Site icon Kannada.Travel

ಸೈಕಲ್ ಹತ್ತಿಕೊಂಡು ಕಾಲೇಜಿಗೆ ಬರುವ ಮಾದರಿ ಪ್ರೊಫೆಸರ್ ಉಜಿರೆ ಎಸ್ ಡಿ ಎಂ ಕಾಲೇಜಿನ ಸೂರ್ಯನಾರಾಯಣ

World Bicycle Day 2021

World Bicycle Day 2021

ತಾನು ಹೋಗುವೆಡೆಗೆಲ್ಲಾ ಸೈಕಲ್ ಹತ್ತಿಕೊಂಡು ಹೋಗುವ ಉಜಿರೆ ಎಸ್ ಡಿಎಂ ಕಾಲೇಜಿನ ಪ್ರೊಫೆಸರ್ ಸೂರ್ಯನಾರಾಯಣ ಅವರ ಸ್ಫೂರ್ತಿ ಕತೆ ಇದು. ವಿಶ್ವ ಬೈಸಿಕಲ್ ದಿನದ ವಿಶೇಷ (world bicycle day 2021).

ಬೈಸಿಕಲ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.  ಚಿಕ್ಕಮಕ್ಕಳಿಂದ ಹಿಡಿದು  ದೊಡ್ಡವರವರೆಗೂ ತುಂಬಾ ಇಷ್ಟಪಡುವ ಒಂದು ವಾಹನ ಅಂದರೆ ಅದೇ ಬೈಸಿಕಲ್. 

ಸೈಕಲ್ ಅನ್ನು ಕೆಲವರು ತಮ್ಮ ಬೇಸರದ ಸಮಯವನ್ನು ಕಳೆಯಲು ಓಡಿಸಿದರೆ, ಕೆಲವರು ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು, ಕೆಲವರು ತಮ್ಮ ಹವ್ಯಾಸಕ್ಕಾಗಿ ಹೀಗೆ ಬೇರೆಬೇರೆ ಕಾರಣಕ್ಕಾಗಿ ಬೈಸಿಕಲ್ ಅನ್ನು ಬಳಕೆ ಮಾಡುತ್ತಾರೆ. ಇನ್ನೂ ಕೆಲವರು ತಮ್ಮ ಜೀವನದಲ್ಲಿ ಒಂದು ಭಾಗವನ್ನಾಗಿಯೇ ಈ ಬೈಸಿಕಲ್ ಅನ್ನು ಬಳಸುತ್ತಾರೆ. ಈ ರೀತಿಯಾಗಿ ಬೈಸಿಕಲ್ ಅನ್ನು ಇಷ್ಟಪಡುವವರಲ್ಲಿ ಉಜಿರೆ ಮೂಲದ ಪ್ರೊಫೆಸರ್  ಸೂರ್ಯನಾರಾಯಣ ಕೂಡ ಒಬ್ಬರು.

ಸೂರ್ಯನಾರಾಯಣ, ಇವರು ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರು. ತಾವು  ಕಾಲೇಜಿನ ಪ್ರೊಫೆಸರ್ ಆಗಿದ್ದರೂ ಎಲ್ಲರಂತೆ ತಾನಲ್ಲ ಎಂಬುವಂತೆ ಬೈಸಿಕಲ್ಲಿನಲ್ಲಿಯೇ ಕಾಲೇಜಿಗೆ ಬರುವವರು ಇವರು. ಸೈಕಲ್ ಹತ್ತಿ ದಿನವೂ ಕಾಲೇಜಿಗೆ ಬರುವ ಇವರು, ಕಾಲೇಜಿನ ತುಂಬಾ ತಮ್ಮ ಸೈಕಲ್ ಸವಾರಿಗಾಗಿಯೇ ಫೇಮಸ್. ಇದಲ್ಲದೆ ಸದಾ ಹಸನ್ಮುಖಿಯಾಗಿರುವ ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಇಂಗ್ಲಿಷ್ ಮೇಷ್ಟ್ರು.

ಇವರ ಮತ್ತು ಬೈಸಿಕಲ್ ನ ನಡುವಿನ ಸಂಬಂಧದ ಬಗ್ಗೆ ಇವರೇ ಹಂಚಿಕೊಂಡ ಮಾತುಗಳು ಹೀಗಿವೆ;

ನಮ್ಮ ಕಾಲದಲ್ಲಿ ನಮ್ಮ ಮನೆಯಲ್ಲಿ ನನಗೆ  ಸ್ವಂತ ಸೈಕಲ್ ಇರಲಿಲ್ಲ. ಆಗ ನಾವು ಊರಿನಲ್ಲಿರುವ ಸೈಕಲ್ ಅಂಗಡಿಗೆ ಹೋಗಿ ಅಲ್ಲಿ ಒಂದು ಗಂಟೆಗೆ 20 ರಿಂದ 50 ಪೈಸೆ ಕೊಟ್ಟು ಬೈಸಿಕಲ್ ಓಡಿಸಿ ಆನಂದಿಸುತ್ತಿದ್ದೆವು. ನನ್ನ ಜೊತೆಗೆ ನನ್ನ ಅಪ್ಪ ಮತ್ತು ಮಾವ ಕೂಡ ಇರುತ್ತಿದ್ದರು. ಅವರೂ ನನಗೆ ಬೈಸಿಕಲ್ ಓಡಿಸಲು ಸಹಾಯ ಮಾಡುತ್ತಿದ್ದರು. 

ನೀವುಇದನ್ನುಇಷ್ಟಪಡಬಹುದು: ಸೈಕಲ್ ಮೇಲೆ ಕುಳಿತು ಉಜಿರೆ ಸುತ್ತಿದ ಕತೆ: ವಿಶ್ವ ಸೈಕಲ್ ದಿನದ ವಿಶೇಷ

ಮೊದಮೊದಲು ಸೈಕಲ್ ಅನ್ನು ಕಲಿಯುವಾಗ ತುಂಬಾ ಕಷ್ಟ ಅನ್ನಿಸಿದರೂ, ನಂತರ ಅದೇ ಒಂದು ಹವ್ಯಾಸವಾಗಿ, ಸಂತೋಷವಾಗಿ ಹೊರಹೊಮ್ಮಿತು.

ನಾವು ಸೈಕಲನ್ನು ಚಿಕ್ಕವರಿರುವಾಗ ಅಂಗಡಿಯಿಂದ  ಸಾಮಾನುಗಳನ್ನು  ತರಲು ಬಳಸುತ್ತಿದ್ದೆವು. ಏಕೆಂದರೆ ಸಾಮಾನುಗಳನ್ನು ತಂದರೆ ಮಾತ್ರ ಮನೆಯಲ್ಲಿ ಬೈಸಿಕಲ್ ಅನ್ನು ಕೊಡುತ್ತಿದ್ದರು. ನಂತರ ನಾನು ಹೈಸ್ಕೂಲ್ನಲ್ಲಿ ಇರುವಾಗ ಮೊದಲ ಬಾರಿ ಅಪ್ಪ ನನಗೆ ಒಂದು ಹೊಸ ಬೈಸಿಕಲ್ ಅನ್ನು ಕೊಡಿಸಿದ್ದರು. ನಂತರದ ದಿನಗಳಲ್ಲಿ ನಾನು ಮತ್ತು ನನ್ನ ಸ್ನೇಹಿತರೆಲ್ಲಾ ಸೇರಿ  ಬೈಸಿಕಲ್ ಅನ್ನು ತೆಗೆದುಕೊಂಡು ಬೆಳ್ಳಾರೆ,  ಪುತ್ತೂರು, ಸುಳ್ಯ ಹೀಗೆ ಎಲ್ಲಾ ಕಡೆ ಹೋಗುತ್ತಿದ್ದೆವು. ಅಲ್ಲದೇ ನಾವು ಹಲವಾರು ಬೈಸಿಕಲ್  ಸ್ಪರ್ಧೆಗೆ ಕೂಡ ಭಾಗವಹಿಸಿದ್ದೆವು.

ಈ ಟ್ರೆಕ್ಕಿಂಗ್, ಟ್ರಾವೆಲಿಂಗ್ ಎಲ್ಲಾ ಮಾಡುವಾಗ ಬೈಸಿಕಲ್ ತುಂಬಾ ಒಳ್ಳೆಯ ಅನುಭವ ಕೊಡುತ್ತಿತ್ತು. ನಾವು ಉಜಿರೆಯ ಸುತ್ತಮುತ್ತ ಇರುವ ಪ್ರದೇಶಗಳಿಗೆ ಹೋಗುವಾಗ, ಸುಮಾರು 10ಕಿಮೀಯಷ್ಟು ಸೈಕಲಿನಲ್ಲಿಯೇ ಹೋಗುತ್ತಿದ್ದೆವು. 

ಈ ಸೈಕಲಿಂಗ್ ನಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದೇ ಮುಖ್ಯ ಎನಿಸಿಕೊಳ್ಳುತ್ತದೆ. ಅಲ್ಲದೆ ಇಂದಿನ ದಿನಗಳಲ್ಲಿ ಸೈಕಲ್ ಬಳಕೆ  ಹೆಚ್ಚಾಗಿಯೇ ಇದೆ. ಇಂದು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸರ್ಕಾರದಿಂದ ಸೈಕಲನ್ನು ಕೊಡುತ್ತಿದ್ದಾರೆ.

ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಸೈಕಲ್ ಬಳಕೆ ಮಾಡುತ್ತಿದ್ದಾರೆ, ಇನ್ನು ಕೆಲವರು ಪರಿಸರ ಸ್ನೇಹಿತರು ಸೈಕಲ್ ಅನ್ನು ಬಳಕೆಮಾಡುತ್ತಿದ್ದಾರೆ. ಕೆಲವರು ತಮ್ಮ  ಹವ್ಯಾಸಕ್ಕಾಗಿ ಸೈಕಲ್ ಅನ್ನು ಬಳಸುತ್ತಿದ್ದಾರೆ. ತಮ್ಮ ಟ್ರಕ್ಕಿಂಗ್, ಅಡ್ವೆಂಚರಿಂಗ್ ಗಾಗಿ ಸೈಕಲ್ ಅನ್ನು ಬಳಸುತ್ತಿದ್ದಾರೆ. ಹೀಗೆ ಇಂದಿನ ಕಾಲದಲ್ಲಿಯೂ ಒಂದಲ್ಲಾ ಒಂದು ಕಾರಣಕ್ಕಾಗಿ ಈ ಸೈಕಲ್ ಬಳಕೆ ಮಾಡುತ್ತಲೇ ಇದ್ದಾರೆ.

ಅಲ್ಲದೆ ಈ ಸೈಕಲ್ ಅನ್ನುವುದು ನಾವು ಬಳಸುವ ವಾಹನದಲ್ಲಿನ ಒಂದು ಭಾಗವಾಗಿದೆ. ಇಂದಿನ ದಿನಗಳಲ್ಲಿ ಸೈಕಲ್ನಲ್ಲಿಯೇ ಹಲವಾರು ವಿಧಗಳು ಬಂದಿರುವುದನ್ನು ಕೂಡ ಗಮನಿಸಬಹುದಾಗಿದೆ.  ಹೇಗೆ ಕಾಲ ಬದಲಾದಂತೆ ನಾವು ಬಳಸುವ ವಾಹನಗಳಲ್ಲಿ ಬದಲಾವಣೆಗಳು ಕಂಡುಬಂದವೋ, ಹಾಗೆ ಸೈಕಲ್ನಲ್ಲಿಯೂ  ಬದಲಾವಣೆಗಳಾಗಿದೆ.

ಈ  ಸೈಕಲ್ ಅನ್ನು ಒಂದು ನಮ್ಮ ಬಳಕೆಗಾಗಿ, ಇನ್ನೊಂದು ಟೆಕ್ನಿಕಲ್ ಕಾರಣಕ್ಕಾಗಿ ಬಳಸಲಾಗುತ್ತಿದೆ. ಇಂದಿನ ಪ್ರಸ್ತುತ ದಿನಗಳಲ್ಲಿ e ಸೈಕಲ್ ಕೂಡ ಬಂದಿದೆ . ಅದರಲ್ಲಿ ಬ್ಯಾಟರಿ ಪವರ್ ಮತ್ತು ಮ್ಯಾನುವಲ್ ಪವರ್ ಇರುವುದು ಕೂಡ ಗಮನಿಸಬಹುದಾಗಿದೆ. ಹೀಗೆ ಟೆಕ್ನಾಲಜಿ ಸಂಬಂಧಿಸಿದಂತೆ ಇವತ್ತು ಸೈಕಲ್ನಲ್ಲಿ ಹಲವಾರು ಬದಲಾವಣೆಗಳು ಉಂಟಾಗಿದೆ.

ನಾವು ಸೈಕಲ್ ಅನ್ನು ಓಡಿಸುವಾಗ ಕೆಲವೊಮ್ಮೆ ನಮ್ಮ ಪರಿಸ್ಥಿತಿ ಯಾರಿಗೂ ಬೇಡವೆಂದು  ಎನ್ನಿಸುತ್ತಿತ್ತು.  ಅದರಲ್ಲಿ ಒಂದನ್ನು ಹೇಳುವುದಾದರೆ  ನಾನು ಶಾಲೆಗೆ ಹೋಗುವಾಗ ಮನೆಯಿಂದ ಹಾಲಿನ ಕ್ಯಾನ್ ತೆಗೆದುಕೊಂಡು ಹೋಗಬೇಕಿತ್ತು,  ಇನ್ನೊಂದು ಕಡೆ ಜೋರಾಗಿ ಮಳೆ ಬರುತಿತ್ತು, ಒಂದು ಕೈಯಲ್ಲಿ ಹಾಲಿನ ಕ್ಯಾನ್  ಇನ್ನೊಂದು ಕೈಯಲ್ಲಿ ಛತ್ರಿ ಹಾಗೆ ಆ ಸೈಕಲ್ ಅನ್ನು ಎಲ್ಲಿಯೂ ಬೀಳಿಸಿಕೊಳ್ಳದೆ, ನಾನು ಬೀಳದೆ ಸರಿಯಾಗಿ ಹೋಗಬೇಕಿತ್ತು. ಆಗದು ಧರ್ಮಸಂಕಟವೆನಿಸಿದರು ಈಗ ಅದು ತುಂಬಾ ತಮಾಷೆಯಾಗಿ ಕಾಣುತ್ತದೆ. 

ಒಂದು ಸಲ ನಾನು  ಬೇಸಿಗೆಗಾಲದಲ್ಲಿ ಸೈಕಲಿನಲ್ಲಿ ಕಾಲೇಜಿಗೆ ಹೋಗಿದ್ದೆ. ಅವತ್ತು ನಾನು ಅಪರಾಹ್ನದ ಕ್ಲಾಸ್ ತೆಗೆದುಕೊಳ್ಳಬೇಕಾಗಿತ್ತು, ಆಗ ತಾನೆ ನಾನು ಆ ಬಿಸಿಲಿನಲ್ಲಿ ಸೈಕಲನ್ನು ಓಡಿಸಿ ತರಗತಿಯ ಒಳಗಡೆ ಬಂದರೆ, ನನ್ನ ಬೆವರಿದ ಮುಖವನ್ನು ನೋಡಿ ಒಂದು ಹುಡುಗಿ ಟಿಶ್ಯೂ ಪೇಪರನ್ನು ಕೊಟ್ಟು ಮುಖವನ್ನು ಒರೆಸಿಕೊಳ್ಳುವಂತೆ ಹೇಳಿದ್ದಳು. ಹೀಗೆ ಈ ಬೈಸಿಕಲ್ ನಿಂದ ಹಲವಾರು  ಅನುಭವಗಳು ನನಗಾಗಿದೆ.  

ನಾನು ಕಾಲೇಜಿಗೆ ಹೋಗುವಾಗ ಬೈಸಿಕಲ್ ಅನ್ನು ತೆಗೆದುಕೊಂಡು ಹೋಗುವುದರಿಂದ ಹಲವಾರು ಉಪಯೋಗವಾಗಿದೆ. ಒಂದು ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಲು. ಇನ್ನೊಂದು ಪರಿಚಿತರು ನಮ್ಮನ್ನು ಮಾತನಾಡಿಸಿದಾಗ ಆರಾಮಾಗಿ ಬೈಸಿಕಲ್ ತುಳಿಯುತ್ತ ಅಥವಾ ತಳ್ಳುತ್ತಾ ಅವರ ಜೊತೆ ಮಾತನಾಡಬಹುದು. ಇದು ಮತ್ಯಾವ ವಾಹನ ಬಳಸಿದರೂ ಸಾಧ್ಯವಿಲ್ಲ. ಕಾಲೇಜಿಗೆ ಮಳೆಗಾಲದಲ್ಲಿ ಸೈಕಲ್ ಅನ್ನು ತರುವುದು ಸ್ವಲ್ಪ ಕಷ್ಟ. ಅದನ್ನು ಬಿಟ್ಟರೆ ಮತ್ತೆ ಎಲ್ಲಾ ಸಮಯದಲ್ಲಿಯೂ ಸೈಕಲ್ಲೇ ನನಗೆ ಒಳ್ಳೆಯ ಸಂಗಾತಿ. 

ಹಾಗಾಗಿ ನೀವು ಕೂಡ ಸೈಕಲ್ ಅನ್ನು ಆದಷ್ಟು ಓಡಿಸಿ. ಅದನ್ನು ಓಡಿಸಿದಾಗ ಸಿಗುವ ಖುಷಿ ಮತ್ತೆಲ್ಲಿಯೂ ಸಿಗಲಾರದು. ಅದೊಂದು ಅದ್ಭುತ ಅನುಭವವೆಂದೇ ಹೇಳಬಹುದು ಎನ್ನುತ್ತಾ ಅದೇ ನಗುಮೊಗದಿಂದ ತಮ್ಮ ಸೈಕ್ಲಿಂಗ್ ಅನುಭವವನ್ನು ಹಂಚಿಕೊಂಡರು ಮೇಷ್ಟ್ರು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Exit mobile version