ನಡಿಗೆ ನಮ್ಮ ಖುಷಿಗೆವಿಂಗಡಿಸದಸೂಪರ್ ಗ್ಯಾಂಗುಸ್ಮರಣೀಯ ಜಾಗ

ಮೂರು ಪುಟ್ಟ ಕೈಗಳು ಬರೆದ ಪಿಕ್ನಿಕ್ ನೆನಪುಗಳು

ಜೂನ್ ಹದಿನೆಂಟು ‘ವಿಶ್ವ ಪಿಕ್ನಿಕ್ ದಿನ’. ಪಿಕ್ನಿಕ್ಗಳು ಶುರುವಾಗುವುದೇ ಶಾಲೆಯಿಂದ. ಮನೆಯಲ್ಲಿ ಕಾಡಿಬೇಡಿ ತರಗತಿಯ ಜೊತೆ ಪ್ರವಾಸ ಹೋಗುವ ಖುಷಿಯ ಬೇರೆ. ಆ ಎಂದೂ ಸವೆಯದ ನೆನಪಿನ ಪುಟ್ಟ ಪಿಕ್ನಿಕ್ ಕಥನಗಳು ಇಲ್ಲಿವೆ.

ಬದುಕಿನ ಮೊತ್ತ ಮೊದಲ ಪ್ರವಾಸ ಯಾವುದು ಎಂದು ನೆನಪಿಸಿಕೊಂಡರೆ ಬಹುತೇಕರಿಗೆ ನೆನಪಾಗುವುದೇ ತರಗತಿಯವರೆಲ್ಲಾ ಜೊತೆಯಾಗಿ ಹೋಗುತಿದ್ದ ಶಾಲೆಯ ಶೈಕ್ಷಣಿಕ ಪ್ರವಾಸಗಳು. ಜೂನ್ ಹದಿನೆಂಟು ವಿಶ್ವ ಪಿಕ್ನಿಕ್ ದಿನ ಎಂದು ಆಚರಿಸಲಾಗುತ್ತದೆ. ಪಿಕ್ನಿಕ್ ಎಂದ ಕೂಡಲೇ ನನಗೆ ನೆನಪಾಗುವುದು ಶಾಲೆಯಲ್ಲಿದ್ದ ಒಂದು ದಿನದ ಪ್ರವಾಸಗಳು.

ಈ ಪ್ರವಾಸಕ್ಕೆ ಮನೆಯಲ್ಲಿ ಒಪ್ಪಿಸುವುದೊಂದು ದೊಡ್ಡ ಕಷ್ಟದ ಕೆಲಸವಾಗಿತ್ತು. ಒಪ್ಪಿಗೆಯ ಕಷ್ಟದ ಹಿಂದೆ ಆರ್ಥಿಕ, ಸಾಮಾಜಿಕ, ವೈಜ್ಞಾನಿಕ ಕಾರಣಗಳಿರುತಿತ್ತು. ಒಂದು ಬಾರಿ ಒಪ್ಪಿದ ಮೇಲೆ ಪ್ರವಾಸದ ದಿನದವರೆಗೆ ಸರಿಯಾದ ನಿದ್ದೆಯಿರುತ್ತಿರಲಿಲ್ಲ. ನನಗಂತೂ ಪ್ರವಾಸದ ದಿನದ ಬೆಳಿಗ್ಗೆ ಅದೆಷ್ಟೇ ಬೇಗ ಏಳಬೇಕಿದ್ದರೂ ಅಲರಾಂ ಇಲ್ಲದೇ ಎಚ್ಚರವಾಗುತ್ತಿತ್ತು. ಎಂದಿಗೂ ಮರೆತು ಹೋಗದ ಹಲವು ನೆನಪುಗಳ ಯಾತ್ರೆಯಾಗಿರುತ್ತಿತ್ತು ಆ ಪಿಕ್ನಿಕ್.


ಇವತ್ತಿನ ಈ ಲೇಖನ ಎಂದಿಗಿಂತ ವಿಶೇಷ. ಇಲ್ಲಿ ನನ್ನ ಕಥೆಯಿಲ್ಲ, ಮೂರು ಪುಟ್ಟ ಪುಟ್ಟ ಮಕ್ಕಳು ತಮ್ಮ ಪಿಕ್ನಿಕ್ ನೆನಪುಗಳನ್ನು ನಮ್ಮಲ್ಲಿ ಹಂಚಿಕೊಂಡಿದ್ದಾರೆ. ಮತ್ತು ಅದು ಅವರದೇ ಪುಟ್ಟ ಪದಗಳಲ್ಲಿದೆ. ಓದಿದಾಗ ನಿಮ್ಮ ಪಿಕ್ನಿಕ್ ದಿನ ನೆನಪಾಗದೇ ಇರದು.

ಮೂರನೇ ತರಗತಿಯ ಆಧ್ಯಾ ಬರೆದ ಮುದ್ದಾದ ಪ್ರವಾಸ ಅನುಭವ.

ನನ್ನ ಹೆಸರು ಆಧ್ಯಾ ಎಲ್ ಸಾಲ್ಯಾನ್. ನಾನು ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದೇನೆ. ನನ್ನ ಶಾಲೆಯ ಹೆಸರು ಶ್ರೀ ಶ್ರೀ ರವಿಶಂಕರ, ವಿಧ್ಯಾಮಂದಿರ ಕಾರ್ಕಳ. ನಾನು ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ನನ್ನ ಅಧ್ಯಾಪಕರು ನನ್ನ ತರಗತಿಯ ಎಲ್ಲಾ ಮಕ್ಕಳನ್ನು ಒಂದು ದಿನ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರು. ನಮಗೆಲ್ಲರಿಗೂ ತುಂಬಾ ಸಂತೋಷವಾಯಿತು.

ನಾನು ಮತ್ತು ನನ್ನ ಗೆಳೆಯರು ಸೇರಿ ನಾವು ಪ್ರವಾಸಕ್ಕೆ ಹೋಗುವಾಗ ಏನೆಲ್ಲಾ ತಿಂಡಿ ತರೋಣ ಎಂದು ಚರ್ಚೆ ಮಾಡಿದೆವು, ಮತ್ತು ಬಸ್ಸಿನಲ್ಲಿ ಯಾರು ಯಾರ ಪಕ್ಕದಲ್ಲಿ ಕುಳಿತುಕೊಳ್ಳುವುದು ಎಂದು ಹೇಳಿಕೊಂಡೆವು. ಆ ದಿನ ಸಂಜೆ ನಾನು ಮನೆಗೆ ಬಂದು ಅಮ್ಮನ ಬಳಿ ಖುಷಿಯಿಂದ ಎಲ್ಲಾ ರೆಡಿ ಮಾಡಲು ಹೇಳಿದೆ. ಅಪ್ಪ ಎಲ್ಲಾ ತಿಂಡಿಗಳನ್ನು ತಂದುಕೊಟ್ಟರು. ಪ್ರವಾಸದ ಖುಷಿಯಲ್ಲಿ ರಾತ್ರಿಯಿಡೀ ನಾನು ನಿದ್ದೆ ಮಾಡದೆ ಬೆಳಿಗ್ಗೆ ಬೇಗ ಎದ್ದು ರೆಡಿಯಾದೆ.

ನಮ್ಮ ಎರಡು ಅಧ್ಯಾಪಕರು ಮತ್ತು ನಾವೆಲ್ಲಾ ನಮ್ಮ ಶಾಲೆಯ ವಾಹನದಲ್ಲಿ ಹೊರಟೆವು. ಬಸ್ಸಿನಲ್ಲಿ ಹಾಡು ಹೇಳುತ್ತಾ, ಕುಣಿಯುತ್ತಾ ಸಂತೋಷಪಟ್ಟೆವು. ಮೊದಲು ನಾವು ಕಾರ್ಕಳ ಗೋಶಾಲೆಗೆ ಹೋದೆವು. ಅಲ್ಲಿ ತುಂಬಾ ತರಹದ ಹಸುಗಳು ಕರುಗಳು ಇದ್ದವು. ಅವೆಲ್ಲವನ್ನು ಮುಟ್ಟಿ ನಮಸ್ಕರಿಸಿದೆವು. ನಂತರ ಕಾರ್ಕಳ ಕೋಟಿಚೆನ್ನಯ ಪಾರ್ಕಿಗೆ ಹೋಗಿ ಅಲ್ಲಿ ಸ್ವಲ್ಪಹೊತ್ತು ಕಳೆದೆವು.

ಅಲ್ಲಿ ನಾವು ಯಾರು ಏನು ತಿಂಡಿ ತಂದಿದ್ದೇವೆ ಅನ್ನೋ ಕುತೂಹಲ ಎಲ್ಲರಿಗೂ. ನಾವೆಲ್ಲಾ ತಂದಿದ್ದ ತಿಂಡಿಗಳನ್ನು ಹಂಚಿಕೊಂಡು ತಿಂದೆವು. ಫೋಟೋಗಳನ್ನು ತೆಗೆಸಿಕೊಂಡೆವು. ನಂತರ ಚರ್ಚ್, ದೇವಸ್ಥಾನ ಮತ್ತು ಪ್ರಾಣಿಸಂಗ್ರಹಾಲಯಕ್ಕೆ ಕರೆದುಕೊಂಡು ಹೋದರು. ಅಲ್ಲಿ ನಾವು ವಿಧವಿಧದ ಪ್ರಾಣಿಗಳನ್ನು ಕಂಡು ಖುಷಿಪಟ್ಟೆವು. ನಂತರ ಸ್ವಲ್ಪ ಹೊತ್ತು ಆಟ ಆಡಿದೆವು.

ನನ್ನ ಸ್ನೇಹಿತರ ಜೊತೆ ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ. ಮತ್ತೆ ಅದೇ ಮರುದಿನ ಶಾಲೆಗೆ ಹೋಗಬೇಕು ಅನ್ನೋ ಬೇಸರ. ಎಲ್ಲರೂ ಕೊನೆಗೆ ಬಸ್ಸು ಹತ್ತಿ ವಾಪಾಸು ಶಾಲೆಗೆ ಬಂದೆವು. ಸಂಜೆ ಮನೆಗೆ ಬಂದಾಗ ತುಂಬಾ ಆಯಾಸ. ಅಮ್ಮ ಕೊಟ್ಟ ಹಾಲು ತಿಂಡಿ ತಿಂದು ಹಾಗೆ ಮಲಗಿಬಿಟ್ಟೆ. ಇನ್ನು ಯಾವಾಗ ಇದೇ ತರಹ ಪ್ರವಾಸಕ್ಕೆ ಹೋಗುವುದು ಎಂದು ಕನಸು ಕಾಣುತ್ತಾ.

ಹೆಜಮಾಡಿಯಿಂದ ಮಂಗಳೂರಿನ ಪಿಲಿಕುಳಕ್ಕೆ ಹೋದ ಎಂಟನೇ ತರಗತಿಯ ಧನ್ಯಶ್ರೀ ದೇವಾಡಿಗ ಹೀಗೆ ಬರೆದಿದ್ದಾಳೆ.

ಒಂದು ದಿನ ನಾನು ಮತ್ತು ನನ್ನ ಸ್ನೇಹಿತರು ಸೇರಿಕೊಂಡು ಮಾತನಾಡುತ್ತಾ ಇರುವಾಗ ಶಿಕ್ಷಕರು ತರಗತಿಗೆ ಬಂದರು. ತರಗತಿಯಲ್ಲಿ ಇರುವ ಮಕ್ಕಳು ಗುರುಗಳಿಗೆ ವಂದಿಸಿದರು. ಶಿಕ್ಷಕರು, “ಮಕ್ಕಳೇ ನಾವು ಒಂದು ಪ್ರವಾಸಕ್ಕೆ ಹೋಗೋಣವ?” ಎಂದು ಕೇಳಿದರು. ಮಕ್ಕಳೆಲ್ಲ ಹೋಗೋಣ ಎಂದು ಗಲಾಟೆ ಮಾಡಿದರು. ಶಿಕ್ಷಕರು ಯಾವ ಊರಿಗೆ ಹೋಗೋಣ ಎಂದು ಕೇಳಿದರು. ಆಗ ಮಕ್ಕಳು ಪಿಲಿಕುಳ ನಿರ‍್ಗಧಾಮಕ್ಕೆ ಹೋಗೋಣ ಎಂದರು. ಶಿಕ್ಷಕರು ಸರಿ ಎಂದು ತರಗತಿಯಿಂದ ಹೊರಗೆ ಹೋದರು. ಮಕ್ಕಳೆಲ್ಲ ಖುಷಿಪಟ್ಟರು.

ನೀವುಇದನ್ನುಇಷ್ಟಪಡಬಹುದು: ಒಂದು ವರ್ಷದ ಮಗು ಋತುವಿಗೆ ಹಂಪಿ ತೋರಿಸಿದ ಹಿಪ್ಪೀ ರಾಣಿ: ಮಕ್ಕಳ ಜೊತೆ ಟೂರ್ ಹೋಗುವುದು ಹೀಗೆ!

ಮರುದಿನ ಬೆಳಿಗ್ಗೆ ೯ ಗಂಟೆಗೆ ಪ್ರವಾಸದ ಬಸ್ಸು ಬಂತು. ಆ ಬಸ್ಸಿನ ಹೆಸರು ‘ಪ್ರಣಾಮ್’. ಆ ಬಸ್ಸಿನ ಡ್ರೈವರ್ ನಮ್ಮ ಹೆಸರು ಮತ್ತು ಶಾಲೆಯ ಹೆಸರು ಎಂದು ಕೇಳಿದರು, ನಾನು ಮತ್ತು ನನ್ನ ಸ್ನೇಹಿತರು “ನಾವು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೆಜಮಾಡಿ” ಎಂದೆವು. ಆಗ ಶಿಕ್ಷಕರು ಬಂದರು. ಎಲ್ಲರು ಬಸ್ಸಿನಲ್ಲಿ ಕುಳಿತುಕೊಳ್ಳಿ ಎಂದು ಹೇಳಿದರು. ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವಾಗ ನಾವು ಅಂತ್ಯಾಕ್ಷರಿ ಆಟ ಆಡಿದೆವು. ಆಟ ಆಡುತ್ತಾ ನಿಸರ್ಗಧಾಮ ತಲುಪಿದೆವು.

ಪಿಲಿಕುಳ(pilikula) ನಿಸರ್ಗಧಾಮ ತುಂಬಾ ಸುಂದರವಾಗಿತ್ತು. ಅಲ್ಲಿ ಪ್ರಾಣಿಗಳು ಪಕ್ಷಿಗಳು ಮತ್ತು ಸುಂದರವಾದ ಹೂಗಳು ಇದ್ದವು ಅಲ್ಲಲ್ಲಿ ಸೂಚನಫಲಕಗಳು ಇದ್ದವು. ನಾನು ಮತ್ತು ನನ್ನ ಸ್ನೇಹಿತರು ಅಲ್ಲಿನ ಹಾವುಗಳನ್ನು ನೋಡಿ ಆಶ್ಚರ್ಯಪಟ್ಟೆವು ಹಾಗೂ ಅದನ್ನು ನೋಡಿ ತುಂಬಾ ಖುಷಿಪಟ್ಟೆವು. ಅಲ್ಲಿದ್ದ ಸಿಂಹದ ಘರ್ಜನೆ ಕೇಳಿ ಭಯವಾಯಿತು, ಮಂಗಣ್ಣನ ತರ‍್ಲೆ ನೋಡಿ ನಗು ಬಂತು

ನಂತರ ನಾನು ಮತ್ತು ನನ್ನ ಸ್ನೇಹಿತರು ಊಟ ಮಾಡಿ ಅಲ್ಲಿದ್ದ ಉದ್ಯಾನವನಕ್ಕೆ ಹೋದೆವು. ಅಲ್ಲಿದ್ದ ಜೋಕಾಲಿ ಜಾರುಬಂಡಿಗಳಲ್ಲಿ ಆಟವಾಡಿದೆವು. ನಾವು ತಂದಿದ್ದ ತಿಂಡಿಗಳನ್ನು ತಿಂದೆವು. ಸಂಜೆ ಆರು ಗಂಟೆಯಾಯಿತು ನಾವು ಮತ್ತೆ ಬಸ್ಸಿನಲ್ಲಿ ಕುಳಿತು ಮನೆಗೆ ಬಂದೆವು. ಮನೆ ತಲುಪಿದಾಗ ಎಂಟು ಗಂಟೆಯಾಗಿತ್ತು. ಅಪ್ಪ ಬಸ್ಸಿನಿಂದ ಕರೆದುಕೊಂಡು ಹೋಗಲು ಬಂದಿದ್ದರು. ಪ್ರವಾಸ ನನಗೆ ತುಂಬಾ ಖುಷಿ ಕೊಟ್ಟಿತು.

ಪುತ್ತೂರಿನಿಂದ ಮಡಿಕೇರಿಗೆ ಹೋದ ಹರ್ಷ ಸುವರ್ಣನ ನೆನಪುಗಳು.

ನನ್ನ ಹೆಸರು ಹರ್ಷ ಸುವರ್ಣ. ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದೇನೆ. ನನ್ನ ಶಾಲೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು. ಇದು ನನ್ನ ಐದನೇ ತರಗತಿಯ ಪ್ರವಾಸ ಕಥನವಾಗಿದೆ. ಪ್ರವಾಸ ಎಂದ ಕೂಡಲೇ ಖುಷಿಯಾಗಿ ಸಂತಸದಿಂದ ಊರಿಂದೂರಿಗೆ ಯಾವ ಚಿಂತೆಯೂ ಇಲ್ಲದೆ ತಿರುಗಾಡುವುದು ಕಣ್ಮನಗಳ ಮುಂದೆ ಸುಳಿಯುತ್ತದೆ.

ನಾವು ಒಂದು ದಿನ ಮಡಿಕೇರಿಗೆ ಪ್ರವಾಸ ಹೋಗಿದ್ದೇವೆ. ಬೆಳಿಗ್ಗೆ ಐದು ಗಂಟೆಗೆ ಪುತ್ತೂರಿನಿಂದ ಹೊರಟೆವು. ಶಾಲಾ ವಾಹನದಲ್ಲಿ ಹೋಗುವಾಗ ಶ್ರೀಮಾನ್ ಮಾತಾಜಿಯವರು ಆಪಲ್, ಮೂಸುಂಬಿ ತಿನ್ನಲು ಕೊಟ್ಟರು. ಶಾಲಾ ವಾಹನದಲ್ಲಿ ಹೋಗುವಾಗ ಹಾಡುವುದು, ಪದಬಂಧ ಆಡುವುದು, ಭಜನೆ ಹೇಳುವುದು ನಡೆಯಿತು. ನಂತರ ಮಡಿಕೇರಿಯಲ್ಲಿರುವ ಗೋಲ್ಡನ್ ಟೆಂಪಲ್ (golden temple) ಗೆ ಹೋದೆವು.

ಅಲ್ಲಿ ಕೆಂಪು ಬಣ್ಣದ ಬಟ್ಟೆಯವರು ಒಳಗೆ ಹೋಗುವಾಗ ಸ್ವಾಗತಿಸುತ್ತಾರೆ. ನಾವು ಹೊರಗೆ ಚಪ್ಪಲಿ ತೆಗೆದು ಬರುವಾಗ ಅಲ್ಲಿ ತುಂಬಾ  ಜೇನುಗೂಡುಗಳಿದ್ದವು, ನಾವು ಕುತೂಹಲದಿಂದ ನೋಡಿದೆವು. ಟೆಂಪಲ್ ಒಳಗೆ ಚಿನ್ನದ ಬಣ್ಣದಲ್ಲಿರುವ ಬುದ್ಧನ ವಿಗ್ರಹವಿರುತ್ತದೆ. ಅನಂತರ ನಾವು ಮಡಿಕೇರಿಯಲ್ಲಿರುವ ಹೋಟೆಲಿಗೆ ಹೋಗಿದ್ದೆವು.ಅಲ್ಲಿ ಉಪ್ಪಿನಕಾಯಿ ಊಟ ಸಾಂಬಾರಲ್ಲಿ ಊಟ ಮಾಡಿ ಅನಂತರ ನೀರು ಕುಡಿದು ಶಾಲಾ ವಾಹನದಲ್ಲಿ ಕುಳಿತೆವು.

ಅಲ್ಲಿಂದ ನಾವು ಹಾರಂಗಿ ಜಲಾಶಯದಲ್ಲಿ ನೀರು ಮೇಲಿನಿಂದ ಬೀಳುವುದನ್ನು ನೋಡಿದೆವು. ನೀರು ಡ್ಯಾಮ್ ನಲ್ಲಿ ತುಂಬಿತ್ತು. ಅದನ್ನು ನೋಡಲು ತುಂಬಾ ಸುಂದರವಾಗಿತ್ತು. ಅಲ್ಲಿಂದ ಹೋಟೆಲಿಗೆ ಹೋಗಿ ಮಸಾಲದೋಸೆ ತಿಂದು ಚಹಾ ಕುಡಿದು ಅಲ್ಲಿಂದ ಮಡಿಕೇರಿ ಪೇಟೆಯಲ್ಲಿರುವ ರಾಜಾಸೀಟಿಗೆ ಹೋದೆವು. ಅಲ್ಲಿ ಸೂರ್ಯ ಮುಳುಗುವುದು ನೋಡಲು ಚಂದ. ಅಲ್ಲಿ ನಿಂತು ನೋಡಿದರೆ ಪೂರ್ತಿ ಮಡಿಕೇರಿಯನ್ನು ನೋಡಬಹುದು. ಅಲ್ಲಿಂದ ಶಾಲಾ ವಾಹನದಲ್ಲಿ ಬರುತ್ತಾ ಐಸ್ಕ್ರೀಮ್ ಚಾಕ್ಲೆಟ್ ಕೊಡಿಸಿದರು. ನಾವು ಖುಷಿಯಿಂದ ಹಾಡುತ್ತಾ ನಲಿಯುತ್ತ ರಾತ್ರಿ ೧೨:೩೦ಕ್ಕೆ ಶಾಲೆಗೆ ತಲುಪಿದೆವು. ಅಲ್ಲಿಂದ ಮನೆಗೆ ಹೋದೆವು.

ಪುಟ್ಟ ಪುಟ್ಟ ಕೈಗಳು ಬರೆದ ಈ ಪ್ರವಾಸ ಅನುಭವಗಳು ಅದೆಷ್ಟೋ ನೆನಪುಗಳ ಮೂಟೆಯಂತೆ ಅನಿಸಿಬಿಟ್ಟಿತು ನನಗೆ. ಪ್ರವಾಸಗಳು, ಕಥೆಗಳು ಬದುಕನ್ನು ಖುಷಿಯಿಂದ ಅನುಭವಿಸಲು ಇರುವ ಅತ್ಯದ್ಭುತ ಸಾಧನಗಳು. ಅನೇಕ ಕಥೆಗಳು ಹುಟ್ಟಿದ್ದೂ ಕೂಡಾ ಪ್ರವಾಸದಲ್ಲೇ. ಪ್ರವಾಸ ಮನುಷ್ಯನ ಹುಟ್ಟು ಗುಣವಾದ ಅಲೆದಾಡುವಿಕೆಯ ಸೂಚಕ. ಜೋಗಿ ತಮ್ಮ ಪುಸ್ತಕದಲ್ಲಿ ಒಂದು ಕಡೆ ಹೀಗೆ ಹೇಳಿದ್ದಾರೆ ‘ಪ್ರವಾಸ ಮತ್ತು ಪುಸ್ತಕವಿಲ್ಲದ ಬದುಕು ವಿರಹದ ಅನುಭವಿಲ್ಲದ ಜೀವನದಂತೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

3 Comments

Leave a Reply

Your email address will not be published. Required fields are marked *

Back to top button