ಇವರ ದಾರಿಯೇ ಡಿಫರೆಂಟುಬೆರಗಿನ ಪಯಣಿಗರುವಿಂಗಡಿಸದಸ್ಫೂರ್ತಿ ಗಾಥೆ

ನಾನೂ ನನ್ನ ಟೂರೂ! – ಜೋಗಿ

ನಾನು ಪ್ರವಾಸಿ ಹೌದೋ ಅಲ್ಲವೋ ನನಗೆ ಗೊತ್ತಿಲ್ಲ. ಆಫೀಸಿನಿಂದ ಮನೆಗೆ ಹೋಗುವುದು, ಮನೆಯಿಂದ ಆಫೀಸಿಗೆ ಹೋಗುವುದು ಕೂಡ ನನ್ನ ಮಟ್ಟಿಗೆ ಒಂದು ಪ್ರವಾಸವೇ. ಅದನ್ನು ಬೇಕಿದ್ದರೆ ಕಿರುಪ್ರವಾಸ ಎಂದು ಕರೆಯಬಹುದು. ಹೋಗುವ ದಾರಿ ಬದಲಾಯಿಸಿದರೆ ಒಂದು ಹಳೇ ದೇವಸ್ಥಾನ, ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಿದ ಪೊಲೀಸ್ ಸ್ಟೇಷನ್ನು, ಯಾವುದೋ ಹಳೆಯ ಮನೆಯ ಚೆಂದದ ಕಿಟಕಿ, ಮೂವತ್ತಾರು ವರ್ಷಗಳಿಂದ ಯಾರೂ ವಾಸವಿರದೇ ಭೂತಬಂಗಲೆಯಂತಾಗಿರುವ ಮನೆ, ದಾರಿಯಲ್ಲಿ ಬಣ್ಣಬಣ್ಣದ ಬಲೂನು ಮಾರುವ ಹುಡುಗ- ಎಲ್ಲರೂ ಪ್ರವಾಸದ ಸುಖವನ್ನು ಒದಗಿಸುವವರೇ. ಎಲ್ಲೋ ನಿಲ್ಲಿಸಿ ಒಂದು ಟೀ, ಅರ್ಧ ಇಡ್ಲಿ, ಗೆಳೆಯರ ಜೊತೆ ಮಾತು, ಚೆಂದದ ಒಂದು ಹಾಡು ಇದ್ದುಬಿಟ್ಟರೆ ಆಫೀಸಿನಿಂದ ಮನೆಗೆ ಹೋಗುವುದೂ ಈವ್‌ನಿಂಗ್ ಟ್ರಾವೆಲ್ ಆದೀತಲ್ಲ!

Jogi Author
Roopal Shetty

ಇವತ್ತು ಪ್ರವಾಸ ಎಂಬುದು ಉದ್ಯಮ ಆಗಿದೆ. ಡೆಸ್ಟಿನೇಷನ್ ಮೊದಲೇ ಗೊತ್ತಾಗಿರುತ್ತದೆ. ಅಲ್ಲಿ ಹೋಗಿ ಏನು ಮಾಡುತ್ತೇವೆ ಅನ್ನುವುದು ಮೊದಲೇ ನಿರ್ಧಾರ ಆಗಿರುತ್ತದೆ. ನಾನು ಕುಟುಂಬದ ಜೊತೆ ನೇಪಾಳ, ಕಾಶ್ಮೀರ, ಸಿಂಗಾಪೂರ, ಥೈಲ್ಯಾಂಡ್, ಫುಕೆಟ್, ಮಲೇಶಿಯಾಗಳಿಗೆ ಹೋದ ಪ್ರವಾಸಗಳ ಶೈಲಿಯೇ ಬೇರೆ. ಅವುಗಳಲ್ಲಿ ಎಲ್ಲವೂ ಮೊದಲೇ ಗೊತ್ತಾಗಿರುತ್ತಿತ್ತು. ಮನೆಯಿಂದ ವಿಮಾನ ನಿಲ್ದಾಣ, ವಿಮಾನ ನಿಲ್ದಾಣದಿಂದ ತಲುಪಬೇಕಾದ ದೇಶ- ಅಲ್ಲಿಂದ ಹೋಟೆಲ್- ಅಲ್ಲಿಂದ ಬೆಳಗ್ಗೆ ಇಂತಿಂಥಾ ದೇವಸ್ಥಾನ- ಮತ್ತೊಂದು ದೇವಸ್ಥಾನ- ಮಧ್ಯಾಹ್ನ ಇಂತಿಂಥಲ್ಲಿ ಊಟ- ಮತ್ತೆ ಮತ್ತೊಂದು ತಾಣ ಹೀಗೆ ಎಲ್ಲವೂ ಪೂರ್ವನಿರ್ಧಾರಿತ. ಕುಟುಂಬಕ್ಕೆ ಅದೇ ಸರಿ.

ನೀವು ಇದನ್ನು ಇಷ್ಟಪಡಬಹುದು: 12 ದೇಶ ಸುತ್ತಿರುವ, ಕ್ಯಾನ್ಸರ್ ಗೆದ್ದಿರುವ ಜೀವನೋತ್ಸಾಹಿ ಭಾರತಿ ಬಿವಿ ಕತೆ ಎಲ್ಲರಿಗೂ ಸ್ಫೂರ್ತಿ: ಸಿಂಧೂ ಪ್ರದೀಪ್

Jogi Author
Roopal Shetty

ಆದರೆ ನಾನು ಒಂಟಿಯಾಗಿ ಅಥವಾ ಗೆಳೆಯರ ಜೊತೆ ಮಾಡಿದ ಪ್ರವಾಸಗಳು ಹೀಗಿರಲಿಲ್ಲ. ಬೇಕು ಬೇಕಂದಲ್ಲಿ ಕಾರು, ಬಸ್ಸು, ಟ್ರಾಮ್, ಮೆಟ್ರೋ, ನಡಿಗೆ- ಹೀಗೆ ಸಾಗಿದ್ದು, ಲಾಸ್ ವೆಗಾಸ್‌ನಂಥ ಜಾಗಕ್ಕೆ ಹೋದಾಗ ಒಂದು ದಿನ ಇರಬೇಕಾದವರು ಮತ್ತೊಂದೆರಡು ದಿನ ಇದ್ದುಬಿಟ್ಟದ್ದು, ಶ್ರೀಲಂಕಾದ ಅನುರಾಧಾಪುರದಲ್ಲಿ ಮಾಲ್ವತು ನದಿ ಉಕ್ಕಿ ಹರಿದ ಮಳೆಗಾಲದಲ್ಲಿ ಮೂರು ದಿನ ಒಂಟಿ ಮನೆಯೊಳಗೆ ಸಿಕ್ಕಿಹಾಕಿಕೊಂಡದ್ದು, ಜೇಮ್ಸ್ ಬಾಂಡ್ ದ್ವೀಪದಲ್ಲಿ ದಾರಿ ತಪ್ಪಿ ಅಲೆದಾಡಿದ್ದು- ಹೀಗೆ ಆ ಅನುಭವವೇ ಬೇರೆ.

Jogi Author
Roopal Shetty

ಇವುಗಳಲ್ಲಿ ಯಾವುದು ಒಳ್ಳೆಯದು, ಯಾವುದು ಅಲ್ಲ ಎಂದು ಅವರವರೇ ತೀರ್ಮಾನಿಸಬೇಕು. ಆದರೆ ನನ್ನ ನನ್ನ ಪ್ರಕಾರ ನನ್ನ ಪ್ರವಾಸ ಹೀಗಿರಬೇಕು; 

1. ಪ್ರವಾಸ ಅನಿರೀಕ್ಷಿತವಾಗಿ ಶುರುವಾಗಿ ಆಕಸ್ಮಿಕವಾಗಿ ಕೊನೆಗೊಳ್ಳಬೇಕು. 

2. ಪ್ರವಾಸದ ಕೊನೆಯಲ್ಲೊಂದು ಅಚ್ಚರಿ ಇರಬೇಕು. 

3. ನಾವು ಪ್ರವಾಸ ಹೋಗುವುದು ಪಕ್ಕದ ಮನೆಯವರಿಗೆ ಹೇಳುವುದಕ್ಕಲ್ಲ. ಹೀಗಾಗಿ ಅವರು ನೋಡಿದ ಜಾಗಗಳನ್ನು ನಾವೂ ನೋಡದೇ ಹೋದರೆ ಚಿಂತೆಯಿಲ್ಲ.

Jogi Author
Roopal Shetty

4. ಆದಷ್ಟೂ ಗೊತ್ತಿರುವ ವ್ಯಕ್ತಿಗಳಿಂದ ದೂರವಿರಬೇಕು. ಆಗಲೇ ಪ್ರವಾಸ ಮಜವಾಗುವುದು.

5. ಯಾವತ್ತೂ ತಿಂಡಿ ಕಟ್ಟಿಕೊಂಡು ಹೋಗಬಾರದು. ಪ್ರವಾಸವೆಂಬುದು ಹಸಿವು, ಹುಡುಕಾಟ, ಆಯಾ ಪ್ರದೇಶದ ತಿಂಡಿ ತಿನಿಸುಗಳ ಪೊಟ್ಟಣ ಆಗಿರಬೇಕು.

6. ಬೇಗ ಸುಸ್ತಾಗುವವರ ಜೊತೆ ಪ್ರವಾಸ ಹೋಗಬಾರದು. ಸುಸ್ತಾದರೂ ತೋರಿಸಿಕೊಳ್ಳದಂತೆ ಇರುವವರು ಪ್ರವಾಸಕ್ಕೆ ಯೋಗ್ಯ ಸಂಗಾತಿಗಳು.

7. ಎಲ್ಲವೂ ಅಚ್ಚುಕಟ್ಟಾಗಿರಬೇಕು ಎಂದು ಬಯಸುವವರಾದರೆ, ಮನೆಯಲ್ಲಿಯೇ ಇರಿ. ಎಡವಟ್ಟುಗಳೇ ಪ್ರವಾಸದ ಖುಷಿ ಹೆಚ್ಚಿಸುತ್ತವೆ ಮರೆಯದಿರಿ.

8. ಪ್ರಯಾಣವೂ ಪ್ರವಾಸದ ಒಂದು ಭಾಗ. ಹೀಗಾಗಿ ಅಲ್ಲಿಗೆ ಹೋಗಿ ತಲುಪುವುದೇ ಉದ್ದೇಶ ಆಗದಿರಲಿ. ಹಾದಿಯಲ್ಲಿ ಸಿಕ್ಕ ಕಲ್ಲಂಗಡಿ ಕಣ್ಣು, ಕಣ್ತಣಿಸುವ ತಾಣದಲ್ಲಿ ತೆಗೆದ ಒಂದು ಫೋಟೋ ಪ್ರವಾಸದ ರುಚಿ ಹೆಚ್ಚಿಸಬಹುದು.

Jogi Author
Roopal Shetty

9. ಪ್ರವಾಸ ಹೋದಾಗ ಅವಸರ ಮಾಡಬಾರದು. ಎಷ್ಟು ಗಂಟೆಗೆ ವಾಪಸ್ಸು ಹೋಗುತ್ತೇವೆ ಎಂಬ ಪ್ರಶ್ನೆ ಕೇಳುವವರನ್ನು ಜೊತೆಗೆ ಕರೆದೊಯ್ಯಬಾರದು.

10. ಪ್ರವಾಸ ಎಂದರೆ ಉಡಾಫೆ ಅಲ್ಲ. ಗಮ್ಮತ್ತು ಅಂದರೆ ಜೀವವನ್ನು ಒತ್ತೆಯಿಡುವುದು ಅಲ್ಲ. ಜವಾಬ್ದಾರಿಯುತ ಪ್ರವಾಸ, ಅಲ್ಲಿಗೆ ಬಂದವರ ಬಗ್ಗೆ ಗೌರವ, ನಾವು ಹೋದ ತಾಣದ ಬಗ್ಗೆ ಪ್ರೀತಿ- ಇವಿಲ್ಲದೇ ಹೋದರೆ ಪ್ರವಾಸ ನಿರರ್ಥಕ. ಅಹಂಕಾರ ಅಳಿಸಲೆಂದೇ ಇರುವ ಪ್ರವಾಸಗಳಿಗೆ ನಮ್ಮ ಖ್ಯಾತಿ, ಸ್ಥಾನಮಾನ, ಅಧಿಕಾರ, ಸಂಪತ್ತು- ಎಲ್ಲವನ್ನೂ ಬಿಟ್ಟು ಹೋಗಬೇಕು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

Related Articles

4 Comments

  1. ಪ್ರವಾಸ ಕೈಗೊಳ್ಳುವವರಿಗೆ ಇವು ಉತ್ತಮ ಸಲಹೆಗಳು

  2. ದೂರದ ಸ್ಥಾನಗಳ ಬದಲು, ಹತ್ತಿರದ ಹೊಸ ಜಾಗಗಳಿಗೆ ಪ್ರವಾಸ ಮಾಡಿ.

    1. ಸರಿಯಾದ ಸಲಹೆ ಎಲ್ಲರಿಗೂ ದೂರ ದೂರ ಪ್ರವಾಸ ಮಾಡಲು ಹಣ ಖರ್ಚು ಮಾಡುವ ಅವಕಾಶ ಇರುವುದಿಲ್ಲ . ಪ್ರವಾಸ ಮಾಡುವ ಆಸೆ ಸಾಯುವುದಿಲ್ಲ.

Leave a Reply

Your email address will not be published. Required fields are marked *

Back to top button