ವಿಂಗಡಿಸದಸೈಕಲ್ ಹತ್ತು ಊರು ಸುತ್ತು

ಸೈಕಲ್ ಬಾಲ್ಯದ ಗೆಳೆಯ, ಫಿಟ್ ನೆಸ್ ಗುರು: ವಿಶ್ವ ಸೈಕಲ್ ದಿನ ವಿಶೇಷ

ಸೈಕಲ್ ಅಂದ ತಕ್ಷಣ ನೆನಪಾಗೋದು ಚಿಕ್ಕವರಿದ್ದಾಗ ಅಪ್ಪನೊಡನೆ ಕಲಿತು ಆಡಿದ 3 ಗಾಲಿಯ ಸೈಕಲ್. ಸೈಕಲ್ ಕಲಿತು ಶಾಲೆಗೆ ತೆಗೆದೊಯ್ಯುವ ಪರಿಪಾಠದಿಂದ ಇಂದು ದಿನನಿತ್ಯ ಬಳಸುವ ವಾಹನವಾಗಿ ಪರಿವರ್ತಿತಗೊಂಡ ಸೈಕಲ್ ಅನ್ನು ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ, ಅದೊಂದು ಅತ್ಯುತ್ತಮ ಮಾರ್ಗಸೂಚಿ. ಮಾನಸಿಕ, ದೈಹಿಕ ಹಾಗೂ ದೇಹದ ಎಲ್ಲಾ ರೀತಿಯ ಬೆಳವಣಿಗೆಗೆ ಸೈಕ್ಲಿಂಗ್ ಸಹಕಾರಿ. ಈ ಜೂನ್ 3 ರಂದು ವಿಶ್ವ ಸೈಕ್ಲಿಂಗ್ ದಿನದ(world bicycle day) ಅಂಗವಾಗಿ ವಿಶೇಷ ಲೇಖನ.

  • ವಿನಯ ಕುಮಾರ ಪಾಟೀಲ

ಸೈಕ್ಲಿಂಗ್ ಎಂಬುದು ಬರಿಯ ಕ್ರೀಡೆ ಅಲ್ಲದೇ ವಿಶ್ವದಾದ್ಯಂತ ಎಲ್ಲರೂ ಪಾಲಿಸುವ ಒಂದು ಚಲನಾಶೈಲಿ. ಮಾನವನ ಸರ್ವತೋಮುಖ ಬೆಳವಣಿಗೆಗೆ ಸೈಕಲ್ ತುಳಿಯುವುದು ಇಂದಿನ ಜೀವನದಲ್ಲಿ ಅತ್ಯಮೂಲ್ಯ. 

World Bicycle Day Childhood Bestfriend Cycling Health and Fitness

ವಿಶ್ವ ಆರೋಗ್ಯ ಸಂಸ್ಥೆ(WHO) ಯ ಒಂದು ಅಧ್ಯಯನದ ಪ್ರಕಾರ ಹೆಚ್ಚಿನ ಆರೋಗ್ಯ ಸುಧಾರಣೆಗೆ ಸೈಕ್ಲಿಂಗ್ ಒಂದು ಪರಿಣಾಮಕಾರಿ ಮಾರ್ಗ. ಸೈಕಲ್ ತುಳಿಯುವುದರಿಂದ ದೇಹದಲ್ಲಿರುವ ಸಕಲ ಇಂದ್ರಿಯಗಳು ಚಲನೆಗೆ ಒಳಪಟ್ಟು, ಅದರಲ್ಲೂ ಕಾಲಿನ ಸ್ನಾಯುಗಳುಬಲಿಷ್ಠಗೊಂಡು ನಮ್ಮ ಮಾನಸಿಕ ಹಾಗೂ ದೈಹಿಕ ಕಾರ್ಯಗಳಿಗೆ ಉತ್ತೇಜನ ನೀಡುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. 

ಅಷ್ಟೇ ಅಲ್ಲದೇ ಸೈಕ್ಲಿಂಗ್ ನಿಂದ ಪಾರ್ಶ್ವವಾಯು, ಮಧುಮೇಹ ಮತ್ತು ಕೆಲವು ತರಹದ ಕ್ಯಾನ್ಸರ್ ರೋಗಗಳನ್ನು ತಡೆಗಟ್ಟಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ.

ಸರಳ ಸಾರಿಗೆ 

ಪ್ರತಿ ವರ್ಷ ಜೂನ್ 3 ರಂದು ವಿಶ್ವ ಸೈಕ್ಲಿಂಗ್ ದಿನ ಆಚರಣೆ ಬರಿ ಆಚರಣೆಗಷ್ಟೇ ಸೀಮಿತವಾಗದೇ ಜನರು ನಿತ್ಯವೂ ತಮ್ಮ ತಮ್ಮ ದೈನಂದಿನ ಕೆಲಸಕ್ಕೆ ಬಳಸಿ ಅದರ ಉಪಯುಕ್ತತೆಯನ್ನು ಹೆಚ್ಚಿಸಿದ್ದಾರೆ. 

World Bicycle Day Childhood Bestfriend Cycling Health and Fitness

ಇಂದಿನ ಪ್ರಪಂಚದಲ್ಲಿ ಸೈಕ್ಲಿಂಗ್ ಒಂದು ಜನರ ಜೀವನದಲ್ಲಿ ದಿನನಿತ್ಯದ ಕಾಯಕವಾಗಿ ಬಿಟ್ಟಿದೆ. ಬರಿಯ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಮನುಷ್ಯನ ಇಂದ್ರಿಯಗಳ ಬೆಳವಣಿಗೆಗೆ ಇದು ಅತಿ ಉಪಯುಕ್ತವಾದ ಚಟುವಟಿಕೆ.

ನೀವುಇದನ್ನುಇಷ್ಟಪಡಬಹುದು: ಸೈಕಲ್ ಪ್ರಯಾಣ ಪ್ರಯಾಸವಾದಾಗ…

ಇನ್ನು ಇಂದಿನ ಜೀವನದಲ್ಲಿ ಇಂಧನ ದರ ಏರಿಕೆ, ಪರಿಸರ ಮಾಲಿನ್ಯ ಇಂತಹ ಸಮಸ್ಯೆಗಳಿಗೆ ಉತ್ತರ – ಸೈಕ್ಲಿಂಗ್. ವಿಶ್ವ ಸೈಕ್ಲಿಂಗ್ ದಿನದ ಮುಖ್ಯ ಉದ್ದೇಶ ಜನರಿಗೆ ಸರಳ ಮತ್ತು ಸುಸ್ಥಿರವಾದ ಸಾರಿಗೆ ವಿಧಾನವನ್ನು ತಿಳಿಸಿಕೊಡುವುದು.

ದೈನಂದಿನ ನಮ್ಮ ಚಟುವಟಿಕೆಗಳಿಗೆ ಈ ಒಂದು ಸೈಕಲ್ ತುಳಿಯುವ ಚಟವು ಪರಿಸರದ ಮತ್ತು ನಮ್ಮ ಆರೋಗ್ಯಕ್ಕೆ ಅತ್ಯಂತ ಸಹಕಾರಿ. ಚಿಕ್ಕವರಿಂದ ಹಿಡಿದು ದೊಡ್ಡ ಮುದುಕರ ತನಕ ಸೈಕಲ್ ತುಳಿಯುವುದು ಈಗ ಒಂದು ಫ್ಯಾಶನ್. ಥರಥರದ ಸೈಕಲ್ ಗಳು, ಅವಕ್ಕೆ ತಕ್ಕುದಾದ ಗಾಲಿಗಳ ವಿನ್ಯಾಸ, ಸೀಟ್ ಮತ್ತು ಹ್ಯಾಂಡಲ್ ಬಾರ್ ನ ಜೋಡಣೆಯಲ್ಲಿ ವಿಶೇಷತೆ, ವಿಧವಿಧದಬಣ್ಣಗಳು ಇಂದಿನ ಕಾಲದ ಸೈಕಲ್ ನ ಚಿತ್ರಣಗಳು. 

ನಮ್ಮ ಬಾಲ್ಯದ ಜೀವನಕ್ಕೆ ನಾಂದಿ ಹಾಡಿದ್ದೇ ಈ ಸೈಕಲ್ ಎಂಬ ಎರಡು ಗಾಲಿಗಳ ಅದ್ಭುತ ವಾಹನ. ಅದಕ್ಕೂ ಮೊದಲು ಟೈರ್ ಗಳಿಗೆ ಕೋಲನ್ನು ಹಿಡಿದುಕೊಂಡು ಬೆನ್ನಟ್ಟಿ, ಒಂದೇ ಗಾಲಿಯ ವಾಹನವನ್ನು ಬ್ಯಾಲೆನ್ಸ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡು, ಮುಂದೇ ಅದೇ ಕಲೆಯನ್ನು ಎರಡು ಗಾಲಿಗಳ ಸೈಕಲ್ ಕಲಿಯುವಾಗ ಬ್ಯಾಲೆನ್ಸ್ ತಪ್ಪಿ ಬಿದ್ದು ಕೈಗಳಿಗೆ ಪೆಟ್ಟು ಮಾಡಿಕೊಂದ ನೆನಪು, ಮೊದಲ ಸಲ ಯಾರ ಸಹಾಯವೂ ಇಲ್ಲದೇ ಕಲಿತಾದ ಆದ ಅತೀವ ಆನಂದದ ಚಿತ್ರಣ ಇನ್ನೂ ಕಣ್ಣ ಮುಂದೆ ಕಟ್ಟಿದೆ. ಇದೆಲ್ಲ ಶುರುವಾದದ್ದು ಅಪ್ಪ ನಮಗೆ ನಮ್ಮ ಮೊದಲ ಸೈಕಲನ್ನು ಕೊಡಿಸಿ, ಅದನ್ನು ತುಳಿಯಲು ಕಲಿಸಿ ಅದರಲ್ಲೇ ತನ್ನ ಬಾಲ್ಯವನ್ನು ಸವೆಸಿದ ನೆನಪನ್ನು ಕಂಡಾಗ.

ಬಾಲ್ಯ ಗೆಳೆಯ

ಶಾಲೆಯಲ್ಲಿ ಪ್ರಾಥಮಿಕ ಹಂತ ಮುಗಿಸಿ ಇನ್ನೇನು 5ನೇ ಕ್ಲಾಸ್ ಸೇರುತ್ತಿದ್ದಂತೆ ಮನೆಯಲ್ಲಿ ಹಟ ಮಾಡಿ ಶಾಲೆಗೆ ಸೈಕಲ್ ತೆಗೆದುಕೊಂಡು ಹೋಗಿ, ಅದನ್ನು ಗೆಳೆಯರಿಗೆಲ್ಲ ತೋರಿಸಿ ಅವರಿಗೆಲ್ಲ ಸೈಕಲ್ ಹುಚ್ಚು ಹಿಡಿಸಿದನೆನಪುಗಳು ಇಂದಿಗೂ ಜೀವಂತ. ಮಧ್ಯಾಹ್ನ ಊಟಕ್ಕೆಂದು ಹೊರಗೆ ಬಂದಾಗ ಸ್ಟ್ಯಾಂಡ್ ಹತ್ತಿರ ಹೋಗಿ ನನ್ನ ಸೈಕಲ್ ಪಕ್ಕ ಕುಳಿತು ಉಂಡ ನೆನಪು. 

World Bicycle Day Childhood Bestfriend Cycling Health and Fitness

ಶಾಲೆ ಬಿಟ್ಟ ತಕ್ಷಣ ಓಡಿ ಹೋಗಿ ಗೆಳೆಯನೊಡನೆ ಸೈಕಲ್ ಆಡಿ, ಮನೆಗೆ ಬಂದ ಸವಿನೆನಪು. ಬಂದು ಸುಮ್ಮನಿರದೇ ತಿಂಡಿ ತಿಂದು, ಮತ್ತೆ ಮಳ್ಳರ ಹಾಗೆ ಮನೆಯವರ ಕಣ್ತಪ್ಪಿಸಿ, ಮನೆಹತ್ತಿರವಿದ್ದ ಗೆಳೆಯರೊಡನೆ ಮತ್ತೆ ಸೈಕಲ್ ರೇಸ್ ಆಡಿದ ಕುರುಹು.

ಈ ಎಲ್ಲ ನೇಹ ನೆನಹುಗಳ ನಡುವೆ ಬೆತ್ತಲೆಯಾಗಿ ಮನೆಯ ಮೂಲೆಯಲ್ಲಿ ನಿಂತ ಸೈಕಲ್ ಎಂಬ ನೆನಪುಗಳಬುತ್ತಿಯನ್ನು ನೋಡಿ, ಕಣ್ಣಲ್ಲಿ ಆ ನೆನಹುಗಳು ಹನಿಗಳಾಗಿತೊಟ್ಟಕ್ಕಿ ಮತ್ತೊಮ್ಮೆ ಆ ಸುಂದರ ಜಗತ್ತಿನೊಡನೆ ಬೆಸೆಯುವ ಆಸೆ ಚಿಗುರೊಡೆಯುವ ಅನುಭವ. 

ಸವಿ ಸವಿ ನೆನಪು

ಈ ಸುಮಧುರ ನೆನಪುಗಳ ಉಯ್ಯಾಲೆಯಲ್ಲಿ ತೇಲುತ್ತ ಕುಳಿತು ಸುಯ್ಯನೆ ಮತ್ತೆ ಶಾಲೆಗೆ ಓಡುವ ಕನಸು ಇಂದು ಹಚ್ಚಹಸುರಾಗಿ ನಿಂತಿದೆ. ಓಡುವ ಜಗತ್ತಿಗೊಂದೆರಡು ಚಕ್ರಗಳ ಕಟ್ಟಿ ರಸ್ತೆಗೆ ಬಿಟ್ಟಾಗ, ಬೀಸುವ ತಂಗಾಳಿಗೆ ಮೈಯೊಡ್ಡಿ ತಲೆಗೂದಲುಗಳ ಹಾರಾಟದೊಡನೆ ಹಾರಾಡುವ ಕನಸೊಂದು ಇಂದು ಚಿಗುರಾಗಿ ನಿಂತಿದೆ. 

ಮನೆಯ ಪಕ್ಕದ ವಠಾರದಲ್ಲಿ ಹತ್ತಾರು ಸಲ ರಸ್ತೆಗೆ ಬಿದ್ದು, ಆದ ಗಾಯದ ಕುರುಹುಗಳು ಈಗ ಮೂಡಿದ ನೆನಪುಗಳ ಕಲೆಗಳಾಗಿ ಮಾರ್ಪಟ್ಟಿವೆ. ಎರಡು ಗಾಲಿಗಳ ಈ ವಾಹನವನ್ನು ಕಾಲನ ಓಟಕ್ಕೆ ಸಿಲುಕಿಸಿ, ಕೈ ಎಂಬ ಹ್ಯಾಂಡಲ್ ಗಳನ್ನು ಕೊಟ್ಟು, ಮನದ ಮೂಲೆಯಲ್ಲಿ ಗರಿಗೆದರಿದ ಸ್ವಪ್ನಕ್ಕೊಂದು ಆಸನ ಹಾಕುವ ಆಸೆ.

World Bicycle Day Childhood Bestfriend Cycling Health and Fitness

ಸೈಕಲ್ ಎಂಬುದು ದೇಹ ಮತ್ತು ಪರಿಸರಕ್ಕೆ ಉಪಯುಕ್ತವಷ್ಟೇ ಅಲ್ಲದೇ, ನಮ್ಮ ಜೇಬಿಗೂ ಸಹ ಅತ್ಯಂತ ಹಗುರ.  ಸರಳ ಮತ್ತು ಸುಂದರ ವಿನ್ಯಾಸಗಳ ಸೈಕಲ್ ಗಳು ಇಂದಿಗೂ ಇವೆ. 

ಜೂನ್ 3ರ ವಿಶ್ವ ಸೈಕಲ್ ದಿನ ನಮಗೆ ಬರಿಯ ಒಂದೇ ದಿನದ ಹಾಡಾಗದೇ ವರ್ಷವಿಡೀ ಸೈಕಲ್ ತುಳಿದು, ಆರೋಗ್ಯಕರ ಮನಸ್ಥಿತಿಯನ್ನು ಕಾಪಾಡಿಕೊಳ್ಳೋಣ ಎಂದು ಹಾರೈಸುತ್ತಾ, ಮನದ ಮೂಲೆಯಲ್ಲಿ ಬೆಚ್ಚನೆ ಅಡಗಿ ಕುಳಿತ ಆ ಎರಡು ಗಾಲಿಗಳ ನೆನಪುಗಳನ್ನು ಇಂದು ಹೆಕ್ಕಿತೆಗೆಯೋಣ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button