ಆಹಾರ ವಿಹಾರಇವರ ದಾರಿಯೇ ಡಿಫರೆಂಟುನಮ್ ತಿಂಡಿ ರೆಸಿಪಿನಮ್ಮೂರ ತಿಂಡಿವಿಂಗಡಿಸದಸಂಸ್ಕೃತಿ, ಪರಂಪರೆ

ಭಟ್ ಎನ್ ಭಟ್ ಹೆಸರಿನಲ್ಲಿ ದಕ್ಷಿಣ ಕನ್ನಡದ ಆಹಾರವನ್ನು ವಿಶ್ವಮಟ್ಟದಲ್ಲಿ ಜನಪ್ರಿಯಗೊಳಿಸಿದ ಸುದರ್ಶನ ಭಟ್

ಕಾನೂನು ಕಲಿಯುವ ಹುಡುಗನೊಬ್ಬ ಪಕ್ಕಾ ಮಂಗಳೂರು ಶೈಲಿಯ ಕನ್ನಡದಲ್ಲಿ(dakshina kannada recipe) ಮಾತನಾಡುತ್ತಾ ನಳನಿಗೆ ಸರಿಸಾಟಿಯಾಗುವಂತೆ ಬಾಯಲ್ಲಿ ನೀರೂರಿಸುವ ಅಡುಗೆ ಮಾಡಿಕೊಂಡು ಮನೆಮಾತಾಗಿರುವ ಅಪರೂಪದ ಕಥೆಯೊಂದು ಇದು. ಈ ಆಧುನಿಕ ನಳನ ಹೆಸರು ಸುದರ್ಶನ ಭಟ್ ಬೆದ್ರಾಡಿ. ಭಟ್ ಎನ್ ಭಟ್(Bhat n bhat) ಎಂಬ ಹೆಸರು ಕೇಳಿದ ತಕ್ಷಣ ಕಿವಿ ನಿಮಿರಿಸುವವರು ಈ ಬರಹ ಓದಿ.

  • ಸುಜಯ್. ಪಿ

ಒಂದರ್ಥದಲ್ಲಿ ಮನುಷ್ಯ ದುಡಿಯುವುದೇ ಸುಖವಾಗಿ ಊಟ ಮಾಡಿ ಖುಷಿಯಿಂದ ಬದುಕಲು‌. ತಿನ್ನುವುದಕ್ಕೆಂದೇ ಬದುಕುವುದು ಎಂದಲ್ಲ, ಆದರೆ ಬದುಕುವುದಕ್ಕೆ ತಿನ್ನಲೇಬೇಕು. ಮತ್ತು ಈಗ ತಿನ್ನುವುದೂ ಒಂದು ಕಲೆಯೆಂದೇ ಅನಿಸಿಕೊಂಡಿದೆ.

ತಿನ್ನುವುದು ಕಲೆಯೆಂದ ಮೇಲೆ ಆ ತಿನಿಸನ್ನು ತಯಾರಿಸುವುದು ಇನ್ನೂ ಎತ್ತರದ ಕಲೆಯಾಗಿರಬೇಕು. ಈ ತಿನಿಸು, ಖಾದ್ಯಗಳು ಎಂದಿಗೂ ಜನಪ್ರಿಯತೆ ಕಳೆದುಕೊಳ್ಳದ ವರ್ಗಕ್ಕೆ ಸೇರುತ್ತವೆ. ಅಂತಹ ರುಚಿಕರವಾದ ತಿನಿಸುಗಳನ್ನು ತಯಾರಿಸುವ ವಿಧಾನವನ್ನು ತುಂಬಾ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಹೇಳಿಕೊಡುವುದು ಮತ್ತೊಂದು ಎತ್ತರದ ಕೆಲಸ.

ಕಾನೂನು ಕಲಿಯುವ ಹುಡುಗನೊಬ್ಬ ಪಕ್ಕಾ ಮಂಗಳೂರು(Mangalore) ಶೈಲಿಯ ಕನ್ನಡದಲ್ಲಿ ಮಾತನಾಡುತ್ತಾ ನಳನಿಗೆ ಸರಿಸಾಟಿಯಾಗುವಂತೆ ಬಾಯಲ್ಲಿ ನೀರೂರಿಸುವ ಅಡುಗೆ ಮಾಡಿಕೊಂಡು ಮನೆಮಾತಾಗಿರುವ ಅಪರೂಪದ ಕಥೆಯೊಂದು ಇಲ್ಲಿದೆ.

ನಿಮಗೆ ಗೊತ್ತಾಗಿರಬಹುದು, ಇದು ಕಾಸರಗೋಡಿನ ಸೀತಂಗೋಳಿಯ ಸುದರ್ಶನ್ ಭಟ್ ಮತ್ತು ಮನೋಹರ್ ಭಟ್ ಎಂಬ ಅಣ್ಣತಮ್ಮಂದಿರು ಕಟ್ಟಿದ “ಭಟ್ ಆಂಡ್ ಭಟ್”(Bhat n bhat) ಎಂಬ ವಿದೇಶದಲ್ಲಿಯೂ ಅಭಿಮಾನಿಗಳನ್ನು ಹೊಂದಿರುವ ಯೂಟ್ಯೂಬ್ ಚಾನೆಲ್ ಒಂದರ ಕಥೆ.

ಯೂಟ್ಯೂಬ್ ಓಪನ್‌ ಮಾಡಿ ಫುಡ್ ಪ್ರಿಪೇರಿಂಗ್ ವಿಡಿಯೋಗಳಿಗಾಗಿ ಹುಡುಕಿದರೆ, ಆಕಾಶದಲ್ಲಿನ ನಕ್ಷತ್ರಗಳಂತೆ ಲೆಕ್ಕವಿಲ್ಲದಷ್ಟು ಚಾನೆಲ್‌ಗಳು ಕಣ್ಣೆದುರು ಬರಬಹುದು. ಅಂತಹ ನಕ್ಷತ್ರಗಳ ಮಧ್ಯೆ ಕೆಲವೊಂದು ಮಾತ್ರ ನಮ್ಮ ಕಣ್ಣು ಸೆಳೆದುಬಿಡುತ್ತದೆ ಅಲ್ವ? ಭಟ್ ಆಂಡ್ ಭಟ್ ಕೂಡಾ ಅಂತದ್ದೇ ಒಂದು ಕಣ್ಮನ ಸಳೆಯುವ ಯೂಟ್ಯೂಬ್ ಚಾನೆಲ್. ಒಂದು ವರ್ಷದಲ್ಲಿ ನಾಲ್ಕು ಲಕ್ಷ ಚಂದಾದಾರರನ್ನು ಈ ಚಾನೆಲ್ ಪಡೆದುಕೊಂಡಿದೆ ಎಂದರೆ ಅದರ ಸೆಳೆತವನ್ನು ಅಂದಾಜಿಸಿ.

ಈ ಅಣ್ಣತಮ್ಮಂದಿರಲ್ಲಿ ನನ್ನ ಜೊತೆ ಮಾತನಾಡಿದ್ದು ವೀಡಿಯೋದಲ್ಲಿ ನಮಗೆ ಕಾಣುವ ಸುದರ್ಶನ್ ಭಟ್ಟರು.  ಮಾತಿಗೆಳೆಯಲು ನಾನು ಕರೆ ಮಾಡಿದಾಗ ಭಟ್ರು ಹಲಸಿನ ಹಣ್ಣಿನ ದೋಸೆಯ ಮಾಡುವ ತಯಾರಿಯಲ್ಲಿದ್ದರು .

ಸುದರ್ಶನರ ಮಾತಿನ ಧಾಟಿಯಲ್ಲೇ ಹೇಳುವುದಾದರೆ; ‘ಬನ್ನಿ ಹಾಗಾದ್ರೆ, ನಾವು ಸೀದ ವಿಷಯಕ್ಕೆ ಹೋಗುವ’.

ಹಿಂದಿನ ಕಾಲದ ಅಡುಗೆಗಳು ಮಾತ್ರವಲ್ಲದೆ ಇಂದಿನ ಪೀಳಿಗೆ ತಿಳಿಯದ ಹಲವಾರು ಸಾಂಪ್ರದಾಯಿಕ ವಿಚಾರಗಳನ್ನು ಅತ್ಯಂತ ವೇಗವಾಗಿ ತಲುಪುವ ಮಾಧ್ಯಮವಾದ ವೀಡಿಯೋಗಳ ಮೂಲಕ ತಿಳಿಸುವ ಚಂದದ ಉದ್ದೇಶ ಹೊಂದಿರುವ ಈ ಭಟ್ ಆಂಡ್ ಭಟ್ ಚಾನೆಲ್ ಪ್ರಾರಂಭವಾಗಿದ್ದು ಕಳೆದ ವರ್ಷ (೨೦೨೦) ಎಪ್ರಿಲ್ ಹದಿನೆಂಟರಂದು.

ಅಣ್ಣ ಸುದರ್ಶನ್ ಭಟ್ ಚಿಕ್ಕಂದಿನಿಂದಲೇ ಅಡುಗೆ ಕೆಲಸಗಳಿಗೆ ಸಹಾಯಕರಾಗಿ ಹೋಗುತ್ತಿದ್ದರಿಂದ ಸಹಜವಾಗಿ ಅಡುಗೆಯ ಮೇಲೆ ಪ್ರೀತಿ ಇತ್ತು. ತಮ್ಮ ಮನೋಹರ್ ಭಟ್ ಫೋಟೋಗ್ರಫಿ, ಎಡಿಟಿಂಗ್ ಇದರಲ್ಲಿ ಆಸಕ್ತಿ ಇದ್ದವರು. ಹಾಗಾಗಿ ಕಳೆದ ವರ್ಷದ ಲಾಕ್ಡೌನ್ ನಲ್ಲಿ ಸಾಧಾರಣವಾಗಿ ಬಾಳೆಕಾಯಿ ಚಿಪ್ಸ್ ಮಾಡುವ ವೀಡಿಯೋದಿಂದ ಶುರುವಾದ ಇವರ ಯೂಟ್ಯೂಬ್‌ ಚಾನೆಲ್ ಜರ್ನಿ, ಈ ವರ್ಷದ ಲಾಕ್ಡೌನ್ ಸಮಯದಲ್ಲಿ ನಾಲ್ಕು ಲಕ್ಷಕ್ಕೂ ಮಿಗಿಲಾದ ಚಂದಾದಾರರನ್ನು ಪಡೆದುಕೊಂಡು ಜನಪ್ರಿಯವಾಗಿದೆ.

Bhat and Bhat YouTube Channel Food Channel Coastal Food Culture

ಇವರ ವೀಡಿಯೋಗಳು ಬೇರೆ ಫುಡ್ ಪ್ರಿಪೇರಿಂಗ್ ವೀಡಿಯೊಗಳಿಗಿಂತ ಭಿನ್ನ ಅನಿಸುವುದಕ್ಕೆ ಹಲವಾರು ಕಾರಣಗಳಿವೆ.

ಸುದರ್ಶನ್ ಭಟ್ಟರು ವೀಡಿಯೋದಲ್ಲಿ ಮಾತನಾಡುವುದು ಟಿಪಿಕಲ್ ಮಂಗಳೂರು ಕನ್ನಡ ಶೈಲಿಯಲ್ಲಿ. ಮತ್ತು ಭಟ್ರ ಬ್ರಾಹ್ಮಣ ತುಳುವಿನಲ್ಲಿರುವ ಕೆಲವು ಪದಗಳು ಸಾಧಾರಣ ತುಳುವರಿಗೂ ವಿಶೇಷ ಶಬ್ದಗಳೆನಿಸುತ್ತವೆ.

ನೀವುಇದನ್ನುಇಷ್ಟಪಡಬಹುದು: ನೀವು ಸವಿಲೇಯಬೇಕಾದ ದಕ್ಷಿಣಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಅಡುಗೆಗಳು: ಐದು ರುಚಿಕಟ್ಟು ರೆಸಿಪಿ ಹೇಳಿದ ಶ್ಯಾಮಲಾ ಕುಂಟಿನಿ

ಇನ್ನು ಇವರ ವೀಡಿಯೋದಲ್ಲಿ ತೋರಿಸುವ ತಿಂಡಿಗಳೋ ಕೇಳಲೇಬೇಡಿ, ಹೆಸರೂ ಕೂಡಾ ತಿಳಿಯದ ರುಚಿರುಚಿಯಾದ ತಿನಿಸುಗಳನ್ನು ಇನ್ನೇನು ನಾವೂ ಮಾಡಿ ತಿಂದೇಬಿಟ್ಟೆವು ಎನಿಸುವಷ್ಟು ಸರಳವಾಗಿ ವಿವರಿಸಿಬಿಡುತ್ತಾರೆ. ಸರಳ ಸುಂದರ ನಿರೂಪಣೆ ಮತ್ತು ಅಷ್ಟೇ ರುಚಿಕರ ತಿನಿಸುಗಳು ಇವರ ವೀಡಿಯೋಗಳ ಇನ್ನೊಂದು ವಿಶೇಷ.

ಇನ್ನು ಇವರು ತಯಾರಿಸುವ ತಿನಿಸುಗಳೆಲ್ಲಾ ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾಡಲು ಸಾಧ್ಯ. ತಿನಿಸುಗಳನ್ನು ತಯಾರಿಸಲು ಉಪಯೋಗಿಸುವ ಸಾಂಪ್ರದಾಯಿಕ ಸಲಕರಣೆಗಳು ಇವರ ವೀಡಿಯೋಗಳ ಇನ್ನೊಂದು ಚಂದ‌.

Bhat and Bhat YouTube Channel Food Channel Coastal Food Culture

ಇವರ ಪ್ರತಿಯೊಂದು ಕೆಲಸದಲ್ಲೂ ಮನೆಯವರೇ ಇರುತ್ತಾರೆ. ತಾಂತ್ರಿಕ ಕೆಲಸವೂ ಕೂಡಾ ಹಾಗೆಯೇ, ವೀಡಿಯೋ ಮತ್ತು ಎಡಿಟಿಂಗ್ ಜವಾಬ್ದಾರಿ ತಮ್ಮ ಮನೋಹರ್. ವೀಡಿಯೋಗಳಿಗೆ ಸಬ್ಟೈಟಲ್ ಕೊಡುವವರು ಅಕ್ಕ ಪ್ರಸನ್ನ ಮಹಾಬಲೇಶ್ವರ ಭಟ್.

ಇನ್ನು ವೀಡಿಯೋಗೆ ಬೇಕಾಗುವ ಕಂಟೆಂಟ್ಗಳನ್ನು  ಮನೆಯ ಹಿರಿಯರ ಅಥವಾ ಪರಿಚಯದ ಅಡುಗೆಯವರ ಬಳಿ ಚರ್ಚಿಸಿ ಕಾರ್ಯರೂಪಕ್ಕೆ ತರುತ್ತಾರೆ.

ಇದುವರೆಗೆ ನೂರಿಪ್ಪತ್ತಕ್ಕೂ ಹೆಚ್ಚಿನ ವೀಡಿಯೋಗಳು ಇವರ ಚಾನೆಲಿನಲ್ಲಿ ಪ್ರಕಟವಾಗಿದೆ. ವೀಡಿಯೋ ಮಾಡುವಾಗ ನಡೆಯುವ ಹಲವಾರು ಎಡವಟ್ಟುಗಳನ್ನು ಖುಷಿಯಿಂದ ಅನುಭವಿಸುವ ಇವರು, ಜೇನುಗೂಡಿನಿಂದ ಜೇನು ತೆಗೆಯುವ ವೀಡಿಯೋವೊಂದರ ತಯಾರಿಕೆಯ ಸಂದರ್ಭ ಜೇನುಹುಳುವಿನಿಂದ ಸಿಕ್ಕಾಪಟ್ಟೆ ಕಚ್ಚಿಸಿಕೊಂಡದ್ದೂ ಇದೆಯಂತೆ.

Bhat and Bhat YouTube Channel Food Channel Coastal Food Culture

ಹಳೆಯ ಆಹಾರ ಕ್ರಮದಲ್ಲಿ ಅತೀವ ಆಸಕ್ತಿ ಹೊಂದಿರುವ ಈ ಸಹೋದರರು ಆಹಾರ ತಯಾರಿಕೆಯ ಸಮಯದಲ್ಲಿ ಎಸೆಯುವ ವಸ್ತುಗಳು ಅತ್ಯಂತ ಕಡಿಮೆ ಇರುವಂತೆ ನೋಡಿಕೊಳ್ಳುತ್ತಾರೆ. ತಿನ್ನುವ ಆಹಾರ ಎಂದಿಗೂ ಆರೋಗ್ಯಕ್ಕೆ ಪೂರಕವಾಗಿರಬೇಕು ಅನ್ನುವುದು ಇವರ ಮುಖ್ಯ ಕಾಳಜಿ.

ವೀಡಿಯೋಗಳಿಗೆ ಸಿಗುವ ಪ್ರತಿಕ್ರಿಯೆಗಳಲ್ಲಿ, ಹಳೆಯ ತಿನಿಸುಗಳನ್ನು ನೆನಪಿಸಿಕೊಂಡು ಹಿರಿಯರು ಪ್ರಶಂಸಿದಾಗ ಸಿಗುವ ಖುಷಿ ಜಾಸ್ತಿ ಅನ್ನುವುದು ಭಟ್ರ ಮಾತು.

ಇನ್ನು ಹೊಸ ಯೂಟ್ಯೂಬರ್ಗಳಿಗೆ ಕೂಡಾ ಇವರು ಮಾದರಿ. ಹೆಚ್ಚು ಜನರನ್ನು ತಲುಪಲು ಉತ್ತಮ ಕಂಟೆಂಟ್ಗಳು ತುಂಬಾನೇ ಸಹಕಾರಿ ಅನ್ನುವುದು ಸುದರ್ಶನರ ಸಲಹೆ.

ತಾವು ಮಾಡಿದ ತಿಸುಗಳಲ್ಲೇ ಅಮೃತಫಲ ಅನ್ನುವ ಸಿಹಿತಿಂಡಿ ಭಟ್ರ ಫೇವರೀಟ್ ಅಂತೆ. ಅಡುಗೆ ಇಷ್ಟಪಡುವವರಿಗೆ ಏನಾದರು ಟಿಪ್ಸ್ ಕೊಡಿ ಅಂದರೆ ಅಡುಗೆಯನ್ನು ಪ್ರೀತಿಮಾಡಿ ಅನ್ನುತ್ತಾರೆ. ಅದರ ಜೊತೆ ಸಮಯದ ವ್ಯವಸ್ಥಿತ ಉಪಯೋಗ ಕೂಡಾ ಅಡುಗೆಯಲ್ಲಿ ಅಗತ್ಯ ಅನ್ನುತ್ತಾರೆ.

ಅಡುಗೆ ಮಾತ್ರವಲ್ಲ, ನಮ್ಮ ಹಿರಿಯರು ಬಳಸಿದ, ನಾವು ಮರೆತುಹೋದ ಅದೆಷ್ಟೋ ಸಾಂಪ್ರದಾಯಿಕ ವಿಚಾರಗಳಿವೆ. ಅದನ್ನೆಲ್ಲಾ ಇಂದಿನ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಅನ್ನುವ ಚಂದದ ಉದ್ದೇಶ ಹೊಂದಿರುವ ಈ ಸಹೋದರರು, ಭಟ್ ಆಂಡ್ ಭಟ್ ಚಾನೆಲನ್ನು ಯೂಟ್ಯೂಬಿಗೆ ಮಾತ್ರ ವ್ಯಾಪ್ತಿಗೊಳಿಸದೆ, ಇನ್ನಷ್ಟು ವಿಸ್ತಾರಗೊಳಿಸುವ ಯೋಜನೆ ಕೂಡಾ ಇಟ್ಟುಕೊಂಡಿದ್ದಾರೆ.

ಅಂದಹಾಗೆ ಸದ್ಯ ಅಣ್ಣ ತಮ್ಮಂದಿರಿಬ್ಬರೂ ಕೂಡಾ ತಮ್ಮ ವಕೀಲಿ ವೃತ್ತಿಯ ಮೊದಲ ವರ್ಷದಲ್ಲಿದ್ದಾರೆ. ಇವರಿಗೆ ಈ ಯೂಟ್ಯೂಬ್ ಚಾನೆಲಿನಿಂದ ಆದಾಯವೂ ಇದೆ.

ಲುಂಗಿ ಉಟ್ಟುಕೊಂಡು, ತಲೆಗೊಂದು ಮುಂಡಾಸು ಸುತ್ತಿ ನಗುತ್ತಾ ಮಾತನಾಡುವ, ದಿನಕಳೆದಂತೆ ಹೆಚ್ಚು ಅಭಿಮಾನಿಗಳನ್ನು ಪಡೆಯುತ್ತಾ ಸಾಗುತ್ತಿರುವ ಭಟ್ರ ಚಾನೆಲ್ ಇನ್ನಷ್ಟು ಪ್ರಸಿದ್ಧವಾಗಲಿ ಎಂಬುದು ನನ್ನ ಹಾರೈಕೆ.

Bhat and Bhat YouTube Channel Food Channel Coastal Food Culture

ಜನರು ಬಳಸುವ ಆಹಾರದ ಅಭಿರುಚಿ ಎನ್ನುವುದು ಭೌಗೋಳಿಕ ನಕ್ಷೆ ಬದಲಾದಂತೆ ತಾನೂ ಬದಲಾಗುತ್ತಾ ಹೋಗುತ್ತದೆ. ಪ್ರತಿ ಮೈಲಿಗಲ್ಲಿನ ಜೊತೆಗೆ ವಿಶೇಷವಾಗಿ, ವಿಶಿಷ್ಟವಾಗಿ ಬದಲಾಗುವ ಆಹಾರ ತಿನಿಸುಗಳು ಪ್ರತಿಯೊಬ್ಬನನ್ನೂ ಆಶ್ಚರ್ಯಪಡಿಸುವ ವಿಷಯಗಳೇ.

ಊರೊಂದನ್ನು ಅರಿತುಕೊಳ್ಳಲು ಅಲ್ಲಿನ ಆಹಾರ ಅತಿಮುಖ್ಯ. ಅಪರಿಚಿತ ಊರಿಗೆ ಬಂದ ಪ್ರವಾಸಿಗನೊಬ್ಬ ಆ ಊರಿನ ಸ್ಥಳೀಯ ಆಹಾರವನ್ನು ಅನುಭವಿಸಿದಾಗ ಮಾತ್ರ ಅವನ ಪ್ರವಾಸ ಪೂರ್ಣವಾಗುತ್ತದೆ ಎಂಬ ಮಾತೂ ಇದೆ.

ನಾನು ಸುದರ್ಶನ ಭಟ್ಟರಲ್ಲಿ ಕೇಳಿದ ಕೊನೆಯ ಪ್ರಶ್ನೆ, “ಭಟ್ರೆ, ನಿಮ್ಮ ಈ ಅಡುಗೆಯ ಕಲೆಗೆ ಅದೆಷ್ಟು ಹುಡುಗಿಯರು ಬಿದ್ದಿದ್ದಾರೆ?” ಎಂದು. ಸುದರ್ಶನರ ಜೋರಾದ ನಗುವೊಂದು ಮಾತ್ರ ಇದಕ್ಕೆ ಉತ್ತರವಾಗಿತ್ತು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

4 Comments

  1. ನೀವು ಬ್ರಾಹ್ಮಣ ತುಳು ಎಂದು.ಆದರೆ ಅವರ ಮನೆ ಮಾತು ಹವ್ಯಕ ಬಾಷೆ

  2. ಅವರು ಕಾಸರಗೋಡಿನವರು.ಇನ್ನು ಅವರ ಮನೆ ಭಾಷೆ ಹವ್ಯಕ ಕನ್ನಡ.ತುಳು ಅಲ್ಲ.

Leave a Reply

Your email address will not be published. Required fields are marked *

Back to top button