ತುಂಬಿದ ಮನೆಮ್ಯಾಜಿಕ್ ತಾಣಗಳುವಿಂಗಡಿಸದಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ಉಡುಪಿಯ ಸೂರಾಲಿನಲ್ಲಿದೆ ಕರ್ನಾಟಕದ ಏಕೈಕ ಮಣ್ಣಿನ ಅರಮನೆ

ರಾಜರ ಕಾಲದ ಅರಮನೆಗಳು ಚೆಂದ. ಅವರ ಕಲಾ ನೈಪುಣ್ಯ ಇನ್ನೂ ಚೆಂದ. ಯಾವ ತಂತ್ರಜ್ಞಾನ ಬಳಸಿದರು ನಮಗೆ ಅವರ ಕೌಶಲ್ಯ ಒಗ್ಗುವುದಿಲ್ಲ. ಆ ಕಾಲದ ಪ್ರತಿ ಕಟ್ಟಡ ನೂರಾರು ವರ್ಷಗಳ ಕಾಲ ಭದ್ರ. ಅದಕ್ಕೆ ಸಾಕ್ಷಿ ಈ ಮಣ್ಣಿನ ಅರಮನೆ. ಈ ಅರಮನೆ 600 ವರ್ಷಗಳಷ್ಟು ಹಳೆಯದ್ದು. ಹಲವು ಸಿನಿಮಾ, ಧಾರಾವಾಹಿಗಳ ಚಿತ್ರೀಕರಣ ಕೂಡ ಇಲ್ಲಿ ನಡೆದಿದೆ. ಈ ಚೆಂದದ ಮಣ್ಣಿನ ಅರಮನೆಯಿರುವುದು ಉಡುಪಿಯ ಕೊಕ್ಕರ್ಣೆ (kokkarane) ಸಮೀಪದ ಸೂರಾಲಿನಲ್ಲಿ.

  • ನವ್ಯಶ್ರೀ ಶೆಟ್ಟಿ

ಸೂರಾಲು ಅರಮನೆಯೆಂದು (suralu palace) ನೀವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದರೆ , ಅರಮನೆಯ ಚೆಂದದ ಚಿತ್ರ ನಿಮ್ಮ ಕಣ್ಣಿಗೆ ಬೀಳುತ್ತದೆ. ಅದನ್ನು ನೋಡಿದಾಗ ನಾನೊಮ್ಮೆ ಹೋಗಿ ಬರಬೇಕು ಎಂದು ನಿಮಗೆ ಅನ್ನಿಸಬಹುದು. ಈಗಾಗಲೇ ಕನ್ನಡ ಚಿತ್ರರಂಗದ ಹಲವು ಸಿನಿಮಾಗಳಲ್ಲಿ , ಧಾರಾವಾಹಿಗಳಲ್ಲಿ ಸೂರಾಲು ಅರಮನೆಯ ಸೊಬಗನ್ನು ನೀವು ನೋಡಿರಬಹುದು. ಜೈನ ಅರಸರ ಕಾಲದಲ್ಲಿ ನಿರ್ಮಾಣವಾದ ಈ ಅರಮನೆಯಿರುವುದು ಉಡುಪಿ ಜಿಲ್ಲೆಯ ಸೂರಾಲಿನಲ್ಲಿ.

ಕರ್ನಾಟಕದ ಏಕೈಕ ಮಣ್ಣಿನ ಅರಮನೆ

ಕರ್ನಾಟಕದಲ್ಲಿ ಅದೆಷ್ಟೋ ರಾಜ ಮನೆತನಗಳು ಆಳ್ವಿಕೆ ನಡೆಸಿದ್ದರು. ಅದೆಷ್ಟೋ ಅರಮನೆಗಳು ನಶಿಸಿ ಹೋಗಿವೆ. ಬೆರೆಣಿಕೆಯಷ್ಟು ಅರಮನೆಗಳು ಮಾತ್ರ ಉಳಿದುಕೊಂಡಿದೆ. ಕರುನಾಡಿನ ಅರಸರು ನಿರ್ಮಿಸಿದ್ದ ಮಣ್ಣಿನ ಅರಮನೆಗಳಲ್ಲಿ ಬಹುತೇಕ ಅರಮನೆಗಳು ಅಳಿದು ಹೋಗಿವೆ.ಮಣ್ಣಿನ ಅರಮನೆಗಳಲ್ಲಿ ಉಳಿದಿರುವ ಏಕೈಕ ಅರಮನೆ ಉಡುಪಿ (udupi) ಜಿಲ್ಲೆಯಲ್ಲಿದೆ.

Suralu palace The Earthen palace Udupi Karnataka

600 ವರ್ಷಗಳ ಇತಿಹಾಸವಿರುವ ಸೂರಾಲು ಅರಮನೆ ಕರ್ನಾಟಕದಲ್ಲಿ ಉಳಿದಿರುವ ಏಕೈಕ ಮಣ್ಣಿನ ಅರಮನೆ. ಆಗಿನ ಕಾಲದಲ್ಲಿ ಜೈನ ಅರಸರು ನಿರ್ಮಿಸಿದ್ದ ಅರಮನೆಗಳಲ್ಲಿ ಇಂದಿಗೂ ಉಳಿದಿರುವ ಅರಮನೆ ಸೂರಾಲಿನ ಈ ಚಂದದ ಅರಮನೆ ಮಾತ್ರ.

ಸಿನಿಮಾ ಶೂಟಿಂಗ್ ನಡೆದಿರುವ ಜಾಗ

ನೀವು ಈ ಅರಮನೆಯನ್ನು ಸಿನಿಮಾ ,ಧಾರಾವಾಹಿಗಳಲ್ಲಿ ನೋಡಿರುತ್ತೀರಿ. ಇಲ್ಲಿ ಸದಾ ಯಾವುದಾದರೂ ಸಿನಿಮಾ ,ಧಾರಾವಾಹಿಗಳ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ. ಒಂದು ಕಾಲದಲ್ಲಿ ಜೈನ ಅರಸರು ಆಳ್ವಿಕೆ ಮಾಡಿದ್ದ ಅರಮನೆ ,ಇಂದು ಸಿನಿ ಮಂದಿಯ ಶೂಟಿಂಗ್ ತಾಣವಾಗಿದೆ. ‘ ಶುಭ ವಿವಾಹ ‘ದಂತಹ ಕನ್ನಡದ ಸೂಪರ್ ಹಿಟ್ ಧಾರಾವಾಹಿ, ‘ಮಧ್ವಾಚಾರ್ಯ’ ಸೇರಿದಂತೆ ಕನ್ನಡ ಕೆಲವು ಸಿನಿಮಾ ಚಿತ್ರೀಕರಣಗೊಂಡಿದ್ದು ಕರಾವಳಿಯ ಈ ಚಂದದ ಅರಮನೆಯಲ್ಲಿ.

Suralu palace The Earthen palace Udupi Karnataka

ಪುಟ್ಟ ಊರಲ್ಲೊಂದು ದೊಡ್ಡ ಅರಮನೆ

ಕೊಕ್ಕರ್ಣೆ, ಉಡುಪಿಯ ಒಂದು ಗ್ರಾಮ. ನೀವು ಬಾರ್ಕೂರು ಮಾರ್ಗವಾಗಿ ತಲುಪಬಹುದು. ಗ್ರಾಮವಾದ್ದರಿಂದ ಅಲ್ಲಿರುವ ಸೌಲಭ್ಯಗಳು ಸೀಮಿತ . ಈ ಅರಮನೆ ಒಂದಷ್ಟು ಮನೆಗಳು ಮಾತ್ರವಿರುವ ಒಂದು ಪುಟ್ಟ ಹಳ್ಳಿಯ ನಡುವಿನ ದೊಡ್ಡ ಅರಮನೆ .ಅರಮನೆಯ ಸುತ್ತ ಮುತ್ತ ಯಾವುದೇ ಐಷಾರಾಮಿ ಎಂದೆನಿಸುವ ಸೌಲಭ್ಯಗಳಿಲ್ಲ. ಅಲ್ಲಿರುವುದು ಪುಟ್ಟ ಹೋಟೆಲ್ , ಅಂಗಡಿ ಮಾತ್ರ. ಸುಂದರ ಅರಮನೆಯ ಈ ಜಾಗಕ್ಕೆ ಪುಟ್ಟ ಹೋಟೆಲ್, ಅಂಗಡಿಗಳೇ ಜಾಸ್ತಿ ಮೆರಗು.

Suralu palace The Earthen palace Udupi Karnataka

ತೋಳಾರ ಜೈನ ಅರಸನ ಕೊಡುಗೆ ಈ ಅರಮನೆ.

ಕರಾವಳಿಯ ತುಳು ಅರಸರ ಶ್ರೀಮಂತ ಆಳ್ವಿಕೆಗೆ ಸಾಕ್ಷಿಯಾಗಿ ಉಳಿದಿರುವ ಕೊಡುಗೆಗಳಲ್ಲಿ ಈ ಅರಮನೆ ಕೂಡ ಒಂದು. ಸೂರಾಲಿನ ಈ ಅರಮನೆ ಜೈನ ಅರಸರ ಕೊಡುಗೆ . ಕ್ರಿ.ಶ. 1500ರಲ್ಲಿ ನಿರ್ಮಾಣವಾದ ಈ ಅರಮನೆಯನ್ನು ತೋಳಾರ ಅರಸರು ನಿರ್ಮಿಸಿದ್ದರು. ಹಂಚಿನ ಮನೆಯಂತೆ ಕಾಣುವ ಈ ಅರಮನೆಯ ಒಳ ಹೊಕ್ಕಿದ್ದರೆ, ಅಂದಿನ ಗತ ಕಾಲದ ವೈಭವದ ಕುರುಹುಗಳು ನಿಮಗೆ ಕಾಣುತ್ತದೆ. ಈ ಅರಮನೆ ಕಾಷ್ಠ ಶಿಲ್ಪದಿಂದ ನಿರ್ಮಾಣಗೊಂಡಿದ್ದು.

Suralu palace The Earthen palace Udupi Karnataka

ಸಂಪೂರ್ಣವಾಗಿ ಮಣ್ಣು ,ಮರವನ್ನು ಬಳಸಿರುವುದು ಈ ಅರಮನೆಯ ವಿಶೇಷ.
ಎರಡುಪ್ಪರಿಗೆಯ ಈ ಅರಮನೆ ಕರಾವಳಿಯ ಐತಿಹಾಸಿಕ ಮೆರುಗನ್ನು ಹೆಚ್ಚಿಸುತ್ತದೆ.
ಅರಮನೆಯ ವಾಸ್ತಶಿಲ್ಪ ಹಿಂದೂ ಮತ್ತು ಜೈನ ಮಾದರಿಯಲ್ಲಿ ನಿರ್ಮಾಣಗೊಂಡಿದ್ದು. ಸುಟ್ಟ ಆವೆ ಮಣ್ಣಿನಿಂದ ನಿರ್ಮಾಣವಾದ ಈ ಅರಮನೆ ಇಂದಿಗೂ ಭದ್ರ.

ನೀವುಇದನ್ನುಇಷ್ಟಪಡಬಹುದು: ಭೂತಾಳ ಪಾಂಡ್ಯ ಆಳುತ್ತಿದ್ದ ತುಳುನಾಡ ರಾಜಧಾನಿಯಾಗಿದ್ದ ಬಾರಕೂರಿನ ಕೋಟೆ ಈಗ ಹೀಗಿದೆ ನೋಡಿ!

ಅರಮನೆಯ ಪ್ರವೇಶದ ಹೆಬ್ಬಾಗಿಲಿನ ಚಾವಡಿ ಅಂದಿನ ಸೊಬಗನ್ನು ಉಳಿಸಿಕೊಂಡಿದೆ. ಹೆಬ್ಬಾಗಿಲಿನ ಚಾವಡಿ ಬಳಿಕ ನಿಮ್ಮನ್ನು ಸ್ವಾಗತಿಸುವುದು ರಾಜಾಂಗಣ. ಹೆಬ್ಬಾಗಿಲಿನ ಚಾವಡಿಯ ಜೊತೆಗೆ ಪೆರ್ಡೂರು ಮಾಗಣೆ ಚಾವಡಿ ,ಪಟ್ಟದ ಚಾವಡಿಯನ್ನು ನೀವು ನೋಡಬಹುದು. ಆದರೆ ಇವೆರಡೂ ಚಾವಡಿಗಳು ಕೊಂಚ ಕುಸಿದಿದೆ.ಅರಮನೆಯೊಳಗೆ ಪದ್ಮಾವತಿ ಗುಡಿ ಹಾಗೂ ಜೈನ ಬಸದಿಗಳಿವೆ . ಪದ್ಮಾವತಿ ಕುಮಾರ ರಾಯರ ಮಂಚಗಳಿದ್ದು , ಆ ಕಾಲದಲ್ಲಿ ವಾಸವಿದ್ದ ಅರಸರ ಆರಾಧ್ಯ ದೇವತೆಗಳಾಗಿದ್ದರು.

Suralu palace The Earthen palace Udupi Karnataka

ಹೈದರಾಲಿಯ ಕಾಲದಲ್ಲಿ ಅಂತ್ಯಗೊಂಡ ಆಡಳಿತ

ಸೂರಾಲನ್ನು ರಾಜಧಾನಿಯಾಗಿ ಆಳ್ವಿಕೆ ಮಾಡಿದ್ದ ರಾಜ ಮನೆತನಕ್ಕೆ ಬೈಂದೂರಿನ(byndoor) ತನಕ ಸಾಮ್ರಾಜ್ಯವಿತ್ತು. ವಿಜಯನಗರ, ಮೈಸೂರು ಅರಸರು ಇಲ್ಲಿಗೆ ಭೇಟಿ ನೀಡಿದ್ದರು. ಬ್ರಿಟಿಷರು(british) ಪೋರ್ಚುಗೀಸರು ಇಲ್ಲಿಗೆ ಬಂದಿದ್ದರು. ಪೋರ್ಚುಗೀಸ್ ಸೇನಾನಿ ಡಿಸಿಲ್ವಾ(disilva) ಹಲವು ದಿನಗಳ ಕಾಲ ಇಲ್ಲಿ ತಂಗಿದ್ದನಂತೆ. ದಾನ ಧರ್ಮದ ಜೊತೆಗೆ ಉತ್ತಮ ಆಡಳಿತಕ್ಕೆ ಹೆಸರಾಗಿದ್ದ ಈ ಅರಮನೆಯ ರಾಜರ ಆಳ್ವಿಕೆ ಹೈದರಾಲಿಯ ಕಾಲದಲ್ಲಿ ಕೊನೆಗೊಂಡಿತು.

Kashta shilpa

ಉಡುಪಿಯಿಂದ 28ಕಿಮೀ ದೂರ

ಸೂರಲು ಅರಮನೆ ಉಡುಪಿಯಿಂದ 28 ಕಿಮೀ ದೂರವಿದೆ. ಉಡುಪಿ ಜಿಲ್ಲೆಯ ಕೊಕ್ಕರ್ಣೆ ಗ್ರಾಮದಲ್ಲಿರುವ ಈ ಅರಮನೆ ಹಳ್ಳಿಯಲ್ಲಿದ್ದರು ಹಲವರನ್ನು ತನ್ನತ್ತ ಸೆಳೆಯುತ್ತಿದೆ. ಬಸ್ ಮೂಲಕ ಸಾಗಿ ಅರಮನೆ ನೋಡಲು ಬಯಸುವವರು ಉಡುಪಿಯ ಸರ್ವೀಸ್ ಬಸ್ ನಿಲ್ದಾಣದಲ್ಲಿ ನಿಗದಿತ ಬಸ್ ಗಳಿವೆ. ನೀವು ಆ ಮೂಲಕ ಸೂರಾಲು ಅರಮನೆ ತಲುಪಬಹುದು. ಸಂಜೆ ಮೇಲೆ ಬಸ್ ಇರುವುದು ಕೊಂಚ ಕಮ್ಮಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button