ಆಹಾರ ವಿಹಾರನಮ್ ತಿಂಡಿ ರೆಸಿಪಿನಮ್ಮೂರ ತಿಂಡಿವಿಂಗಡಿಸದಸಂಸ್ಕೃತಿ, ಪರಂಪರೆ

ಮಂಜಲ್ದ ಇರೆತ ಗಟ್ಟಿ (ಅರಿಶಿನದೆಲೆಯ ಗಟ್ಟಿ): ನಾಗರ ಪಂಚಮಿ ವಿಶೇಷ

ಪ್ರತಿಯೊಂದು ಹಬ್ಬವೂ ತನ್ನದೇ ಆದ ವಿಶೇಷತೆಯನ್ನು ಆಚರಣೆಯಲ್ಲಿ ಮಾತ್ರವಲ್ಲ, ಖಾದ್ಯಗಳಲ್ಲೂ ಹೊಂದಿವೆ. ಕರಾವಳಿ ಕರ್ನಾಟಕದ ಪ್ರಸಿದ್ಧ ಆಚರಣೆ ‘ನಾಗರ ಪಂಚಮಿ’ಯ ವಿಶೇಷ ಖಾದ್ಯ ‘ಅರಶಿನದೆಲೆಯ ಗಟ್ಟಿ’ಯ ಪರಿಚಯ ಇಲ್ಲಿದೆ.

  • ಎ.ಬಿ ಪಚ್ಚು

ಒಂದೊಂದು ಹಬ್ಬಕ್ಕೆ ಒಂದೊಂದು ಆಚರಣೆ,ಜೊತೆಗೆ ಪ್ರತೀ ಹಬ್ಬಕ್ಕೊಂದೊಪ್ಪುವ ವಿಶಿಷ್ಟವಾದ ತಿಂಡಿ ಎಲ್ಲಾ ಕಡೆಯ ಸಂಪ್ರದಾಯಗಳಲ್ಲೊಂದು.ಈ ತಿಂಡಿಗಳು ಕೂಡ ನಮ್ಮ ಸಂಸ್ಕೃತಿಯ ಭಾಗವೇ ಆಗಿ ಹೋಗಿ ಬಹಳಷ್ಟು ಸಮಯವೇ ಆಗಿದೆ.

ಹಬ್ಬದ ಹೆಸರು  ಹೇಳಿದ ಕೂಡಲೇ ಈ ಹಬ್ಬಕ್ಕೆ ಇದೇ ತಿಂಡಿ ಎಂದು ಹೇಗೆ ಹೇಳಬಹುದೋ ಅದೇ ರೀತಿ ತಿಂಡಿಯ ಹೆಸರು ಹೇಳಿದರೂ ಕೂಡ ಅದರ ಒಡನಾಡಿಯಾಗಿರುವ ಹಬ್ಬ ಯಾವುದೆಂದು ನಮ್ಮಲ್ಲಿ ಬಹಳ ಸುಲಭವಾಗಿ ಹೇಳಿ ಬಿಡಬಹುದು.

ತುಳುನಾಡಿನಲ್ಲಿ ಹಬ್ಬಗಳ ಜೊತೆಗೆ ತಿಂಡಿಗಳದ್ದೊಂದು ವಿಶಿಷ್ಟವಾದ ಬೆಸುಗೆ ಈಗಲೂ ಇದೆ.ಮೆತ್ತೆ ಗಂಜಿ ಅಂದರೆ ಅದು ಆಟಿ ಅಮಾವಾಸ್ಯೆ,ಕುಡುವರಿ ಅಂದರೆ ಕೆಡ್ಡೆಸ,ಗುಂಡ ಮೂಡೆ ಕೊಟ್ಟಿಗೆ ಅಂದರೆ ಅಷ್ಟಮಿ ಚೌತಿ ನವರಾತ್ರಿ ಹಬ್ಬ,ದೀಪಾವಳಿಗೆ ಒಂದಷ್ಟು ಉದ್ದಿನ ದೋಸೆ,ಗೋ ಪೂಜೆಗೆ ಪೊಟ್ಟು ಗಟ್ಟಿ..ಅದೇ ರೀತಿ ಈ ನಾಗರ ಪಂಚಮಿ ಬಂತೆಂದರೆ ನಮಗೆ ಮೊದಲು ನೆನಪಾಗುವುದೇ ಅರಿಶಿನದೆಲೆಯ ಸಿಹಿ ಗಟ್ಟಿ. ಅರಿಶಿನದ ಗಟ್ಟಿ ಎಂದರೂ ಹೆಚ್ಚಾಗಿ ನೆನಪಾಗುವ ಹಬ್ಬ ಎಂದರೆ ಅದು ನಾಗರ ಪಂಚಮಿಯೇ ಆಗಿರುತ್ತದೆ. ಗಟ್ಟಿ ಅಂದರೆ ಕಡುಬು. ತುಳುವಲ್ಲಿ ಈ ಕಡುಬುವಿಗೆ ಮಂಜಲ್ದ ಇರೆತ ಗಟ್ಟಿ ಎಂದು ಹೇಳುತ್ತೇವೆ.

Nagara Panchami Arashinadeleya Gatti Coastal Karnataka Karnataka Tourism

ನಾಗರ ಪಂಚಮಿ ಹಾಗೂ ಈ ಅರಶಿನದ ಎಲೆಯ ಗಟ್ಟಿಯ ನಡುವಿನದ್ದೊಂದು ಸಂಬಂಧ ಬಹಳ ಹಳೆಯದ್ದು ಹಾಗೂ ಅಷ್ಟೇ ಅವಿನಾಭಾವದಿಂದ ಕೂಡಿದ್ದು.ಮಾತ್ರವಲ್ಲ ಇದರಿಂದ ಮಾಡುವ ಗಟ್ಟಿ ಕೂಡ ಅಷ್ಟೇ ಸ್ವಾದದಿಂದ ಕೂಡಿರುತ್ತದೆ.ಆಹಾ.. ಇದಕ್ಕೆ ಸಮನಾದ ಪರಿಮಳದೆಲೆ ಮತ್ತೊಂದು ಇಲ್ಲವೆನೋ ಎಂದು ಎಷ್ಟೋ ಸಲ ಅನ್ನಿಸಿಬಿಟ್ಟಿದೆ.

ಅಮ್ಮ ಏನಾದರೂ ಇದರ ಎಲೆಯನ್ನು ಹಿತ್ತಲಿನಿಂದ ಕಿತ್ತು ತರಲು ಹೇಳಿದರೆ ಈಗಲೂ ಇದರ ಎಲೆಗಳನ್ನು ಕೈಯಲ್ಲಿ ಸ್ವಲ್ಪವೇ ಹರಿದು ಆ ನಂತರ  ಮೂಗಿನ ಬಳಿ ಇದನ್ನು ತಂದುಕೊಂಡು ಇದರದ್ದೊಂದು ಸುವಾಸನೆಯನ್ನು ಹಾಗೇ ಆಘ್ರಾಣಿಸದಿದ್ದರೆ ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ.ಇದೇ ರೀತಿಯ ಮತ್ತೊಂದು ಹಿತ್ತಲಿನಲ್ಲಿರುವ ಎಲೆ ಅಂದರೆ ಅದು  ಒಗ್ಗರಣೆಯ ಬೇವುರೆ.

ಮನೆಯ ಜಾಗದಲ್ಲಿ ಅರಶಿನದ ಎಲೆ ಇದ್ದರೆ ಅಂತಹ ತೊಂದರೆ ಏನಿಲ್ಲ.ಬೇಸಿಗೆಯಲ್ಲಿ ಸುದ್ದಿಯೇ ಇರದ ಇದರದ್ದೊಂದು ಗಿಡಗಳು ಮಳೆ ಬಿದ್ದೊಡನೆ ಹಾಗೇ ಸೊಂಪಾಗಿ ಬೆಳೆದು ನಿಂತು ಬಿಡುತ್ತದೆ. ಮನೆಯಲ್ಲಿ ಅರಶಿನದ ಗಿಡಗಳು ಇಲ್ಲದಿದ್ದರೂ ನಮ್ಮವರಿಗೆ ನಾಗರ ಪಂಚಮಿಯ ಹಿಂದಿನ ದಿನ ಮಾರ್ಕೆಟ್ ನಿಂದ ಆದರೂ ಎಲೆಗಳನ್ನು ತಂದು ಇದರಿಂದ ಸಿಹಿ ಗಟ್ಟಿ ಮಾಡಿಕೊಂಡು ತಿಂದರಷ್ಟೇ ನಿಜವಾದ  ನಾಗರ ಪಂಚಮಿ ಸಂಪನ್ನವಾಗಿ ಬಿಡುವುದು.

ಅಂದಹಾಗೆ ಇಂದು ನಾಗರ ಪಂಚಮಿ. ನಿನ್ನೆ ಮಂಗಳೂರು, ಮೂಡುಬಿದಿರೆ ಹಾಗೂ ಅವಿಭಜಿತ ಜಿಲ್ಲೆಯ ಹೆಚ್ಚಿನ ಮಾರ್ಕೆಟ್ ನಲ್ಲಿ ಎಲ್ಲಿ ನೋಡಿದರೂ ಅರಶಿನದ ಎಲೆಯ ಕಟ್ಟುಗಳನ್ನು ಎಲ್ಲೆಡೆ ರಾಶಿ ಹಾಕಿಕೊಂಡು ಮಾರುತ್ತಿದ್ದರು. ಅರಶಿನದೆಲೆಯ ಕಟ್ಟುಗಳ ರಾಶಿಯನ್ನು ಮಾರ್ಕೆಟ್ ಗಳಲ್ಲಿ ನೋಡುವುದೇ ಒಂದು ಚಂದ. ಅದು ಮತ್ತು ಕೇದಿಗೆಯ ದಂಡೆ ಮಾರ್ಕೆಟ್ ನಲ್ಲಿ ರಾಶಿ ರಾಶಿ ಕಾಣಿಸಿಕೊಂಡಿದೆ ಎಂದರೆ ನೆನಪು ಇಲ್ಲದವನಿಗೂ ನಾಳೆ ನಾಗರ ಪಂಚಮಿ ಹಬ್ಬ ಎಂದು ಕನ್ಫರ್ಮ್ ಆಗಿಬಿಡುತ್ತದೆ.

ಈ ಸಮಯದಲ್ಲಿ ಮಾರ್ಕೆಟ್ ನಲ್ಲಿ ರಾಶಿ ರಾಶಿ ಕಣ್ಣಿಗೆ ಬೀಳುವ ಈ ಅರಶಿನದೆಲೆಯ  ಬಣ್ಣ ಹಾಗೂ ಆ ಪರಿಮಳವೇ ಮನಸ್ಸಿಗೆ ಅದೆನೋ ಮುದ ಕೊಡುತ್ತದೆ. ಮಾರ್ಕೆಟ್ ನಲ್ಲಿ ಒಂದು ಕಟ್ಟಿಗೆ 20 ರೂಪಾಯಿವರೆಗೆ ಉಂಟು ಈಗ. ಒಂದು ಕಟ್ಟಿನಲ್ಲಿ ಒಟ್ಟು ಹನ್ನೆರಡು, ಹದಿಮೂರು ಎಲೆಗಳು ಇರುತ್ತವೆ. ಕೆಲವೊಂದು ಕಡೆ ಹೆಚ್ಚು ಕಡಿಮೆ ಆಗಬಹುದು.

Nagara Panchami Arashinadeleya Gatti Coastal Karnataka Karnataka Tourism

ನಿನ್ನೆ ಎಲ್ಲಿ ನೋಡಿದರೂ ಮಾರ್ಕೆಟ್ ನಿಂದ ಮನೆಗೆ ಹೋಗುವವರ ಕೈಯಲ್ಲಿ ಒಂದೆರಡು ಅರಶಿನದೆಲೆಯ ಕಟ್ಟುಗಳು ಇತ್ತು. ಅಷ್ಟಮಿಯಲ್ಲಿ ಆ ಭಾಗ್ಯ ನಮ್ಮಲ್ಲಿ ಮೂಡೆ ಯ ಕೊಟ್ಟೆಗಳಿವೆ. ಜನರು ಇವುಗಳನ್ನು ಎದೆಗೊತ್ತಿಕೊಂಡು ಜೋಪಾನವಾಗಿ ಮನೆಗೆ ತಗೊಂಡು ಹೋಗುವುದನ್ನು ನೋಡುವುದೇ ಒಂದು ಚಂದ. ನಿಜ ಹೇಳಬೇಕೆಂದರೆ ಹಬ್ಬಕ್ಕೆ ಮೊದಲ ಸಿದ್ದತೆಯ ಹಬ್ಬದ ಈ ರೀತಿಯ ತಿಂಡಿಗಳು.

ಈ ಅರಶಿನದ ಎಲೆಯ ಮೇಲೆ ತೆಳುವಾಗಿ ಅಕ್ಕಿ ಹಿಟ್ಟು ಸವರಿಕೊಂಡು, ಬೆಲ್ಲ ಕಾಯಿಯ ಸಿಹಿ ಹೂರಣವನ್ನು ಹಾಗೇ ಅದರ ಮೇಲೆ ಸುರುವಿಕೊಂಡು, ನಿಧಾನಕ್ಕೆ ಹಿಟ್ಟಿನ ಮೇಲೆ ಅದನ್ನು ಬೆರಳುಗಳಿಂದ ಹರಡಿಕೊಂಡು, ನಂತರ ಎಲೆಯನ್ನು ನಡುವಿನಿಂದ  ಅರ್ಧಕ್ಕೆ ಮಡಚಿ ಇಡ್ಲಿ ಪಾತ್ರೆಯ ಹಬೆಯಲ್ಲಿ ಒಂದರ್ಧ ಗಂಟೆ  ಬೇಯಿಸಿ ಬಿಟ್ಟರೆ ಘಮ್ಮೆನ್ನುವ ಅರಶಿನದ ಗಟ್ಟಿ ರೆಡಿಯಾಗಿ ಬಿಡುತ್ತದೆ.

ನೀವುಇದನ್ನುಇಷ್ಟಪಡಬಹುದು: ನೀವು ಸವಿಲೇಯಬೇಕಾದ ದಕ್ಷಿಣಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಅಡುಗೆಗಳು: ಐದು ರುಚಿಕಟ್ಟು ರೆಸಿಪಿ ಹೇಳಿದ ಶ್ಯಾಮಲಾ ಕುಂಟಿನಿ

ಅದನ್ನು ತಿನ್ನುವುದಕ್ಕಿಂತಲೂ ಮೊದಲು ಈ ಇಡ್ಲಿ ಪಾತ್ರೆಯ ಬಾಯಿ ತೆಗೆಯುವಾಗ ಆ ಒಂದು ಪರಿಮಳ ಹಾಗೇ ಬಂದು  ಮೂಗಿಗೆ ಅಡರಿಕೊಳ್ಳುತ್ತದೆಯಲ್ಲಾ ಅಷ್ಟಕ್ಕೆನೇ ಅರ್ಧ ಹೊಟ್ಟೆ ತುಂಬಿ ಬಿಡುತ್ತದೆ,ಬಾಯಿಯಲ್ಲಿ ಎಂದಿನಂತೆ ಸ್ವಲ್ಪ ನೀರು ಜಿನುಗಲೇಬೇಕು. ನಿಜವಾಗಿಯೂ ಅಂತಹ ಇಂಟೆನ್ಸಿವ್ ಪರಿಮಳ ಈ ಗಟ್ಟಿಯದ್ದು. ತುಳುನಾಡಿನಲ್ಲಿ ಹಲವಾರು ಎಲೆಗಳ  ಕಡುಬುಗಳನ್ನು ಮಾಡುತ್ತಾರೆ. ಆದರೆ ನನ್ನ ಪ್ರಕಾರ ಈ ಕಡುಬುಗಳ ರಾಜ ಎಂದೆಂದಿಗೂ ಪೆಲಕಾಯಿ ಗಟ್ಟಿ (ಹಲಸು) ಆಗಿದ್ದರೆ ಬಹುಶಃ ಕಡುಬುಗಳ ಮಹಾರಾಣಿ ಈ ಅರಶಿನದ ಸುಂದರ ಸಿಹಿ ಕಡುಬೇ ಆಗಿದೆ ಎಂದು ನನಗನಿಸುತ್ತದೆ.

ಹಬ್ಬಗಳನ್ನು ನಾವು ಆಚರಿಸಬೇಕು. ಆಚರಿಸಿದರೆ ಮಾತ್ರ ಅದು ಹಬ್ಬ, ವಿಶ್ ಮಾಡಿದರೆ ಅಲ್ಲ.ಅದೇ ರೀತಿ ನಮ್ಮ ಹಬ್ಬಗಳನ್ನು ನಾವು ಆಚರಿಸಿದರಷ್ಟೇ ಮುಂದೆಯೂ ಅದು ಉಳಿದು ಕೊಳ್ಳಲು ಸಾಧ್ಯ. ಅದರಲ್ಲೂ  ಮೂಲ ನಂಬಿಕೆಗಳಿಗೆ ಧಕ್ಕೆಯೂ ಆಗದಂತೆ ನಮ್ಮ ಹಬ್ಬ ಹರಿದಿನಗಳನ್ನು ಆಚರಿಸಬೇಕಾದ ಜವಾಬ್ದಾರಿಯೂ ಇದೆ.

Nagara Panchami Arashinadeleya Gatti Coastal Karnataka Karnataka Tourism

ಆಡಂಬರವೇ ಹಬ್ಬ ಅಲ್ಲ. ಸರಳವಾಗಿಯೂ ಹಬ್ಬ ಮಾಡಿ ಬಿಡಬಹುದು.ಹಬ್ಬಗಳು ಜಿಡ್ಡುಗಟ್ಟಿರುವ ಬಾಳಿಗೆ ಒಂದಷ್ಟು ಹರುಷದೆಣ್ಣೆ ಸುರಿದು ಮನಸ್ಸನ್ನು ಹಾಗೇ ಸಡಿಲಗೊಳಿಸಿ ಬಿಡುತ್ತದೆ. ಒಂದಷ್ಟು ಜನರಿಗೆ ನಮ್ಮ ಹಬ್ಬಗಳು ಆದಾಯದ ಮೂಲವೂ ಹೌದು. ಅಷ್ಟಮಿ ಬಂದಾಗ ಮೂಡೆ ಕೊಟ್ಟೆಗಳಲ್ಲಿ ಒಂದಷ್ಟು ಜೇಬು ಬಿಸಿ ಮಾಡಿಕೊಳ್ಳುವ ನಾನೂ ಕೂಡ ಇಂತಹ ಆದಾಯದ ಫಲಾನುಭವಿ ಆಗಿದ್ದವನು.

ಹಬ್ಬಗಳಲ್ಲಿ  ಭಕ್ತಿಯ ಜೊತೆಗೊಂದು ಸಡಗರವೂ ಇರುತ್ತದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಪ್ರತೀ ಹಬ್ಬಕ್ಕೊಂದು ಸಿದ್ಧತೆ ಇರುತ್ತದೆ. ಈ ಸಿದ್ಧತೆಗಳೇ ಮನಸ್ಸನ್ನು ಸಾಕಷ್ಟು ಉಲ್ಲಾಸಿತಗೊಳಿಸುವುದು. ಕೆಲವರು ದೇವರು ಇಲ್ಲ ಎಂದು ಹೇಳುತ್ತಾರೆ, ಇನ್ನು ಕೆಲವರು ಅವನೊಬ್ಬ ಇದ್ದಾನೆ ಎಂದು ಬಲವಾಗಿ ನಂಬುತ್ತಾರೆ. ಇದ್ದಾನೋ ಇಲ್ಲವೋ ಅದು ಅವರವರ ನಂಬಿಕೆಗಳಿಗೆ ಬಿಟ್ಟದು.ಆದರೆ ನೀವು ಹಬ್ಬ ಮಾತ್ರ ಮಾಡಿ ಎಂದೇ ನಾನು ಹೇಳುತ್ತೇನೆ, ಏಕೆಂದರೆ ಹಬ್ಬ ಮಾಡುವುದರಿಂದ ಏನೂ ಸಿಗದಿದ್ದರೂ ಒಂದಷ್ಟು ಖುಷಿ,ಉಲ್ಲಾಸ ಅಗತ್ಯವಾಗಿ ಸಿಕ್ಕೇ ಸಿಗುತ್ತದೆ.

ದುಡ್ಡು ಕೊಟ್ಟರೆ ಸಂತೋಷ ಅಂಗಡಿಯಲ್ಲಿ ಸಿಗುವುದಿಲ್ಲ.ದೇವರು ಇಲ್ಲ,ಹಬ್ಬ ಬೇಡ ಎಂದು ಹೇಳುವವರು ಜೀವನದಲ್ಲಿ ಕಳೆದುಕೊಳ್ಳುವುದು ಇಂತಹವುಗಳನ್ನೇ ಎಂದು ಎಷ್ಟೋ ಸಲ ಅನ್ನಿಸಿ ಬಿಟ್ಟಿದೆ. ಹಾಗಾಗಿ ಇಂತಹ ವಿಷಯಗಳು ಬಂದಾಗ ಆಸ್ತಿಕರು ಯಾವತ್ತಿಗೂ ಪರಮ ಭಾಗ್ಯಶಾಲಿಗಳೇ ಬಿಡಿ.

ಹಬ್ಬವೂ ಉಳಿಯಬೇಕು. ಅದರ ಜೊತೆ ಜೊತೆಗೆ ಹಬ್ಬದೊಂದಿಗೆ ಬೆಸೆದುಕೊಂಡಿರುವ ಇಂತಹ ತಿಂಡಿಗಳು ಕೂಡ ಮುಂದೆಯೂ ಉಳಿದು ಬಿಡಬೇಕು ಎನ್ನುವುದು ನನ್ನಂತಹ ಭೋಜನ ಪ್ರಿಯನ ಆಶಯ. ಬೇರೆ ದಿನವೂ ಇಂತಹವುಗಳನ್ನು ಮಾಡಿಕೊಂಡು ತಿನ್ನಬಹುದಾದರೂ ಅದರದ್ದೇ ಆದ ಹಬ್ಬಕ್ಕೆ ಮಾಡಿಕೊಂಡು ತಿನ್ನುವಾಗ ಏನೋ ಗೊತ್ತಿಲ್ಲ.. ಈ ತಿಂಡಿಗಳು ಬೇರೆ ದಿನಗಳಿಗಿಂತ ಬಹಳಷ್ಟು ವಿಶಿಷ್ಟ ಅಂತಲೇ ಅನ್ನಿಸಿ ಬಿಡುತ್ತದೆ.ಹಬ್ಬದ ನೆಪದಲ್ಲಿ ಆದರೂ ಇಂತಹವುಗಳನ್ನು ಸವಿಯುವ ಭಾಗ್ಯದಿಂದ ನಾವೆಲ್ಲರೂ ವಂಚಿತರಾಗಬಾರದು. ಏನಂತೀರಾ…

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button