ಇವರ ದಾರಿಯೇ ಡಿಫರೆಂಟುಕಾಡಿನ ಕತೆಗಳುವಿಂಗಡಿಸದಸ್ಫೂರ್ತಿ ಗಾಥೆ

ಮಾಫಿಯಾ ಎದುರು ಹಾಕಿಕೊಂಡು ಪರಿಸರ ರಕ್ಷಿಸಿ ಅಂತಾರಾಷ್ಟ್ರೀಯ ರೇಂಜರ್ ಪ್ರಶಸ್ತಿ ಪಡೆದ ಸಾಹಸಿ ಸತೀಶ್

#ವಿಶ್ವ ಪರಿಸರ ದಿನ ವಿಶೇಷ

ಇಲ್ಲೊಬ್ಬ ಅಧಿಕಾರಿ ಪರಿಸರ ರಕ್ಷಣೆಗಾಗಿ ತನ್ನ ಜೀವನವನ್ನೇ ಮೀಸಲಿಟ್ಟಿದ್ದಾರೆ. ನೂರಾರು ಎಕರೆ ಕಾಡನ್ನು ಅಕ್ರಮಗಳಿಂದ ತಡೆಯಲು ಪ್ರಯತ್ನಪಟ್ಟು ಯಶಸ್ವಿಯಾಗಿದ್ದಾರೆ. ಕಾಡಿನ ಒಡಲಿಗೆ ಕೈ ಹಾಕಿ, ಅಮೂಲ್ಯ ಸಂಪತ್ತನ್ನು ಬಗೆಯಲು ಬಂದ ದುಷ್ಟರನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ. ಥೇಟ್ ಸಿನಿಮಾ ಕಥೆಯಂತೆ ಭಾಸವಾಗುವ ಈ ಘಟನೆ ನಡೆದಿದ್ದು ತಮಿಳುನಾಡಿನಲ್ಲಿ. ಇಂಥ ಜನರು ಇರುವುದರಿಂದಲೇ ಪರಿಸರ ರಕ್ಷಣೆ ಆಗುತ್ತಿದೆ. ಈ ಸತ್ಯಕಥೆ ಪರಿಸರ ದಿನ ವಿಶೇಷ (world environment day)

  • ವರ್ಷಾ ಉಜಿರೆ

ಈ ಕತೆಯ ಹೀರೋ ಎಸ್. ಸತೀಶ್. ರಾಮನಾಥಪುರಮ್ ಅರಣ್ಯ ವ್ಯಾಪ್ತಿಯ ರೇಂಜ್ ಆಫೀಸರ್. ಇವರ ಪರಿಸರದ ಪ್ರೀತಿ, ಅದರ ರಕ್ಷಣೆಗೆ ಕೈಗೊಂಡ ಕ್ರಮಗಳು ಅವರನ್ನು ಹೀರೋ ಆಗುವಂತೆ ಮಾಡಿದೆ. 

ಕೇವಲ ಇಷ್ಟೇ ಅಲ್ಲ, ಬೇಟೆಗಾರಿಕೆ ನಿಷೇಧ, ಆಲಿವ್ ರಿಡ್ಲೆ ಆಮೆಗಳ ಸಂರಕ್ಷಣೆ, ಸಮುದ್ರದಾಳದಲ್ಲಿರುವ ಪ್ಲಾಸ್ಟಿಕ್ ನಿರ್ಮೂಲನೆ, ನೂರು ಎಕರೆ ಮ್ಯಾಂಗ್ರೋವ್ ಕಾಡು ಬೆಳೆಸಿದ್ದು; ಇವೇ ಮುಂತಾದ ಪರಿಸರ ಸ್ನೇಹಿ ಕಾರ್ಯಗಳಿಂದಾಗಿ ಜನಮೆಚ್ಚುಗೆ ಗಳಿಸಿದ್ದಾರೆ 35 ವರ್ಷದ ಈ ಅಧಿಕಾರಿ. 6000 ಚದರ ಅಡಿ ವಿಸ್ತಾರದ ಗಲ್ಫ್ ಆಫ್ ಮನ್ನಾರ್ ಮರೈನ್ ರಾಷ್ಟ್ರೀಯ ಉದ್ಯಾನವನವನ್ನು ಕಾಯ್ದಿರಿಸುವಲ್ಲಿ ಇವರ ಪಾತ್ರ ಮಹತ್ವದ್ದು.

S Sateesh Ramanathapuram Forest Range Officer Tamilunadu Brave and Model Officer

ಇವರ ಈ ಅಮೂಲ್ಯ ಕಾರ್‍ಯಗಳನ್ನು ಗುರುತಿಸಿ ಸ್ವಿಜರ್‌ಲ್ಯಾಂಡಿನ ’ದ ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್’ (the international union for conservation of nature) ಸಂಸ್ಥೆಯು ’ಇಂಟರ್‌ನ್ಯಾಷನಲ್ ರೇಂಜರ್ ಅವಾರ್ಡ್ 2021’ (intl ranger of nature 2021) ಅನ್ನು ನೀಡಿ ಗೌರವಿಸಿದೆ. ಉತ್ತರಾಖಂಡಿನ ರಾಜಾಜಿ ರಾಷ್ಟ್ರೀಯ ಉದ್ಯಾನವನದ ಅಧಿಕಾರಿ ಮಹೇಂದ್ರಗಿರಿ ಅವರ ನಂತರ ಈ ಪ್ರಶಸ್ತಿಗೆ ಭಾಜನರಾದ ಇನ್ನೊಬ್ಬ ಭಾರತೀಯ ಅಧಿಕಾರಿ ಸತೀಶ್. ಇದು ಇವರ ಕಾರ್ಯಗಳ ಫಲಶ್ರುತಿ ಎನ್ನಬಹುದು.

ಅತ್ಯುನ್ನತ ಪ್ರಶಸ್ತಿಗೆ ಭಾಜನರಾದ ಅಧಿಕಾರಿ

ಜಗತ್ತಿನೆಲ್ಲೆಡೆ ಅರಣ್ಯ ಸಂರಕ್ಷಣೆಯ ಸಲುವಾಗಿ ದುಡಿಯುವ ಫಾರೆಸ್ಟ್ ರೇಂಜ್ ಅಧಿಕಾರಿಗಳಿಗೆ ನೀಡುವ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಅವರ ಪರಿಸರ ಸ್ನೇಹಿ ಕಾರ್ಯಗಳನ್ನು ಗುರುತಿಸಲಾಗುತ್ತದೆ. ಈ ಪ್ರಶಸ್ತಿ ವಿಜೇತರಿಗೆ ಸ್ಮರಣಾರ್ಥವಾಗಿ ಮತ್ತು ಅವರ ಸಾಧನೆಯ ಗುರುತಾಗಿ ಸಮವಸ್ತ್ರಕ್ಕೆ ಬ್ಯಾಡ್ಜ್ ಹಾಗೂ $10,000 ನಗದು ಬಹುಮಾನವನ್ನು ನೀಡಲಾಗುತ್ತದೆ. 

ಈ ಪ್ರಶಸ್ತಿಗೆ ಸತೀಶ್ ಅವರ ನಾಮನಿರ್ದೇಶಿಸಿದ್ದು “ವೈಲ್ಡ್‌ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ’ ಸಂಸ್ಥೆಯ ಹಿರಿಯ ವಿಜ್ಞಾನಿ ಕೆ. ಸಿವ ಕುಮಾರ್. ಕಾಡುಪ್ರಾಣಿಗಳ ಸಂರಕ್ಷಣಾ ಕಾರ್ಯಗಳಲ್ಲಿ ಇವರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದರು.

S Sateesh Ramanathapuram Forest Range Officer Tamilunadu Brave and Model Officer

“ಸುಮಾರು ಎರಡು ದಶಕಗಳಿಂದ ನಾನು ಸುಮಾರು 400ಕ್ಕೂ ಹೆಚ್ಚಿನ ಅಧಿಕಾರಗಳೊಂದಿಗೆ ಕೆಲಸ ಮಾಡಿದ್ದೇನೆ. ಸಮುದ್ರದ ಜೀವವೈವಿಧ್ಯಗಳ ರಕ್ಷಣೆ ಕುರಿತು ಮಾರ್ಗದರ್ಶನ ನೀಡಿದ್ದೇನೆ. ಆದರೆ ಸತೀಶ್ ಅವರಂತಹ ಕೆಲವೇ ಕೆಲವು ಅಧಿಕಾರಿಗಳು ಮಾತ್ರವೇ ಕಲಿಯುವ ಉತ್ಸಾಹ ಮತ್ತು ಕಲಿತದ್ದನ್ನು ಜಾರಿಗೆ ತರಲು ಪ್ರಯತ್ನಿಸುತ್ತಾರೆ. ಅಕ್ರಮದ ವಿರುದ್ಧ ಧ್ವನಿಯೆತ್ತುವ, ಅದನ್ನು ನಿರ್ನಾಮ ಮಾಡುವತ್ತ ಅವರ ಪ್ರಯತ್ನ, ತಮ್ಮ ಸಹೋದ್ಯೋಗಿಗಳ ವಿಶ್ವಾಸ ಗೆಲ್ಲುವುದು ಮತ್ತು ಸ್ಥಳೀಯ ಸಮುದಾಯಗಳ ಅಭಿವೃದ್ಧಿ ಈ ಅಂಶಗಳು ನನ್ನನ್ನು ಸೆಳೆದವು’ ಎನ್ನುತ್ತಾರೆ ಸಿವ ಕುಮಾರ್.

ನೀವುಇದನ್ನುಇಷ್ಟಪಡಬಹುದು: ಜಬಾರಾ ಎಂಬ ಹಳ್ಳಿಯನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಿದ ಮಾದರಿ ಐಎಎಸ್ ಅಧಿಕಾರಿ ರಜತ್ ಬನ್ಸಲ್

ಅರಣ್ಯ ಅಧಿಕಾರಿ ಕೆಲಸವೆಂದರೆ ಅದು ಸುಲಭವಲ್ಲ. ಅರಣ್ಯದ ಸಮಸ್ತ ಹೊಣೆಯೂ ಅವರ ಮೇಲಿರುತ್ತದೆ. ಕಾಡಿನ, ಕಾಡುಪ್ರಾಣಿಗಳ ಸಂರಕ್ಷಣೆಗೆ, ಬೇಟೆ, ಮಾಫಿಯಾ ಮುಂತಾದ ಅಕ್ರಮಗಳನ್ನು ತಡೆಹಿಡಿಯುವುದಕ್ಕೆ ಅವರು ತಮ್ಮ ಜೀವವನ್ನೇ ಪಣವಿಡಬೇಕಾಗುತ್ತದೆ. ಸತೀಶ್ ಕೂಡಾ ಇವೆಲ್ಲವನ್ನು ಎದುರಿಸಿದ್ದಾರೆ. ಆದರೆ ಸಮಸ್ಯೆಗಳನ್ನು ಎದುರಿಸುವ ಮತ್ತು ಬಗೆಹರಿಸುವ ಅವರ ವಿಶಿಷ್ಟ ಪ್ರಯತ್ನಗಳಿಂದಾಗಿ ಅದ್ಭುತ ಅಧಿಕಾರಿ ಎನಿಸಿಕೊಂಡಿದ್ದಾರೆ. 

ಕತೆ ಶುರುವಾಗಿದ್ದು ಹೀಗೆ

ಸತೀಶ್ ಬೆಳೆದಿದ್ದು ಎರೋಡ್(erode) ಜಿಲ್ಲೆಯ ತಲವಾಡಿ ಹಳ್ಳಿಯಲ್ಲ್ಲಿ. ಈ ಜಾಗ ಸತ್ಯಮಂಗಲಮ್(sathyamangalam) ವನ್ಯಜೀವಿ ಅಭಯಾರಣ್ಯಕ್ಕೆ ಹೆಸರುವಾಸಿ. ಈ ಅಭಯಾರಣ್ಯದ ಅಂಚಿನ ಪ್ರದೇಶಗಳು ಇವರ ಹಳ್ಳಿಗೆ ಸಮೀಪದಲ್ಲಿತ್ತು. ಹಾಗಾಗಿ ಬಾಲ್ಯದಿಂದಲೇ ಸತೀಶ್, ಅಪರೂಪದ ಪಕ್ಷಿ ಮತ್ತು ಸಸ್ಯ ಪ್ರಭೇದಗಳನ್ನು ಗಮನಿಸುತ್ತಿದ್ದರು. 

ವಿವಿಧ ಪ್ರಭೇದಗಳ ಹೆಸರನ್ನು ಕಲಿಯುವುದು, ಅದರ ಬಗ್ಗೆ ತಿಳಿಯುವುದು ಮತ್ತು ಅರಣ್ಯದೊಳಗೆ ನಡೆಯುವ ಚಟುವಟಿಕೆಯ ಆಕರ್ಷಕ ಕಥೆಗಳನ್ನು ಅಧಿಕಾರಿಗಳ ಬಳಿ ಕೇಳುವುದು ಅವರ ಮೆಚ್ಚಿನ ಹವ್ಯಾಸವಾಗಿತ್ತು. 

ತಮ್ಮ ಪಿಯುಸಿ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ, ತಾವು ಇಷ್ಟಪಟ್ಟಂತೆ 2004ರಲ್ಲಿ ಮೆಟ್ಟುಪಾಳ್ಯಂನ ಫಾರೆಸ್ಟ್ ಕಾಲೇಜ್ ಆಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ಸೇರಿಕೊಂಡರು. ನಂತರ ಎನ್ವಿರಾನಮೆಂಟ್ ಸೈನ್ಸ್ ವಿಷಯದಲ್ಲಿ ಎಂ.ಎಸ್ಸಿಯನ್ನು ಪೂರೈಸುತ್ತಾರೆ. ಇದರ ಬಳಿಕ ಯು.ಪಿ.ಎಸ್.ಸಿ ಪರೀಕ್ಷೆಗೆ ತಯಾರಿ ಆರಂಭಿಸುತ್ತಾರೆ. 

ಸತತ ಎರಡು ಪ್ರಯತ್ನಗಳಲ್ಲಿ ಸೋತ ಬಳಿಕ, 2011ರಲ್ಲಿ ತಮಿಳುನಾಡು ಸಿವಿಲ್ ಸರ್ವೀಸ್ ಪರೀಕ್ಷೆಗೆ ತಯಾರಿ ಆರಂಭಿಸುತ್ತಾರೆ. ನಾಲ್ಕು ವರ್ಷಗಳ ಬಳಿಕ ಫಾರೆಸ್ಟ್ ರೇಂಜ್ ಆಫೀಸರ್ ತರಬೇತಿ ಪಡೆಯುತ್ತಾರೆ ಮತ್ತು 2016ರಲ್ಲಿ ರೇಂಜ್ ಆಫೀಸರ್ ಆಗಿ ಸೇವೆ ಆರಂಭಿಸುತ್ತಾರೆ. 

S Sateesh Ramanathapuram Forest Range Officer Tamilunadu Brave and Model Officer

ಅರಣ್ಯ ವಲಯದಲ್ಲಿ ಅಸ್ತಿತ್ವದಲ್ಲಿರುವ ನೂರಾರು ಸಮಸ್ಯೆಗಳಲ್ಲಿ, 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್ 1ರ ಅಡಿಯಲ್ಲಿ ಪಟ್ಟಿ ಮಾಡಲಾದ ಸಮುದ್ರ ಪ್ರಾಣಿಗಳಾದ ಸಮುದ್ರ ಸೌತೆಕಾಯಿಯ ಅಕ್ರಮ ಕಳ್ಳಸಾಗಾಣಿಕೆ ಮತ್ತು ಬೇಟೆಯನ್ನು ತಡೆಯುವತ್ತ ಮೊದಲು ಕೆಲಸ ಮಾಡುತ್ತಾರೆ. ಇದಕ್ಕೆ ಲಕ್ಷಾಂತರ ರೂಪಾಯಿ ಬೆಲೆಯಿದ್ದು, ಸೌತ್ ಏಷಿಯಾ ಭಾಗಗಳಲ್ಲಿ ಆಹಾರ ಮತ್ತು ಔಷಧಿಗಾಗಿ ಇದನ್ನು ಬಳಸಲಾಗುತ್ತದೆ. ಇದು ಕಾಮೋತ್ತೇಜಕವೂ ಆದ ಕಾರಣ ಇದಕ್ಕೆ ಮಾರುಕಟ್ಟೆ ಜಾಸ್ತಿ. 

ಸಾಹಸಗಾಥೆ

“ಇದನ್ನು ಸಾಬೀತುಪಡಿಸಲು ನಮಗೆ ಸಾಕ್ಷಿಯ ಅಗತ್ಯವಿತ್ತು. ಇದಕ್ಕಾಗಿ ಇಡೀ ಅರಣ್ಯ ಇಲಾಖೆ ಹಗಲಿರುಳೆನ್ನದೆ ದುಡಿದಿದೆ. ನಮ್ಮ ಸತತ ಪ್ರಯತ್ನದ ಹೊರತಾಗಿಯೂ ಕಿಂಗ್‌ಪಿನ್‌ಗಳು ವಾಡಿಕೆಯಂತೆ ಕಳ್ಳಸಾಗಾಣಿಕೆ ಮಾಡುತ್ತಿದ್ದರು. ಸಮುದ್ರ ಸೌತೆಕಾಯಿಗಳ ರಕ್ಷಣಾ ಕಾರ್ಯಕ್ಕಾಗಿ, ಹೆದ್ದಾರಿ ಗಸ್ತು (ಹೈವೇ ಪ್ಯಾಟ್ರೋಲ್) ಸಹಾಯದಿಂದಾಗಿ 100ಕ್ಕೂ ಹೆಚ್ಚು ಬೇಟೆಯ ಪ್ರಯತ್ನಗಳನ್ನು ತಡೆದಿದ್ದೇವೆ ಮತ್ತು ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ಈ ಕಳ್ಳಸಾಗಾಣಿಕೆ ನಡೆಯುವ ನಾಲ್ಕು ಪ್ರಮುಖ ಜಾಗಗಳನ್ನು ಗುರುತಿಸಿ, ಅಲ್ಲಿ ಭದ್ರತೆಯನ್ನು ಹೆಚ್ಚಿಸಿ, 25 ಅರಣ್ಯ ಅಧಿಕಾರಿಗಳ ತಂಡವನ್ನು ನೇಮಿಸಿದ್ದೇವೆ’ ಎನ್ನುತ್ತಾರೆ ಸತೀಶ್.

“ಅಪರಾಧಿಗಳ ವಿರುದ್ಧ 70 ಕೇಸುಗಳನ್ನು ದಾಖಲಿಸಿದ್ದೇವೆ. ಇದಲ್ಲದೇ, ಸಮುದ್ರ ಸೌತೆಗಳ ಚಲನವಲನಗಳನ್ನು ಗಮನಿಸಲು ಮೀನುಗಾರರ ಮತ್ತು ಸ್ಥಳೀಯರ ನೆರವು ಕೋರಿದ್ದು, ಕಾರನಕಾಡು ಸಮುದಾಯ ಆಧಾರಿತ ಪರಿಸರ ಪ್ರವಾಸೋದ್ಯಮದ ಅಡಿಯಲ್ಲಿ ಉದ್ಯೋಗ ಸೃಷ್ಟಿಸಿದ್ದೇವೆ’ ಎಂದು ಕಾಡು ಮತ್ತು ಜೀವ ವೈವಿಧ್ಯಗಳನ್ನು ರಕ್ಷಿಸುವಲ್ಲಿ ತಮ್ಮ ಮತ್ತು ಸಹೋದ್ಯೋಗಿಗಳ ಪ್ರಯತ್ನವನ್ನು, ಗೆಲುವನ್ನು ಹೆಮ್ಮೆಯಿಂದ ಹೇಳುತ್ತಾರೆ ಸತೀಶ್. 

ಸಮುದ್ರ ಸೌತೆಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮೇಲೆ ಸತೀಶ್ ಅವರಿಗೆ ಇಂತಹ ಯೋಜನೆಗಳಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವ ಮನಸ್ಸಾಗುತ್ತದೆ. ಹೀಗಾಗಿ ಮುಂದೆ ಸಮುದ್ರ ದನ ಅಥವಾ ಡುಗಾಂಗ್ ಇದರ ರಕ್ಷಣೆಗೆ ತೊಡಗುತ್ತಾರೆ. ಇದು ಅಳಿವಿನಂಚಿನಲ್ಲಿರುವ ಪ್ರಭೇದವಾಗಿದ್ದು, ಈ ಜೀವಿಯು ಹವಾಮಾನ ಬದಲಾವಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. 

Sea Cow Dugang sea grass Local Marine Ambassador Ramanathapuram Forest Range

ಡುಗಾಂಗ್ ಸೀಗ್ರಾಸ್ ಅಂದರೆ ಸಮುದ್ರ ದನದ ಆಹಾರ ಹುಲ್ಲುಗಾವಲುಗಳಲ್ಲಿ ಬೆಳೆಯುತ್ತದೆ. ಇದು ಸಾಗರದಲ್ಲಿ ಹೂತುಹೋದ 11% ಸಾವಯವ ಇಂಗಾಲವನ್ನು ನಿಗ್ರಹಿಸುತ್ತದೆ. ಸೀಗ್ರಾಸ್ ರಕ್ಷಿಸುವುದಕ್ಕಾಗಿ ಆವಾಸಸ್ಥಾನಗಳನ್ನು ರಚಿಸಿದ್ದಾರೆ. ಡುಗಾಂಗ್ ಕ್ಲಬ್ಬುಗಳನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಈ ಪ್ರಾಣಿಯನ್ನು ಲೋಕಲ್ ಮರೈನ್ ಅಂಬಾಸಿಡರ್ ಮಾಡುವ ಗುರಿ ಇಟ್ಟುಕೊಂಡಿದ್ದಾರೆ ಸತೀಶ್.

ಮಾಫಿಯಾ ಬಯಲಿಗೆಳೆದ ಪರಿಸರ ಪ್ರೇಮಿ

ಬೇಟೆಗಾರರಿಗೆ ಸಹಾಯ ಮಾಡಿ ಸ್ಥಳೀಯರು ಹಣ ಸಂಪಾದಿಸುತ್ತಿದ್ದರಿಂದ ಈ ಎರಡು ಯೋಜನೆಗಳನ್ನು ಬಯಲಿಗೆಳೆಯುವುದು ಸವಾಲಾಗಿತ್ತು. ಸತೀಶ್ ಅವರ ತಂಡ ಬೆದರಿಕೆ, ಪ್ರತಿಭಟನೆ ಇದ್ಯಾವುದಕ್ಕೂ ಜಗ್ಗದೆ ಈ ಮಾಫಿಯಾವನ್ನು ಬಯಲಿಗೆಳೆದಿದ್ದಾರೆ. ಇದಕ್ಕಾಗಿ ಅವರು ರಾಜ್ಯ ಪೊಲೀಸ್ ಮತ್ತು ಭಾರತೀಯ ಕರಾವಳಿ ಕಾವಲುಗಾರರ ನೆರವನ್ನು ನೆನಪಿಸಿಕೊಳ್ಳುತ್ತಾರೆ.

60 ಕಿಮೀಗಿಂತಲೂ ವಿಸ್ತಾರವಾದ ಎಂಟು ವಿಶಿಷ್ಟ ಸಸ್ಯ ಪ್ರಭೇದಗಳನ್ನು ಒಳಗೊಂಡ ಮ್ಯಾಂಗ್ರೋವ್ ಕಾಡುಗಳು ಒಂದು ಕಾಲದಲ್ಲಿ ಏಡಿಗಳ ಆವಾಸಸ್ಥಾನವಾಗಿತ್ತು. ಇದು ಮೀನುಗಾರರಿಗೆ ಜೀವನೋಪಾಯಕ್ಕೆ ದಾರಿಯಾಗಿತ್ತು. ಇದಾಗಿಯೂ ಕೆಲವು ವರ್ಷಗಳಲ್ಲಿ ಅತಿಕ್ರಮಣದಿಂದಾಗಿ ಮ್ಯಾಂಗ್ರೋವ್ ತನ್ನ ಹಿಂದಿನ ಮೆರುಗನ್ನು ಕಳೆದುಕೊಂಡಿದೆ. ಸದ್ಯಕ್ಕೀಗ ಅವಿಸೆನಿಯಾ ಮತ್ತು ರೈಜೋಫೋರಾ ಪ್ರಭೇದಗಳು ಮಾತ್ರವೇ ಉಳಿದುಕೊಂಡಿದೆ. 

S Sateesh Ramanathapuram Forest Range Officer Mangrove Forest Rhizophora

ಮ್ಯಾಂಗ್ರೋವ್ ಕಾಡುಗಳು, ಸುನಾಮಿ, ಪ್ರವಾಹ ಮುಂತಾದ ನೈಸರ್ಗಿಕ ವಿಪತ್ತುಗಳ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಈ ಮೂಲಕ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ಉಳಿಯುತ್ತಿದ್ದವು. ಹೀಗಾಗಿ ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದಗಳ ಬೀಜವನ್ನು ಸಂಗ್ರಹಿಸಿ 65 ಎಕರೆಯ ವಿಶಾಲ ಪ್ರದೇಶದಲ್ಲಿ ಬಿತ್ತಿದರು.

ಉಳಿದ 35 ಎಕರೆ ಪ್ರದೇಶದಲ್ಲಿ ಮರಳನ್ನು ತುಂಬಿಸಿ, ಮತ್ತೆ ನಾಟಿ ಮಾಡಿದರು. ಇದಾದ ಬಳಿಕ ಕಪ್ಪು ರೆಕ್ಕೆಯ ಸ್ಟಿಲ್, ಕಿಂಗ್ ಫಿಶರ್, ಸ್ಯಾಂಡ್ ಪಿಪರ್‍ಸ್, ಗ್ರೇ ಹೆರಾನ್, ಗ್ರೀನ್ ಶ್ಯಾಂಕ್ ಮುಂತಾದ ಪಕ್ಷಿಗಳನ್ನು ಈಗ ನೋಡಬಹುದು. 

Mangrove Forest Kingfisher Sandpipers Grey Horons

ಸಿನಿಮಾ ಕತೆ ಥರ ಇದೆ ಬದುಕು

ಸತೀಶ್ ಮತ್ತು ತಂಡ ಆಲಿವ್ ರಿಡ್ಲೆ ಆಮೆಗಳ ರಕ್ಷಣೆಯನ್ನೂ ಮಾಡಿದ್ದಾರೆ. ಈ ಆಮೆಗಳ 40,000ಕ್ಕೂ ಮಿಕ್ಕಿ ಮೊಟ್ಟೆಗಳನ್ನು ಸಂಗ್ರಹಿಸಿ, ಸ್ಥಳೀಯ ಮೊಟ್ಟೆ ಕೇಂದ್ರಕ್ಕೆ ನೀಡಿದರು. 70 ದಿನಗಳ ನಂತರ ಮರಿಗಳನ್ನು ಸಮುದ್ರ ತೀರಕ್ಕೆ ಬಿಡಲಾಯಿತು. ಇವುಗಳಲ್ಲಿ 95% ಆಮೆಗಳು ಬದುಕುಳಿದಿವೆ. ಆ ಮೂಲಕ ಇವರ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಸ್ಥಳಿಯ ಮೀನುಗಾರರಿಗೆ ಕಡಲು ಆಮೆಗಳ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ. 

Olive Ridley Turtles Sea turtle hatchings Marine biodiversity

ಸಮುದ್ರ ಜೀವಿಗಳ ರಕ್ಷಣೆಯ ಈ ಎಲ್ಲಾ ಪ್ರಯತ್ನಗಳು, ನೀರಿನ ಮಾಲಿನ್ಯದಿಂದ ಹಾಳಾಗದಂತೆ ನೋಡಿಕೊಳ್ಳಲು ಸ್ಕೂಬಾ ಡೈವಿಂಗ್ ಟೀಮ್ ರಚಿತಗೊಂಡಿದೆ. ಈ ತಂಡ ತಿಂಗಳಿನಲ್ಲಿ ಎರಡು ಬಾರಿ ಸಮುದ್ರದಾಳದ ಪ್ಲಾಸ್ಟಿಕ್ ಅನ್ನು ಸ್ವಚ್ಛಗೊಳಿಸುತ್ತದೆ. 

Scooba Diving Underwater plastic cleaning Marine Biodiversity Ramanathapuram Forest Range

ಸಿನಿಮಾ ಕಥೆ ಅಥವಾ ಸಾಹಸಮಯ ಕಾದಂಬರಿಯಂತೆ ಭಾಸವಾಗುವ ಸತೀಶ್ ಅವರ ಜೀವನ ಚರಿತ್ರೆ, ಬರಿಯ ಲೇಖನಕ್ಕೆ ಸೀಮಿತವಾಗದೆ, ಅವರ ಆಶಯದಂತೆ ಯುವಜನತೆಗೆ ಇದು ಸ್ಫೂರ್ತಿಯಾಗಲಿ. ಇಂತಹ ಅಧಿಕಾರಿಗಳ ಸಂಖ್ಯೆ ಹೆಚ್ಚಲಿ. ನಿಸರ್ಗದೊಡಲು ಎಂದೂ ಸಮೃದ್ಧವಾಗಿರಲಿ!  

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

One Comment

Leave a Reply

Your email address will not be published. Required fields are marked *

Back to top button
Translate