Site icon Kannada.Travel

ಒಂದು ಟ್ರಿಪ್ಪಿನ ಕಥೆ ; ಮೂರು ದಿನ… ನೂರು ನೆನಪು…!

Friends Tour to Hampi

Friends Tour to Hampi

ಗೆಳೆಯರೊಂದಿಗಿನ ಪಯಣ ಎಂದರೆ ಅದು ಎಂದೂ ಮರೆಯಲಾಗದ ಸವಿ, ಹಸಿ ನೆನಪು. ಒಂದು ದಿನ, ಒಂದು ಕ್ಷಣದಂತೆ ಕಳೆದುಹೋಗುವ ಮಾಯೆ ಅದು! ನನ್ನ ಆತ್ಮೀಯ ಗೆಳತಿಯರೊಂದಿಗೆ ನಮ್ಮೂರಿನಲ್ಲಿ ಹೆಜ್ಜೆ ಹಾಕಿದ ದಿನಗಳು ಈಗ ತೀವ್ರವಾಗಿ ಕಾಡುತ್ತಿವೆ.

ಮೂರನೇ ಸೆಮ್ ಎಕ್ಸಾಂ ಮುಗಿಸಿಕೊಂಡು ಎಲ್ಲರೂ ತಮ್ ತಮ್ಮ ಊರುಗಳಿಗೆ ಹೋದರು. ಆದರೆ, ನಾನು, ಚಂದನಾ, ನಯನ, ಸಾನಿಯಾ ಇವರನ್ನು ನಮ್ಮ ಹೊಸ ಜಿಲ್ಲೆಯಾದ ವಿಜಯ ನಗರಕ್ಕೆ ಕರೆದುಕೊಂಡು ಹೊರಟೆ. ರಾತ್ರಿ ಬಸ್ಸು ಹತ್ತಿ ನಮ್ಮ ಊರಿನ ಕಡೆ ಪಯಣ ಬೆಳೆಸಿದೆವು.

ಬಸ್ಸಿನಲ್ಲಿ ಒಬ್ಬರು ಇಡೀ ಬಸ್ಸಿನವರಿಗೆ ಕೇಳೋ ತರ ಫೋನ್‌ನಲ್ಲಿ ಅರ್ಥವಾಗದ ಭಾಷೆಯಲ್ಲಿ ಮಾತನಾಡುತ್ತಿದ್ದರು. ನಯನ ಮತ್ತು ಚಂದನಾ, ಇದು ಯಾವ ಭಾಷೆ, ಇಷ್ಟು ಗಟ್ಟಿಯಾಗಿ ಮಾತನಾಡುತ್ತಾರೆ ಎಂದು ಆಶ್ಚರ್ಯ ಕೇಳುತ್ತಾರೆ. ಅದಕ್ಕೆ, ನಮ್ ಕಡೆ ಹಿಂಗೇನೆ ಅನ್ನುತ್ತಾ, ಮುಂಜಾನೆಗೆ ನಮ್ಮ ಊರು ತಲುಪಿದೆವು.

ಈ ಮೂವರು ಮೂರು ದಿಕ್ಕಿನವರು. ಅಂದರೆ ಒಬ್ಬಳು ಕಾಫಿ ನಾಡು ಕೊಡಗಿನವಳು, ಇನ್ನೊಬ್ಬಳು ರಾಜಧಾನಿ ಬೆಂಗಳೂರಿನವಳು ಮತ್ತೊಬ್ಬಳು ಮಲೆನಾಡು ಶಿವಮೊಗ್ಗದವಳು. ಮೂವರು ಸಹ ತಣ್ಣನೆಯ ಪ್ರದೇಶದಲ್ಲಿ ಬೆಳೆದವರೆ. ಆದರೆ ನಮ್ಮ ಗಣಿ ನಾಡು ಬಿಸಿಲಿಗೆ ಫೇಮಸ್. ಅದರಲ್ಲೂ ಬೇಸಿಗೆಯ ರಣಬಿಸಿಲು ನೋಡಿ ತತ್ತರಿಸಿದರು.

ಮುಂಜಾಗ್ರತ ಪರಿಕರಗಳನ್ನು ತೆಗೆದುಕೊಂಡು, ಬಂದ ಮೊದಲ ದಿನವೇ ಕಲ್ಲಿನ ಕೋಟೆ ನಗರಿ ಚಿತ್ರದುರ್ಗದತ್ತ ಹೆಜ್ಜೆ ಹಾಕಿದೆವು. ಬಿಸಿಲು ಇದ್ದ ಕಾರಣ ಮೊದಲು ಪ್ರಸಿದ್ಧಿ ಪಡೆದ ಮುರುಘಾ ಮಠಕ್ಕೆ ಧಾವಿಸಿದೆವು. ಹಚ್ಚ ಹಸಿರಿನಿಂದ ಕೂಡಿದ ಮುರುಘಾ ವನವು ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ಜೊತೆಗೆ ಅಲ್ಲಿನ ಒಂದೊಂದು ಸ್ತಬ್ಧ ಚಿತ್ರಗಳು ಅದರದ್ದೇ ಆದ ಇತಿಹಾಸವನ್ನು ತಿಳಿಸುತ್ತಿದ್ದವು.

ನೀವುಇದನ್ನುಇಷ್ಟಪಡಬಹುದು: ಕತೆ ಹೇಳಲು ಜನರಿಲ್ಲ, ಕತೆ ಹೇಳದೆ ಬದುಕಿಲ್ಲ: ಹಂಪಿಯ ಟೂರಿಸ್ಟ್ ಗೈಡ್ ಭಾನು ಪ್ರಕಾಶ್ ಜೀವನ ಚಿತ್ರ

ಹಿಂದಿನ ಕಾಲದ ಆದಿಮಾನವರಿಂದ ಹಿಡಿದು ಇಂದಿನ ಆಧುನಿಕ ಕಾಲದವರೆಗೂ ಮನುಷ್ಯರ ಜೀವನ ಶೈಲಿಯ ಬಗ್ಗೆ ಮಾಹಿತಿಯನ್ನು ನೀಡುತ್ತವೆ. ಚಿಕ್ಕ ಮಕ್ಕಳಿಗೆ ಆಟವಾಡಲು ವಿವಿಧ ರೀತಿಯ ಆಟಿಕೆಗಳು, ಹಿರಿಯರಿಗೆ ಸ್ವಚ್ಛಂದವಾಗಿ ವಾಯು ವಿಹಾರ ಮಾಡಲು, ಹೀಗೆ ಕುಟುಂಬ ಸಮೇತರಾಗಿ ಈ ಪ್ರದೇಶಕ್ಕೆ ಮನರಂಜಿಸಲು ಹೋಗುತ್ತಾರೆ. ನಾವು ಈ ವನವನ್ನು ಆನಂದಿಸಿ, ಫೋಟೋ, ವೀಡಿಯೋಗಳನ್ನು ಕ್ಲಿಕ್ಕಿಸಿಕೊಂಡು ಕಲ್ಲಿನ ಕೋಟೆಯತ್ತ ನಡೆಯುವ ಹೊತ್ತಿಗೆ ಸಂಜೆ ೫ ಗಂಟೆಯಾಗಿತ್ತು.

ನಮ್ಮ ದುರಾದೃಷ್ಟವಾತ್ ಪ್ರವೇಶ ಸಮಯವನ್ನು ೬-೦೦ ಯಿಂದ ೫-೦೦ ಗಂಟೆಗೆ ಕಡಿತಗೊಳಿಸಿದ್ದರು. ಆದ್ದರಿಂದ ಕೋಟೆ ಹತ್ತುವ ಅವಕಾಶ ಬಿಟ್ಟು ಹೋಯಿತು. ಆದರೆ, ನಮ್ಮ ಹೋಟೆಲ್ ಆನಂದ್ ವಿಹಾರನಲ್ಲಿನ ರುಚಿಕರವಾದ ಫ್ರೆಂಚ್‌ ಫ್ರೈಸ್ ಮತ್ತು ಗೋಭಿ ಮಾತ್ರ ಮಿಸ್ಸಾಗಲಿಲ್ಲ.

ಮರುದಿನ ಬೆಳ್ಳಂಬೆಳಗ್ಗೆ ಎದ್ದು ಕಲ್ಪತರು ನಾಡು ತುಮಕೂರಿಗೆ ಹೋದೆವು. ನಮ್ಮೊಡನೆ ನನ್ನ ಡಿಗ್ರಿ ಸ್ನೇಹಿತರೊಂದಿಗೆ ಬಸದಿ ಬೆಟ್ಟಕ್ಕೆ ಹೋದೆವು. ಬಹುದಿನಗಳ ನಂತರ ಸಿಕ್ಕ ಡಿಗ್ರಿ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಾ, ನಮ್ಮ ಅಂದಿನ ದಿನಗಳನ್ನು ಮೆಲಕು ಹಾಕುತ್ತಾ ಬೆಟ್ಟ ಹತ್ತಿ, ತಪ್ಪಲಿನಲ್ಲಿರುವ ಕೆರೆಯಲ್ಲಿ ಸ್ವಲ್ಪ ಸಮಯ ಆಟವಾಡಿ ನಂತರ ಸಮೀಪವಿರುವ ಜೈನ್ ಮಂದಿರದ ನವಿಲಾಕಾರದ ಚಿತ್ರಣವನ್ನು ಸವಿದೆವು.

ನಂತರ ಶಿಕ್ಷಣ ಕಾಶಿಯೆಂದೆ ಹೆಸರುವಾಸಿಯಾಗಿರುವ ಶ್ರೀ ಸಿದ್ಧಗಂಗಾ ಮಠಕ್ಕೆ ಬೇಟಿ ನೀಡಿ, ಶಿವಕುಮಾರ ಸ್ವಾಮಿಜಿ ಮತ್ತು ದೇವರ ಆಶೀರ್ವಾದ ಪಡೆದು, ಪ್ರಸಾದವನ್ನು ಸ್ವೀಕರಿಸಿ ಊರಿಗೆ ಹಿಂದಿರುಗಿದೆವು.

ಮಾರನೇ ದಿನ ಶನಿವಾರ. ಹುನುಮಂತ ಜನಿಸಿದ ಪ್ರಸಿದ್ಧ ಸ್ಥಳ ಅಂಜನಾದ್ರಿಗೆ ತೆರಳಿ, ದರ್ಶನ ಪಡೆದವು. ನಂತರ ಹಂಪಿಯನ್ನು ಸುತ್ತಾಡಿ, ಅಲ್ಲಿನ ವಿರೂಪಾಕ್ಷ ದೇವಾಸ್ಥಾನ, ಕಲ್ಲಿನ ರಥ, ರಾಣಿ ಸ್ನಾನಗೃಹ, ಮಹಾನವಮಿ ದಿಬ್ಬ, ಬಡವಿ ಲಿಂಗ, ಉಗ್ರ ನರಸಿಂಹ ಮುಂತಾದ ಪ್ರಮುಖ ಸ್ಥಳಗಳನ್ನು ನೋಡಲು ಹೋದಾಗ, ನಯನ ಮತ್ತು ಸಾನಿಯಾ ಇಬ್ಬರೂ ಸಿಕ್ಕ ಮರದಡಿಗೆ ಕುಳಿತುಕೊಳ್ಳುತ್ತಿದ್ದರು. ಹೀಗೆ ಅಂತೂ ಒಂದೇ ದಿನಕ್ಕೆ ಹಂಪೆಯನ್ನು ಸುತ್ತಿ ಬಂದೆವು.

ಈ ಟ್ರಿಪ್ಪಿನಲ್ಲಿ ಮಾಡಿದ ಚೇಷ್ಟೆ, ಓಡಾಟ, ಊಟಕ್ಕಾಗಿ ಧಾವಿಸಿದ ನೆನಪುಗಳು ಅಮರ. ನಮಗೆ ಸಿಕ್ಕ ಕೊನೆಯ ನಾಲ್ಕು ತಿಂಗಳುಗಳು ಸಹ ಲಾಕ್ ಡೌನ್‌ನಿಂದಾಗಿ ಈಗ ಮನೆಯಲ್ಲಿಯೇ ಕಳೆಯುತ್ತಿದ್ದೇವೆ. ಹಾಗೇ, ಕುಳಿತುಕೊಂಡಾಗ ಈ ನಮ್ಮ ಪಯಣ ನೆನಪಾಯಿತು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Exit mobile version