ರೈತನ ರೂಪದಲ್ಲಿ ಮುಗ್ಧತೆ ಸಿಕ್ಕಿತು: ರೂಪಲ್ ಶೆಟ್ಟಿ ಬರೆದ ದಾರಿಯಲ್ಲಿ ಸಿಕ್ಕ ತಾತನ ಕತೆ
ಇತ್ತೀಚೆಗೆ ಫೀಲ್ಡ್ ವಿಸಿಟ್ ಗೆ ಅಂತ ಹಾಸನಕ್ಕೆ ಹೋಗಿದ್ದೆ. ಅರಸೀಕೆರೆ ಮಾರ್ಗದಲ್ಲಿ ಸೆಲ್ಕೋದ ಸೋಲಾರ್ ಶಕ್ತಿ ಆಧರಿತ ಸ್ಪ್ರೇಯರ್ ಬಳಸುವವರ ಮನೆಗೆ ಹೋಗಬೇಕಿತ್ತು. ಆ ರೈತ ತಮ್ಮ ತೋಟದಲ್ಲಿ ಸ್ಪ್ರೇಯರ್ ಬಳಸುತ್ತಿದ್ದಾರೆಂದು ತಿಳಿದು ಅಲ್ಲಿಗೆ ಹೋದೆವು. ನಮ್ಮ ಸಹೋದ್ಯೋಗಿ ಅವರಿಂದ ಮಾಹಿತಿ ಪಡೆಯುತ್ತಿದ್ದಾಗ ನನ್ನ ಕಣ್ಣು ಪಕ್ಕದ ತೋಟದ ಕಡೆ ಹೋಯಿತು. ಪಕ್ಕದ ಗದ್ದೆಯಲ್ಲಿ ಈ ರೈತನ ತಂದೆ ಇದ್ದರು.
ಬೀನ್ಸ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅವರನ್ನು ನೋಡಿ ಫೋಟೋಗ್ರಫಿ ಹುಚ್ಚಿನ ನಾನು ಫೋಟೋ ತೆಗೆಯೋಣ ಎಂದು ಅಲ್ಲಿಗೆ ಹೋದೆ. ಅವರು ಎಷ್ಟು ಪ್ರೀತಿಯಿಂದ ಬರ ಮಾಡಿಕೊಂಡರು ಎಂದರೆ ನನಗೆ ಅಚ್ಚರಿಯಾಗಿಹೋಯಿತು. ನಾನ್ಯಾರೂ ಅಂತ ಪರಿಚಯ ಇಲ್ಲದಿದ್ದರೂ ಮನೆಗೆ ಬಂದ ಅತಿಥಿಯೇನೋ ಎಂಬಂತೆ ನಡೆದುಕೊಂಡರು. ನೀರು ಕುಡೀತೀಯಾ, ಹಾಲು ಕುಡೀತೀಯಾ, ಊಟ ಮಾಡ್ತೀಯಾ ಅಂತ ಕೇಳುತ್ತಲೇ ಇದ್ದರು. ನಾನೇನು ಬೇಡ ಎನ್ನುತ್ತಿದ್ದೆ.
ನಂತರ ಅವರು ಸುಮ್ಮನೆ ಎಲ್ಲೋ ಹೋದರು. ಬರುವಾಗ ಒಂದು ಗೋಣಿ ಚೀಲ ತಂದಿದ್ದರು. ಅದರ ತುಂಬಾ ಬೀನ್ಸ್ ತುಂಬಿ ಕೊಡಲು ಬಂದರು. ನನಗೆ ಹೇಗೆ ಪ್ರತಿಕ್ರಿಯಿಸಬೇಕು ಅನ್ನುವುದೇ ಗೊತ್ತಾಗಲಿಲ್ಲ. ತಾತಾ, ನಾನೇನು ಮಾರಾಟ ಮಾಡೋಕೆ ಹೋಗ್ತೀನಾ, ಬೇಡ ತಾತ ಎಂದೆ. ಅವರು ಮತ್ತೆ ಅಲ್ಲೆಲ್ಲೋ ಹುಡುಕಿ ಸಣ್ಣದೊಂದು ಬ್ಯಾಗ್ ತಂದು ಅದರಲ್ಲಿ ಬೀನ್ಸ್ ತುಂಬಿದರು. ಅವರ ಪ್ರೀತಿಗೆ ಇಲ್ಲ ಎನ್ನಲಾಗದೆ ಹೊತ್ತುಕೊಂಡು ಬಂದೆ. ಅದನ್ನು ನೋಡಿದ ನನ್ನ ಸಹೋದ್ಯೋಗಿ ಇದರಲ್ಲಿ ಕಡಿಮೆ ಎಂದರೂ ಐದಾರು ಕೆಜಿ ಬೀನ್ಸ್ ಇದೆ ಎಂದರು.
ನಾನು ಯಾರು ಅಂತ ಗೊತ್ತಿಲ್ಲ, ಎಲ್ಲಿಂದ ಬಂದೆ ಅಂತ ಗೊತ್ತಿಲ್ಲ. ಹತ್ತಿರ ಹೋಗಿ ಮಾತನಾಡಿದೆನಷ್ಟೇ. ಅಜ್ಜ ವರ್ಷಗಳ ಕಾಲ ನೆನಪಿಟ್ಟುಕೊಳ್ಳುವಷ್ಟು ಪ್ರೀತಿ ಕೊಟ್ಟರು. ಈ ಜಗತ್ತಲ್ಲಿ ಮುಗ್ಧತೆ ಇನ್ನೂ ಇದೆ ಅನ್ನೋದು ಅರ್ಥ ಮಾಡಿಸಿದರು. ಅವರನ್ನು ಈಗ ನೆನೆದಾಗೆಲ್ಲಾ ಖುಷಿಯಾಗುತ್ತದೆ.
Super mam
Very nice initiative in this busy world towards unmarked people….keep it up
Roopal madam, Nice story.
Well written.