ವಿಂಗಡಿಸದಸೈಕಲ್ ಹತ್ತು ಊರು ಸುತ್ತು

ಸೈಕಲ್ ಮೇಲೆ ಕುಳಿತು ಉಜಿರೆ ಸುತ್ತಿದ ಕತೆ: ವಿಶ್ವ ಸೈಕಲ್ ದಿನದ ವಿಶೇಷ

ನಮ್ಮ ಜೀವನದ ಎಲ್ಲಾ ಪ್ರಮುಖ ಘಟ್ಟದಲ್ಲಿ ಸೈಕಲ್ ಎಲ್ಲಾ ಹಂತಗಳಲ್ಲೂ ಜಾಗ ಪಡೆದುಕೊಂಡಿದೆ. ಬಾಲ್ಯದ ಮುಗ್ಧ ಜೀವನದಿಂದ ಮೊದಲುಗೊಂಡು, ಹರೆಯದ ತುಂಟಾಟದ ದಿನಗಳಲ್ಲಿಯೂ ಜೊತೆಗಿದ್ದು, ನಮ್ಮ ಆರೋಗ್ಯದ ರಾಯಭಾರಿಯಾಗಿ, ನೆಚ್ಚಿನ ಸಂಗಾತಿಯಾಗಿ, ನಮ್ಮ ಮೊದಲ ವಾಹನವೆಂಬ ಹೆಮ್ಮೆಗೆ ರೂವಾರಿಯಾಗಿ, ಎಲ್ಲಾ ಪ್ರಯೋಜನಗಳನ್ನು ಕೊಟ್ಟ ಸೈಕಲ್ ಮೇಲಿನ ಪ್ರೀತಿ, ಸೈಕಲ್ ದಿನಕ್ಕೆ(world bicycle day 2021) ಈ ನೆನಪಿನ ಲೇಖನ.

– ವರ್ಷಾ ಉಜಿರೆ

ಸೈಕಲ್, ನಮ್ಮ ಬಾಲ್ಯದ ಅವಿಭಾಜ್ಯ ಅಂಗ. ಬಾಲ್ಯದಿಂದಾರಂಭಿಸಿ ಈ ಎರಡು ಚಕ್ರದ ವಾಹನವಿಲ್ಲದೆ ಬಾಲ್ಯದ ದಿನಗಳನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ನಾವು ಅತ್ತು ಕರೆದು ಪಡೆದುಕೊಂಡ ಮೊದಲ ವಾಹನ. ಇತರರೊಂದಿಗೆ ರೇಸ್ ಮಾಡಲು ಕಲಿಸಿಕೊಟ್ಟ ಅದ್ಭುತ ಗುರು. ಜೀವನದಲ್ಲಿ ಅದೆಷ್ಟೇ ಏಳುಬೀಳು ಎದುರಾದರೂ ನಿನ್ನ ಶಕ್ತಿಯನ್ನು ನಂಬು ಎಂದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತಿಳಿಸಿಕೊಟ್ಟ ಹಿತೈಷಿ. ಅದು ಕೇವಲ ಎರಡು ಚಕ್ರದ ವಾಹನವಲ್ಲ!

World Bicycle Day Health and Fitness Childhood Friend Cycling
ಚಿತ್ರಕೃಪೆ : ವಿನಯ ಕುಮಾರ ಪಾಟೀಲ

ನಿಮ್ಮ ಮೊಣಕೈ, ಮೊಣ ಕಾಲು, ಹಣೆಯಲ್ಲಿ ಒಂದಾದರೂ ಸೈಕಲಿನಿಂದ ಬಿದ್ದ ಗಾಯದ ಗುರುತು ಇಲ್ಲವೆಂದರೆ ನೀವು ಸರಿಯಾಗಿ ಸೈಕಲ್ ಕಲಿತಿಲ್ಲವೆಂದೇ ಅರ್ಥ! ‘ಸೈಕಲ್ ಕಲಿಯುವಾಗ ಬೀಳ್ಬೇಕು. ಆಗ ನಿಜವಾಗಿ ಸೈಕಲ್ ಕಲಿತ ಹಾಗೆ ಆಗ್ತದೆ’ ಎಂದು ಅಪ್ಪ ಅಮ್ಮ ಹೇಳಿದ ಮೇಲೆ, ಸೈಕಲ್ ಸರಿಯಾಗಿ ಕಲಿತರೂ ಬೀಳುತ್ತಿದ್ದೆ. 

ಸೈಕಲ್ ಜೊತೆಗೆ ಪಯಣ

ಸೈಕಲ್ ಜೊತೆಗೆ ನಮ್ಮದು ಮುಗಿಯದ ಕಥೆ, ನೆನಪುಗಳ ಸರಮಾಲೆ. ಪ್ರಾಥಮಿಕ ಶಾಲಾ ಹಂತದಲ್ಲಿರುವಾಗ ನನ್ನ ಹತ್ತಿರ ಸೈಕಲ್ ಇರಲಿಲ್ಲ. ಆಗ ಗೆಳೆಯನೊಬ್ಬನ ಹತ್ತಿರ ಕಾಡಿ ಬೇಡಿ ಸೈಕಲ್ ಪಡೆದು ಕಲಿತಿದ್ದೆ. ಅದೇ ಎಂಟನೇ ತರಗತಿಗೆ ಬಂದಾಗ ಸರ್ಕಾರದ ವತಿಯಿಂದ ಉಚಿತ ಸೈಕಲ್ ಕೊಟ್ಟಾಗ ಯಾವುದೋ ದುಬಾರಿ ಕಾರು ಸಿಕ್ಕಷ್ಟೇ ಖುಷಿ. ಆದರೆ ಆ ಸೈಕಲ್ ಪಿಯುಸಿ ಹಂತಕ್ಕೆ ಬಂದಾಗ, ನಾನು ಅದನ್ನು ಉಪಯೋಗಿಸಿದ ರಭಸಕ್ಕೆ ಮೂಲೆಗೆ ಬಿದ್ದಿತ್ತು. 

ನೀವುಇದನ್ನುಇಷ್ಟಪಡಬಹುದು: ಸೈಕಲ್ ಬಾಲ್ಯದ ಗೆಳೆಯ, ಫಿಟ್ ನೆಸ್ ಗುರು: ವಿಶ್ವ ಸೈಕಲ್ ದಿನ ವಿಶೇಷ

ಪಿಯುಸಿ ಹಂತ ದಾಟಿದ ಹೊತ್ತಿಗೆ ನನಗೊಂದು ಸೈಕಲ್ ತೆಗೆಸಿಕೊಟ್ಟರು ನನ್ನಪ್ಪ. ಅದು ಹುಡುಗರ ಸೈಕಲ್. ಯಾವುದಾದರೇನು? ನನಗೆಂದೇ ಒಂದು ಸೈಕಲ್ ಇದ್ದರೆ ಸಾಕು ಎಂಬ ಮನೋಭಾವ ಇದ್ದುದರಿಂದ ಅದರಲ್ಲೂ ವಿವಿಧ ಸಾಹಸಗಳನ್ನು ಪ್ರಯತ್ನಿಸುತ್ತಿದ್ದೆ.

ಆಗ ಒಂದು ಕೈಯ್ಯಲ್ಲಿ ಸೈಕಲ್ ಬಿಡುವುದು, ವ್ಹೀಲಿಂಗ್ ಪ್ರಯತ್ನಿಸುವುದೇ ನಮ್ಮ ಪಾಲಿನ ಅತ್ಯದ್ಭುತ ಸಾಹಸವಾಗಿತ್ತು. ಯಾರಾದರೂ ಈ ಕಲೆಗಳಲ್ಲಿ ಸಿದ್ಧಿಸಿದ್ದರೆ ಅವರು ನಮ್ಮ ಪಾಲಿಗೆ ಸಕಲಕಲಾವಲ್ಲಭರು! ಇದಲ್ಲದೇ, ಚೈನ್ ರಿಪೇರಿ ಮಾಡುವ, ವೇಗವಾಗಿ ಗಾಲಿಗೆ ಗಾಳಿ ತುಂಬುವ ಸ್ನೇಹಿತರಿದ್ದರಂತೂ ನಮಗೊಂದು ಹೆಮ್ಮೆಯೇ! ಅಗತ್ಯ ಬಿದ್ದಾಗ ಪಂಪ್ ಕೊಡುವವನಂತೂ ದೇವರ ಸಮಾನ. 

ಜೀವನ ಚಲಿಸುತ್ತಿದ್ದಂತೆ, ಇಡೀ ದಿನ ಸೈಕಲ್ ಬಿಡುವ ಹುಚ್ಚಿಗಿಂತ, ವ್ಯಾಯಾಮದ ನೆಪದಲ್ಲಿ ಒಂದರ್ಧ ಗಂಟೆ ಬಿಡುವಲ್ಲಿಗೆ ಬಂತು. ಎಲ್ಲೋ ಒಂದೆಡೆ ಸೈಕಲ್ ಮೇಲೆ ಉಪೇಕ್ಷೆ ಬೆಳೆಯುತ್ತಿದೆಯೇನೋ ಅಂತನ್ನಿಸಿದರೂ, ವೈಯುಕ್ತಿಕ ನೆಪಗಳು, ಕೆಲಸಗಳು ಬೃಹತ್ತಾಗಿ ಕಾಣಿಸುತ್ತಿದ್ದವು. 

ಚಿತ್ರಕೃಪೆ : ವಿನಯ ಕುಮಾರ ಪಾಟೀಲ

ಸೈಕಲ್ ಹತ್ತಿ ಉಜಿರೆ ಸುತ್ತೋದು

ಸೈಕಲ್ ಹತ್ತಿ, ಊರು ಸುತ್ತುತ್ತಾ, ಕಾಲೇಜಿಗೆ ಹೋಗಬೇಕು ಅನ್ನುವ ಆಸೆ ತೀವ್ರವಾಗಿ ಹುಟ್ಟಿದ್ದು ಸ್ನಾತಕೋತ್ತರ ಕೇಂದ್ರಕ್ಕೆ ಸೇರಿದ ಮೇಲೆ. ಕಾಲೇಜಿನಿಂದ ನಮ್ಮ ಮನೆಗೆ ೪ ಕಿಮೀ ದೂರ. ಉಜಿರೆಯ ಮುಖ್ಯ ರಸ್ತೆ, ಸರ್ಕಲ್ ಮತ್ತು ರಮಣಿಯ ಕಾಲೇಜು ರಸ್ತೆಯನ್ನು ಸವರಿಕೊಂಡು ಕಾಲೇಜು ತಲುಪಬೇಕು. 

ಆಸೆ ಕಮರಿಹೋಗುವ ಮುನ್ನ, ಒಂದು ಬೆಳಗ್ಗೆ ಎದ್ದು, ಸೈಕಲಿಗೊಂದು ಅಭ್ಯಂಜನ ಮಾಡಿಸಿ, ಗಾಲಿಯ ಪೂರಾ ಗಾಳಿ ಭರ್ತಿ ಮಾಡಿದೆ. ಕಾಲೇಜಿನ ಯೂನಿಫಾರಂ, ಎರಡೇ ಪುಸ್ತಕವಿರುವ ಕಾಲೇಜು ಬ್ಯಾಗೇರಿಸಿ ಸೈಕಲ್ ಏರಿದಾಗ ಅನಿರ್ವಚನೀಯ ಆನಂದ! ಬಹುಶಃ ಅಪ್ಪನ ಕಾರಿನಲ್ಲಿ ಕಾಲೇಜಿಗೆ ಹೋದಾಗಲೂ ನನಗೆ ಹಾಗೆ ಅನ್ನಿಸಿರಲಿಲ್ಲವೇನೋ?!

ಮುಖ್ಯ ರಸ್ತೆ ಅಂದ ಮೇಲೆ ಅಲ್ಲಿ ದೊಡ್ಡ ಬಸ್ಸು, ಕಾರುಗಳದ್ದೇ ರಾಯಭಾರ. ಅದರ ಮಧ್ಯೆ ನನ್ನ ಬಡಪಾಯಿ ಸೈಕಲನ್ನು ಸಾಗಿಸುವುದೇ ಹರಸಾಹಸವಾಗಿತ್ತು. ಆದರೂ ಸೈಕಲ್ ಬೆನ್ನೇರಿ ಕಾಲೇಜು ತಲುಪುವ ಹುಮ್ಮಸ್ಸು ಹೆಚ್ಚಾಗಿ, ಇದ್ಯಾವುದೂ ಗಣನೆಗೆ ಬರುತ್ತಿರಲಿಲ್ಲ. 

ಇದಕ್ಕೂ ಸಂತೋಷದ ವಿಷಯವೆಂದರೆ, ಕಾಲೇಜಿನ ಪಾರ್ಕಿಂಗ್ ಲಾಟಿನಲ್ಲಿದ್ದ ದುಬಾರಿ, ಹೊಸ, ಹಳೆ, ಅಜ್ಜನ ಕಾಲದ ಹೀಗೆ ವಿವಿಧ ಅವತಾರದ ಬೈಕು, ಸ್ಕೂಟಿಗಳ ನಡುವೆ, ನನ್ನ ಸೈಕಲ್ ಅನ್ಯಗ್ರಹ ಜೀವಿಯಂತೆ ನಿಂತಿದ್ದು ನನಗೊಂದು ಹೆಮ್ಮೆ ಕೊಟ್ಟಿತ್ತು! ಅದನ್ನು ಇತರರು ಗುರುತಿಸಿ, ನನ್ನನ್ನು ಮಿಂಚುವ ಕಂಗಳಲ್ಲಿ ನೋಡಿದಾಗ ಅದೇನೋ ಸಾಧಿಸಿದ ಖುಷಿಯಾಗಿತ್ತು. ಕೆಲವರಂತೂ, ‘ಒಂದು ರೈಡ್ ಕೊಡ್ತೀಯಾ?’ ಅಂತ ಕೇಳಿದಾಗ, ಸೈಕಲ್ ಎಂದೂ ಬತ್ತದ ಪ್ರೀತಿಯ ಪ್ರತೀಕ ಎಂಬುದು ನನಗರ್ಥವಾಗಿತ್ತು. 

ಈಗ ನನ್ನ ನಿಷ್ಕಲ್ಮಶ ಸಂಗಾತಿ ಮೂಲೆಯಲ್ಲಿ ನಿಂತಿದೆ. ಪೆಡಲುಗಳ ಸಂಧಿಯಲ್ಲಿ ಧೂಳು ತುಂಬಿಕೊಂಡಿದೆ. ಹ್ಯಾಂಡಲ್, ಒಂದು ಪ್ರೇಮದ ಸ್ಪರ್ಶಕ್ಕಾಗಿ ಕಾಯುತ್ತಿದೆ. ಕ್ಯಾರಿಯರ್, ನನ್ನ ಒಂದು ಪುಸ್ತಕ ಇಡಲು ಜಾಗ ಕಾಯ್ದಿರಿಸಿಕೊಂಡಿದೆ. ಚಕ್ರದ ಗಾಳಿ ಎಂದೋ ತೀರಿದೆ. ಮತ್ತೊಮ್ಮೆ ಅವೆಲ್ಲಕ್ಕೂ ಶಕ್ತಿ ತುಂಬಬೇಕು. ಪ್ರೀತಿ ಕೊಡಬೇಕು. ಏರು, ಇಳಿಜಾರಿನ ಹಾದಿಯನ್ನು ಸವರುವಂತೆ ಮಾಡಬೇಕು. ಮತ್ತೆ ಇದೆಲ್ಲವನ್ನು ಮಾಡಲು ಈ ವಿಶ್ವ ಸೈಕಲ್ ದಿನ ಸ್ಫೂರ್ತಿಯಾಗಲಿ ಎನ್ನುವುದು ನನ್ನಾಶಯ… 

World Bicycle Day Health and Fitness Childhood Friend Cycling
ಚಿತ್ರಕೃಪೆ : ವಿನಯ ಕುಮಾರ ಪಾಟೀಲ

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button