ಬೈಕಿನಲ್ಲಿ ದೇಶ ಸುತ್ತುವ ಮಾದರಿ ಅಪ್ಪ – ಮಗಳು

‘ಅಪ್ಪ ಅಂದ್ರೆ ಆಕಾಶ’ ಅನ್ನೋ ಮಾತಿದೆಯಲ್ಲ, ಅದು ಸುಳ್ಳಲ್ಲ! ಅವನ ತ್ಯಾಗ ತೆರೆಮರೆಯಲ್ಲಿದೆ. ಅಪ್ಪನೆಂದರೆ ಹೀಗೆ ಎಂದು ಚಿತ್ರಿಸುವ, ಅವನ ವ್ಯಕ್ತಿತ್ವ ಹೀಗೆಯೇ ಎನ್ನುವ ಮನಸ್ಥಿತಿಗಳ ನಡುವೆ ಅಪವಾದವೆಂಬಂತೆ ಇರುವ ಅಪ್ಪಂದಿರೂ ಇದ್ದಾರೆ. ಅಂತಹ ಮಾದರಿ ಹಾಗೂ ಜೀವನೋತ್ಸಾಹಿ ಅಪ್ಪನ ಕಥೆಯಿದು.
ಮೊದಲಿನಿಂದಲೂ ಬೈಕರ್ ಆಗಿದ್ದ ಅಪ್ಪ ಮಗಳಿಗೂ ಬೈಕ್ ಕಲಿಸಿ, ಜೊತೆಗೆ ದೇಶ ಸುತ್ತಿದ್ದಾರೆ. ಈ ಅಪ್ಪ ಮಗಳ ಜೋಡಿ ೨ ಲಕ್ಷ ಕಿಮೀ ದೂರವನ್ನು ಬೈಕಿನಲ್ಲಿ ಜೊತೆಯಾಗಿ ಸಂಚರಿಸಿದ್ದಾರೆ. ಭಾರತದ ಹಲವು ರಾಜ್ಯಗಳಿಗೆ ಭೇಟಿ ನೀಡಿದ್ದಾರೆ.
ಇದು #ವಿಶ್ವ ಅಪ್ಪಂದಿರ ದಿನದ ವಿಶೇಷ.
- ವರ್ಷಾ ಉಜಿರೆ
ಜ್ಞಾನಿಯೊಬ್ಬರು ಹೀಗೆ ಹೇಳುತ್ತಾರೆ; ‘ಒಬ್ಬ ತಂದೆ ನೂರು ಶಿಕ್ಷಕರಿಗಿಂತ ಮಿಗಿಲು’ ಎಂದು. ಒಬ್ಬ ಉತ್ತಮ ತಂದೆ ನಾಯಕತ್ವ, ಜವಾಬ್ದಾರಿ ಮತ್ತು ಹೊಣೆಗಾರಿಕೆಯ ಗುಣಗಳನ್ನು ಮೈಗೂಡಿಸಿಕೊಂಡಿರುವುದು ಮಾತ್ರವಲ್ಲದೆ, ಅದನ್ನು ತನ್ನ ಮುಂದಿನ ಪೀಳಿಗೆಗೆ ದಾಟಿಸುತ್ತಾನೆ.
ಶಿಸ್ತಿನ ಸಿಪಾಯಿಯಂತೆ ವರ್ತಿಸಿದರೂ, ಅಲ್ಲಿಯೂ ಪ್ರೀತಿಯ ಅಂಶವಿರುತ್ತದೆ. ಆ ಶಿಸ್ತು ಅವನ ಮಕ್ಕಳ ಉದ್ಧಾರಕ್ಕಾಗಿಯೇ ಆಗಿರುತ್ತದೆ. ಅಪ್ಪನಾಗುವುದು ಯಾವ ಪೂರ್ಣ ಪ್ರಮಾಣದ ಉದ್ಯೋಗಕ್ಕೂ ಕಡಿಮೆಯೇನಲ್ಲ! ಅದಕ್ಕಾಗಿ ತಾಯಿಯ ತ್ಯಾಗವನ್ನು ಮಾತ್ರವಲ್ಲ, ತಂದೆಯ ತೆರೆಮರೆಯ ತ್ಯಾಗವನ್ನೂ ಗೌರವಿಸುವವರು ನಾವಾಗಬೇಕು.
ಭಾರತದಂತಹ ದೇಶದಲ್ಲಿ ಮಗನ ಸರ್ವತೋಮುಖ ಏಳಿಗೆಗಾಗಿ ಮಾತ್ರವೇ ತನ್ನ ಜೀವ ತೇಯುವವ ಅಪ್ಪ ಎಂಬಂತೆ ಹೆಚ್ಚಾಗಿ ಚಿತ್ರಿಸಲಾಗುತ್ತದೆ. ಇಲ್ಲವೇ ಮಗಳನ್ನು ಒಳ್ಳೆಯ ಕುಟುಂಬಕ್ಕೆ ಕೊಟ್ಟು ಮದುವೆ ಮಾಡಬೇಕು, ಮದುವೆಯನ್ನು ಧಾಂ ಧೂಂ ಎಂದು ಮಾಡಬೇಕು ಎಂದು ತನ್ನ ಜವಾಬ್ದಾರಿಯನ್ನು ಕಳೆದುಕೊಳ್ಳಲು ಹಪಹಪಿಸುತ್ತಿರುವವಂತೆ ಚಿತ್ರಿಸಲಾಗುತ್ತದೆ. ಆದರೆ ಇದಕ್ಕೂ ಅಪವಾದವೆಂಬಂತಹ ಅಪ್ಪಂದಿರಿದ್ದಾರೆ.
ಮಕ್ಕಳ ಭವಿಷ್ಯ, ಮದುವೆ, ಮೊಮ್ಮಕ್ಕಳು ಮುಂತಾದ ವಿಚಾರಗಳ ಬಗ್ಗೆ ಕ್ಯಾರೇ ಎನ್ನದ, ಅವರಿಗೆ ಜೀವನದ ಸವಿಯನ್ನು ಉಣ್ಣಲು ಕಲಿಸುವ, ಇದ್ದುದರಲ್ಲೇ ಬದುಕಲು ಕಲಿಸುವ, ‘ಲೈಫ್ ಇಸ್ ಎ ಗೇಮ್’ ಎಂದು ಅದನ್ನು ಆಡಲು ಕಲಿಸುವ ಜೀವನೋತ್ಸಾಹಿ ಮಾದರಿ ಅಪ್ಪಂದಿರಿದ್ದಾರೆ. ಅಂತಹದ್ದೇ ಮಾದರಿ ಅಪ್ಪ ಮತ್ತು ಸಾಹಸಿ ಮಗಳ ಜೀವನಗಾಥೆಯಿದು!
ವಾಸುದೇವ ಆಚಾರ್ಯ, ಬೆಂಗಳೂರಿನಲ್ಲಿ ನೆಲೆಸಿರುವ ೭೧ ವರ್ಷದ ನಿವೃತ್ತ ಉದ್ಯಮಿ. ಜೀವನೋತ್ಸಾಹಿ, ಮಾದರಿ ಅಪ್ಪಂದಿರಿಗೊಂದು ಉದಾಹರಣೆ ಇವರು. ಅವರು ಕಟ್ಟಾ ಮೋಟಾರ್ ಸೈಕ್ಲಿಸ್ಟ್. ಬೈಕಿನಲ್ಲಿಯೇ ದೇಶದ ಉದ್ದಗಲಗಳನ್ನು ಅಳೆದಿದ್ದಾರೆ. ಇತ್ತೀಚೆಗೆ ರಾಯಲ್ ಎನ್ ಫೀಲ್ಡ್ ಇಂಟರ್ ಸೆಪ್ಟರ್ 650 ಖರೀದಿಸಿದ್ದು ಇವರ ದ್ವಿಚಕ್ರ ವಾಹನದ ಮೇಲಿನ ಪ್ರೀತಿಗೆ ಸಣ್ಣ ಉದಾಹರಣೆ.

ಅವರ ಮಗಳು ಶುಭ್ರಾ ತನ್ನ ಯೌವ್ವನದ ದಿನಗಳಲ್ಲಿಯೇ ಬೈಕಿನ ಮೇಲೆ ಪ್ರೀತಿ ಬೆಳೆಸಿಕೊಂಡವರು. ೩೨ ವರ್ಷದ ಶುಭ್ರಾ, ಕಳೆದ ೧೦ ವರ್ಷಗಳಲ್ಲಿ ಅಪ್ಪನ ಸಾಧನೆಯನ್ನು ಮೀರಿಸಿದ್ದಾರೆ. ಅಪ್ಪನಿಂದಲೇ ಬೈಕ್ ಕಲಿತು, ಅಪ್ಪನನ್ನೇ ಮೀರಿಸಿದ ಸಾಹಸಿ ಮಗಳು ಶುಭ್ರಾ. ಅಂದ ಹಾಗೆ ಇವರ ಸಾಹಸಗಾಥೆ ಹೀಗಿದೆ.
ನೀವುಇದನ್ನುಇಷ್ಟಪಡಬಹುದು: ಬೈಕ್ ನಲ್ಲಿ 6 ದೇಶ ಸುತ್ತಿದ ಹೈದರಾಬಾದಿನ ಜೈಭಾರತಿ: ಈ ಶತಮಾನದ ಮಾದರಿ ಹೆಣ್ಣು
ಶುಬ್ರಾ ಅವರ ಸಹೋದರ ಉಡುಗೊರೆಯಾಗಿ ನೀಡಿದ ಕ್ಲಾಸಿಕ್ ೫೦೦ ಅವರ ಮೊದಲ ಬೈಕ್. ಅಲ್ಲಿಂದ ಬೈಕಿನ ಮೇಲಿನ ಮೋಹ ಅವರಿಗೆ ಹೆಚ್ಚುತ್ತಾ ಹೋಯಿತು.
ಈ ಅಪ್ಪ ಮಗಳ ಜೋಡಿ ಹಲವು ಬೈಕ್ ಪ್ರಯಾಣಗಳನ್ನು ಜೊತೆಯಾಗಿ ಮಾಡಿದ್ದಾರೆ. ಒಟ್ಟಿಗೆ ನಕ್ಕಿದ್ದಾರೆ. ಎಲ್ಲಾ ಬಗೆಯ, ಕಷ್ಟ ಸಾಧ್ಯ ಅನ್ನುವಂತಹ ರಸ್ತೆಗಳಲ್ಲೂ ಜೊತೆಯಾಗಿ ಕ್ರಮಿಸಿದ್ದಾರೆ. ಇವರು ಜೊತೆಯಾಗಿ ಸಂಚರಿಸಿದ ದೂರ ೨ ಲಕ್ಷ ಕಿಮೀ! ಇವರ ಪಯಣಗಳಲ್ಲಿ ಯಾವಾಗಲೂ ಸ್ಮರಣಿಯವಾಗಿರುವಂಥದ್ದು ಎಂದರೆ, ಅವರ ಇಡೀ ಕುಟುಂಬ ಬೆಂಗಳೂರಿನಿಂದ ಲಡಾಖಿಗೆ ಪ್ರಯಾಣಿಸಿದ್ದು. ಪ್ರತಿಯೊಬ್ಬರೂ ಅವರದ್ದೇ ಬೈಕಿನಲ್ಲಿ ಸಂಚರಿಸಿದ್ದು ಇನ್ನೊಂದು ವಿಶೇಷ.

ವಾಸುದೇವ ಮತ್ತು ಶುಭ್ರಾ, ದೇಶಾದ್ಯಂತ ವಿಸ್ತಾರವಾಗಿ ಸಂಚರಿಸಿದ್ದು, ಬೆಂಗಳೂರಿನಿಂದ ಮಹಾರಾಷ್ಟ, ಗುಜರಾತ್, ರಾಜಸ್ಥಾನ ಮತ್ತು ಭೂತಾನ್ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ೨೦೨೦ರಲ್ಲಿ ಬೆಂಗಳೂರಿನಿಂದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಕ್ರಾಸ್- ಕಂಟ್ರಿ ಪ್ರವಾಸ, ಅವರ ಇತ್ತೀಚಿನ ಜೋಡಿ ಪಯಣ. ಅವರು ಈ ಕ್ರಾಸ್- ಕಂಟ್ರಿ ಪ್ರಯಾಣ ಮಾಡಿದ್ದು ಸಾಂಕ್ರಾಮಿಕ ಪಿಡುಗು ಕೊರೋನಾ ಕಾಲಿಡುವ ಮುನ್ನ.
ಈ ತಂದೆ ಮಗಳು ಸದ್ಯದ ಪರಿಸ್ಥಿತಿಯಿಂದ ತಮ್ಮ ಪ್ರಯಾಣಕ್ಕೆ ಬ್ರೇಕ್ ಹಾಕಿದ್ದರೂ, ತಮ್ಮ ಮುಂದಿನ ಯೋಜನೆಗಳ ಕುರಿತು ಈಗಾಗಲೇ ಯೋಜನೆ ಹಾಕಿದ್ದಾರೆ. ಬೆಂಗಳೂರಿನ ಅರಮನೆಯಿಂದ ಬಂಕಿಂಗ್ ಹ್ಯಾಮ್ ಅರಮನೆಯವರೆಗೆ ಬೈಕ್ ರೈಡ್ ಮಾಡುವುದು ವಾಸುದೇವ ಅವರ ಯೋಜನೆಯಾದರೆ, ಯುರೋಪಿಯನ್ ಕಾಂಟಿನೆಂಟ್ ಅನ್ನು ಬೈಕಿನಲ್ಲಿ ಸುತ್ತುವುದು ಶುಭ್ರಾ ಕನಸು.
ದೀರ್ಘ ಕಾಲ ಏರಿಳಿತಗಳ ಹಾದಿಯಲ್ಲಿ ಸಲೀಸಾಗಿ ಬೈಕು ಓಡಿಸುವುದು, ಪರಿಸ್ಥಿತಿಯನ್ನು ನಿಭಾಯಿಸುವುದು, ಜೀವನ ಕೌಶಲ್ಯಗಳೇ ಇಂದಿಗೆ ಅವರನ್ನು ಆತ್ಮವಿಶ್ವಾಸದ ಬುಗೆಯನ್ನಾಗಿ ಮಾರ್ಪಡಿಸಿದೆ. ತನ್ನನ್ನು ಸದಾ ಬೆಂಬಲಿಸುವ ಪೋಷಕರಿಗೆ ಋಣಿ ಎಂದಿದ್ದಾರೆ. ಇದರೊಂದಿಗೆ ಸಾಧಿಸಬೇಕೆನ್ನುವ ಛಲ ಅವರನ್ನು ಇನ್ನಷ್ಟು ಮುನ್ನುಗ್ಗುವಂತೆ ಪ್ರೇರೇಪಿಸುತ್ತಿದೆ.

ಅವರ ಈ ಎರಡು ಯೋಜನೆಗಳು ಮಾತ್ರವಲ್ಲ, ಉಳಿದೆಲ್ಲಾ ಯೋಜನೆಗಳು ಯಶಸ್ವಿಯಾಗಲಿ. ಇಂತಹ ಕಥೆಗಳು ಇನ್ನಷ್ಟು ಹೆಚ್ಚಾಗಲಿ. ಇಂತಹ ಮಾದರಿ ವ್ಯಕ್ತಿತ್ವಗಳು ಇನ್ನಷ್ಟು ಜನರಿಗೆ ಸ್ಪೂರ್ತಿಯಾಗಲಿ ಎಂಬುದು ನಮ್ಮಾಶಯ!
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ