶಿವಪ್ಪ ನಾಯಕನ ಕೋಟೆಗೆ ಭೇಟಿ ಕೊಟ್ಟು ಕೋಟೆಯ ತುದಿಯೇರಿ ನೆಚ್ಚಿನ ಗೆಳತಿ ದೀಪ ಹಾಗು ಗೆಳೆಯ ವಿನಯ್ ಜೊತೆಗೆ ಫೋಟೋ ತೆಗೆದುಕೊಂಡು ಬೆಂಗಳೂರಿಗೆ ಪ್ರಯಾಣ ಶುರು. ಕೊನೆಗೂ ಅಲ್ಲಿಂದ ಹೊರಡುವಾಗ ಮನಸ್ಸಿಗೆ ಬಂದಿದ್ದು ಅಯ್ಯೋ ಮತ್ತೆ ಬೆಂಗಳೂರಿಗೇ!!!!!

kodachadri Western Ghats Shivamogga

ಸುಮಾರು 48 ಗಂಟೆಗಳ ಈ ಪ್ರವಾಸದಲ್ಲಿ 20 ಹೊಸ ಜೀವಗಳ ಪರಿಚಯ, 24 ಗಂಟೆಗು ಹೆಚ್ಚು ನಿರಂತರ ಪ್ರಯಾಣ, 10 ಗಂಟೆ ಚಾರಣ, ಉಳಿದ ಸಮಯ ನಿದ್ರೆ ಹಾಗೂ ಇತರೆ ನಿತ್ಯ ಕಾರ್ಯಗಳಲ್ಲಿ ತೊಡಗಿಸಿಕೊಂಡರು ಮನಸ್ಸು ಮಾತ್ರ ನಿರಾಯಾಸವಾದ ಭಾಸ !!! ಇಷ್ಟಪಟ್ಟು ಮಾಡಿದ ಯಾವುದೇ ಕೆಲಸ ಆಗ ಕಷ್ಟವಾದರೂ ಸಹ ಅದು ಕೇವಲ ಸಾಂಧರ್ಬಿಕವೇ ಹೊರತು ನಿರಂತರವಲ್ಲ !!!! 

ನನ್ನ ಸ್ವಂತ ಅನುಭವದ ಪ್ರಕಾರ ನಾವು ವರ್ಷದಲ್ಲಿ ಕನಿಷ್ಠ ನಾಲ್ಕು ಚಾರಣದಂತಹ ಪ್ರವಾಸ ಮಾಡುವುದರಿಂದ ಹೊಸ ಸ್ನೇಹಿತರ ಪರಿಚಯ, ದೇಹ ಹಾಗು ಮನಸ್ಸಿನ ಉಲ್ಲಾಸ ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

2 Comments

  1. ಅದ್ಭುತ ಬರವಣಿಗೆ , ಹಾಗೂ ಸೊಗಸಾದ ವಿವರಣೆ.
    ಮತ್ತೆ ಅನುಭವಿಸಿದ ಹಾಗೆ ಆಯಿತು ಒಂದು ವಾರದ ಹಿಂದಿನ ಕತೆ…!!! ಧನ್ಯವಾದ…!!!!

Leave a Reply

Your email address will not be published. Required fields are marked *

Back to top button