ವಿಂಗಡಿಸದ

ಹುಬ್ಬಳ್ಳಿಯ ಸುತ್ತಮುತ್ತ ನೀವು ನೋಡಲೇಬೇಕಾದ ಸುಂದರ ತಾಣಗಳು:

ಕರ್ನಾಟಕದ ಎರಡನೇ ಅತಿ ದೊಡ್ಡ ನಗರ ಎಂದು ಕರೆಯಲ್ಪಡುವ “ಹುಬ್ಬಳ್ಳಿ”. ಚೋಟಾ ಬಾಂಬೆ ಎಂದೇ ಪ್ರಸಿದ್ಧವಾಗಿದೆ. ಈ ಸುಂದರ ನಗರಕ್ಕೆ ನೀವು ಭೇಟಿ ನೀಡಿದಾಗ ನೋಡಲೇಬೇಕಾದ ಪ್ರವಾಸಿತಾಣಗಳ ವಿವರ ಇಲ್ಲಿದೆ.

1. ​ಉಣಕಲ್‌ ಕೆರೆ:

Unkal Lake, Hubli

110 ವರ್ಷಗಳಿಗಿಂತ ಹಳೆಯದಾದ ​ಉಣಕಲ್‌ ಕೆರೆಯು ಹುಬ್ಬಳ್ಳಿಯಲ್ಲಿ ನೋಡಲೇಬೇಕಾದ ಪ್ರವಾಸಿತಾಣವಾಗಿದೆ. ಸುಮಾರು 200 ಎಕರೆ ಪ್ರದೇಶದಲ್ಲಿ ಹರಡಿರುವ ಈ ಕೆರೆಯು ಸುಂದರವಾದ ಸೂರ್ಯಾಸ್ತ ಮತ್ತು ಸೂರ್ಯೋದಯದ ನೋಟವನ್ನು ಪ್ರವಾಸಿಗರಿಗೆ ನೀಡುತ್ತದೆ. ಸರೋವರದ ಮಧ್ಯಭಾಗದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಇದೆ. ಕುಟುಂಬದೊಂದಿಗೆ ಸಮಯವನ್ನು ಕಳೆಯಲು ಉತ್ತಮವಾದ ಸ್ಥಳವಾಗಿದೆ.

2. ​ಚಂದ್ರಮೌಳೀಶ್ವರ ದೇವಾಲಯ:

Chandramouleshwara Temple, Unkal Hubli

ಹುಬ್ಬಳ್ಳಿಯಿಂದ 4 ಕಿ.ಮೀ ದೂರದಲ್ಲಿರುವ ಉಣಕಲ್ ಬಳಿ ಇರುವ ಚಂದ್ರಮೌಳೀಶ್ವರ ದೇವಾಲಯವು 900 ವರ್ಷಗಳಷ್ಟು ಹಳೆಯದಾಗಿದ್ದು, ಚಾಲುಕ್ಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ಇದು ಬಾದಾಮಿ ಚಾಲುಕ್ಯರ ಕಾಲಕ್ಕೆ ಸೇರಿದ್ದು, ಇದನ್ನು ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ದೇವಾಲಯಗಳ ಮಾದರಿಯಲ್ಲಿಯೇ ಕಟ್ಟಲಾಗಿದೆ.  ಚಂದ್ರಮೌಳೇಶ್ವರ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಈ ದೇವಾಲಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸಂರಕ್ಷಿಸುತ್ತದೆ ಮತ್ತು ನಿರ್ವಹಿಸುತ್ತದೆ.

3. ನೃಪತುಂಗ ಬೆಟ್ಟ:

Nrupatunga Hill, Hubli

ಚಂದ್ರಮೌಳೇಶ್ವರ ದೇವಸ್ಥಾನದಿಂದ 3 ಕಿಮೀ ದೂರದಲ್ಲಿರುವ ನೃಪತುಂಗ ಬೆಟ್ಟವು ಟ್ರೆಕ್ಕಿಂಗ್ ಪ್ರಿಯರ ನೆಚ್ಚಿನ ತಾಣ. ಬೆಟ್ಟದ ತುದಿಯಲ್ಲಿ ದೇವಿ ದೇವಸ್ಥಾನವಿದೆ. ಈ ಬೆಟ್ಟದಲ್ಲಿ ಮಕ್ಕಳಿಗಾಗಿ ಉದ್ಯಾನವನ ಇದ್ದು, ಈ ಉದ್ಯಾನವನದ ಪ್ರಮುಖ ಆಕರ್ಷಣೆಯೆಂದರೆ 1974 ರಲ್ಲಿ ಸ್ಥಾಪಿಸಲಾದ ಬೃಹತ್ ಆನೆ ಸ್ಲೈಡ್. ಇಸ್ಕಾನ್ ವತಿಯಿಂದ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಕೂಡಾ ಇಲ್ಲಿ ನಿರ್ಮಿಸಲಾಗಿದೆ. ಈ ಬೆಟ್ಟದ ತುದಿಯಿಂದ ಇಡೀ ಧಾರವಾಡ-ಹುಬ್ಬಳ್ಳಿ ನಗರವನ್ನು ಕಣ್ತುಂಬಿಕೊಳ್ಳಬಹುದು.

4. ಸಿದ್ಧರೂಢ ಮಠ:

Siddharoodha Math, Hubli

ಸರಳ ಜೀವನ ಮತ್ತು ಬೋಧನೆಯಿಂದಾಗಿ ಅಪಾರ ಭಕ್ತ ವೃಂದ ಸಂಪಾದಿಸಿದ ಮಹಾನ್ ಪುರುಷರಾದ ಸಿದ್ಧಾರೂಢ ಸ್ವಾಮಿಗಳ ಮಠ. ಈ ಮಠವು ಸ್ವಾಮಿ ಸಿದ್ಧಾರೂಢ ಅವರ ‘ಅದ್ವೈತ’ ತತ್ವವನ್ನು ಒಳಗೊಂಡಿರುವ ಬೋಧನೆಗಳನ್ನು ಹರಡುವ ಕೇಂದ್ರವಾಗಿದೆ. ಮಹಾ ಶಿವರಾತ್ರಿಯ ರಥೋತ್ಸವ ಮತ್ತು ಶ್ರಾವಣ ಮಾಸದ ಜಲರಥೋತ್ಸವವು ಪ್ರಮುಖ ಆಕರ್ಷಣೆಯಾಗಿದ್ದು, ಲಕ್ಷಾಂತರ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

5. ಮೂರು ಸಾವಿರ ಮಠ:

Muru Savira Math, Hubli

12 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಮಠವು ಶ್ರೀ ಗುರುಸಿದ್ದೇಶ್ವರ ಸ್ವಾಮಿಯ ಸಮಾಧಿಯನ್ನು ಒಳಗೊಂಡಿದೆ. ಶ್ರೀ ಚನ್ನಬಸವೇಶ್ವರರು ಮೂರು ಸಾವಿರ ಶಿವಶರಣರ ತಂಡದೊಂದಿಗೆ ಇಲ್ಲಿಗೆ ಭೇಟಿ ನೀಡಿದ್ದರಿಂದ ಈ ಮಠಕ್ಕೆ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ಮಠ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಅನ್ನ ದಾಸೋಹ ನಡೆಸುತ್ತಿದೆ.

6. ಬನಶಂಕರಿ ದೇವಸ್ಥಾನ:

Banashankari Temple, Amargol Hubli

ಹುಬ್ಬಳ್ಳಿ ನಗರದಿಂದ ಸುಮಾರು 9 ಕಿ.ಮೀ. ದೂರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನದಿಂದ 4 ಕಿ.ಮೀ ದೂರದಲ್ಲಿರುವ ಅಮರಗೋಳದಲ್ಲಿ ಬನಶಂಕರಿ ದೇವಾಲಯವಿದೆ. ಇದು 13 ಶತಮಾನಗಳಷ್ಟು ಹಳೆಯ ದೇವಾಲಯವಾಗಿದ್ದು ಚಾಲುಕ್ಯ ಕಾಲದ ವಾಸ್ತುಶಿಲ್ಪವನ್ನು ಹೊಂದಿದೆ. ಈ ದೇವಸ್ಥಾನ ಎರಡು ಪ್ರಮುುಖ ದೇವಾಲಯಗಳನ್ನು ಹೊಂದಿದೆ. ಒಂದು ದೇವಾಲಯವು ಬನಶಂಕರಿ ದೇವಿಗೆ ಸಮರ್ಪಿತವಾಗಿದ್ದರೆ, ಇನ್ನೊಂದು ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಈ ದೇವಾಲಯವನ್ನು ಮೆಟ್ಟಿಲು-ವಜ್ರದ ಆಕಾರದ ನಾಗರ ಶೈಲಿಯಲ್ಲಿ ಮತ್ತು ಇನ್ನೊಂದು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿರುವ ನವರಂಗ ಮಂಟಪವು ಶಿವ, ಪಾರ್ವತಿ, ವಿಷ್ಣು, ನರಸಿಂಹ, ಗಣಪತಿ, ಬ್ರಹ್ಮ ಮತ್ತು ಇತರ ದೇವರುಗಳ ಆಕೃತಿಗಳಿಂದ ಅಲಂಕರಿಸಲ್ಪಟ್ಟ ಸುಂದರವಾದ ಕಂಬಗಳನ್ನು ಹೊಂದಿದೆ.

7. ಇಂದಿರಾ ಗಾಂಧಿ ಗ್ಲಾಸ್ ಹೌಸ್ ಗಾರ್ಡನ್

Indira gandhi Glass house garden, Hubli

ಹುಬ್ಬಳ್ಳಿ ರೈಲು ನಿಲ್ದಾಣದಿಂದ 2 ಕಿಮೀ ದೂರದಲ್ಲಿರುವ ಗಾಜಿನ ಮನೆ ಉದ್ಯಾನವನವು ಸುಂದರವಾದ ಶಿಲ್ಪಗಳು ಮತ್ತು ಹಚ್ಚ ಹಸಿರಿನ ಹುಲ್ಲುಹಾಸುಗಳನ್ನು ಹೊಂದಿರುವ ಸುಂದರವಾದ ಉದ್ಯಾನವಾಗಿದೆ. ಈ ಸ್ಥಳದ ಅತ್ಯುತ್ತಮ ಆಕರ್ಷಣೆಗಳೆಂದರೆ ಆಟಿಕೆ ರೈಲು ಮತ್ತು ವಾರಾಂತ್ಯದಲ್ಲಿ, ಸರ್ಕಾರಿ ರಜಾದಿನಗಳಲ್ಲಿ ನೋಡಬಹುದಾದ ಸಂಗೀತ ಕಾರಂಜಿ ಪ್ರದರ್ಶನ. ಉದ್ಯಾನದ ಮಧ್ಯಭಾಗದಲ್ಲಿ ವಿಶಿಷ್ಟ ವಾದ ಗಾಜಿನ ಮನೆ ಅರಮನೆ ಇದೆ. ಈ ಗ್ಲಾಸ್ ಹೌಸ್ ಬೆಂಗಳೂರಿನ ಲಾಲ್ ಬಾಗ್‌ನಲ್ಲಿರುವ ಗ್ಲಾಸ್ ಹೌಸ್‌ಗೆ ಗಮನಾರ್ಹ ಹೋಲಿಕೆಯನ್ನು ಹೊಂದಿದೆ.

ಹುಬ್ಬಳ್ಳಿಯ ಆಸುಪಾಸಿನಲ್ಲಿ ಇನ್ನೂ ಅನೇಕ ಪ್ರವಾಸಿತಾಣಗಳಿದ್ದು, ಪ್ರಮುಖವಾಗಿ ನೋಡಲೇಬೇಕಾದ ತಾಣಗಳ ವಿವರ ಇದಾಗಿದೆ. ಹುಬ್ಬಳ್ಳಿಗೆ ಭೇಟಿ ನೀಡಿದಾಗ ಈ ಸ್ಥಳಗಳಿಗೆ ಭೇಟಿ ನೀಡಲು ಮರೆಯದಿರಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

One Comment

  1. ಸರ್ ಇನ್ನು ಒಂದು ಬಿಟ್ಟಿದಿರಾ ಶಿರಡಿ ನಗರದಲ್ಲಿ ಇರುವ ಶ್ರೀ ಸಾಯಿಬಾಬಾ ಮಂದಿರ ನೃಪತುಂಗ ಬೆಟ್ಟದ ಹಸಿರು ತಪ್ಪಲಿನಲ್ಲಿ ಇರುವ ಈ ಸಾಯಿ ಮಂದಿರ ಸುಂದರವಾಗಿ ಕಾಣುತ್ತದೆ. ಅಲ್ಲದೆ ಶಿರಡಿಯಲ್ಲಿ ಇರುವ ದ್ವಾರಕಾಮಾಯಿನ್ನು ಯಥಾವತ್ತಾಗಿ ನಿರ್ಮಿಸಿದ ರೀತಿ ತುಂಬಾ ವಿಸ್ಮಯ.ಕರ್ನಾಟಕದಲ್ಲಿ ಮೊಟ್ಟಮೊದಲನೆಯ ಬಾರಿ ಶಿರಡಿ ಮಾದರಿಯ ದ್ವಾರಕಾಮಾಯಿ ನಿರ್ಮಿಸಲಾಗಿದೆ.
    ದಯವಿಟ್ಟು ಇಂತ ಸ್ಥಳಗಳನ್ನು ಸೇರಿಸಿ
    ಧನ್ಯವಾದ ಗಳು
    ಸಾಯಿರಾಮ

Leave a Reply

Your email address will not be published. Required fields are marked *

Back to top button