ಇವರ ದಾರಿಯೇ ಡಿಫರೆಂಟುಬಣ್ಣದ ಸ್ಟುಡಿಯೋವಿಂಗಡಿಸದಸ್ಫೂರ್ತಿ ಗಾಥೆ

ಕತ್ತಲಲ್ಲೇ ಪಯಣಿಸುವ ವಿಶಿಷ್ಟ ಪಯಣಿಗ, ಛಾಯಾಗ್ರಾಹಕ ಕಿರಣ್ ಸೋಮವಾರಪೇಟ್

ಭಿನ್ನವಾಗಿ ಯೋಚಿಸುವವರು ಭಿನ್ನ ಸಾಲಿನಲ್ಲಿ ನಿಲ್ಲುತ್ತಾರೆ. ಅಂಥಾ ಒಬ್ಬ ಛಾಯಾಗ್ರಾಹಕ ಕಿರಣ್ ಸೋಮವಾರಪೇಟ್(Kiran Somwarpet).

  • ಸಿಂಧೂ ಪ್ರದೀಪ್

ಉದಯ ಮ್ಯೂಸಿಕ್(Udaya music)ನಲ್ಲಿ ಎಲ್ಲರ ಮನೆಮಾತಾಗಿರುವ ಒಂದು ಕಾರ್ಯಕ್ರಮವೇ ಸಂ-ಗೀತ. ಬಹಳಷ್ಟು ಹಾಡುಗಾರರಿಗೆ ವೇದಿಕೆಯಾದ ಈ ಕಾರ್ಯಕ್ರಮದಲ್ಲಿ ಹೊರದೇಶದಲ್ಲಿರುವ ಕನ್ನಡಿಗರು ಸಹ ಹಾಡಿರುವ ವಿಡಿಯೋ ತುಣುಕುಗಳು ಪ್ರಸಾರವಾಗಿದೆ. ಈ ಕಾರ್ಯಕ್ರಮದ ಒಂದೊಂದು ದೃಶ್ಯವೂ ಅದ್ಭುತ. ಈ ದೃಶ್ಯಕಾವ್ಯಗಳು ಎಲ್ಲರ ಮನಮುಟ್ಟುವಂತೆ ಮಾಡಿ ತೆರೆಯ ಹಿಂದೆ ಕ್ಯಾಮೆರಾ ಕಣ್ಣಲ್ಲಿ ತಮ್ಮ ಕೈ ಚಳಕವನ್ನು ತೋರಿಸುವವರೇ ಈ ಕಾರ್ಯಕ್ರಮದ ನಿರ್ದೇಶಕ ಹಾಗೂ ಛಾಯಾಗ್ರಾಹಕ ಕಿರಣ್ ಸೋಮವಾರಪೇಟ್.

Kiran Somwarpet Udaya Music

ಇಂದು ಇವರ ವಿಭಿನ್ನ ಪ್ರವಾಸದ ಕಥೆಯನ್ನು ಕೇಳೋಣ ಬನ್ನಿ..

ಕಿರಣ್ ಮೂಲತಃ ಕೊಡಗಿನ(Coorg) ಸೋಮವಾರಪೇಟೆಯವರು.(Somwarpet) ಚಿಕ್ಕಂದಿನಿಂದಲೂ ಪ್ರಕೃತಿಯೊಂದಿಗೇ ಇವರ ಒಡನಾಟ ಹೆಚ್ಚು. ಕಾಲೇಜು ವ್ಯಾಸಂಗಕ್ಕಾಗಿ ಮಂಗಳೂರಿಗೆ ತೆರಳಿದರು. ನಂತರ ಇವರನ್ನು ಆಕರ್ಷಿಸಿದ್ದು ಬೆಂಗಳೂರಿನ ಸಿನಿಮಾ ಬದುಕು.

ನಟನೆಯ ಆಸಕ್ತಿಯಿಂದ ಕೆಲವು ತರಬೇತಿ ಪಡೆದರು. ನಂತರ ಇವರಿಗೆ ಕೈಗೂಡಿದ್ದು ನಿರ್ದೇಶನ. ಅದರೊಂದಿಗೆ ಒಲಿದಿದ್ದು ಛಾಯಾಗ್ರಹಣ. ಸಂ-ಗೀತ ಕಾರ್ಯಕ್ರಮದ ನಿರ್ದೇಶಕರಾದ ಮೇಲೇ ಹಲವಾರು ಜಾಗಗಳಿಗೆ ಕಾರ್ಯಕ್ರಮದ ಸಲುವಾಗಿ ಭೇಟಿ ನೀಡಿದ್ದಾರೆ.

Kiran Somwarpet Udaya Music

ಇವರದು ಒಂದು ತರಹದ ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವ. ಹಲವಾರು ಮಂದಿ ಸ್ನೇಹಿತರೊಂದಿಗೆ, ಕುಟುಂಬದೊಂದಿಗೆ ಪ್ರವಾಸ ಮಾಡಿದರೆ ಇವರು ಯಾವಾಗಲೂ ಒಂಟಿಯಾಗಿಯೇ ಪ್ರವಾಸ ಮಾಡುವುದು. ಅದೂ ಕೂಡ ಇರುಳಿನಲ್ಲಿ. ಹೌದು. ಕತ್ತಲ ರಾತ್ರಿಯಲ್ಲಿ ಹಾಡು ಕೇಳುತ್ತಾ ಕಾರಿನಲ್ಲಿ ಪ್ರಯಾಣಿಸುವುದು ಇವರಿಗೆ ಬಹಳ ಇಷ್ಟ. ಆ ರಾತ್ರಿಯ ಪ್ರಶಾಂತತೆ. ಟ್ರಾಫಿಕ್ ಹಾಗೂ ಜನಸಂದಣಿ ಇಲ್ಲದ ರಸ್ತೆಗಳು, ಎಲ್ಲೋ ದೂರದಲ್ಲಿ ರಸ್ತೆ ಬದಿಯಲ್ಲಿ ಕಾಣಿಸುವ ಸಣ್ಣ ಗೂಡಂಗಡಿ. ಮಧ್ಯ ಕಾರು ನಿಲ್ಲಿಸಿ ತಂಪಿನ ವಾತಾವರಣದಲ್ಲಿ ಕುಡಿಯುವ ಬಿಸಿ ಬಿಸಿ ಟೀ/ಕಾಫೀ ಎಂದರೆ ಎಲ್ಲಿಲ್ಲದ ಉತ್ಸಾಹ.

ತಲುಪುವ ಯಾವುದೋ ಒಂದು ಜಾಗಕ್ಕಿಂತ ಹೋಗುವ ದಾರಿಯ ಅನುಭವವವನ್ನು ಪಡೆಯುವುದು ನನಗೆ ಬಹಳ ಇಷ್ಟ ಎಂದು ಹೇಳುತ್ತಾರೆ.

*ಹೆಸರಿಲ್ಲದ ಬೆಟ್ಟ*

ತುಂಬಾ ಕ್ರಿಯಾಶೀಲ ವ್ಯಕ್ತಿಯಾದ ಕಿರಣ್ ಅವರು ವಿಡಿಯೋ ಚಿತ್ರಿಕರಿಸುವ ಮೊದಲು ತಮ್ಮ ಕಲ್ಪನೆಯಲ್ಲಿ ಹೇಗೆಲ್ಲಾ ಇರಬೇಕು ಎಂದು ಯೋಚಿಸಿ ನಂತರ ಅದನ್ನು ದೃಶ್ಯರೂಪಕ್ಕೆ ತರುತ್ತಾರೆ.

Kiran Somwarpet Udaya Music

ಒಮ್ಮೆ ಹೀಗೆ ಒಂದು ಹಾಡಿನ ಚಿತ್ರೀಕರಣಕ್ಕೆ ಕೆಲವು ಸುಂದರ ಸನ್ನಿವೇಶಗಳನ್ನು ಊಹಿಸಿ ಅದರಂತೆಯೇ ಬೇಕೆಂದು ಸೂರ್ಯಾಸ್ತ(Sunset) ಗೋಚರಿಸುವ ಒಂದು ಬೆಟ್ಟವನ್ನು ಹುಡುಕಿಕೊಂಡು ಬೆಂಗಳೂರಿನ(Bangalore) ಹೊರವಲಯದ ಕಡೆ ಹೊರಟರು.

ನಂದಿ ಬೆಟ್ಟದ(nandi betta) ಬಳಿ ಇರುವ ಒಂದು ಬೆಟ್ಟವನ್ನು ಆರಿಸಿಕೊಂಡರು. ಆದರೆ ಅಲ್ಲಿ ಸಾರ್ವಜನಿಕ ಪ್ರವೇಶ ನಿಷೇಧಿಸಿದ್ದರಿಂದ ಸ್ವಲ್ಪ ನಿರಾಶರಾದರು. ಆಗಲೇ ಸಮಯ 4 ಗಂಟೆ ಆಗಿತ್ತು. ಸೂರ್ಯಾಸ್ತದ ಸಮಯ ಕಳೆದರೆ ಮತ್ತೆ ಅದೇ ದೃಶ್ಯ ಸೆರೆ ಹಿಡಿಯುವುದು ಕಷ್ಟ ಎಂದು ಯೋಚಿಸುತ್ತಿದ್ದಂತೆ ದೂರದಲ್ಲಿ ಮತ್ತೊಂದು ಬೆಟ್ಟ ಕಾಣಿಸಿತು. ಅದು ಒಂದು ಹೆಸರಿಲ್ಲದ, ದಾರಿಯೇ ಇಲ್ಲದ ಬೆಟ್ಟ. 

Kiran Somwarpet Udaya Music

ಸಾಗುವಷ್ಟು ದೂರ ಕಾರಿನಲ್ಲಿ ಕ್ರಮಿಸಿ ನಂತರ ಕೆಲವು ದೂರ ಕಾಲು ದಾರಿಯಲ್ಲಿ ಚಿತ್ರೀಕರಣಕ್ಕೆ ಬೇಕಾದ ಕೆಲವು ವಸ್ತುಗಳನ್ನು ಹಿಡಿದು ಬೆಟ್ಟವನ್ನು ಹತ್ತಲು ಆರಂಭಿಸಿದರು. ತುತ್ತ ತುದಿ ತಲುಪಿದ ಮೇಲೆ ಕಷ್ಟಪಟ್ಟು ಒಂದು ಮರಕ್ಕೆ ಉಯ್ಯಾಲೆ ಕಟ್ಟಿ ಚಿತ್ರೀಕರಣ ಪ್ರಾರಂಭಿಸಿ ಒಳ್ಳೆಯ ಸೂರ್ಯಾಸ್ತದ ದೃಶ್ಯ ಸೆರೆಹಿಡಿದರು.

ಇನ್ನೇನು ಸೂರ್ಯ ಮುಳುಗಿ ಕತ್ತಲಾಗುವ ಸಮಯ ಮನೆಯ ಕಡೆಗೆ ಹೊರಟರು. ಇಲ್ಲೇ ಇದ್ದದ್ದು ನಿಜವಾದ ಸವಾಲು. ಬೆಟ್ಟ ಇಳಿಯುತ್ತಾ ದಾರಿ ತಪ್ಪಿ ಯಾವ ಕಡೆ ಇಳಿಯಬೇಕೆಂದು ತಿಳಿಯದೇ ಕಂಗಾಲಾದರು. ದೂರದಲ್ಲಿ ನಿಲ್ಲಿಸಿದ್ದ ಕಾರು ಸಹ ಇವರ ಕಣ್ಣಿಗೆ ಬೀಳುತ್ತಿರಲಿಲ್ಲ. ಎರಡು ಗಂಟೆಗಳ ಕಾಲ ಕಲ್ಲು ಬಂಡೆಗಳು ಇದ್ದ ಬೆಟ್ಟವನ್ನು ಸುತ್ತಿ ಹೇಗೋ ದಾರಿ ಹುಡುಕಿ ಕಾರಿನ ಬಳಿ ಬಂದಾಗ ರಾತ್ರಿ 8.30 ರ ಸಮಯ. ನಿಟ್ಟಿಸಿರು ಬಿಟ್ಟು ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದರು.

Kiran Somwarpet Udaya Music

ನಂತರ ಅಲ್ಲಿ ಚಿತ್ರೀಕರಿಸಿದ ದೃಶ್ಯ ಅದ್ಭುತವಾಗಿ ಬಂದಾಗ ಸಾರ್ಥಕ ಮನೋಭಾವದ ಜೊತೆಗೆ ಆ ಒಂದು ಹೆಸರಿಲ್ಲದ ಬೆಟ್ಟ ಕೊಟ್ಟ ಅನುಭವ ಇಂದಿಗೂ ನೆನಪಿನಲ್ಲೇ ಇದೆ ಎಂದು ಹೇಳುತ್ತಾರೆ.

ನೀವು ಇದನ್ನು ಇಷ್ಟಪಡಬಹುದುಕಾರು, ಒಡವೆ ನೀಡದ ಖುಷಿ ಪ್ರವಾಸ ಕೊಡುತ್ತದೆ: 14 ದೇಶಗಳನ್ನು ಸುತ್ತಿರುವ ಸಾಹಸಿ ಆರ್ ಜೆ ಸ್ಮಿತಾ

*ಪ್ರಕೃತಿಯ ಮಡಿಲಲ್ಲಿ ಮಗುವಾಗು*

ಕಿರಣ್ ಅವರ ಮತ್ತೊಂದು ನೆಚ್ಚಿನ ತಾಣ ಎಂದರೆ ಹಂಪಿ. ಇವರು ಹಂಪಿಯನ್ನು ನೋಡುವ ದೃಷ್ಟಿಯೇ ಬೇರೆ. ಎಲ್ಲರೂ ಹಂಪಿಯ ಕಲ್ಲಿನ ರಥ. ವಿಜಯನಗರ ಸಾಮ್ರಾಜ್ಯದ ವೈಭೋಗದ ಕಡೆ ಆಕರ್ಷಿತರಾದರೆ ಇವರು ಬಿಸಿಲನಾಡಿನಲ್ಲಿ ನೆರಳನ್ನು ಹುಡುಕಿ ಒಂಟಿಯಾಗಿ ಸಮಯ ಕಳೆಯಲು ಇಚ್ಛಿಸುತ್ತಾರೆ.

ಹಂಪಿಯಲ್ಲಿ ಹಲವು ಹೋಟೆಲ್ ಗಳು ಪ್ರಕೃತಿಯ ಮಧ್ಯ ಹಿಪ್ಪಿ ಸಂಸ್ಕೃತಿಯನ್ನು ಬಿಂಬಿಸುವಂತೆ ಇರುತ್ತದೆ. ಪಕ್ಕದಲ್ಲೇ ನೀರು ಹರಿಯುವ, ಸಾಕಷ್ಟು ಮರಗಳು ಇರುವ ಸ್ಥಳವನ್ನು ಹುಡುಕಿ ಅಲ್ಲಿನ ಆಹಾರ ಸೇವಿಸಿ ಅದೇ ನೆರಳಿನಲ್ಲಿ ನೆಮ್ಮದಿಯಿಂದ ನಿದ್ರಿಸುವುದು ಎಂದರೆ ಬಹಳ ಅಚ್ಚುಮೆಚ್ಚು. ಜನಸಂದಣಿ ಇಲ್ಲದ ಜಾಗದಲ್ಲಿ ಹರಿಯುವ ನೀರಿನ ಬಳಿ ಪ್ರಕೃತಿಯ ಮಡಿಲಲ್ಲಿ ಮಗುವಾಗಿ ಮಲಗಿ ಬಿಡುತ್ತೇನೆ. ಇಂತಹ ಜಾಗಗಳೇ ನನಗೆ ಇಷ್ಟ ಎಂದು ಕಿರಣ್ ಹೇಳುತ್ತಾರೆ.

Kiran Somwarpet Udaya Music

ಈ ಕಥೆ ಕೇಳಿ ನೀವೂ ಸಹ ಪ್ರಕೃತಿಯ ಮಡಿಲಲ್ಲಿ ಮಗುವಾಗಲು ಪ್ರಯತ್ನಿಸಬಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button