ವಿಸ್ಮಯ ವಿಶ್ವಸಂಸ್ಕೃತಿ, ಪರಂಪರೆ

ಗಾಡಿ ರೇಸ್ ಅಲ್ರೀ, ಗಾಡ ಓಟ: ಬೆಳಗಾವಿಯ ವಿಶಿಷ್ಟ ಆಚರಣೆ ಕುರಿತು ವಿನಯ್ ಮಾಧವ ಬರೆದ ಕುತೂಹಲಕರ ಕಥನ

`ಥೂ… ಮೂರೂವರೆ ಒಳಗೆ ಅಣಶಿ ತಲುಪೋದು ಡೌಟು. ಲೇಟ್ ಆದ್ರೆ ಕಾಡಿಗೆ ಹೋಗೋಕೆ ಕಷ್ಟ’ ಅಂತ ಹೇಳ್ತಾನೆ ಆಕ್ಸಿಲೇಟರ್ ಜೋರಾಗಿ ಒತ್ತಿದ್ದೆ ಅಷ್ಟೆ. ಮುಂದುಗಡೆ, ಒಂದು ಜೊತೆ ಗಾಡಿ ಎತ್ತು ಹೊತ್ತ ಟಾಟಾ ಏಸ್ ಗಾಡಿ ಬಲಕ್ಕೆ ತೆಗೆದುಕೊಳ್ಳುವ ಸೂಚನೆ ಕೊಟ್ಟಿತು. ಕಾರನ್ನು ಎಡಗಡೆಗೆ ತಿರುಗಿಸುತ್ತಲೇ, ಬಲಗಡೆ ಮೈದಾನದಲ್ಲಿ ಏನಿದೆ ಅಂತ ಹಾಗೇ ಕಣ್ಣು ಹಾಯಿಸಿ, ಮತ್ತೆ ರಸ್ತೆ ಕಡೆ ನೋಡುತ್ತಾ, `ದನದ ಜಾತ್ರೆ ಇದ್ದ ಹಾಗಿದೆ’ ಎಂದೆ.

ವಿನಯ್ ಮಾಧವ

ಅಷ್ಟರಲ್ಲಿ ಹಿಂದೆ ಕುಳಿತಿದ್ದ ನಿರಂಜನ್ ಕಗ್ಗೆರೆ, `ಇಲ್ಲ ಸರ್… ಏನೋ ಸ್ಪೋರ್ಟ್ಸ್ ಈವೆಂಟ್ ಇರಬೇಕು. ಎತ್ತುಗಳು ಗಾಡಿ ಎಳ್ಕೊಂಡು ಓಡ್ತಾ ಇದ್ದ ಹಾಗಿತ್ತು’ ಎಂದ.

`ಗಾಡಿ ರೇಸಾ? ಸರಿಯಾಗಿ ನೋಡ್ದಾ?’ ಅಂತ ಕೇಳಿದೆ.

`ಹೌದಣ್ಣ… ಒಂದೇ ಗಾಡಿ ನೋಡ್ದೆ. ಎತ್ತುಗಳು ಎಳ್ಕೊಂಡು ಓಡ್ತಾ ಇದ್ವು’ ಅಂತ ಪಕ್ಕದಲ್ಲಿ ಕುಳಿತಿದ್ದ ರಾಕೇಶ್ ಪ್ರಕಾಶ್ ಹೇಳಿದ.

ವಿನಯ್ ಮಾಧವ

ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸುವ ಹೊತ್ತಿಗೆ, ಆ ಜಾಗದಿಂದ ಒಂದು ಕಿಲೋಮೀಟರ್ ಮುಂದೆ ಬಂದಾಗಿತ್ತು. ತಿರುಗಿ ನೋಡಿದರೂ ರಸ್ತೆಯಿಂದ ಆಚೆ ಏನಾಗುತ್ತಿದೆ ಅಂತ ಗೊತ್ತಾಗುತ್ತಿರಲಿಲ್ಲ. `ಸರಿಯಾಗಿ ಹೇಳ್ರೋ.. ಹ್ಯಾಗೂ ಅಣಶಿ ತಲುಪೋಕೆ ಲೇಟಾಗುತ್ತೆ.ಕಾಡಿಗೆ ನಾಳೆ ಬೆಳಗ್ಗೆ ಬೇಕಾದರೆ ಹೋಗಬಹುದು. ಇಲ್ಲೇನಾದ್ರೂ ಗಾಡಿ ರೇಸ್ ಇದ್ರೆ ನೋಡ್ಕೊಂಡೇ ಹೋಗಬಹುದು’ ಎಂದು ಹೇಳಿದೆ.

`ನಿಜ ಅಣ್ಣಾ…. ನಾವಿಬ್ರೂ ನೋಡಿದ್ದೇವೆ. ನೀನು ರೋಡ್ ಕಡೆ ನೋಡ್ತಿದ್ದಲ್ಲಾ, ನಿಂಗೆ ಗೊತ್ತಾಗಿಲ್ಲ, ಅಷ್ಟೆ,’ ಎಂದ ರಾಕೇಶ್.

ಒಂದು ಕ್ಷಣ ಯೋಚಿಸಿದವನೇ, ಕಾರನ್ನು ಹಿಂದಕ್ಕೆ ತಿರುಗಿಸಿದೆ. ಅವತ್ತು ಶನಿವಾರ ಮಧ್ಯಾಹ್ನ. ಬೆಳಗಾವಿಯಲ್ಲಿನ ವಿಧಾನ ಸಭೆ ಅಧಿವೇಶನ ಮುಗಿಸಿ, ಅಲ್ಲಿಂದ ಭೀಮಘಡ ಹತ್ತಿ, ಮುಂದೆ ಅಣಶಿಗೆ ಹೋಗುವ ಕಾರ್ಯಕ್ರಮವಿತ್ತು. ಭಾನುವಾರ ಸಾಯಂಕಾಲದೊಳಗೆ ಬೆಳಗಾವಿ ತಲುಪಲೇಬೇಕಾದ್ದರಿಂದ, ಗಡಿಬಿಡಿಯಲ್ಲಿ ಕಾರು ಖಾನಾಪುರ ತಲುಪಿ, ಅಲ್ಲಿಂದ ಮುಂದೆ ಕಕ್ಕೇರಿ ಎಂಬ ಹಳ್ಳಿಯನ್ನು ದಾಟಿತಷ್ಟೆ. ಅಷ್ಟರಲ್ಲಿ ಇದೇನೋ ನೋಡಿ ವಾಪಾಸು ತಿರುಗಿದೆವು.

ವಿನಯ್ ಮಾಧವ

ಬಯಲನ್ನು ತಲುಪಿ, ಕಾರನ್ನು ಬಯಲಿನೊಳಗೆ ತೆಗೆದುಕೊಂಡು ಹೋದಾಗ ಅಲ್ಲೇನೂ ಅಂಥಾ ವಿಶೇಷ ಕಾಣಲಿಲ್ಲ. ದೊಡ್ಡದೊಂದು ಅಥ್ಲೆಟಿಕ್ ಟ್ರ್ಯಾಕ್ ಥರ ಕಾಣುತ್ತಿತ್ತು. ಅದರ ಮೇಲೆ ಟಾಟಾ ಏಸ್, ಎತ್ತುಗಳನ್ನು ಹೊತ್ತುಕೊಂಡು ಹೋಗುತ್ತಿತ್ತು. ದೂರದಲ್ಲಿ ಒಂದೆರೆಡು ಕಡೆ ಜನಗಳು ಎತ್ತುಗಳನ್ನು ಹಿಡಿದುಕೊಂಡು, ನಡೆದುಕೊಂಡು ಹೋಗುತ್ತಿದ್ದರು. ಮೈದಾನದ ಮಧ್ಯದಲ್ಲಿ ಒಂದು ಶಾಮಿಯಾನಾ ಹಾಕಿಕೊಂಡು, ಅಲ್ಲಿ ಏನನ್ನೋ ಘೋಷಿಸುತ್ತಿದ್ದರು. ಅಂತೂ ಏನೋ ನಡೀತ್ತಿದೆ ಅನ್ನೋದು ಗೊತ್ತಾಯ್ತು.

ಕಾರನ್ನು ಮರದ ನೆರಳಿನಲ್ಲಿ ಬಿಟ್ಟು, ನನ್ನ ಕ್ಯಾಮೆರಾ ಬ್ಯಾಗ್ ತೆಗೆದುಕೊಂಡು ಶಾಮಿಯಾನಾ ಕಡೆಗೆ ಮೂರೂ ಜನರು ಕಾಲು ಹಾಕಿದೆವು. ಅಲ್ಲಿ ಘೋಷಣೆ ಮಾಡುತ್ತಿದ್ದವರಲ್ಲಿ ಒಬ್ಬ ನಮ್ಮ ಹತ್ತಿರ ಬಂದು, ಯಾರು? ಏನು? ಎಂದು ವಿಚಾರಿಸಿಕೊಂಡ. ನಾವು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು ಮತ್ತು ದಾರಿಯಲ್ಲಿ ಹೋಗುವಾಗ ಇದನ್ನು ನೋಡಿ ಬಂದೆವು ಎಂದ ಒಂದು ನಿಮಿಷದೊಳಗೆ, ನಮ್ಮ ಹೆಸರಿನ ಸಹಿತ, ನಾವುಗಳು ಕಾರ್ಯಕ್ರಮಕ್ಕೆ ಬಂದಿರುವುದನ್ನು ಘೋಷಿಸಲಾಯಿತು. ನನಗೆ ಮುಜುಗರವಾಗಿ, ಟ್ರ್ಯಾಕ್ ಹತ್ತಿರ ಹೋಗಿ ಬಗ್ಗಿ, ದೂರದಲ್ಲಿ ಹೋಗುತ್ತಿದ್ದ ಎತ್ತುಗಳನ್ನು ನೋಡುತ್ತಾ ನಿಂತೆ. ಅಷ್ಟರಲ್ಲಿ ಹಿಂದಿನಿಂದ ಬಂದವರೊಬ್ಬರು, `ಸರ್ರೆ,’ ಎಂದರು.

ನಾನು ತಿರುಗಿ ನೋಡುವುದರೊಳಗೆ ನನ್ನ ಕೊರಳಿಗೆ ಚೆಂಡು ಹೂವಿನ ಹಾರವೊಂದನ್ನು ಹಾಕೇಬಿಟ್ಟ. ತಬ್ಬಿಬ್ಬಾಗಿ ಸಂಕೋಚದಿಂದ ಅಚೇಚೆ ನೋಡುವಾಗ, ನಿರಂಜನ್ ಕೊರಳಿನಲ್ಲೂ ಹಾರ ಕಂಡಿತು. ರಾಕೇಶ್ ಮಾತ್ರ, ಯಾವ ಹಾರವೂ ಇಲ್ಲದೆ, ನನಗೆ ಹಾರ ಹಾಕುವ ಫೋಟೋ ತೆಗೆಯುತ್ತ ನಿಂತಿದ್ದ.

ವಿನಯ್ ಮಾಧವ

ಹಾರ ಹಾಕಿದವರು ನನ್ನ ಕೈಕುಲುಕಿ, `ಸರ್ರೆ, ಇಲ್ಲೇ ಇರ್ತೀವ್ರೀ…. ನಿಮಗ ಏನ ಬೇಕಂದ್ರ ಅಲ್ಲಿ ಪೆಂಡಾಲಿಗೆ ಬನ್ರಲ್ಲಾ,’ ಎಂದು, ಶಾಮಿಯಾನಾ ಕಡೆಗೆ ನಡೆದರು. ಗಡಿಬಿಡಿಯಾಗಿ, ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ಗೊತ್ತಾಗದೆ, ನಿರಂಜನ್ ಮತ್ತು ರಾಕೇಶ್ ಮುಖ ನೋಡಿದೆ. ಅವರಿಬ್ಬರೂ ಜೋರಾಗಿ ನಗುತ್ತಿದ್ದರು.

`ರಾಕೇಶಂಗೆ ಎಲ್ಲಿ? ಹೂ ಹಾರ?’ ಅಂತ ಕೇಳಿದೆ.

`ಅವ್ನು ಪಾಕಡಾ ಸಾರ್… ನಾನು ಡ್ರೈವರ್, ಅವರಿಬ್ಬರು ಮಾತ್ರ ಜರ್ನಲಿಸ್ಟ್ ಗಳು ಅಂತ ಸುಳ್ಳು ಹೇಳಿ ತಪ್ಪಿಸಿಕೊಂಡ’ ಎಂದ ನಿರಂಜನ.

ಈಗ ಅರ್ಜೆಂಟಾಗಿ ಬೇಕಾಗಿದ್ದು, ಇಲ್ಲಿ ನಡೆಯುತ್ತಿರುವುದು ಏನು? ಅನ್ನೋ ವಿವರಣೆ. ಹಿಂದೆ ತಿರುಗಿ ಶಾಮಿಯಾನಾದ ಕಡೆ ನೋಡಿದರೆ, ಅಲ್ಲಿದ್ದ ಎಲ್ಲರೂ ಒಂದಲ್ಲೊಂದು ಕೆಲಸದಲ್ಲಿ ಮುಳುಗಿದ್ದಂತೆ ಕಾಣಿಸಿತು. ಅವರ ಕೆಲಸದ ಮಧ್ಯೆ ಏಕೆ ತೊಂದರೆ ಕೊಡುವುದು ಎಂದು, ಅಲ್ಲೇ ನಿಂತು ಏನನ್ನೋ ಬಗ್ಗಿ ನೋಡುತ್ತಿದ್ದ ಮೂರ್ನಾಲ್ಕು ಜನರ ಗುಂಪಿನ ಕಡೆಗೆ ಹೋಗಿ, `ನೀವೂ ಇದೇ ಊರಿನವರಾ?’ ಅಂತ ಕೇಳಿದೆ.

ವಿನಯ್ ಮಾಧವ

`ಹೌದ್ರೀ ಸಾಹೇಬ್ರ’ ಅಂತ ಉತ್ಸಾಹದಲ್ಲೇ ಉತ್ತರಿಸಿದರು.

`ಈ ಗಾಡಿ ರೇಸ್ ನಿಮ್ಮ ಊರಿನವರೇ ನೆಡೆಸ್ತಾ ಇರೋದಾ?’ ಅಂತ ಕೇಳಿದೆ.

`ಇದು ಗಾಡಿ ರೇಸ್ ಅಲ್ರೀ ಸಾಹೇಬ್ರಾ…. ಇದು ಗಾಡ ಓಟಾರಿ’ ಎಂದ ಒಬ್ಬ.

ನನಗೆ ಅರ್ಥವಾಗಲಿಲ್ಲ. ರೇಸ್ ಗೂ, ಓಟಕ್ಕೂ ಏನು ವ್ಯತ್ಯಾಸ ಅಂತ ಗೊತ್ತಾಗಲಿಲ್ಲ. ಸುತ್ತಲೂ ನೋಡಿದೆ. ಅಂಡಾಕಾರದಲ್ಲಿ ಟ್ರ್ಯಾಕ್ ನಿರ್ಮಾಣವಾಗಿತ್ತು. ಸಾಧಾರಣವಾಗಿ ಇರುವ ಗಾಡಿಗೂ, ಈ ಗಾಡಿಗೂ ವ್ಯತ್ಯಾಸ ಇತ್ತು. ಕಬ್ಬಿಣದ ಚಕ್ರದ, ಇಬ್ಬರಿಂದ, ಮೂರು ಜನ ಕೂರಬಹುದಾದ ಸಣ್ಣ ಗಾಡಿ ಇದಾಗಿತ್ತು.

`ಇದು ಬರೀ ಓಟಾರೀ…. ಎತ್ತುಗಳು ಗಡಾ ಎಳ್ಕಂಡು ಓಡ್ತಾವ. ಒಂದು ನಿಮಿಷದಲ್ಲಿ ಯಾವ ಜೋಡಿ ಹೆಚ್ಚು ದೂರ ಎಳಿತಾವೋ, ಅವೇ ಸಾಹೇಬ್ರ ಗೆಲ್ಲೋವು. ಓಡ್ಸೋರು ಬೆಳಗ್ಗೆ ಎಂಟು ಘಂಟೆಯಿಂದ, ಸಾಯಂಕಾಲ ಆರು ಘಂಟೆವರೆಗೆ ಎಷ್ಟು ಹೊತ್ತಿಗಾದರೂ ಬಂದು ಓಡಿಸ್ಬೋದು. ಹದಿನೈದು ಬಹುಮಾನ ಇರ್ತಾವ ನೋಡ್ರಿ. ಆದ್ರ, ಮೊದಲನೇ ಬಹುಮಾನನೇ ದೊಡ್ಡದು ನೋಡ್ರಿ’ ಎಂದ.

ವಿನಯ್ ಮಾಧವ

`ಎಷ್ಟು ದಿನ ನಡೀತ್ತದೆ? ಈ ಓಟ?’ ಎಂದು ಕೇಳಿದೆ.

`ದೀಪಾವಳಿ ನಂತರ, ಈ ಭಾಗದಲ್ಲಿ ಕೃಷಿ ಚಟುವಟಿಕೆ ಕಡಿಮೆ ಇರ್ತದ್ರೀ. ಆಗ ಹದಿನೈದು ದಿನದಾಗ ಯಾವ ದಿನ ಬೇಕಾದ್ರೂ ನಮ್ಮ ಊರಾಗೆ ನಡೆಸಬಹುದು. ಅವರವರ ಅನುಕೂಲಕ್ಕೆ ತಕ್ಕ ಹಾಗೆ, ಅಯಾ ಊರಿನವರು ನಡೆಸಿಕೊಳ್ತಾರೆ. ಎತ್ತು ಓಡಿಸೋರು ಯಾವ ಊರಿನಲ್ಲಿ, ಯಾವಾಗ ಬೇಕಾದರೂ ಹೋಗಿ ಓಡಿಸ್ಬೋದು ನೋಡ್ರಿ’ ಎಂದ.

`ಅಂದ್ರೆ, ಸುಮಾರು ಊರಲ್ಲಿ ನಡೀತದಾ? ಈ ಓಟ?’ ಎಂದು ಕೇಳಿದೆ.

`ಈ ಭಾಗದಾಗ ಸಾಧಾರಣ ಎಲ್ಲಾ ಊರಲ್ಲೂ ನಡೀತದೆ. ತುಂಬಾ ಎತ್ತುಗಳು ಬಂದರೆ ಮಾತ್ರ ಎರಡನೇ ದಿನ ಇರುತ್ತೆ. ಇಲ್ಲದೇ ಹೋದರೆ ಬೆಳಗ್ಗಿನಿಂದ, ಸಾಯಂಕಾಲಕ್ಕೆ ಮುಗೀತ್ತದೆ. ಸೋಮವಾರ ಇರೋದಿಲ್ಲ’ ಎಂದ.

`ಸೋಮವಾರ ಏಕೆ ಇರೋದಿಲ್ಲ?’ ಎಂದು ಕೇಳಿದೆ.

`ಅದು ಬಸವನ ದಿನ ಅಲ್ಲೇನ್ರೀ? ಅವತ್ತು ಬಸವನಿಗೆ ರಜಾ. ನಾವು ಬಸವನ ಕೈನಾಗೆ ಯಾವ ಕೆಲಸಾನೂ ಮಾಡ್ಸೋದಿಲ್ಲ. ಅವತ್ತು ನಮ್ಮ ಬಸವಂಗೆ ನಾವೇ ಕೈಯಾರೆ ಸ್ನಾನ ಮಾಡ್ಸಿ, ಬೆಲ್ಲದ ಅನ್ನ ಮಾಡಿ, ನಾವು ಕೈಯಾರೆ ತಿನ್ನಿಸ್ತೇವೆ. ಏನೂ ಜರೂರು ಕೆಲಸ ಇಲ್ಲಾಂದ್ರ, ಅದನ್ನ ಮೇಯಿಸೋಕೂ ನಾವೇ ಅಟ್ಟಿಕೊಂಡು ಹೋಗ್ತೀವಿ. ಒಟ್ಟಾರೆ, ಅವತ್ತು ರೈತ ಬಸವನ ಜೊತೆ ಇರೋದು ನಮ್ಮ ಕಡಿ ರೂಢಿ ನೋಡ್ರಿ’ ಎಂದು  ತಣ್ಣಗೆ ಹೇಳಿದ.

ವಿನಯ್ ಮಾಧವ

ಬೆಂಗಳೂರಿನ ಕಡೆ ಸೋಮವಾರ ಶಿವನ ದಿನ ಅಂತ ಹೇಳೋದು ಕೇಳಿದ್ದೆ. ಇಲ್ಲಿ ನೋಡಿದ್ರೆ ಬಸವನ ದಿನ ಆಗಿದೆ. ಮತ್ತೆ ಈ ಕಡೆ ಬಸವನ ದಿನವೇ ವಾರದ ರಜೆ. ಯಾಕೋ ತುಂಬಾ ಇಷ್ಟವಾಯಿತು.

ಅಷ್ಟರಲ್ಲಿ ಗಾಡಿಯೊಂದು ಜೋರಾಗಿ ಓಡಿಕೊಂಡು ಬಂದು, ಹೆಚ್ಚೂ ಕಡಿಮೆ ಅರ್ಧದವರೆಗೆ ಬಂದು ನಿಂತಿತು. ನಿಂತ ತಕ್ಷಣ ಗಾಡಿಯಲ್ಲಿ ಹಿಂದೆ ಕುಳಿತಿದ್ದವನು ಇಳಿದವನೇ, ಎರಡು ಎತ್ತುಗಳ ಮಧ್ಯೆ ನಿಂತು, ಅವುಗಳ ಎದೆ ನೀವಲು ಶುರುಮಾಡಿದ. `ಕೆಲವು ಎತ್ತುಗಳು ಒಂದು ದಿನದಲ್ಲಿ ಎರಡು, ಮೂರು ಊರುಗಳಲ್ಲಿ ಓಡ್ತಾವ್ರೀ… ಈ ಎತ್ತುಗಳು ಒಂದೊಂದಕ್ಕೆ ಮೂರು ಲಕ್ಷದವರೆಗೆ ಬೆಲೆ ಇರ್ತಾವೆ. ಮನೆಗೆ ಒಗ್ಗಿ ನಿಂತ ಎತ್ತುಗಳನ್ನು ಮಾರೋದು ಕಡಿಮೆ. ಕರು ಹಾಕಿ ದೊಡ್ಡದಾಗುವಾಗ ಮಾತ್ರ ಮಾರ್ತಾರೆ. ತುಂಬಾ ಹಣಕ್ಕೆ ತೊಂದರೆ ಆದರೆ, ಎತ್ತು ಮಾರೋಕೆ ಮುಂಚೆ ಮನೆ ಮಾರೋಕೆ ನೋಡ್ತಾರೆ’ ಎಂದು ಅವರು ಹೇಳಿದಾಗ, ಒಂದು ಕ್ಷಣ ಆ ಮೂವರ ಮುಖವನ್ನೇ ದೃಷ್ಟಿಸಿ ನೋಡಿದೆ.

ಅಷ್ಟರಲ್ಲಿ ಎತ್ತುಗಳು ನಿಂತಿದ್ದ ಜಾಗದ ಹತ್ತಿರ ನಿಂತಿದ್ದ ಗುಂಪೊಂದು ಗಡಿಬಿಡಿಯಿಂದ ಓಡಾಡುತ್ತಿದ್ದದ್ದು ಕಂಡಿತು. ಅಲ್ಲಿ ಹೋಗಿ ನೋಡಿದಾಗ, ಒಂದು ಟೇಪ್ ಹಿಡಿದುಕೊಂಡು ಅಳೆಯುತ್ತಿದ್ದರು. ಅದು ಹೇಗೆ ಎಂದು ನೋಡಿದಾಗ, ಐವತ್ತು ಮೀಟರ್ ಗೆ ಒಂದರಂತೆ, ಗೂಟಗಳನ್ನು ಹಾಕಿದ್ದರು. ಹಾಗಾಗಿ, ಒಂದು ನಿಮಿಷಕ್ಕೆ ಎಲ್ಲಿ ಇತ್ತು ಎನ್ನುವುದನ್ನು ಒಬ್ಬ ಸರಿಯಾಗಿ ನೋಡಿಕೊಂಡು, ಅಲ್ಲಿಗೆ ಗೆರೆ ಹಾಕುತ್ತಾನೆ. ಹಿಂದಿನ ಗೂಟ, ಹೊರಟ ಜಾಗದಿಂದ ಎಷ್ಟು ಮೀಟರ್ ಇದೆ ಎನ್ನುವುದರ ಲೆಕ್ಕ ಇರುತ್ತದೆ. ಅಲ್ಲಿಂದ ಮುಂದೆ ಎಷ್ಟು ಓಡಿದೆ ಎನ್ನುವುದನ್ನು ಲೆಖ್ಖ ಹಾಕುತ್ತಿದ್ದರು.

`ಈ ಪೂರ್ತಿ ಟ್ರ್ಯಾಕ್ ಇದೆಯಲ್ಲ, ಇದು ಎಷ್ಟು ಮೀಟರ್ ಇದೆ?’ ಎಂದು ಅವರಲ್ಲೊಬ್ಬನನ್ನು ಕೇಳಿದೆ.

`ಇದು ಎರಡು ಸಾವಿರ ಮೀಟರ್ ಇದೇರಿ. ಒಂದು ಮಿನಿಟ್ ನಾಗೆ ಎರಡು ಸಾವಿರ ಮೀಟರ್ ಯಾವುದೇ ಎತ್ತು ಓಡಂಗಿಲ್ಲ. ಚಕ್ಕಡಿ ನಾವೇ ಕೊಡ್ತೀವ್ರಿ. ಯಾಕಂದ್ರ, ಅವರ ಅಳತೆಗೆ ಹೆಚ್ಚು ಕಡಿಮಿ ಮಾಡಿದ್ರ ತಕರಾರಾಗ್ತದ. ನಮ್ಮಲ್ಲಿ ಮೂರು ಗಾಡಿ ಇದ್ದಾವ. ಪ್ರತೀ ಸಲ ಓಡಿದ ಮೇಲೂ, ಅದನ್ನ ಅಲ್ಲಿ ಮತ್ತೆ ಪರೀಕ್ಷೆ ಮಾಡೇ ಎಳೀಲಿಕ್ಕೆ ಕಳುಹಿಸೋದ್ರಿ. ಯಾಕಂದ್ರ, ಏನಾದ್ರೂ ಹೆಚ್ಚೂ ಕಡಿಮಿ ಆದ್ರ, ಎತ್ತುಗಳಿಗೆ ನೋವಾಗುತ್ತೆ,’ ಎಂದ.

ಯಾಕೋ, ತುಂಬಾನೇ ಇಷ್ಟವಾಗೋಕೆ ಶುರುವಾಯ್ತು. ಅಷ್ಟರಲ್ಲಿ, ಒಂದು ಜೊತೆ ಎತ್ತುಗಳನ್ನು ಹಿಡಿದುಕೊಂಡು, ಟ್ರ್ಯಾಕ್ ಮೇಲೆ ನಡೆಸಿಕೊಂಡು ಇಬ್ಬರು ಬಂದರು. `ಇದ್ಯಾಕೆ ನಡೀತ್ತಿದ್ದಾವೆ?’ ಎಂದು ಕೇಳಿದೆ.

ವಿನಯ್ ಮಾಧವ

`ಓ ಅದಾ? ಅವು ಓಡ್ಕೋಂಡು ಬರೋವಾಗ, ಯಾವ ಕಡಿ ಓಡ್ಬೇಕೂಂತ ಎತ್ತುಗಳಿಗೆ ಗೊತ್ತಾಗ ಬೇಕಲ್ಲಾ? ಅದಕ್ಕೆ ಒಂದು ಸುತ್ತು ನಡೆಸಿಕೊಂಡು, ದಾರಿ ಪರಿಚಯ ಮಾಡ್ಕೊಡ್ತಾರೆ. ಅವುಗಳಿಗೆ ಎಲ್ಲಿ ಓಡಬೇಕೂಂತ ಮೊದಲೇ ಗೊತ್ತಾಗಿರುತ್ತೆ’ ಎಂದ.

ಸ್ವಲ್ಪ ಹೊತ್ತಿನ ನಂತರ, ಒಂದಾದ ನಂತರ ಇನ್ನೊಂದು ಗಾಡಿಗಳು ಅದೇ ಟ್ರ್ಯಾಕ್ ನಲ್ಲಿ ಓಡಿ ಬಂದವು. ಅಷ್ಟರಲ್ಲಿ, ಇನ್ನೊಂದೆರೆಡು ಟಾಟಾ ಏಸ್ ಗಳು ಎತ್ತುಗಳನ್ನು ಹೊತ್ತು ಮೈದಾನದೊಳಗೆ ಪ್ರವೇಶಿಸಿದವು. ನಾವು ಮೂವರೂ ನಿಧಾನವಾಗಿ ಕಾರು ಹತ್ತುವ ಸಮಯಕ್ಕೆ, ಇನ್ನೊಂದೆರೆಡು ಜೊತೆ ಎತ್ತುಗಳು, ಮಾಲೀಕರ ಜೊತೆಯಲ್ಲಿ ಟ್ರ್ಯಾಕ್ ಮೇಲೆ ನಡೆಯುತ್ತಿದ್ದವು.

ಕಾರಿನಲ್ಲಿದ್ದ ಮೂವರೂ ಪ್ರಾಣಿ ಪ್ರಿಯರೆ. ಅದರಲ್ಲೂ ವನ್ಯಜೀವಿಗಳದ್ದು. ಇನ್ನು ಕಾಡಿನೊಳಗೆ ಹೋಗುವುದು ನಾಳೆ ಬೆಳಗ್ಗೆಯೇ ಎಂದು ನಿರ್ಧಾವಾಗಿದ್ದರಿಂದ, ಕಾರನ್ನು ನಿಧಾನವಾಗಿಯೇ ಓಡಿಸುತ್ತಿದ್ದೆ. ಹಿಂದುಗಡೆಯಿಂದ ನಿರಂಜನ್ ಮೆಲ್ಲಗೆ ಹೇಳಿದ: `ಸರ್…. ಇವರೆಲ್ಲ ಎತ್ತುಗಳನ್ನು ಎಷ್ಟು ಪ್ರೀತಿಯಿಂದ ನೋಡ್ಕೊಳ್ತಾರೆ ಗೊತ್ತಾ ಸರ್. ಈ ಪ್ರಾಣಿ ದಯಾ ಸಂಘ, ಪೇಟಾದವರ ಕಣ್ಣಿಗೆ ಇದು ಬೀಳದೇ ಹೋದರೆ ಸಾಕು. ಅವರಿಗೆ ಈ ಎತ್ತು ಮತ್ತೆ ಮಾಲೀಕರ ನಡುವೆ ಇರುವ ಭಾವನಾತ್ಮಕ ಸಂಬಂಧ ಗೊತ್ತಾಗೋ ಸಾಧ್ಯತೆನೇ ಇಲ್ಲ. ಸುಮ್ಮನೆ ಕೋರ್ಟಿಗೆ ಹೋಗಿ ಕೇಸ್ ಹಾಕ್ತಾರೆ ಅಷ್ಟೆ,’ ಎಂದ.

ನಾನು ಮುಗುಳ್ನಗುತ್ತಾ ತಲೆ ಅಲ್ಲಾಡಿಸಿದೆ…..

Related Articles

Leave a Reply

Your email address will not be published. Required fields are marked *

Back to top button