ನಡಿಗೆ ನಮ್ಮ ಖುಷಿಗೆವಿಂಗಡಿಸದಸೂಪರ್ ಗ್ಯಾಂಗು

ರಜಾದಿನ ಬೆಂಗಳೂರಿನಿಂದ ಎದ್ದು ಟ್ರೆಕ್ಕಿಂಗ್ ಹೋಗಬಹುದಾದ ಒಂದೊಳ್ಳೆ ಜಾಗ ನಾರಾಯಣ ಗಿರಿ ಬೆಟ್ಟ: ಪ್ರಿಯಾ ಕೆರ್ವಾಶೆ

ಬೆಂಗಳೂರಿನಲ್ಲಿರುವ ಟ್ರೆಕ್ಕಿಂಗ್ ಪ್ರಿಯರು ರಜಾದಿನ ಎದ್ದು ಯಾವ ದಿಕ್ಕಿಗೆ ಹೋಗಬಹುದು ಎಂದು ಆಲೋಚಿಸುತ್ತಿರುತ್ತಾರೆ. ಅಂಥಾ ಟ್ರೆಕ್ಕಿಂಗ್ ಪ್ರಿಯರಿಗೆ ಪತ್ರಕರ್ತೆ ಪ್ರಿಯಾ ಕೆರ್ವಾಶೆ ಒಂದು ಸುಂದರ ತಾಣ ಸೂಚಿಸಿದ್ದಾರೆ. ಹೇಗೆ ಹೋಗಬೇಕು ಎಂಬುದರಿಂದ ಹಿಡಿದು ಬೆಟ್ಟ ತುದಿಯಲ್ಲಿನ ಕಾಡು ಹುಲ್ಲಿನ ತನಕ ಚೆಂದ ವಿವರಿಸಿದ್ದಾರೆ.

Narayanagiri Ramanagara

– ಕಷ್ಟವಾ ಸುಲಭವಾ?

ಜಾಸ್ತಿ ಕಷ್ಟವೂ ಅಲ್ಲ, ತುಂಬ ಸುಲಭವೂ ಅಲ್ಲ.

 – ಅವಧಿ?

3 ಗಂಟೆ

ಕ್ರಮಿಸಬೇಕಾದ ಹಾದಿ

ಒಟ್ಟು 7 ಕಿಮೀ

 – ಹಾದಿ ಯಾವ ಬಗೆಯದು?

ಏರು ಹೆಚ್ಚು, ಸಮತಟ್ಟು ನೆಲ ಕಡಿಮೆ, ಬಂಡೆಗಲ್ಲಿನ ಹಾದಿ

 – ಎತ್ತರ?

3800 ಅಡಿ

ಹತ್ತಿರದ ಪಟ್ಟಣ?

ರಾಮನಗರ – 20 ಕಿಮೀ ದೂರದಲ್ಲಿದೆ.

ಬೆಸ್ಟ್ ಸೀಸನ್

ಮಳೆಗಾಲ ಬಿಟ್ಟು ಉಳಿದೆಲ್ಲ ಸಮಯ

ಬೆಟ್ಟದ ಬುಡದಲ್ಲೇನಿದೆ?

ದೊಡ್ಡ ಕೆರೆ, ಮಾವಿನ ತೋಪು ಇದೆ.

Narayanagiri Ramanagara

ಬೆಂಗಳೂರಿನ ನೂರು ಕಿಮೀ ಆಸುಪಾಸಿನಲ್ಲಿರುವ ಬೆಟ್ಟಗಳಲ್ಲೊಂದು ಜಾಲಮಂಗಲ ಬೆಟ್ಟ ಶ್ರೇಣಿಯಲ್ಲಿ ಬರುವ ‘ನಾರಾಯಣ ಗಿರಿ’.(Narayanagiri) ಬೆಟ್ಟದ ಮೇಲಿರುವ ಲಕ್ಷ್ಮೀ ನಾರಾಯಣ ದೇವಾಲಯದಿಂದಾಗಿ ಈ ಹೆಸರು ಬಂದಿದೆ. ಬೆಂಗಳೂರಿಂದ(Bangalore) 60 ಕಿಮೀ ದೂರದಲ್ಲಿರುವ ಈ ಬೆಟ್ಟಕ್ಕೆ ಹೋಗುವ ದಾರಿಯೂ ಬಹಳ ಸುಂದರ. ರಾಮನಗರದ(Ramanagara) ಬಳಿಕ ಕಾರಿನ ಏಸಿ ಆಫ್ ಮಾಡಿ, ವಿಂಡೋ ಇಳಿಸಿ ಹೊರ ನೋಡಿದರೆ ಉದ್ದಾನುದ್ದಕ್ಕೆ ಮಾವಿನ ತೋಪುಗಳು, ಭತ್ತ, ತರಕಾರಿ, ಹೂವಿನ ಗದ್ದೆ, ಅಲ್ಲಲ್ಲಿ ಎದುರಾಗುವ ಚಿಕ್ಕ ಚಿಕ್ಕ ಹಳ್ಳಿಗಳು, ವ್ಯವಸಾಯದಲ್ಲಿ ತಲ್ಲೀನರಾದ ಜನ. ಜಾಲಮಂಗಲ ಅನ್ನುವ ಚಿಕ್ಕ ಊರಿಗೆ ಬಂದು ಬೆಟ್ಟದ ಹೆಸರು ಹೇಳಿದರೆ ಜನ ಡೀಟೇಲಾಗಿ ದಾರಿ ಹೇಳುತ್ತಾರೆ. ಮಾವಿನ ತೋಪಿನ ಹಾದಿಯಾಗಿ ಬಂದರೆ ದೊಡ್ಡ ಕೆರೆ. ಅದರ ಮೇಲೆ ದೖತ್ಯ ಬಂಡೆ. ಕೆರೆಯನ್ನು ಬಳಸಿ ಮುಂದೆ ಹೋದರೆ ಬೆಟ್ಟ ಏರಲು ತುದಿಯವರೆಗೂ ಮೆಟ್ಟಿಲುಗಳಿವೆ. ದೊಡ್ಡ ಕೆರೆಯಲ್ಲಿ ಅದೃಷ್ಟವಿದ್ದರೆ ಚೆಂದದ ಹೂಗಳು ಅರಳಿರುತ್ತವೆ. ನೀರು, ಹಸಿರಿನ ಹಿನ್ನೆಲೆಯಲ್ಲಿ ಬೆಟ್ಟವನ್ನು ನೋಡುವುದಕ್ಕೇ ಖುಷಿ.

ನೀವು ಇದನ್ನು ಇಷ್ಟಪಡಬಹುದು: ಬೆರಗಾಗಿಸುವ ಊರ ಮಧ್ಯ ಇರುವ ಸುಂದರ ದೇಗುಲ ಯಾಗಂಟಿ ಶಿವ ಸನ್ನಿಧಿ: ಸುವರ್ಣಲಕ್ಷ್ಮಿ ಪರಿಚಯಿಸಿದ ಸುಂದರ ತಾಣ

ಎರಡು ದಾರಿ 

ಆದರೆ ಇಲ್ಲಿ ಟ್ರೆಕ್ಕಿಂಗ್ ಮಾಡುವವರಿಗಾಗಿಯೇ ಮತ್ತೊಂದು ದಾರಿಯಿದೆ. ಕೆರೆಯ ಮೊದಲಿಗೇ ಒಂದು ಕಾಲುಹಾದಿ ಮಾವಿನ ತೋಪಿನೊಳಗಾಗಿ ಬೆಟ್ಟದ ಬುಡಕ್ಕೆ ಹೋಗುತ್ತದೆ. ನೀವು ಬೈಕ್‌ನಲ್ಲಿ ಬರುವವರಾದರೆ ಮಾವಿನ ಮರದಡಿ ಬೈಕ್ ನಿಲ್ಲಿಸಿ ಬಂಡೆಯ ಬುಡಕ್ಕೆ ಬರಬಹುದು. 

ಬಂಡೆಯ ಮೇಲೆ ಕಾಲು ಬ್ಯಾಲೆನ್ಸ್ ಮಾಡುತ್ತಾ, ಮೊದಲು ಸಿಗುವ ಪುಟ್ಟ ಗುಡಿಯ ದೇವರಿಗೆ ನಮಸ್ಕಾರ ಮಾಡಿ ಮುಂದೆ ನಡೆಯಿರಿ. ಮುಂದೆ ಬಂಡೆಗಲ್ಲುಗಳ ಮೇಲೆ ಅಲ್ಲಲ್ಲಿ ವಿರಳವಾಗಿ ಮೆಟ್ಟಿಲಿವೆ. ಬಂಡೆಗಳ ಸಂದಿನಲ್ಲಿ ಬೆಳೆದು ನಿಂತ ಒಣ ಕಾಡುಹುಲ್ಲುಗಳ ದಂಟು ಬಹಳ ಚೂಪು. ಕೆಲವೊಮ್ಮೆ ಶೂವಿನ ಅಟ್ಟೆ ಭೇದಿಸಿ ಕಾಲಿಗೆ ಚುಚ್ಚುವುದೂ ಇದೆ. ಮೖಯೆಲ್ಲ ಕಣ್ಣಾಗಿ ನೋಡಿದರೆ ಮುಳ್ಳುಹಂದಿಯ ಬಿಳಿ ಕಪ್ಪು ಮುಳ್ಳುಗಳು ಸಿಗುತ್ತವೆ. ಈ ಚಾರಣದ ನೆನಪಿಗೆ ಮನೆಯ ಶೋ ಕೇಸ್‌ನಲ್ಲಿಡಬಹುದು. 

Narayanagiri Ramanagara

ಸರಕ್ಕನೆ ತರಗೆಲೆಯಿಂದ ಏನೋ ಸರಿದ ಶಬ್ದ, ಇನ್ನೂ ಹಸಿಯಾಗಿಯೇ ಇರುವ ಯಾವುದೋ ಕಾಡು ಪ್ರಾಣಿಯ ಹಿಕ್ಕೆ. ಕೆಳಗಿಂದ ಬಂಡೆಯನ್ನು ನೋಡಿದರೆ ಇದರ ಮೇಲೇರೋದು ಬಹಳ ಸುಲಭ ಅನಿಸುತ್ತೆ. ಆದರೆ ಈ ಬಂಡೆ ಕಣ್ಣಿಗೆ ಕಂಡಷ್ಟು ಸಣ್ಣದಲ್ಲ. ಹತ್ತುತ್ತಾ ಹೋದಂತೆ ಅದರ ಗಾತ್ರದ ಅರಿವಾಗುತ್ತಾ ಹೋಗುತ್ತದೆ. ತುತ್ತ ತುದಿ ನಿಂತು ನೋಡಿದರೆ 360 ಡಿಗ್ರಿಯ ನೋಟ. ಕೆಳಗೆಲ್ಲ ವ್ಯವಸಾಯದ ಭೂಮಿ, ಅದರ ಅಂಚಿಗೆ ನಾನಾ ಗಾತ್ರದ ಬೆಟ್ಟಗಳ ಸಾಲು ಸಾಲು.

Narayanagiri Ramanagara

ಕಾಡು ಹುಲ್ಲಿನ ಘಮ

ತುದಿ ತಲುಪಿದಾಗ ಮೖ ಬೊಜ್ಜು ಮಾತ್ರವಲ್ಲ, ತಲೆಯಲ್ಲಿ ತುಂಬಿಕೊಂಡಿರುವ ಕಸದಿಂದಲೂ ಮುಕ್ತಿ ಸಿಗುತ್ತೆ. ಅದು ಬೆಟ್ಟದ ಮೇಲಿನ ತಂಪು ಗಾಳಿಗಿರುವ ಶಕ್ತಿ. ಕಾಡುಹುಲ್ಲಿನ ಘಮಕ್ಕೆ ಸುಸ್ತನ್ನು ಮಾಯ ಮಾಡುವ ಶಕ್ತಿ ಉಂಟು. ಕಣ್ಣುಮುಚ್ಚಿ ಎಷ್ಟು ಕೂತಷ್ಟು ಹೊತ್ತು ಆನಂದ.

ಹಾಗಂತ ಆ ಆನಂದದಲ್ಲೇ ಬಿದ್ದುಕೊಂಡರೆ ಚುರುಕು ಬಿಸಿಲು ಕಣ್ಣಿಗೆ ಹೊಡೆದು ಮೖ ಬೇಯಿಸಬಹುದು. ಬೆಳಗಿನ ಏಳು ಗಂಟೆಗೆಲ್ಲ ಬೆಟ್ಟವೇರಲು ಶುರು ಮಾಡೋದು ಉತ್ತಮ. ಲೇಟಾದಷ್ಟೂ ಹೀಟು. ಬಿಸಿಲಿಗೆ ಬಂಡೆ ಕಾದು ನಿಮ್ಮ ಮೖಯ ಕಸುವನ್ನೆಲ್ಲ ಹೀರಿಬಿಡುತ್ತದೆ. ಬಿಸಿಲಿನ ಝಳ ಇಳಿಯುವಾಗ ಸಿಕ್ಕೇ ಸಿಗುತ್ತದೆ. ಅನುಭವಿಸದೇ ವಿಧಿಯಿಲ್ಲ. ಯಾಕೆಂದರೆ ಬೆಳ್ಳಂಬೆಳಗು ತಂಪು ಗಾಳಿ ಬೀಸಿ ಕೊಂಡಾಟದಿಂದ ಬರಮಾಡಿಕೊಳ್ಳುವ ಬೆಟ್ಟ, ಸೂರ್ಯ ಮೇಲೇರಿದರೆ ಮುಗುಮ್ಮಾಗಿ ಹೆಬ್ಬಾವಿನಂತೆ ಬಿದ್ದುಕೊಂಡಿರುತ್ತದೆ. ಸಣ್ಣ ಗಾಳಿ ಬೀಸೋದೂ ಡೌಟೇ.

ನೀವು ಮೌನವನ್ನು, ಕಾಡಿನ ನೀರವತೆಯನ್ನು ಇಷ್ಟಪಡುವವರಾಗಿದ್ದರೆ ವೀಕ್ ಡೇಯಲ್ಲಿ ಹೋಗಿ. ವೀಕೆಂಡ್‌ನಲ್ಲಿ ಜನರ ಗಲಾಟೆ ಶಾಂತತೆಯನ್ನು ಕಸಿಯಬಹುದು. ಪರಿಸರ ಪ್ರೀತಿ ಇರುವ ಚಾರಣಿಗರು ಖಂಡಿತಾ ಕಸ, ಪ್ಲಾಸ್ಟಿಕ್ ಬೆಟ್ಟ ಮೇಲೆ ಎಸೆಯಲ್ಲ, ಬದಲಿಗೆ ಅಲ್ಲಿ ಬಿದ್ದ ಕಸವನ್ನೆತ್ತಿಕೊಂಡು ಬರುತ್ತಾರೆ. ನೀವು ಆ ಯಾವ ಕೆಟಗರಿಗೆ ಸೇರಿದವರು ಅಂತ ನಿರ್ಧರಿಸಿ.

ಬೆಟ್ಟವೇರಿ ನಿಂತರೆ ಮತ್ತೊಂದು ಬೆಟ್ಟ ಮಗದೊಂದು ಬೆಟ್ಟ, ನಾವೆಷ್ಟು ಚಿಕ್ಕವರು ಅಂತ ಜ್ಞಾನೋದಯ ಮಾಡಿಸುತ್ತವೆ. ಅಂಥಾ ಜ್ಞಾನೋದಯಗಳು ಆಗಾಗ ಆಗುತ್ತಿದ್ದರೆ ಲೈಫು ಚೆನ್ನಾಗಿರುತ್ತೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button