ಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ಜಾಬಾಲಿ ಮಹರ್ಷಿಯ ತಪಸ್ಸಿನ ತಾಣ ನೆಲ್ಲಿತೀರ್ಥ ಗುಹಾಲಯ

ಪ್ರತಿಯೊಂದು ದೇವಾಲಯ, ಗುಹೆಗಳು ಒಂದಲ್ಲಾ ಒಂದು ಪೌರಾಣಿಕ ಹಿನ್ನಲೆಯನ್ನು ಹೊಂದಿರುತ್ತವೆ. ಅಂಥದ್ದೇ ಒಂದು ಪೌರಾಣಿಕ ಹಿನ್ನಲೆಯನ್ನು ಹೊಂದಿರುವ ಸ್ಥಳ ಮಂಗಳೂರಿನ ನೆಲ್ಲಿತೀರ್ಥ. ಇದು ಜಾಬಾಲಿ ಮಹರ್ಷಿಯ ತಪಸ್ಸಿನ ತಾಣವೆಂದೇ ಪ್ರತೀತಿ ಹೊಂದಿದೆ. ಮತ್ತು ಇದರ ಕುರಿತಾದ ಸುಂದರ ಪೌರಾಣಿಕ ಕಥೆಯೂ ಇದೆ.

  • ಚೈತ್ರಾರಾವ್. ಉಡುಪಿ

ಬೃಹತ್ ಮೊಸಳೆಯೊಂದು ಬಾಯ್ತೆರೆದು ಮಲಗಿದಂತೆ ಕಾಣುವ ದೇವಾಲಯ ಶ್ರೀ ಕ್ಷೇತ್ರ ನೆಲ್ಲಿತೀರ್ಥ ಸೋಮನಾಥೇಶ್ವರ ಗುಹಾಲಯ. ಇದು ಮಂಗಳೂರು ತಾಲೂಕಿನಲ್ಲಿರುವ ಗುಹಾಂತರ ದೇವಾಲಯವಾಗಿದೆ. ಇಲ್ಲಿ ಪರಮೇಶ್ವರನು ಲಿಂಗ ಸ್ವರೂಪಿಯಾಗಿ ನೆಲೆನಿಂತಿದ್ದಾನೆ. ಈ ಗುಹೆಯ ಒಳಗಿರುವ ಶಿವಲಿಂಗದ ಮೇಲ್ಭಾಗದಲ್ಲಿ ಕಲ್ಲುಗಳ ಸಂಧಿಯಿಂದ ನೆಲ್ಲಿಕಾಯಿ ಗಾತ್ರದಲ್ಲಿ ನಿರಂತರವಾಗಿ ನೀರು ತೊಟ್ಟಿಕ್ಕುತ್ತಿರುವುದರಿಂದ ಇದನ್ನು ಅಂತರ್ಗಂಗೆ ತೀರ್ಥವೆಂದು ಕರೆಯುತ್ತಾರೆ. ಹಾಗಾಗಿ ಈ ಕ್ಷೇತ್ರಕ್ಕೆ ನೆಲ್ಲಿತೀರ್ಥವೆಂಬ ಹೆಸರು ಬಂತು. 

Nelliteertha The cave temple Mangaluru Mythological story

ಗುಹಾಲಯದ ಇತಿಹಾಸ

ಲೋಕಕಲ್ಯಾಣಕ್ಕಾಗಿ ಜಾಬಾಲಿ ಮಹರ್ಷಿಗಳು ಭಾಗೀರಥಿಯ ತಟದಲ್ಲಿ ತಪಸ್ಸನ್ನು ಆಚರಿಸುವ ಸಂದರ್ಭದಲ್ಲಿ ನಾರದ ಮುನಿಗಳು ತಿಳಿಸಿದಂತೆ ಅರುಣಾಸುರ ಎಂಬ ರಾಕ್ಷಸ ಗಾಯತ್ರೀ ಮಂತ್ರದ ವರಬಲದಿಂದ ಪರಶುರಾಮ ಕ್ಷೇತ್ರದಲ್ಲಿ ಅನೇಕ ಅತ್ಯಾಚಾರಗಳು, ಕೊಲೆ ಸುಲಿಗೆಗಳನ್ನು ಮಾಡುತ್ತಿದ್ದ. ಈ ಸಮಯದಲ್ಲಿ ಪ್ರಭು ಪರಮೇಶ್ವರನನ್ನು ಮೆಚ್ಚಿಸಿ ಅವನ ಆಜ್ಞೆಯಂತೆ ಗಂಗೆಯೊಡನೆ ಪರಶುರಾಮ ಕ್ಷೇತ್ರದ ನಾಗವನದಲ್ಲಿರುವ ಸುಂದರವಾದ ಪ್ರಕೃತಿ ನಿರ್ಮಿತ ಗುಹೆಯಲ್ಲಿ ಆದಿಶಕ್ತಿಯನ್ನು ಒಲಿಸಿಕೊಳ್ಳಲು ತಪಸ್ಸನ್ನುಆಚರಿಸುತ್ತಾರೆ.

ಇವರ ತಪಸ್ಸಿಗೆ ಒಲಿದ ಆದಿಶಕ್ತಿಯು ಅವನನ್ನು ಹೀಗೆ ಸಂಹಾರ ಮಾಡಲು ಸಾಧ್ಯವಿಲ್ಲ. ಬೇರೆ ಒಂದು ಪರಿಸರವನ್ನು ನಿರ್ಮಿಸಿ ನಂದಿನಿಯ ಕಟಿ ಪ್ರದೇಶದಲ್ಲಿ ಬ್ರಾಹ್ಮರಿ ರೂಪದಿಂದ ಅವತರಿಸಿ ಆತನನ್ನು ಸಂಹಾರ ಮಾಡುತ್ತೇನೆ.

ಹಾಗೆ ಜಾಬಾಲಿ ಎಲ್ಲಿ ತಪಸ್ಸಿಗೆ ಕುಳಿತು ಧ್ಯಾನಿಸುತ್ತಾನೋ ಅಲ್ಲಿ ಪರಮೇಶ್ವರ ಲಿಂಗ ಸ್ವರೂಪಿಯಾಗಿ ಕಾಣಿಸಿಕೊಳ್ಳಲಿ, ಜಾಬಾಲಿ ಅನುದಿನವೂ ಸೇವೆಯನ್ನು ಮಾಡುತ್ತಾ ಲೋಕಕಲ್ಯಾಣಕ್ಕಾಗಿ ಶ್ರಮಿಸುತ್ತಿರಲಿ. ಗಂಗೆ ಪವಿತ್ರಳಾದ ನೀನು ಅಂತರಗಂಗೆ ಆಗಿ ಹರಿ ಎಂದು ಹೇಳಿ ಅಂತರ್ಧಾನಳಾಗುತ್ತಾಳೆ.

Nelliteertha The cave temple Mangaluru Mythological story

ಹಾಗೆ ಆದಿಶಕ್ತಿಯು ಬೃಹತ್ ಬಂಡೆಯೊಳಗಿಂದ ಬ್ರಾಹ್ಮರಿ ರೂಪದಲ್ಲಿ ಅವತರಿಸಿ ಅರುಣಾಸುರನ ಸಂಹಾರ ಮಾಡಿ ದುರ್ಗಾಪರಮೇಶ್ವರಿಯಾಗಿ ರಾರಾಜಿಸುತ್ತಾಳೆ. ಅದೇ  ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಾಲಯ. 

ಗುಹಾಲಯಕ್ಕೆ ತೆರಳುವ ಮುನ್ನ ಸ್ನಾನ ಕಡ್ಡಾಯ

ಮಹರ್ಷಿ ಜಾಬಾಲಿಯ ತಪಸ್ಸಿನ ತಾಣವಾದ ಈ ಗುಹೆಯನ್ನು ಪ್ರವೇಶಿಸುವ ಮೊದಲು ದೇವಾಲಯದ ಹೊರಭಾಗದಲ್ಲಿರುವ ‘ನಾಗಪ್ಪ ಕೊಳದಲ್ಲಿ’ ಸ್ನಾನ ಮಾಡಿ, ಒದ್ದೆ ಬಟ್ಟೆಯಲ್ಲಿ ಗುಹೆಯನ್ನು ಪ್ರವೇಶಿಸಬೇಕು. 

ನೀವುಇದನ್ನುಇಷ್ಟಪಡಬಹುದು: ಮುಂಡರಗಿಯಲ್ಲೊಂದು ಪುರಾತನ ದೇಗುಲ ಡಂಬಳ

Nelliteertha The cave temple Mangaluru Mythological story

ಭಕ್ತರು ಈ ಸರೋವರದಲ್ಲಿ ಸ್ನಾನ ಮಾಡಿ ಮೇಲೆ ಬಂದಾಗ ದೇವರ ಮೇಲೆ ಅಪಾರ ಪ್ರೀತಿ ಗೌರವ ಭಕ್ತಿಯ ಭಾವ ಮೂಡುತ್ತದೆ. ದೇವರ ಸ್ಮರಣೆ ಮಾಡುತ್ತಾ ಭಜನೆ, ಮಂತ್ರ ಪಠಣ ಮಾಡುತ್ತಾ ಭಕ್ತರು ತೆರಳುತ್ತಾರೆ. 

ಗುಹೆ ಹೇಗಿದೆ?

ಗುಹೆಯನ್ನು ಕೈ ದೀಪದೊಂದಿಗೆ 100 ಮೀಟರ್ ಗಳಷ್ಟು ಕುಳಿತು ಹಾಗು ತೆವಳಿಕೊಂಡು ಸಾಗಿದರೆ ಮತ್ತೆ 100 ಮೀಟರ್ ನಿಂತು ಹೋಗಬಹುದು. ಇದು ಮನುಷ್ಯನ ಜನನದಿಂದ ಅಂತ್ಯದವರೆಗಿನ 18 ಅವಸ್ಥೆಗಳನ್ನು ಸೂಚಿಸುತ್ತದೆ. 

Nelliteertha The cave temple Mangaluru Mythological story

ಹಾಗಾಗಿ ಗುಹೆಯೊಳಗೆ 200 ಮೀಟರ್ ದೂರ ಕ್ರಮಿಸಿದರೆ ಪವಿತ್ರವಾದ ಸಣ್ಣ ಸರೋವರದಲ್ಲಿ ತೀರ್ಥಸ್ನಾನ ಮಾಡಿ ಶಿವಲಿಂಗದ ದರ್ಶನ ಪಡೆಯಬಹುದು. 200 ಮೀಟರ್ ಕ್ರಮಿಸಿ ದೇವರ ದರ್ಶನ ಮಾಡಿದರೂ ಯಾವುದೇ ಆಯಾಸವಾಗುವುದಿಲ್ಲ. ಭಕ್ತಿಯಿಂದ ಹೋದರೆ ದೂರ ಎಷ್ಟೇ ಇದ್ದರೂ ಸುಸ್ತು ಕಾಣಿಸುವುದಿಲ್ಲ. ಅಲ್ಲಿ ಕಾಣುವ ದೇವರ ಲಿಂಗ ಕಂಡಾಗ ಮನಸ್ಸು ಹಗುರವಾಗಿ ಬಿಡುತ್ತದೆ. 

ಇಲ್ಲಿ ಮೊಣ ಗಂಟಿನವರೆಗೆ ನೀರು ತುಂಬಿರುತ್ತದೆ. ಆ ನೀರನ್ನೇ ಭಕ್ತರು ಪ್ರೋಕ್ಷಣೆ ಮಾಡಿಕೊಳ್ಳುತ್ತಾರೆ.

ಒಳಗೆ ಸುತ್ತಲೂ ತೇಗ ಗಂಧದಂತಹ ಕೆಂಪಗಿನ ಮಣ್ಣಿನ ರಾಶಿ ಇದೆ. ಭಕ್ತರಿಗೆ ಇದೇ ಗಂಧ ಪ್ರಸಾದ. ಇಲ್ಲಿನ ನೆಲ್ಲಿತೀರ್ಥ ನೀರು ಹಾಗೂ ಈ ಗಂಧದಿಂದ ಚರ್ಮವ್ಯಾಧಿಗಳು ಗುಣಮುಖವಾಗುತ್ತದೆ ಎಂಬ ನಂಬಿಕೆ ಇದೆ. 

ಇಲ್ಲಿನ ಇನ್ನೊಂದು ವಿಶೇಷತೆ ಏನೆಂದರೆ ಈ ಗುಹೆ ಇನ್ನೂ ಮುಂದುವರಿಯುತ್ತದೆ. ಆದರೆ ಸರೋವರದ ನಂತರ ಯಾರಿಗೂ ಹೋಗಲು ಅವಕಾಶವಿಲ್ಲ.

Nelliteertha The cave temple Mangaluru Mythological story

ಸೋಮನಾಥೇಶ್ವರ ಗುಹಾಲಯಕ್ಕೆ  ತೆರಳುವಾಗ 1 ಜೊತೆ ಬಟ್ಟೆ ತೆಗೆದುಕೊಂಡು ಹೋಗಬೇಕು. ಯಾಕೆಂದರೆ ಹೋದ ಬಟ್ಟೆಯಲ್ಲಿ ಸ್ನಾನ ಮಾಡಬೇಕಾಗುತ್ತದೆ. ಹಾಗೂ ಗುಹೆ ಒಳಗೆ ಹೋಗಿ ಬರುವಾಗ ಬಟ್ಟೆ ಒದ್ದೆಯಾಗಿರುತ್ತದೆ ಮತ್ತು ಕೆಲವು ಬಾರಿ ಕೆಸರಾಗುವ ಸಾಧ್ಯತೆ ಇದೆ. ಬಟ್ಟೆ ಬದಲಿಸುವ ವಿಶೇಷ ಕೊಠಡಿ ಇದೆ. 

ಗುಹೆಯ ಹೊರಭಾಗದಲ್ಲಿ ಪ್ರಮುಖ ಆರಾಧ್ಯ ದೇವ ಸೋಮನಾಥೇಶ್ವರ ಮತ್ತು ಮಹಾಗಣಪತಿ ನೆಲೆಸಿದ್ದಾರೆ. ಗುಹೆ ಪ್ರವೇಶಕ್ಕೆ ಪ್ರತಿದಿನ ಬೆಳಗ್ಗೆ 6.30ರಿಂದ ಮಧ್ಯಾಹ್ನ 12.30ರವರೆಗೂ ಅವಕಾಶವಿದೆ. ಈ ಗುಹಾಲಯಕ್ಕೆ ವರ್ಷದ ಆರು ತಿಂಗಳು ಮಾತ್ರ ಪ್ರವೇಶಿಸಲು ಅವಕಾಶವಿದೆ. ಪ್ರತಿ ವರುಷ ತುಲಾ ಸಂಕ್ರಮಣದಂದು ಗುಹಾ ಪ್ರವೇಶ ಆರಂಭವಾಗಿ ಮೇಷ ಸಂಕ್ರಮಣದಂದು ಕೊನೆಗೊಳ್ಳುತ್ತದೆ. ಮಳೆಗಾಲದಲ್ಲಿ ಗುಹೆಯನ್ನು ಪ್ರವೇಶಿಸಲು ಸಾಧ್ಯವಿಲ್ಲ.

Nelliteertha The cave temple Mangaluru Mythological story

ಈ ಪವಿತ್ರ ಸ್ಥಳವಾದ ನೆಲ್ಲಿತೀರ್ಥ ಮಂಗಳೂರಿನಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಬಜ್ಪೆ ವಿಮಾನ ನಿಲ್ದಾಣದಿಂದ ಅತ್ಯಂತ ಸಮೀಪ ಕೇವಲ 10 ಕಿ.ಮೀ ದೂರ. 

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

One Comment

Leave a Reply

Your email address will not be published. Required fields are marked *

Back to top button
Translate