ಅನೇಕರು ಕಡೆಗಣಿಸಿರುವ ನೀವು ನೋಡಲೇಬೇಕಾದ ಮತ್ತೊಂದು ಪಾರಂಪರಿಕ ತಾಣ ಆನೆಗೊಂದಿ
ಕೆಲವು ಊರುಗಳು ಅದ್ಯಾಕೋ ಏನೋ ಶಾಪಗ್ರಸ್ತ ಅಪ್ಸರೆಯಂತೆ ಇರುತ್ತವೆ. ಅವುಗಳಿಗೆ ಸಿಗಬೇಕಿದ್ದ ಮನ್ನಣೆ ಸಿಗುತ್ತಿರುವುದಿಲ್ಲ. ಅಂಥಾ ಒಂದು ಊರು ತುಂಗಾಭದ್ರಾ ನದಿ ದಂಡೆ ಮೇಲಿರುವ ಆನೆಗೊಂದಿ ಎಂಬ ಪುಟ್ಟ ಗ್ರಾಮ. ಆನೆಗೊಂದಿ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಎಂಬುದು ಇತಿಹಾಸದ ಪುಟಗಳಲ್ಲಿ ಉಲ್ಲೇಖಗೊಂಡಿದೆ. ಕುತೂಹಲದ ವಿಷಯವೆಂದರೆ ಹಂಪಿಗಿಂತಲೂ ಐತಿಹಾಸಿಕ ಸ್ಥಳ ಎಂಬ ಖ್ಯಾತಿಯೂ ಆನೆಗೊಂದಿಗೆ ಇದೆ. ರಾಮಾಯಣ ಕಾಲದಲ್ಲಿ ವಾಲಿಯ ರಾಜಧಾನಿಯಾಗಿತ್ತು ಎಂಬುದು ಆನೆಗೊಂದಿಯ ಹೆಗ್ಗಳಿಕೆ ಪ್ರತೀತಿ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಈ ಐತಿಹಾಸಿಕ ಗ್ರಾಮವನ್ನೊಮ್ಮೆ ನೀವು ನೋಡಬೇಕು.
ಕರ್ನಾಟಕದ ಪ್ರತೀ ಜಿಲ್ಲೆಯಲ್ಲೂ ಬೆರಗು ಹುಟ್ಟಿಸುವ ತಾಣಗಳಿವೆ. ಆದರೆ ದೂರದಲ್ಲಿ ಕುಳಿತಿರುವವರಿಗೆ ಆ ತಾಣಗಳು ಗೊತ್ತಿರುವುದಿಲ್ಲ. ಕೆಲವು ತಾಣಗಳಷ್ಟೇ ಪರಿಚಯವಾಗುತ್ತವೆ. ಆ ತಾಣಗಳಿಗೆ ಜನ ಹೋಗುತ್ತಾರೆ. ಅವರಿಂದ ಮತ್ತೊಬ್ಬರಿಗೆ ಗೊತ್ತಾಗುತ್ತದೆ. ಅವರೂ ಅಲ್ಲಿಗೆ ಹೋಗಿ ಫೋಟೋ ತೆಗೆಸಿಕೊಳ್ಳುತ್ತಾರೆ. ಆದರೆ ಕೆಲವೊಂದು ತಾಣಗಳು ಎಷ್ಟು ಶ್ರೀಮಂತವಾಗಿದ್ದರೂ ಗಣನೆಗೆ ಬಾರದೇ ಹೋಗಿವೆ. ಅಂಥದ್ದೇ ಒಂದು ತಾಣ ಆನೆಗೊಂದಿ.
ಅನನ್ಯ ಪಾರಂಪರಿಕ ಹಿನ್ನಲೆಯನ್ನು ಹೊಂದಿರುವ ತಾಣವಿದು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿದೆ. ತುಂಗಾಭದ್ರಾ ನದಿ ದಂಡೆ ಮೇಲಿರುವ ಪುಟ್ಟ ಗ್ರಾಮವಿದು. ಹಂಪಿಗಿಂತಲೂ ಐತಿಹಾಸಿಕ ಸ್ಥಳ ಎಂಬ ಖ್ಯಾತಿಯನ್ನು ಮುಡಿಗೇರಿಸಿಕೊಂಡಿರುವುದು ಆ ಊರಿನ ಹೆಗ್ಗಳಿಕೆ. ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಎಂಬ ವಿಚಾರವೂ ಇತಿಹಾಸದ ಪುಟಗಳಲ್ಲಿ ಉಲ್ಲೇಖಗೊಂಡಿದೆ. ರಾಮಾಯಣ ಕಾಲದಲ್ಲಿ ವಾಲಿಯ ರಾಜಧಾನಿಯಾಗಿತ್ತು ಎಂಬುದು ಮತ್ತೊಂದು ಕತೆ. ಇಂಥಾ ಕಥೆಗಳಿರುವ ಊರಿಗೊಮ್ಮೆ ನೀವು ಹೋಗಬೇಕು.
ಕಿಷ್ಕಿಂಧವೆಂದು ಪ್ರಸಿದ್ಧವಾಗಿದ್ದ ಈ ಸ್ಥಳವನ್ನು ರಾಮಚಂದ್ರ ವಾಲಿಯನ್ನು ಕೊಂದು ಸುಗ್ರೀವನಿಗೆ ಕೊಟ್ಟನೆಂದೂ, ಈ ಋಣ ತೀರಿಸಲು ಸುಗ್ರೀವ ರಾವಣ ಸಂಹರಿಸಿ, ಸೀತೆಯನ್ನು ಬಂಧನದಿಂದ ಬಿಡಿಸಿ ತರುವಲ್ಲಿ ಶ್ರೀರಾಮನಿಗೆ ನೆರವಾದನೆಂದು ರಾಮಾಯಣದಲ್ಲಿ ಹೇಳಿದೆ.
ಯಾದವ – ಹೊಯ್ಸಳರ ಕಾಲದಲ್ಲಿ ಬೇಡ ಸಮುದಾಯದ ಕಂಪಿಲರಾಯನೆಂಬ ಚಿಕ್ಕ ಪಾಳೆಯಗಾರ ಕುಮ್ಮಟ ದುರ್ಗದ ರಾಜಧಾನಿಯಿಂದ ಆನೆಗೊಂದಿ ರಾಜ್ಯವನ್ನಾಳುತ್ತಿದ್ದ ಎಂಬ ಕಥೆಯೂ ಇದೆ. ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕನಾದ ಮಲ್ಲಿಕಾರ ಹೊಯ್ಸಳ ಯಾದವ ಕಾಕತೀಯ ರಾಜರನ್ನು ಸೋಲಿಸಿ ಇಡೀ ಹಿಂದೂಸ್ತಾನವನ್ನು ಪಾದಾಕ್ರಾಂತವಾಗಿ ಮಾಡಬೇಕೆಂದು ಹವಣಿಸಿದಾಗ ಕಂಪಿಲರಾಯ ಕುಮಾರರಾಮ ತನ್ನ ಮಗನೊಂದಿಗೆ ಆ ದಂಡನಾಯಕನನ್ನು ಸೋಲಿಸಿದ. ಆದರೆ ಕಡೆಗೆ ಮಲ್ಲಿಕಾರ್ ಮೋಸದಿಂದ ಕಂಪಿಲರಾಯನನ್ನು ಬಂಧಿಸಿ ದಿಲ್ಲಿಗೆ ಒಯ್ದನೆಂದೂ ಮುಸ್ಲಿಂ ಇತಿಹಾಸಕಾರರು ಬರೆದಿದ್ದಾರೆ. ಅವನ ಜೊತೆಯಲ್ಲಿ ಬೊಕ್ಕಸಿಗರಾಗಿದ್ದ ವಾಲ್ಮೀಕಿ ಕುಲದ ಸಂಗಮನ ಮಕ್ಕಳಾದ ಹಕ್ಕಬುಕ್ಕರು ಯುಕ್ತಿಯಿಂದಲೂ ಬಾಹುಬಲದಿಂದಲೂ ದೊಡ್ಡ ಸೈನ್ಯವನ್ನು ಶೇಖರಿಸಿ ಮಲ್ಲಿಕಾರ್ನ ಪ್ರತಿನಿಧಿಯನ್ನು ಹೊಡೆದೋಡಿಸಿ ಆನೆಗೊಂದಿಯ ಹತ್ತಿರ ವಿಜಯನಗರವನ್ನು(ವಿದ್ಯಾನಗರ) ಕಟ್ಟಿ, ಹೊಸದೊಂದು ರಾಜ್ಯವನ್ನು ಸ್ಥಾಪಿಸಿ ಮುಸಲ್ಮಾನರ ಆಕ್ರಮಣವನ್ನು ತಡೆದರು.
ಎರಡನೆಯ ದೇವರಾಯನ ಕಾಲದಲ್ಲಿ ಈ ವಿದ್ಯಾನಗರ ಆನೆಗೊಂದಿಯನ್ನೊಳಗೊಂಡು ಜಗತ್ತಿನಲ್ಲಿಯೇ ಅತ್ಯಂತ ವಿಸ್ತಾರವುಳ್ಳ (೨೦ ಕಿ.ಮೀ.) ಶ್ರೀಮಂತ ರಾಜಧಾನಿಯೆಂದೂ ಪ್ರಸಿದ್ಧವಾಗಿತ್ತು. ತುಳು ವಂಶದ ಕೃಷ್ಣದೇವರಾಯನ ಕಾಲದಲ್ಲಿಯಂತೂ ಇದರ ವೈಭವ ಅಭೂತಪೂರ್ವವಾಗಿತ್ತು. ತುಂಗಭದ್ರಾ ನದಿಯ ದಂಡೆಯ ಮೇಲೆ ಸೆನಗೊಂದ್ಯಂ (ಆನೆಗೊಂದಿ) ಎಂಬ ಪಟ್ಟಣವಿತ್ತು. ಅದು ಪೂರ್ವಕಾಲದಲ್ಲಿ ರಾಜಧಾನಿಯಾಗಿತ್ತು. ಈಗಲೂ ಅದರ ಕೋಟೆಕೊತ್ತಲೆಗಳನ್ನು ಕಾಣಬಹುದು ಎಂದು ಪೇಸ್ ಎಂಬ ಪೋರ್ಚುಗೀಸ್ ಪ್ರಯಾಣಿಕ 1530ರಲ್ಲಿ ಬರೆದಿದ್ದಾನೆ.
ಇತಿಹಾಸ ಮಾತ್ರವಲ್ಲ, ಇಲ್ಲಿನ ಸೌಂದರ್ಯವನ್ನು ಸವಿಯುವುದೇ ಅದೃಷ್ಟ. ಅಂಜನಾದ್ರಿ ಬೆಟ್ಟದ ತುದಿಯಲ್ಲಿ ನಿಂತು ಸುತ್ತಲಿನ ಬೆಟ್ಟಸಾಲುಗಳು, ಕೆಳಗೆ ಹರಿವ ನದಿ, ದೂರದಿಂದ ಕಾಣುವ ಹೊಲಗದ್ದೆಗಳನ್ನು ನೋಡುವ ಆನಂದವೇ ಬೇರೆ. ಜೊತೆಗೆ ಸೂರ್ಯಾಸ್ತದ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಪರಮಾನಂದ. ಇಲ್ಲಿನ ಹುಚ್ಚಪ್ಪನ ಮಠ ದೇವಾಲಯ, ಪಂಪ ಸರೋವರ, ರಂಗನಾಥ ದೇವಾಲಯ, ಕಮಲಮಹಲ್, ಶ್ರೀಕೃಷ್ಣದೇವರಾಯನ ಸಮಾಧಿ, ನವ ವೃಂದಾವನ, ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡದಿದ್ದರೆ ಆನೆಗೊಂದಿ ಪ್ರವಾಸಕ್ಕೆ ಮೆರುಗು ಬರುತ್ತದೆ.
ಇಲ್ಲಿ ಶೇಷಶಾಯಿ ಗುಹಾಂತರ ವಿಷ್ಣುವಿಗ್ರಹ ಪ್ರಸಿದ್ಧವಾದುದು. ಹುಚ್ಚಪ್ಪನ ಮಠ ದೇವಾಲಯ, ಪಂಪ ಸರೋವರ, ರಂಗನಾಥ ದೇವಾಲಯ, ಕಮಲಮಹಲ್, ಶ್ರೀಕೃಷ್ಣದೇವರಾಯನ ಸಮಾಧಿ, ನವ ವೃಂದಾವನ, ಅಂಜನಾದ್ರಿ ಬೆಟ್ಟ, ಗುತಂಗನಾಥಸ್ವಾಮಿ ದೇವಾಲಯ, ಪಾಳುಬಿದ್ದಿರುವ ಅರಮನೆ ಹೀಗೆ ನೋಡಬಹುದಾದ ಜಾಗಗಳು ಬಹಳಷ್ಟು
ಹೀಗೆ ಹೋಗಬಹುದು:
ಬೆಂಗಳೂರಿನಿಂದ 375 ಕಿ.ಮೀ ದೂರದಲ್ಲಿದೆ. ಹೊಸಪೇಟೆ ಹತ್ತಿರದ ದೊಡ್ಡ ಪಟ್ಟಣ. ಬೆಂಗಳೂರಿನಿಂದ ಹಂಪಿಗೆ ಏಳು ಗಂಟೆಗಳ ರಸ್ತೆ ಪ್ರಯಾಣ.ಸಾರಿಗೆ ಸಂಪರ್ಕ: ಹೊಸಪೇಟೆ ಸಮೀಪದ ರೈಲು ನಿಲ್ದಾಣ. ಬೆಂಗಳೂರು ಸಿಟಿ ಜಂಕ್ಷನ್ ಯಶವಂತಪುರ ಜಂಕ್ಷನ್ಗಳಿಂದ ನೇರ ರೈಲು ಸಂಪರ್ಕವಿದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ.
ಬನ್ನಿ ಜೊತೆಯಾಗಿ