ಕಾಡಿನ ಕತೆಗಳುನಡಿಗೆ ನಮ್ಮ ಖುಷಿಗೆಬೆರಗಿನ ಪಯಣಿಗರುವಿಸ್ಮಯ ವಿಶ್ವಸೂಪರ್ ಗ್ಯಾಂಗುಸ್ಮರಣೀಯ ಜಾಗ

ತಾನಾಜಿ ತೋರಿಸಿದ ಭೀಮಘಡ: ತೇಜಸ್ವಿ, ಕೆಎಂ ಚಿಣ್ಣಪ್ಪ ನೆರಳಿನಲ್ಲಿ ಬೆಳೆದ ಕಾಡು ಪ್ರೇಮಿ ವಿನಯ್ ಮಾಧವ ಬರೆದ ಕುತೂಹಲಕರ ಅನುಭವ

ಪ್ರಪಂಚದ ಆಗುಹೋಗುಗಳ ಮೇಲೆ ಕಣ್ಣಿಟ್ಟಿರುವ ಪತ್ರಕರ್ತ, ಪೂರ್ಣಚಂದ್ರ ತೇಜಸ್ವಿ-ಕೆಎಂ ಚಿಣ್ಣಪ್ಪ ನೆರಳಿನಲ್ಲಿ ಬೆಳೆದ ಕಾಡು ಪ್ರೇಮಿ, ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಹಿಡಿತ ಇರುವ ವಿಶಿಷ್ಟ ಬರಹಗಾರ ಮಾಕೋನಹಳ್ಳಿ ವಿನಯ ಮಾಧವ ಬರೆದಿರುವ ಅಪರೂಪದ ಸ್ಥಳವೊಂದರ ವಿಭಿನ್ನ ಕಥನ.

ಎಷ್ಟೇ ಬೇಗ ಎಂದುಕೊಂಡು ಬಂದರೂ, ಎಂಟೂಕಾಲು ಘಂಟೆ ಆಗಿತ್ತು. ಗೇಟಿನಲ್ಲಿ ದೊಡ್ಡದೊಂದು ಬೋರ್ಡ್: `ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್, ಭೀಮಘಡ’.(jungle lodges and resorts) `ಇದೊಂದಕ್ಕೆ ಕಡಿಮೆ ಇಲ್ಲ ನೋಡಪ್ಪ… ಎಲ್ಲಿ ಹೋದ್ರೂ ಟೆಂಟ್ ಹಾಕಿ ಕೂತಿರ್ತಾರೆ,’ ಅಂತ ನಕ್ಕು, ಪಾರ್ಕಿಂಗ್ ಸ್ಥಳದಲ್ಲಿ ಕಾರು ನುಗ್ಗಿಸಿದೆ.

ಕಾರಿನಿಂದ ನಾನು, ರಾಕೇಶ್ ಪ್ರಕಾಶ್ (ರಾಕಿ), ರಾಕೇಶ್ ಪಾರಿಶ್ವಾಡ್ (ರಾಖು) ಮತ್ತು ನಿರಂಜನ್ ಕಗ್ಗೆರೆ ಇಳಿಯುವ ಹೊತ್ತಿಗೆ, ರೆಸಾರ್ಟ್ ನಿಂದ ಒಬ್ಬ ಹೊರಗೆ ಬಂದು, `ನೀವು ಪ್ರೆಸ್ ನವರಾ?’ ಎಂದು ಕೇಳಿದ. ತಲೆ ಅಲ್ಲಾಡಿಸಿದ ತಕ್ಷಣ, `ಎಸಿಎಫ್ ಫೋನ್ ಮಾಡಿದ್ರು. ನಿಮಗೆ ಜೀಪ್ ಕಳುಹಿಸ್ತಾರಂತೆ. ಬೇಕಾದರೆ ತಿಂಡಿ ಮಾಡಿಕೊಳ್ಳಿ,’ ಎಂದ. ನಾವು ಖಾನಾಪುರದಲ್ಲೇ ತಿಂಡಿ ತಿಂದು ಬಂದಿದ್ದೆವು. ಹಾಗಾಗಿ ತಲೆ ಅಲ್ಲಾಡಿಸಿ ಸುಮ್ಮನಾದೆವು.

`ಅಣ್ಣ, ಪ್ಲ್ಯಾನ್ ಏನು ಈಗ?’ ಅಂತ ರಾಕಿ ಕೇಳಿದ.

`ನಾವು ಏಳು ಘಂಟೆಗೇ ಬರ್ತೀವಿ ಅಂತ ಹೇಳಿದ್ದೆ. ಇನ್ನೂ ಜೀಪು ಬರೋದ್ರಲ್ಲಿ ಇದೆ. ಇಲ್ಲಿಂದ ಬಾರಾಪೀಡ್ ಹೋಗಲು ಇಪ್ಪತ್ತು ನಿಮಿಷವಾದ್ರೂ ಬೇಕು. ಅಲ್ಲಿಂದ ಎಷ್ಟು ದೂರ ಅಂತ ಗೊತ್ತಿಲ್ಲ. ಮೊದಲು ಮಹಾದಾಯಿವರೆಗೆ ಹೋಗಿ ನೋಡೋಣ. ಬರುತ್ತಾ ಬಾರಾಪೀಡ್ ಗೆ ಹೋದರೆ ಆಯ್ತು,’ ಎಂದೆ.

ಬಾರಾಪೀಡ್ ನಲ್ಲಿ ಇರುವುದು ಏಷ್ಯಾದಲ್ಲೇ ಅಪರೂಪವಾದ ಎರಡು ಬಾವಲಿ ಸಂತತಿಗಳು ಮಾತ್ರ. ಅವುಗಳು ಗುಹೆಯೊಳಗೆ ವಾಸಿಸುತ್ತವೆ ಮತ್ತು ಅಲ್ಲಿ ಪ್ರತಿದೀಪಕ (fluorescent) ಪಾಚಿ ಸಹ ವಿಶಿಷ್ಟವಾದುದು. ಎರಡು ವರ್ಷಗಳ ಕೆಳಗೆ ನಾನು ಬಾರಾಪೀಡ್ ಗುಹೆಯವರೆಗೆ ಹೋಗಿದ್ದೆ. ಅಲ್ಲಿಂದ ಮುಂದೆ ಬಿಡಲು ಅರಣ್ಯಾಧಿಕಾರಿಗಳು ಒಪ್ಪಿರಲಿಲ್ಲ. ಮೊದಲೆಲ್ಲ ಭೀಮಘಡ್ ವರೆಗೆ ಬಿಡುತ್ತಿದ್ದರಂತೆ. ಯಾವಾಗ ಅದನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದರೋ, ಅಲ್ಲಿಂದ ಮುಂದೆ ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ಇವತ್ತು ನಾವು ಎಲ್ಲಿಯವರೆಗೆ ಹೋಗಬಹುದು ಎನ್ನುವುದು ಎಸಿಎಫ್ ಮೇಲೆ ಅವಲಂಬಿತವಾಗಿತ್ತು. ನಿರಂಜನ್ ಅಲ್ಲಿನ ಸಿಸಿಎಫ್ ಗೆ ಫೋನ್ ಮಾಡಿ, ನಾವು ಬರುವ ವಿಷಯ ಹೇಳಿದ್ದರಿಂದ, ನಮಗೆ ಒಳಗೆ ಬಿಡಲು ಒಪ್ಪಿದ್ದರು. ಆದರೆ, ಎಲ್ಲಿಯವರೆಗೆ ಎನ್ನುವುದರ ಬಗ್ಗೆ ಯಾವುದೇ ಗ್ಯಾರಂಟಿ ಕೊಟ್ಟಿರಲಿಲ್ಲ.

ಜೀಪು ಬರುವ ಹೊತ್ತಿಗೆ ಒಂಬತ್ತು ಘಂಟೆಯಾಗಿತ್ತು. ನನಗಂತೂ ವಿಪರೀತ ರೇಜಿಗೆಯಾಯಿತು. ಎಸಿಎಫ್ ಅಲ್ಲಿಯೇ ಸಿಗುತ್ತಾರೆ ಎಂದರು. ಅಲ್ಲಿಂದ ಹೊರಟು ಬಾರಾಪೀಡ್ ತಲುಪುವ ಮುಂಚೆ ಎದುರುಗಡೆಯಿಂದ ಎಸಿಎಫ್ ಜೀಪು ಬಂತು. ಉಭಯಕುಶಲೋಪರಿ ಆದ ಮೇಲೆ, ನಾನು ಭೀಮಘಡಕ್ಕೆ ಹತ್ತುವ ಆಸೆ ಹೇಳಿದೆ. ಎಸಿಎಫ್ ಗಾಬರಿಯಾಗಿ, ಅಲ್ಲಿ ವಿಪರೀತ ಹುಲಿ ಇರುವುದಾಗಿ ಹೇಳಿದರು. ನನಗೆ ಅವುಗಳ ಹೆದರಿಕೆ ಇಲ್ಲವೆಂದೂ, ನಾಗರಹೊಳೆ, ಬ್ರಹ್ಮಗಿರಿ ನಡೆದೇ ಸುತ್ತಿದ್ದೇನೆಂದು ಹೇಳಿದರೂ ಒಪ್ಪಲಿಲ್ಲ. ಡ್ರೈವರ್ ಹತ್ತಿರ, ಮುಂದಿನ ಕಳ್ಳಬೇಟೆ ತಡೆ ಶಿಬಿರದಲ್ಲಿ ಹೇಳಿ ಬಂದಿರುವುದಾಗಿಯೂ, ನಮ್ಮನ್ನು ಹೊಳೆಯವರೆಗೆ ಕರೆದುಕೊಂಡು ಹೋಗಲು ಇಬ್ಬರು ಬರುವುದಾಗಿಯೂ ಹೇಳಿ, ಅವರು ಬೆಳಗಾವಿಗೆ ಹೊರಟರು.

ನಮಗೆ ಶಿಬಿರ ತಲುಪುವುದೇ ಒಂದು ಸಾಹಸವಾಯಿತು. ಹೆಚ್ಚು ಕಡಿಮೆ ಹನ್ನೊಂದು ಘಂಟೆ. ನಮ್ಮ ಜೊತೆ ಬರುವವರಿಬ್ಬರ ಹೆಸರು ಕೇಳಿದೆ. ಒಬ್ಬ ತಾನಾಜಿ, ನಿನ್ನೊಬ್ಬ ರಾಮದೇವ. ಟೀ ಕುಡಿಯುತ್ತಾ ಕೇಳಿದೆ: `ಅಲ್ಲ ಕಣಯ್ಯ ತಾನಾಜಿ, ನಿನ್ನ ಹೆಸರಿನವನು ಶಿವಾಜಿಗೆ ಸಿಂಹಘಡವನ್ನೇ ಕೊಟ್ಟ. ನೀನು ನಮಗೆ ಭೀಮಘಡ ತೋರಿಸಲೂ ಆಗೋದಿಲ್ವಾ?’ ಅಂತ.

ಹುಡುಗ ನಗೋಕೆ ಶುರುಮಾಡಿದ. `ನನಗೇನು ಸರ್ ತೋರ್ಸೋಕೆ. ಎಸಿಎಫ್ ಬರೀ ನದಿವರೆಗೆ ಕರ್ಕೊಂಡು ಹೋಗೋಕೆ ಹೇಳಿದ್ದಾರೆ. ನಾವೇನು ಅಲ್ಲಿಗೆ ಹೋಗಿ ಬರ್ತಿರ್ತೀವಿ,’ ಎಂದ.

`ಸರಿ ನಡಿ, ನಾವೂ ಬರ್ತೀವಿ,’ ಎಂದೆ.

`ಸರ್, ಅಲ್ಲಿ ಮೇಲೆ ಹೋಗ್ತಾ ಹುಲಿಗಳ ಓಡಾಟ ಜಾಸ್ತಿ ಇರುತ್ತೆ. ಎಸಿಎಫ್ ಗೆ ಗೊತ್ತಾದ್ರೆ ನಮಗೆ ತೊಂದರೆ ಬೇರೆ,’ ಎಂದ.

`ನೋಡಪ್ಪಾ… ಎಸಿಎಫ್ ಬೆಳಗಾವಿಗೆ ಹೋದರು. ಇವತ್ತು ಬರೋದು ನನಗಂತೂ ನಂಬಿಕೆ ಇಲ್ಲ.  ಅದು ಮೀರಿ ಗೊತ್ತಾದ್ರೆ, ನಾವು ಸಿಸಿಎಫ್ ಗೆ ಮಾತಾಡ್ತೀವಿ. ನೀವು ಬೀಟ್ ಹೋಗ್ತೀರಲ್ಲ, ಹಾಗೇ ಹೋಗಿ ಬರೋಣ. ಇನ್ನು ಹುಲಿ ಅಡ್ಡ ಬಂದ್ರೆ, ವಿಷಯ ನನಗೆ ಬಿಟ್ಟು ಬಿಡು. ನಾನು ನೋಡ್ಕೋತ್ತೀನಿ,’ ಎಂದೆ.

ರಾಮದೇವ ಏನೋ ಮರಾಠಿಯಲ್ಲಿ ಹೇಳಿದಾಗ, ತಾನಾಜಿ ಹೋಗಲಿ ಬಿಡು ಎನ್ನುವಂತೆ ತಲೆ ಅಲ್ಲಾಡಿಸುತ್ತಾ, ಏನೋ ಹೇಳಿದ. ಅಲ್ಲಿಗೆ ಭೀಮಘಡ ಹತ್ತಬೇಕೆಂಬ ನನ್ನ ಎರಡು ವರ್ಷದ ಕನಸಿಗೆ ರೆಕ್ಕೆ ಸಿಕ್ಕಂತಾಯಿತು. ಶಿಬಿರ ಬಿಟ್ಟು ಜೀಪು ಮುಂದಕ್ಕೆ ಹೋದಷ್ಟೂ, ಭೀಮಘಡ ಮುಂದಕ್ಕೆ ಹೋದಂತೆ ಅನ್ನಿಸಲು ಶುರುವಾಯಿತು. ಸುತ್ತ, ಮುತ್ತ ಇದ್ದ ನಿತ್ಯಹರಿದ್ವರ್ಣ ಕಾಡು, ಅಲ್ಲಿನ ಬಂಡೆಗಳ ಸ್ವರೂಪ ನೋಡುತ್ತಿದ್ದಂತೆ ನಾನು ಕಳೆದೇ ಹೋಗಿದ್ದೆ. ಇಪ್ಪತ್ತು ವರ್ಷಗಳಲ್ಲಿ ನಾನು ನೋಡಿದ ಕಾಡುಗಳಲ್ಲಿ ಇದೊಂದು ವಿಶಿಷ್ಟವಾದ ಭೂದೃಶ್ಯ ಎನ್ನುವುದಂತೂ ಮನದಟ್ಟಾಯಿತು. ಕೊನೆಗೂ ಮಹಾದಾಯಿ ನದಿಯು ಬೆಟ್ಟದಿಂದ ಹರಿದು ಕೆಳಗೆ ಬಂದು, ಇನ್ನೊಂದು ದೊಡ್ಡ ಹಳ್ಳ ಅದಕ್ಕೆ ಸಂಗಮವಾಗುವ ಜಾಗ ಬಂದೇ ಬಿಟ್ಟಿತು. ಅಲ್ಲಿಂದ ಮುಂದೆ ಜೀಪು ಹೋಗುವುದಿಲ್ಲ ಎಂದು ತಾನಾಜಿ ಹೇಳಿದ.

ಹಳ್ಳವನ್ನು ದಾಟಿದ ತಕ್ಷಣ ರಸ್ತೆ ಕಿರಿದಾಗಿದ್ದಷ್ಟೇ ಅಲ್ಲ, ಒಮ್ಮೆಲೆ ಕಡಿದಾಗಿ ಹೋಯಿತು. ನೂರು ಮೀಟರ್ ಹೋಗುವುದರೊಳಗೆ ನನಗೆ ಏದುಸಿರು ಬಂದಂತೆ ಆಯಿತು. ನಿಧಾನವಾಗಿ ಸ್ವಲ್ಪ ದೂರ ಹೋದ ಮೇಲೆ ಸರಿಯಾಯಿತು. ಇದು ಬ್ರಹ್ಮಗಿರಿಗಿಂತ ಕಡಿದಾಗಿದೆ ಎನ್ನುವುದು ನನಗೆ ಆಗಲೇ ಮನದಟ್ಟಾಯಿತು. ಅರ್ಧ ಘಂಟೆ ನಡೆದ ಮೇಲೆ, ಮೇಲಿನಿಂದ ಹಳ್ಳ ಹರಿದು ಬಂದು, ಸ್ವಲ್ಪ ಸಮತಟ್ಟಾದ ಸ್ಥಳದ ಬಂಡೆಗಳ ಮೇಲಿಂದ ಧುಮುಕುತ್ತಿತ್ತು. ಅದೇ ಪ್ರಶಸ್ತವಾದ ಸ್ಥಳ ಎಂದು ತಾನಾಜಿ ಹೇಳಿದ್ದರಿಂದ, ನಾವೆಲ್ಲರೂ ಅಲ್ಲಿ ಊಟಕ್ಕೆ ಕುಳಿತೆವು. ಊಟವಾದ ನಂತರ ನನ್ನ ಪರಿಸ್ಥಿತಿ ಸುಧಾರಿಸಿದರೂ, ರಸ್ತೆ ಕಡಿದಾಗುತ್ತಲೇ ಹೋಯಿತು. ಮಹಾದಾಯಿ ಹೊಳೆಯಿಂದ ಬೆಟ್ಟದ ತುದಿಗೆ ಒಂಬತ್ತು ಕಿಲೋಮೀಟರ್ ಕಡಿದಾದ ದಾರಿ. ಕಾಲು ದಾರಿಯ ಎರಡೂ ಕಡೆ ದೊಡ್ಡ ಮರಗಳಿರುವುದರಿಂದ, ನಮಗೆ ಭೀಮಘಡವಾಗಲೀ, ಅಥವಾ ಸುತ್ತಲಿನ ಯಾವುದೇ ಗುಡ್ಡಗಳಾಗಲೀ ಕಾಣಿಸುತ್ತಿರಲಿಲ್ಲ. ಹೆಚ್ಚೂ ಕಡಿಮೆ, ಒಂದೂವರೆ ಘಂಟೆ ನಡೆದ ಮೇಲೆ, ಒಮ್ಮೆಲೆ ಮರಗಳ ಮಧ್ಯೆಯಿಂದ ಹೊರಬಂದು, ಹುಲ್ಲುಗಾವಲಿನಲ್ಲಿ ನಿಂತಿದ್ದೆವು. ಎಡಗಡೆಗೆ ದೊಡ್ಡ ಕಣಿವೆ ಇದ್ದರೆ, ಬಲಗಡೆಗೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಭೀಮಘಡ ಕಾಣುತ್ತಿತ್ತು. ಆದರೆ, ರಸ್ತೆ ಕಡಿದಾಗಿಲ್ಲ ಎನ್ನುವುದು ಗೊತ್ತಾಯಿತು. ಹೈರಾಣಾಗಿದ್ದ ನಮ್ಮೆಲ್ಲರಿಗೆ ಉಸಿರು ಬಂದಂತಾಯಿತು.

ಕಣಿವೆಯಲ್ಲಿ ನೋಡಿದಾಗ, ಇದು ಪಶ್ಚಿಮ ಘಟ್ಟದ ಸಹ್ಯಾದ್ರಿ ಪರ್ವತ ಶ್ರೇಣಿಯು, ರತ್ನಗಿರಿ ಪರ್ವತ ಶ್ರೇಣಿಯನ್ನು ಮಿಲನವಾಗುವ ಸ್ಥಳ ಎಂದು ಅನಿಸಿತು. ಹಾಗಾಗಿ, ಇದು ನಾನು ನೋಡಿದ ಸಹ್ಯಾದ್ರಿ ಪರ್ವತ ಶ್ರೇಣಿಗಿಂತ ವಿಭಿನ್ನವಾದ ಮೇಲ್ಪದರವನ್ನು ಹೊಂದಿತ್ತು. ಹುಲ್ಲುಗಾವಲು ಮತ್ತು ಅರಣ್ಯವಂತೂ ಅಧ್ಬುತ ಎನಿಸಲು ಶುರುವಾಯಿತು. ಮಾನವನ ಹಸ್ತಕ್ಷೇಪವಾಗಿಲ್ಲದ ಸಹಜಾರಣ್ಯ ನಮ್ಮ ಮುಂದೆ ಅನಾವರಣಗೊಂಡಿತ್ತು.

ಸ್ವಲ್ಪ ಮುಂದೆ ಹೋದಾಗ, ಭೀಮಘಡದ ಸುತ್ತಲೂ ಮೂರು ಅಡಿ ಎತ್ತರದ ಕಲ್ಲಿನ ತಡೆ ಗೋಡೆ ಕಟ್ಟಿದ್ದು ಕಂಡು ಬಂತು. ಭೀಮಘಡ ಶಿವಾಜಿಯ ಕೋಟೆಗಳಲ್ಲೊಂದು. ಸ್ವಲ್ಪ ಸರಿಯಾಗಿ ನೋಡಿದಾಗ ಗೊತ್ತಾಯಿತು…. ಭೀಮಘಡ, ಯಾಣದಂತೆ ಇರುವ ಒಂದು ದೊಡ್ಡ ಕಲ್ಲಿನ ರಚನೆ. ಅದರ ತುದಿಯಲ್ಲಿ, ಕೋಟೆಯಂತೆ ಕಟ್ಟಿರುವ ಗೋಡೆಗಳು ಕಾಣುತ್ತಿದ್ದವು. ಅಂದರೆ, ಇಲ್ಲಿಯವರೆಗೆ ಬಂದ ಮೇಲೂ, ಆ ಕಲ್ಲನ್ನು ಹತ್ತದೆ ಕೋಟೆ ತಲುಪಲು ಸಾಧ್ಯವಿಲ್ಲ.

ನಾವು ಕಲ್ಲಿನ ಹತ್ತಿರ ಬರುವಾಗಲೇ ಒಂದು ದೊಡ್ಡ ಗುಹೆ ಕಂಡಿತು. ಆ ಗುಹೆ ಪ್ರವೇಶಿಸುತ್ತಿದ್ದಂತೆ ನಾನು ಮೊದಲು ಗಮನಿಸಿದ್ದು ಬಾರಾಪೀಡ್ ನಲ್ಲಿ ನಾನು ಎರಡು ವರ್ಷದ ಹಿಂದೆ ನೋಡಿದ ಪ್ರತಿದೀಪಕ ಪಾಚಿ. ಗುಹೆಯ ಮೂಲೆಯಲ್ಲಿ ಒಂದು ಪ್ರಾಕೃತಿಕವಾಗಿ ನಿರ್ಮಾಣಗೊಂಡ ಶಿವಲಿಂಗ ಇತ್ತು. ಅದರ ಮೇಲೆ ಸದಾ ನೀರು ತೊಟ್ಟಿಕ್ಕುತ್ತಿರುತ್ತದೆ. ಆ ಗುಹೆಯ ಒಂದು ಮೂಲೆಯಲ್ಲಿ ಕೆಲವು ದೊಡ್ಡ ಪಾತ್ರೆಗಳೂ, ಮತ್ತು ಮೂರು ದೊಡ್ಡ ಕಲ್ಲುಗಳನ್ನಿಟ್ಟು ನಿರ್ಮಿಸಿದ ಒಲೆಯೂ ಇತ್ತು.

`ಇದೇನು ಇಲ್ಲಿ ಪಾತ್ರೆಗಳು?’ ಎಂದು ಕೇಳಿದೆ.

`ಪ್ರತೀ ಶಿವರಾತ್ರಿಗೆ ಇಲ್ಲಿ ಹತ್ತಿರದ ಹಳ್ಳಿಯಿಂದ ಜನಗಳು ಬಂದು ಪೂಜೆ ಮಾಡ್ತಾರೆ. ಪಾತ್ರೆ ತೆಗೆದುಕೊಂಡು ಬರೋದು ಕಷ್ಟ ಅಂತ, ಇಲ್ಲೇ ಪಾತ್ರೆಗಳನ್ನು ಬಿಟ್ಟು ಹೋಗಿರುತ್ತಾರೆ. ವರ್ಷಕ್ಕೊಂಡು ಸಲ ಮಾತ್ರ ಉಪಯೋಗವಾಗುವ ಪಾತ್ರೆಗಳು ಇವು,’ ಎಂದು ತಾನಾಜಿ ಹೇಳಿದ.

ಸ್ವಲ್ಪ ಹೊತ್ತು ಗುಹೆಯಲ್ಲಿದ್ದು ಹೊರಗೆ ಬಂದಾಗ ತಾನಾಜಿಯನ್ನು ಕೇಳಿದೆ: `ಈಗ ಮೇಲೆ ಕೋಟೆವರೆಗೆ ಹತ್ತುವುದು ಯಾವ ಕಡೆಯಿಂದ?’

`ಈಗ ಯಾರು ಹತ್ತೋದು?’ ಎಂದು ತಾನಾಜಿ ಕೇಳಿದ.

`ನಾವೇ… ಇಷ್ಟು ದೂರ ಬಂದು ಕೋಟೆ ನೋಡದೆ ಹೇಗೆ ಹೋಗೋದು?’ ಎಂದು ಕೇಳಿದೆ.

`ನೀವಾ? ಸರ್, ನಾನೇನೋ ಬೇಗ ಹತ್ತುತ್ತೀನಿ. ಅದೇ ಒಂದೂವರೆ ಘಂಟೆ ಆಗುತ್ತೆ. ಇಳಿಯೋದು ಏನೂ ಸುಲಭ ಅಲ್ಲ. ನನಗೇ ಮುಕ್ಕಾಲು ಘಂಟೆ ಬೇಕಾಗುತ್ತೆ. ಮತ್ತೆ ಇಲ್ಲಿಂದ ಕೆಳಗೆ ಹೋಗಲು ಒಂದು ಘಂಟೆಯಾದರೂ ಬೇಕು. ಇನ್ನು ನಿಮ್ಮನ್ನ ಕರೆದುಕೊಂಡು ಹತ್ತಿದರೆ, ನಾವು ಕೆಳಗೆ ಹೋಗುವ ಹೊತ್ತಿಗೆ ಮಧ್ಯರಾತ್ರಿಯಾಗುತ್ತೆ, ಅಷ್ಟೆ. ಈಗಲೇ ಮೂರು ಘಂಟೆ ದಾಟಿದೆ. ಮುಂದೆ ಯಾವಾಗಾದರೂ ನೋಡೋಣ,’ ಎಂದ.

`ಅಲ್ಲಪ್ಪಾ…. ಇಲ್ಲೇ ರಾತ್ರಿ ಬೆಂಕಿ ಹಾಕಿಕೊಂಡು ಉಳಿದು, ಬೆಳಗ್ಗೆ ಇಳಿದರಾಯ್ತಲ್ಲ… ಈಗ ಹತ್ತೋಣ,’ ಅಂತ ನಕ್ಕೆ.

`ಸರಿಯಾಗಿ ಹೇಳಿದ್ರಿ. ರಾತ್ರಿ ಕರಡಿ ಬರಲಿ, ಗೊತ್ತಾಗ್ತದೆ. ಅದೂ ಅಲ್ದೆ, ಜೀಪ್ ಡ್ರೈವರ್ ನ ಕೆಳಗೆ ಬಿಟ್ಟು ಬಂದಿದ್ದೀವಿ. ಅವನಿಗೆ ರಾತ್ರಿ ಹಾರ್ಟ್ ಅಟ್ಯಾಕ್ ಆಗುತ್ತೆ, ಇಲ್ಲದೇ ಹೋದರೆ, ನಮ್ಮನ್ನು ಬಿಟ್ಟು ವಾಪಾಸ್ ಹೋಗ್ತಾನೆ. ಆಮೇಲೆ, ಕೆಳಗಿಳಿದು ಮತ್ತೆ ಹದಿನಾಲ್ಕು ಕಿಲೋಮೀಟರ್ ನಡೆಯಬೇಕು, ಅಷ್ಟೆ,’ ಎಂದು ತಾನಾಜಿ ನಗೋಕೆ ಶುರುಮಾಡಿದ.

ನಾನೇನೂ ಹತ್ತಲೇಬೇಕು ಅನ್ನೋ ಹಠದಿಂದ ಹೇಳಿದ್ದಲ್ಲ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸಿದ್ದೆ ಅಷ್ಟೆ. ನಾನೂ ನಕ್ಕು ಸುಮ್ಮನಾದೆ. ಗುಹೆಯಿಂದ ಹೊರಗೆ ಬಂದು, ಅಲ್ಲೇ ಸ್ವಲ್ಪ ಸುತ್ತಾಡಿದೆವು. ತಾನಾಜಿ ಒಂದು ಕಡೆ ಕರೆದುಕೊಂಡು ಹೋಗಿ, ಸಣ್ಣದಾದ ಗಂಡಿಯೊಂದನ್ನು ತೋರಿಸಿ, `ಇದು, ಶಿವಾಜಿಯು ಕೋಟೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಕಳ್ಳ ಮಾರ್ಗ. ಶತ್ರುಗಳೇನಾದರೂ ಮೇಲಿನವರೆಗೆ ಬಂದರೆ, ಈ ದಾರಿಯಾಗಿ ಬಂದು ತಪ್ಪಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದ್ದರು,’ ಎಂದು ಹೇಳಿದ.

`ಅಲ್ಲಾ ಮಾರಾಯ… ಮೊದಲನೆಯದಾಗಿ ಇಲ್ಲಿಗೆ ಬಂದು ಕೋಟೆ ಬೇರೆ ಏಕೆ ಕಟ್ಟಿದ ಅಂತ ಅರ್ಥ ಆಗ್ತಿಲ್ಲ. ಅದರ ಮೇಲೆ, ಶತ್ರುಗಳು ಈ ಕಲ್ಲನ್ನು ಹತ್ತಿ, ಕೋಟೆಯನ್ನು ವಶ ಪಡಿಸಿಕೊಳ್ಳುತ್ತಾರೆ ಎನ್ನುವುದು ಅವನ ತಲೆಗೆ ಏಕೆ ಬಂತು ಅನ್ನೋದು ಇನ್ನೂ ಅರ್ಥವಾಗದ ವಿಷಯ,’ ಎಂದು ನಕ್ಕೆ.

ಯಾರಿಗೂ ವಾಪಾಸ್ ಹೊರಡುವ ಮನಸ್ಸಿರಲಿಲ್ಲ. ವಾಪಾಸ್ ಬರುವ ದಾರಿಯಲ್ಲಿ, ಹುಲ್ಲುಗಾವಲು ದಾಟುವಾಗ, ರಾಕಿ ಮತ್ತು ನಿರಂಜನ್ ಫೋಟೊ ತೆಗೆಸಿಕೊಳ್ಳುತ್ತಿದ್ದರೆ, ನಾನು ಮತ್ತು ರಾಖು ಮುಗುಳ್ನಗುತ್ತಾ ಮುಂದೆ ಸಾಗಿದೆವು. ಕೆಳಗೆ ಬರುವಾಗ ಸಮಯ ಐದು ಘಂಟೆ ದಾಟಿತ್ತು. ಸೂರ್ಯ ಮುಳುಗುವ ಹವಣಿಕೆಯಲ್ಲಿದ್ದ. ಎಲ್ಲರೂ ಕೊನೆಯ ಬಾರಿಗೆ ಎನ್ನುವಂತೆ, ಮಹಾದಾಯಿ ನದಿ ಬೆಟ್ಟಗಳ ಮಧ್ಯದಿಂತ ತಿರುವು ಪಡೆದು ಬರುವುದನ್ನು ನೋಡಲು ಬಂಡೆಗಳನ್ನು ಹತ್ತಿ ನಿಂತೆವು. ಮತ್ತೆ ಇಲ್ಲಿಗೆ ಬರುವ ಭರವಸೆ ಇಲ್ಲದಿದ್ದರೂ, `ಮುಂದಿನ ಸಲ ಕೋಟೆ ಹತ್ತಲೇಬೇಕು,’ ಎಂದು ಮಾತನಾಡುತ್ತಾ ಜೀಪು ಹತ್ತಿದೆವು.

Related Articles

Leave a Reply

Your email address will not be published. Required fields are marked *

Back to top button