ವಿಂಗಡಿಸದಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ಭೂತಾಳ ಪಾಂಡ್ಯ ಆಳುತ್ತಿದ್ದ ತುಳುನಾಡ ರಾಜಧಾನಿಯಾಗಿದ್ದ ಬಾರಕೂರಿನ ಕೋಟೆ ಈಗ ಹೀಗಿದೆ ನೋಡಿ!

ಬಂದ ಯಾತ್ರಿಕರನ್ನು, ಕೈ ಮುಗಿದು ಒಳಗೆ ಬಾ ಇದು ಬರಿಯ ಶಿಲೆಯಲ್ಲ, ಶಿಲ್ಪಕಲೆಯ ತವರೂರು ಎಂದು ಬರುವವರನ್ನು ಸ್ವಾಗತಿಸುವ ಬಾರಕೂರಿನ ಪ್ರವೇಶ ದ್ವಾರದಲ್ಲಿ ಕಾಣಸಿಗುವ ಕಲ್ಲಿನ ಚಪ್ಪರ. ಈ ಊರಿನಲ್ಲಿ ನಾವು ನೋಡುವ ಪ್ರತಿಯೊಂದು ಕಲ್ಲುಗಳು ಕೂಡ ಇತಿಹಾಸ ಹೇಳುತ್ತದೆ. ಪ್ರತಿ ಶಿಲ್ಪಕ್ಕೂ ಒಂದೊಂದು ಕಥೆಯಿದೆ. ಇದು ಉಡುಪಿ ಜಿಲ್ಲೆಯ  ಗತವೈಭವವನ್ನು ಸಾರುವ ಶ್ರೀಮಂತ ಬಾರಕೂರಿನ ಕಥೆ.

  • ಚೈತ್ರಾ ರಾವ್, ಉಡುಪಿ

ಊರು ಚಿಕ್ಕದಾದರೂ ಇಲ್ಲಿನ ಇತಿಹಾಸ ದೊಡ್ಡದು. ಇದು ಐತಿಹಾಸಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದ್ದ ಊರು. 

ಇಂದು ಇಲ್ಲಿ ಬಟ್ಟೆ ಒಗೆಯಲು ಉಪಯೋಗ ಮಾಡುವ ಕಲ್ಲು ಇತಿಹಾಸದ ದತ್ತಿ ಶಾಸನಗಳು. ಬೇಲಿಗಿತ್ತ ಕಂಬಗಳು ಅರಮನೆಯ ಬುನಾದಿಗಳು. ಬಾವಿಯ ಸುತ್ತ ಹಾಕಿರುವ ಎಷ್ಟೋ ಕಲ್ಲುಗಳು ಬಾರಕೂರಿನ ದೇವಸ್ಥಾನಗಳ ಪಳೆಯುಳಿಕೆಗಳು. ಮನೆಯ ಮೆಟ್ಟಿಲುಗಳು ಚರಿತ್ರೆಯ ದುರಂತ ಕಲ್ಲುಗಳಾಗಿವೆ. ಇಲ್ಲಿನ ಕೆರೆಗಳಲ್ಲಿ ಹಲವಾರು ಅವಶೇಷಗಳು ಅಡಗಿವೆ. ಹಾಗಾಗಿ ಇಲ್ಲಿನ ಪ್ರತಿಯೊಂದು ಕಲ್ಲು, ಕಂಬಗಳು ಬಾರಕೂರಿನ ಕಥೆಯನ್ನು ಹೇಳುತ್ತದೆ. ಆದರೆ ದಿನಕಳೆದಂತೆ ಎಲ್ಲವೂ ಅಳಿವಿನಂಚಿಗೆ ಸಾಗುತ್ತಿದೆ. 

Barakuru Fort Tuluva Kingdom Bramhavara Udupi

ಬಾರಕೂರಿನ ಅರಮನೆ ನಾಶವಾಗಿದೆ

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿಯಿಂದ ಕುಂದಾಪುರ ಕಡೆಗೆ 13 ಕಿಲೋಮೀಟರ್ ಸಾಗಿದಾಗ ಸಿಗುವ ಸ್ಥಳ ಬ್ರಹ್ಮಾವರ. ಅಲ್ಲಿಂದ ಬಲಬದಿಗೆ ಸಾಗುವ ರಸ್ತೆಯಲ್ಲಿ 3 ಕಿಲೋ ಮೀಟರ್ ದೂರ ಸಾಗಿದರೆ ಈ ಗತಕಾಲದ ವೈಭವದ ಪಳೆಯುಳಿಕೆಯ ನಾಡು, ತುಳುನಾಡ ಹಂಪಿ(Tulunadu Hampi) ಬಾರಕೂರು ಸಿಗುತ್ತದೆ.

ಇಲ್ಲಿ ಸುತ್ತ ಎತ್ತ ಹೋದರೂ ಶಾಸನದ ಕಲ್ಲುಗಳು, ಮಹಾಸತಿ ಕಲ್ಲುಗಳು, ಕೆರೆಗಳು, ದೇವಸ್ಥಾನಗಳು, ಬಾವಿಗಳು ಸಿಗುತ್ತವೆ. ಸುತ್ತ ಕೋಟೆ ಮತ್ತು ಅರಮನೆ ಇದ್ದ ಜಾಗ ಇವತ್ತಿಗೂ ಇದೆ. ಸುಮಾರು 25 ಎಕರೆ ಸ್ಥಳದ ಸುತ್ತ ಆಳವಾದ ಕಂದಕ ಸೃಷ್ಟಿಸಿ ಕೋಟೆ(barkur fort) ನಿರ್ಮಿಸಲಾಗಿರುವುದು ಇವತ್ತಿಗೂ ಕಾಣಬಹುದು. ಈ ಬಾರಕೂರಿನ ನಂದರಾಯನ ಕೋಟೆ ಇಂದು ನೆಲಸಮವಾಗಿದೆ. ಕೇವಲ ಅರಮನೆ ಇದ್ದ ಜಾಗದಲ್ಲಿ ಕೆಲವು ಕಂಬಗಳು, ಬಾವಿಯನ್ನು ನೋಡಬಹುದು. 

ಅರಮನೆ ನೆಲಸಮವಾಗಿದ್ದರೂ ಕುದುರೆ, ಆನೆ ಕಟ್ಟುತ್ತಿದ್ದ ಲಾಯದ ಕಲ್ಲುಗಳು ಇವತ್ತಿಗೂ ಉಳಿದಿವೆ. ಸುತ್ತ ಹಸಿರು ಬೆಳೆದಿರುವುದರಿಂದ ಈ ಕಲ್ಲು ದನಗಳನ್ನು ಕಟ್ಟಲು ಉಪಯೋಗವಾಗುತ್ತಿದೆ. ರಾಣಿ ಸ್ನಾನ ಮಾಡುತ್ತಿದ್ದ ಕೆರೆ ಎನ್ನಲಾದ, ಕಲ್ಲಿನಿಂದ ಸುಂದರವಾಗಿ ಕಟ್ಟಲಾದ ಬಾವಿಯಲ್ಲಿ ಈಗಲೂ ನೀರಿದೆ. 6 ವರ್ಷದ ಹಿಂದೆ ಇಲ್ಲಿ ಉತ್ಕನನ ಮಾಡಿದಾಗ ಅರಮನೆಯ ಅಡಿಪಾಯ ಗುರುತಿಸಲು ಸಾಧ್ಯ ವಾಗಿದೆ. 

Barakuru Fort Tuluva Kingdom Bramhavara Udupi

ಹಿಂದೆ ಕೋಟೆಯ ಭದ್ರತೆಯ ದೃಷ್ಟಿಯಿಂದ ಕೋಟೆಯ ಸುತ್ತಲೂ ಕಂದಕವನ್ನು ನಿರ್ಮಿಸಿ ಅದಕ್ಕೆ ನೀರು ತುಂಬಿಸಿ ಮೊಸಳೆಗಳನ್ನು ಬಿಡಲಾಗುತ್ತಿತ್ತು. ಬೇರೆ ರಾಜ್ಯದ ರಾಜರ ಆಕ್ರಮಣದಿಂದ ಕಾಪಾಡಲು ನಿರ್ಮಿಸಲಾಗಿತ್ತು. ಕೋಟೆಯ ಹೊರ ಭಾಗದಲ್ಲಿ ಭೈರವನ ಮೂರ್ತಿಯನ್ನು ಕಾಣಬಹುದು.ಆದರೆ ಈಗ 365 ದೇವಸ್ಥಾನಗಳಿದ್ದ ಬಾರಕೂರಲ್ಲಿ ಶೇ.75ರಷ್ಟು ದೇವಸ್ಥಾನಗಳು ನಾಮಾವಶೇಷವಾಗಿವೆ. 

ಇಲ್ಲಿನ ಅರಮನೆ, ದೇವಾಲಯಗಳನ್ನು ಹಿಂದಿನಿಂದಲೂ ಕಾಪಾಡಿಕೊಂಡು ಬಂದಿದ್ದರೆ ಇಂದು ಬಾರಕೂರು ಬಹುದೊಡ್ಡ ಇತಿಹಾಸಗಳ ಕಥೆ ಹೇಳುವ ಪ್ರವಾಸಿ ತಾಣವಾಗುತ್ತಿತ್ತು. ಆದರೆ ಶತ್ರುಗಳ ನಾಶದಿಂದ ಇಂದು ಕೇವಲ ಬಾರಕೂರಿನ ಅಳಿದುಳಿದ ಐತಿಹಾಸಿಕ ಸ್ಮಾರಕಗಳನ್ನು ನೋಡಿ ಖುಷಿ ಪಡಬೇಕಾಗಿದೆ ಅಷ್ಟೇ.

ನೀವುಇದನ್ನುಇಷ್ಟಪಡಬಹುದು: ಕೃಷ್ಣನೂರಿನ ಸುಂದರ ತಾಣಗಳಿವು. ನೀವೂ ಒಮ್ಮೆ ಭೇಟಿ ನೀಡಿ.

ಈ ಕೋಟೆಯನ್ನು ಪ್ರವಾಸಿ ತಾಣವಾಗಿ ಮಾಡಬೇಕೆಂದು ಕೋಟೆಗೆ ಮತ್ತೆ ಜೀವಂತಿಕೆ ನೀಡಲು ಇತ್ತೀಚೆಗೆ “ಆಳುಪೋತ್ಸವ” ಕಾರ್ಯಕ್ರಮ ಮಾಡಲಾಗಿತ್ತು. ಕೆರೆಗಳನ್ನು ಶುಚಿಗೊಳಿಸಿ, ಅಲ್ಲಿ ಹುಲ್ಲುಗಳನ್ನು ತೆಗೆದು ದೊಡ್ಡ ಕಾರ್ಯಕ್ರಮ ನಡೆಸಲಾಗಿತ್ತು. ಆದರೆ ಕೆಲವು ದಿನಗಳ ನಂತರ ಪಾಳು ಅರಮನೆ ಮತ್ತೆ ಅದೇ ಸ್ಥಿತಿಗೆ ಬಂದಿದೆ.

ಬಾರಕೂರು ಇತಿಹಾಸ

ಭೂತಾಳ ಪಾಂಡ್ಯ ಇಲ್ಲಿ ಆಳುತ್ತಿದ್ದ ಎಂಬುದು ನಂಬಿಕೆ. ಸಂಸ್ಕೃತದ `ಭೂತಾಳ ಪಾಂಡ್ಯ ಚರಿತಂ’ ಕೃತಿಯ 13ನೇ ಅಧ್ಯಾಯದಲ್ಲಿ ಭೂತಾಳ ಪಾಂಡ್ಯ ಕ್ರಿ.ಶ. 77ರಲ್ಲಿ ಬಾರಕೂರಲ್ಲಿ ಆಳ್ವಿಕೆ ನಡೆಸುತ್ತಿದ್ದ ಎಂಬ ಮಾಹಿತಿ ಇದೆ. ಆತನ ಆರಾಧ್ಯ ದೈವ ಮಹಿಷಾಸುರ, ಈಗಲೂ ಬಾರಕೂರಿನಲ್ಲಿ ಮಹಿಷಾಸುರ ದೇವಾಲಯವಿದೆ. ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತಿದೆ. ಪಾಂಡ್ಯ ವಂಶ 259 ವರ್ಷ ಆಡಳಿತ ನಡೆಸಿದೆ ಎಂದು ‘ಭೂತಾಳ ಪಾಂಡ್ಯ ಚರಿತಂ’ ಹೇಳುತ್ತದೆ. ಭೂತಾಳ ಪಾಂಡ್ಯನ ನ್ನು ಹೊರತುಪಡಿಸಿದರೆ ಬಾರಕೂರಿನ ಇತಿಹಾಸದಲ್ಲಿ ಅಳುಪರ ಆಡಳಿತವೇ ಕಾಣುವುದು.

Barakuru Fort Tuluva Kingdom Bramhavara Udupi

ಅಳುವರಸ, ಗಂಗಸಾಗರ, ಚಿತ್ರವಾಹನ. ಎರಡನೇ ಅಳುವರಸ, 2 ನೇ ಚಿತ್ರವಾಹನ, ರಂಗಸಾ ಗರ, ಪೃಥ್ವಿಸಾಗರ, ಮರಾಮ, ವಿಮಲಾದಿತ್ಯ, ಆಳ್ವ ರಣಂಜಯ, ದತ್ತಲುಪ, ಕುಂದವರ್ಮ, ಜಯ ಸಿಂಹ, ಬೆಂಕಿದೇವ, ಪಟ್ಟಿ ಒಡೆಯ, ಪಾಂಡ್ಯ ಪಟ್ಟಿ ಒಡೆಯ, ಕವಿ ಅಳುಪ, ಕುಲಶೇಖರ, ಕುಂದಣ್ಣ, ವಲ್ಲಭ ದೇವ ದತ್ತುಪುತ್ರ, ವೀರಪಾಂಡ್ಯ, ರಾಣಿ ಬಲ್ಲಾಳ ಮಹಾದೇವಿ-ನಾಗದೇವರಸ, ೨ನೇ ಬೆಂಕಿದೇವ, ಸೋಯಿದೇವ, ೨ನೇ ಕುಲಶೇಖರ, ೩ನೇ ಬೆಂಕಿ ದೇವ, ೩ನೇ ಕುಲಶೇಖರ, ೨ನೇ ವೀರಪಾಂಡ್ಯ ಇವರೆಲ್ಲ ಕ್ರಿಸ್ತಶಕ 600ರಿಂದ 1400ರವರೆಗೆ ಆಳಿದ ಅಳುಪ ದೊರೆಗಳು.

ಆರಂಭದಲ್ಲಿ ಅಳುವರಸ ಬಾರಕೂರಲ್ಲಿ ಏಳನೇ ಶತಮಾನದಲ್ಲಿ ಆಳ್ವಿಕೆ ನಡೆಸಲು ಆರಂಭಿಸಿದ. ಅಳುಪರ ಆಳ್ವಿಕೆ ಆರಂಭವಾದ ನಂತರ 800ಕ್ಕೂ ಅಧಿಕ ವರ್ಷ ಇವರು ಆಳ್ವಿಕೆ ನಡೆಸಿದರು.

ಆರಂಭದಲ್ಲಿ ಚಾಲುಕ್ಯರ ಸಂಬಂಧವಿದ್ದ ಅಳುಪರು ಬಳಿಕ ಹೊಯ್ಸಳರ ಜತೆ ಸಂಬಂಧ ಬೆಳೆಸಿದರು. ಅದರ ಪರಿಣಾಮವಾಗಿ ಬಾರಕೂರಿನಲ್ಲಿ ಜೈನಬಸದಿಗಳು ನಿರ್ಮಾಣಗೊಂಡವು. 

ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದಾಗ ಅವರ ಸ್ಥಾನಿಕ ದೊರೆಗಳಾಗಿ ಆಳ್ವಿಕೆ ಮಾಡಿದ್ದರು. ನಂತರ ಕೆಳದಿ, ಇಕ್ಕೇರಿ ದೊರೆಗಳು, ಹೈದರಾಲಿ, ಟಿಪ್ಪು ಸಲ್ತಾನನ ಆಡಳಿತಕ್ಕೆ ಒಳಪಟ್ಟಿತ್ತು. ನಂತರ ಬ್ರಿಟಿಷರು ಆಳ್ವಿಕೆ ನಡೆಸಿದರು.

ಬಾರಕೂರು ಐತಿಹಾಸಿಕ ಚರಿತ್ರೆ ಇರುವ ಬಾರಕೂರು 365 ದೇವಸ್ಥಾನ, 10ಕೇರಿ, ಬ್ರಹತ್ ಕೆರೆ, ಮದಗಗಳು, ಅರಮನೆ ಕೋಟೆ, ಸಿಂಹಾಸನ ಗುಡ್ಡೆ, ಕತ್ತಲೆ ಬಸದಿ ಆಕರ್ಷಣೀಯ ಸ್ಥಳಗಳಾಗಿವೆ.

ಹತ್ತು ಹಲವು ವೈಶಿಷ್ಟ್ಯ, ಆಕರ್ಷಣೆಗಳಿರುವ ಇತಿಹಾಸ ಪ್ರಸಿದ್ಧ ಬಾರಕೂರು ಪಾರಂಪರಿಕ ನಗರವಾಗಿ ಗುರುತಿಸಿಕೊಳ್ಳಬೇಕು. ಇಲ್ಲಿನ ಎಲ್ಲಾ ಪುರಾವೆಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯವಾಗಬೇಕು. ತುಳುನಾಡ ರಾಜಧಾನಿ ಎಂದು ಕರೆಯ್ಪಡುತ್ತಿರುವ ಬಾರಕೂರನ್ನು ಜೀವಂತವಾಗಿಡಲು ಪ್ರಯತ್ನಿಸಬೇಕು.

Barakuru Fort Tuluva Kingdom Bramhavara Udupi

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button
Translate