ಮುಂಡರಗಿಯಲ್ಲೊಂದು ಪುರಾತನ ದೇಗುಲ ಡಂಬಳ
- ಶ್ರೀನಿವಾಸ ಮೂರ್ತಿ ಎನ್ ಎಸ್
ಕಲ್ಯಾಣ ಚಾಲುಕ್ಯರು ನಾಡಿನ ಇತಿಹಾಸದಲ್ಲಿ ತನ್ನದೇ ಆದ ಶೈಲಿಯಿಂದ ದೇವಾಲಯಗಳನ್ನು ನಿರ್ಮಿಸಿ ಹೊಸ ನಾಂದಿ ಹಿಡಿದಿರುವರು. ಸುಂದರ ಶಿಲ್ಪಗಳು, ಜಾಲಂದ್ರಗಳು ಬಾಗಿಲುವಾಡಗಳು ವಾಸ್ತುಶಿಲ್ಪದ ಅಧ್ಯಯನಕ್ಕೆ ಹೊಸ ಸ್ವರೂಪ ನೀಡಿದವು. ಆದರೆ ಗದಗ ಜಿಲ್ಲೆಯ ಡಂಬಳದ ದೊಡ್ಡಬಸಪ್ಪ ಇವರ ದೇವಾಲಯಗಳಲ್ಲಿಯೇ ವಿಭಿನ್ನವಾದದ್ದು. ನಕ್ಷತ್ರಾಕರಾದ ತಲ ವಿನ್ಯಾಸದ ಪರಿಕಲ್ಪನೆಗೆ ನಾಂದಿ ಹಾಡಿದ ಕಲ್ಯಾಣ ಚಾಲ್ಯಕ್ಯರ ದೇವಾಲಯಗಳಿಗೆ ಅತ್ಯುತ್ತತ್ತಮ ಉದಾಹರಣೆ ಈ ದೇವಾಲಯ.
ಇತಿಹಾಸದಲ್ಲಿ ಧರ್ಮಪುರ, ಧರ್ಮವೊಳಲ್ ಎಂದು ಕರೆಯುತ್ತಿದ್ದ ಈ ಸ್ಥಳ ಆ ಕಾಲದಲ್ಲಿ ಪ್ರಸಿದ್ಧ ಭೌದ್ದ ಕೇಂದ್ರವಾಗಿತ್ತು. ನಂತರ ಕಾಲದಲ್ಲಿ ಶೈವ ಮಠದ ಕೇಂದ್ರವಾಗಿದ್ದ ಇಲ್ಲಿ ಕೆಳದಿ ಅರಸರು ದತ್ತಿ ನೀಡಿದ ಉಲ್ಲೇಖವಿದೆ. ಈಗಲೂ ಇಲ್ಲಿನ ತೋಂಟದಾರ್ಯ ಮಠ ಪ್ರಸಿದ್ದಿಯಾದದ್ದು. ಕೆಳದಿಯ ಬಸಪ್ಪ ನಾಯಕ ಇಲ್ಲಿ ಕಳಸ ಮಾಡಿಕೊಟ್ಟ ಬಗ್ಗೆ ಶಾಸನ ಇದೆ, ಇಲ್ಲಿಯ ಶಾಖೆ ಕೆಳದಿಯ ರಾಜಧಾನಿಯಾಗಿದ್ದ ಬಿದನೂರಿನಲ್ಲಿದ್ದು ಈಗಲೂ ಅಲ್ಲಿ ನೋಡಬಹುದು. ಬೌದ್ದ, ಜೈನ ಹಾಗು ಶೈವರ ಕೇಂದ್ರವಾಗಿದ್ದ ಡಂಬಳ ಮೂರು ಧರ್ಮಗಳ ನಾಡಾಗಿದ್ದು ವಿಶೇಷ.
ದೊಡ್ಡ ಬಸಪ್ಪ ದೇವಾಲಯ
ಮೂಲತಃ ಈ ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಮುಖಮಂಟಪ ಹಾಗು ನಂದಿ ಮಂಟಪವನ್ನು ಹೊಂದಿದೆ. ಸುಮಾರು 1124ರಲ್ಲಿ ಈ ದೇವಾಲಯವನ್ನು ಅಜ್ಜಯ್ಯ ನಾಯಕ ಕಟ್ಟಿಸಿದ ಉಲ್ಲೇಖವಿದೆ. ಗರ್ಭಗುಡಿಯಲ್ಲಿ ಶಿವಲಿಂಗ ಇದ್ದು ಪಾಣೀಪೀಠದಲ್ಲಿನ ಕೆತ್ತನೆ ಗಮನ ಸೆಳಯುತ್ತದೆ. ಗರ್ಭಗುಡಿಯ ವಿತಾನದಲ್ಲಿನ ಕೆತ್ತನೆ ಸುಂದರವಾಗಿದೆ. ಇನ್ನು ಇದಕ್ಕೆ ಸಪ್ತ ಶಾಖೆಯ ಬಾಗಿಲುವಾಡ ಇದ್ದು ಇಲ್ಲಿನ ನೃತ್ಯ ಶಿಲ್ಪಗಳು ಇದ್ದು ಲಲಾಟದಲ್ಲಿ ಗಜಲಕ್ಶ್ಮಿಯ ಕೆತ್ತೆನೆ ಇದೆ. ಗರ್ಭಗುಡಿಯ ಮುಂದೆ ವಿಸ್ತಾರವಾದ ಅಂತರಾಳವಿದ್ದು ಇಲ್ಲಿನ ತೋರಣ ಅಲಂಕಾರ ಕಲಾತ್ಮಕವಾಗಿದೆ. ಗರ್ಭಗುಡಿಯಲ್ಲಿ 24 ಮೂಲೆಗಳಿದ್ದು ಶಿಖರದ ರೂಪಕ್ಕೆ ನಾಂದಿಯಂತಿದೆ.
ಇನ್ನು ವಿಸ್ತಾರವಾದ ನವರಂಗವನ್ನು ಹೊಂದಿದ್ದು ಇಲ್ಲಿ ನಾಲ್ಕು ಕೆತ್ತನೆಯ ಕಂಭಗಳಿವೆ. ಇಲ್ಲಿನ ಕಂಭಗಳಲ್ಲಿನ ಹೂಬಳ್ಳಿ ಕೆತ್ತನೆ ಉಬ್ಬು ಶಿಲ್ಪಗಳ ಕೆತ್ತನೆ ನೋಡಬಹುದು. ಇಲ್ಲಿನ ವಿತಾನ (ಭುವನೇಶ್ವರಿ)ಯಲ್ಲಿನ ಕೆತ್ತನೆ ಅದ್ಭುತ. ನವರಂಗದಲ್ಲಿ ಕಂಭಗಳು ಒಂದೇ ರೀತಿಯಲ್ಲರದೆ ವಿಭಿನ್ನವಾಗಿದೆ.
ಈ ದೇವಾಲಯಕ್ಕೆ ಪ್ರತ್ಯಕವಾದ ನಂದಿ ಮಂಟಪವಿದ್ದು, ದೇವಾಲಯ ಭಾಗವಾಗಿಯೇ ಕಟ್ಟಲಾಗಿದೆ. ನಂದಿಮಂಟಪದಲ್ಲಿ ದೊಡ್ಡದಾದ ನಂದಿ ಇದೆ. ಇದರಿಂದಲೇ ಈ ದೇವಾಲಯಕ್ಕೆ ದೊಡ್ಡ ಬಸಪ್ಪ ದೇವಾಲಯ ಎಂಬ ಹೆಸರು ಬಂದಿದೆ. ಇನ್ನು ಇಲ್ಲಿಯೂ ಸಹ ಕಲಾತ್ಮಕವಾದ ಕಂಭಗಳಿವೆ.
ಈ ದೇವಾಲಯದ ಮುಖ್ಯ ಸಂಗತಿಯೇ ಶಿಖರ ಭಾಗ. ಶಿಖರವನ್ನು ಅರ್ಧಕಂಭಗಳ ಮೇಲೆ ಚಿಕ್ಕ ಚಿಕ್ಕ ತೋರಣಗಳಲ್ಲಿ ನಿರ್ಮಿಸಿರುವುದು. ಚಾಲುಕ್ಯರ ನಿರ್ಮಾಣದ ವೇಸರ ಶೈಲಿಯಲ್ಲಿರುವ ಗೋಪುರ ಬಹಳಷ್ಟು ಕೋನಗಳನ್ನು ಹೊಂದಿದ್ದು ಅಧಿಷ್ಟಾನದ ಮೂಲಕ ಆರಂಭವಾಗಿ ಕಳಸಲ್ಲಿ ಕೊನೆಗೊಳ್ಳುವದರಿಂದ ಚಾಲುಕ್ಯರ ದೇವಾಲಯಗಳಲ್ಲಿಯೇ ವಿಭಿನ್ನವಾಗಿ ಗಮನ ಸೆಳೆಯುತ್ತದೆ.
ಸೋಮೇಶ್ವರ ದೇವಾಲಯ
ದೊಡ್ಡ ಬಸಪ್ಪ ದೇವಾಲಯಕ್ಕೆ ಸನಿಹದಲ್ಲಿಯೇ ಈ ದೇವಾಲಯವಿದ್ದು ಗರ್ಭಗುಡಿ, ಅಂತರಾಳ ಹಾಗೂ ನವರಂಗ ಹೊಂದಿದೆ. ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಬಾಗಿಲುವಾಡದ ಕೆತ್ತನೆ ಸುಂದರವಾಗಿದೆ. ವಿತಾನ ಕೆತ್ತೆನೆ ಕಲಾತ್ಮಕ. ಇನ್ನು ಅಂತರಾಳದಲ್ಲಿ ಹೊಸದಾದ ನಂದಿ ಇಡಲಾಗಿದೆ. ಇಲ್ಲಿನ ಬಾಗಿಲವಾಡದ ಜಾಲಂದ್ರಗಳು ಲಲಾಟವನ್ನು ಆವರಿಸಿಕೊಂಡಿದ್ದು ಕೆತ್ತನೆ ಗಮನಿಸ ಬೇಕಾದದ್ದು. ನವರಂಗದಲ್ಲಿ ಚಾಲುಕ್ಯ ಶೈಲಿಯ ನಾಲ್ಕು ಕಂಭಗಳಿವೆ. ಶಾಸನಗಳಲ್ಲಿ ಮಾಧವೇಶ್ವರ ಎಂಬ ಉಲ್ಲೇಖವಿದ್ದು ಸ್ಥಳೀಯವಾಗಿ ಸೋಮೇಶ್ವರ ಎಂದು ಕರೆಯಲಾಗುತ್ತಿದೆ.
ಜಪ ಬಾವಿ
ಇನ್ನು ಇಲ್ಲಿ ಸುಂದರವಾದ ಜಪ ಬಾವಿ ಎಂದು ಕರೆಯುವ ಕಲ್ಯಾಣಿ ಇದ್ದು, ಇಲ್ಲಿನ ಚಿಕ್ಕ ಚಿಕ್ಕ ಮಂಟಪಗಳು ಘಾಂಸನಾ (ಕದಂಬ ನಾಗರ) ಶೈಲಿಯಲ್ಲಿದೆ. ಸುಮಾರು 20 ಅಡಿ ಆಳದ ಈ ಕಲ್ಯಾಣಿ ಚಾಲುಕ್ಯ ಶೈಲಿಯ ಉತ್ತಮ ಉದಾಹರಣೆ.
ಇನ್ನು ಇಲ್ಲಿ ಕೋಟೆಯ ಕುರುಹು ಇದ್ದು ಇಲ್ಲಿನ ಜೈನ ಬಸದಿ ಇದ್ದ ಉಲ್ಲೇಖವಿದೆ. ಇಲ್ಲಿ ನಾಶದ ಹಂತದಲ್ಲಿರುವ ಕಲ್ಲೇಶ್ವರ ದೇವಾಲಯವಿದ್ದು, ಕಾಳಮ್ಮ ದೇವಾಲಯ ನವೀಕರಣಗೊಂಡಿದೆ. ಇನ್ನು ಇಲ್ಲಿನ ತೋಂಟದಾರ್ಯ ಮಠವಿದ್ದು, ನಿತ್ಯ ದಾಸೋಹದೊಂದಿಗೆ ದೇವಾಲಯಗಳ ನಿರ್ವಹಣೆಗೂ ಸಾಕಷ್ಟು ಕೋಡುಗೆ ನೀಡಿದೆ.
ನೀವು ಇದನ್ನು ಇಷ್ಟಪಡಬಹುದು: ಜಗತ್ತಿನಲ್ಲಿ 195 ದೇಶಗಳಲ್ಲಿ 186 ದೇಶ ಸುತ್ತಿ ಬಂದಿರುವ ರವಿ ಪ್ರಭು
ಹೋಗುವುದು ಹೀಗೆ:
ಈ ದೇವಾಲಯಯ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿದ್ದು ಗದಗದಿಂದ ಸುಮಾರು 20 ಕಿ ಮೀ ದೂರದಲ್ಲಿದೆ. ಲಕ್ಕುಂಡಿಯಿಂದಲೂ ಸುಮಾರು 16 ಕಿ ಮೀ ದೂರದಲ್ಲಿದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ