ಮಹಾನಗರಿಯಲ್ಲಿ ಕಾಡುವ ಕುಂದಾಪುರದ ನೆನಪುಗಳು

ದುಡಿಮೆಯ ಅನಿವಾರ್ಯತೆ ಕೆಲವರಿಗೆ ಹುಟ್ಟೂರನ್ನು ಬಿಟ್ಟು ಮಹಾನಗರಿಗೆ ಪಯಣ ಬೆಳೆಸುವಂತೆ ಮಾಡುತ್ತದೆ. ಮಹಾನಗರಿಯ ಜಂಜಾಟದ ಬದುಕಿನ ನಡುವೆ ಹುಟ್ಟಿ ಬೆಳೆದ ಊರು ,ಹಬ್ಬದ ಸವಿ ,ಆಡಿದ ಆಟ ಸದಾ ಕಾಡುತ್ತಿರುತ್ತದೆ. ಅದೇ ರೀತಿ ಊರು ಬಿಟ್ಟು ಮಹಾನಗರಿಗೆ ಬಂದ ಕುಂದಾಪುರದ ಹುಡುಗಿ ತನ್ನೂರಿನ ಬಗ್ಗೆ ಬರೆದ ಬರಹವಿದು . ಕುಂದಾಪುರದ ಸೆಳೆತ, ಸದಾ ಕಾಡುವ ನೆನಪು, ಬೆಂಗಳೂರಿನಲ್ಲಿ ಅಪರೂಪಕ್ಕೊಮ್ಮೆ ಕಿವಿಗೆ ಬೀಳುವ ಕುಂದಾಪ್ರ ಕನ್ನಡ, ತನ್ನೂರಿನ ಊಟದ ರುಚಿ ಎಲ್ಲವನ್ನೂ ನೆನಪಿಸಿಕೊಂಡಿದ್ದಾರೆ ಮಲ್ಲಿಕಾ . ಈ ಬರಹ ಓದಿದ ಬಳಿಕ ನಿಮಗೂ ಹುಟ್ಟೂರಿನ ನೆನಪು ಕಾಡಬಹುದು.
#ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ವಿಶೇಷ
- ಮಲ್ಲಿಕಾ ಪೂಜಾರಿ, ಹೆಸ್ಕುತ್ತೂರು.

ತುತ್ತಿನ ಜೋಳಿಗೆ ತುಂಬಿಸಿಕೊಳ್ಳಲು ಸ್ವರ್ಗದಂತಹ ನನ್ನೂರು ಕುಂದಾಪುರ(kundapuara) ಬಿಟ್ಟು ಪರವೂರಿನ ಬಸ್ಸು ಹಿಡಿದವರು. ಹೌದು ನಾವು ಊರು ಬಿಟ್ಟವರು ಆದರೆ ನಮ್ಮೂರಿನ ಸಂಸ್ಕಾರ, ಭಾಷೆ ಬಿಟ್ವವರಲ್ಲ. ಕೆಲವೊಬ್ಬರಲ್ಲಿ ಒಂದು ಕೆಟ್ಟ ಆಲೋಚನೆ ಬೇರೂರಿ ಬಿಟ್ಟಿದೆ. ಬೆಂಗಳೂರಿನಂತಹ ಬೃಹತ್ ಊರಿಗೆ ಬಂದವರು ತನ್ನೂರನ್ನೇ ಮರೆತು ಬಿಡುತ್ತಾರೆಂದು, ಆದರೆ ಅವರಿಗೇನೂ ಗೊತ್ತು ತಾಯ ಮಡಿಲಷ್ಟೇ ಮಕ್ಕಳಿಗೆ ಶ್ರೇಷ್ಟವೆಂದು.
ಸದಾ ಕಾಡುವ ಹುಟ್ಟೂರಿನ ಸೆಳೆತ
ನನ್ನೂರು ನನ್ನ ಭಾಷೆ ನನಗೆ ತಾಯಿ. ನನಗೆ ಉತ್ತಮ ಸಂಸ್ಕಾರ ಕೊಟ್ಟ ಗುರು. ನನ್ನೂರಿನಲ್ಲಿ ಸ್ನೇಹಕ್ಕೇನು, ಸೌಹಾರ್ದತೆಗೆನೂ ಕೊರೆತೆಯಿಲ್ಲ . ಹೀಗಾಗಿ ನಾವು ಎಲ್ಲೇ ಹೋದ್ರು ಎಲ್ಲರೊಳಗೊಂದಾಗುವವರು . ನಾವು ಎಲ್ಲೇ ಇದ್ದರೂ ನಮ್ಮ ಭಾಷೆಯ ಸೆಳೆತ ಇದ್ದೇ ಇರುತ್ತದೆ, ನೂರು ಜನರ ಮಧ್ಯೆ ನಮ್ಮ ಭಾಷೆ ಕಿವಿಗೆ ಬಿದ್ದಾಗ, ಹ್ವಾಯ್ ನೀವು ಕುಂದಾಪ್ರದರಾ? ಅಂತಾ ಆತ್ಮೀಯವಾಗಿ ಕೇಳುತ್ತೇವೆ. ಇನ್ನು ಅವ್ರು ಹೌದು ಅಂದ್ರೆ ಸಾಕು ಬಾರ್ಕೂರು(barkuru) ಟು ಬೆಂಗಳೂರು ತನಕ ನಮ್ಮ ಪರಿಚಯದವರ ಹೆಸರು ಹೇಳಿ ಹೋ ನೀವು ಅವ್ರ ಊರಿನವರ ಎಂದು ಖುಷಿ ಪಡುತ್ತೇವೆ.

ನೀವು ಇದನ್ನು ಇಷ್ಟಪಡಬಹುದು: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ವಿಶೇಷ; ಕುಂದಾಪುರವೆಂಬ ಚೆಂದದ ಊರು
ಇನ್ನು ಈ ಬಹೃತ್ ಬೆಂಗಳೂರಿನಲ್ಲಿ ಅದೆಷ್ಟೇ ಫೈವ್ ಸ್ಟಾರ್ ಹೋಟೆಲ್ ಇದ್ರೂ ನಾವು ಹುಡುಕುವುದು ಮಾತ್ರ, ಕರಾವಳಿ, ನಮ್ಮ ಉಡುಪಿ(udupi), ಉಡುಪಿ ಗ್ರಾಂಡ್ಸ್ ಹೀಗೆ ನಮ್ಮೂರಿನ ರುಚಿ ಸಿಗುವ ಹೋಟೆಲ್‌ಗಳನ್ನೇ. ಇನ್ನು ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಎನ್ನುವಂತೆ ಬದುಕಲು ಹಲವು ಭಾಷೆ ಮಾತನಾಡಿದ್ರೂ, ಕುಂದಗನ್ನಡದಷ್ಟು ತೃಪ್ತಿ ನೆಮ್ಮದಿ ಯಾವ ಭಾಷೆಯೂ ನೀಡಲ್ಲ. ಎಷ್ಟೆ ಟೆನ್ಷನ್ ಇದ್ರೂ ನಮ್ಮ ಭಾಷೆಯಲ್ಲಿ ಬಾಯಿ ತುಂಬಾ ಮಾತಾಡ್ರೆ ಅಂದೊಂತರ ನೆಮ್ಮದಿ. ಇನ್ನು ಹಬ್ಬಹರಿದಿನಗಳನಂತೂ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.

ತನ್ನೂರಿನ ಹಬ್ಬದ ಸವಿ
ಆಸಾಡಿ ಹಬ್ಬದ ಓಡ್ ದ್ವಾಸಿ , ಕೋಳಿ ಸಾರು, ಕ್ಯಾನಿ ಗೆಂಡಿ ಹಿಟ್ಟು. ಇನ್ನೇನು ಸ್ವಾಣಿ ತಿಂಗಳು ಶುರು , ಎಲ್ಲರ ಮನೆಲೂ ಅಜ್ಜಿ ಸಂಭ್ರಮ. ಅಜ್ಜಿ ಅಂದ್ರೆ ನಮ್ಮೂರಿನ ವಿಶೇಷ ಹಬ್ಬ. ನಮ್ಮನಗಲಿದ ದೊಡ್ಡವರಿಗಾಗಿ ಮಾಡುವ ಪೂಜೆ. ಆ ದಿನ ಕೋಳಿ ಸಾರು ಉದ್ದಿನ ದೋಸೆ ವಾವ್! ಆಮೇಲೆ ಚೌತಿ ಹಬ್ಬ . ಭಟ್ರ ಮನೆಗೆ ಹೋಗಿ ಕಡ್ಬ್ ತರೋದು. ಸಾಲು ಸಾಲು ಹುಡುಗಿರು ಗಣಪತಿ ದೇವಸ್ಥಾನಕ್ಕೆ ಹೋಗೋದು. ದೀಪಾವಳಿ ದಿನ ಮತ್ತೆ ಕೋಳಿ ಸಾರು ದೋಸೆ ಈ ಎಲ್ಲಾ ಸಂಭ್ರಮಗಳನ್ನು ನಾವು ಸದ್ಯಕ್ಕೆ ಗಂಟು ಕಟ್ಟಿದ್ದೇವೆ.

ಈ ಹಿಂದೆ ಅನುಭವಿಸಿದ ಖುಷಿಯ ನೆನೆದು ಕಣ್ತುಂಬಿ ಅದೇ ಬೃಹತ್ ನಗರಿಯ ಕಾಲು ಅಂಚಿನ ಜಾಗದಲ್ಲಿ ಬಿಕ್ಕಿ ಮಲಗುತ್ತೇವೆ.
ಮೀನು ಸಾರು, ಏಡಿ, ಜಾರಿ, ಚಳ್ಲಿ, ಹೀಗೆ ಸಾಲು ಸಾಲು ನಾನ್ ವೆಜ್ ನಮ್ಮೂರಲ್ಲಿ ತುಂಬಾನೇ ಸ್ಪೇಷಲ್. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಜಿಟಿ ಜಿಟಿ ಮಳೆಯಲ್ಲಿ ಅದರದೇ ನೆನಪು ಬಹಳ ಕಾಡುತ್ತೆ. ಹೀಗೆ ಪ್ರತಿ ಹೆಜ್ಜೆಯಲ್ಲೂ ಪ್ರತಿ ಕ್ಷಣದಲ್ಲೂ ನಾವು ನಮ್ಮ ಊರನ್ನು ನೆನಪು ಮಾಡಿಕೊಂಡು ನೆಮ್ಮದಿಯ ನೆಟ್ಟುಸಿರು ಬಿಡುತ್ತೇವೆ. ಯಾಕಂದ್ರೆ ನಾವು ಊರು ಬಿಟ್ಟವರು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.
Everytime you prove again and again that you are the Best! Good writing keep up the momentum