ತುಂಬಿದ ಮನೆದೂರ ತೀರ ಯಾನವಿಂಗಡಿಸದ

ಮನದಲ್ಲಿ ಉಳಿದ ಮಂಜಿನ ನಗರ: ಸಿಂಧುಚಂದ್ರ ಹೆಗಡೆ ಬರೆದ ಸಿಂಪ್ಲಿ ಕಾಶ್ಮೀರ ಸರಣಿ ಭಾಗ 4

ಕಾಶ್ಮೀರ ಕಣ್ಣೆದುರು ತಂದು ತೋರಿಸಿದ ಸಿಂಪ್ಲಿ ಕಾಶ್ಮೀರ ಸರಣಿಯ ಕೊನೆಯ ಕಂತು.

ಒಬ್ಬೊಬ್ಬರಿಗೆ 1000 ರೂ. ಕೊಟ್ಟು ನಾನು ಮಗಳು ಒಂದು ಹಲಗೆಯ ಮೇಲೆ ಕುಳಿತೆವು. ಅವನು ಕರೆದೊಯ್ದ ಪರ್ವತದ ಮಗದೊಂದು ದಿಕ್ಕಿಗೆ.. ಅಲ್ಲಿಂದ ಭಾರತೀಯ ರಕ್ಷಣಾ ಪಡೆಯ ಶಿಬಿರಗಳು ಕಾಣ ಸಿಗುತ್ತವೆ. ಅರ್ಧ ತಾಸು ನಿಲ್ಲಲು ಸಾಧ್ಯವಿಲ್ಲದ ಜಾಗದಲ್ಲಿ ಗಡಿರಕ್ಷಣೆಗಾಗಿ ಠಿಕಾಣಿ ಹೂಡಿರುವ ಸೈನಿಕರನ್ನು ನೋಡಿ ಮನತುಂಬಿ ಬಂದಿತು. ಎಲ್ಲೆಲ್ಲೂ ಹಿಮರಾಶಿ.. ನಾನು ಎರಡು ಬಾರಿ ಬಿದ್ದೆ.. ಹಿಮದಲ್ಲಿ ಉರುಳಿದೆ, ಕುಣಿದಾಡಿದೆ..

ಸುತ್ತಲೂ ನೀಲಿಬೆಟ್ಟಗಳು, ಯಾವುದೋ ಸ್ವಪ್ನಲೋಕದಲ್ಲಿದ್ದಂತಹ ಅನುಭವ.. ಕಣ್ಣಳತೆಯವರೆಗೂ ಹಿಮವೇ ಹಿಮ. ಸ್ವಲ್ಪ ಕಾಲು  ಜಾರಿದರೂ ಪ್ರಪಾತಕ್ಕೆ ಜಾರುವ ಭಯ.. ಅಲ್ಲಿಂದ ಪಾಕಿಸ್ತಾನದ ಗಡಿ(pakistan border) ಪ್ರಾರಂಭ ಎಂದು ಗೈಡ್(guide) ಯಾವುದೋ ದೂರದ ಬೆಟ್ಟ ತೋರಿಸಿದ. ಅಷ್ಟು ಹೊತ್ತಿಗೆ ಮಗಳು, ಕಾಲು ಅಲ್ಲಾಡಿಸಲು ಆಗುತ್ತಿಲ್ಲವೆಂದು ಅಳಲು ಪಾರಂಭಿಸಿದಳು. ನಾನು ಹಲಗೆಯಲ್ಲಿ ನಮ್ಮನ್ನು ಕರೆದೊಯ್ದಿದ್ದ ಹುಡುಗನಿಗೆ 2000 ನೋಟೊಂದನ್ನು  ಕೊಟ್ಟು ವಾಪಸ್ ಹೊರಡಲು ಸನ್ನದ್ದಳಾದೆ. ಅಷ್ಟರಲ್ಲಿ ಆ ಹುಡುಗ ಓಡಿ ಬಂದು ನೀವು ಕೊಟ್ಟ ನೋಟು ನಡೆಯುವುದಿಲ್ಲ, ಅದರ ಮೇಲೇನೋ ಬರೆದಿದೆ ಎಂದು ವಾಪಸ್ ತಂದು ಕೊಡಬೇಕೇ..! ಇನ್ನು  ಮೇಲೆ ಬೇರೆಯವರಿಗೆ ದುಡ್ಡು ಕೊಡುವಾಗ ಅವರೆದುರಿಗೇ ತಿರುಗಾ ಮುರುಗಾ ನೋಟನ್ನು  ತೋರಿಸಿಯೇ ಕೊಡಬೇಕು  ಎಂಬ ನೀತಿಪಾಠ ಕಲಿತು ನಾವು ಗೊಂಡಾಲಾ(gondala) ರೈಡ್ ಮುಗಿಸಿದೆವು. 

ನೀವು ಇದನ್ನು ಇಷ್ಟಪಡಬಹುದು: 4 ವರ್ಷ, 17 ದೇಶ, ಸುತ್ತಾಟದಲ್ಲಿಯೇ ದಿನ ಕಳೆಯುತ್ತಿರುವ ಅವಿನಾಶ್, ರುಚಿಕ

ಗುಲ್ ಮಾರ್ಗದ ಹೂವು ಹಾದಿ

ಗುಲ್ ಮಾರ್ಗ ನ(Gulmarg) ರಸ್ತೆಗಳೆಲ್ಲಾ ಹೂಮಯ.. ಅಲ್ಲಿ ನೆಲಕ್ಕೇ ಹೂ ಹಾಸಿದ್ದರೊ ಎಂದು ಭಾಸವಾಗುತ್ತದೆ. ನೀಲಿ ಹಳದಿ ಹೂಗಳು ನೆಲಕ್ಕೇ ಹಬ್ಬುವ ಬಳ್ಳಿಯಲ್ಲಿ ಹುಲ್ಲುಹಾಸಿನ ನಡುವೆ ಅರಳುವುದೇ ಒಂದು ಚಂದ. ಸಂಪೂರ್ಣ ನಿಶ್ಯಬ್ದ ಜಗತ್ತು ಅದು. ವಾಹನದ ಓಡಾಟವಿಲ್ಲ, ಗಲಾಟೆಯಿಲ್ಲ, ಪಕ್ಷಿಗಳೂ ಅಷ್ಟಾಗಿ ಕೂಗುವುದಿಲ್ಲ, ಪ್ರಶಾಂತತೆಯೇ ಮೈದಳೆದಂತೆ. ನಿರಾಳ ಜಗತ್ತಿನ ಪರಿಕಲ್ಪನೆಯ ಸಾಕಾರ ರೂಪವಾಗಿ ಗೋಚರಿಸಿತು ನನಗೆ ಗುಲ್ ಮಾರ್ಗ.

5ನೇ ದಿನ ನಾವು ಶ್ರೀನಗರದತ್ತ ಪಯಣ ಬೆಳೆಸಿದೆವು. 2 ತಾಸಿನ ಹಾದಿ ಅದು. ಅಲ್ಲಿ ಮುಘಲ್ ಗಾರ್ಡನ್ ಗಳನ್ನು(moghal garden) ವೀಕ್ಷಿಸಿದೆವು. ಮೈಸೂರಿನ ಬೃಂದಾವನವನ್ನು ನೋಡಿದವರಿಗೆ ಸಾಧಾರಣವಾಗಿ ಯಾವ ಹೂದೋಟವೂ ಸೊಗಸುವುದಿಲ್ಲ. ನಮಗೂ ಈ ಗಾರ್ಡನ್ ಗಳು ಅತ್ಯದ್ಭುತವೆಂದೇನೂ ಅನಿಸಲಿಲ್ಲ. ಆದರೆ ಅಲ್ಲಿನ ಕಾರಂಜಿಗಳಲ್ಲಿ, ನೀರುಹಾದಿಯಲ್ಲಿ ಮಕ್ಕಳೆಲ್ಲಾ ಮನಸೋ ಇಚ್ಛೆ ಕುಣಿದಾಡುತ್ತಿದ್ದರು. ಅವರಿಗೆಲ್ಲಾ ಯಾವ ಪ್ರತಿಬಂಧನೆಯೂ ಇರಲಿಲ್ಲ. 

ಸಾಮಾನ್ಯವಾಗಿ ಗಾರ್ಡನ್ ಗಳೆಲ್ಲಾ ಬಹುತೇಕ ಶಿಸ್ತುಬದ್ದತೆಯಿಂದ ನಿಯಮಗಳಿಂದ ಪರಿಶೋಭಿಸುವುದನ್ನು ಕಂಡಿದ್ದ ನಾನು ಈ ಸ್ವಾತಂತ್ರ್ಯ ನೋಡಿ ಕಂಗಾಲಾದೆ.  ಬಹಲ ಎಂದರೆ ಬಹಳ ಜನಜಂಗುಳಿಯಿಂದ ಗಿಜಿಗಿಜಿ ಎನ್ನುತ್ತಿದ್ದ ಆ ಸ್ಥಳಗಳಲ್ಲಿ  ಕೂಡ ಬಹುತೇಕ ಎಲ್ಲರೂ ಮುಸ್ಲಿಂ ಸಮುದಾಯದವರೇ ಇದ್ದರು. ಇಲ್ಲಿ  ಹಿಂದೂಗಳ ವಾಸ್ತವ್ಯ ಇದೆಯೊ ಇಲ್ಲವೋ ಎನ್ನುವ ನನ್ನ ಪ್ರಶ್ನೆಗೆ 20 ಪರ್ಸೆಂಟ್ ಇರಬಹುದು ಎಂದು  ರಾಯಿಸ್ ಉತ್ತರಿಸಿದ. 

ಅಕ್ಬರ್ ಇನ ಎನ್ನುವ ಹೋಟೆಲ್ ನಲ್ಲಿ  ಶ್ರೀನಗರದಲ್ಲಿ ಉಳಿದಿದ್ದೆವು. ಅಲ್ಲಿನ ಹೋಟೆಲ್ ಮಾಲಿಕ ನನ್ನ ಬಳಿ ಮಾತನಾಡುತ್ತಾ, ನಾವು ಬಾರತದಲ್ಲಿ ಸೇಫ್ ಆಗಿದ್ದೇವೆ, ನಮಗೆ ಪ್ರತ್ಯೇಕತೆ ಬೇಕಿಲ್ಲ, ಯಾರಿಗೆ ಬೇಕಾಗಿದೆಯೋ ಅವರು ಈ ನೆಲದವರಲ್ಲ,  ಒಂದೊಮ್ಮೆ ಅವರೆಲ್ಲಾ ಬಯಸಿದಂತಾದರೆ ಮನುಷ್ಯ ಮನುಷ್ಯನನ್ನು ತಿನ್ನುವ ಪರಿಸ್ಥಿತಿ ಬರಬಹುದು ಇಲ್ಲಿ ಎಂದು ಬೇಸರಿಸಿದ. ಮಾರು ಮಾರಿಗೂ ಭಾರತದ ರಕ್ಷಣಾ ಪಡೆಯವರು ಗನ್ ಹಿಡಿದು ನಿಂತಿರುವ ದೃಶ್ಯ ಕಾಶ್ಮೀರದಲ್ಲಿ ಸರ್ವೇ ಸಾಮಾನ್ಯ. ಅವರ ಪಾಡು ನೋಡಿದರೇ ಎಂಥವರಾದರೂ ಮಮ್ಮಲಮರುಗಲೇ ಬೇಕು. 

ಶ್ರೀನಗರದ ಬೀದಿಗಳಲ್ಲಿ ಓಡಾಟ

ನಾನು ಚಂದ್ರು ಆ ದಿನ ಸಂಜೆ ಶ್ರೀನಗರದ ದಾರಿಗಳಲ್ಲಿ  ಅಡ್ಡಾಡಿದೆವು. ಎಲ್ಲಾ ಕಡೆ ನಾನು ಗಮನಿಸಿದ್ದು ಅದೇ, ಯಾವುದೇ ಅಂಗಡಿಗಳಲ್ಲಿ ಮಹಿಳೆಯರು ಅಂಗಡಿಕಾರರಿಲ್ಲ. ಮತ್ತು ಮಹಿಳೆಯರ ಓಡಾಟವೂ ಅಷ್ಟಾಗಿ ಇರುವುದಿಲ್ಲ. ಹಳ್ಳಿಯ ರಸ್ತೆಗಳಲ್ಲಿ ಸಗಣಿ ಹೊರುವ, ಕಟ್ಟಿಗೆ ಹೊರುವ ಮಹಿಳೆಯರನ್ನು ಗಮನಿಸಿದ್ದೆ ಅಷ್ಟೇ. ಅಲ್ಲಿಯ ಜನಸಾಮಾನ್ಯರ ಆರ್ಥಿಕ ಮಟ್ಟ ತೀರಾ ಕೆಳಮಟ್ಟದಲ್ಲಿರುವುದನ್ನೂ, ವ್ಯಾಪಾರದಲ್ಲಿ, ವಾಹನ ಬಾಡಿಗೆ ವಿಷಯದಲ್ಲಿ, ಆಟೋಟ ಶುಲ್ಕ ವಸೂಲು ಮಾಡುವುದರಲ್ಲಿ  ಪ್ರವಾಸಿಗರನ್ನು ಯಾಮಾರಿಸುವುದು, ಅಲ್ಲಿ ಸರ್ವೇ ಸಾಮಾನ್ಯ ವಿಷಯ.

6ನೇ ದಿನ ನಾವು ಹೊರಟಿದ್ದು ಸೋನ್ ಮಾರ್ಗ(sonamarg) ಎಂಬಲ್ಲಿಗೆ. ರಸ್ತೆಯುದ್ದಕ್ಕೂ ರಾಯಿಸ್ ಹಾಗೂ ನಮ್ಮ ವಾಹನದ ಡ್ರೈವರ್ ಇಬ್ಬರೂ ಕಾಶ್ಮೀರಿಗಳ ಹೋರಾಟದ ಕುರಿತಂತೆ ಕಥೆ ಹೇಳುತ್ತಿದ್ದರು. ಅವರು ಮಾತನಾಡುವಾಗಲ್ಲೆಲ್ಲಾ ಭಾರತದವರು ಹಾಗೇ ಹೀಗೇ ಎನ್ನುವಾಗಲ್ಲೆಲ್ಲಾ ಕಾಶ್ಮೀರ ಎಲ್ಲಿದೆ? ಎನ್ನುವ ಸಂದೇಹ ನನ್ನನ್ನು ಕಾಡುತ್ತಿತ್ತು. ಬಹುತೇಕ ಕಾಶ್ಮೀರಿಗಳಿಗಿದ್ದಂತೆ,ತಾವೂ ಭಾರತೀಯರೂ ಎಂಬ ಮನಃಸ್ಥಿತಿಯೇ ಇಲ್ಲದ ಈರ್ವರೊಂದಿಗೆ ನಮ್ಮ ಪ್ರಯಾಣ ಸಾಗಿತ್ತು. 

ನಮಗೆ ಭಾರತವೂ ಬೇಡ, ಪಾಕಿಸ್ತಾನವೂ ಬೇಡ, ನಮಗೆ ಸ್ವಾತಂತ್ರ್ಯ ಬೇಕು ಎನ್ನುವ ಮಾತುಗಳನ್ನೂ ಆಡಿದರು. ಮಾರ್ಗಮಧ್ಯದಲ್ಲಿ  ಯಾವುದು ಒಂದು ವಾಹನ ನಮ್ಮ ವಾಹನದ ಸೈಡ್ ಮಿರರ್ ನ್ನು ಒಡೆದು ನಮ್ಮನ್ನು ಹಿಂದಿಕ್ಕಿಸಿ ಹೋಯಿತು.  ನಮ್ಮ ಡ್ರೈವರನೋ ಸಿನಿಮೀಯ ರೀತಿಯಲ್ಲಿ  ಅವನನ್ನು ಚೇಸ್ ಮಾಡಿ, ಅವನನ್ನು ಅಡ್ಡಗಟ್ಟಿ, ವಾಹನದಿಂದ ಹೊರಗೆಳೆದು ನಾಲ್ಕು ಗುದ್ದಿ ಬಿಡಬೇಕೇ…

ಅಲ್ಲಿ ಹತ್ತಾರು ಜನ ಸೇರಿ ಗಲಾಟೆಯೇ ಆರಂಭಗೊಂಡಿತು, ಅವರ ಭಾಷೆ ನಮಗೆ ತಿಳಿಯುತ್ತಿಲ್ಲ, ನಮ್ಮ ಡ್ರೈವರ್, ಗೈಡ್ ಇಬ್ಬರೂ ಕೆಳಗಿಳಿದು ಹೋಗಿದ್ದಾರೆ. ಮತ್ಯಾರೋ ಅಪರಿಚಿತ ಬಂದು ನಾವಿರುವ ಗಾಡಿ  ಏರಿ, ಗಾಡಿ ಚಾಲೂ ಮಾಡಿದ. ನಾವೆಲ್ಲರೂ ಕಕ್ಕಾಬಿಕ್ಕಿ, ಇವನ್ಯಾರು? ಎಲ್ಲಿಗೆ ಕರೆದೊಯ್ಯುತ್ತಿದ್ದಾನೆ? ಕಡೆಗೆ ಗೊತ್ತಾಯಿತು, ಗಾಡಿ ರಸ್ತೆಯ ಮಧ್ಯ ಇದ್ದಿದ್ದರಿಂದ ಅದನ್ನು  ಸ್ವಲ್ಪ ಬದಿಗಿಡಲು ಬಂದಿದ್ದಾನೆ ಎಂದು. ನಾವು ನಿಟ್ಟುಸಿರು ಬಿಟ್ಟೆವು.

 ಸೋನಮಾರ್ಗ ಶ್ರೀನಗರದಿಂದ 2 ತಾಸಿನ ಹಾದಿ. ದುರ್ಗಮ ಹಾದಿ ಎಂದರೆ ತಪ್ಪಾಗಲಿಕ್ಕಿಲ್ಲ. ಕಾಸ್ಮೀರದ ಅಷ್ಟೂ ಸೌಂದರ್‍ಯವನ್ನು ಗುತ್ತಿಗೆ ಪಡೆದವರಂತೆ ತಲೆಯೆತ್ತಿ ನಿಂತಿರುವ ಸೋನ್ ಮಾರ್ಗ ಹಿಮದಿಂದ ಮುಚ್ಚಿ ಹೋಗಿರುತ್ತದೆ. ರಸ್ತೆಗಳ ಮೇಲಿನ ಹಿಮವನ್ನು ತೆಗೆದುಹಾಕುವ ಕಾಯಕ ಅಲ್ಲಿ ನಿರಂತರ. ಹಿಮದಿಂದಲೆ ನಿರ್ಮಿತವಾಗಿರುವ ಸೇತುವೆಗಳು ಅಚ್ಚರಿ ಹುಟ್ಟಿಸುತ್ತವೆ. ಹಿಮಝರಿಗಳು, ಹಿಮಪಾತ, ಕೊರೆಯುವ ಹಿಮಗಾಳಿ, ಎಲೆಯನ್ನೆಲ್ಲಾ ಉದುರಿಸಿ ಕೊಂಡು  ಬೋಳು ಟೊಂಗೆಗಳಿಗೆ ಹಿಮದ ಗೂಡುಗಳನ್ನು  ಕಟ್ಟಿಕೊಂಡು ನಿಮತಿರುವ ಬೃಹತ್ ಮರಗಳು, ರಾಕ್ಷಸ ಗಾತ್ರದ ಪರ್ವತ ಶ್ರೇಣಿಗಳು, ಸುಂಯ್ ಎಂದು ಜಾರುವ ಹಿಮದ ನೆಲ, ವ್ಹ ವ್ಹಾ.. ನೆನೆದರೆ ಈಗಲೂ ರೋಮಾಂಚನ. 

 ಅಲ್ಲಿ ಎಲ್ಲವೂ ಸೌಂದರ್‍ಯದ ಕಟ್ಟಕಡೆಯ ಪರಿಕಲ್ಪನೆಗೆ ಇಂಬು ನೀಡುವ ದೃಶ್ಯಗಳೆ. ನಾನು ಊಹಿಸಿದಕ್ಕಿಂತಾ ಸೌಂದರ್‍ಯವನ್ನು ಮೈಯೆಲ್ಲಾ ಮೆತ್ತಿಕೊಂಡು ಪ್ರಕೃತಿ ಮೈದಳೆದಿರುವ ಪರಿಗೆ ಮೂಕವಿಸ್ಮಿತಳಾಗುವುದ ಬಿಟ್ಟರೆ ನನಗೆ ಬೇರೇನೂ ತೋಚಲಿಲ್ಲ. ಸೋನ್ ಮಾರ್ಗ ದಿಂದ ಬರುವ ಹಾದಿಯೆಲ್ಲಾ ಕನಸಿನ ಹಾದಿ. 

 ಹೋಗುವಾಗ ಇದ್ದಿದ್ದಕ್ಕಿಂತ ಹೆಚ್ಚಿನ ಚೆಕಿಂಗ್ ಝೋನ್ ಗಳನ್ನು ಪಾರು  ಮಾಡಿ ನಾವೆಲ್ಲವೂ ಶ್ರೀನಗರ ವಿಮಾನ ನಿಲ್ದಾಣದಿಂದ ಪಾರಾದೆವು. ಚಂದ್ರುನ ಬ್ಯಾಗ್ ನಲ್ಲಿದ್ದ ಫೆವಿಕ್ವಿಕ್ ಅನ್ನು ಲಗೇಜ ಚೆಕಿಂಗ್ ಅಲ್ಲಿ ರಿಜೆಕ್ಟ ಮಾಡಿದ ಆಫೀಸರ್ ಒಬ್ಬ, ನೀವು ಪೈಲಟ್ ಸೀಟ್ ಗೆ ಫೆವಿಕ್ವಿಕ್ ಹಚ್ಚಿಟ್ಟುಬಿಟ್ಟ್ರೆ ಕಷ್ಟ ಎಂದು ನಕ್ಕ. ಇಷ್ಟೆಲ್ಲಾ ಸೆಕ್ಯುರಿಟಿಗಳ ಮಧ್ಯ ಕೂಡ ಏನೆಲ್ಲಾ ಅವಘಡಗಳು ಸಂಭವಿಸುತ್ತವೆ, ಅದೆಲ್ಲಾ ಹೇಗೆ ಸಾಧ್ಯ ಎಂಬ ಪ್ರಶ್ನೆ ನನ್ನನ್ನು ಕಾಡಿದ್ದು ಸುಳ್ಳಲ್ಲ.

ವಿಮಾನ ನಿಲ್ದಾಣದಲ್ಲಿದ್ದ ಪ್ರಾರ್ಥನಾ ಮಂದಿರದಲ್ಲಿ, ಅಮ್ಮ ಅಲ್ಲಿ ಯಾವುದೇ ದೇವರ ಫೋಟೋನೇ ಇಲ್ಲಾ, ಮತ್ತೆ ಪ್ರಾರ್ಥನಾ ಮಂದಿರ ಎಂದು ಬೋರ್ಡ್ ಹಾಕಿದ್ದಾರಲ್ಲಾ ಎಂದು ಮಗಳು ಪ್ರಶ್ನೆ ಕೇಳುತ್ತಿದ್ದಳು. ನಾನು ಶ್ರೀನಗರದಲ್ಲಿ ಗರಿಗೆದರಿದ್ದ ಗಲಾಟೆಗಳ ಬಗ್ಗೆ ವರದಿಗಳನ್ನು ಮೊಬೈಲ್ ನಲ್ಲಿ  ಓದುತ್ತಾ, ಅರೆ ಇಲ್ಲೇ ಇದ್ದರೂ ಇದ್ಯಾವುದರ ಪರಿವೆಯೇ ಇಲ್ಲದಂತೆ ಓಡಾಡಿದೆವಲ್ಲಾ ಎಂದುಕೊಂಡು ವಿಮಾನದೆಡೆಗೆ ಹೆಜ್ಜೆ ಹಾಕಿದೆ.

ಸಿಂಪ್ಲಿ ಕಾಶ್ಮೀರ ಸರಣಿ ಇಲ್ಲಿ ಓದಿ ಭಾಗ 1, ಭಾಗ 2, ಭಾಗ 3

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

Related Articles

Leave a Reply

Your email address will not be published. Required fields are marked *

Back to top button