ಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವ

ರವೀಂದ್ರನಾಥ ಟಾಗೋರರಿಗೂ ಕಾರವಾರಕ್ಕೂ ಹತ್ತಿರದ ನಂಟು: ಟಾಗೋರ್ ಹುಟ್ಟುಹಬ್ಬ ವಿಶೇಷ

ತಮ್ಮ ಲೇಖನಿಯಿಂದ ನಮ್ಮ ರಾಷ್ಟ್ರಗೀತೆ “ಜನ ಗಣ ಮನ” ಸೃಷ್ಟಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಮುಖ್ಯ ಪಾತ್ರವಹಿಸಿ, ದೇಶದ ಘನತೆಗೆ ಚ್ಯುತಿ ಬಂದಾಗ ತನಗೆ ದೊರಕಿದ ಅತ್ಯುತ್ತಮ ಪ್ರಶಸ್ತಿಯನ್ನು (ನೈಟ್ ವುಡ್ ಪ್ರಶಸ್ತಿ) ಹಿಂದಿರುಗಿಸಿ ಸ್ವಾಭಿಮಾನದ ಕಿಡಿಯನ್ನು ಹೊತ್ತಿಸಿದ ಸ್ಫೂರ್ತಿಯ ಚಿಲುಮೆ ರವೀಂದ್ರನಾಥ ಟ್ಯಾಗೋರ್. ಇಂದು ಈ ಧೀಮಂತ ವ್ಯಕ್ತಿಯ ಹುಟ್ಟುಹಬ್ಬ. ಅವರ ನೆನಪಿನಂಗಳಕ್ಕೆ ಪಯಣ ಬೆಳೆಸಲು ಈ ಬರಹ.

  • ಆದಿತ್ಯ ಯಲಿಗಾರ

ಭಾರತ ಸಾಹಿತ್ಯದ ಗುರುದೇವನೆಂದೆ ಕರೆಯಲ್ಪಡುವ ರವೀಂದ್ರನಾಥ್ ಟ್ಯಾಗೋರ್, ದೇಶ ಕಂಡ ಅಪ್ರತಿಮ ಸಾಹಿತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಕವಿ,ಲೇಖಕ, ನಾಟಕಕಾರ, ವರ್ಣಚಿತ್ರಕಾರನಾಗಿ ಭಾರತೀಯ ಕಲೆಯನ್ನ ವಿಶ್ವದಾದ್ಯಂತ ಪಸರಿಸಿ,ಜಗತ್ತಿನ ಶ್ರೇಷ್ಠ ಪ್ರಶಸ್ತಿಯಾದ ನೊಬೆಲ್ ಪುರಸ್ಕಾರವನ್ನ ಪಡೆದ ಮೊದಲ ಭಾರತೀಯ ಎಂಬ ಶ್ರೇಯಸ್ಸು ಟಾಗೋರರಿಗೆ ಸಲ್ಲುತ್ತದೆ. 

ಬಂಗಾಳದ ಟ್ಯಾಗೋರರಿಗೂ ನಮ್ಮ ಕರ್ನಾಟಕದ ಕಾರವಾರಕ್ಕೂ(Karwar) ಒಂದು ಅವಿನಾಭಾವ ಸಂಬಂಧವಿದೆ. ಇತಿಹಾಸದ ಪ್ರಕಾರ, 1882ರಲ್ಲಿ ರವೀಂದ್ರನಾಥ ‘eಗೋರ್ ಅವರು 22 ವರ್ಷ ವಯಸ್ಸಿನವರಾಗಿರುವಾಗ ಕಾರವಾರ ನಗರದಲ್ಲಿದ್ದರು. ಆ ಸಮಯದಲ್ಲಿ ಅವರು ನಗರದ ಜಿಲ್ಲಾ ನ್ಯಾಯಾಧೀಶರಾಗಿದ್ದ ತಮ್ಮ ಸಹೋದರ ಸತ್ಯೇಂದ್ರನಾಥ ಟ್ಯಾಗೋರ್ ಅವರೊಂದಿಗೆ ವಾಸಿಸುತ್ತಿದ್ದರು. 

Rabindranath Tagore Ravindra Bharathi University

ನಗರದ ಹೃದಯಭಾಗದಲ್ಲಿರುವ, ಸುಂದರವಾದ ಸೂರ್ಯಾಸ್ತಕ್ಕೆ ಸಾಕ್ಷಿಯಾದ ಕಡಲ ತೀರದಲ್ಲಿ ಸುಂದರ ಸಂಜೆಯನ್ನು ಕಳೆಯುತ್ತಿದರು. ಕಾರವಾರದ ಕಡಲಿನ ಮನಮೋಹಕತೆಗೆ ಬೆರಗಾದ ಟಾಗೋರರು ಕಾರವಾರವನ್ನ “ಕರ್ನಾಟಕದ ಕಾಶ್ಮೀರ” ಎಂತೆಂದೆ ಕರೆದರು.

ಜೋರಸಂಕೊ ಠಾಕೂರ್ಬಾರಿ – ರವೀಂದ್ರ ಭಾರತಿ ವಿಶ್ವವಿದ್ಯಾಲಯದ ವಸ್ತು ಸಂಗ್ರಹಾಲಯ

ಕಲ್ಕತ್ತಾ ನಗರದ ಉತ್ತರ ಭಾಗದಲ್ಲಿರುವ ಟಾಗೋರ್ ಅವರ ಮನೆ, ಜೋರಸಂಕೊ ಠಾಕುರ್ಬಾರಿ,(ಠಾಕೂರರ ಮನೆ) ಕಲೆ ಮತ್ತು ಶಿಕ್ಷಣ ಅಭಿವೃದ್ಧಿಯನ್ನ ಕೇಂದ್ರೀಕರಿಸುವ ಪುರಾತನ ಮನೆ ಮತ್ತು ವಸ್ತು ಸಂಗ್ರಹಾಲಯವಾಗಿದೆ. ಪ್ರತಿವರ್ಷ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು, ಕಲಾ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತದೆ. 

ಈ ಕಟ್ಟಡವು 1785ರಲ್ಲಿ ನಿರ್ಮಾಣಗೊಂಡಿದ್ದು, 35,000 ಚದರ ಮೀಟರ್ ವಿಸ್ತಾರವಾದ ಅಗಾಧವಾದ ರಚನೆಯುನ್ನ ಹೊಂದಿದೆ. ಸದ್ಯ ನೊಬೆಲ್ ಪ್ರಶಸ್ತಿ ವಿಜೇತ ಟಾಗೋರರ ಜೀವನ ಮತ್ತು ಕೃತಿಗಳಿಗೆ ಮೀಸಲಾಗಿರುವ ವಸ್ತುಸಂಗ್ರಹಾಲಯವಾಗಿದೆ. ಈ ಠಾಕುರ್ಬಾರಿಯ ಭವ್ಯವಾದ ದ್ವಾರವನ್ನು ಪ್ರವೇಶಿಸಿದಾಗ, ಅಲ್ಲಿನ ದೈತ್ಯ ಮುಂಭಾಗ ಮತ್ತು ಕಟ್ಟಡದ ಗಂಭೀರತೆ ಎಲ್ಲರನ್ನೂ ಅಚ್ಚರಿಗೊಳಿಸುತ್ತದೆ.

Rabindranath Tagore Ravindra Bharathi University

ಟಾಗೋರವರು ಹುಟ್ಟಿ ಬೆಳೆದ ಕೋಣೆಯಿಂದ ಹಿಡಿದು ಅವರು ಕೊನೆಯುಸಿರೆಳೆದ ಕೋಣೆಯವರೆಗೂ ಸಂಚರಿಸಿದಾಗ ಕಟ್ಟಡದ ಮೂಲೆ ಮೂಲೆಗಳಲ್ಲೂ ಅವರ ಬೆರಗಿನ ಕಥೆಗಗಳು ಇನ್ನೂ ಜೀವಂತವಾಗಿವೆ ಏನೋ ಎಂದು ಭಾಸವಾಗುತ್ತದೆ. ವಸ್ತುಸಂಗ್ರಹಾಲಯವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ: ಹಳೆಯದು – ರಾಮ್ ಭವನ, ನಂತರ ಮಹರ್ಷಿ ಭವನ, ಮತ್ತು ಮೂರನೆಯದು ಬಿಚಿತ್ರ ಭವನ.

ನೀವುಇದನ್ನುಇಷ್ಟಪಡಬಹುದು: ಬೆಳ್ಳಂಬೆಳಗ್ಗೆ ಮಟ್ಟು ಬೀಚ್, ಮಧ್ಯಾಹ್ನ ಹೊತ್ತು ಧನುಷ್ ತೀರ್ಥ: ಉಡುಪಿ ಆಸುಪಾಸಲ್ಲಿ ನೀವು ನೋಡಬಹುದಾದ 2 ಸುಂದರ ಜಾಗಗಳು

ರಾಮ್ ಭವನ್

ರಾಮ್ ಭವನದಲ್ಲಿ ಟ್ಯಾಗೋರ್ ಅವರ ಚೀನಾ, ಜಪಾನ್, ಯುಎಸ್ಎ ಮತ್ತು ರಷ್ಯಾ ದೇಶಗಳೊಂದಿಗೆ ಇರುವ ಸಂಬಂಧವನ್ನ ಕಾಣಬಹುದಾಗಿದೆ. ಈ ಕೆಲವು ದೇಶಗಳಿಗೆ ಮೀಸಲಾಗಿರುವ ಪ್ರತ್ಯೇಕ ಗ್ಯಾಲರಿಗಳು ನೋಡುಗರಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸುತ್ತವೆ.ಈ ಗ್ಯಾಲರಿಗಳು ಟ್ಯಾಗೋರ್ ಅವರ ಪ್ರತಿಯೊಂದು ದೇಶಗಳೊಂದಿಗಿನ ಒಳಗೊಳ್ಳುವಿಕೆ ಮತ್ತು ಸಂಬಂಧವನ್ನು ಎತ್ತಿ ತೋರಿಸುತ್ತವೆ. 

Rabindranath Tagore Ravindra Bharathi University

ಯುಎಸ್ ಗ್ಯಾಲರಿಯು ಟಾಗೋರ್ ಅವರು ಯು.ಎಸ್ ಅಲ್ಲಿ ವಾಸವಿದ್ದ ಕೋಣೆಯ ನಿಖರವಾದ ಪ್ರತಿಕೃತಿಯನ್ನು ಹೊಂದಿದೆ. ಟ್ಯಾಗೋರ್ ಅವರ ಹೆಲೆನ್ ಕೆಲ್ಲರ್ ಜೊತೆಗಿನ ಛಾಯಾಚಿತ್ರ, ಅವರು ಯುಎಸ್ ಗೆ ಪ್ರಯಾಣಿಸಿದ ಹಡಗಿನ ಚಿತ್ರ ಮತ್ತು ಅವರು ಅಮೆರಿಕದಲ್ಲಿ ಚಲಿಸಿದ ಕಾರಿನ ಪ್ರತಿಕೃತಿಗಳು ಆಶ್ಚರ್ಯಗೊಳಿಸುತ್ತದೆ . ಚಿಕಿತ್ಸೆಗಾಗಿ ಹಂಗೇರಿಗೆ ಕರೆದೊಯ್ಯುವಾಗ ಆಸ್ಪತ್ರೆಯಲ್ಲಿ ಟ್ಯಾಗೋರ್‌ಗೆ ನೀಡಲಾಗುತ್ತಿದ್ದ ಮೆನು ಸಹ ಹಂಗೇರಿ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಡಲಾಗಿದೆ. ಈ ಮೆನುವಿನಲ್ಲಿ ಅವರಿಗೆ ನೀಡಲಾಗುತ್ತಿದ್ದ,ಕ್ಲಿಯರ್ ಸೂಪ್, ಸ್ಟಫ್ಡ್ ಕೋಲ್ಡ್ ಎಗ್ಸ್, ರೋಸ್ಟ್ ಟರ್ಕಿ, ಮಿಕ್ಸ್ಡ್ ಸಲಾಡ್, ಪಾರ್ಫೈಟ್, ಹಣ್ಣು, ಕಾಫಿ, ಬಿಯರ್, ವೈಟ್ ವೈನ್ ಮತ್ತು ಖನಿಜಯುಕ್ತ ನೀರನ್ನು ಒಳಗೊಂಡಿತ್ತೆಂಬುದರ ಮಾಹಿತಿಯಿದೆ.  

Rabindranath Tagore Ravindra Bharathi University

ಮಹರ್ಷಿ ಭವನ(Mahashi Bhavan)

ವಸ್ತು ಸಂಗ್ರಹಾಲಯದ ಈ ಭಾಗವನ್ನು ರವೀಂದ್ರನಾಥ ಟ್ಯಾಗೋರರ ತಂದೆಯವರಾದ ಮಹರ್ಷಿ ದೇಬೇಂದ್ರನಾಥ ಟ್ಯಾಗೋರ್‌ಗೆ ಸಮರ್ಪಿಸಲಾಗಿದೆ. ಮಹರ್ಷಿ ಭವನವು ಸಹ ಅನೇಕ ಕುತೂಹಲಕರ ಸಂಗತಿಗಳಿಂದ ಕೂಡಿದೆ. ಮೊಟ್ಟ ಮೊದಲಿಗೆ ಇಲ್ಲಿನ ಮೃಣಾಲಿನಿ ದೇವಿಯ (ಟ್ಯಾಗೋರರ ಪತ್ನಿ) ವೈಯಕ್ತಿಕ ಅಡುಗೆಮನೆ ನೋಡುಗರನ್ನು ಸೆಳೆಯುತ್ತದೆ. ದೊಡ್ಡ ಕೋಣೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಜಪಾನೀಸ್ ಶೈಲಿಯ ಕುರ್ಚಿಗಳು ಮತ್ತು ಟೇಬಲ್‌ಗಳಿಂದ ಯೋಜಿಸಲಾಗಿದ್ದು, ಇತರ ಸಂಸ್ಕೃತಿಗಳ ಬಗೆಗಿನ ಟ್ಯಾಗೋರ್‌ ಅವರಿಗೆ ಇರುವ ಒಲವಿನ ನೋಟವನ್ನು ಪರಿಚಯಿಸುತ್ತದೆ. 

ಈ ಭಾಗದ ಮತ್ತೊಂದು ಮುಖ್ಯ ಸೆಳೆತವೆಂದರೆ ಟ್ಯಾಗೋರ್ ಅವರ ಸಂಗೀತ ಕೊಠಡಿ, ಅಲ್ಲಿ ಅವರು ಹಲವಾರು ಹಾಡುಗಳನ್ನು ಸಂಯೋಜಿಸಿದ್ದಾರೆ ಮತ್ತು ಹಾಡಿದ್ದಾರೆ, ಮತ್ತು ಅವರು ಹೆಚ್ಚಿನ ಸಮಯವನ್ನು ಕಳೆದ ಅವರ ಕೋಣೆಯು, ಒಂದು ರೀತಿಯ ವಿಶೇಷ ಸೆಳತವನ್ನು ಹೊಂದಿದೆ. ಟ್ಯಾಗೋರ್ ಅವರ ಜೀವನದಲ್ಲಿ ಕಬಿಗುರು ಬೀರಿದ ಪ್ರಭಾವ ಅವರ ವೈಯಕ್ತಿಕ ವಸ್ತುಗಳ ಮುಖೇನ ಕಾಣಬಹುದು ಮತ್ತು ಈ ವಸ್ತುಗಳನ್ನ ವಸ್ತುಸಂಗ್ರಹಾಲಯವು ಬಹಳ ಎಚ್ಚರಿಕೆಯಿಂದ ಸಂರಕ್ಷಿಸುತ್ತದೆ  

Rabindranath Tagore Ravindra Bharathi University

ಇಲ್ಲಿ ಅಬಾನೀಂದ್ರನಾಥ ಟ್ಯಾಗೋರ್ ಅವರು ಬಳಸಿದ ಪೇಂಟ್‌ಬ್ರಶ್‌ಗಳು ಮತ್ತು ರವೀಂದ್ರನಾಥ್ ಅವರ ಹಲವಾರು ವರ್ಣಚಿತ್ರಗಳು ಇಲ್ಲಿ ಸಂರಕ್ಷಿಸಲ್ಪಟ್ಟಿವೆ.ದೇಬೇಂದ್ರನಾಥ್ ಅವರ ಕೊಠಡಿ, ದ್ವಾರಕಾನಾಥ್ ಅವರ ಕೊಠಡಿ, ಅಬನೀಂದ್ರನಾಥ್ ಅವರ ಕೊಠಡಿ, ಬಂಗಾಳ ನವೋದಯ ಕೊಠಡಿ, ಗ್ರಂಥಾಲಯ ಮತ್ತು ಗುರುದೇವ್ ಕೊನೆಯುಸಿರೆಳೆದ ಕೊಠಡಿಗಳನ್ನು ಸಹ ನಿಗದಿಪಡಿಸಲಾಗಿದೆ. 

ಬಿಚಿತ್ರ ಭವನ

ಬಿಚಿತ್ರ ಭವನದ ಬೃಹತ್ ಸಭಾಂಗಣದಲ್ಲಿ ಟ್ಯಾಗೋರ್ ಅವರು ಸ್ವತಃ ಹಲವಾರು ನಾಟಕಗಳಲ್ಲಿ ಪ್ರದರ್ಶನ ನೀಡಿದ್ದರು. ಟ್ಯಾಗೋರರು ಅಭಿನಯಿಸಿದ “ದಕ್ಘರ್” ನಾಟಕದ ಮೊದಲ ಪ್ರದರ್ಶನಕ್ಕೆ ಮಹಾತ್ಮ ಗಾಂಧೀಜಿ ಸಹ ಬಂದಿದ್ದರೆಂಬುದಕ್ಕೆ ಅಲ್ಲಿನ ಛಾಯಾಚಿತ್ರ ಸಾಕ್ಷಿಯಾಗಿದೆ. ಈ ಸಭಾಂಗಣವು ಟ್ಯಾಗೋರವರ ಅತ್ಯಂತ ಪ್ರಸಿದ್ಧ ಪದ್ಮಾ ದೋಣಿ, ಗಗನ್ ಠಾಕೂರ್ ಅವರ ವರ್ಣಚಿತ್ರಗಳು ಮತ್ತು ಅಬಾನೀಂದ್ರನಾಥ್ ಅವರ ಉಪಯುಕ್ತ ವಸ್ತುಗಳನ್ನು ಒಳಗೊಂಡಿದೆ,ಇದಲ್ಲದೆ, ಬಿಚಿತ್ರ ಭವನದಲ್ಲಿ ಭಾರತೀಯ, ಪಾಶ್ಚಿಮಾತ್ಯ ಮತ್ತು ಆಂಗ್ಲೋ-ಇಂಡಿಯನ್ ಶೈಲಿಗಳಿಂದ ಹಿಡಿದು ಬಂಗಾಳ ಜಿಲ್ಲೆಯ ಸಾಂಪ್ರದಾಯಿಕ ಶಾಲೆಗಳು,ಬಜಾರ್ ಮತ್ತು ಇನ್ನೂ ಅನೇಕ ವರ್ಣಚಿತ್ರಗಳ ಸಂಗ್ರಹವಿದೆ. 

Rabindranath Tagore Ravindra Bharathi University

ಟಾಗೋರ್ ಕುಟುಂಬ ಹೇಗೆ ವಾಸಿಸುತ್ತಿತ್ತು ಎಂಬುದನ್ನು ತೋರಿಸುವ ಪೀಠೋಪಕರಣಗಳು, ಪಾತ್ರೆಗಳು, ಕರಕುಶಲ ಮತ್ತು ಶಿಲ್ಪಕಲೆಗಳಿಂದ ಕೂಡಿದ ದಾಖಲೆಗಳು, ಛಾಯಾಚಿತ್ರಗಳು ಮತ್ತು ಆರ್ಕೈವಲ್ ದಾಖಲೆಗಳವರೆಗೆ (ಪುರಾತನ ದಾಖಲೆಗಳು)ಅಸಂಖ್ಯಾತ ವಸ್ತುಗಳ ವಿಸ್ತಾರವಾದ ಪ್ರದರ್ಶನವಿದೆ. ಟಾಗೋರ್ ಅವರ ಮೊಮ್ಮಗ ದಿನು ಠಾಕೂರ್ ಅವರ ಕೋಣೆಯನ್ನು ಬಿಚಿತ್ರ ಹಾಲ್ಗೆ ಜೋಡಿಸಲಾಗಿದೆ.

ಲೈಟ್ ಅಂಡ್ ಸೌಂಡ್ ಷೋ 

ಜೋರಸಂಕೊ ಠಾಕೂರ್ಬಾರಿ ವಸ್ತು ಸಂಗ್ರಹಾಲಯದಲ್ಲಿ ಟ್ಯಾಗೋರ್ ಅವರ ಕಾಲವನ್ನ ಮತ್ತೆ ಕಲ್ಕಾತಾದ ಹಳೆಯ ದಿನಗಳನ್ನು ಮರುಸೃಷ್ಟಿಸಲು, ಪ್ರತಿ ಸಂಜೆ ಲೈಟ್ ಅಂಡ್ ಸೌಂಡ್ ಶೋ ನಡೆಸಲಾಗುತ್ತದೆ. ಈ ಪ್ರದರ್ಶನ ಟ್ಯಾಗೋರರ ಅಜ್ಜ ದ್ವಾರಕನಾಥ್, ತಂದೆ ದೆಬೆಂದ್ರನಾಥ್ ಅವರನ್ನ ಒಳಗೊಂಡು ರವೀಂದ್ರನಾಥ ಟ್ಯಾಗೋರರವರೆಗಿನ ಕಾಲವನ್ನು ವಿವರಿಸುತ್ತ ಹಳೆಯ ಗತಕಾಲಕ್ಕೆ ಕರೆದೊಯ್ಯುತ್ತದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button