ಇವರ ದಾರಿಯೇ ಡಿಫರೆಂಟುಬಣ್ಣದ ಸ್ಟುಡಿಯೋವಿಂಗಡಿಸದಸ್ಫೂರ್ತಿ ಗಾಥೆ

ಶಿವಶಂಕರ ಬಣಗಾರ ಹೇಳಿದ ಫೋಟೋಗ್ರಫಿ ಪಾಠಗಳು

ಛಾಯಾಗ್ರಹಣದ ಹೊಸ ಆಯಾಮಗಳ ಬಗ್ಗೆ ಪ್ರಸಿದ್ಧ ಫೋಟೋಗ್ರಾಫರ್ ಶಿವಶಂಕರ ಬಣಗಾರ, ಅವರ ಅನುಭವ ಮತ್ತು ಛಾಯಾಚಿತ್ರ ಕ್ಷೇತ್ರದ ಸ್ಥಿತಿಗತಿಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

  • ಮಧುರಾ ಎಲ್ ಭಟ್

ಇಂದಿನ ದಿನಗಳಲ್ಲಿ ಛಾಯಾಗ್ರಹಣ ಮಾಡುವುದಿರಬಹುದು ಅಥವಾ ಛಾಯಾಚಿತ್ರ ತೆಗೆಸಿಕೊಳ್ಳುವುದಿರಬಹುದು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾದ ಕೆಲಸವೇ. ನಾವು ಕಳೆಯುವ ಪ್ರತಿಯೊಂದು ನಿಮಿಷವನ್ನೂ ಸೆರೆಹಿಡಿದುಕೊಳ್ಳಲು ಬಯಸುವ ಮನಸ್ಸು ಯಾವುದೇ ತರಹದ ಛಾಯಾಚಿತ್ರವನ್ನು ನೋಡಿದರು ಕಣ್ಣು ಮಿಟುಕಿಸದೆ ಒಂದು ಕ್ಷಣ ಅದನ್ನೇ ನೋಡಿ ಅದಕ್ಕೆ ನಮ್ಮದೆ ಭಾವನೆ ಬೆರೆಸಿ ಬಿಡುತ್ತದೆ.

ಫೋಟೋಗ್ರಾಫಿಯನ್ನೇ ತನ್ನ ಜೀವನವನ್ನಾಗಿಸಿಕೊಂಡ ಹಂಪಿ ಜಿಲ್ಲೆಯ ಹೊಸಪೇಟೆ ನಗರದ ಶಿವಶಂಕರ ಬಣಗಾರ ಇವರು, ಛಾಯಾಗ್ರಹಣದ ಬಗ್ಗೆ ನಮ್ಮ ಜೊತೆ ಹಂಚಿಕೊಂಡ ಅನುಭವ ಮತ್ತು ಮಾಹಿತಿಗಳು ನಿಮ್ಮ ಮುಂದೆ.

Shivashankar Banagara Famous Photographer Hampi Karnataka Tourism

ನನಗೆ ಛಾಯಾಗ್ರಹಣ ಎಂದರೆ ಮೊದಲಿನಿಂದಲೂ ಎಲ್ಲಿಲ್ಲದ ಆಸಕ್ತಿ. ಆದರೆ ಛಾಯಾಗ್ರಹಣ ಮಾಡಲು ನನ್ನಲ್ಲಿ ಕ್ಯಾಮರಾ ಇಲ್ಲದ ಕಾರಣ ೨೦೧೨ರವರೆಗೂ ಬೇರೆಯವರ ಛಾಯಾಚಿತ್ರ ನೋಡಿಯೇ ಖುಷಿಪಡಬೇಕಾಯಿತು. ಮತ್ತು ನನ್ನಲ್ಲಿ ಕ್ಯಾಮರಾ ತೆಗೆದುಕೊಳ್ಳುವಷ್ಟು ದುಡ್ದು ಇರಲಿಲ್ಲ. 2012ರ ನಂತರ ನಾನು ವಿಜಯ ಕರ್ನಾಟಕ ದಿನಪತ್ರಿಕೆ ಸೇರಿಕೊಂಡಾಗ ವರದಿ, ನುಡಿಚಿತ್ರಗಳಿಗೆ ಛಾಯಾಚಿತ್ರ ನೀಡುವ ಸಲುವಾಗಿ ಕ್ಯಾಮರಾವನ್ನು ಕೊಂಡುಕೊಳ್ಳಲೇ ಬೇಕಾಯಿತು. ಅಲ್ಲಿಂದ ನನ್ನ ಛಾಯಾಗ್ರಹಣ ಜೀವನ ಪ್ರಾರಂಭವಾಗಿದ್ದು.

ಛಾಯಾಗ್ರಾಹಕರು ಛಾಯಾಚಿತ್ರವನ್ನು ತೆಗೆಯುವ ಮುನ್ನ ಚಿತ್ರದ ಹಿನ್ನಲೆಯನ್ನು ತಿಳಿದುಕೊಂಡಿರುವುದು ಬಹುಮುಖ್ಯವಾಗಿರುತ್ತದೆ. ಮತ್ತು ಛಾಯಾಗ್ರಣಕ್ಕಾಗಿ ತಾವು ಬಳಸುವ ಕ್ಯಾಮರಾದ ಬಗ್ಗೆ ಮಾಹಿತಿ ತಿಳಿದಿರಬೇಕು. ಏಕೆಂದರೆ ಈ ಛಾಯಾಗ್ರಹಣದಲ್ಲಿ ಕ್ಯಾಮರಾಗಳೆ ಒಬ್ಬ ಛಾಯಾಗ್ರಾಹಕನಿಗೆ ದೊಡ್ಡ ಸವಾಲಾಗಿರುತ್ತದೆ.

ನಾನು ಛಾಯಾಗ್ರಹಣ ಆರಂಭಿಸಿದ್ದು ಮೊದಲು ಸೋನಿ 10x ಕ್ಯಾಮರಾದಲ್ಲಿ. ನಂತರ 30x, 50x ಸೋನಿ ಅಲ್ವಾಸಿರಿಸ್, ನಿಕೋನ್ ಡಿ 800, ಪ್ರಸ್ತುತವಾಗಿ ಮಿರರ್ಲೆಸ್ ಕ್ಯಾಮೆರಾ ನನ್ನ ಬಳಿಯಿದೆ.

ನಾನು ಆರಂಭದಲ್ಲಿ ತೆಗೆಯುತ್ತಿದ್ದ ಛಾಯಾಚಿತ್ರಕ್ಕು ಈಗ ತೆಗೆಯುತ್ತಿರುವ ಛಾಯಾಚಿತ್ರಕ್ಕು ತುಂಬಾನೆ ವ್ಯತ್ಯಾಸವಿದೆ. ಏಕೆಂದರೆ ಛಾಯಾಗ್ರಹಣದಲ್ಲಿ ನಾವು ಬಳಸುವ ಉಪಕರಣಗಳು ಚೆನ್ನಾಗಿದ್ದರೆ ನಾವು ತೆಗೆಯುವ ಛಾಯಾಚಿತ್ರವು ತುಂಬಾ ನಿಖರವಾಗಿ, ಸ್ವಷ್ಟವಾಗಿ ಬರುತ್ತದೆ. ಮತ್ತು ಛಾಯಾಗ್ರಹಣದಲ್ಲಿ ಛಾಯಾಗ್ರಾಹಕರು ಆದಷ್ಟು ಹೊಸ ತಂತ್ರಜ್ಞಾನದ ಉಪಕರಣಗಳ ಬಳಕೆ ಮಾಡಬೇಕು. ಎಷ್ಟು ಹೊಸ ತಂತ್ರಜ್ಞಾನವನ್ನು ಬಳಸಿ ಛಾಯಾಚಿತ್ರವನ್ನು ತೆಗೆಯುತ್ತೇವೆಯೋ ಅಷ್ಟು ಸುಂದರ ಛಾಯಾಚಿತ್ರ ನಮ್ಮದಾಗಿರುತ್ತದೆ.

ಈ ಛಾಯಾಗ್ರಹಣದಲ್ಲಿ ಹೊಸತನ ಇದಷ್ಟು ಜನರು ನಮ್ಮ ಛಾಯಾಚಿತ್ರವನ್ನು ಇಷ್ಟಪಡುತ್ತಾರೆ. ನಾನು ಹಂಪಿಯಲ್ಲಿ ಲಕ್ಷಾಂತರ ಛಾಯಾಚಿತ್ರವನ್ನು ತೆಗೆದಿದ್ದೇನೆ. ಇದಕ್ಕೆ ಮುಖ್ಯ ಕಾರಣ ನನ್ನಲ್ಲಿ ಹೊಸತನವನ್ನು ಹುಡುಕುವ ಮನಸ್ಸು ಇರುವುದು. ಈ ಛಾಯಾಗ್ರಹಣದಲ್ಲಿ ನಾವು ಆರಿಸಿಕೊಳ್ಳುವ ವಸ್ತು ಒಂದೇ ಆಗಿದ್ದರು ಅದು ವಾತಾವರಣಕ್ಕೆ ತಕ್ಕಂತೆ ತನ್ನ ಹೊರ, ಒಳನೋಟವನ್ನು ಬದಲಿಸುತ್ತಲೇ ಇರುತ್ತದೆ.

Shivashankar Banagara Famous Photographer Hampi Karnataka Tourism

ಆ ರೀತಿ ಬದಲಾವಣೆ ಆದಾಗಲೆಲ್ಲ ಅದರಲ್ಲಿ ಹೊಸದನ್ನು ಹುಡುಕಿ ಛಾಯಾಚಿತ್ರ ತೆಗೆಯಬೇಕು. ನಮ್ಮಲ್ಲಿನ ಸಂಭವನೀಯತೆ ಮತ್ತು ಸಾಧ್ಯತೆ ಎನ್ನುವುದು ನಮ್ಮನ್ನು ಹೊಸತನಕ್ಕೆ ಒಡ್ಡುತ್ತದೆ. ಇಲ್ಲಿ ಛಾಯಾಗ್ರಹಣವನ್ನು ಮಾಡುವವನ ಮನಸ್ಸು ಮತ್ತು ಛಾಯಾಚಿತ್ರವನ್ನು ನೋಡುವವನು ಮನಸ್ಸು ವಿಭಿನ್ನ ರೀತಿಯಲ್ಲಿ ಇರುತ್ತದೆ. ಅದಕ್ಕೆ ತಕ್ಕಂತೆ ಛಾಯಾಗ್ರಾಹಕರು ತಮ್ಮಲ್ಲಿನ ಸೃಜನಶೀಲತೆಯನ್ನು ಬಳಸಿಕೊಂಡು ಛಾಯಾಗ್ರಹಣವನ್ನು ಮಾಡಬೇಕು.

ಛಾಯಾಗ್ರಹಣ ಮಾಡಲು ಒಬ್ಬ ಛಾಯಾಗ್ರಾಹಕನಿಗೆ ಸ್ಫೂರ್ತಿ ಎಂದರೆ ಅದುವೇ ಅವನು ನೋಡಿದ ಅಥವಾ ಓದಿದ ಪುಸ್ತಕ, ಕವಿತೆ, ಸಿನೆಮಾ, ನಾಟಕ, ಬರಹ ಮುಂತಾದವುಗಳು. ನಾನು ಛಾಯಾಗ್ರಹಣವನ್ನು ಮಾಡುವಾಗ ಅದೆಷ್ಟೋ ಬಾರಿ ನಾನು ಓದಿದ ಪುಸ್ತಕವನ್ನು, ಸಿನಿಮಾವನ್ನು ನೆನೆಸಿಕೊಂಡೇ ಛಾಯಾಗ್ರಹಣ ಮಾಡಿದ್ದು ಇದೆ.

ಆದರೆ ಇಂದಿನ ದಿನಗಳಲ್ಲಿ ಕ್ಯಾಮರಾ ಛಾಯಾಗ್ರಹಣಕ್ಕಿಂತ ಮೊಬೈಲ್ ಛಾಯಾಗ್ರಹಣ ಹೆಚ್ಚಾಗಿ ಕಂಡುಬರುತ್ತಿದೆ. ಮೊದಲೆಲ್ಲಾ ಮನೆಯಲ್ಲಿ ಸಣ್ಣಪುಟ್ಟ ಕಾರ್ಯಕ್ರಮವಾದರೂ ಛಾಯಾಗ್ರಾಹಕನನ್ನು ಕರೆಯಿಸಿ ಛಾಯಾಗ್ರಹಣವನ್ನು ಮಾಡಿಸುತ್ತಿದ್ದರು ಆದರೆ ಯಾವಾಗ ಮೊಬೈಲಿನಲ್ಲಿ ಕ್ಯಾಮೆರಾಗಳು ಬಂದವು ಹೊಸ ತಂತ್ರಜ್ಞಾನಗಳ ಅಳವಡಿಕೆ ಆದಾಗಿನಿಂದ, ಮನೆಯ ಕಾರ್ಯಕ್ರಮಗಳನ್ನು ಮೊಬೈಲ್ ಕ್ಯಾಮರಾದಲ್ಲಿಯೇ ಸೆರೆಹಿಡಿದು ಬಿಡಲಾಗುತ್ತದೆ. ಇದರಿಂದ ವೃತ್ತಿ ಛಾಯಾಗ್ರಾಹಕರಿಗೆ ಸ್ವಲ್ಪ ತೊಂದರೆ ಉಂಟಾಗುತ್ತಿದೆ ಎಂದೆ ಹೇಳಬಹುದು.

ನೀವುಇದನ್ನುಇಷ್ಟಪಡಬಹುದು: ಎರಡು ದಶಕಗಳಿಂದ ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ ಮಿಂಚುತ್ತಿರುವ ಫೋಟೋ ಜರ್ನಲಿಸ್ಟ್ ಆಸ್ಟ್ರೋ ಮೋಹನ್

ಈ ಛಾಯಾಗ್ರಹಣದಲ್ಲಿ ನಾವು ಹಲವಾರು ವಿಧಗಳನ್ನು ನೋಡುತ್ತೇವೆ. ನನಗೆ ಛಾಯಾಗ್ರಹಣದ ಎಲ್ಲಾ ಕ್ಷೇತ್ರದಲ್ಲಿಯೂ ಕೆಲಸ ಮಾಡಿ ಅನುಭವವಿದೆ. ಅದರಲ್ಲಿಯೂ ಪ್ರಯಾಣ ಬೆಳೆಸುವಾಗ ಮಾಡುವ ಛಾಯಾಗ್ರಹಣದಲ್ಲಿ ತುಂಬಾ ಆಸಕ್ತಿ ಇದೆ. ಈ ಪ್ರಯಾಣ ಛಾಯಾಗ್ರಹಣ ಮಾಡುವಾಗ ನಾವು ಕೆಲವು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲೇ ಬೇಕು. ನಾವು ಒಂದು ಪ್ರದೇಶಕ್ಕೆ ಪ್ರಯಾಣ ಮಾಡುತ್ತಿದ್ದೇವೆ ಎಂದಾದರೆ ಆ ಸ್ಥಳದ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇರಬೇಕು. ಆ ಸ್ಥಳದ ಹಿನ್ನಲೆ, ಇತಿಹಾಸ, ಮಹತ್ವ, ಅಲ್ಲಿನ ವಾತಾವರಣ ಮುಂತಾದವುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ನಂತರ ಪ್ರಯಾಣ ಬೆಳೆಸಬೇಕು.

ನಾವು ನೋಡುವ ಅಥವಾ ಹೋಗುವ ಸ್ಥಳದ ಛಾಯಾಗ್ರಹಣ ಮಾಡುವ ಮೊದಲು ಅದರ ಸೌಂದರ್ಯವನ್ನು ಮೊದಲು ಸವಿಯಬೇಕು. ನಂತರ ನಮಗೆ ಬೇಕಾದ ಹಾಗೇ ಛಾಯಾಚಿತ್ರ ತೆಗೆಯಬೇಕು. ಏಕೆಂದರೆ ನಾವು ನೋಡಿ ಆನಂದಿಸಿದ ಕ್ಷಣವನ್ನು ನಮ್ಮ ಮನಸ್ಸು ಎಂದಿಗೂ ಮರೆಯುವುದಿಲ್ಲ ನಾವು ಬರಿ ಛಾಯಾಗ್ರಹಣ ಮಾಡಿದರೆ ಆ ಸ್ಥಳದ ನೆನಪು ಹಲವು ಕಾಲದವರೆಗೆ ನಮ್ಮ ಜೊತೆ ಇರಲು ವಾಗುವುದಿಲ್ಲ. ಅದು ಬರಿ ಕ್ಯಾಮರಾ ಮೆಮೊರಿ ಕಾರ್ಡ್ ನಲ್ಲಿ ಇರುತ್ತದೆ ಅಷ್ಟೇ.

Shivashankar Banagara Famous Photographer Hampi Karnataka Tourism

ಒಂದು ಸ್ಥಳಕ್ಕೆ ಪ್ರಯಾಣ ಮಾಡುವಾಗ ನಮ್ಮ ಜೊತೆ ಮಾರ್ಗದರ್ಶಕರಿದ್ದಾರೆ ಇನ್ನು ಒಳ್ಳೆಯದು. ಅವರಿಗೆ ಆ ಸ್ಥಳದ ಬಗ್ಗೆ ಮಾಹಿತಿ ಇರುವುದರಿಂದ ಹೆಚ್ಚು ಹೆಚ್ಚು ಆ ಸ್ಥಳದ ಬಗ್ಗೆ ತಿಳಿದುಕೊಳ್ಳಬಹುದು. ನಮಗೆ ಬೇಕಾದ ಛಾಯಾಚಿತ್ರ ಮತ್ತು ವಿಡಿಯೋ ಗಳನ್ನು ಮಾಡಬಹುದು.

ಇನ್ನು ಕೊನೆಯದಾಗಿ ಈ ಛಾಯಾಗ್ರಹಣದ ಬಗ್ಗೆ ಹೇಳುವುದಾದರೆ. ಎಲ್ಲರೂ ಸಾಮಾನ್ಯವಾಗಿ ಛಾಯಾಗ್ರಾಹಕರಲ್ಲಿ ಕೇಳುವ ಪ್ರಶ್ನೆಯಂತೆ ಛಾಯಾಗ್ರಹಣ ಮೊದಲೊ ಅಥವಾ ಮಾನವೀಯತೆ ಮೊದಲೊ ಎಂದು ಬಂದಾಗ ನನ್ನ ಉತ್ತರ ಮಾನವೀಯತೆ ಮೊದಲು ಎಂಬುದು. ನಾವು ಮಾನವೀಯತೆ ಹೊಂದಿಲ್ಲದೆ ಸಾವಿರ ಛಾಯಾಚಿತ್ರವನ್ನು ತೆಗೆದರು ಅದು ತನ್ನ ನೈಜ ಮಹತ್ವವನ್ನು ಕಳೆದುಕೊಂಡಿರುತ್ತದೆ. ಒಬ್ಬ ವ್ಯಕ್ತಿಗೆ ಅವನ ವೃತ್ತಿಗಿಂತ ಮಾನವೀಯತೆ ಎನ್ನುವುದೇ ಯಾವಾಗಲೂ ಮುಖ್ಯವಾಗಿರಬೇಕು.

ಹೀಗೆ ತಮ್ಮ ಛಾಯಾಗ್ರಹಣ ಜೀವನದ ಅನುಭವವನ್ನು ಹಂಚಿಕೊಳ್ಳುತ್ತಾರೆ ಛಾಯಾಗ್ರಾಹಕ ಶಿವಶಂಕರ ಬಣಗಾರ. ಇವರು ಪ್ರಸ್ತುತವಾಗಿ ಜಾಹೀರಾತು ಏಜೆನ್ಸಿಯಲ್ಲಿ ತಮ್ಮ ವೃತ್ತಿಯನ್ನು ನಿರ್ವಹಿಸುತ್ತಿದ್ದು. ಹಂಪಿಗೆ ಬರುವ ಛಾಯಾಗ್ರಾಹಕರಿಗೆ ಛಾಯಾಚಿತ್ರವನ್ನು ತೆಗೆಯುವ ಛಾಯಾಚಿತ್ರಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

Shivashankar Banagara Famous Photographer Hampi Karnataka Tourism

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button