ವಿಸ್ಮಯ ವಿಶ್ವಸೂಪರ್ ಗ್ಯಾಂಗು

ಶಾಂಭವಿ ತೀರದಲ್ಲಿ ಇಳಿ ಸಂಜೆ: ಎಂಜಿಎಂ ಕಾಲೇಜು ಹುಡುಗಿ ನವ್ಯಶ್ರೀ ಶೆಟ್ಟಿ ಪರಿಚಯಿಸಿದ ಸುಂದರ ತಾಣ

ಮನೆಯಲ್ಲಿ ಸುಳ್ಳು ಹೇಳಿ ಮಂಗೂಳೂರು ಮುಲ್ಕಿ ಕೊಳಚಿ ಕಂಬಳದ ಶಾಂಭವಿ ತಟದಲ್ಲಿ ಮರುವಾಯಿ ಹೆಕ್ಕಲು ಹೋದ ಕತೆಯನ್ನು ರಸವತ್ತಾಗಿ ವರ್ಣಿಸಿದ್ದಾರೆ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ನವ್ಯಶ್ರೀ ಶೆಟ್ಟಿ. ಈ ಬರಹ ಓದಿದ ಮೇಲೆ ನಿಮಗೂ ಶಾಂಭವಿ ನದಿ ತಟಕ್ಕೆ ಹೋಗಬೇಕು ಎಂಬ ಮನಸ್ಸಾಗಬಹುದು. 

ಕಾಲೇಜ್ ರಜೆ ಸಿಕಿದ್ದರೆ ಸಾಕು,ಫ್ರೆಂಡ್ಸ್ ಜೊತೆ ತಿರುಗಾಡುವುದು ಎಲ್ಲರಿಗೂ ಖುಷಿ. ದೂರದ ಊರಿಗೆ ಅಲ್ಲದಿದ್ದರೂ ತಮ್ಮ ಊರಿನ ಸುತ್ತ ಮುತ್ತ ಸ್ಥಳಗಳಿಗೆ ಹೋಗುವುದು ಹಲವರಿಗೆ ಅಚ್ಚುಮೆಚ್ಚು. ಮನೆಯಲ್ಲಿ ನಾನಾ ಸರ್ಕಸ್ ಮಾಡಿ, ಪರ್ಮಿಷನ್ ಕೇಳಿ ಹೋಗುವುದು ಒಂದು ರೀತಿ ಸಾಹಸ. ನಾನಾ ಕಸರತ್ತು ಮಾಡಿ ಹೋದರೂ ಆ ಸ್ಥಳ ಹೊಸ ಅನುಭವ ನೀಡುತ್ತದೆ. ಆ ರೀತಿ ನನಗೆ ಖುಷಿ ಕೊಟ್ಟ ತಿರುಗಾಟವೇ ಶಾಂಭವಿ ನದಿ ತೀರದಲ್ಲಿನ ಇಳಿ ಸಂಜೆ.

Surya Teja Kollipara

ಅಂದು ಕಾಲೇಜಿಗೆ ರಜೆಯಿತ್ತು. ಫ್ರೆಂಡ್ಸ್ ಎಲ್ಲಾ ಸೇರಿ  ಎಲ್ಲಿಗಾದರೂ ಹೋಗೋಣ ಎನ್ನುವ ಪ್ಲಾನ್ ಮಾಡುತ್ತಿದ್ದಾಗ ಬಂದ ಯೋಚನೆಯೇ ಕಾಲೇಜಿನ ಸಹಪಾಠಿ ಕಾರ್ತಿಕ್ ಮನೆಗೆ ಹೋಗುವುದು. ಕಾರ್ತಿಕ್ ಮನೆ ಇರುವುದು ಮಂಗಳೂರು(Mangalore) ಮೂಲ್ಕಿಯ(Mulki) ಕೊಳಚಿ ಕಂಬಳದಲ್ಲಿ. ಅವರ ಮನೆಗೆ ಸಮೀಪದಲ್ಲಿ ಶಾಂಭವಿ ನದಿ ಹರಿಯುತ್ತದೆ. ಸೂರ್ಯಾಸ್ತದ  ಸಮಯದಲ್ಲಿ ಶಾಂಭವಿ ನದಿ ತೀರ ನೋಡುವುದೇ ಒಂದು ಸೊಗಸು. ಜೊತೆಗೆ ಸಂಜೆ 4 ಗಂಟೆಯ ನಂತರ ಅಲ್ಲಿ ಮರ್ವಾಯಿ ಹೆಕ್ಕುವುದು ಒಂದು ರೀತಿ ಖುಷಿ ನೀಡುತ್ತೆ.

ನಮ್ಮ ಊರಿನಲ್ಲಿ ಮಳಿ ಎಂದು ಕರೆಯುವ ತುಳುವರು ಮಾರ್ವಾಯಿ, ಕೊಯಲ್ ಎಂದು ಕರೆಯುವ ಮಾಂಸಾಹಾರಿ ಪ್ರಿಯರ ನೆಚ್ಚಿನ ಅಹಾರವಿದು.ಶಾಂಭವಿ ನದಿಯಲ್ಲಿ ಆಟ ಆಡಿ, ಮರ್ವಾಯಿ ಹೆಕ್ಕುವ ಸಲುವಾಗಿ ಸ್ನೇಹಿತರೆಲ್ಲ ಸೇರಿ, ಬೆಳಿಗ್ಗೆ 9 ಗಂಟೆಗೆ ಮೂಲ್ಕಿಗೆ ಪಯಣ ಬೆಳೆಸಿದೆವು

ಅಂದು ಮನೆಯಲ್ಲಿ ಮೊದಲ ಬಾರಿ ಸುಳ್ಳು ಹೇಳಿ ಸ್ನೇಹಿತರ ಜೊತೆ ಹೋಗಿದ್ದು. ಪ್ರಾಜೆಕ್ಟ್  ವರ್ಕ್ ಕೆಲಸದ ಮೇರೆಗೆ ಹೋಗುತ್ತೇನೆ ಎಂದು ಹೋಗಿದ್ದು. ಮೂಲ್ಕಿ ಯಿಂದ ಕೊಳಚಿ ಕಂಬಳಕ್ಕೆ ನಡೆದುಕೊಂಡು ಸಾಗಿದರೆ ಅರ್ಧ ಗಂಟೆ ಸಮಯ.ಸ್ನೇಹಿತರೆಲ್ಲ ಸೇರಿ ನಟರಾಜ ಸರ್ವೀಸ್ ನಲ್ಲಿ ಹೋಗುತ್ತಾ, ದಾರಿ ಮಧ್ಯ ಸಿಕ್ಕ ಮಾವಿನ ಮರ ಹತ್ತಿ, ಮಾವಿನ ಮಿಡಿ ಕಿತ್ತು, ಅಂತೂ ಕಾರ್ತಿಕ್ ಮನೆ ತಲುಪಿದೆವು.

ಕಿತ್ತು ತಂದಿದ್ದ ಮಾವಿನ ಕಾಯಿ ಉಪ್ಪು ಖಾರ(Mango pickle) ಹಾಕಿ ನಾವೇ ದೊಡ್ಡ ಬಾಣಸಿಗರ ಹಾಗೆ ಕಾರ್ತಿಕ್ ಅಮ್ಮನ ಸಹಾಯದಿಂದ ಅತಿ ಕಡಿಮೆ ಸಮಯದಲ್ಲಿ, ಸುಲಭವಾಗಿ ಹೋಂ ಮೇಡ್ ಉಪ್ಪಿನಕಾಯಿ ಮಾಡಿ, ಮಧ್ಯಾಹ್ನ ಭರ್ಜರಿಯಾಗಿ ಊಟ ಮುಗಿಸಿದೆವು. ಅಂತೂ ಬೆಳಿಗ್ಗೆಯಿಂದ ಕಾಯುತ್ತಿದ್ದ ಸಮಯ ಬಂದೇ ಬಿಡ್ತು.

4 ಗಂಟೆಯಾಗಿತ್ತು. ಮರ್ವಾಯಿ ಹೆಕ್ಕಲು ಹೊರೆಟೆವು. ಅವರ ಮನೆಯಿಂದ ಮರ್ವಾಯಿ ಹೆಕ್ಕುವ ಸ್ಥಳಕ್ಕೆ ಹೋಗಬೇಕಾದರೆ ದೋಣಿಯಲ್ಲಿ ಸುಮಾರು 5 ನಿಮಿಷ ಸಾಗಬೇಕು. ಅದು ದೋಣಿಯಲ್ಲಿ ನನ್ನ ಮೊದಲ ಅನುಭವ. ಮನಸಿನಲ್ಲಿ ಒಂದು ರೀತಿ ಭಯ. ಅಂತೂ ಮರ್ವಾಯಿ ಜಾಸ್ತಿ ಸಿಗುವ ಸ್ಥಳ ಬಂತು. ಫ್ರೆಂಡ್ಸ್ ಜೊತೆ ಸೇರಿ ನೀರಲ್ಲಿ ಆಟ ಆಡುತ್ತಾ, ಕೈಗೆ ಸಿಕ್ಕ ಮರ್ವಾಯಿಯನ್ನು ಕಾರ್ತಿಕ್ ಮನೆಯಿಂದ ತಂದಿದ್ದ ಬುಟ್ಟಿಗೆ ಹಾಕಿಕೊಳ್ಳುತ್ತಾ, ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ. ಅಷ್ಟರಲ್ಲಾಗಲೇ ಸೂರ್ಯ ಮುಳುಗಿ ಆಗಿತ್ತು. ಮನೆಗೆ ಹೋಗಬೇಕು ಎಂದು ನೆನಪಾಗಿ, ಕಾರ್ತಿಕ್ ಮನೆಗೆ ವಾಪಸ್ ಬಂದೆವು. 

 ಮರ್ವಾಯಿ ಒಡೆದು ಅವರಮ್ಮ ಮಾಡಿದ ರುಚಿ ರುಚಿ ಊಟ ತಿನ್ನುವಾಗಲೇ ಗಂಟೆ 7.30 ಆಗಿತ್ತು. ಆಗಲೇ ನೆನಪಾಗಿದ್ದು ಉಡುಪಿಯಿಂದ ನಮ್ಮೂರಿಗೆ ಹೋಗುವ ಕೊನೆ ಬಸ್ ಕೂಡ ಇಲ್ಲವೆಂದು.ಅಷ್ಟರಲ್ಲಾಗಲೇ ಮನೆಯಿಂದ ಹತ್ತಾರು ಕಾಲ್.ತರಾತುರಿಯಲ್ಲಿ ಕಾರ್ತಿಕ್ ಅಮ್ಮ ಕಟ್ಟಿಕೊಟ್ಟ ಮರ್ವಾಯಿ, ಉಪ್ಪಿನಕಾಯಿ ತೆಗೆದುಕೊಂಡು ಮೂಲ್ಕಿಯಿಂದ ಉಡುಪಿ ಪಯಣ ಬೆಳೆಸಿದೆವು. ಆದರೆ ಊರಿಗೆ ಬಸ್ ಇಲ್ಲ. ಪ್ರಾಜೆಕ್ಟ್ ವರ್ಕ್ ಅಂತ ಹೋದವಳು ರಾತ್ರಿ ಯಾದರೂ ಪತ್ತೆಯಿಲ್ಲ. ಮನೆಯಿಂದ ಬೈಗಳು ಯಥೇಚ್ಛವಾಗಿ ಸಿಗುತ್ತಿತ್ತು. ಬಸ್ ಇಲ್ಲದಿದ್ದರೂ ಹೇಗೋ ನಾನಾ ಸರ್ಕಸ್ ಮಾಡಿ ಅಂತೂ ಮನೆ ತಲುಪಿದೆ. ಮನೆ ತಲುಪುವಾಗ 9 ಗಂಟೆ  ಆಗಿತ್ತು. ಬೆಳಿಗ್ಗೆ 9 ಗಂಟೆಗೆ ಮನೆ ಬಿಟ್ಟು ಹೋಗಿ ರಾತ್ರಿ 9 ಗಂಟೆಗೆ ಮನೆಗೆ ಬಂದಿದ್ದಕ್ಕೆ,ಸುಳ್ಳು ಹೇಳಿದಕ್ಕೆ ಬೈಗುಳಗಳ ಸುರಿಮಳೆ ರೆಡಿಯಾಗಿತ್ತು. ಕೈಯಲ್ಲಿ ಮರ್ವಾಯಿ ಜೊತೆಗೆ ಮನೆಯವರ ಬೈಗುಳ ಸಿಕ್ಕಿತ್ತು.

ಬೈಗುಳಗಳ ನಡುವೆ ಕೂಡ ಆ ದಿನ ಕಳೆದ ಕ್ಷಣ ಸದಾ ನೆನಪಿನಲ್ಲಿ ಇರುವ ಕ್ಷಣ.ಮತ್ತೆ ಮತ್ತೆ ಹೋಗಬೇಕು ಎಂದೆನಿಸುವ ತಾಣ.

ಕಾರ್ತಿಕ್ ಅಮ್ಮನ ಕೈ ರುಚಿ, ಮರ್ವಾಯಿ, ಉಪ್ಪಿನ ಕಾಯಿ ರುಚಿ ಕಾರಣದಿಂದ ಮತ್ತೆ ಮತ್ತೆ ಮನಸ್ಸು ಕೊಳಚಿ ಕಂಬಳದತ್ತ ಹಾತೊರೆಯುತ್ತಿತ್ತು.

ಮನೆಯಲ್ಲಿ ಸತ್ಯ ಹೇಳಿ ಇನ್ನೊಮ್ಮೆ ಹೋಗಬೇಕು ಅನ್ನುವ ಯೋಚನೆಯಲ್ಲಿ ಇದ್ದಾಗಲೇ ಕೋರೋನ ಅಡ್ಡಿಯಾಗಿತ್ತು.

ಕೇವಲ ಮರುವಾಯಿ ಪ್ರಿಯರಿಗೆ ಮಾತ್ರವಲ್ಲ, ಕಡಲ ಪ್ರಿಯರಿಗೆ,ನಿಸರ್ಗ ಪ್ರೇಮಿಗಳಿಗೆ ಜೊತೆಗೆ ಫೋಟೋಗ್ರಫಿ ಇಷ್ಟ ಪಡುವವರಿಗೆ ಮಂಗಳೂರಿನ ಶಾಂಭವಿ ನದಿ ತಟ ಉತ್ತಮ ಸ್ಥಳ.

Related Articles

Leave a Reply

Your email address will not be published. Required fields are marked *

Back to top button