ಆಹಾರ ವಿಹಾರನಮ್ ತಿಂಡಿ ರೆಸಿಪಿವಿಂಗಡಿಸದ

ಹಸಿರ ಗೋಡಂಬಿಯ ರುಚಿಗೆ ಸದಾ ಬಾಲ್ಯದ ನೆನಪು

ಗೇರು ಬೀಜ ಕರಾವಳಿ ಭಾಗಕ್ಕೆ ಸುಲಭವಾಗಿ ಒಗ್ಗಿಕೊಳ್ಳುವ ಕೃಷಿ. ಸಿಹಿ ತಿನಿಸುಗಳ ತಯಾರಿಕೆಯಲ್ಲಿ ಗೋಡಂಬಿಗೆ ಖಾಯಂ ಸ್ಥಾನ. ಗೋಡಂಬಿಯಲ್ಲಿ ಹಲವರಿಗೆ ಹಸಿರು ಗೋಡಂಬಿ ಪ್ರಿಯ. ಹಸಿರ ಗೋಡಂಬಿಯನ್ನು ಬಾಯಿಯೊಳಗೆ ಹಾಕಿಕೊಂಡು ಸವಿಯುವ ರುಚಿನೇ ಬೇರೆ. ಬಾಲ್ಯದಲ್ಲಿ ಹಸಿರ ಗೋಡಂಬಿ ಹಲವರಿಗೆ ಪ್ರಿಯ.

  • ಎ.ಬಿ ಪಚ್ಚು

ಈ ಗೇರುಬೀಜ ಕರಾವಳಿ ಭಾಗಕ್ಕೆ ಬಹಳ ಸುಲಭವಾಗಿ ಒಗ್ಗಿಕೊಳ್ಳುವ ಕೃಷಿ. ಜಾಗ ಇದ್ದವರು ವಾಣಿಜ್ಯ ಬೆಳೆಯಾಗಿ ಕೂಡ ಇದನ್ನು ಬೆಳೆಯುತ್ತಾರೆ. ಗುಡ್ಡದ ಪ್ರದೇಶದಲ್ಲಿ ಹೆಚ್ಚಿನ ಆರೈಕೆಯನ್ನೇ ಬೇಡದೆ ಅದರಷ್ಟಕ್ಕೆ ಬೆಳೆಯುವ ಈ ಗೇರುಬೀಜದ ಉಪಯೋಗಗಳು ಕೂಡ ಹಲವಾರು.

ಬಹು ಉಪಯೋಗಿ ಗೇರು ಬೀಜ

ಅದರಲ್ಲೂ ಸಿಹಿತಿಂಡಿಗಳಿಗೆ ಗೇರುಬೀಜವಿಲ್ಲದಿದ್ದರೆ ಅವುಗಳದೊಂದು ಎಂದಿಗೂ ತೀರಾ ಸಪ್ಪೆಯೆನಿಸುವ ಅಲಂಕಾರ.ಶ್ಯಾವಿಗೆ ಪಾಯಸದ ಮೇಲೆ, ಕೇಸರಿ ಬಾತ್ ನೊಳಗೆ ಅಲ್ಲಲ್ಲಿ ತುಪ್ಪದಲ್ಲಿ ಹುರಿದ ಈ ಗೇರುಬೀಜಗಳು ತಿನ್ನಲು ಸಿಗುವಂತಿದ್ದರೆ ಅದರದ್ದೊಂದು ಮಜಾನೇ ಬೇರೆ.

ಇತರ ಮರಗಳಿಗಿಂತ ವಿಭಿನ್ನವಾಗಿ ಇದರ ಬೀಜ ಹಣ್ಣುಗಳ ಒಳಗೆ ಇರದೇ,ಹಣ್ಣುಗಳ ಹೊರಭಾಗದಲ್ಲಿಯೇ ಕಣ್ಣಿಗೆ ಕಾಣುವಂತೆ ಇರುತ್ತದೆ.ಚೆನ್ನಾಗಿ ಹಣ್ಣಾದ ನಂತರ ಇದರ ಹಣ್ಣುಗಳನ್ನು ಕೂಡ ತಿನ್ನಬಹುದು.ಹಳದಿ, ಕೆಂಪು ಕೆಲವೊಮ್ಮೆ ಆರೆಂಜು ಬಣ್ಣಗಳಲ್ಲಿ ಕೂಡ ಇದರ ಹಣ್ಣುಗಳು ಇರುತ್ತದೆ.ಕೆಲವರು ಈ ಹಣ್ಣುಗಳಿಂದ ನಶೆಯೇರಿಸುವ ಸರಾಯಿಯನ್ನು ಕೂಡ ತೆಗೆಯುತ್ತಾರೆ.

Cashew Nuts Monsoon Season Monsoon Food Coastal Karnataka

ಗೇರುಬೀಜಗಳನ್ನೇ ಉಪಯೋಗಸಿ ನಮ್ಮಲ್ಲಿ ಹಿಂದೆ ಬಿಲ್ಲಿಸ್ ನಂತಹ ಗ್ರಾಮೀಣ ಆಟಗಳನ್ನು ಕೂಡ ಆಡುತ್ತಿದ್ದರು. ಶಾಲೆಗೆ ಹೋಗುವಾಗ ಬರುವಾಗ ಒಂದೊಂದಾಗಿ ಕೂಡಿಟ್ಟ ಈ ಗೇರುಬೀಜಗಳು ಹಿಂದಿನ ಕಾಲದಲ್ಲಿ ಮಕ್ಕಳ ಪಾಲಿನ ಸಣ್ಣ ಪ್ರಮಾಣದ ಪಾಕೆಟ್ ಮನಿ ಕೂಡ ಹೌದು. ಆಟಿ ಅಮಾವಾಸ್ಯೆಗೆ ಹಾಲೆಮರದ ಕಷಾಯ ಕುಡಿಯಲು ಮೆಂತೆ ಗಂಜಿಯ ಜೊತೆಗೆ ಬೆಲ್ಲ ಮತ್ತು ಬೆಂಕಿಯಲ್ಲಿ ಸುಟ್ಟ ಗೇರುಬೀಜವಂತು ಕಡ್ಡಾಯ ಇರಲೇಬೇಕು.

ಖಾದ್ಯಗಳ ತಯಾರಿಕೆಯಲ್ಲಿ ವಿಶೇಷ ಸ್ಥಾನ.

ಗೇರುಬೀಜ ಹಸಿಯಾಗಿ ಎಳೆಯದ್ದು ಇರುವಾಗ ಅದನ್ನು ಹಾಕಿ ಯುಗಾದಿ ಸಮಯದಲ್ಲಿ ನಮ್ಮ ಕಡೆ ಹೆಚ್ಚಾಗಿ ಕಡ್ಲೆಬೇಳೆ ಪಾಯಸ ಎಲ್ಲಾ ಮಾಡ್ತಾರೆ.ಈ ಹಸಿ ಗೇರುಬೀಜವನ್ನೇ ಬಳಸಿ ತೊಂಡೆಕಾಯಿಯನ್ನು ಸಹ ಅದರೊಂದಿಗೆ ಜೊತೆ ಮಾಡಿ ಉಪ್ಪುಕರಿಯಂತಹ ಬಹಳ ರಿಚ್ ಆದ ಪಲ್ಯ ಮಾಡುವುದು ಕೂಡ ತುಳುನಾಡು ಭಾಗಗಳಲ್ಲಿ ಬಹಳನೇ ಫೇಮಸ್.

ಪನ್ನೀರ್, ಗೋಬಿ ಮಂಚೂರಿಯನ್ ಎಲ್ಲಾ ರಾರಾಜಿಸುವ ಮೊದಲೇ ವೆಜ್ ಥಾಲಿಯಲ್ಲಿ ತಕ್ಕ ಮಟ್ಟಿನ ಹವಾ ಎಬ್ಬಿಸಿದ್ದು ಈ ಹಸಿ ಗೇರುಬೀಜವೇ.ಈಗೀಗ ಹಸಿ ಗೇರುಬೀಜವನ್ನು ಒಟ್ಟು ಮಾಡುವುದೇ ದೊಡ್ಡ ತಾಪತ್ರಯ ಅದಕ್ಕಾಗಿ ಒಣ ಗೇರುಬೀಜವನ್ನೇ ಬಿಸಿ ನೀರಿನಲ್ಲಿ ಹಾಕಿ ತೆಗೆದು ಅದರಿಂದಲೇ ಬಹಳ ಸುಲಭವಾಗಿ ಪಲ್ಯ ಮಾಡಿಬಿಡುತ್ತಾರೆ.

Cashew Nuts Monsoon Season Monsoon Food Coastal Karnataka

ಚೆನ್ನಾಗಿ ಬಲಿತು ಒಣಗಿದ ನಂತರ ಈ ಗೇರುಬಿಜ ಗೋಡಂಬಿಯಾಗಿ ಸಿಹಿತಿಂಡಿಗಳ ಲೋಕದಲ್ಲಿ,ಡ್ರೈ ಪ್ರೂಟ್ಸ್ ಗಳ ರಾಜ್ಯದಲ್ಲಿ ತನ್ನದೇ ರಾಜ್ಯಭಾರ ಮಾಡಿ ಬಿಡುತ್ತದೆ.ಗೋಡಂಬಿ ಇಲ್ಲದ ಯಾವ ತಿಂಡಿ, ಖೀರು, ಹಲ್ವ, ಶೀರಾ, ಬರ್ಫಿ, ಲಡ್ಡು ಇದೆ ಹೇಳಿ. ತಿರುಪತಿಯ ಆ ಪರಿಮಳದ ದೊಡ್ಡ ಲಡ್ಡುವಿನಲ್ಲಿ ಕೂಡ ಸಾಕಷ್ಟು ಗೋಡಂಬಿಯನ್ನು ತಪ್ಪದೇ ಸೇರಿಸುತ್ತಾರೆ. ಒಳ್ಳೆಯ ಕ್ವಾಲಿಟಿಯ ಕರಿದ ಗೋಡಂಬಿಯ ಬೆಲೆಯಂತು ಕೆಲವೊಮ್ಮೆ ಗಗನಕ್ಕೇರಿ ಸುಲಭವಾಗಿ ಕೈಗೆಟುಕುವುದೇ ಇಲ್ಲ. ಗಗನ ಕುಸುಮ ಅದು.

ಈ ಗೇರುಬೀಜಗಳ ಸಂಸ್ಕರಣೆಗೆ ಜಿಲ್ಲೆಯಲ್ಲಿಯೇ ಬೇಕಾದಷ್ಟು Cashew Factory ಗಳು ಕೂಡ ಇದ್ದು, ನಮ್ಮ ಮಹಿಳೆಯರಿಗೆ ಒಂದು ವಿಧದಲ್ಲಿ ಉದ್ಯೋಗದ ಮೂಲವೂ ಕೂಡ ಆಗಿ ಹೋಗಿದೆ.

ಹಸಿರ ಗೋಡಂಬಿ

ಈ ಹಸಿ ಹಾಗೂ ಒಣ ಗೋಡಂಬಿ ಎರಡನ್ನೂ ಬಿಟ್ಟು ಈಗ ನಿಮಗೆ ನಾನು ಚಿತ್ರದಲ್ಲಿರುವ ಈ ಹಸಿರು ಬಣ್ಣದ ಗೇರುಬೀಜದ ಬಗ್ಗೆಯೇ ಹೇಳುತ್ತೇನೆ. ಇದು ಯಾವ ಅಂಗಡಿಯಲ್ಲೂ ಸಿಗುವುದಿಲ್ಲ. ಇದಕ್ಕಾಗಿ ನೀವು ಚೆನ್ನಾಗಿ ಮಳೆ ಬಂದು ಹೋದ ನಂತರ ಗೇರುಬೀಜದ ಮರದಡಿಗೆಯೇ ನಡೆಯಬೇಕು.

ಈ ಗೇರುಬೀಜ ಒಣಗಿದ ನಂತರ ಅದನ್ನು ಕೊಯ್ಯದಿದ್ದರೆ ಇಲ್ಲವೇ ಕೆಳಗೆ ಬಿದ್ದುದನ್ನು ಹೆಕ್ಕದಿದ್ದರೆ ಅದು ಈ ರೀತಿಯಾಗಿ ನೀರಿನ ಪಸೆಗೆ ಚೆನ್ನಾಗಿ ಮೊಳೆಕೆಯೊಡೆದು ಗೇರುಬೀಜದ ಸಿಪ್ಪೆ ಒಡೆದು ಹೊರಗೆ ಬಂದಿರುತ್ತದೆ.

ನೀವುಇದನ್ನುಇಷ್ಟಪಡಬಹುದು: ಗೇರುಬೀಜದ ಮೊಳಕೆಯೊಳಗೆ ಅಡಗಿದ್ದ ಕಾಂಚನದ ಗೇರುಕೂಪಿನ ನೆನಪುಗಳು

Cashew Nuts Monsoon Season Monsoon Food Coastal Karnataka

ಹಿಂದೆ ಎಲ್ಲಾ ತುಂಬಾ ಇಷ್ಟ ಪಟ್ಟು ಇದನ್ನು ತಿನ್ನುತ್ತಿದ್ದೆ.ಹುಡುಕಿಕೊಂಡು ಹೋಗಿಯೇ ತಿನ್ನುತ್ತಿದ್ದೆ.ಮಕ್ಕಳಿಗಂತು ಇದನ್ನು ತಿನ್ನುವುದೆಂದರೆ ಅದೆನೋ ಬಾರೀ ಖುಷಿ. ಕರ್ರುಂ ಕುರ್ರಂ ಎಂದು ಇದನ್ನು ಬಾಯೊಳಗೆ ಹಾಕಿಕೊಂಡು ಮೆಲ್ಲುವ ಆ ಗಮ್ಮತ್ತೇ ಬೇರೆಯದ್ದು

ಮೊಳಕೆಯೊಡೆದಾಗ ಈ ಗೇರುಬೀಜ ಹಸಿರು ಬಣ್ಣದಲ್ಲಿ ಕಾಣಿಸಿಕೊಳ್ಳುವುದು ಮಾತ್ರವಲ್ಲ, ಮಾಮೂಲಿ ಗೇರುಬೀಜಕ್ಕಿಂತಲೂ ಎರಡು ಪಟ್ಟು ದೊಡ್ಡ ಸೈಜಿನಲ್ಲಿ ಇದು ಬೆಳೆದು ಬಿಟ್ಟಿರುತ್ತದೆ.ಹಾಗೇ ತಿನ್ನಲು ಒಂಥರಾ ಬಹಳ ರುಚಿಯಾಗಿರುತ್ತದೆ. ಸುಲಭವಾಗಿ ಕೈಯಿಂದಲೇ ಸಿಪ್ಪೆಯಿಂದ ಬೀಜಗಳನ್ನು ಬೇರ್ಪಡಿಸಿ ತಿನ್ನಬಹುದು. ಏಕೆಂದರೆ ಇದು ಸಿಪ್ಪೆ ಒಡೆದುಕೊಂಡೇ ಹೊರಬರುವುದು. ಅದಕ್ಕಾಗಿಯೇ ಮಕ್ಕಳಿಗೆ ಇದನ್ನು ತಿನ್ನುವುದಕ್ಕೆ ಇನ್ನಿಲ್ಲದ ಆಸಕ್ತಿ ಕೂಡ.

ಬಾಲ್ಯದ ನೆನಪು

ಹಿಂದೆ ಎಲ್ಲಾ ಅಮ್ಮನೊಡನೆ ಬೀಜ ಹೆಕ್ಕಲು ಹೋಗುತ್ತಿದ್ದಾಗ ಬೇಕು ಬೇಕು ಎಂದೇ ಒಂದಷ್ಟು ಬೀಜಗಳನ್ನು ತರಗೆಲೆಗಳಡಿಯಲ್ಲಿ ಗುಟ್ಟಾಗಿ ಅಡಗಿಸಿಟ್ಟು ಬರುತ್ತಿದ್ದೆ… ಕಾರಣ ಇಷ್ಟೇ ಮುಂದೆ ಮಳೆ ಬಿದ್ದಾಗ, ಆ ಜೋರು ಮಳೆಗೆ ಬೀಜ ಮೊಳಕೆಯೊಡೆದಾಗ ಮತ್ತೆ ತಿನ್ನಲು ಸಿಗುತ್ತದೆ ಅಲ್ವಾ ಅದಕ್ಕಾಗಿ. ಹಾಗೆ ಮಾಡದಿದ್ದರೂ ಗುಡ್ಡ ಬದಿಗೆ ಹೋದರೆ ಬೀಜ ಹೆಕ್ಕುವವರಿಲ್ಲದೇ ಈ ರೀತಿಯಾದ ಮೊಳಕೆಯೊಡೆದ ಬೀಜಗಳು ಬೇಕಾದಷ್ಟು ತಿನ್ನಲು ಸಿಗುತ್ತಿತ್ತು.

Cashew Nuts Monsoon Season Monsoon Food Coastal Karnataka

ಈಗಲೂ ಇದರೆಡೆಗಿನ ಆಸಕ್ತ ನನ್ನಲ್ಲಿ ಒಂಚೂರು ಕಡಿಮೆ ಆಗಿಲ್ಲ. ಚೆನ್ನಾಗಿ ಮಳೆ ಬಂದ ನಂತರ ಒಮ್ಮೆ ಗೇರುಬೀಜದ ಮರದಡಿಗೆ ಹೋಗಿ ಇದಕ್ಕಾಗಿಯೇ ತರಗೆಲೆಗಳಡಿಯಲ್ಲಿ ತಡಕಾಡುತ್ತೇನೆ.ಇದೊಂದು ಹಸಿರಸಿರಾಗಿ ಕಣ್ಣಿಗೆ ಬಿದ್ದಾಗಲೆಲ್ಲ ಹಳೆಯ ಬಾಲ್ಯವೊಂದು ಮತ್ತೊಮ್ಮೆ ಇನ್ನಿಲ್ಲದಂತೆ ಹಚ್ಚ ಹಸಿರಾಗಿಯೇ ನೆನಪಾಗುವುದು.. ಮತ್ತು ನಾನಂತು ಆ ಕೂಡಲೇ ಹಸಿರ ಗೋಡಂಬಿ ಮೆಲ್ಲುವುದರಲ್ಲಿಯೇ ಸಿಕ್ಕಾಪಟ್ಟೆ ಮಗ್ನ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button