ಆವಲಬೆಟ್ಟದ ನೆತ್ತಿಯ ಮೇಲೆ: ಪ್ರಾರ್ಥನಾ ಸ್ಕೂಲು ಹುಡುಗಿ ಖುಷಿ ಬರೆದ ಲೈವ್ಲೀ ಟ್ರೆಕ್ಕಿಂಗ್ ಕಥೆ

ಸದಾ ನಗುತ್ತಲೇ ಇರುವ, ಅಪ್ಪನಿಗೆ ಪುಸ್ತಕ ಬರೆದಿದ್ದು ಸಾಕು ಎಂದು ರೇಗಿಸುವ, ಗೆಳೆಯರಿಗೆ ತಮಾಷೆ ಮಾಡಿಕೊಂಡು ಖುಷಿಯಾಗಿರುವ ಬೆಂಗಳೂರಿನ ಪ್ರಾರ್ಥನಾ ಸ್ಕೂಲಿನ ಎಸ್ ಎಸ್ ಎಲ್ ಸಿ ಹುಡುಗಿ ಖುಷಿ ಆನ್ ಲೈನ್ ಕ್ಲಾಸಿನ ಮಧ್ಯೆ ಪುರುಸೊತ್ತು ಮಾಡಿಕೊಂಡು ಬರೆದಿರುವ ಲವಲವಿಕೆಯ ಟ್ರೆಕ್ಕಿಂಗ್ ಕತೆ ಇಲ್ಲಿದೆ. ಖ್ಯಾತಿ ಸಾಹಿತಿ ಜೋಗಿ ಮತ್ತು ಜ್ಯೋತಿಯವರ ಮುದ್ದಿನ ಪುಟ್ಟ ಮಗಳು ಖುಷಿ ಬರೆದ ಮೊದಲ ಬರಹ.

ತಿಂಡಿ ತಿಂದು ರೆಡಿಯಾಗುವವರೆಗೂ ನಾವು ಯಾವ ಜಾಗಕ್ಕೆ ಹೋಗುತ್ತಿದ್ದೇವೆ ಎಂಬ ಐಡಿಯಾನೇ ಇರಲಿಲ್ಲ. ತಿಂಡಿ ತಿಂದ ಮೇಲೆ ಟ್ರೆಕ್ಕಿಂಗ್ ಹೋಗುತ್ತಿದ್ದೇವೆ ಎಂದು ಗೊತ್ತಾಗಿ ಖುಷಿಯಿಂದ ಶೂ ಧರಿಸಿ ನನ್ನ ಬ್ಯಾಗು ರೆಡಿ ಮಾಡಿದೆ. ಇನ್ನು ನೀರು, ತಿಂಡಿ ಪ್ಯಾಕ್ ಮಾಡಿ ಹಿಡಿದುಕೊಳ್ಳುವುದೆಲ್ಲಾ ಅಮ್ಮನ ಕೆಲಸ.
ಎಲ್ಲವೂ ಸಿದ್ಧವಾಯಿತು. ಆದರೆ ಯಾವ ಜಾಗಕ್ಕೆ ಎಂದು ಗೊತ್ತಿರಲಿಲ್ಲ. ಗೂಗಲಲ್ಲಿ(google) ನಿಯರ್ ಬೈ ಟ್ರೆಕ್ಕಿಂಗ್(trekking) ಪ್ಲೇಸಸ್ ಅಂತ ಕೊಟ್ಟಾಗ ಸಿಕ್ಕಿದ್ದೇ ಈ ಅದ್ಭುತ ಬೆಟ್ಟ ಆವಲಬೆಟ್ಟ.(avala betta) ಅಲ್ಲಿಗೆ ಹೋಗುವುದು ಎಂದು ತೀರ್ಮಾನವಾಯಿತು. ನಾವು ಕಾರು ಹತ್ತಿ ಹೊರಟೆವು.

ಚಿಕ್ಕಬಳ್ಳಾಪುರದ ಸಮೀಪ ಇರುವ ಈ ಬೆಟ್ಟ ಬೆಂಗಳೂರಿನಿಂದ ಸುಮಾರು 92 ಕಿಮೀ ದೂರದಲ್ಲಿದೆ. ಈ ಬೆಟ್ಟ ಹತ್ತಲು ಜಾಸ್ತಿ ಎಂದರೆ ಒಂದು ಗಂಟೆ ಬೇಕಾಗಬಹುದು.
ನಾವು ಬೆಟ್ಟದ ಬುಡಕ್ಕೆ ಹೋಗಿ ಕಾರನ್ನು ಪಾರ್ಕ್ ಮಾಡಿದೆವು. ಅಲ್ಲಿ ನಾಲ್ಕೈದು ಮಕ್ಕಳು ಹಣ್ಣು ಮಾರುತ್ತಾ ಬಳಿಗೆ ಬಂದರು. ಅವರಿಂದ ಹಣ್ಣುಗಳನ್ನು ಖರೀದಿಸಿ ಕಾರಲ್ಲಿಟ್ಟೆವು. ನಂತರ ಬೆಟ್ಟಕ್ಕೆ ಹತ್ತುವ ದಾರಿ ಹುಡುಕತೊಡಗಿದೆವು. ಈ ಬೆಟ್ಟವನ್ನು ಏರಲು ಎರಡು ಮಾರ್ಗಗಳಿವೆ. ಒಂದೋ ಕಾರು, ಬೈಕಲ್ಲಿ ಒಂದು ಹಂತದವರೆಗೆ ಹೋಗಬಹುದು. ಇಲ್ಲದಿದ್ದರೆ ಪೂರ್ತಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತಬಹುದು. ನಾವು ಆರಿಸಿಕೊಂಡಿದ್ದು ಎರಡನೇ ಮಾರ್ಗ. ನಮಗೆ ಈ ಕಲ್ಲು ಮಣ್ಣಿನ ದಾರಿಯಲ್ಲಿ ನಡೆಯುವ ಖುಷಿ ಬೇಕಾಗಿತ್ತು.

ನಾವು ಹೋಗುವಾಗಲೇ ಅನೇಕ ಮಂದಿ ಅಲ್ಲಿಗೆ ಬಂದಿದ್ದರು. ಆ ಜಾಗದ ಅಕ್ಕಪಕ್ಕದ ಊರಿನವರು ಅಲ್ಲಿ ತಿಂಡಿ, ನೀರು ಮಾರುತ್ತಿರುತ್ತಾರೆ. ನಮ್ಮ ಬಳಿ ಮನೆಯಿಂದ ತಂದ ನೀರಿನ ಬಾಟಲ್ ಗಳಿದ್ದವು. ಒಬ್ಬರಿಗೊಬ್ಬರು ತಮಾಷೆ ಮಾಡುತ್ತಾ ಬೆಟ್ಟವನ್ನು ಹತ್ತಿದ್ದೇ ಗೊತ್ತಾಗಲಿಲ್ಲ. ಯಾವಾಗ ಬೆಟ್ಟ ಹತ್ತಿ ಸುತ್ತಮುತ್ತ ನೋಡಿದೆವೋ ಅಲ್ಲಿನ ಚೆಂದ ನೋಡಿ ಬಹಳ ಸಂತೋಷವಾಯಿತು.
ಅಲ್ಲೊಂದು ಸೆಲ್ಫೀ ಪಾಯಿಂಟ್ ಇದೆ. ದೊಡ್ಡದಾದ ಕಲ್ಲು ಬಂಡೆಯ ತುದಿ ಹೊರಗಡೆ ಚಾಚಿಕೊಂಡಿದೆ. ಆ ಬಂಡೆಯಿಂದ ಕೆಳಗೆ ನೋಡಿದರೆ ಪ್ರಪಾತ ಕಾಣಿಸುತ್ತದೆ. ಅಲ್ಲಿ ಹೋಗಿ ನಿಲ್ಲಲು ತುಂಬಾ ಧೈರ್ಯ ಬೇಕು. ನಾನು ಧೈರ್ಯದಿಂದ ಅಲ್ಲಿ ಹೋಗಿ ಕುಳಿತು ಫೋಟೋ ತೆಗೆಸಿಕೊಂಡೆ. ಆ ಫೋಟೋ ನನ್ನ ಸೋಷಿಯಲ್ ಮೀಡಿಯಾದಲ್ಲಿ ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ನಾವೂ ಅಲ್ಲಿಗೆ ಹೋಗಬೇಕು ಎಂದು ಹೇಳಿದರು.

ಈ ಬೆಟ್ಟ ನೀವು ಒಮ್ಮೆಯಾದರೂ ನೋಡಲೇಬೇಕಾದ ಬೆಟ್ಟ. ಅಲ್ಲೊಂದು ದೇವಸ್ಥಾನವೂ ಇದೆ. ದೇವರ ದರ್ಶವೂ ಮಾಡಬಹುದು. ಅಲ್ಲೇ ಹತ್ತಿರದಲ್ಲಿರುವ ಹೋಟೆಲಲ್ಲಿ ಫುಡ್ ತೆಗೆದುಕೊಂಡು ಬೆಟ್ಟ ಹತ್ತಿ ಬಂದರೆ ಒಂದು ಒಳ್ಳೆಯ ಪಿಕ್ ನಿಕ್ ಆಗುತ್ತದೆ. ನಾವು ಬೆಟ್ಟ ಇಳಿದು ಬಂದ ಮೇಲೆ ಅಲ್ಲಿಂದ 60 ಕಿಮೀ ದೂರದಲ್ಲಿರುವ ಲೇಪಾಕ್ಷಿ ದೇಗುಲಕ್ಕೂ ಭೇಟಿ ಕೊಟ್ಟೆವು. ಅಲ್ಲಿ ತಲುಪಿದಾಗ ಮಧ್ಯಾಹ್ನ ಆಗಿತ್ತು. ಎಪಿಎಸ್ಆರ್ ಟಿಸಿ ಕ್ಯಾಂಟೀನಲ್ಲಿ ಬಿಸಿಬಿಸಿ ಊಟ ಮಾಡಿದಾಗ ಸಮಾಧಾನವಾಯಿತು.
ಹಳೇ ಕಾಲದ ದೇಗುಲ, ದೇಗುಲದಲ್ಲಿರುವ ಫ್ಲೈಯಿಂಗ್ ಪೋಲ್, ಲೇಪಾಕ್ಷಿ ಪಾರ್ಕು ಎಲ್ಲವನ್ನೂ ನೋಡಿ ಫೋಟೋ ತೆಗೆದುಕೊಂಡೆವು. ಅಲ್ಲಿ ನಗುನಗುತ್ತಾ ಸಮಯ ಕಳೆದು ಮರಳಿ ಬಂದೆವು. ಬೆಂಗಳೂರಿನವರು ರಜೆಯ ಒಂದು ದಿವಸ ಹೀಗೆ ಕಳೆಯಬಹುದು.

ಹೀಗೆ ನಮ್ಮ ಒಂದು ದಿನ ಖುಷಿಯಿಂದ ಮುಗಿದಿತ್ತು. ನಾವು ಮಧ್ಯದಲ್ಲಿ ಒಂದು ಕಡೆ ಹೋಟೆಲಲ್ಲಿ ಊಟ ಮುಗಿಸಿ ವಾಪಸ್ ಬಂದೆವು. ಆ ಖುಷಿಯಲ್ಲಿ ನಾವು ಕಾರಲ್ಲಿ ಇಟ್ಟಿದ್ದ ಹಣ್ಣು ನಮ್ಮ ಕಣ್ತಪ್ಪಿನಿಂದ ಮರೆತುಹೋಗಿ ಅಲ್ಲೇ ಇತ್ತು. ಎರಡು ದಿನ ಆದ ಮೇಲೆ ಅದು ಕೊಳೆತಿದ್ದು ಗೊತ್ತಾಯಿತು.. ನಾವು ಈ ಟ್ರೆಕ್ಕಿಂಗ್ ನಿಂದ ಕಲಿತ ಪಾಠ ಏನೆಂದರೆ ಹಣ್ಣು ತೆಗೆದುಕೊಳ್ಳುವುದಾದರೆ ತೆಗೆದುಕೊಳ್ಳಿ. ಆದರೆ ಕಾರಲ್ಲಿ ಇಡಬೇಡಿ. ಕಾರಲ್ಲಿ ಇಡುವುದೇ ಆದರೆ ಮರೆಯದೇ ಮನೆಗೆ ತೆಗೆದುಕೊಂಡು ಹೋಗಿ.
Good one !
ನೂಲಿನಂತೆ ಸೀರೆ ತಂದೆಯಂತೆ ಮಗಳು
Great job! Nice read.
ಚಂದ ಬರೆದಿದ್ದಿ ಖುಷಿ.