ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವ

ಉತ್ತರಕನ್ನಡದಲ್ಲಿದೆ ಜಗತ್ತಿನ ಏಕೈಕ ಸಸ್ಯ ಪ್ರಭೇದ – “ಕತ್ತಲೆ ಕಾನ್ಸೀಸ್ ಸೆಮಿಕಾರ್ಪಸ್” ಮರ

#ವಿಶ್ವ ಪರಿಸರ ದಿನ ವಿಶೇಷ

ನಮ್ಮದು ವಿಸ್ಮಯ ಜಗತ್ತು. ಪರಿಸರ ಯಾವತ್ತೂ ನಮ್ಮನ್ನು ಬೆರಗಾಗಿಸುತ್ತಲೇ ಹೋಗುತ್ತದೆ. ಅದಕ್ಕೆ ಸಾಕ್ಷಿ ಕತ್ತಲೆ ಕಾನ್ಸೀಸ್ ಸೆಮಿಕಾರ್ಪಿಸ್ ಮರ. ಉತ್ತರ ಕನ್ನಡದ ಕತ್ತಲೆ ಕಾನ್ ನಲ್ಲಿರುವ ಈ ವಿಶಿಷ್ಟ ಸಸ್ಯ ಪ್ರಭೇದವನ್ನು ಉತ್ತರ ಕನ್ನಡಕ್ಕೆ ಹೋದಾಗ ನೋಡಿಕೊಂಡು ಬನ್ನಿ. ಈ ಬರಹ ಜೂನ್ 5, ವಿಶ್ವ ಪರಿಸರ ದಿನಕ್ಕೆ (world environment day 2021) ಅರ್ಪಣೆ.

  • ಚೈತ್ರಾ ರಾವ್, ಉಡುಪಿ

ಉತ್ತರ ಕನ್ನಡ ಜಿಲ್ಲೆ ಪರಿಸರ ಹಾಗೂ ಹಚ್ಚ ಹಸಿರಾದ ಕಾಡುಗಳಿಗೆ ಹೆಸರುವಾಸಿ. ಇಲ್ಲಿನ ನಿತ್ಯಹರಿದ್ವರ್ಣದ ಕಾಡುಗಳು, ಇಲ್ಲಿ ಇಲ್ಲದ ವಿಶಿಷ್ಟ ಜೀವರಾಶಿಗಳು ಸಸ್ಯ ಪ್ರಭೇದಗಳು ಜಗತ್ತಿನ ಬೇರೆಡೆ ವಿರಳ. ಇಲ್ಲಿ ವರ್ಷಪೂರ್ತಿ ಸುರಿಯುವ ಮಳೆ ತಂಪಾದ ಗಾಳಿ ಅಲ್ಲಿನ ಜನರಿಗೆ, ಪ್ರವಾಸಿಗರಿಗೆ ಸುಂದರ ಅನುಭವವನ್ನು ನೀಡುತ್ತದೆ. ಮುಖ್ಯವಾಗಿ ಜಿಲ್ಲೆಯ ಹೊನ್ನಾವರ ಮತ್ತು ಶಿರಸಿ ಅರಣ್ಯ ಭಾಗಗಳಲ್ಲಿ ಪ್ರಾಣಿ ಸಸ್ಯ ವೈವಿಧ್ಯ ಅತೀ ಮಹತ್ವದ್ದಾಗಿದೆ. 

 ಹಿಂದೆ ಇಲ್ಲಿನ ಸಿದ್ದಾಪುರ ತಾಲೂಕಿನ ಅರಣ್ಯದಲ್ಲಿ “ರಾಮಪತ್ರೆಜಡ್ಡಿ” ಎಂಬ ಅಪರೂಪದ ಜಲ ಸಂಗ್ರಹದ ಸಸ್ಯ ಸಂಪತ್ತಿದೆ ಎಂದು ಗುರುತಿಸಲಾಗಿತ್ತು. ಆದರೆ ಈಗ ಈ ಮರಗಳು ಅಳಿವಿನಂಚಿಗೆ ಸಾಗುತ್ತಿದೆ.

ಇತ್ತೀಚೆಗೆ ಜಗತ್ತಿನ ಏಕೈಕ ಸಸ್ಯ ಪ್ರಭೇದವನ್ನು ಅರಣ್ಯ ವಿಜ್ಞಾನಿಗಳು ಕಂಡು ಹುಡುಕಿದ್ದರು. ಆ ಸಸ್ಯ ಪ್ರಭೇದ ಉತ್ತರ ಕನ್ನಡ ಜಿಲ್ಲೆಯ ಕತ್ತಲೆ ಕಾನ್ ನಲ್ಲಿದೆ. ಇಲ್ಲಿನ ಮಾವಿನ ಗುಂಡಿಯಲ್ಲಿ ಕಂಡು ಬಂದ ಈ ಮರಕ್ಕೆ ಅರಣ್ಯ ವಿಜ್ಞಾನಿಗಳು “ಕತ್ತಲೆ ಕಾನ್ಸೀಸ್ ಸೆಮಿಕಾರ್ಪಸ್” ಎಂದು ಹೆಸರಿಸಿದ್ದಾರೆ.

ಹೇಗಿದೆ ಕತ್ತಲೆ ಕಾನ್ಸೀಸ್ ಸೆಮಿಕಾರ್ಪಸ್ ಮರಕತ್ತಲೆ?

ಕತ್ತಲೆ ಕಾನ್ಸೀಸ್ ಸೆಮಿಕಾರ್ಪಸ್ (Semecarpus Kathalekanensis ) ಇದು ಗೇರು ಜಾತಿಯ ಒಂದು ಮರ. ಈ ಕಾಡು ಗೇರು, ಕಾಡು ಕಣಗಿಲೆಯಂತೆ ದೊಡ್ಡ ಎಲೆಗಳನ್ನು ಹೊಂದಿದೆ. ಈ ಮರದಲ್ಲಿ ಸಣ್ಣ ಸಣ್ಣ ಕಾಯಿಗಳು ಕೂಡ ಆಗುತ್ತದೆ.

ಕಾಡು ಕಣಗಿಲೆ ಬೇಸಿಗೆಯಲ್ಲಿ ಎಲೆಯುದುರಿ ಬೋಳಾಗುತ್ತದೆ. ಆದರೆ ಈ ಮರ ಬೇಸಿಗೆಯಲ್ಲಿ ಎಲೆ ಉದುರಿಸಿ ಬೋಳಾಗುವುದಿಲ್ಲ.ಈ ಸಸ್ಯ ಪ್ರಭೇದ ಹಿಂದೆ ಬೇರೆ ಪ್ರದೇಶಗಳಲ್ಲಿ ಇದ್ದಿರಬಹುದು.

ಈ ಜಾತಿಯ ಸಸ್ಯ ಪ್ರಭೇದಗಳು ಬೇರೆಡೆ ಕಾಣಸಿಗುತ್ತದೆಯೇ ಎಂದು ಸಂಶೋಧನೆ ನಡೆಸಿದ್ದಾರೆ. ಆದರೆ ವಿಜ್ಞಾನಿಗಳ ಕಣ್ಣಿಗೆ ಕಂಡದ್ದು ಕತ್ತಲೆಕಾನಿನಲ್ಲಿ ಮಾತ್ರ. ಬೇರೆಡೆ ನಶಿಸಿ ಹೋಗಿರಬಹುದಾದ ಸಾದ್ಯತೆ ಇದೆ ಎಂದು ಹೇಳಿದ್ದಾರೆ.

ಹಾಗಾಗಿ ಜಗತ್ತಿನ ಏಕೈಕ ಸಸ್ಯ ಪ್ರಭೇದ ಪಟ್ಟಿಗೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡುಬಂದ ಕತ್ತಲೆ ಕಾನ್ಸೀಸ್ ಸೆಮಿಕಾರ್ಪಸ್ ಮರ ಸೇರಿದೆ.

Semecarpus kathalekanensis Endangered plant species Sirsi Uttara Kannada

ಇನ್ನೂ ನಡೆಯುತ್ತಿದೆ  ಇದರ ಸಂಶೋಧನೆ

ಈ ಮರದಿಂದ ಉತ್ಪತ್ತಿಯಾಗುವ ಕಾಯಿಗಳ ಮೂಲಕ ಅಥವಾ ಬೇರಿನಿಂದ ಇನ್ನಷ್ಟು ಈ ಜಾತಿಯ ಮರಗಳನ್ನು ಬೆಳೆಯಲು ಸಾಧ್ಯವೇ ಎಂಬ ಪ್ರಯೋಗ ನಡೆಯುತ್ತಿದೆ.

ನೀವುಇದನ್ನುಇಷ್ಟಪಡಬಹುದು: ಮೇಘಾಲಯದಲ್ಲಿ ಸಿಕ್ಕಿವೆ ಬೆಳಕು ಹೊಮ್ಮಿಸುವ ಟಾರ್ಚ್ ನಂಥಾ ಅಣಬೆಗಳು

ಈ ಮರದಲ್ಲಿ ಒಂದು ರೀತಿಯ ಹಸಿರು ಕಾಯಿಗಳು ಆಗುತ್ತದೆ. ಅವುಗಳು ಬಿದ್ದು ಹೊಸ ಗಿಡಗಳು ಹುಟ್ಟುತ್ತವೆಯೇ ಎಂದು ಅರಣ್ಯ ವಿಜ್ಞಾನಿಗಳು ಗಮನಿಸುತ್ತಿದ್ದಾರೆ. ಒಂದು ವೇಳೆ ಈ ಮರದಿಂದ ಮತ್ತೆ ಬೇರೆ ಗಿಡಗಳನ್ನು ಬೆಳೆಯಬಹುದಾದರೆ ಆ ಮರದ ಸ್ವಲ್ಪದೂರದಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲು ಸಾಧ್ಯವೇ ಎಂದು ಮೊದಲು ನೋಡಬೇಕು. ಇಲ್ಲಿನ ಈ ಸಸ್ಯ ಪ್ರಭೇದ ಬೇರೆ ಪ್ರದೇಶಗಳಲ್ಲಿ ಬೆಳೆಯುತ್ತದೆಯೇ ಎಂದು ತಿಳಿದುಕೊಳ್ಳಬೇಕು. ಹಾಗಾಗಿ ಮೊದಲ ಪ್ರಯೋಗ ಆ ಪ್ರದೇಶದಲ್ಲಿ ನಡೆಯುತ್ತದೆ.

ಬೆಳೆಯಲು ಸಾಧ್ಯವಿಲ್ಲವಾದರೆ ಈ ಮರ ಕಾಲಕ್ರಮೇಣ ಅವನತಿಯನ್ನು ಹೊಂದುತ್ತದೆ ಎಂದು ಅರಣ್ಯ ವಿಜ್ಞಾನಿಗಳು ಹೇಳಿದ್ದಾರೆ. ಜೊತೆಗೆ ಕಾಡು ಕಣಗಿಲೆಯು ಕೂಡ ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದವಾಗಿದೆ.

ಅಳಿವನಂಚಿನಲ್ಲಿರುವ ರಾಮಪತ್ರೆ ಜಡ್ಡಿ ಮರಗಳು

ಈ ಹಿಂದೆ ಗುರುತಿಸಿದ ರಾಮಪಾತ್ರೆ ಜಡ್ಡಿ ಮರವು ನಶಿಸಿ ಹೋಗುತ್ತಿದೆ. ರಾಮಪತ್ರೆ ಜಡ್ಡಿ ಅಥವಾ ಜಡ್ಡಿ ಕಾಡು ಎಂಬುದು ಅತ್ಯಂತ ಸೂಕ್ಷ್ಮ, ಪುರಾತನವಾದ ಮತ್ತು ಅಳಿವಿನಂಚಿನಲ್ಲಿರುವ ಪರಿಸರ ವ್ಯವಸ್ಥೆಯಾಗಿದೆ.

ಸಮುದ್ರ ಮಟ್ಟಕ್ಕಿಂತ ತುಂಬ ಎತ್ತರವಲ್ಲದ ಕಣಿವೆ ಪ್ರದೇಶಗಳಲ್ಲಿ ಕಂಡುಬರುವ ಈ ಜಡ್ಡಿ ಕಾಡುಗಳು ಕಾಡಿನ ತೊರೆಗಳಲ್ಲಿ ವರ್ಷಪೂರ್ತಿ ನೀರಿನ ಹರಿವಿರುವಂತೆ ನೋಡಿಕೂಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಇವು ಸ್ಪಂಜಿನಂತೆ ನೀರನ್ನು ಹಿಡಿದಿಟ್ಟುಕೊಂಡು ಬೇಸಿಗೆಯ ಸಮಯದಲ್ಲಿ ನೀರನ್ನು ಬಿಡುಗಡೆಗೊಳಿಸುತ್ತವೆ.

ಹೀಗಾಗಿ ಕೃಷಿಕರಿಗೆ ಇವು ವರದಾನವೇ ಆಗಿವೆ. ರಾಮಪತ್ರೆ ಜಡ್ಡಿಗಳು ಪ್ರಾಣಿ ಮತ್ತು ಸಸ್ಯ ಸಂಪತ್ತಿನ ಆಗರವಷ್ಟೇ ಅಲ್ಲದೆ ಪ್ರವಾಹವನ್ನು ನಿಯಂತ್ರಿಸುವಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತವೆ.

Ramapatre Jaddi Endangered plant species Sirsi Uttara Kannada

ಈ ಜೌಗಿನಲ್ಲಿನ ಮರಗಳ ಇನ್ನೊಂದು ವಿಶಿಷ್ಟ ಲಕ್ಷಣವೆಂದರೆ ಕಮಾನಿನಾಕಾರದಲ್ಲಿ ವಿಚಿತ್ರವಾಗಿ ಕಾಣುವ ಬೇರುಗಳು. ಈ ಬೇರುಗಳು ನೀರಿನಿಂದ ಹೊರಬಂದು ವಾತಾವರಣದಲ್ಲಿನ ಅನಿಲಗಳ ವಿನಿಮಯ ಮಾಡಿಕೊಳ್ಳಲು ಮರಕ್ಕೆ ಸಹಕರಿಸುತ್ತವೆ. ಇದು ಬಹು ಅಪರೂಪದ ಮತ್ತು ಸುಂದರ ಮರವಾಗಿದೆ.

ಈಗಿನ ಕಾಲಘಟ್ಟದಲ್ಲಿ ಅದೆಷ್ಟೋ ಸಸ್ಯ ಪ್ರಭೇದಗಳು ಅಳಿವಿನಂಚಿಗೆ ಸಾಗುತ್ತಿದೆ. ಪ್ರಾಣಿ ಸಸ್ಯ ವೈವಿಧ್ಯಗಳು ಜಗತ್ತಿನ ಅಮೂಲ್ಯವಾದ ಸಂಪತ್ತುಗಳು. ಹಾಗಾಗಿ ಗಿಡ ಮರಗಳನ್ನು ಉಳಿಸೋಣ. ಉಳಿಸಲು ಬೆಳೆಸಲು ಸಾಧ್ಯವಾಗದ್ದಿದರೂ ನಾಶ ಮಾಡುವುದು ಬೇಡ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button
Translate