Site icon Kannada.Travel

ಎರಡು ದಶಕಗಳಿಂದ ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ ಮಿಂಚುತ್ತಿರುವ ಫೋಟೋ ಜರ್ನಲಿಸ್ಟ್ ಆಸ್ಟ್ರೋ ಮೋಹನ್

Astro Mohan, Famous Photo Journalist

Astro Mohan, Famous Photo Journalist

ಆಸ್ಟ್ರೋ ಮೋಹನ್ ಉದಯವಾಣಿಯ ಫೋಟೋ ಜರ್ನಲಿಸ್ಟ್. ಕನ್ನಡದ ಛಾಯಾಚಿತ್ರ ಪತ್ರಕರ್ತರ ವಲಯದಲ್ಲಿ ಬಹು ಹೆಸರಾಂತ ಹೆಸರು. ಕರಾವಳಿ ಜಿಲ್ಲೆ ಉಡುಪಿಯಲ್ಲಿ ವೃತ್ತಿ ಜೀವನ ನಡೆಸುತ್ತಿರುವ ಇವರು ಹಲವು ಪ್ರತಿಷ್ಟಿತ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಎರಡು ದಶಕಗಳಿಗೂ ಹೆಚ್ಚಿಗೆ ಪತ್ರಿಕೋದ್ಯಮದ ಅನುಭವ ಹೊಂದಿದ್ದಾರೆ.

ಆಸ್ಟ್ರೋ ಮೋಹನ್ ಅವರು ಫೋಟೋಗ್ರಾಫಿ ಕ್ಷೇತ್ರದ ಬಗ್ಗೆ ಫೋಟೋಗ್ರಾಫರ್ ಸರಣಿ ಲೇಖನದಲ್ಲಿ ಹಲವು ಮಾಹಿತಿಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಸಾಮಾಜಿಕ ಕಳಕಳಿ ಬಿಂಬಿಸುವ ಫೋಟೋ, ಕರಾವಳಿಯ ಸಂಸ್ಕೃತಿ ,ಪರಂಪರೆಯನ್ನು ತೋರಿಸುವ ಛಾಯಾ ಚಿತ್ರ ,ನಿಸರ್ಗ ಚಿತ್ರ , ಸುದ್ದಿ ಪತ್ರಿಕೆಯಲ್ಲಿ ನಮ್ಮ ಕಣ್ಣು ಸೆಳೆಯುವ ಫೋಟೋಗಳು ಹೀಗೆ ಛಾಯಾಗ್ರಹಣ ಕ್ಷೇತ್ರದ ಎಲ್ಲಾ ಪ್ರಕಾರಗಳಲ್ಲೂ ತಮ್ಮ ಅದ್ಭುತ ಕೌಶಲ್ಯದಿಂದ ಪ್ರಸಿದ್ಧರಾದವರು ಆಸ್ಟ್ರೋ ಮೋಹನ್.

ಹಿರಿಯ ಛಾಯಾಚಿತ್ರ ಪತ್ರಕರ್ತ. ಹೊಸ ದಿಗಂತದಿಂದ ಉದಯವಾಣಿ ತನಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಎರಡು ದಶಕಗಳಿಗೂ ಹೆಚ್ಚಿನ ಸುದೀರ್ಘ ಅನುಭವವನ್ನು ಹೊಂದಿದ್ದಾರೆ. ಛಾಯಾ ಪತ್ರಕರ್ತರ ವಲಯದಲ್ಲಿ ವಿಭಿನ್ನವಾಗಿ , ವಿಶೇಷವಾಗಿ ನಿಲ್ಲುತ್ತಾರೆ.

ಬಾಲ್ಯದಲ್ಲಿಯೇ ಮೂಡಿದ ಒಲವು

ಆಸ್ಟ್ರೋ ಮೋಹನ್ ಅವರಿಗೆ ಫೋಟೋಗ್ರಾಫಿಯ ಬಗ್ಗೆ ಒಲವು ಬಾಲ್ಯದಲ್ಲಿಯೇ ಮೂಡಿತ್ತು. ಅಪ್ಪ -ಅಮ್ಮ ಸದಾ ಬೆಂಬಲವಾಗಿದ್ದರು. ಇವರಿಗೆ ಮನೆಯೇ ಮೊದಲ ಪಾಠ ಶಾಲೆಯಿದ್ದಂತೆ . ತಂದೆಯಲ್ಲಿದ್ದ ಫೋಟೋಗ್ರಾಫಿ ಹವ್ಯಾಸ ,ಇವರಲ್ಲಿ ಕೂಡ ಬೆಳೆದು ಬಂದಿತು. ಮನೆಯಲ್ಲಿದ್ದ ಪುಟ್ಟ ಕ್ಯಾಮೆರಾ ,ಅಪ್ಪ ಕಾಕತಾಳೀಯ ಎನ್ನುವಂತೆ ತಂದಿದ್ದ ಹ್ಯಾಂಡ್ ಬುಕ್ ಛಾಯಾಗ್ರಾಹಣ ಕ್ಷೇತ್ರದ ಬಗ್ಗೆ ಇವರ ಆಸಕ್ತಿಯನ್ನು ಉದ್ದೀಪನಗೊಳಿಸಿತ್ತು. ಛಾಯಾಗ್ರಾಹಣ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಯಿತು. ಅದಕ್ಕೆ ಪೂರಕ ವಾತಾವರಣ ಕೂಡ ಸೃಷ್ಟಿಯಾಯಿತು.

ಚಿತ್ರ ಕೃಪೆ:ಆಸ್ಟ್ರೋ ಮೋಹನ್

ಹೈಸ್ಕೂಲ್ ಓದುತ್ತಿರುವ ಸಮಯದಲ್ಲಿಯೇ ಫೋಟೋಗ್ರಾಫಿಯನ್ನು ವೃತ್ತಿಯನ್ನಾಗಿ ಆರಂಭಿಸಿದ್ದರು. ೮ ನೇ ತರಗತಿಯಲ್ಲಿರುವಾಗ ಗೋವಾ ಟ್ರಿಪ್ಪಿನ ವೇಳೆಯಲ್ಲಿ ತೆಗೆದ ಚಿತ್ರಗಳು ವೃತ್ತಿ ಜೀವನದ ಮೊದಲ ಚಿತ್ರಗಳು. ಆ ದಿನಗಳಲ್ಲಿ ಫೋಟೋಗ್ರಾಫಿಯನ್ನು ಕಲಿಸುವ ಶಾಲೆಗಳು ಇರಲಿಲ್ಲ. ಕೆನರಾ ಕಾಲೇಜಿನಲ್ಲಿ ಓದುತ್ತಿರುವ ಸಮಯದಲ್ಲಿ ಫೋಟೋಗ್ರಾಫಿ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದರು. ಕಾಲೇಜು ದಿನಗಳಲ್ಲಿನ ಕ್ರಿಯಾಶೀಲ ಚಟುವಟಿಕೆ ಇವರ ವೃತ್ತಿ ಬದುಕಿನಲ್ಲಿ ಹೊಸ ಮೈಲುಗಲ್ಲು.

ಕುತೂಹಲಮಯ ಬದುಕು.

ಆಸ್ಟ್ರೋ ಮೋಹನ್ ಅವರು ಫೋಟೋಗ್ರಾಫಿಯನ್ನು ವೃತ್ತಿಯನ್ನಾಗಿ ಅರಿಸಿಕೊಳ್ಳಬೇಕು ಎನ್ನುವ ಕನಸು ಕಂಡವರಲ್ಲ. ಇವರದ್ದು ಒಂದು ರೀತಿಯ ಕುತೂಹಲಮಯ ಬದುಕು. ಜಾದೂ ,ಜೋತಿಷ್ಯ ಕಲೆಯನ್ನು ಕೂಡ ಕಲಿತಿದ್ದರು. ಛಾಯಾ ಪತ್ರಕರ್ತರಾಗುವ ಮುನ್ನ ಹಲವು ಉದ್ಯೋಗ ಮಾಡಿದ್ದರು. ಉಡುಪಿ ಬಂದಾಗ ಇವರಲ್ಲಿನ ಫೋಟೋಗ್ರಾಫಿ ಕಲೆಯನ್ನು ಮೊದಲು ಗುರುತಿಸಿದವರು ಬಾಲ ಶ್ಯಾಮ್ ಪತ್ರೈ.

ಚಿತ್ರ ಕೃಪೆ:ಆಸ್ಟ್ರೋ ಮೋಹನ್

೧೯೯೪ರಲ್ಲಿ ಪತ್ರಿಕೋದ್ಯಮದಲ್ಲಿ ಹೊಸ ದಿಗಂತ ಪತ್ರಿಕೆಯ ಮೂಲಕ ಫೋಟೋ ಜರ್ನಲಿಸ್ಟ್ ಆಗಿ ವೃತ್ತಿ ಜೀವನ ಆರಂಭವಾಯಿತು. ವೃತ್ತಿ ಜೀವನ ಆರಂಭವಾದ ಬಳಿಕ ಛಾಯಾಗ್ರಾಹಣ ಕ್ಷೇತ್ರದ ಹಲವು ಕಲೆಗಳನ್ನು ಕರಗತ ಮಾಡಿಕೊಂಡರು. ಪ್ರತಿ ದಿನ ಉತ್ತಮವಾದ ಫೋಟೋ ತೆಗೆಯಬೇಕು ಎನ್ನುವ ಹುಮ್ಮಸ್ಸು ಇವರು ಈ ಕ್ಷೇತ್ರದಲ್ಲಿ ಹೆಚ್ಚಿಗೆ ಸಾಧಿಸಲು ಸಾಧ್ಯವಾಗಿದ್ದು. ಛಾಯಾಚಿತ್ರ ಪತ್ರಿಕೋದ್ಯಮದ ಜೊತೆಗೆ ಸ್ಟ್ರೀಟ್,ಟ್ರಾವೆಲಿಂಗ್, ವೈಲ್ಡ್ ಲೈಫ್ ಫೋಟೋಗ್ರಾಫಿ ಇವರಿಗಿಷ್ಟ.

ಛಾಯಾಗ್ರಾಹಕ, ಛಾಯಾಚಿತ್ರ ಕಲಾವಿದನಾಗಬೇಕು

ಅಂದಿನಿಂದ ಇಂದಿನವರೆಗೆ ಫೋಟೋಗ್ರಾಫಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬದಲಾಗಿರುವುದು ನಾವು ಬಳಸುವ ಉಪಕರಣಗಳು ಮಾತ್ರ . ಛಾಯಾ ಚಿತ್ರಕಲೆ ಅಂದಿನಂತಿದೆ , ಛಾಯಾ ಚಿತ್ರಕಲೆಗೆ ಬಳಸುವ ಉಪಕರಣಗಳಲ್ಲಿ ನವೀನತೆ ಬಂದಿದೆ ಎನ್ನುವುದು ಆಸ್ಟ್ರೋ ಮೋಹನ್ ಅವರ ಅಭಿಪ್ರಾಯ. ಛಾಯಾಗ್ರಾಹಕ ಗುರಿ , ಉದ್ದೇಶಗಳನ್ನು ಹೊಂದಿ ಫೋಟೋ ತೆಗೆಯಬೇಕು.

ಚಿತ್ರ ಕೃಪೆ:ಆಸ್ಟ್ರೋ ಮೋಹನ್

ಛಾಯಾಗ್ರಾಹಕ ಎನ್ನುವ ಫೋಟೋ ಕಣ್ಮರೆಯಾಗಿ , ಛಾಯಾಚಿತ್ರ ಕಲಾವಿದ ಎನ್ನುವ ಪದ ಬಳಕೆಗೆ ಬರಬೇಕು.ಆಗ ಫೋಟೋಗ್ರಾಫಿ ಕ್ಷೇತ್ರ ಇನ್ನಷ್ಟು ವಿಕಾಸಗೊಳ್ಳುತ್ತದೆ. ಫೋಟೋಗ್ರಾಫಿ ಕ್ಷೇತ್ರದಲ್ಲಿ ಒಂದಷ್ಟು ರೂಪುರೇಷೆಗಳಿವೆ. ನಾವು ಆ ಕ್ಷೇತ್ರದಲ್ಲಿ ಪಳಗಿದ ಬಳಿಕವೇ ಯಾವ ವಿಧಧ ಫೋಟೋಗ್ರಾಫಿಯಲ್ಲಿ ನಮಗೆ ಆಸಕ್ತಿಯಿದೆ ಎಂದು ನಮ್ಮ ಅರಿವಿಗೆ ಬರುತ್ತದೆ.

ನೀವುಇದನ್ನುಇಷ್ಟಪಡಬಹುದು: ಫೋಟೋಗ್ರಫಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಗಳಿಸಿದ ಕುಡ್ಲದ ಹುಡುಗ ಫೋಟೋಗ್ರಾಫರ್ ಅಪುಲ್ ಆಳ್ವ ಇರಾ

ಛಾಯಾಚಿತ್ರ ಪತ್ರಕರ್ತ ಯಾವುದೋ ಒಂದು ಕ್ಷೇತ್ರಕ್ಕೆ ಸೀಮಿತವಾಗಿರುವುದಿಲ್ಲ . ಅವರೆದುರು ಹಲವು ಅವಕಾಶಗಳಿರುತ್ತದೆ. ಎಲ್ಲ ವಿಧಧ ಫೋಟೋವನ್ನು ಅವರು ತೆಗೆಯಬೇಕಾಗುತ್ತದೆ. ಎಲ್ಲವೂದಕ್ಕೂ ಛಾಯಾಚಿತ್ರ ಪತ್ರಕರ್ತ ಸಿದ್ಧ ಹಸ್ತರಾಗಿರಬೇಕು. ಛಾಯಾ ಪತ್ರಕರ್ತ ವೃತ್ತಿ ಜೀವನದ ಬದ್ಧತೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಿರಬೇಕು.

ಛಾಯಾಚಿತ್ರ ಪತ್ರಿಕೋದ್ಯಮ ಒಂದು ಸವಾಲಿದ್ದಂತೆ

ಆಸ್ಟ್ರೋ ಮೋಹನ್ ಹಲವು ಪ್ರತಿಷ್ಟಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇತ್ತಿಚಿಗೆ ಇವರು ತೆಗೆದ ಮಲ್ಪೆ ಬಂದರುವಿನ ಸುಂದರ ಫೋಟೋಗೆ ಪ್ರತಿಷ್ಟಿತ ಪ್ರಶಸ್ತಿ ದೊರೆತಿದೆ.

ಢಾಕಾ ಆಂತರಾಷ್ಟ್ರೀಯ ಛಾಯಾ ಚಿತ್ರ ಸ್ಫರ್ಧೆಯಲ್ಲಿ ಫೋಟೋಗ್ರಾಫಿ ಸೊಸೈಟಿ ಆಫ್ ಅಮೇರಿಕಾದ ಸ್ವರ್ಣ ಪದಕ, ಫೋಟೋಗ್ರಾಫಿ ಸೊಸೈಟಿ ಆಫ್ ಅಮೇರಿಕನ್ ರಿಬ್ಬನ್, ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಫೋಟೋಗ್ರಫರ್ಸ್ ಅಲಿಯನ್ಸ್ (USPA)ಸಂಸ್ಥೆಯ 2020 ಸಾಲಿನ ಗೌರವ ಫೆಲೋಶಿಪ್ ಸೇರಿದಂತೆ ಹಲವು ಉನ್ನತ ಪ್ರಶಸ್ತಿಗಳು ದೊರೆತಿದೆ. ಇವರು ಕ್ಲಿಕ್ಕಿಸಿದ ಸುಂದರ ಚಿತ್ರಗಳು ಪುಸ್ತಕ ರೂಪದಲ್ಲಿ ಕೂಡ ಹೊರಹೊಮ್ಮಿದೆ.

ಚಿತ್ರ ಕೃಪೆ:ಆಸ್ಟ್ರೋ ಮೋಹನ್

ಇಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್‌ಗಳ ಬಳಕೆಯಿಂದಾಗಿ ಪ್ರತಿಯೊಬ್ಬರ ಮನೆಯಲ್ಲಿ ಒಬ್ಬ ಫೋಟೋಗ್ರಾಫರ್ ಉದಯವಾಗುತ್ತಿದೆ. ಆತ ಫೋಟೋಗ್ರಾಫರ್ ಅಲ್ಲ,ಸ್ನಾಪ್‌ಶೂಟರ್. ಹೆಚ್ಚಿನ ಜನ ತಮ್ಮ ಮನೆಯಲ್ಲಿ ಸಮಾರಂಭಗಳ ಫೋಟೋವನ್ನು ಅವರೇ ತೆಗೆಯುತ್ತಾರೆ.

ಇದು ಛಾಯಾಗ್ರಾಹಣ ವೃತ್ತಿಯ ಮೇಲೆ ಪ್ರಭಾವ ಬೀರುವುದರ ಜೊತೆಗೆ ಬದುಕಿನ ಒಂದೊಳ್ಳೆ ಖುಷಿ ಕ್ಷಣಗಳನ್ನು ಅಚ್ಚು ಕಟ್ಟಾಗಿ ಸೆರೆ ಹಿಡಿದು, ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುವ ಅವಕಾಶವನ್ನು ಇಂದು ಹಲವರು ಕಳೆದುಕೊಳ್ಳುತಿದ್ದಾರೆ. ಕೊರೊನಾ ಕಾರಣದಿಂದ ಸೇವಾಧರಿತ ಕ್ಷೇತ್ರಗಳಲ್ಲಿ ಒಂದಾದ ಫೋಟೋಗ್ರಾಫಿಯ ಮೇಲೆ ಕೂಡ ಹೊಡೆತ ಬಿದ್ದಿದೆ.

ಇವರು ತೆಗೆದ ಪ್ರತಿ ಫೋಟೋ ಇವರಿಗೆ ಸ್ಮರಣೀಯ. ನಾವು ತೆಗೆಯುವ ಪ್ರತಿ ಛಾಯಾ ಚಿತ್ರ ಉತ್ತಮವಾಗಿರಬೇಕು, ಸ್ಮರಣೀಯವಾಗಿರಬೇಕು ಎನ್ನುವ ತುಡಿತ ನಮ್ಮಲ್ಲಿರಬೇಕು. ಪ್ರತಿ ದಿನ ನಾನೊಂದು ಉತ್ತಮ ಛಾಯಾಚಿತ್ರ ಸೆರೆ ಹಿಡಿಯಬೇಕು ಎನ್ನುವ ಇವರ ಹುಮ್ಮಸ್ಸು , ಇಂದು ಅದೇಷ್ಟೋ ಇವರು ಕ್ಲಿಕ್ಕಿಸಿದ ಛಾಯಾ ಚಿತ್ರಗಳು ಹಲವು ವರ್ಷಗಳ ಕಾಲ ಪ್ರಸ್ತುತ ಎನ್ನುವಂತೆ ಪ್ರಸಿದ್ಧಿ ಪಡೆದಿದೆ.

ಪತ್ರಿಕಾ ಛಾಯಾಗ್ರಾಹಕ ತನ್ನ ಜೀವನವನ್ನು ಪಣಕಿಟ್ಟು ಕೆಲಸ ಮಾಡುತ್ತಾನೆ. ಛಾಯಾಚಿತ್ರ ಪತ್ರಿಕೋದ್ಯಮ ಒಂದು ರೀತಿಯ ಸವಾಲಿನ ಕೆಲಸ. ಪ್ರತಿನಿತ್ಯ ಸವಾಲು, ಕುತೂಹಲ, ಕಲಿಕೆಯೊಂದಿಗೆ ಅವರ ಬದುಕು ಸಾಗುತ್ತಿರುತ್ತದೆ.

ಇಂದು ಫೋಟೋಗ್ರಾಫಿ ತಂತ್ರಜ್ಙಾನದ ಕಾಲಘಟ್ಟದಲ್ಲಿ ಬದಲಾವಣೆಯಾಗಿದೆ. ಆದರೆ ಕೆಲವರಲ್ಲಿ ಛಾಯಾಗ್ರಾಹಕರನ್ನು ನೋಡುವ ಮನೋಸ್ಥಿತಿ, ದೃಷ್ಟಿಕೋನಗಳಲ್ಲಿ ಬದಲಾವಣೆಯಾಗಬೇಕಿದೆ. ದೃಷ್ಟಿಕೋನಗಳಲ್ಲಿ ಬದಲಾವಣೆಯಾಗಬೇಕಾದರೆ ಛಾಯಾಗ್ರಾಹಕರು ಕೂಡ ಬದಲಾಗಬೇಕು. ಇಂದು ಫೋಟೋಗ್ರಾಫಿ ಕಲಿಸುವ ಹಲವು ಕೋರ್ಸ್ಗಳು ಮುನ್ನೆಲೆಗೆ ಬಂದಿದೆ.

ಚಿತ್ರ ಕೃಪೆ:ಆಸ್ಟ್ರೋ ಮೋಹನ್

ಯುವ ಛಾಯಾಗ್ರಾಹಕರು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು . ಗಂಭೀರವಾಗಿ ಆಧ್ಯಯನ ಮಾಡಿ ಈ ಕ್ಷೇತ್ರಕ್ಕೆ ಬಂದರೆ , ಇನ್ನೂ ಹೆಚ್ಚಿನ ಯಶಸ್ಸು ಸಾಧಿಸಬಹುದು ಎನ್ನುತ್ತಾರೆ ಆಸ್ಟ್ರೋ ಮೋಹನ್. ಇಂದು ಫೋಟೋಗ್ರಾಫಿಯ ಬಹುತೇಕ ಕೆಲಸಗಳನ್ನು ಆಧುನಿಕ ಕ್ಯಾಮೆರಾಗಳು ಮಾಡುತ್ತಿವೆ. ಯುವ ಛಾಯಗ್ರಾಹಕರು ಆಧುನಿಕ ಕ್ಯಾಮೆರಾಗಳ ಜೊತೆಗೆ ಆಲಸಿಗಳಾಗದಿರಲಿ. ಆಲಸ್ಯವನ್ನು ದೂರವಿಟ್ಟು ಛಾಯಾಗ್ರಾಹಣ ಕ್ಷೇತ್ರದ ವಾಸ್ತವನ್ನು ಅರಿತು ಕೆಲಸ ಮಾಡಲಿ ಎನ್ನುತ್ತಾರೆ ಆಸ್ಟ್ರೋ ಮೋಹನ್.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Exit mobile version