ದೆಹಲಿಯಿಂದ ಲಂಡನ್ ಗೆ ಬಸ್ಸು ಟೂರು: 70 ದಿನಗಳಲ್ಲಿ 18 ದೇಶ ನೋಡುವ ಅವಕಾಶ ಯಾರಿಗುಂಟು ಯಾರಿಗಿಲ್ಲ
ಒಂದು ಅಪರೂಪದ ಬಸ್ಸು ಟೂರಿನ ಕತೆ ಇದು. ಸುದೀರ್ಘ ಬಸ್ಸು ಯಾನ ಹೊರಡುವ ಮನಸ್ಸಿರುವವರಿಗೆ ದೆಹಲಿಯಿಂದ ಇಂಗ್ಲೆಂಡ್ ಗೆ ಬಸ್ಸು ಟೂರು ಆಯೋಜನೆಯಾಗಿದೆ. ಅದರ ಪೂರ್ತಿ ವಿವರ ಇಲ್ಲಿದೆ.
ಬಸ್ಸು ಪಯಣ ಯಾವಾಗಲೂ ನಮ್ಮ ಮನಸ್ಸಲ್ಲಿರುತ್ತದೆ. ಕಾಲೇಜು ಬಸ್ಸು, ನಮ್ಮೂರಿಗೆ ಹೋಗುವ ಬಸ್ಸು, ಇಷ್ಟವಾದ ವ್ಯಕ್ತಿ ಬರುತ್ತಿದ್ದ ಬಸ್ಸು ಹೀಗೆ ಒಂದೊಂದು ಬಸ್ಸಿಗೂ ಒಂದೊಂದು ಕತೆ ಇರುತ್ತದೆ. ಹಾಗಾಗಿಯೇ ಬಸ್ಸು ಪಯಣ ನಮ್ಮ ಮನಸ್ಸೊಳಗೆ ಜೀವಂತವಾಗಿರುತ್ತದೆ. ಇನ್ನು ಕೆಲವರಿಗೆ ಒಂದೊಳ್ಳೆ ಬಸ್ಸಲ್ಲಿ ಕುಳಿತುಕೊಂಡು ಇಡೀ ಜಗತ್ತು ಸುತ್ತುವ ಆಸೆ ಇರುತ್ತದೆ. ನಿಮಗೂ ಆ ಆಸೆ ಇರಬಹುದು. ಆ ಆಸೆ ನೆರವೇರಿಸುವುದಕ್ಕೆಂದೇ ಹೊಸತೊಂದು ಅಚ್ಚರಿಯ ಪಯಣ ಶುರುವಾಗಿದೆ. ಆ ಪಯಣವೇ ದೆಹಲಿ ಟು ಲಂಡನ್ ಪಯಣ. ನೀವು ದೆಹಲಿಯಲ್ಲಿ ಬಸ್ಸು ಹತ್ತಿದರೆ ಆ ಬಸ್ಸಿನಲ್ಲಿಯೇ 18 ದೇಶಗಳನ್ನು ಸುತ್ತಿಕೊಂಡು ಹೋಗಿ ಇಂಗ್ಲೆಂಡ್ ತಲುಪಬಹುದು. ಈ ಅಚ್ಚರಿಯ ಪಯಣ ಹೊರಡುವ ಆಸೆ ಇರುವವರು ತಕ್ಷಣ ಹೆಸರು ನೋಂದಾಯಿಸಿಕೊಳ್ಳುವುದು ಅವಶ್ಯ.
70 ದಿನಗಳಲ್ಲಿ 18 ದೇಶ
70 ದಿನಗಳಲ್ಲಿ 18 ದೇಶ ನೋಡುವುದು ಮತ್ತು ಸುಮಾರು 20 ಸಾವಿರ ಕಿಮೀ ಕ್ರಮಿಸುವುದು ಈ ಪಯಣದ ಗುರಿ. ದೇಶ ದೇಶಗಳನ್ನು ಬಸ್ಸಿನ ಮೂಲಕವೇ ಪ್ರವೇಶಿಸುವುದು. ಅಲ್ಲಿನ ಮಹತ್ವದ, ಚಂದದ ತಾಣಗಳನ್ನು ನೋಡುವುದು. ಒಂದೊಳ್ಳೆ ಅನುಭವ ಪಡೆದು ವಾಪಸ್ ಬರುವುದು.
ಈ ಟೂರು ಆಯೋಜಿಸಿರುವುದು ಅಡ್ವೆಂಚರ್ಸ್ ಓವರ್ ಲ್ಯಾಂಡ್ ಎಂಬ ಸಂಸ್ಥೆ. ಮೇ ತಿಂಗಳಲ್ಲಿ ದೆಹಲಿಗೆ ಹೋಗುವ ಈ ಬಸ್ಸು ಹೊರಡಲಿದೆ. ಆಸಕ್ತರು ಈಗಲೇ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.
ಬಸ್ಸಲ್ಲೇ ಜಗತ್ತು ಸುತ್ತುವ ಇಸೆ ಇರುವವರಿಗೆಂದೇ ಒಂದು ಐಷಾರಾಮಿ ಬಸ್ಸು ರೆಡಿಯಾಗಿ ನಿಂತಿದೆ. ಮೇ ತಿಂಗಳಲ್ಲಿ 20 ಜನ ಪ್ರಯಾಣಿಕರನ್ನು ಹೊತ್ತುಕೊಂಡು ದೆಹಲಿಯಿಂದ ಹೊರಡುತ್ತದೆ. ಅಲ್ಲಿಂದ ಮಯನ್ಮಾರ್, ಥೈಲ್ಯಾಂಡ್, ಲಾವೋಸ್, ಚೀನಾ, ಕಜಕ್ ಸ್ತಾನ್, ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್, ರಷ್ಯಾ, ಲಿತುವಾನಿಯಾ, ಲಟ್ವಿಯಾ,, ಪೋಲಾಂಡ್, ಚೆಕ್ ರಿಪಬ್ಲಿಕ್, ಜರ್ಮನಿ, ನೆದರ್ ಲ್ಯಾಂಡ್, ಬೆಲ್ಜಿಯಂ, ಫ್ರಾನ್ಸ್ ದೇಶಗಳನ್ನು ದಾಟಿ ಇಂಗ್ಲೆಂಡ್ ತಲುಪಲಿದೆ.
4 ಹಂತದ ಪಯಣ
ನಾಲ್ಕು ಹಂತದಲ್ಲಿ ಈ ಪಯಣ ಸಾಗಲಿದೆ. ಒಂದನೇ ಹಂತದಲ್ಲಿ ಭಾರತ, ಮಯನ್ಮಾರ್, ಥೈಲ್ಯಾಂಡ್ ದೇಶಕ್ಕೆ ಬಸ್ಸು ಹೋಗುತ್ತದೆ. ಎರಡನೇ ಹಂತದಲ್ಲಿ ಚೀನಾದ ಸಿಚುವಾನ್ ಮತ್ತು ಕ್ಸಿಂಜಿಯಾಂಗ್ ಪ್ರದೇಶ. ಈ ಹಂತದಲ್ಲಿ ಚೀನಾದ ಮಹಾಗೋಡೆ, ಗೋಬಿ ಮರುಭೂಮಿ ಮುಂತಾದವು ನೋಡಬಹುದು. ಮೂರನೇ ಹಂತದಲ್ಲಿ ಕಿರ್ಗಿಸ್ತಾನ್, ಉಜ್ಬೆಕಿಸ್ತಾನ್, ಕಜಕ್ ಸ್ತಾನ್ ಮತ್ತು ರಷ್ಯಾಗೆ ಪಯಣ ಸಾಗುತ್ತದೆ. ಕೊನೆಯಲ್ಲಿ ಹಂತದಲ್ಲಿ ಯುರೋಪ್ ದೇಶಗಳಾದ ಲಟ್ವಿಯಾ, ಪೋಲ್ಯಾಂಡ್, ಲಿತುವಾನಿಯಾ, ಚೆಕ್ ರಿಪಬ್ಲಿಕ್, ನೆದರ್ ಲ್ಯಾಂಡ್, ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ಇಂಗ್ಲೆಂಡ್ ಭೇಟಿ ನಡೆಯಲಿದೆ.
20 ಜನರಷ್ಟೇ ಈ ಬಸ್ಸಿನಲ್ಲಿ ಪಯಣಿಸಬಹುದು. ಒಬ್ಬೊಬ್ಬರಿಗೆ ಈ ಪಯಣದ ಟಿಕೆಟ್ ಬೆಲೆ ರು.15 ಲಕ್ಷ. ಅಂದಹಾಗೆ ಈ ಪಯಣ ಆಯೋಜಿಸುತ್ತಿರುವುದು ಅಡ್ವೆಂಚರ್ಸ್ ಓವರ್ ಲ್ಯಾಂಡ್ ಎಂಬ ಸಂಸ್ಥೆ. ಈ ಸಂಸ್ಥೆ ದೂರದ ಊರಿನ ಪಯಣ ಆಯೋಜಿಸುವುದಕ್ಕೆ ಹೆಸರುವಾಸಿಯಾದುದು. ಈ ಹಿಂದೆ ಕೋಲ್ಕತ್ತಾದಿಂದ ಲಂಡನ್ ಗೆ ಬಸ್ಸು ಪಯಣ ಆಯೋಜಿಸುತ್ತಿತ್ತು. ಕಾರಣಾಂತರಗಳಿಂದ ಆ ಪಯಣ ನಿಂತಿತ್ತು. ಇದೀಗ ಮತ್ತೆ ಆರಂಭಗೊಂಡಿದೆ. ಆಸಕ್ತರು ಹೆಚ್ಚಿನ ಮಾಹಿತಿದೆ www.bustolondon.in ವೆಬ್ ಸೈಟ್ ನೋಡಬಹುದು.
ಇಂಥದ್ದೊಂದು ದೂರ ತೀರದ ಯಾನ ಹೊರಡುವವರಿಗೆ ದೃಢ ನಿರ್ಧಾರ ಮತ್ತು ಒಳ್ಳೆಯ ಆರೋಗ್ಯ ಬೇಕಾಗುತ್ತದೆ. ದಿನಗಟ್ಟಲೆ ಬಸ್ಸಿನಲ್ಲಿ ಕೂರುವ ಶಕ್ತಿಯೂ ಬೇಕು. ಒಂದೊಮ್ಮೆ ಹೀಗೆ ದೇಶದೇಶಗಳ ಚೆಂದ ನೋಡಲು ಹೊರಡುವ ಆಸೆ ನಿಮಗಿದ್ದರೆ ಇವತ್ತಿನಿಂದಲೇ ನಿಮ್ಮ ಫಿಟ್ ನೆಸ್ ಕಡೆಗೆ ಗಮನ ಹರಿಸಿ. ಆಮೇಲೆ ಬಸ್ಸಿನಲ್ಲೇ ಜಗತ್ತು ಸುತ್ತುವ ಪಯಣವನ್ನು ಒಂದು ಕೈ ನೋಡಬಹುದು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ.
ಬನ್ನಿ ಜೊತೆಯಾಗಿ