ವಿಂಗಡಿಸದ

ತುಂಗನಾಥ್ ಚಂದ್ರ ಶಿಲಾ ಶಿಖರ ಚಾರಣಕ್ಕೆ ಹೇಳಿ ಮಾಡಿಸಿದ ಜಾಗ: ಕುಡ್ಲದ ಹುಡುಗ ಶ್ರೀಕೃಷ್ಣ ಕುಳಾಯಿ ಬರೆದ ಹಿಮಾಲಯ ಕಥ

ಹುಟ್ಟಿದ್ದು ಮಂಗಳೂರಿನಲ್ಲಿ. ಸದ್ಯ ಕೆಲಸ ಮಾಡುತ್ತಿರುವುದು ಅಬುಧಾಬಿಯಲ್ಲಿ. ಸಾಹಿತ್ಯ, ಪ್ರವಾಸದಲ್ಲಿ ಪ್ರೀತಿ ಇಟ್ಟಿರುವ ಕುಡ್ಲದ ಹುಡುಗ ಶ್ರೀಕೃಷ್ಣ ಕುಳಾಯಿ ತಮ್ಮ ಪತ್ನಿ ಮತ್ತು ತಂದೆ ಜತೆಗೆ ಉತ್ತರಖಂಡ ರಾಜ್ಯದ ಪ್ರಸಿದ್ಧ ಚಾರಣಗಳಲ್ಲಿ ಒಂದಾದ ತುಂಗಾನಾಥ್ ಚಂದ್ರ ಶಿಲಾ ಚಾರಣ ಹೋಗಿ ಬಂದ ಸೊಗಸಾದ ಅನುಭವ ಬರೆದಿದ್ದಾರೆ. ಈ ಬರಹ ಓದಿದರೆ ತಣ್ಣನೆ ಹಿಮಗಾಳಿ ತಾಕಿ ಹೋದಂತೆ ಅನ್ನಿಸಿದರೂ ಅಚ್ಚರಿಯಿಲ್ಲ. ಹಿಮಾಲಯದ ದಾರಿ ಹಿಡಿಯಬೇಕು ಅನ್ನಿಸಿದರೆ ಅದಕ್ಕಿಂತ ದೊಡ್ಡ ಖುಷಿಯಿಲ್ಲ.       

ಬೆಟ್ಟ ಗುಡ್ಡ ಹಸುರು ಕಾಡು ಬಲು ಚಂದ. ಹಸಿರಿನ ಸಿರಿಯ ಗಿರಿ ಶಿಖರ ಹತ್ತಿ, ಸುಂದರ ಪ್ರಕೃತಿಯ ಸೊಬಗನ್ನು ಆಹ್ಲಾದಿಸಿ, ಆ ತಾಜಾತನದ ಉಸಿರು, ಮೊಗ್ಗು ಬೀರಿದ ಹೂವಿನ ಘಮ, ದೂರದಲ್ಲೆಲ್ಲೂ ಕಾಣುವ ಸೂರ್ಯಾಸ್ತ, ಪಕ್ಷಿಗಳ ಸವಿಗಾನ, ಗುಂಯ್ ಎನ್ನುವ ಸದ್ದು. ಒಟ್ಟಿನಲ್ಲಿ ಬೆಟ್ಟ ಹತ್ತಿ ಚಾರಣ ಬಲು ಚಂದ. 

ಅದರಲ್ಲೂ ನನಗೆ ಬಹಳ ಇಷ್ಟವಾದದ್ದು ತುಂಗಾನಾಥ್ ಚಂದ್ರ ಶಿಲಾ ಚಾರಣ. (tunganath chandra trek) ಉತ್ತರಖಂಡ ರಾಜ್ಯದ ಪ್ರಸಿದ್ಧ ಚಾರಣಗಳಲ್ಲಿ ಈ ಚಾರಣವೂ ಒಂದು. ಅಕ್ಟೋಬರ್ ತಿಂಗಳಲ್ಲಿ ಮಡದಿ, ಅಪ್ಪನೊಂದಿಗೆ ಹರಿದ್ವಾರ ರಿಷಿಕೇಶ್ ದಾಟಿ, ‘ಸಾರಿ’ ಎನ್ನುವ ಹಳ್ಳಿ ಸೇರಿದಾಗ ರಾತ್ರಿಯಾಗಿತ್ತು. 

ಮರುದಿನ ಈ ಪುಟ್ಟ ಹಳ್ಳಿಯಿಂದ 5 ದಿನದ ಚಾರಣ. ಮೊದಲ ದಿನ ಕ್ಯಾಂಪ್ ಮಾಡಿ ಉಳಿದುಕೊಂಡದ್ದು ಪಾಂಡವರ ಯಕ್ಷ ಪ್ರಶ್ನೆ ಆದ ‘ಡೆರಿಯೋ ತಾಲ್’ (deoria tal) ಎನ್ನುವ ಪುಟ್ಟ ಸರೋವರದ ಸನಿಹ. ಸರೋವರದಲ್ಲಿ ದೂರದ ಹಿಮ ಪರ್ವತಗಳ ಪ್ರತಿಬಿಂಬ. 

ಮರು ದಿನ ‘ರೋಹಿಣಿ ಭಗ್ಯಲ್’(rohini bugyal) ಎನ್ನುವ ಹಿಮಾಲಯದ ಕಾಡೊಳಗೆ ಪಯಣ ಸಾಗಿತು. ಗುಂಯ್ ಗುಡುವ ಸದ್ದಿನೊಂದಿಗೆ ಕಾಡಲ್ಲಿ, ಬೆಳೆದು ನಿಂತ ದಟ್ಟವಾದ ಮರಗಳ ನಡುವೆ, ಪುಟ್ಟ ತಂಡದೊಂದಿಗೆ ಹೆಜ್ಜೆಯ ಮೇಲೆ ಹೆಜ್ಜೆ. ಹಕ್ಕಿಗಳ ಮಂಜುಳ ಗಾನ. ಮೂರನೆಯ ದಿನ, ದಾರಿಯಲ್ಲಿ ಸಿಕ್ಕಿದ ಝರಿಯಲ್ಲಿ ಮಿಂದು ಟೆಂಟ್ ಹಾಕಿದಾಗ ಬಂತು ಆಲಿ ಕಲ್ಲಿನ ಜಡಿ ಮಳೆ. ಸುತ್ತ ಹಿಮದಲ್ಲಿ ಮಿಂದೆದ್ದ ಬೆಳ್ಳಿ ಲೋಕದ ಅನಾವರಣ. ಚಳಿಗೆ ಬಿಸಿ ಬಿಸಿ ಚಹಾ. ರಾತ್ರಿ ಮಿಣುಕು ದೀಪದಲ್ಲಿ ನಮ್ಮೆಲ್ಲರ ಮಾತು– ಆಟ.

ನಾಲ್ಕನೆಯ ದಿನ ಮುಂಜಾನೆಯ ಕತ್ತಲಲ್ಲಿ ಟಾರ್ಚ್ ಹಿಡಿದು ತುಂಗನಾಥನ(tungnath temple) ಸನ್ನಿಧಿಯತ್ತ ನಡೆದೆವು. ಭಾರತದ ಅತೀ ಎತ್ತರದ  ಶಿವ ದೇವಸ್ಥಾನವಾದ, ಪಂಚ ಕೇದಾರ ಕ್ಷೇತ್ರದಲ್ಲಿ ಒಂದಾದ ತುಂಗನಾಥ ಸ್ವಾಮಿಯ ದರ್ಶನ ಆಯಿತು. ಅದನ್ನು ದಾಟಿ ಎರಡು ಕಿಲೋಮೀಟರ್ ಹತ್ತಿದರೆ ಚಂದ್ರಶಿಲೆ ಪರ್ವತದ ತುತ್ತ ತುದಿ. ಸುತ್ತಲೂ ಹಿಮ ಪರ್ವತಗಳ ಚುಂಬಕ ನೋಟ. ಮಧುರ ಮಂದಾರ ಸಾರ್ಥಕ ಭಾವ. ಆಗ ತಾನೇ ಉದಯಿಸಿದ ನೇಸರನ ಕಿರಣಗಳ ಕಣ್ಣಾಮುಚ್ಚಾಲೆ. 

ಇಳಿದು ಬಂದಾಗ ಸಿಗುವ ಚೋಪ್ತ ಎನ್ನುವ ಊರಿನ ಸುಂದರ ಹಸಿರಿನ ಹುಲ್ಲುಗಾವಲು. ಒಟ್ಟಿನಲ್ಲಿ ಪ್ರಕೃತಿ ಪ್ರಿಯರಿಗೆ, ಚಾರಣಕ್ಕೆ ಹೇಳಿ ಮಾಡಿಸಿದ ಜಾಗ. ಹಿಮಾಲಯದ ಲೋಕದ, ಚಂದನೆಯ ಗಿರಿ ಶಿಖರಗಳ ಜಗತ್ತಿನ ಸುಂದರ ಪುಟ್ಟ ಪರಿಚಯವನ್ನು ಇಲ್ಲಿನ ಚಾರಣದ ಹಾದಿ ಮಾಡಿಸುತ್ತದೆ. ಹಿಮಾಲಯಕ್ಕೆ ಹಿಮಾಲಯವೇ(himalaya) ಸಾಟಿ ಅಂತ ಈ ಚಾರಣಕ್ಕೆ ಹೋಗಿ ಬಂದ ನಂತರ ಅನ್ನಿಸುತ್ತದೆ.  

Related Articles

Leave a Reply

Your email address will not be published. Required fields are marked *

Back to top button