ಬೆರಗಿನ ಪಯಣಿಗರುವಿಂಗಡಿಸದಸ್ಮರಣೀಯ ಜಾಗ

ಹ್ಯಾವ್ಲೋಕ್ ದ್ವೀಪಕ್ಕೆ ಹಡಗಿನ ಪಯಣ: ಅಂಡಮಾನ್-3

ಪೋರ್ಟ್ ಬ್ಲೇರ್ ನಿಂದ ಹೋಗಿದ್ದು ಹ್ಯಾವ್ಲೋಕ್ ಎಂಬ ಅದ್ಭುತ ದ್ವೀಪಕ್ಕೆ. ಅಲ್ಲಿಂದ ನಾವು ಏಷ್ಯಾದ ಅತಿ ಸುಂದರ ಕಡಲ ತೀರಕ್ಕೆ ಹೋಗಬೇಕಿತ್ತು.

  • ಶೀಲಾ ಭಂಡಾರ್ಕರ್

ಕೋಯಿ ಮಾತಾ ಕೆ ಉಮ್ಮೀದೋಂ ಪೆ ನ ಡಾಲೆ ಪಾನಿ

ಜಿಂದಗಿ ಭರ್ ಕೊ ಹಮೆ ಭೇಜ್ ಕೆ ಕಾಲೇ ಪಾನಿ

ನಾವು ಬಂದು ಕೂತಾಗ ಸಮಯ ಸಂಜೆಯ ಐದು ಮುಕ್ಕಾಲು. ಬೆಳಕಾಗಲೇ ಮಸುಕು ಮಸುಕಾಗಲು ತೊಡಗಿತ್ತು. ಪೂರ್ವ ಪ್ರದೇಶಗಳಲ್ಲಿ ಸೂರ್ಯನು ಸ್ವಲ್ಪ ಬೇಗನೇ ಮುಳುಗುತ್ತಾನೆ. ಐದೂವರೆಗೆಲ್ಲಾ ಸೂರ್ಯಾಸ್ತವಾಗಿತ್ತು. 

ಸರಿಯಾಗಿ ಆರು ಗಂಟೆಗೆ ಪ್ರದರ್ಶನ ಶುರುವಾಯಿತು.

 ರಾಮಪ್ರಸಾದ “ಬಿಸ್ಮಿಲ್” ಬರೆದ ದೇಶಭಕ್ತಿ ಗೀತೆಯ ಗಾಯನ ಹಿಮ್ಮೇಳದಲ್ಲಿ ಕೇಳಿ ಬರುತಿದ್ದಂತೆಯೇ ಹೃದಯ ಮನಸ್ಸುಗಳೆರಡೂ ನಮ್ಮ ಸ್ವಾತಂತ್ರ್ಯ ಸೇನಾನಿಗಳಿಗಾಗಿ ಮಿಡಿಯಲು ತೊಡಗಿತು. ಹಾಡು ಮುಂದುವರಿಯುತಿದ್ದಂತೆಯೇ ಜೈಲಿನ ಪ್ರತಿಯೊಂದು ಕೋಣೆಯೊಳಗೆ ಅಳವಡಿಸಲಾದ ವಿದ್ಯುತ್ ದೀಪಗಳು ನಮ್ಮ ರಾಷ್ಟ್ರ ಧ್ವಜದ ಬಣ್ಣಗಳಲ್ಲಿ ಬೆಳಗಿದವು. 

Cellular Jail Andaman Sound and Light show Story of Cellular Jail Freedom fighters
ಚಿತ್ರಕೃಪೆ : ಶೀಲಾ ಭಂಡಾರ್ಕರ್

 ಓಂಪುರಿ, ನಾಸಿರುದ್ದೀನ್ ಶಾ ದನಿಯಲ್ಲಿ ಜೈಲಿನ ಕತೆ

 ಓಂಪುರಿಯವರ(Om puri) ಧ್ವನಿಯಲ್ಲಿ ಮರ ಕತೆ ಹೇಳುತ್ತದೆ. ತನ್ನ ಹೃದಯವನ್ನೇ ತೆರೆದಿಡುತ್ತದೆ. ಕೂತಿದ್ದ ಜನರು ಸ್ತಬ್ದರಾಗಿ ಬಿಡುತ್ತಾರೆ.  ಏಳರಿಂದ ಎಂಟರವರೆಗೆ ಈ ಪ್ರದರ್ಶನದ ಇಂಗ್ಲೀಷ್ ರೂಪಾಂತರ ನಾಸಿರುದ್ದೀನ್ ಶಾ ರವರ ಧ್ವನಿಯಲ್ಲಿರುತ್ತದೆ.

ನೀವುಇದನ್ನುಇಷ್ಟಪಡಬಹುದು: ಭಯಾನಕ ಸೆಲ್ಯುಲಾರ್ ಜೈಲಿನ ಒಳಗೆ ರೋಚಕ ಕತೆಗಳು: ಅಂಡಮಾನ್- 2

 ಅಂಡಮಾನ್ ದ್ವೀಪಗಳಲ್ಲಿ ನದಿ ಪಾತ್ರಗಳಿಲ್ಲದುದರಿಂದ ಇಲ್ಲಿ ವಿದ್ಯುತ್ ಉತ್ಪಾದನೆಯಾಗುವುದಿಲ್ಲ. ಜನರೇಟರ್ ನಿಂದಲೇ ವಿದ್ಯುತ್ ಸಂಪರ್ಕಗಳನ್ನು ಪೂರೈಸಬೇಕಾಗುತ್ತದೆ. ಹಾಗಾಗಿ ಈ ಪ್ರವಾಸ ಸ್ವಲ್ಪ ದುಬಾರಿ ಎಂದು ನಮ್ಮ ಮ್ಯಾನೇಜರ್ ಹೇಳಿದರು ದಿನದ ಕೊನೆಗೆ.

ಎಲ್ಲವೂ ಮುಗಿಸಿ ಬಂದಾಗ ಹಸಿವೂ ಆಗಿತ್ತು ಊಟವೂ ರುಚಿಯಾಗಿತ್ತು. ರೂಮ್ ಸೇರಿ ಮಲಗಿದ ಕೂಡಲೇ ನಿದ್ದೆ ಆವರಿಸಿತು. ಯಾವಾಗಲೋ ಇದ್ದಕ್ಕಿದ್ದ ಹಾಗೆ ಎಚ್ಚರವಾಯಿತು‌. ನೋಡಿದರೆ ಹೊರಗೆ ಒಳ್ಳೆಯ ಬೆಳಕು ಸಣ್ಣಗೆ ಎಳೆ ಬಿಸಿಲು. ಸಮಯ ನೋಡಿದರೆ ಬೆಳಗಿನ ಐದೂವರೆ. 

 ಮಾರನೇ ದಿನ ತಿರಂಗಾ ಪಾರ್ಕ್

ಬೆಳಗಿನ ಜಾವ ಐದೂವರೆಗೆ ಇಲ್ಲಿಯ ಏಳೂವರೆಯಷ್ಟು ಬೆಳಕು ಮತ್ತು ಎಳೆ ಬಿಸಿಲು. ಒಳ್ಳೆಯ ನಿದ್ರೆಯಾಗಿ ತಾಜಾತನ ತುಂಬಿಕೊಂಡಂತೆ ಮೈ ಮನಸ್ಸು ಉಲ್ಲಸಿತವಾಗಿತ್ತು. ಮನೆಯಲ್ಲಿದ್ದರೆ ಹಲವಾರು ಕೆಲಸಗಳು ಸಾಲಾಗಿ ಧಬಧಬನೆ ಮೈ ಮೇಲೆ ಬಿದ್ದ ಹಾಗೆ ಧಾವಿಸಿ ಬರುತಿದ್ದವು. ಇಲ್ಲಿ ಯಾವ ಕೆಲಸದ ಗೊಡವೆಯೂ ಇಲ್ಲದೆ ಹಾಯಾಗಿ ಆ ಬೆಳಗಿನ ಜಾವವನ್ನು ಆನಂದಿಸಿದೆ. 

 ಸ್ನಾನಾದಿಗಳನ್ನು ಮುಗಿಸಿ ಬೆಳಗಿನ ಉಪಹಾರವೂ ಆಯಿತು. ಈ ದಿನ ಮೊದಲಿಗೆ ಹೋಗಿದ್ದು ತಿರಂಗಾ ಪಾರ್ಕ್.(Thiranga park) ತಿರಂಗಾ ಪಾರ್ಕ್ ನಲ್ಲಿ ಸ್ವಲ್ಪ ಹೆಚ್ಚು ಹೊತ್ತು ಕಳೆಯಲು ಬಿಟ್ಟಿದ್ದರು. ಸಮುದ್ರ ದಂಡೆಯ ಮೇಲಿನ ಆ ಪಾರ್ಕ್ ಸುಂದರವಾಗಿತ್ತು. 

 ಅಲ್ಲಿಂದ ಮ್ಯೂಸಿಯಂಗಳ ಕಟ್ಟಡ ಹತ್ತಿರಲ್ಲೇ ಇತ್ತು. ಅಂಡಮಾನ್ ನ ಜನ ಜೀವನ, ಅಲ್ಲಿಯ ಆದಿವಾಸಿಗಳ ಬಗ್ಗೆ ಚಿತ್ರಗಳು, ಸಮುದ್ರದಾಳದ ಜೀವ ಜಂತುಗಳ ಪರಿಚಯ, ಹವಳದ ಗಿಡಗಳು ಹೀಗೆ ಹಲವಾರು ವಸ್ತುಗಳು ಮ್ಯೂಸಿಯಮ್‌ ನಲ್ಲಿ ನೋಡಲು ಸಿಕ್ಕಿದವು. 

Tiranga park Museum of Tiranga Park Life of Andaman Tribals Sea life

 ಸಮುದ್ರಿಕಾ ಮರೈನ್ ಮ್ಯೂಸಿಯಮ್,(Samudrika Marine Museum) ಪ್ರಾಣಿಶಾಸ್ತ್ರ ವಿಭಾಗ, ಮಾನವ ಶಾಸ್ತ್ರ, ಮತ್ಸ್ಯ, ಗುಡ್ಡಗಾಡು ಇವುಗಳ ಪ್ರತ್ಯೇಕ ಮ್ಯೂಸಿಯಮ್ ಗಳು ಹತ್ತಿರದಲ್ಲೇ ಇದ್ದುದರಿಂದ ಸುಮಾರು ಒಂದು ಗಂಟೆಗೂ ಹೆಚ್ಚಿನ ಸಮಯ ಇಲ್ಲಿ ಸುಂದರವಾಗಿ ಕಳೆಯಿತು.

Samudrika Marine Museum Zoology Anthropology Sea life

ಸರ್ಕಾರಿ ಮರದ  ಮಿಲ್

ಅಲ್ಲಿಂದ ಗವರ್ನಮೆಂಟ್ ಸಾಮಿಲ್,(Chatham Saw Mill) ಮರದ ಕೆತ್ತನೆಯ ಹಲವಾರು ಪೀಠೋಪಕರಣಗಳು, ಹಲವಾರು ಅಲಂಕಾರಿಕ ವಸ್ತುಗಳು. ನೋಡಿ ಕಣ್ತುಂಬಿಕೊಂಡೆವಷ್ಟೆ.

 ಈ ಕಾರ್ಖಾನೆಯು 19ನೇ ಶತಮಾನದಲ್ಲಿ 1883ರಲ್ಲಿ ಕಟ್ಟಲ್ಪಟ್ಟಾಗ ಭಾರತದಲ್ಲಷ್ಟೇ ಅಲ್ಲ ಏಷಿಯಾದಲ್ಲೇ ಅತೀ ದೊಡ್ಡ ಮರದ ಕಾರ್ಖಾನೆಯಾಗಿತ್ತು.

Government Saw Mill Chatham Saw Mill Decorative items British
ಚಿತ್ರಕೃಪೆ : ಶೀಲಾ ಭಂಡಾರ್ಕರ್

 ಬ್ರಿಟಿಷರು ಈ ಕಾರ್ಖಾನೆಯನ್ನು ಸ್ಥಾಪಿಸಿ ಇಲ್ಲಿಂದ ದೊಡ್ಡ ಪ್ರಮಾಣದಲ್ಲಿ ಮರಗಳ ತೊಲೆಗಳನ್ನು, ಹಲಗೆಗಳನ್ನು ಲಂಡನ್, ನ್ಯೂಯಾರ್ಕ್ ಮುಂತಾದ ಪಟ್ಟಣಗಳಿಗೆ ರಫ್ತು ಮಾಡುತಿದ್ದರು. 1942ರಲ್ಲಿ ಜಪಾನಿಯರ(Japan) ಬಾಂಬ್ ದಾಳಿಗೆ ತುತ್ತಾಗಿದ್ದ ಈ ಕಾರ್ಖಾನೆಯನ್ನು ಮತ್ತೆ ಪುನರ್ ನಿರ್ಮಿಸಲಾಯಿತು.

ಅಲ್ಲಿಂದ ನಾವು ಹೊರಡಿದ್ದು ಹ್ಯಾವ್ಲೋಕ್ ದ್ವೀಪಕ್ಕೆ.

ಹ್ಯಾವ್ಲೋಕ್ ದ್ವೀಪಕ್ಕೆ ಹಡಗು ಪಯಣ

ಬೆಳಿಗ್ಗೆ ನಾವು ಹೊರಡುವಾಗಲೇ ನಮ್ಮ ಲಗ್ಗೇಜ್ ಗಳನ್ನು ತಂದು ಲಾಂಜ್ ನಲ್ಲಿ ಇಟ್ಟಿದ್ದುದರಿಂದ, ನಮಗಿಂತ ಮೊದಲೇ ಅವುಗಳು ನಮ್ಮ ಹಡಗು ನಿಲ್ದಾಣ ಅಥವಾ ಬಂದರಿನ ಬಳಿ ನಮಗಾಗಿ ಕಾಯುತಿದ್ದವು. 

 ಹಡಗಿನ ಸ್ಟೋರೇಜ್ ಒಳಗೆ ನಮ್ಮ ಲಗ್ಗೇಜ್ ಗಳನ್ನು ಇಟ್ಟು ಹಡಗಿನ ಒಳಗೆ ಪ್ರವೇಶಿಸಿ ನೋಡಿದರೆ ವಿಮಾನದಲ್ಲಿರುವಂತೆಯೇ ಆಸನಗಳು. 

ಎರಡೂವರೆ ಗಂಟೆಗಳ ಪ್ರಯಾಣವಿತ್ತು ಪೋರ್ಟ್ ಬ್ಲೇರ್(Port Blaire) ನಿಂದ ಸ್ವರಾಜ್ ದ್ವೀಪಕ್ಕೆ. ಹ್ಯಾವ್ಲೊಕ್ ಐಲ್ಯಾಂಡ್‌ ನ(Havlock Island) ಸ್ವದೇಶಿ ಹೆಸರು. ನೇತಾಜಿ ಸುಭಾಷ್ ಚಂದ್ರ ಬೋಸ್ ರ(Subhash Chandra bose) ಸ್ಮರಣಾರ್ಥವಾಗಿ ಸ್ವರಾಜ್ ದ್ವೀಪವೆಂದು ನಾಮಕರಣವಾಗಿದೆ.

Havlock Island Swaraj Island Subhashchandra Bose Group of Islands

 ಗಾಜಿನ ಕಿಟಕಿಗಳಿಂದ ಸಮುದ್ರವನ್ನು ವೀಕ್ಷಿಸಬಹುದು. ಸಮುದ್ರದ ಮೇಲೆ ಹಡಗು ತೇಲುತ್ತಾ ಬಳುಕುತ್ತಾ ಸಾಗುವಾಗ ಏನೋ ಹೊಸ ಅನುಭವ. ದೊಡ್ಡ ಅಲೆಗಳು ಬಂದಾಗ ಹಡಗನ್ನೇ ಎತ್ತಿ ಎಸೆದಂತಾದಾಗ ಜೋರಾಗಿ ಕಿರುಚಬೇಕೆನಿಸುತ್ತದೆ. ಆದರೂ ಹಡಗಿನ ಪ್ರಯಾಣವೊಂದು ವಿಶಿಷ್ಟ ಆನಂದವನ್ನು ನೀಡಿತು. 

 ಹಡಗು ಸಾಗುತ್ತಿರುವಾಗ ಮಧ್ಯದಲ್ಲಿ ಜೋರಾದ ಗಾಳಿ ಬೀಸುವುದು, ದೊಡ್ಡ ದೊಡ್ಡ ಅಲೆಗಳು ಸಮುದ್ರದ ಅಡಿಯಿಂದ ಉಕ್ಕುವುದು ಮುಂತಾದ ಪ್ರತಿಕೂಲ ವಾತಾವರಣ ಉಂಟಾದಾಗ ವಿಮಾನದಲ್ಲಿದ್ದಂತೆಯೇ ಇಲ್ಲಿಯೂ ಮೈಕ್ ನಲ್ಲಿ ಹೇಳುತ್ತಾರೆ. ಸಣ್ಣಗೆ ಭಯವಾದರೂ ಕೂಡ ಪ್ರತಿಯೊಂದು ಕ್ಷಣವನ್ನೂ ಯಥೇಚ್ಛವಾಗಿ ಆನಂದಿಸಿದ್ದನ್ನು ಮಾತ್ರ ಮರೆಯುವಂತಿಲ್ಲ.

 ಮಾರ್ಗ ಮಧ್ಯದಲ್ಲಿ ಹಲವಾರು ಚಿಕ್ಕ ಚಿಕ್ಕ ದ್ವೀಪಗಳು ನೋಡಲು ಸಿಗುತ್ತವೆ. ಅಲ್ಲಿ ಜನ ಸಂಚಾರವಾಗಲಿ, ವಾಸವಾಗಲಿ ಕಾಣಲಿಲ್ಲ.

ಸಮುದ್ರ ತೀರದ ಸಂತೋಷ

ಎರಡೂವರೆ ಗಂಟೆಗಳ ಹಡಗಿನ ಪ್ರಯಾಣ ಮುಗಿಯುವುದರೊಳಗೆ ಎಲ್ಲರೂ ಊಟ ಮಾಡಿ ಮುಗಿಸಿದರು. ಸ್ವರಾಜ್ ದ್ವೀಪವನ್ನು ತಲುಪಿದಾಗ ನಮಗಾಗಿ ಬಸ್ ಕಾದು ನಿಂತಿತ್ತು. ಮೊದಲೇ ಕಾದಿರಿಸಿದ್ದ ರೆಸಾರ್ಟ್ ಗೆ ಕರೆತಂದರು. 

ನಾವು ಉಳಿದುಕೊಂಡ ಆ ರೆಸಾರ್ಟ್ ನ(Resort) ಹಿಂಭಾಗದಲ್ಲಿ ಖಾಸಗಿ ಬೀಚ್ ಇತ್ತು. ಸಣ್ಣದಾದ ತೀರ. ಅತಿಯಾದ ಅಲೆಗಳ ಅಬ್ಬರವಿಲ್ಲ. ಅಲ್ಲಿ ಹೋಗಿ ಕೂತ ನಮಗೆ ಎದ್ದು ಬರಲು ಮನಸ್ಸೇ ಬಂದಿರಲಿಲ್ಲ. ರಾತ್ರಿ ಎಂಟರಿಂದಲೇ ಊಟ ಶುರು. ಯಾರಿಗೆ ಯಾವಾಗ ಬೇಕೋ ಹೋಗಿ ಊಟ ಮಾಡಬಹುದಿತ್ತು.

ನಾವು ಊಟವಾದ ಮೇಲೆ ಮತ್ತೆ ಸಮುದ್ರ ತೀರಕ್ಕೆ ಹೋಗಿ ಕೂತೆವು. ಸಂಜೆಯ ಕತ್ತಲ ನೀರವತೆ, ಸಮುದ್ರದ ಸಣ್ಣನೆ ಮೊರೆತ, ಬೀಸುವ ಹಿತವಾದ ಉಪ್ಪು ನೀರಿನ ಗಾಳಿ, ಚಂದ್ರನ ಮೃದುವಾದ ಬೆಳಕು ಈ ಸಮಯವಿಲ್ಲೇ ನಿಲ್ಲಬಾರದೇ ಅನಿಸುವಂತಿತ್ತು. 

ಅದು ಇದು ಮಾತು ಹಾಡು ಎಂದು ಹತ್ತೂವರೆಯವರೆಗೆ ಸಮಯ ಕಳೆದು, ಮರುದಿನ ಬೆಳಿಗ್ಗೆ ಎಂಟು ಗಂಟೆಯ ಒಳಗೆ ತಯಾರಾಗಲು ಹೇಳಿದುದರಿಂದ ಮಕ್ಕಳನ್ನು ಹೊರಡಿಸಿ ನಮ್ಮ ನಮ್ಮ ಕಾಟೇಜ್ ಸೇರಿದೆವು. 

ಬೆಳಗ್ಗಿನ ತಿಂಡಿ ಮತ್ತು ರಾತ್ರಿಯ ಊಟ ನಾವು ಉಳಿದುಕೊಳ್ಳುವ ಹೊಟೇಲ್ ಅಥವಾ ರೆಸಾರ್ಟ್ ಗಳಲ್ಲೇ ಆಗುತಿತ್ತು. ಮಧ್ಯಾಹ್ನದ ಊಟವನ್ನು ಆದಷ್ಟು ಒಳ್ಳೆಯ ಹೊಟೇಲ್ ಹುಡುಕಿ ಕರೆದುಕೊಂಡು ಹೋಗುತಿದ್ದರು. ಊಟ ತಿಂಡಿಗೆ ಎಲ್ಲೂ ಯಾವ ತೊಂದರೆಯೂ ಆಗಲಿಲ್ಲ. 

 ಮರುದಿನ ನಾವು ಹೋಗಬೇಕಾಗಿದ್ದಿದ್ದು ರಾಧಾ ನಗರ್ ಬೀಚ್ ಗೆ.(Radha nagar beach) ಅದು ಅಂಡಮಾನ್ ನಲ್ಲಿ ಮಾತ್ರವಲ್ಲ ಇಡೀ ಏಷಿಯಾದಲ್ಲೇ ಸುಂದರ ಬೀಚ್ ಎಂದು ಹೆಸರಾಗಿದ್ದ ಬೀಚ್ ಗೆ.

 (ಮುಂದುವರಿಯುವುದು)

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button
Translate