ಕಾರು ಟೂರುದೂರ ತೀರ ಯಾನವಿಂಗಡಿಸದವಿಸ್ಮಯ ವಿಶ್ವ

ಕರ್ನಾಟಕದ ಅತಿ ಸುಂದರ ರಸ್ತೆಗಳು: ಭಾಗ 2

ತುದಿ ಕಾಣದ ಹಾದಿಗಳು ಯಾವತ್ತೂ ಆಸಕ್ತಿ ಹುಟ್ಟಿಸುತ್ತವೆ. ಅಕ್ಕ ಪಕ್ಕ ಹಸಿರು ಕಾಡು, ನೀಲಿ ನೀರು ಇದ್ದರಂತೂ ಖುಷಿಯೋಖುಷಿ. ಹೀಗೆ ಚಂದದ, ಮನಸ್ಸು ತಾಕುವ ರಸ್ತೆಗಳಲ್ಲಿ ಎಷ್ಟು ಹೊತ್ತು ಸಾಗಿದರೂ ಬೇಜಾರಾಗುವುದಿಲ್ಲ. ಅಂಥಾ ರಸ್ತೆಗಳ ಪರಿಚಯ.

ಅಪಾಯಕಾರಿ ಸುಂದರಿ ಯಡಕುಮೇರಿ 

ಎಲ್ಲಿಂದ ಎಲ್ಲಿಗೆ- ಸಕಲೇಶಪುರ- ಸುಬ್ರಮಣ್ಯ (Sakleshpur – Subramanya), 55 ಕಿಮೀ

ಹಾಸನ (Hassan) ಹಾಗೂ ದಕ್ಷಿಣ ಕನ್ನಡದ (Dakshina Kannada) ನಡುವೆ ಸಂಪರ್ಕ ಬೆಸೆಯುವ ಏಕೈಕ ರೈಲು ಮಾರ್ಗ ಇದು. ಪಶ್ಚಿಮಘಟ್ಟದ ಪರ್ವತಶ್ರೇಣಿಗಳ ನಡುವೆ ನಿರ್ಮಾಣವಾಗಿರುವ ಈ ರೈಲು ಮಾರ್ಗ, ಕೊಂಕಣ ರೈಲ್ವೆಯಂತೆಯೇ ಮತ್ತೊಂದು ಅದ್ಭುತ. ಸಕಲೇಶಪುರ ಮತ್ತು ಕುಕ್ಕೆ ಸುಬ್ರಹ್ಮಣ್ಯದ ನಡುವಿನ ರೈಲ್ವೆ ಮಾರ್ಗದಲ್ಲಿ 50ಕ್ಕೂ ಹೆಚ್ಚು ಸುರಂಗ ಹಾಗೂ ನೂರಕ್ಕೂ ಹೆಚ್ಚು ಸೇತುವೆಗಳ ಮೇಲೆ ನಿಧಾನವಾಗಿ ರೈಲು (ಬೆಂಗಳೂರು- ಮಂಗಳೂರು ರೈಲು) ಸಂಚರಿಸುತ್ತದೆ. ಇಷ್ಟೇ ಅಂತರದಲ್ಲಿ 25ಕ್ಕೂ ಹೆಚ್ಚು ಜಲಪಾತಗಳಿವೆ! ಅದೊಂದು ಸುಂದರ ಅನುಭವ. ಮತ್ತೊಂದೆಡೆ ಆಳ ಪ್ರಪಾತಗಳ ಮೇಲೆ ನಿರ್ಮಾಣಗೊಂಡಿರುವ ಸೇತುವೆಗಳ ಮೇಲೆ ರೈಲು ಕ್ರಮಿಸುವಾಗ ಆಗುವ ರೋಮಾಂಚನ ಅಷ್ಟಿಷ್ಟಲ್ಲ. ಕಣ್ಣು ಹಾಯಿಸಿದಷ್ಟೂ ತೀರದ ಹಸಿರು, ನೂರಾರು ಜಲಧಾರೆಗಳು ರೈಲು ಪ್ರಯಾಣವನ್ನು ಮತ್ತಷ್ಟು ರಮಣೀಯಗೊಳಿಸುತ್ತವೆ. ಕಳೆದೊಂದು ದಶಕದಿಂದ ರೈಲುಗಾಡಿಗಳು ಸಂಚರಿಸುತ್ತಿವೆ. ಬೆಂಗಳೂರು- ಮಂಗಳೂರು ನಡುವೆ ಸಂಚರಿಸುವ ರೈಲನ್ನೇರಿ ಹೊರಟರೆ ಯಡಕುಮೇರಿ ಮಾರ್ಗದಲ್ಲಿನ ಸುಂದರ ವೈಭವವನ್ನು ಕಣ್ತುಂಬಿಕೊಳ್ಳಬಹುದು. ಬೆಳಕಿರುವಾಗ ಈ ಮಾರ್ಗ ಮುಟ್ಟುವ ರೈಲು ಏರಿದರೆ ಒಳಿತು. ಹಿಂದೆ ಟ್ರೆಕ್ಕಿಂಗ್‌ಗೆ ಅವಕಾಶವಿತ್ತಾದರೂ ಈಗ ಸಿಗುತ್ತಿಲ್ಲ. ಆ ಸೌಲಭ್ಯವೂ ಇದ್ದಿದ್ದರೆ ಮರೆಯಲಾಗದ ಅನುಭವ ಖಂಡಿತಾ ಪ್ರಾಪ್ತಿಯಾಗುತ್ತಿತ್ತು .

The untouched forests near Yedekumeri railway bridge, Karnataka
Be on the Road

ಪುಣೆ – ಬೆಂಗಳೂರು ಹೈವೇ 

ಎಲ್ಲಿಂದ ಎಲ್ಲಿಗೆ: ಧಾರವಾಡ– ಬೆಳಗಾವಿ ಕಿಮೀ 71

ಲಾಂಗ್ ಡ್ರೈವ್ (Long Drive) ಹಲವರ ಮೆಚ್ಚಿನ ಹವ್ಯಾಸ. ರಜಾ ದಿನಗಳಲ್ಲಿ ಮುಂಜಾನೆ ಎದ್ದು ಬ್ಯಾಗ್ ಏರಿಸಿಕೊಂಡು ಬೈಕ್ ಇಲ್ಲವೇ ಕಾರನ್ನೇರಿ ಸುಂದರ ಮಾರ್ಗದಲ್ಲಿ ಸಾಗುವ ಮಜಾವೇ ಬೇರೆ. ನಗರದ ನಿತ್ಯ ಟ್ರಾಫಿಕ್ ಜಾಂ ಕಿರಿಕಿರಿಯಿಂದ ಪಾರಾಗಿ ವಾರಾಂತ್ಯವನ್ನು ಕಳೆಯ ಬಯಸುವವರಿಗೆ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4 ಒಂದು ಅಪೂರ್ವ ಸ್ಥಳ. ಹಾಗೆಂದು ಪುಣೆಯಿಂದ- ಬೆಂಗಳೂರಿನವರೆಗೆ ಪ್ರಯಾಣವಷ್ಟೇ ಅಲ್ಲ, ಈ ಮಾರ್ಗದಲ್ಲಿ ಬರುವ ಹಲವು ನಗರಗಳ ನಡುವಿನ ಸಂಚಾರ ಕೂಡಾ ಲಾಂಗ್ ಡ್ರೈವ್‌ನ ಮಜಾ ಕೊಡುತ್ತವೆ. ಈ ಪೈಕಿ ಧಾರವಾಡದಿಂದ ಬೆಳಗಾವಿವರೆಗಿನ 71 ಕಿ.ಮೀ ಮಾರ್ಗ ಕೂಡಾ ಒಂದು. ಈ ಅಷ್ಟಪಥ ರಸ್ತೆಯು ಎಲ್ಲಿಯೂ ತಿರುವುಗಳಿಲ್ಲದೆ ನೇರವಾಗಿಯೇ ಇದೆ. ಒಮ್ಮೊಮ್ಮೆ ನೇರ ರಸ್ತೆಯೂ ಮನಸ್ಸು ತಟ್ಟುತ್ತದೆ.

ನೀವು ಇದನ್ನು ಇಷ್ಟಪಡಬಹುದು: ಕರ್ನಾಟಕದ ಅತಿ ಸುಂದರ ರಸ್ತೆಗಳು: ಭಾಗ 1

ಮೋಡದಲ್ಲಿ ತೇಲಾಡಿಸುವ ಮುಳ್ಳಯ್ಯನಗಿರಿ ರಸ್ತೆ 

ಎಲ್ಲಿಂದ ಎಲ್ಲಿಗೆ: ಕೈಮರ– ಮುಳ್ಳಯ್ಯನಗಿರಿ 14 ಕಿಮೀ

ಚಿಕ್ಕಮಗಳೂರಿನಿಂದ ದತ್ತಪೀಠಕ್ಕೆ (Chikmagalur’s Datta Peeta) ತೆರಳುವ ಈ ಮಾರ್ಗದಲ್ಲಿ ಕೈಮರ ಗ್ರಾಮದಿಂದ ಮುಳ್ಳಯ್ಯನಗಿರಿ ರಸ್ತೆಯಲ್ಲಿ (Mullayanagiri Road) ಸಾಗುವಾಗ ಅದರಲ್ಲೂ ಬೆಳ್ಳಂಬೆಳಿಗ್ಗೆ ಈ ದಾರಿಯಲ್ಲಿ ಸಾಗುವಾಗ ಮೋಡದಲ್ಲಿ ತೇಲಾಡಿದ ಅನುಭವವಾಗುತ್ತದೆ. ನಮ್ಮ ಕಣ್ಣಂಚಿನಲ್ಲೇ ಮೋಡಗಳು ಹಾರಿ ಹೋಗುತ್ತಿರುತ್ತವೆ. ಕರ್ನಾಟಕದಲ್ಲೇ ಅತ್ಯಂತ ಎತ್ತರದ ಬೆಟ್ಟವೆಂಬ ಹಿರಿಮೆ ಹೊಂದಿರುವ ಮುಳ್ಳಯನಗಿರಿ, ಸಮುದ್ರಮಟ್ಟದಿಂದ 6330 ಅಡಿ ಎತ್ತರದಲ್ಲಿದೆ. ಬೆಟ್ಟಕ್ಕಂತೂ ಸದಾ ಮಂಜು ಮುಸುಕಿರುತ್ತದೆ. ಮಾತ್ರವಲ್ಲ ಬೆಟ್ಟಕ್ಕೆ ಸಾಗುವ ಹಾದಿಗಳು ಮಂಜು ಮುಸುಕಿದ ವಾತಾವರಣದಿಂದ ಆವರಿಸಿಕೊಂಡಿರುತ್ತವೆ. ಮಳೆಗಾಲದಲ್ಲಿ ಬೆಟ್ಟದ ಹಾದಿಯಲ್ಲಿ ವಾಹನ ಸಂಚಾರ ಉತ್ತಮವಲ್ಲ. ಉಳಿದ ಸಮಯದಲ್ಲಿ ಬೈಕ್, ಕಾರ್, ಜೀಪ್ ಸವಾರಿ ಸಕತ್ ಮಜಾ ಕೊಡುತ್ತದೆ. ಟ್ರೆಕ್ಕಿಂಗ್‌ಗೂ ಇದು ಒಳ್ಳೆ ಜಾಗ.

ಮಳೆ ಹನಿಗಳು ಮುಖಕ್ಕೆ ರಾಚುವ ರಸ್ತೆ ಚಾರ್ಮಾಡಿ 

ಎಲ್ಲಿಂದ ಎಲ್ಲಿಗೆ: ಚಾರ್ಮಾಡಿ- ಕೊಟ್ಟಿಗೆಹಾರ 24 ಕಿ.ಮೀ. 

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಿಂದ ದಕ್ಷಿಣಕನ್ನಡ ಜಿಲ್ಲೆಯ ಉಜಿರೆಗೆ (Ujire) ತೆರಳುವ ಮಾರ್ಗ ಇದು. ಮೂಡಿಗೆರೆ ತಾಲೂಕಿನ ಮಲಯ ಮಾರುತ ಪ್ರವಾಸಿ ಮಂದಿರದಿಂದ 14 ಕಿ.ಮೀ. ದೂರದವರೆಗೆ ಈ ರಸ್ತೆ ಇದೆ. ದಾರಿಯುದ್ದಕ್ಕೂ ದಟ್ಟವಾದ ಕಾಡು, ಬೆಟ್ಟಗಳ ಸಾಲಿನಲ್ಲಿ ಸಾಗುವಾಗ ಹೊರ ಜಗತ್ತನ್ನೇ ಮರೆಸುವಂತೆ ಪ್ರಕೃತಿಯ ರಮ್ಯ ಅನುಭವ ನೀಡುತ್ತದೆ. ಪೂರ್ಣವಾಗಿ ತಿರುವುಗಳನ್ನೇ ಒಳಗೊಂಡ ಈ ರಸ್ತೆಯಲ್ಲಿ ವೇಗವಾಗಿ ಸಾಗುವ ಮಾತೇ ಇಲ್ಲ. ಇಲ್ಲಿ ಏನಿದ್ದರೂ, ಒಂದೆಡೆ ಗುಡ್ಡದಿಂದ ಹರಿಯುವ ಝರಿಗಳನ್ನು ಸಂಭ್ರಮಿಸಿ, ಮತ್ತೊಂದು ಬದಿಯಲ್ಲಿ ಕಾಣುವ ಪಶ್ಚಿಮ ಘಟ್ಟದ ಬೃಹತ್ ಕಾಡು, ಬೆಟ್ಟದ ಸಾಲುಗಳನ್ನು ಆಸ್ವಾದಿಸಿಕೊಂಡು ಮುಂದೆ ಸಾಗಬೇಕು. ಈ ಮಾರ್ಗದಲ್ಲಿ ಅಲ್ಲಲ್ಲಿ ಝರಿಗಳ ಬದಿ ವಾಹನ ನಿಲ್ಲಿಸಿ ದಣಿವಾರಿಸಿಕೊಳ್ಳಬಹುದು. ಈ ಹಾದಿಯಲ್ಲಿ ಒಟ್ಟು 12 ಹೇರ್‌ಪಿನ್ ತಿರುವು ಸಿಗುತ್ತದೆ. ಮಳೆಗಾಲದಲ್ಲಿ ಇಲ್ಲಿ ವಾರ್ಷಿಕ 7000 ಮಿ.ಮೀ.ನಷ್ಟು ಭಾರೀ ಮಳೆ ಸುರಿಯುತ್ತದೆ. ಜೇನುಕಲ್ಲು ಬಾಳೆಕಲ್ಲು ಮತ್ತು ಕೊಡಕಲ್ಲು ಗುಡ್ಡಗಳು ಸಿಗುತ್ತವೆ. ಇದೇ ಹಾದಿಯಲ್ಲಿ ಸ್ವಲ್ಪ ಒಳಗೆ ಸಾಗಿದರೆ ಬಲ್ಲಾಳರಾಯನದುರ್ಗ ಕೋಟೆ ಸಿಗುತ್ತದೆ .

ಆಗುಂಬೆ ಘಾಟ್ ತಿರುವುಗಳಿಗೆ ನಮಸ್ಕಾರ 

ಎಲ್ಲಿಂದ ಎಲ್ಲಿಗೆ: ತೀರ್ಥಹಳ್ಳಿ- ಆಗುಂಬೆ 32 ಕಿ.ಮೀ 

ಹಿಂದೊಮ್ಮೆ ದಕ್ಷಿಣದ ಚಿರಾಪುಂಜಿ ಎಂಬ ಹಿರಿಮೆ ಹೊಂದಿದ್ದ ಆಗುಂಬೆ ತನ್ನೊಡಲಲ್ಲಿ ಕಡಿದಾದ ತಿರುವುಗಳನ್ನು ಒಳಗೊಂಡ ರಸ್ತೆಯನ್ನು ಒಳಗೊಂಡಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ 32 ಕಿ.ಮೀ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ 28 ಕಿ.ಮೀ ದೂರದಲ್ಲಿ ಆಗುಂಬೆಯಿದೆ. ಆಗುಂಬೆಗೆ ಈ ಎರಡೂ ಊರುಗಳಿಂದ ತಲುಪುವ ಮಾರ್ಗ ಬಹಳ ಸುಂದರವಾಗಿದೆ . ಅದಕ್ಕಿಂತ ಸುಂದರವೆಂದರೆ ಆಗುಂಬೆ ಘಾಟ್‌ನಲ್ಲಿ ಸಾಗುವುದು. ಕಡಿದಾದ ತಿರುವುಗಳಿಂದ ಸಾಗುವ ಈ ಮಾರ್ಗದ ಉದ್ದಕ್ಕೂ ಹಸಿರು ಮರಗಿಡಗಳು ಕಣ್ಮನ ಸೆಳೆಯುತ್ತವೆ. ಒಂದೆಡೆ ಬೆಟ್ಟ, ಮತ್ತೊಂದೆಡೆ ಪ್ರಪಾತ, ಮಾರ್ಗದಲ್ಲೇ ಸೂರ್ಯಾಸ್ತ ವೀಕ್ಷಿಸುವ ಪಾಯಿಂಟ್ ಇದೆ. ಜಾಲಿ ರೈಡ್‌ಗೆ ಹೇಳಿ ಮಾಡಿಸಿದ ಈ ಹಾದಿಯಲ್ಲಿ ಸ್ವಲ್ಪವೇ ಅಕ್ಕಪಕ್ಕದ ಹಾದಿಯಲ್ಲಿ ಸಾಗಿದರೆ ಬರ್ಕಣ, ಒನಕೆ ಅಬ್ಬಿ, ಜೋಗಿಗುಂಡಿ, ಸಿರಿಮನೆ, ಕೂಡಲು ತೀರ್ಥ ಜಲಪಾತಗಳು ಸಿಗುತ್ತವೆ. ಮಳೆಗಾಲದಲ್ಲಂತೂ ದಾರಿಯುದ್ದಕ್ಕೂ ಹಲವು ಕಿರು ಜಲಪಾತಗಳು ಉದ್ಭವವಾಗುತ್ತವೆ. ಬೇಸಿಗೆ ಮುಂಜಾನೆ, ಇಲ್ಲವೇ ಸಂಜೆಯ ಹೊತ್ತಿನ ಒಂದು ಸಂಚಾರ ಹಲವು ದಿನಗಳ ಒತ್ತಡವನ್ನು ಒಂದೇ ಏಟಿಗೆ ನಿವಾರಿಸಬಲ್ಲದು .

ಕಾಫಿ ಪರಿಮಳದ ಮಡಿಕೇರಿ ರಸ್ತೆ 

ಎಲ್ಲಿಂದ ಎಲ್ಲಿಗೆ: ಮಡಿಕೇರಿ – ಕುಶಾಲನಗರ 30 ಕಿಮೀ

ಕೊಡಗಿನ ಎರಡು ಪ್ರಮುಖ ನಗರಗಳಾದ ಮಡಿಕೇರಿ ಮತ್ತು ಕುಶಾಲನಗರವನ್ನು ಸಂಪರ್ಕಿಸುವ ರಸ್ತೆ ಕೂಡಾ ಸುಂದರ ಹಾದಿ . 30 ಕಿ.ಮೀ ದೂರದ ಈ ಮಾರ್ಗದುದ್ದಕ್ಕೂ ಕಾಫಿ ತೋಟಗಳು ಸ್ವಾಗತಿಸುತ್ತವೆ. ಕಾಫಿ ಹೂ ಬಿಡುವ ಸಮಯವಾದ ಏಪ್ರಿಲ್ ತಿಂಗಳ ಆಸುಪಾಸಿನಲ್ಲಂತೂ ಈ ರೋಡ್‌ನಲ್ಲಿ ಸಾಗುವಾಗ ಕಾಫಿ ಹೂವಿನ ಸುಗಂಧ ಮನಸ್ಸಿಗೆ ಮುದ ನೀಡುತ್ತದೆ. ಮಡಿಕೇರಿಯಿಂದ ಸುಂಟಿಕೊಪ್ಪ ಮಾರ್ಗದವರೆಗೂ ತಿರುವಿನಿಂದ ಕೂಡಿದ ರಸ್ತೆಗಳು ವಾಹನ ಸವಾರರಿಗೆ ಖುಷಿ ಕೊಡುತ್ತವೆ. ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುವ ಸಂದರ್ಭ ಸಿಂಕೋನ, ಬೋಯಿಕೇರಿ ಬಳಿ ರಸ್ತೆ ಇಳಿಜಾರಿನಿಂದ ಕೂಡಿದೆ. ಇದೇ ಮಾರ್ಗದಲ್ಲಿ ಅತ್ತೂರು- ಆನೆಕಾಡು ಅರಣ್ಯ ಪ್ರದೇಶವಿದೆ. ರಸ್ತೆಯ ಮಾರ್ಗದಲ್ಲಿ ಸಂಚರಿಸುವ ಸಂದರ್ಭ ಜಿಂಕೆ, ಕಾಡಾನೆ, ನವಿಲು ಮತ್ತಿತರ ಪ್ರಾಣಿಗಳು ಕೆಲವೊಮ್ಮೆ ಕಾಣಸಿಗುತ್ತದೆ.

ಸುಂದರ ದೃಶ್ಯಕಾವ್ಯ ಕೊಂಕಣ ರೈಲ್ವೆ ಮಾರ್ಗ 

ಎಲ್ಲಿಂದ ಎಲ್ಲಿಗೆ: ಮಂಗಳೂರು – ಮುಂಬೈ 741 ಕಿಮೀ 

ಪ್ರಕೃತಿಯ ಮಡಿಲಲ್ಲಿ ಎಂದೂ ಮರೆಯಲಾಗದ ಯಾನ ಕೈಗೊಳ್ಳಬೇಕು ಎಂಬ ಬಯಕೆ ಹೊಂದಿದವರು ನೀವಾದರೆ, ಕೊಂಕಣ ರೈಲ್ವೆಗಿಂತ ಬೇರೊಂದು ಆಯ್ಕೆ ಬೇಕಾಗಿಲ್ಲ. ಮಂಗಳೂರಿನಿಂದ ಮುಂಬೈವರೆಗೆ ನಿರ್ಮಾಣವಾಗಿರುವ ಈ ಮಾರ್ಗ, ಆಧುನಿಕ ಭಾರತದ ಎಂಜಿನಿಯರಿಂಗ್ ಕೌಶಲ್ಯದ ಅದ್ಭುತ, ಸಾಗರ, ನದಿ, ಜಲಪಾತ, ವನಸಿರಿಯನ್ನು ಭೇದಿಸಿ, 91 ಸುರಂಗದ ಒಳಗೆ, 129 ಸೇತುವೆಗಳ ಮೇಲೆ ಹಾದು ರೈಲು ಹೋಗುವುದನ್ನು ನೋಡುವುದೇ ಒಂದು ರೋಮಾಂಚನ. ಒಂದು ಕಡೆ ಎಷ್ಟು ನೋಡಿದರೂ ಮುಗಿಯದ ಪರ್ವತಗಳು, ದಿಗಿಲು ಹುಟ್ಟಿಸುವ ಪ್ರಪಾತಗಳು, ಸಮುದ್ರದಂತೆ ಕಾಣುವ ನದಿಗಳು, ಭಯ ಹುಟ್ಟಿಸುವ ಸೇತುವೆಗಳು.. ಮಂಗಳೂರಿನಿಂದ ಗೋವಾವರೆಗೆಗೆ ಸೇತುವೆ ಮೇಲೆ ಹಾಗೂ ಸುರಂಗದ ಒಳಗೆ ರೈಲು ಪ್ರಯಾಣ ಅದ್ಭುತ ಅನುಭವ.

How to reach Mumbai from Mangalore By Car, Road, Directions, Route, way -  Outlook Traveller

ಗೋವಾ ತಲುಪಿಸುವ ಕಾಳಿ ಸೇತುವೆ

ಎಲ್ಲಿಂದ ಎಲ್ಲಿಗೆ: ಕಾರವಾರ – ಗೋವಾ ಮಧ್ಯೆ 75 ಕಿಮೀ

ಕಾರವಾರ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 17ರ ಬಳಿ ಆಕರ್ಷಕ ಕಾಳಿ ಸೇತುವೆಯನ್ನು 1986ರಲ್ಲಿ ನಿರ್ಮಿಸಲಾಯಿತು. ಕರ್ನಾಟಕವು ಗೋವಾದೊಂದಿಗೆ ಸಂಪರ್ಕ ಹೊಂದಲು ಕಾರಣವಾಗಿರುವ ಈ ಸೇತುವೆಯು ಕರ್ನಾಟಕದ ಹೆಮ್ಮೆಯ ಪ್ರತೀಕ. ಕಾರವಾರ, ಸದಾಶಿವಗಡ ಕೋಟೆ, ಗುಡ್ಡಬೆಟ್ಟಗಳ ಸರಣಿ, ಸೂರ್ಯೋದಯ ಮತ್ತು ಸೂರ್ಯಾಸ್ತ ಹಾಗೂ ನದಿ ಪಾತ್ರದ ಪ್ರದೇಶ ಮುಂತಾದ ಅದ್ಭುತ ಪ್ರಾಕೃತಿಕ ವಿಹಂಗಮ ನೋಟಗಳನ್ನು ನೋಡಬಯಸುವಿರಾದರೆ ಖಂಡಿತವಾಗಿಯೂ ಈ ಸೇತುವೆಗೆ ಭೇಟಿ ನೀಡಲೇಬೇಕು. ಸೇತುವೆಯ ಮೇಲೆ ಸಾಗುವಾಗ ಒಂದು ಕ್ಷಣ ನಿಂತು ಆ ದೃಶ್ಯಗಳ ಆನಂದ ಸವಿಯಬಹುದು. ಇಷ್ಟೇ ಅಲ್ಲ, ಇದರ ಮೇಲೆ ನಿಂತಾಗ ಕಾಳಿ ನದಿಯು ಅರಬ್ಬಿ ಸಮುದ್ರದಲ್ಲಿ ಸಮಾಗಮ ಹೊಂದುವ ದೃಶ್ಯ ಕೂಡ ಕಾಣಿಸುತ್ತದೆ .

Best Mumbai To Goa Road Trip

ಮೋಡಗಳ ಮನೆಗೆ ಕೊಂಡೊಯ್ಯುವ ಕುಂದಾದ್ರಿ 

ಎಲ್ಲಿಂದ ಎಲ್ಲಿಗೆ: ಗುಡೇಕೇರಿ- ಕುಂದಾದ್ರಿ 9 ಕಿ.ಮೀ 

ತೀರ್ಥಹಳ್ಳಿಯಿಂದ ಆಗುಂಬೆಗೆ ಹೋಗುವ ದಾರಿಯಲ್ಲಿ ಸಿಗುವ ಗುಡೇಕೇರಿಯಿಂದ ಕುಂದಾದ್ರಿಗೆ ಹೋಗುವ ರಸ್ತೆಯು ತನ್ನ ನಯನ ಮನೋಹರ ನೋಟಗಳಿಂದ ಕಣ್ಣಿಗೆ ಹಿತ ನೀಡುವಂತಿದೆ. ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಬೆಳಗಿನ ಹೊತ್ತು ಡ್ರೈವ್ ಮಾಡುವುದೇ ಒಂದು ಸುಖ. ನಿಧಾನವಾಗಿ ಕುಂದಾದ್ರಿಯ ತುತ್ತತುದಿಗೆ ಕೊಂಡೊಯ್ಯುವ ರಸ್ತೆಯ ಎರಡೂ ಬದಿಯಲ್ಲಿ ಹಸಿರು ಪ್ರಕೃತಿ ಮತ್ತು ಕುರುಚಲು ಕಾಡುಗಳು ಕಾಣಸಿಗುತ್ತವೆ. ಈ ಹಾದಿಯು ಮಳೆಗಾಲದಲ್ಲಿ ಮತ್ತೊಂದು ರೀತಿಯ ಅನುಭವ ಕೊಡುತ್ತದೆ. ಬೆಟ್ಟ ಏರುತ್ತಿದ್ದಂತೆ ಆಕಾಶದಲ್ಲಿರುವ ಮೋಡಗಳ ಅರಮನೆಗೇ ಹೋಗುತ್ತಿದ್ದೇವೇನೋ ಎಂಬ ಭಾವನೆ ಹುಟ್ಟುತ್ತದೆ. ಒಂದು ಕಪ್ ಬಿಸಿಬಿಸಿ ಚಹಾ, ಸವಿಯಲು ಮಲೆನಾಡಿನ ಹಪ್ಪಳ ಮತ್ತು ಬೇಕಾದಷ್ಟು ಬಿಡುವು ಇದ್ದರೆ ಹೋಗಲೇಬೇಕಾದ ರಸ್ತೆ ಕುಂದಾದ್ರಿ ರಸ್ತೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

Related Articles

Leave a Reply

Your email address will not be published. Required fields are marked *

Back to top button