ನಮ್ಮದಲ್ಲದ ಹೊಸ ಊರಲ್ಲಿ ನಾವು ಬದುಕಬೇಕಾದಾಗ ಆ ಊರನ್ನು ಪ್ರೀತಿಸಬೇಕಾಗುತ್ತದೆ. ಹೀಗೆ ನಾನು ಪ್ರೀತಿಸಿದ ಊರು ಮೈಸೂರು. ಯಾರನ್ನಾದರೂ ಮಾತಾಡಿಸಿದಾಗ, ಇನ್ನೆಲ್ಲಿಗೋ ಹೋದಾಗ ಅಥವಾ ಸುಮ್ಮನೆ ನಡೆದಾಡಿದಾಗಲೂ ಕಥೆಗಳಿಗಾಗಿ ಹುಡುಕಾಡುವ ನನಗೆ ಮೈಸೂರಿನ ಬೀದಿಯಲ್ಲಿ ಸಿಕ್ಕ ಒಂದೆರಡು ಪುಟ್ಟ ಕಥೆಗಳಂಥ ಕಥೆಗಳಿವು.
- ಸುಜಯ್ ಪಿ.
ನಮ್ಮದಲ್ಲದ ಹೊಸ ಊರಲ್ಲಿ ನಾವು ಬದುಕಬೇಕಾದಾಗ ಆ ಊರನ್ನು ಪ್ರೀತಿಸಬೇಕಾಗುತ್ತದೆ. ಹಾಗೆ ಪ್ರೀತಿಸಿದಾಗ ಆ ಊರಿನ ಸದ್ದು ಗದ್ದಲಗಳು ಕೂಡಾ ನಮಗೆ ಇಷ್ಟವಾಗತೊಡಗುತ್ತದೆ. ಎಲ್ಲರಿಗೂ, ಎಲ್ಲಾ ಊರುಗಳೂ ಹೀಗೇ ಎಂದು ನಾನು ಖಂಡಿತವಾಗಿ ಹೇಳಲಾರೆ. ಆದರೆ ನೀವಿರುವ ಊರನ್ನು ಪ್ರೀತಿಸುವುದು ಮಾತ್ರ ನಿಮ್ಮ ಪ್ರೀತಿಪಾತ್ರರನ್ನು ಇಷ್ಟ ಪಡುವಷ್ಟೇ ಅಗತ್ಯ ಮತ್ತು ಅಷ್ಟೇ ಖುಷಿಕೊಡುವ ಸಂಗತಿ ಕೂಡಾ ಎಂದು ಮಾತ್ರ ಗಟ್ಟಿಯಾಗಿ ಹೇಳಬಲ್ಲೆ. ಹೀಗೆ ನಾನು ಪ್ರೀತಿಸಿದ ಊರು ಮೈಸೂರು.
ಯಾರನ್ನಾದರೂ ಮಾತಾಡಿಸಿದಾಗ, ಇನ್ನೆಲ್ಲಿಗೋ ಹೋದಾಗ ಅಥವಾ ಸುಮ್ಮನೆ ನಡೆದಾಡಿದಾಗಲೂ ಕಥೆಗಳಿಗಾಗಿ ಹುಡುಕಾಡುವ ನನಗೆ ಮೈಸೂರಿನ ಬೀದಿಯಲ್ಲಿ ಸಿಕ್ಕ ಒಂದೆರೆಡು ಪುಟ್ಟ ಕಥೆಗಳಂಥ ಕಥೆಗಳಿವು.
ಡ್ರೈವರುಗಳೇ ಇರದ ಸ್ವಯಂಚಾಲಿತ ಕಾರುಗಳು ಕೂಡಾ ರಸ್ತೆಗೆ ಬರುತ್ತಿದೆ ಎಂದು ಸುದ್ದಿಯಿರುವ ಈ ಕಾಲದಲ್ಲಿ ನೀವು ಮೈಸೂರಿನ ರಸ್ತೆಗೆ ಬಂದರೆ ಟಕ್ ಟಕ್ ಟಕ್ ಎಂದು ಸದ್ದು ಮಾಡುತ್ತಾ ಓಡುವ ಕುದುರೆಗಾಡಿಗಳನ್ನು ಕಾಣಬಹುದು.
ನೀವುಇದನ್ನುಇಷ್ಟಪಡಬಹುದು: ಕತೆ ಹೇಳಲು ಜನರಿಲ್ಲ, ಕತೆ ಹೇಳದೆ ಬದುಕಿಲ್ಲ: ಹಂಪಿಯ ಟೂರಿಸ್ಟ್ ಗೈಡ್ ಭಾನು ಪ್ರಕಾಶ್ ಜೀವನ ಚಿತ್ರ
ಆ ಕುದುರೆಗಾಡಿಯಲ್ಲಿ ಕೂತು ಸಂಭ್ರಮಿಸುವ ಪ್ರವಾಸಿಗರ ಒಂದಿಡೀ ಕುಟುಂಬ ಅಥವಾ ಚಂದವಾಗಿ ಸೆಲ್ಫೀ ತೆಗೆದುಕೊಳ್ಳುತ್ತಾ, ಕಾರಣವಿಲ್ಲದೆ ನಗುತ್ತಾ, ಕುದುರೆಗಾಡಿಯ ಓಲಾಟಕ್ಕೆ ಒಬ್ಬರನ್ನೊಬ್ಬರು ಗಟ್ಟಿಯಾಗಿ ಹಿಡಿದಿರುವ ಜೋಡಿಗಳು ಮೈಸೂರಿನ ರಸ್ತೆಯಲ್ಲಿ ಕಂಡೇ ಕಾಣುತ್ತಾರೆ.
ಕೊರೊನಾ ಕಾರಣದಿಂದ ಈಗ ಇವೆಲ್ಲ ತಾತ್ಕಾಲಿಕವಾಗಿ ಸ್ಥಗಿತವಾಗಿರಬಹುದು. ಆದರೂ ಮೈಸೂರಿನ ಪೇಟೆಯ ರಸ್ತೆಗಳಲ್ಲಿ ಕುದುರೆಗಾಡಿಗಳು ಇತಿಹಾಸದ ರಾಯಭಾರಿಗಳಂತೆ ಓಡಾಡುವುದನ್ನು ನೋಡುವುದೇ ಒಂದು ಚಂದ.
ನನಗೂ ಮೈಸೂರಿಗೂ ಈಗ ಮೂರು ವರ್ಷಗಳ ಗೆಳೆತನ. ನಾನು ಮೊದಲೇ ಹೇಳಿದಂತೆ ನಾನಿರುವ ಈ ಊರನ್ನು ಅದಕ್ಕೆ ಗೊತ್ತಾಗದ ಹಾಗೇ ಪ್ರೀತಿಸುತ್ತಲೇ ಇದ್ದೇನೆ.
ಕೊರೋನ ಬರುವ ಮೊದಲು, ಒಂದು ಬುಧವಾರದ ಸಂಜೆ ಯಾವುದೋ ಕಾರಣಕ್ಕೆ ಮೈಸೂರಿನ ಚಿಕ್ಕಗಡಿಯಾರದ ರಸ್ತೆಯಲ್ಲಿ ನಡೆಯುತ್ತಾ ಹೋಗುತ್ತಿದ್ದೆ. ಪೇಟೆಯಲ್ಲಿ ಸಂಜೆಯ ಗದ್ದಲ ಜೋರಾಗಿತ್ತು, ಜನರೆಲ್ಲಾ ಯಾರೋ ಹಿಡಿದು ಎಳೆಯುತ್ತಿದ್ದಾರೋ ಎಂಬ ವೇಗದಲ್ಲಿ ಓಡಾಡುತ್ತಿದ್ದರು.
ರಸ್ತೆ ಬದಿಯಲ್ಲಿದ್ದ ಹಣ್ಣಿನ ವ್ಯಾಪಾರಿಯೊಬ್ಬ ಅದೆಷ್ಟು ಜೋರಾಗಿ ಗಿರಾಕಿಗಳನ್ನು ಕರೆಯುತ್ತಿದ್ದನೆಂದರೆ ಅವನ ಸದ್ದಿಗೆ ಯಾರೂ ಹತ್ತಿರ ಬರುತ್ತನೇ ಇರಲಿಲ್ಲ ಅಷ್ಟು ಜೋರಾಗಿತ್ತು ಅವನ ಕೂಗು. ಒಂದರ್ಥದಲ್ಲಿ ಕಿರಿಚಾಡುತಿದ್ದ.
ಕತ್ತಲಾಗಲು ಇನ್ನೂ ಕೆಲವು ಗಂಟೆಗಳಿತ್ತು. ಅಷ್ಟರಲ್ಲಿ ನಾನು ನಡೆಯತ್ತಿದ್ದ ರಸ್ತೆಯಲ್ಲಿ ವಿಚಿತ್ರವಾದ ಅಲಂಕಾರದೊಂದಿಗೆ ನೋಡಿದೊಡನೆ ಗಮನಸೆಳೆಯುವಂತಿದ್ದ ಕುದುರೆಗಾಡಿಯೊಂದು ಪ್ರವಾಸಿಗರನ್ನು ಕುಳ್ಳಿರಿಸಿಕೊಂಡು ಮುಂದೆ ಸಾಗಿತು.
ಅದರೊಳಗಿನಿಂದ ತೀರಾ ಸಣ್ಣದಾಗಿ ಹಳೆಯ ಹಿಂದಿ ಹಾಡು ಕೇಳುತಿತ್ತು. ಜೊತೆಗೆ ಕುದುರೆ ನಡೆಯುವಾಗ ಬರುವ ಟಕ್ ಟಕ್ ಎಂಬ ಅಚ್ಚುಕಟ್ಟಾದ ಶಬ್ದ. ದೂರದಲ್ಲಿ ಕೇಳುತ್ತಿದ್ದ ಮಾರುಕಟ್ಟೆಯ ಸದ್ದುಗದ್ದಲದ ಮಧ್ಯೆ ಕೂಡ ಈ ಅಲಂಕೃತ ಕುದುರೆಗಾಡಿ ಕೆಲವರ ಕಣ್ಣೋಟವನ್ನು ತನ್ನಡೆಗೆ ಸೆಳೆದುಕೊಂಡು ರಸ್ತೆಯ ತಿರುವಿನಲ್ಲಿ ಮರೆಯಾಯಿತು.
ಕುದುರೆ ನಡೆಯುವಾಗ ಈ ಸದ್ದು ಬರುವುದು ಅದರ ಲಾಳದಿಂದ. ಲಾಳ ಅಂದರೆ ಗೊತ್ತಿರಬಹುದು, ಕುದುರೆಯ ಕಾಲಿನ ಗೊರಸು ಸವೆದು ಹೋಗದಂತೆ ಗೊರಸಿಗೆ ಕೂಡಿಸುವ ಕಬ್ಬಿಣದ ಪಟ್ಟಿ. ಸಮಯದ ಕಳೆದಂತೆ ಓಡಾಟದ ಕಾರಣ ಈ ಕಬ್ಬಿಣದ ಲಾಳವೂ ಸವೆದು ಹೋಗುತ್ತದೆ. ಆಗ ಅದನ್ನು ಬದಲಿಸಿ ಹೊಸ ಲಾಳ ತೊಡಿಸುತ್ತಾರೆ. ಇದು ರೂಢಿ.
ಈಗ ಈ ಕುದುರೆಗಾಡಿಯ ಲಾಳದ ಸದ್ದಿನೊಂದಿಗೆ ಹೊಸದೊಂದು ಕತೆ ನೆನಪಾಯಿತು. ಸವೆದು ಹೋದ ಕುದುರೆ ಲಾಳ ಅದೃಷ್ಟದ ಸಂಕೇತ ಎಂದು ನನ್ನೂರು ಪುತ್ತೂರಿನಿಂದ ಗೆಳೆಯರೊಬ್ಬರು ಕರೆ ಮಾಡುವವರೆಗೆ ನನಗೆ ಗೊತ್ತೇ ಇರಲಿಲ್ಲ.
ಅವರು ಹೊಸದೊಂದು ಬಸ್ಸು ಖರೀದಿಸಿದ್ದರು. “ಬಸ್ಸಿನ ಎದುರುಗಡೆ ಸವೆದ ಕುದುರೆಯ ಲಾಳ ಇಟ್ಟರೆ ಒಳ್ಳೆಯದಂತೆ, ದೃಷ್ಟಿ ಆಗುವುದಿಲ್ಲ ಮೈಸೂರಿನಲ್ಲಿ ಕುದುರೆಗಾಡಿಗಳು ಹೆಚ್ಚು ಇರುವುದರಿಂದ ಲಾಳ ಸಿಗಬಹುದು, ಸಿಕ್ಕರೆ ಪುತ್ತೂರಿಗೆ ಕಳುಹಿಸಿಕೊಡಬಹುದಾ?” ಎಂದು ಕರೆ ಮಾಡಿದ್ದರು.
ಕರೆ ಮಾಡಿದವರು ನನ್ನ ಹತ್ತಿರದ ಗೆಳೆಯರು. ಮರುದಿನವೇ ನಾನು ಸವೆದುಹೋದ ಕುದುರೆಯ ಲಾಳ ಹುಡುಕಿ ಹೋಗಿದ್ದೆ.
ನನಗೆ ಸಿಕ್ಕ ಒಬ್ಬಾತನಂತೂ ಹೊಸ ಲಾಳಕ್ಕಿಂತಲೂ ಸವೆದು ಹೋದ ಲಾಳವೇ ಹೆಚ್ಚು ದುಬಾರಿ, ಅದನ್ನು ಖರೀದಿಸಲು ತುಂಬಾ ಜನ ಕಾಯುತ್ತಿದ್ದಾರೆ ಎಂದು ಕೆಲವು ಕಥೆಗಳನೆಲ್ಲಾ ಹೇಳತೊಡಗಿದ. ಲಾಳ ಎಲ್ಲಿದೆ ಎಂದರೆ ಗಾಡಿ ಹತ್ತಿ ಕರೆದುಕೊಂಡು ಹೋಗುತ್ತೇನೆ ಎಂದ. ನನಗ್ಯಾಕೋ ಸರಿಬರದೆ ಅವನನ್ನು ಅಲ್ಲೇ ಬಿಟ್ಟು ಕುದುರೆಗಾಡಿಯ ಕುದುರೆಗಳನ್ನು ಕಟ್ಟಿ ಹಾಕುವ ಸ್ಥಳಕ್ಕೇ ಹೋದರೆ ಅಲ್ಲಿ ಸಿಕ್ಕವನು, “ಕುದುರೆ ಲಾಯದೊಳಗೆ ಲಾಳವನ್ನು ಮಾರುವಂತಿಲ್ಲ, ನನ್ನ ಜೊತೆ ಬನ್ನಿ.” ಎಂದು ತನ್ನ ಚೇತಕ್ ಸ್ಕೂಟರಿನಲ್ಲಿ ಒಂಚೂರು ದೂರ ಕರೆದೊಯ್ದು, ಸವೆದುಹೋದ ಲಾಳವೊಂದನ್ನು ಕೈಗಿಟ್ಟ.
ಅವನ ಜೊತೆಗೊಂದಷ್ಟು ಚೌಕಾಶಿ ಮಾಡಿ ಖರೀದಿಸಿ, ಲಾಳವನ್ನು ಮೈಸೂರಿನಿಂದ ಪುತ್ತೂರಿಗೆ ಹೋಗುವ ಕೆಎಸ್ಸಾರ್ಟಿಸಿ ಬಸ್ಸೊಂದರಲ್ಲಿ ಹಾಕಿ ಕಳಿಸಿದ್ದೆ. ಲಾಳ ಪಡೆದುಕೊಂಡ ಅವರು ತುಂಬಾ ಖುಷಿಪಟ್ಟರು.
ಊರಿಗೆ ಹೋದಾಗ ಅವರ ಹೊಸ ಬಸ್ಸಿನ ಎದುರುಗಡೆ ಅದನ್ನು ಜೋಡಿಸಿದ್ದರು. ನೋಡಿ ನಾನೂ ಖುಷಿಪಟ್ಟಿದ್ದೆ. ಕುದುರೆಯ ಲಾಳದ ಸದ್ದು ಇಷ್ಟೆಲ್ಲಾ ಘಟನೆಗಳನ್ನು ನೆನಪಿಸಿತು. ಈಗ ಮತ್ತೆ ಚಿಕ್ಕಗಡಿಯಾರದ ರಸ್ತೆಗೆ ಬನ್ನಿ.
ನಾನಿನ್ನೂ ನಡೆಯುತ್ತಲೇ ಇದ್ದೆ. ಅಷ್ಟರಲ್ಲಿ ಐವತ್ತರ ಮೇಲೆ ವಯಸ್ಸಾದ ಹಿರಿಯರೊಬ್ಬರು ಹತ್ತಿರ ಬಂದು ಮಾತನಾಡಲು ಮುಂದಾದರು. ಅವರು ಸಣ್ಣ ಸಮಸ್ಯೆಯೊಂದನ್ನು ಪರಿಹರಿಸಿಕೊಡಲು ನನ್ನನ್ನು ತಡೆದಿದ್ದು. ಅವರ ಮಾತು ಹೀಗಿತ್ತು, “ನನ್ನ ವಾಟ್ಸಾಪಿನಲ್ಲಿ ಹುಡುಗಿಯ ಫೋಟೋ ಇದೆಯಂತೆ, ಹೆಂಡತಿ ಕರೆಮಾಡಿ ಬೈಯುತ್ತಿದ್ದಾಳೆ, ಎಲ್ಲಿದೆಯೋ ಗೊತ್ತಿಲ್ಲ ಒಮ್ಮೆ ತೆಗೆದುಕೊಡಿ.”
ನನಗೆ ಅರ್ಥವಾಗಿಬಿಟ್ಟಿತು, ಮೊಬೈಲು ನನ್ನ ಕೈಗಿತ್ತರು. ಅವರ ‘ವಾಟ್ಸಾಪ್’ ತೆರೆದು ನೋಡಿದರೆ, ‘ಸ್ಟೇಟಸ್’ನಲ್ಲಿ ಹುಡುಗಿಯೊಬ್ಬಳು ನಗುತ್ತಾ ನಿಂತಿದ್ದಳು. ತೋರಿಸಿದೆ, ಅವರಿಗೆ ‘ವಾಟ್ಸಾಪ್ ಸ್ಟೇಟಸ್’ ಬಗ್ಗೆ ಗೊತ್ತೇ ಇಲ್ಲ. ಸ್ಟೇಟಸಲ್ಲಿದ್ದ ಪೋಟೋ ಡಿಲೀಟ್ ಮಾಡಿಕೊಟ್ಟೆ. ಸಮಾಧಾನಪಟ್ಟರು. ತಂತ್ರಜ್ಞಾನ ತಂದ ಸಣ್ಣದೊಂದು ಅವಾಂತರ ಅದು.
ಸ್ವಲ್ಪ ದೂರ ಅವರೂ ನನ್ನ ಜೊತೆಗೇ ಮಾತನಾಡುತ್ತಾ ನಡೆದರು. ‘ಧರ್ಮರಾಜ’ ಅವರ ಹೆಸರು. ಅವರ ಬಗ್ಗೆ ಇನ್ನೊಂದು ದಿನ ಹೇಳುತ್ತೇನೆ.
ನಡೆಯುತ್ತಾ ಅವರ ಹೆಂಡತಿ ಕರೆ ಮಾಡಿ ಬೈದಿದ್ದನ್ನು ನೆನೆದು ನಗು ಬಂತು. ಈ ಹುಡುಗಿಯರು ಅಜ್ಜಿಯರಾದರೂ ಕೂಡ ತಮ್ಮ ಹುಡುಗ ಬೇರೆ ಹುಡುಗಿಯರನ್ನು ನೋಡಬಾರದು ಎಂಬ ಕಾನೂನನ್ನು ಬದಲಿಸುವುದೇ ಇಲ್ಲವಲ್ಲ ಎಂದೂ ನೆನಪಾಗಿ ಮತ್ತೂ ಜೋರು ನಗು ಬಂತು.
ಸಂಜೆ ಮುಗಿಯುತ್ತಾ ಬಂದಿತ್ತು, ದೂರದಲ್ಲಿ ಚಾಮುಂಡಿ ಬೆಟ್ಟ ಮಿನುಗಲು ಶುರುವಾಗಿತ್ತು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ