ವಂಡರ್ ಬಾಕ್ಸ್ವಿಂಗಡಿಸದ

ನೀವಿನ್ನು ಡಬಲ್ ಡೆಕ್ಕರ್ ಅಂಬಾರಿಯಲ್ಲಿ ಮೈಸೂರು ಸುತ್ತಬಹುದು

ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳನ್ನು ನೋಡಲು ಒಂದೊಳ್ಳೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಂಬಾರಿ ಎಂಬ ಹೆಸರಿನ ಡಬಲ್ ಡೆಕ್ಕರ್ ಬಸ್ ಗಳು ಮೈಸೂರನ್ನು ತೋರಿಸಲು ಸಜ್ಜಾಗಿವೆ. ಪ್ರತೀ ಅರ್ಧಗಂಟೆಗೊಮ್ಮೆ ಮೈಸೂರಿನ ಹೋಟೆಲ್ ಮಯೂರದಿಂದ ಈ ಬಸ್ಸು ಹೊರಡುತ್ತದೆ. ಮೈಸೂರಿಗೆ ಹೋದವರೆ ಅಂಬಾರಿಯಲ್ಲಿ ರೌಂಡ್ ಹೊಡೆದು ಬರಬಹುದು. 

ಯಾವುದಾದರೊಂದು ಊರಿಗೆ ಹೋದಾಗ ಆ ಊರನ್ನು ಹೇಗೆ ಸುತ್ತುವುದು ಎಂಬ ಪ್ರಶ್ನೆ ಮೊದಲು ಬರುತ್ತದೆ. ಕಾರು, ಬೈಕು ಯಾವುದೇ ವಾಹನ ಇದ್ದರೂ ಯಾರಾದರೊಬ್ಬರು ಗೈಡ್ ಮಾಡುವವರು ಬೇಕಿರುತ್ತದೆ. ಇನ್ನು ಮುಂದೆ ಮೈಸೂರಿನಲ್ಲಿ ಆ ಸಮಸ್ಯೆ ಇರುವುದಿಲ್ಲ. ಯಾರಾದರೂ ಮೈಸೂರಿಗೆ ಹೋದರೆ ಅಂಬಾರಿ ಹತ್ತಿಕೊಂಡು ಮೈಸೂರು ನೋಡಬಹುದು.

ಮೈಸೂರು(mysore) ಅತ್ಯಂತ ಹಳೆಯ ಊರು. ರಾಜರುಗಳು ಆಳಿದ ಊರು. ಸುಂದರವಾದ ಊರು. ಇಲ್ಲಿ ಇಂಜಿನಿಯರಿಂಗ್ ವೈಭವ ಇದೆ, ಪ್ರಾಕೃತಿಕ ಅಚ್ಚರಿ ಇದೆ, ವಾಸ್ತುಶಿಲ್ಪದ ಮೇಲ್ಮೆ ಇದೆ. ಎಲ್ಲವೂ ಸೇರಿ ಮೈಸೂರನ್ನು ಒಂದು ವಿಶಿಷ್ಟ ನಗರವನ್ನಾಗಿ ಮಾಡಿದೆ. ನೀವು ಯಾವತ್ತಾದರೂ ಮೈಸೂರಿಗೆ ಹೋದರೆ ಆ ಊರು ತಣ್ಣಗೆ ಇರುವುದನ್ನು ಗಮನಿಸಿರುತ್ತೀರಿ. ಆ ಊರಿಗೊಂದು ಸಾವಧಾನದ ಗುಣವಿದೆ. ಇನ್ನು ಮುಂದೆ ನೀವು ಮೈಸೂರಿಗೆ ಹೋದರೆ ಸಾವಧಾನವಾಗಿ ಊರು ಸುತ್ತುವ ಅವಕಾಶವೂ ನಿಮ್ಮ ಮುಂದೆ ಇದೆ.

ನೀವು ಇದನ್ನು ಇಷ್ಟಪಡಬಹುದು: ದೆಹಲಿಯಿಂದ ಲಂಡನ್ ಗೆ ಬಸ್ಸು ಟೂರು: 70 ದಿನಗಳಲ್ಲಿ 18 ದೇಶ ನೋಡುವ ಅವಕಾಶ ಯಾರಿಗುಂಟು ಯಾರಿಗಿಲ್ಲ

ಕರ್ನಾಟಕ ಸಾಂಸ್ಕೃತಿಕ ನಗರಿ ಮೈಸೂರಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಅನುಕೂಲವಾಗುವಂತೆ ಅಂಬಾರಿ ಬಸ್ ಹೆಸರಿನ ಡಬಲ್ ಡೆಕ್ಕರ್ ಬಸ್ ಗಳನ್ನು ಪ್ರವಾಸೋದ್ಯಮ ಇಲಾಖೆ ಸಿದ್ಧಗೊಳಿಸಿದೆ. ಈ ಬಸ್ಸು ಹತ್ತಿಕೊಂಡು ಮೈಸೂರನ್ನು ಸುತ್ತಬಹುದು. ಇದೇ ಥರ ಲಂಡನ್ನಿನ ಬಿಗ್ ಬಸ್(london big bus) ಇದೆ. ಬಿಗ್ ಬಸ್ ನಲ್ಲಿ ಹತ್ತಿ ಕೂತರೆ ಲಂಡನ್ ತೋರಿಸುತ್ತಾರೆ. ಅಂಬಾರಿ ಹತ್ತಿ ಕೂತರೆ ಮೈಸೂರು ನೋಡಬಹುದು. ಮೈಸೂರಿನ ಪ್ರಮುಖ ಸ್ಥಳಗಳು, ಐತಿಹಾಸಿಕ ಮಹತ್ವವುಳ್ಳ ತಾಣಗಳು, ಪ್ರವಾಸಿ ಜಾಗಗಳನ್ನು ನೋಡಿ ಖುಷಿಪಡಬಹುದು.

ಒಬ್ಬರಿಗೆ ಟಿಕೆಟ್ ಇದರ ದರ 250. ಈ ಬಸ್ಸಲ್ಲಿ ಮಯೂರ ಹೋಟೆಲ್ ನಿಂದ ಪಯಣ ಶುರುವಾಗುತ್ತದೆ. ಅಲ್ಲಿಂದ ಜಿಲ್ಲಾಧಿಕಾರಿ ಕಛೇರಿ, ಕ್ರಾಫರ್ಡ್ ಹಾಲ್, ಕುಕ್ಕರಹಳ್ಳಿ ಕೆರೆ, ಮೈಸೂರು ವಿಶ್ವವಿದ್ಯಾಲಯ, ಜನಪದ ವಸ್ತುಪ್ರದರ್ಶನ, ರಾಮಸ್ವಾಮಿ ವೃತ್ತ, ಅರಮನೆ ಕರಿಕಲ್ಲು ತೊಟ್ಟಿ, ಅರಮನೆ ದಕ್ಷಿಣ ದ್ವಾರ, ಮೃಗಾಲಯ, ಕಾರಂಜಿ ಲೇಕ್, ಸಂಗೊಳ್ಳಿ ರಾಯಣ್ಣ ವೃತ್ತ, ಸ್ನೋ ಸಿಟಿ, ಚಾಮುಂಡಿ ವಿಹಾರ್ ಸ್ಟೇಡಿಯಂ, ಸೇಂಟ್ ಫಿಲೋಮಿನಾ ಚರ್ಚ್, ಬನ್ನಿ ಮಂಟಪ, ರೈಲ್ವೆ ಸ್ಟೇಷನ್ ನೋಡಿಕೊಂಡು ಮತ್ತೆ ವಾಪಸ್ ಬರಬಹುದು. 

ಹೋಟೆಲ್ ಮಯೂರ ಹೊಯ್ಸಳದಿಂದ ಪ್ರತಿ ಅರ್ಧಗಂಟೆಗೊಂದು ಅಂಬಾರಿ ಡಬಲ್ ಡೆಕ್ಕರ್ ಬಸ್ ಚಲಿಸಲಿದೆ. ಮೈಸೂರಿಗೆ ಹೋದಾಗ ಗುಲಾಬಿ ಬಣ್ಣದ ಸಂಪೂರ್ಣ ಗಾಜಿನ ಕಿಟಕಿ ಇರುವ ಅಂಬಾರಿ ಬಸ್ ನಲ್ಲಿ ಮೈಸೂರಿನ ಅಂದ ಸವಿಯುವ ಅವಕಾಶ ಕಳೆದುಕೊಳ್ಳಬೇಡಿ. 

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button