ದೂರ ತೀರ ಯಾನಬೆರಗಿನ ಪಯಣಿಗರುವಿಂಗಡಿಸದಸೂಪರ್ ಗ್ಯಾಂಗುಸ್ಮರಣೀಯ ಜಾಗ

ರಂಗಭೂಮಿಯಿಂದಾಗಿ ಉಚಿತವಾಗಿ ದೆಹಲಿ ಸುತ್ತಿದ ಕಥೆ

ದೇಶ ಸುತ್ತುವ ಕನಸು ನನ್ನದು. ಈ ಕನಸಿಗೆ ಮೊದಲು ನಾಂದಿ ಹಾಕಿದ್ದು ರಂಗಭೂಮಿ. ಕಲಾ ಕ್ಷೇತ್ರದಲ್ಲಿ ತೊಡಗಿಕೊಂಡರೆ ರಾಜ್ಯ, ದೇಶ ಸುತ್ತುವ ಸುವರ್ಣಾವಕಾಶ ಸಿಗುತ್ತದೆ.

ಹೌದು, ಪ್ರದರ್ಶನ ಕಾಣುವ ಎಲ್ಲಾ ಊರುಗಳ ಆಹಾರದ ರುಚಿ, ಅಲ್ಲಿನ ವಿಶೇಷ ಸ್ಥಳಗಳನ್ನು ನೋಡಬಹುದು. ರಂಗಭೂಮಿಯಿಂದಾಗಿ ಕರ್ನಾಟಕ ಬಿಟ್ಟು ಉಚಿತವಾಗಿ ದೂರದ ದೆಹಲಿಯನ್ನು ಸುತ್ತಾಡಿದ ನನ್ನ ಕಥೆ.

  • ಚೈತ್ರಾ ರಾವ್ ಉಡುಪಿ

ಸಂಗಮ ಕಲಾವಿದರು, ಮಣಿಪಾಲ ತಂಡದಲ್ಲಿ ಕಲಾವಿದೆಯಾಗಿ ಸುಮಾರು 7 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನಟನೆ ನನ್ನ ಆಸಕ್ತಿಯ ಕ್ಷೇತ್ರವಾಗಿತ್ತು. ಇದರ ಜೊತೆ ಜೊತೆಗೆ ಕರ್ನಾಟಕ, ಹೊರದೇಶಗಳನ್ನು ಸುತ್ತಾಡಬೇಕೆಂಬ ಬಹುದೊಡ್ಡ ಕನಸನ್ನು ಹೊತ್ತಿದ್ದೆ. ವರ್ಷಕ್ಕೆ ಒಂದು ನಾಟಕ ತಯಾರಿಯಾದರೆ ಆ ನಾಟಕ ಹಲವಾರು ಕಡೆ ಪ್ರದರ್ಶನಗೊಳ್ಳುತ್ತಿತ್ತು. ಹೀಗಾಗಿ ಪ್ರದರ್ಶನ ಕಾಣುತ್ತಿದ್ದ ಎಲ್ಲಾ ಊರುಗಳಲ್ಲಿ ಇರುವ ಪ್ರವಾಸಿ ತಾಣಗಳನ್ನು ಸುತ್ತಾಡಲು ಅವಕಾಶ ಸಿಗುತ್ತಿತ್ತು.

ನಾಟಕ ಪ್ರದರ್ಶನಕ್ಕೆ ನಮ್ಮ ಉಡುಪಿಯಿಂದ ಹೊರಟರೆ ದಾರಿಮಧ್ಯೆ ಸಿಗುವ ಎಲ್ಲಾ ತಾಣಗಳನ್ನು ನೋಡಿಕೊಂಡು ಹೋಗುತ್ತಿದ್ದೆವು. ಹೋಗುವ ಊರಿನಲ್ಲಿ ಹಲವಾರು ಪ್ರವಾಸಿ ತಾಣಗಳು ಇದೆ ಎಂದಾದರೆ ನಮ್ಮ ಬಸ್ಸಿನಲ್ಲೇ ಒಂದು ರೌಂಡ್ ನಾಟಕ ಸಂಭಾಷಣೆಯನ್ನು ಪೂರ್ವಾಭ್ಯಾಸ  ಮಾಡಿಕೊಂಡು ಹೋಗುತ್ತಿದ್ದೆವು. ಯಾಕೆಂದರೆ ಹೋಗಿ ಒಂದೆರಡು ಬಾರಿ ರಿಹರ್ಸಲ್ ಅಂತ ಮಾಡಬೇಕು. ತಪ್ಪಾದರೆ ಮತ್ತೆ ಮತ್ತೆ ನಿರ್ದೇಶಕರು ಮಾಡಿಸುತ್ತಾ ಇರುತ್ತಾರೆ.  ಹಾಗೆ ಒಂದುವೇಳೆಯಾದರೆ ನಮ್ಮ ಸುತ್ತಾಟಕ್ಕೆ ಕಡಿವಾಣ ಬೀಳುತ್ತಿತ್ತು.

ನಾಟಕ ಪ್ರದರ್ಶನ ಕಾಣುವ ಊರಿಗೆ ನಮ್ಮ ಬಸ್ಸು ಹೋಗಿ ನಿಂತರೆ ಮೊದಲು ನಾವು ನೋಡುವುದೇ ಅಲ್ಲಿನ ಪ್ರವಾಸಿ ತಾಣ ಮತ್ತು ಅಲ್ಲಿನ ವಿಶೇಷ ಆಹಾರದ ಕುರಿತು. ಬೇಗ ಬೇಗ ಒಂದು ಸ್ಟೇಜ್ ರಿಹರ್ಸಲ್ ಮಾಡಿ ಸುತ್ತಾಟಕ್ಕೆ ಹೊರಟು ನಿಲ್ಲುತ್ತಿದ್ದೆವು. ಈ ರಂಗಭೂಮಿಯಿಂದ ಕರ್ನಾಟಕದ ಬಹುಪಾಲು ಜಿಲ್ಲೆಗೆ ಭೇಟಿಕೊಟ್ಟಿದ್ದೇನೆ.  ಮೂರರಿಂದ ನಾಲ್ಕು ಜಿಲ್ಲೆ ಬಾಕಿ ಇರಬಹುದು ಅಷ್ಟೇ. ಸಿಗುವ ಒಂದು ದಿನದಲ್ಲಿ ಸುತ್ತಾಟ ಮತ್ತು ನಾಟಕ ಎರಡೂ ಅರ್ಥಪೂರ್ಣವಾಗಿ ಮುಗಿಯುತ್ತಿತ್ತು.

Dildar Delhi Delhi Tourism National Capital Sangama Kalavidaru Manipal

ಈ ರಂಗಭೂಮಿಯ ಪಯಣದಲ್ಲಿ ಕರ್ನಾಟಕ ಬಿಟ್ಟು ಮೊದಲ ಬಾರಿ ಪಯಣ ನಡೆಸಿದ್ದು ರಾಷ್ಟ್ರೀಯ ರಾಜಧಾನಿ ನವ ದೆಹಲಿಗೆ. ನಮ್ಮ ನಾಟಕ ದೆಹಲಿಗೆ ಆಯ್ಕೆ ಆಗಿದೆ ಎಂದು ತಿಳಿದಾಗ ನಮ್ಮ ಗೆಳೆಯರು ಮೊದಲು ಕುಳಿತು ಪಟ್ಟಿ ಮಾಡಿದ್ದೇ ಅಲ್ಲಿನ ಪ್ರವಾಸಿ ತಾಣಗಳ ಕುರಿತು. ಬರೆಯುತ್ತಾ ಹೋದಂತೆ ಅಲ್ಲಿಗೆ ತೆರಳುವ ಆಸಕ್ತಿ ಇನ್ನಷ್ಟು ಹೆಚ್ಚಾಗತೊಡಗಿತು. ಹೋಗಿ ಬರುವ ಖರ್ಚೆಲ್ಲಾ ತಂಡವೇ ನೋಡಿಕೊಳ್ಳುವುದು.

ನಮ್ಮಲ್ಲಿ ಕೇವಲ 8 ದಿನವಿತ್ತು. ಟ್ರೈನ್ ನಲ್ಲಿ ಹೋಗಿ ಬರಲು 4 ದಿನ, ಪ್ರದರ್ಶನ ಒಂದು ದಿನ, ನಾಟಕದ ಕುರಿತು ಚರ್ಚೆ ಒಂದು ದಿನ ಮತ್ತು ನಾಟಕ ಪ್ರದರ್ಶನದ ಹಿಂದಿನ ಒಂದು ದಿನ ಪೂರ್ವಾಭ್ಯಾಸಕ್ಕಾಗಿ. ಉಳಿದದ್ದು ಒಂದು ದಿನವಷ್ಟೇ. ಪೂರ್ತಿ ನವದೆಹಲಿಯನ್ನು 1 ದಿನದಲ್ಲಿ ಹೇಗೆ ಸುತ್ತಾಡುವುದು? ಅದೂ ಬೇರೆ ಅಲ್ಲಿನ ಸ್ಥಳಗಳ ಕುರಿತು ಅಷ್ಟೊಂದು ತಿಳಿದಿಲ್ಲ.

ಕೊನೆಯ ದಿನ ಒಂದು ದಿನ ಸುತ್ತಾಡಲು ಅವಕಾಶವಿತ್ತು. ನಾಟಕ ಪ್ರದರ್ಶನವಾಗಿ ಮನಸ್ಸು ತಲೆ ಎರಡೂ ನಿರಾಳವಾಗಿತ್ತು. ಹಾಗಾಗಿ ಮುಂಜಾನೆ ಬೇಗನೆ ಎದ್ದು ಮೊದಲು ದೆಹಲಿಯ “ಕೆಂಪು ಕೋಟೆಗೆ” ತೆರಳಿದೆವು. ಇದಕ್ಕೆ “ಲಾಲ್ ಕಿಲಾ” ಎಂದೂ ಕರೆಯುತ್ತಾರೆ. ಇದು ದೆಹಲಿಯ ಸಮೀಪ ಆಗ್ರಾ ನಗರದಲ್ಲಿದೆ. ಪ್ರಸಿದ್ಧ ತಾಜ್ ಮಹಲ್ನಿಂದ 2.5 ಕಿಮೀ ದೂರದಲ್ಲಿದೆ. ಕೆಂಪು ಕೋಟೆ ನಿಜವಾಗಿ ಕೋಟೆಯಿಂದ ಸುತ್ತುವರಿದ ಅರಮನೆಗಳ ನಗರ ಎನ್ನಬಹುದು.

ಅಂದಿನ ಹೊಸ ರಾಜಧಾನಿಯಾಗಿದ್ದ ಷಾಜಹಾನ್ ಬಾದಿನ ಕೇಂದ್ರ ಸ್ಥಾನವಾಗಿ ಈ ಕೋಟೆಯನ್ನು ನಿರ್ಮಾಣ ಮಾಡಲಾಗಿತ್ತು. 17ನೇ ಶತಮಾನದ ಮಧ್ಯಭಾಗದಲ್ಲಿ ಈ ಕೋಟೆಯನ್ನು ನಿರ್ಮಿಸಲಾಯಿತು. ಉಸ್ತಾದ್ ಅಹಮ್ಮದ್ ಎಂಬುವರು ಈ ಕೋಟೆಯ ವಿನ್ಯಾಸಕಾರರು. ಈ ಕೋಟೆಯು ಸುಮಾರು 2.41ಕಿಮೀ.ವಿಸ್ತೀರ್ಣ ಹೊಂದಿದ್ದು, ಇದರ ಎರಡು ಪ್ರಮುಖ ದ್ವಾರಗಳನ್ನು ಲಾಹೋರ್ ಹಾಗೂ ದೆಹಲಿ ಗೇಟ್ ಎಂದು ಹೆಸರಿಸಲಾಗಿದೆ.

Dildar Delhi Delhi Tourism Red Fort Sangama Kalavidaru Manipal

ಒಮ್ಮೆ ಒಳಗೆ ಪ್ರವೇಶಿಸಿದ ನಂತರ ಉದ್ದಕ್ಕೆ ಅಂಗಡಿಗಳು ಕಾಣಸಿಗುತ್ತದೆ. ನಮಗೆ ಹಿಂದಿ ಬಾರದ ಕಾರಣ ಮೊದಲೇ ಸರ್ ಹೇಳಿದ್ದರು, ದುಬಾರಿ ಬೆಲೆ ಹೇಳುತ್ತಾರೆ. ಬೆಲೆ ಹೇಳಿದ ನಂತರ “ತೋಡಾ ಕಮ್ ಕಾರೋ ನಾ ಬಯ್ಯಾ” ಎಂದು ಹೇಳಿ. ಅದು ಬಿಟ್ಟು ಆಗ ಒಂದು ಅಕ್ಷರ ಜಾಸ್ತಿ ಹಿಂದಿ ಬರುತ್ತಿರಲಿಲ್ಲ. ಹೋದ ಅಂಗಡಿಗಳಲ್ಲಿ ವಸ್ತು ತೆಗೆದುಕೊಳ್ಳುವ ಸಮಯ ಅದೊಂದು ಮಾತ್ರ ಚೆನ್ನಾಗಿ ಹೇಳುತ್ತಿದ್ದೆವು.

ಸೋಮವಾರ ಹೊರತು ಪಡಿಸಿ ವಾರದ ಉಳಿದೆಲ್ಲಾ ದಿನವೂ ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ಪ್ರವಾಸಿಗರಿಗೆ ಈ ಕೋಟೆ ತೆರೆದಿರುತ್ತದೆ. ನಿಮಗೆ ಬೇಕಾದಲ್ಲಿ ಗೈಡ್ ನೇಮಿಸಿಕೊಳ್ಳಬಹುದು. ಇಲ್ಲಿ ಕ್ಯಾಂಟೀನ್, ಶೌಚಾಲಯ ಹಾಗೂ ಪ್ರವಾಸಿಗರಿಗೆ ಬೇಕಾದ ಅನುಕೂಲಗಳನ್ನು ಮಾಡಲಾಗಿದೆ.

ಆ ದಿನ ಭೇಟಿನೀಡಿದ ಇನ್ನೊಂದು ಪ್ರಸಿದ್ಧ ತಾಣ, “ಕುತುಬ್ ಮಿನಾರ್”. ಇದು 236ft ಎತ್ತರವಿದೆ. ದೆಹಲಿಯ ಸುಲ್ತಾನನಾಗಿದ್ದ ಕುತುಬ್-ಉದ್-ದೀನ್ ಕ್ರಿ.ಶ. 1199ರ ಸುಮಾರಿನಲ್ಲಿ ಇದರ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದ. ಆತನ ತರುವಾಯ ಆಡಳಿತ ವಹಿಸಿಕೊಂಡ ಸುಲ್ತಾನ್ ಇಲ್ತ್ ಮುಷ್ 1230ರ ಸುಮಾರಿಗೆ ನಿರ್ಮಾಣವನ್ನು ಪೂರ್ತಿಗೊಳಿಸಿದ. ಆಗ ಅದು ನಾಲ್ಕು ಅಂತಸ್ತನ್ನು ಹೊಂದಿತ್ತು. ಫಿರೋಜ್ ಷಾ ತುಘಲಕ್‍ನ ಕಾಲದಲ್ಲಿ ಸಿಡಿಲು ಬಡಿದು ನಾಲ್ಕನೆಯ ಅಂತಸ್ತು ನಾಶವಾಯಿತು. ಆಗ ಮೊದಲಿಗಿಂತ ಕಿರಿದಾದ ನಾಲ್ಕು ಮತ್ತು ಐದನೆಯ ಅಂತಸ್ತುಗಳನ್ನು ನಿರ್ಮಿಸಿದರು. ಇಂದು ಒಟ್ಟು 5 ಅಂತಸ್ತನ್ನು ಹೊಂದಿದೆ.

ಹಾಗೇ ಈ ಗೋಪುರದ ತುದಿಗೇರಲು ಒಳಭಾಗದಲ್ಲಿ 376 ಮೆಟ್ಟಿಲುಗಳಿವೆ. ಒಂದು ಕೋನದಲ್ಲಿ ನಿಂತು ನೋಡಿದಾಗ ಕುತುಬ್ ಮಿನಾರ್ 25-30 ಸೆಂ.ಮೀ ಅಷ್ಟು ವಾಲಿರುವಂತೆ ಕಾಣಿಸುತ್ತದೆ.

ಕುತುಬ್ ಮಿನಾರಿನ ಆವರಣದಲ್ಲಿ  ಕಬ್ಬಿಣದ ಕಂಬ ಒಂದಿದೆ. ಅದು ನಾಲ್ಕನೆಯ ಶತಮಾನದಲ್ಲಿ ನಿರ್ಮಾಣಗೊಂಡಿದ್ದು. ಸತತವಾದ ಗಾಳಿ ಮಳೆಗೆ ಮೈ ಒಡ್ಡಿಯೂ ತುಕ್ಕು ಹಿಡಿಯದೇ ನಿಂತಿರುವ ಇದರ ಮೇಲೆ ಚಂದ್ರಗುಪ್ತ ವಿಕ್ರಮಾದಿತ್ಯರ ವಿಜಯಗಳನ್ನು ಕೊಂಡಾಡುವ ಶಾಸನಗಳನ್ನು ಕೆತ್ತಲಾಗಿದೆ. ಈ ಕಂಬವನ್ನು ನಾವು ಅಪ್ಪಿಕೊಂಡು ನಮ್ಮ ಆಸೆ ಕನಸುಗಳನ್ನು ಹೇಳಿಕೊಂಡರೆ ಅದು ನೆರವೇರುತ್ತದೆ ಎಂಬ ಮಾತಿದೆ.

ನೀವುಇದನ್ನುಇಷ್ಟಪಡಬಹುದು: ಅಸ್ಸಾಂನಲ್ಲೊಂದು ಅಪರೂಪದ ರಂಗ ಶಾಲೆ: ಕುಬ್ಜರ ರಂಗ ತಂಡದ ವಿಶಿಷ್ಟ ಕಥೆ

Iron Pillar Dildar Delhi Delhi Tourism Sangama Kalavidaru Manipal

ಈ ಕುತುಬ್ ಮಿನಾರ್ ನಲ್ಲಿ ನಾವು ಫೋಟೋ ತೆಗೆದದ್ದು ಒಂದಾ ಎರಡಾ? ಗ್ರೂಫ್ ಫೋಟೋ ಒಂದಿಷ್ಟು, ಒಬ್ಬೊಬ್ಬರ ಫೋಟೋ, ಅಲ್ಲಿ ನಿಂತು ಒಂದು ಫೋಟೋ, ಇಲ್ಲಿ ನಿಂತು ಒಂದು ಫೋಟೋ, ಹತ್ತಿರದಿಂದ ಮುಖ ಕಾಣುವಂತೆ ಒಂದು ಫೋಟೋ ಹಾಗೆ ನಾವು ಮತ್ತು ಕುತುಬ್ ಮಿನಾರ್ ಜೊತೆಗೆ ಪೂರ್ತಿ ಕಾಣುವಂತೆ ಒಂದು ಫೋಟೋ. ಅಬ್ಬಬ್ಬಾ ಸಮಯ ಹೋದದ್ದೇ ಗೊತ್ತಾಗಲಿಲ್ಲ.

ಆ ತಾಣವನ್ನು ವೀಕ್ಷಿಸಿ ನಂತರ ದೆಹಲಿಯ ಬಿರ್ಲಾ ಮಂದಿರಕ್ಕೆ ತೆರಳಿದೆವು. ಇದು ಲಕ್ಷ್ಮೀನಾರಾಯಣ ಮಂದಿರ ಅಂತಲೂ ಕರೆಸಿಕೊಳ್ಳುತ್ತದೆ. ಆ ದೇವಾಲಯದ ವಾತಾವರಣ ನಮ್ಮ ಮನಸ್ಸನ್ನು ಶಾಂತಿಯ ಕಡೆಗೆ ಕರೆದೊಯ್ಯುತ್ತದೆ. ನಾವು ಹುಡುಗಿಯರು ಎಲ್ಲರೂ ಸಂಗೀತದಲ್ಲಿ ಪಳಗಿರುವ ಕಾರಣ ಹಾಡನ್ನು ಹಾಡಿದೆವು. ಆದರೆ ಅಲ್ಲಿ ಬಂದ ಭಕ್ತರಿಗೆ ನಮ್ಮ ಭಾಷೆ ಅರ್ಥವಾಗದೆ ಇದ್ದರೂ ನಮ್ಮ ಭಜನೆಗೆ ತಕ್ಕ ತಾಳವನ್ನು ಹಾಕಿ ಭಕ್ತಿಯಿಂದ ಸ್ಮರಿಸುತ್ತಿದ್ದರು.

1939ರಲ್ಲಿ ಉದ್ಯಮಿ ಜಿ.ಡಿ. ಬಿರ್ಲಾರಿಂದ ನಿರ್ಮಾಣಗೊಂಡಿರುವ ಈ ಮಂದಿರವನ್ನು ಮಹಾತ್ಮಗಾಂಧೀಜಿ ಉದ್ಘಾಟಿಸಿದ್ದರು. ಇಲ್ಲಿನ ಮುಖ್ಯ ಗುಡಿಯಲ್ಲಿ ದೇವಿ ಲಕ್ಷ್ಮಿ ಹಾಗೂ ನಾರಾಯಣ ದೇವರಿಗೆ ಪೂಜೆ ಸಲ್ಲುತ್ತದೆ. ಈ ಮುಖ್ಯ ದೇವಾಲಯದ ಸುತ್ತ ಅನೇಕ ಚಿಕ್ಕ ಮಂದಿರಗಳು ಇವೆ. ಇವು ಕೃಷ್ಣ, ಶಿವ, ಗಣೇಶ, ಹನುಮಂತ, ಬುದ್ಧ ಮತ್ತಿತರರ ಆಲಯವಾಗಿದೆ. ಶಕ್ತಿ ದೇವತೆಯಾದ ದುರ್ಗೆಗೆ ಮೀಸಲಾದ ದೇವಾಲಯವೂ ಇಲ್ಲೊಂದಿದೆ.

Birla Temple Dildar Delhi Delhi Tourism Sangama Kalavidaru Manipal

ಈ ದೇವಾಲಯಕ್ಕೆ ಬರಲು ಸಾರಿಗೆ ವ್ಯವಸ್ಥೆಯೂ ಅನುಕೂಲಕರವಾಗಿದೆ. ಮಂದಿರವು ಬೆಳಗ್ಗೆ 6 ರಿಂದ ಸಂಜೆ 10 ರವರೆಗೆ ತೆರೆದಿರುತ್ತದೆ. ವಾರದ ಎಲ್ಲಾ ದಿನವೂ ಮುಕ್ತ ಪ್ರವೇಶಾವಕಾಶ ಇದೆ.

ನಂತರ ನಾವು ಊಟ ಮುಗಿಸಿ ನೇರ ತೆರಳಿದ್ದು “ಹುಮಾಯುನ್‌ ಟೊಂಬ್‌ಗೆ” ಇದನ್ನು ಮುಘಲ್‌ ಅರಸರ ಅವಧಿಯಲ್ಲಿ ನಿರ್ಮಿಸಲಾಗಿದೆ. ಇದು ಇಲ್ಲಿನ ಅತ್ಯಂತ ಜನಪ್ರಿಯ ತಾಣವಾದ ಓಲ್ಡ್‌ ಫೋರ್ರ್ಟ್ ಅಥವಾ ಪುರಾನಾ ಖಿಲಾ ಬಳಿ ಇದೆ. ಇದನ್ನು 1562 ರಲ್ಲಿ ನಿರ್ಮಿಸಲಾಗಿದೆ. ಇದನ್ನು ಪರ್ಶಿಯನ್‌ ವಾಸ್ತುಶಿಲ್ಪಿ ಮಿರಕ್‌ ಮಿರ್ಜಾಗಿಯಾತ್‌ ಅವರು ವಿನ್ಯಾಸಪಡಿಸಿದ್ದಾರೆ.

ನಿಜಾಮುದ್ದೀನ್‌ ನ ಪೂರ್ವ ದಿಕ್ಕಿನ ಪ್ರದೇಶದಲ್ಲಿದೆ. ಇದು ಲೋದಿ ರಸ್ತೆ ಹಾಗೂ ಮಾಥುರ್‌ ರಸ್ತೆ ನಡುವೆ ಇದೆ. ಹಾಗೇ ದೇಶದಲ್ಲಿರುವ ಆಕರ್ಷಕ ಮುಘಲ್‌ ವಾಸ್ತುಶಿಲ್ಪ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನನ್ನ ನೆಚ್ಚಿನ ತಾಣದಲ್ಲಿ ಇದೂ ಒಂದು, ಇಲ್ಲಿಯ ವಾಸ್ತುಶಿಲ್ಪ ತುಂಬಾ ಇಷ್ಟವಾಯಿತು. ಇಲ್ಲಿ ನಡೆದಾಡುವಾಗ ಒಂದು ರೀತಿ ನಾನೇ ರಾಣಿ ಎಂದು ಅನಿಸುತ್ತದೆ. ಯಾಕೆಂದರೆ ಅಷ್ಟು ಶ್ರೀಮಂತಿಕೆಯ ಭಾವ ಮೂಡಿಸುತ್ತದೆ. ಮತ್ತು ಇಲ್ಲಿರುವ ಕಮಾನುಗಳು ರಾಜ ಗಾಂಭೀರ್ಯವನ್ನು ಸೂಚಿಸುತ್ತದೆ. ಹಾಗೇ ಇಲ್ಲಿ ಸುತ್ತಾಡಲು ಸುಂದರ ಉದ್ಯಾನವನವಿದೆ.

ಹಾಗೇ ದೆಹಲಿಯಲ್ಲಿ ಕಾಣ ಸಿಗುವ ಅತೀ ದೊಡ್ಡ ಭಾರತದ ಬಾವುಟವನ್ನು ನೋಡಿಕೊಂಡು ನಂತರ ಹೋದದ್ದು “ರಾಜ್ ಘಾಟ್” ಇದು ಮಹಾತ್ಮ ಗಾಂಧಿಯವರ ಅಂತ್ಯಸಂಸ್ಕಾರ ಮಾಡಿದ  ಸ್ಥಳ ಮತ್ತು ಇದನ್ನು ಜನವರಿ 31 1948 ರಂದು ಅವರ ಹತ್ಯೆಯಾದ ನಂತರ ನಿರ್ಮಿಸಲಾಯಿತು.  ಈ ಸ್ಮಾರಕವು ಕಪ್ಪು ಅಮೃತಶಿಲೆಯಿಂದ ಕಟ್ಟಿದ ಚೌಕಾಕಾರದ ಚಪ್ಪಟೆ ವೇದಿಕೆಯಾಗಿದೆ. ಸಮಾಧಿ ಮೇಲೆ ‘ಹೇ ರಾಮ್’ ಎಂದು ಕೆತ್ತಲಾಗಿದೆ. ಈ ಪದಗಳನ್ನು ಮಹಾತ್ಮಾ ಗಾಂಧಿ ಕೊನೆಯದಾಗಿ ಉಚ್ಚರಿಸಿದ ಪದಗಳು ಎಂದು ನಂಬಲಾಗಿದೆ.

Raj Ghat Dildar Delhi Delhi Tourism Sangama Kalavidaru Manipal

ಈ ಪ್ರಸಿದ್ಧ ಸ್ಮಾರಕವನ್ನು ನೋಡಲು ಬರುವವರು ಕೆಲವು ವಿಷಯಗಳನ್ನು ನೆನಪಿಡಬೇಕು. ಗಾಂಧಿ ನೆನಪಿಗಾಗಿ ಗೌರವ ಸೂಚನೆ, ಭೇಟಿಮಾಡುವವರು ಚಪ್ಪಲಿಗಳನ್ನು ತೆಗೆದಿಟ್ಟು ಒಳಗೆ ಪ್ರವೇಶಿಸಬೇಕು. ಹಾಗೂ ನಿಶಬ್ಧವಾಗಿರಬೇಕು. ಆದರೆ ಇದು ನಮಗೆ ತಿಳಿದಿರಲಿಲ್ಲ ಹಾಗಾಗಿ ನಾವು ಹರಟೆ ಮಾಡಿಕೊಂಡು ಹೋದೆವು ಎಂದು ಅಲ್ಲಿನ ಸಿಬ್ಬಂದಿ ನಮ್ಮನ್ನು ಬೈದು ಬೇಗ ಹೊರಗೆ ಕಳುಹಿಸಿದ್ದಾನೆ. ಮತ್ತೆ ನಾವು ಹೊರಗೆ ಹೋಗಿ ಪುನಃ ಪ್ರವೇಶ ದ್ವಾರದಿಂದ ಬರಲು ಪ್ರಯತ್ನಿಸಿದೆವು ಆದರೆ ಆಗಲಿಲ್ಲ.

ನೀವು ರಾಜ್ ಘಾಟ್ ಭೇಟಿ ಮಾಡಿದಾಗ, ಕೇವಲ ಸ್ಮಾರಕ ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರತವನ್ನು ಆಳಿದ ವಿವಿಧ ಪ್ರಮುಖ ರಾಜಕೀಯ ನಾಯಕರ ಸ್ಮಾರಕಗಳನ್ನು ಸಹ ಕಾಣಬಹುದು. ಶಾಂತಿವನ – ಜವಾಹರ ಲಾಲ್ ನೆಹರು ಸ್ಮಾರಕ, ವಿಜಯ್ ಘಾಟ್ – ಲಾಲ್ ಬಹದ್ಧೂರ್ ಶಾಸ್ತ್ರೀ ಸ್ಮಾರಕ, ಶಕ್ತಿ ಸ್ಥಳ್ – ಇಂದಿರಾ ಗಾಂಧಿ ಸ್ಮಾರಕ, ಏಕತಾ ಸ್ಥಳ – ಗಿಯಾನಿ ಜೈಲ್ ಸಿಂಗ್ ಸ್ಮಾರಕ ಮತ್ತು ವೀರ ಭೂಮಿ – ರಾಜೀವ ಗಾಂಧಿ ಸಮಾಧಿ ಇಲ್ಲಿರುವ ಇನ್ನೂ ಹಲವು ಪ್ರಮುಖ ಆಕರ್ಷಣೆಗಳು.

ನಾವು ಸಮಯವಿಲ್ಲದ ಕಾರಣ ಕೊನೆಯದಾಗಿ ಭೇಟಿ ನೀಡಿದ್ದು ಮತ್ತು ನನ್ನ ಜೀವನದಲ್ಲಿ ಮರೆಯಲಾಗದ ಸ್ಥಳ ಅದು “ಅಕ್ಷರಧಾಮ” ಯಮುನಾ ನದಿ ದಡದಲ್ಲಿರುವ ಈ ವಿಶ್ವಪ್ರಸಿದ್ಧ ದೇಗುಲ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಎಂಬ ಕಾರಣಕ್ಕೆ ಇದು ಗಿನ್ನೆಸ್ ದಾಖಲೆ ಪುಸ್ತಕ ಸೇರಿದೆ. ಇಲ್ಲಿ ಶ್ರೀ ಸ್ವಾಮಿನಾರಾಯಣ ದೇವರನ್ನು ಪೂಜಿಸಲಾಗುತ್ತದೆ. ದೇವರ ಕಣ್ಣಿನಲ್ಲಿ ಎರಡು ಕ್ಯಾಮರಾಗಳಿವೆ. ಕೆಂಪನೆ ಕಾಣುವ ಕಣ್ಣು ಒಮ್ಮೆ ಭಯ ಬಿಳಿಸುತ್ತದೆ.

ಸುಮಾರು 100 ಎಕರೆ ಪರಿಸರದಲ್ಲಿ ನಿರ್ಮಾಣವಾಗಿದೆ. 2005ರಲ್ಲಿ ಉದ್ಘಾಟನೆಗೊಂಡ ದೇವಸ್ಥಾನವನ್ನು  ‘ಬಿಳಿ ಅಮೃತಶಿಲೆ’ ಬಳಸಿ ನಿರ್ಮಿಸಲಾಗಿದೆ. ಕಾಂಪ್ಲೆಕ್ಸ್ ನ ಮಧ್ಯಭಾಗದಲ್ಲಿ ದೇವಾಲಯವಿದೆ. ಇದು ಸುಮಾರು 141 ಅಡಿ ಎತ್ತರವಿದ್ದು ಆಕರ್ಷಕ ಕಲಾಕೃತಿಗಳಿರುವ 234 ಕಂಬಗಳನ್ನು ಹೊಂದಿದ್ದು 9 ಅಲಂಕಾರಿಕ ಗೋಪುರಗಳಿವೆ, 20 ಮೂಲೆ ಗೋಪುರಗಳಿದ್ದು ಆನೆ ರೂಪದ ಗದ್ದಿಗೆ ಕಲ್ಲುಗಳಿವೆ. ಸುಮಾರು 20,000 ಕ್ಕೂ ಹೆಚ್ಚು ದೇವಾನು-ದೇವತೆಗಳು, ಭಕ್ತರು ಹಾಗೂ ಸಂತರ ಮೂರ್ತಿಗಳಿಲ್ಲಿವೆ.

Akshardham Temple Dildar Delhi Delhi Tourism Sangama Kalavidaru Manipal

ಇಲ್ಲಿನ ವೈಶಿಷ್ಟ್ಯ ನೋಡಿ ನಾನು ಬೆರಗಾಗಿದ್ದೆ. ಅಲ್ಲಿ ಧ್ಯಾನಕ್ಕೆ ಕೂತವಳು ಏಳಲಿಲ್ಲ. ಅಷ್ಟು ಪ್ರಶಾಂತ ವಾತಾವರಣ. ನನ್ನ ತಂಡದ ಜೊತೆ ಅಲ್ಲಿ ಮಾತನಾಡುವ ಸಮಯದಲ್ಲಿ ಹೇಳಿದ್ದೆ. ನಾನು ಇಲ್ಲೇ ಇದ್ದು ಬಿಡುತ್ತೇನೆ. ಇಷ್ಟು ಮನಸ್ಸಿಗೆ ಸಂತೋಷ ನೀಡಿದ ತಾಣ ಬೇರೆಲ್ಲೂ ನನಗೆ ಸಿಗಲಿಲ್ಲ. ಸ್ವಲ್ಪ ಹೊತ್ತು ಕೂರೋಣ ಎಂದೆ. ಆದರೆ ಸಮಯದ ಅಭಾವದಿಂದ ಬೇಗನೆ ಹೊರಟೆವು. ಹೊರಡಲು ಮನಸ್ಸಿಲ್ಲದೆ ಹೊರಟ ತಾಣ ಅದು ಅಕ್ಷರಧಾಮ.

ಹಾಗೇ ಇಂಡಿಯಾ ಗೇಟ್, ಲೋಟಾಸ್ ಟೆಂಪಲ್, ಜಂತರ್ ಮಂತರ್, ಇಸ್ಕಾನ್ ದೇವಾಲಯ ಈ ಎಲ್ಲವನ್ನೂ ಬಸ್ಸಿನಲ್ಲಿ ಹೋಗುವಾಗ ದೂರದಿಂದ ನೋಡಿದ್ದು ಅಷ್ಟೇ. ಇನ್ನೊಂದು ಅತೀ ದೊಡ್ಡ ವಿಪರ್ಯಾಸವೇನೆಂದರೆ, ದೆಹಲಿಗೆ ಹೋದರೆ ಆ ತಾಣವನ್ನು ನೋಡದೆ ಜನ ಹಿಂತಿರುಗಿ ಊರಿಗೆ ಬರುವುದಿಲ್ಲ. ಅದುವೇ “ತಾಜ್ ಮಹಲ್”. ಆ ಪ್ರವಾಸಿ ತಾಣವನ್ನು ನೋಡುವ ಭಾಗ್ಯ ನಮಗೆ ದೊರಕಲಿಲ್ಲ. ಆ ತಾಣವನ್ನು ನೋಡಬೇಕೆಂದು ಹಠ ಹಿಡಿದ್ದಿದೆವು. ಎಷ್ಟೇ ಕಾಡಿ ಬೇಡಿದರೂ ಕಾರಣಾಂತರಗಳಿಂದ ಹೋಗಲು ಸಾಧ್ಯವಾಗಲಿಲ್ಲ.

ಆದರೆ 2018ರಲ್ಲಿ ಇನ್ನೊಂದು ನಾಟಕದ ಮೂಲಕ ಎರಡನೇ ಬಾರಿಗೆ ದೆಹಲಿಗೆ ಹೋಗುವ ಅವಕಾಶ ಸಿಕ್ಕಿತು. ಆಗ ಉಳಿದ ಎಲ್ಲಾ ಪ್ರವಾಸಿ ತಾಣಗಳನ್ನು ನೋಡಿ ಬಂದೆವು.  ಹಾಗೇ ನನ್ನ ನೆಚ್ಚಿನ ತಾಣ ಅಕ್ಷರಧಾಮಕ್ಕೆ ಮತ್ತೊಮ್ಮೆ ಭೇಟಿ ನೀಡುವ ಅವಕಾಶ ಸಿಕ್ಕಿತು. ನನ್ನ ಪ್ರವಾಸದ ಆಸಕ್ತಿಗೆ ಇನ್ನಷ್ಟು ಹುರುಪು ನೀಡಿದ್ದು ಸಂಗಮ ಕಲಾವಿದರು ಮಣಿಪಾಲ ತಂಡ. ಆ ತಂಡಕ್ಕೆ ನಾನು ಆಭಾರಿಯಾಗಿರುತ್ತೇನೆ. ಜಿಲ್ಲೆ ರಾಜ್ಯ ಹಾಗೇ ಇನ್ನು ವಿದೇಶ ಸುತ್ತಬೇಕೆಂಬ ಆಸೆ ಇದೆ. ನೋಡೋಣ…

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button