ಇವರ ದಾರಿಯೇ ಡಿಫರೆಂಟುದೂರ ತೀರ ಯಾನಬೆರಗಿನ ಪಯಣಿಗರುಸ್ಫೂರ್ತಿ ಗಾಥೆ

ಮನೆ, ಕೆಲಸ, ಮಕ್ಕಳ ವಿದ್ಯಾಭ್ಯಾಸ ಎಲ್ಲವನ್ನು ಕೈಬಿಟ್ಟು ಜೀವನವನ್ನೇ ಪ್ರವಾಸವಾಗಿ ಪರಿವರ್ತಿಸಿದ ವಿಭಿನ್ನ ಕಥೆ

ಜೀವನದಲ್ಲಿ ಪ್ರವಾಸ ಎಂಬ ಹವ್ಯಾಸವನ್ನು ಅಳವಡಿಸಿಕೊಂಡ ಸುಮಾರು ಮಂದಿ ಇದ್ದಾರೆ. ಆದರೆ ಜೀವನವೇ ಪ್ರವಾಸ ಅಥವಾ ಸಂಚಾರವಾದಾಗ? ಎಂಬ ಪ್ರಶ್ನೆ ಬಂದರೆ ನಮ್ಮಂತ ಸಾಕಷ್ಟು ಜನರಿಗೆ ಊಹಿಸಿಕೊಳ್ಳುವುದು ಕಷ್ಟ ಅನ್ನಿಸಬಹುದು.

ಆದರೆ ಇಲ್ಲೊಂದು ಕುಟುಂಬ ಈ ಪ್ರಶ್ನೆಗೆ ಉತ್ತರ ಮಾತ್ರ ಅಲ್ಲ ಅದನ್ನೇ ಜೀವನದಲ್ಲಿ ಅಳವಡಿಸಿಕೊಂಡಿದೆ. ಅದು ಹೇಗೆ ಎಂಬ ಕುತೂಹಲ ಇದ್ದಲ್ಲಿ ಈ ಆರ್ಟಿಕಲ್ ಅನ್ನು ಪೂರ್ತಿ ಓದಿ.

  • ಪದ್ಮರೇಖಾ ಕೆ ಭಟ್, ಚಟ್ನಳ್ಳಿ

“ಲೈಫ್ ಈಸ್ ಫುಲ್ ಆಫ್ ಎಕ್ಸ್ ಪೆರಿಮೆಂಟ್” ಎನ್ನುವ ಮಾತು ಹೊಸದೇನಲ್ಲ. ಆದರೆ ಇಲ್ಲೊಂದು ವಿಶಿಷ್ಟ ಜೋಡಿ ತಮ್ಮ ಜೀವನದ ಕಥೆಯನ್ನು ಒಂದು ಹೊಸ ಪ್ರಯೋಗದೊಂದಿಗೆ ಪರಿಚಯಿಸಿದ್ದಾರೆ.

2019ರಲ್ಲಿ ಈ ಅಯ್ಯರ್ ಕುಟುಂಬ ತಮ್ಮ ಮನೆ, ಕೆಲಸ ಹಾಗೂ ಮಕ್ಕಳ ವಿದ್ಯಾಭ್ಯಾಸವನ್ನು ತೊರೆದು, ಪ್ರವಾಸದ ವಿಭಿನ್ನ ಜೀವನ ಶೈಲಿಯನ್ನು ಆಯ್ಕೆ ಮಾಡಿದರು. ಪುಣೆಯಲ್ಲಿದ್ದ ತಮ್ಮ ಮನೆ, ಕಾರು, ವಸ್ತುಗಳನ್ನು ಮಾರಿ ಮತ್ತು ಓದುತ್ತಿದ್ದ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಬಿಡಿಸಿ, ಬರಿ ನಾಲ್ಕು ಸೂಟ್ ಕೇಸ್ ನೊಂದಿಗೆ ಊರೂರು ಸುತ್ತುತ್ತಾ ತಮ್ಮ ಜೀವನವನ್ನು ವಿಶಿಷ್ಟವಾಗಿಸಿದ್ದಾರೆ.

ಸಂತೋಷ್ ಅಯ್ಯರ್ ಹಾಗೂ ಆಂಚಲ್ ಅಯ್ಯರ್ ತಮ್ಮ ಮಕ್ಕಳಾದ ಹ್ರಿಧಾನ್ (ಮಗ, 11 ವರ್ಷ) ಹಾಗೂ ಖ್ವಾಹಿಷ್ (ಮಗಳು, 6 ವರ್ಷ) ಅವರೊಂದಿಗೆ ಇಡೀ ಭಾರತ ದರ್ಶನ ಮಾಡುತ್ತಾ ಇದ್ದು, ಒಂದು ಊರಿನಲ್ಲಿ ಎರಡು ತಿಂಗಳ ಮೇಲೆ ಉಳಿಯದೆ ಬೇರೊಂದು ಊರಿಗೆ ಪ್ರಯಾಣ ಬೆಳೆಸುತ್ತಾರೆ.

ಮಕ್ಕಳ ವಿದ್ಯಾಭ್ಯಾಸದ ಮೇಲೆ ತಾಯಿಗೆ ಇದ್ದ ಭಯ ಈ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿತು. ” ನನ್ನ  ಮಗನಿಗೆ ಈಗ 11 ವರ್ಷ, ಶಾಲೆಯಲ್ಲಿ 10 ಅಂಕದ ಪ್ರಶ್ನೆಗೆ 6 ಅಂಕ ತೆಗೆದುಕೊಂಡ ನಿಟ್ಟಿನಲ್ಲಿ ಗದರಿಸಲಾಯಿತು. ನಮಗೆ ನಮ್ಮ ಮಕ್ಕಳು ನಾವು ಮಾಡಿದ ಹಾಗೆ  ಇಲಿಯ ಓಟ ಮಾಡುವುದು ಇಷ್ಟ ಇಲ್ಲ. ಯಾಕೆಂದರೆ ಇವತ್ತಿನ ದಿನದ ವಿದ್ಯಾಭ್ಯಾಸದ ಸತ್ಯ ಏನೆಂದರೆ ನಾವು ವಿದ್ಯಾಭ್ಯಾಸ ಮಾಡುವುದಕ್ಕು ನಾವು ಮಾಡುವ ಕೆಲಸಕ್ಕೂ ಎಷ್ಟೋ ಸಲ ಸಂಬಂಧ ಇರುವುದಿಲ್ಲ. ಏನೆಲ್ಲಾ ನಾನು ಓದಿದ್ದೆನೋ ಅದು ಯಾವುದು ಈಗ ನನಗೆ ನೆನಪಿಲ್ಲ” ಎನ್ನುತ್ತಾರೆ ಆಂಚಲ್.

ವಿದ್ಯಾಭ್ಯಾಸದ ಸಲುವಾಗಿ ಸುಮಾರು ಶಾಲೆಗೆ ಭೇಟಿ ಕೊಟ್ಟರು, ಹೆಚ್ಚಿನ ಶಾಲೆಗಳು ಜೀವನಕ್ಕೆ ಬೇಕಾದ ವಿಷಯಗಳನ್ನು ಹೊಂದಿರುವಂತೆ ಕಾಣಲಿಲ್ಲ. ಈ ನಿಟ್ಟಿನಲ್ಲಿ ಫ್ರೀಲಾನ್ಸ್ ಡಿಜಿಟಲ್ ಮಾರ್ಕೆಟರ್ ಆದ ಆಂಚಲ್ ತಮ್ಮ ಮಗ ಹಾಗೂ ಮಗಳಿಗೆ ಹೋಂ ಸ್ಕೂಲಿಂಗ್ ಶುರು ಮಾಡಿದರು.

ನೀವುಇದನ್ನುಇಷ್ಟಪಡಬಹುದು: ಮಕ್ಕಳನ್ನು 3 ತಿಂಗಳಲ್ಲಿ 13 ಸಾವಿರ ಕಿಮೀ ಸುತ್ತಾಡಿಸಿ ರೋಡ್ ಸ್ಕೂಲಿಂಗ್ ಕಾನ್ಸೆಪ್ಟ್ ಪರಿಚಯಿಸಿದ ಗಂಗಾಧರ್- ರಮ್ಯಾ ದಂಪತಿ

ಎಲ್ಲಾ ವಿಷಯಗಳನ್ನು ತಮ್ಮ ಶ್ರಮ ವಹಿಸಿ ತಂದೆ ತಾಯಿ ಮಕ್ಕಳಿಗೆ ಹೇಳಿಕೊಡುತ್ತಿದ್ದರೂ ಏನೋ ಕಡಿಮೆ ಆಗುತ್ತಿರುವಂತೆ ಅನ್ನಿಸಿತು. ಆಗ ಚಿಗುರೊಡೆದ ಯೋಚನೆಯೇ ಈ ವಿಭಿನ್ನ ಪ್ರಯತ್ನಕ್ಕೆ ದಾರಿ ತೋರಿತು. ಅದೇನೆಂದರೆ ಮಕ್ಕಳನ್ನು ಪಾಠ ಹಾಗೂ ಕಲಿಕೆಯ ಜೊತೆಗೆ, ಬೇರೆ ಬೇರೆ ಜನರೊಂದಿಗೆ ಹಾಗೂ ಸಂಸ್ಕೃತಿಗೆ ಪರಿಚಯಿಸಿಬೇಕು ಅದಕ್ಕೆ ಈ ದಂಪತಿಗಳಿಗೆ ಹೊಳೆದ ಏಕೈಕ ಉಪಾಯ ಎಂದರೆ ಸಂಚಾರ ಅಥವಾ ಪ್ರವಾಸ.

ಇವರ ಮೊದಲ ಪ್ರವಾಸ ಪವನ್ ಡ್ಯಾಂ ಗೆ ಗಾಢ ಚಳಿಯೊಂದಿಗೆ ಚಾರಣ ಮಾಡುವ ಮೂಲಕ ಶುರುವಾಯಿತು. ಆದರೆ ಮಕ್ಕಳು ಈ ಯೋಜನೆಗೆ ನಗುತ್ತಾ ಹೊಂದಿಕೊಳ್ಳುತ್ತಿರುವುದನ್ನು ನೋಡಿ ದಂಪತಿಗಳಿಗೆ ಖುಷಿ ಆಯಿತು. ಕ್ರಮೇಣ ಇಡೀ ಕುಟುಂಬ ಈ  ಸಂಚಾರದ ಯೋಜನೆಯನ್ನು ಆನಂದಿಸುತ್ತಾ, ಒಂದು ಜಾಗವನ್ನು ತಮ್ಮ ಮನೆ ಎಂದು ಹೇಳುವ ಕ್ರಮವನ್ನೇ ಬಿಟ್ಟುಬಿಟ್ಟಿತು.

ಬರೀ ನಾಲ್ಕು ಬ್ಯಾಗ್ ನೊಂದಿಗೆ ಸಂಚರಿಸುವ ಈ ಕುಟುಂಬ ಇಲ್ಲಿಯವರೆಗೆ ರಾಜ್ ಕೋಟ್, ಪಾಲಂಪುರ್, ಡಾಲ್ ಹೌಸಿ, ಕಸೌಲಿ, ಊಟಿ, ಜೈಪುರ್ ಹಾಗೂ ಉದಯಪುರ್ ಅಲ್ಲಿ ವಾಸಿಸಿದ್ದಾರೆ.

ಮುಂದಿನ ಜಾಗವನ್ನು ಹೇಗೆ ತೀರ್ಮಾನಿಸುತ್ತಾರೆ?

ಮುಂದೆ ಯಾವ ಊರಿಗೆ ಪ್ರಯಾಣ ಬೆಳೆಸಬೇಕು ಎಂಬ ತೀರ್ಮಾನ ನಮ್ಮ ಮಕ್ಕಳದ್ದು. ಇಬ್ಬರು ಮಕ್ಕಳು ಎರಡು ಊರುಗಳನ್ನು ಆರಿಸಿ ಅಲ್ಲಿನ ಸವಾಲುಗಳು ಹಾಗೂ ಊಟ ತಿಂಡಿ, ನೋಡಲು ಇರುವ ತಾಣಗಳ ಬಗ್ಗೆ ಎಲ್ಲಾ ಮಾಹಿತಿಗಳನ್ನು ನಮ್ಮ ಮುಂದೆ ವಿವರಿಸುತ್ತಾರೆ. ಇದರ ಆಧಾರದ ಮೇಲೆ ನಾವು ಒಂದು ಊರನ್ನು ಆಯ್ಕೆ ಮಾಡುತ್ತೇವೆ. ಸದ್ಯಕ್ಕೆ ನಮ್ಮ ಮುಂದಿನ ಪ್ರಯಾಣ ಉತ್ತರಾಖಂಡ್ ಗೆ. ಆದರೆ ಕೋವಿಡ್ ಕಾರಣದಿಂದ ಸ್ವಲ್ಪ ತಡವಾಗುತ್ತಿದೆ” ಎನ್ನುತ್ತಾರೆ ಆಂಚಲ್ ಅಯ್ಯರ್.

ಟ್ರಾವೆಲ್ ಎನ್ನುವುದು ಒಂದು ಕಲಿಕೆ!

“ನಾವು ಧರ್ಮಶಾಲಾಗೆ ಭೇಟಿ ನೀಡಿದಾಗ ಅಲ್ಲಿನ ಸನ್ಯಾಸಿಗಳನ್ನು ಗಮನಿಸಿದ ನನ್ನ ಮಗ, ಅವರ ಬಗೆಗಿನ ಸುಮಾರು ವಿಷಯಗಳನ್ನು ಇಂಟರ್ನೆಟ್ ನಿಂದ ಕಲೆ ಹಾಕಿ, ಮುಂದೆ ಭೂತಾನ್ ಗೆ ಪ್ರಯಾಣ ಮಾಡಬೇಕೆಂದು ಹೇಳಿದ. ನನಗೆ ಕೋಪ ಬಂದಾಗ, ಅಮ್ಮ ನಿನಗೆ ಕೆಲಸ ಮಾಡಿ ಸುಸ್ತಾಗಿದೆ ಸ್ವಲ್ಪ ಹೊತ್ತು ವಿಶ್ರಾಂತಿ ಮಾಡು ಎನ್ನುತ್ತಾನೆ. ನನ್ನ ಮಕ್ಕಳಿಗೆ ಈ ಪ್ರವಾಸದ ಜೀವನ ಹೊಂದಾಣಿಕೆ, ಅನುಭೂತಿ ಹಾಗು ಸಹಬಾಳ್ವೆಯ ಜೊತೆಗೆ ಸಾಕಷ್ಟು ವಿಭಿನ್ನ ಅನುಭವಗಳನ್ನು ಕೊಟ್ಟಿದೆ. ಅವರಲ್ಲಿದ್ದ ಭಯ ಹಾಗು ತಪ್ಪುಕಲ್ಪನೆಗಳನ್ನು ಕಮ್ಮಿ ಮಾಡಿದೆ” ಎನ್ನುತ್ತಾರೆ ಆಂಚಲ್.

ಟ್ರಾವೆಲಿಂಗ್ ಕ್ಷೇತ್ರದಲ್ಲಿ ದಿನಕ್ಕೊಂದು ಹೊಸ ಪ್ರಯೋಗ ಹಾಗೂ ಪ್ರಯತ್ನಗಳು ಆಗುತ್ತಲೇ ಇದೆ. ಆದರೆ ತಮ್ಮ ಜೀವನವನ್ನೇ ಪ್ರಯಾಣ, ಸಂಚಾರವಾಗಿ ಪರಿವರ್ತಿಸಿದ ಈ ಅಯ್ಯರ್ ಕುಟುಂಬ ಟ್ರಾವೆಲಿಂಗ್ ಕ್ಷೇತ್ರಕ್ಕೆ ನವೀನತೆಯನ್ನು ತಂದುಕೊಟ್ಟಿದೆ. ಇವರ ಈ ಜೀವನದ ಕಥೆ ನಮ್ಮಂತ ಪ್ರವಾಸ ಪ್ರೇಮಿಗಳಿಗೆ  ದೊಡ್ಡ ಪ್ರೇರಣೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button