ಮ್ಯಾಜಿಕ್ ತಾಣಗಳುವಿಸ್ಮಯ ವಿಶ್ವಸಂಸ್ಕೃತಿ, ಪರಂಪರೆ

ಹರಿದ್ವಾರ ರಸ್ತೆಗಳ ತುಂಬಾ ಪೌರಾಣಿಕ ಗ್ರಾಫಿಟಿ: ಮಹಾ ಕುಂಭಮೇಳಕ್ಕೆ ಪೂರ್ಣ ಕುಂಭ ಸ್ವಾಗತ

ಮಹಾಕುಂಭ ಮೇಳ ಈ ಸಲ ಜನವರಿ 14ರಿಂದ ಏಪ್ರಿಲ್ ಅಂತ್ಯದವರೆಗೆ ಉತ್ತರಾಖಂಢ ರಾಜ್ಯದ ಹರಿದ್ವಾರದಲ್ಲಿ ನಡೆಯುತ್ತಿದೆ. ಏಕಕಾಲದಲ್ಲಿ ಲಕ್ಷಾಂತರ ಮಂದಿ ಸೇರುವ ಮಹಾಕುಂಭಮೇಳವನ್ನು ಇಡೀ ಜಗತ್ತು ಬೆರಗಿನಿಂದ ನೋಡುವುದು ವಿಶೇಷ. ಈ ಸಲ ಮಹಾಕುಂಭಮೇಳಕ್ಕೆ ಆಗಮಿಸುವವರಿಗೆಂದೇ ಹರಿದ್ವಾರದ ಬೀದಿ ಬೀದಿಗಳಲ್ಲಿ ಕುಂಭಮೇಳದ ಮಹತ್ವ ಸಾರುವ ಗ್ರಾಫಿಟಿ ಬಿಡಿಸಲಾಗಿದೆ. ಈ ಗ್ರಾಫಿಟಿಗಳು ಕುಂಭಮೇಳಕ್ಕೆ ಆಗಮಿಸುವವರನ್ನು ಕೈ ಬೀಸಿ ಕರೆಯುತ್ತಿದೆ.

ಕುಂಭಮೇಳ ಒಂದು ಸಾಂಪ್ರದಾಯಿಕ ಮತ್ತು ಸಾಮೂಹಿಕ ತೀರ್ಥಯಾತ್ರೆ. ಪ್ರತೀ ಕುಂಭಮೇಳಕ್ಕೂ ಲಕ್ಷಾಂತರ ಜನ ಸೇರುತ್ತಾರೆ. ಒಟ್ಟಾರೆ ಗಂಗೆಯಲ್ಲಿ ಮುಳುಗಿ ಪವಿತ್ರ ಸ್ನಾನ ಮಾಡುತ್ತಾರೆ. ಲಕ್ಷಾಂತರ ಮಂದಿ ಒಂದೆಡೆ ಸೇರಿ ಆಚರಿಸುವ ಈ ಕುಂಭಮೇಳವನ್ನು ಇಡೀ ಜಗತ್ತು ಅಚ್ಚರಿಯಿಂದ ನೋಡುತ್ತದೆ. ಈ ಸಲ ಮಹಾ ಕುಂಭ ಮೇಳ ಹರಿದ್ವಾರದಲ್ಲಿ ನಡೆಯುತ್ತಿದೆ. ಜನವರಿ 12 ಮಕರ ಸಂಕ್ರಮಣದಿಂದ ಮಹಾ ಕುಂಭ ಮೇಳ ಆರಂಭಗೊಂಡಿದ್ದು, ಏಪ್ರಿಲ್ ಅಂತ್ಯದವರೆಗೆ ನಡೆಯಲಿದೆ. ಅದಕ್ಕಾಗಿ ಇಡೀ ಹರಿದ್ವಾರದ ತುಂಬಾ ಪೌರಾಣಿಕ ಗ್ರಾಫಿಟಿಗಳ ಚಿತ್ತಾರ ಮೂಡಿದೆ. ಈ ಬಗೆಬಗೆಯ ಬಣ್ಣದ ಚಿತ್ತಾರಗಳು ಮಹಾ ಕುಂಭಮೇಳಕ್ಕೆ ಬರುವವರಿಗೆ ಸ್ವಾಗತ ಹೇಳುತ್ತಿವೆ.

ANI

ಈ ಕುಂಭ ಮೇಳಗಳಲ್ಲಿಯೂ ಬೇರೆ ಬೇರೆ ಬಗೆಗಳಿವೆ. ಕುಂಭಮೇಳ ನಾಲ್ಕು ವರ್ಷಗಳಿಗೊಮ್ಮೆ ಜರುಗುತ್ತದೆ. ಅರ್ಧ ಕುಂಭಮೇಳ ಆರು ವರ್ಷಗಳಿಗೊಮ್ಮೆ ಜರುಗುತ್ತದೆ. ಮಹಾ ಕುಂಭಮೇಳ 12 ವರ್ಷಗಳಿಗೊಮ್ಮೆ ಜರುಗುತ್ತದೆ. ಈ ಸಲದ ಮಹಾ ಕುಂಭಮೇಳದ ಮೊದಲ ಪವಿತ್ರ ಶಾಹಿ ಸ್ನಾನ ಮಾರ್ಚ್ 11ರಂದು ಜರುಗಲಿದೆ. ಎರಡನೆಯ ಶಾಹಿ ಸ್ನಾನ ಏಪ್ರಿಲ್ 12ರಂದು ನಡೆಯಲಿದೆ. ಮೂರನೆಯ ಪವಿತ್ರ ಸ್ನಾನ ಏಪ್ರಿಲ್ 14ರಂದು ಮತ್ತು ಕೊನೆಯ ಪವಿತ್ರ ಸ್ನಾನ ಮಹಾಕುಂಭ ಏಪ್ರಿಲ್ 27ರಂದು ಆಚರಿಸಲ್ಪಡುತ್ತದೆ.

ಅನೇಕರು ಈ ಆಚರಣೆಯಲ್ಲಿ ಪಾಲ್ಗೊಳ್ಳಲು ತಿಂಗಳಾನುಗಟ್ಟಲೆ ಯೋಜನೆ ಹಾಕುತ್ತಿರುತ್ತಾರೆ. ಫೋಟೋಗ್ರಾಫರ್ ಗಳು ಸಮಯ ಹೊಂದಿಸಿಕೊಂಡು ಅಲ್ಲಿಗೆ ಹೋಗಬಯಸುತ್ತಾರೆ. ಅಷ್ಟೊಂದು ಜನ ಸೇರಿಯೂ ಎಲ್ಲರನ್ನೂ ನಿಭಾಯಿಸಲು ಸಾವಿರಾರು ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಾರೆ. ಈ ಸಲ ನೆರೆದ ಸಮೂಹಕ್ಕೆ ಗೋಡೆ ಗೋಡೆಗಳಲ್ಲೂ ಅಚ್ಚರಿ ಕಾಣಸಿಗುತ್ತದೆ. ಕುಂಭ ಮೇಳದ ಮಹತ್ವ ಸಾರುವ ಚಿತ್ರಗಳನ್ನು ಗೋಡೆಗಳ ಮೇಲೆ ಬಿಡಿಸಲಾಗಿದೆ. ಕುಂಭ ಮೇಳದ ಪೌರಾಣಿಕ ಕಾರಣಗಳನ್ನು ಚಿತ್ತಾರದ ಮೂಲಕ ಹೇಳಲಾಗಿದೆ. ಒಂದಿಡೀ ನಗರವೇ ಈ ಗ್ರಾಫಿಟಿಗಳ ಮೂಲಕ ಸಿಂಗಾರಗೊಂಡು ನಳನಳಿಸುತ್ತಿದೆ. ಈ ಗ್ರಾಫಿಟಿಗಳ ಹಿಂದೆ ಇರುವುದು ಹರಿದ್ವಾರ-ರೂರ್ಕಿ ಅಭಿವೃದ್ಧಿ ಪ್ರಾಧಿಕಾರ. ಈ ಪ್ರಾಧಿಕಾರ ನಗರದ ಗೋಡೆ, ಸೇತುವೆಗಳಿಗೆ ಬಣ್ಣಗಳಿಂದ ಮ್ಯಾಜಿಕ್ ಸ್ಪರ್ಶ ನೀಡಿರುವುದು ನಿಜಕ್ಕೂ ಮಹಾಕುಂಭಮೇಳದ ಆಕರ್ಷಣೆಯನ್ನು ಹೆಚ್ಚಿಸಿದೆ. 

ಕುಂಭ ಮೇಳದ ವಿಸ್ತಾರ, ಅದ್ಭುತವನ್ನು ಅರ್ಥ ಮಾಡಿಕೊಳ್ಳುವವರು ಗೂಗಲ್ ಹೋಗಿ ಒಮ್ಮೆ ಹಳೆಯ ಫೋಟೋಗಳನ್ನು ನೋಡಿದರೆ ಸಾಕು ಕುಂಭಮೇಳದ ಅಗಾಧತೆ ಅರಿವಾಗುತ್ತದೆ. ಈ ಸಲ ನಡೆಯುವುದು ಕೊರೋನಾ ನಂತರದ ಕುಂಭಮೇಳ. ಹಾಗಾಗಿ ಹೆಚ್ಚಿನ ಮುನ್ನೆಚ್ಚರಿಕೆ, ಮುಂಜಾಗ್ರತೆ ಅಗತ್ಯವಾಗಿದೆ. ಅದನ್ನೆಲ್ಲಾ ನಿಭಾಯಿಸುವುದು ಸರ್ಕಾರಕ್ಕೆ ದೊಡ್ಡ ಸವಾಲೇ ಸರಿ. ಆದರೆ ಕುಂಭ ಮೇಳ ನಿರ್ವಹಣೆ ಯಾವತ್ತೂ ಸರಾಗವಾಗಿಯೇ ನಡೆದಿದೆ. ಹಾಗಾಗಿ ಈ ಸಲವೂ ಸುಸೂತ್ರವಾಗಿ ನಡೆಯುವ ವಿಶ್ವಾಸ ಕುಂಭ ಮೇಳ ವಿಶ್ವಾಸಿಗರಿಗೆ ಇದೆ. 

ಈ ಬರಹ ಓದುವವರಿಗೆ ಯಾರಿಗಾದರೂ ಕುಂಭ ಮೇಳಕ್ಕೆ ಹೋಗುವ ಆಸೆ ಉಂಟಾದರೆ, ನೀವು ಸ್ವಲ್ಪ ಪೂರ್ವ ತಯಾರಿಯೊಂದಿಗೆ ಹೊರಡಬಹುದು. ಈ ಸಲ ನಡೆಯುವ ಮಹಾ ಕುಂಭಮೇಳ ಹರಿದ್ವಾರದಲ್ಲಿ ನಡೆಯುತ್ತದೆ. ಹರಿದ್ವಾರ ಇರುವುದು ಉತ್ತರಾಖಂಡ ರಾಜ್ಯದಲ್ಲಿ. ಬೆಂಗಳೂರಿನಿಂದ ಹರಿದ್ವಾರಕ್ಕೆ ವಿಮಾನದಲ್ಲಿ ಅಥವಾ ರೈಲಿನಲ್ಲಿ ಹೋಗಬಹುದು. ಪೂರ್ವತಯಾರಿ ಮತ್ತು ಮುನ್ನೆಚ್ಚರಿಕೆ ಅವಶ್ಯ ಮತ್ತು ಅನಿವಾರ್ಯ.

Related Articles

Leave a Reply

Your email address will not be published. Required fields are marked *

Back to top button