ಸುಳ್ಳು ಹೇಳಿ ಅಮ್ಮನನ್ನು ಜಗತ್ತು ಸುತ್ತಿಸಿದ ಮಗ: ಗೀತಮ್ಮನ ಮಗ ಶರತ್ ಕೃಷ್ಣನ್ ಸ್ಫೂರ್ತಿಕತೆ

ಪ್ರತಿಯೊಬ್ಬರ ಅಮ್ಮನೂ ತನ್ನ ಮನೆ, ಸಂಸಾರವೆಂಬ ಬಾರ್ಡರ್ ನಿಂದ ಹೊರ ಬರೋಕೆ ಹಿಂಜರಿಯುತ್ತಾರೆ. ತಮ್ಮ ಆಸೆ, ಕನಸುಗಳನ್ನು ಮಕ್ಕಳಿಗಾಗಿ, ಕುಟುಂಬಕ್ಕಾಗಿ ಮರೆಯುತ್ತಾರೆ. ಒಳಗೆ ಕುಳಿತ ಅಮ್ಮಂದಿರನ್ನು ಹೊರಗೆ ಕರೆದುಕೊಂಡು ಬಂದರೆ, ಚೂರು ಪ್ರೋತ್ಸಾಹ ಕೊಟ್ಟರೆ ಅವರು ಮತ್ತೆ ತಮ್ಮ ಶಕ್ತಿ, ಆಸೆ, ಕನಸು ಕಂಡುಕೊಳ್ಳುತ್ತಾರೆ. ಖುಷಿಯಾಗುತ್ತಾರೆ. ಅಮ್ಮನ ಮುಖದಲ್ಲಿ ಖುಷಿಗಿಂತ ನೋಡುವುದಕ್ಕಿಂತ ದೊಡ್ಡದು ಈ ಜಗತ್ತಲ್ಲಿ ಬೇರೆ ಯಾವುದೂ ಇಲ್ಲ ಎಂದು ಶರತ್ ತನ್ನ ಕತೆ ಹೇಳುತ್ತಿದ್ದರೆ ನನಗೆ ನನ್ನಮ್ಮನ ನೆನಪಾಗುತ್ತಿತ್ತು.

ಅಮ್ಮನಿಗೆ ಮನೆಯೊಳಗೆ ಕುಳಿತು ಕುಳಿತು ಅಭ್ಯಾಸವಾಗಿದೆ. ಆಕೆ ಮನೆಯೇ ಜಗತ್ತು ಅಂತ ಭಾವಿಸಿದ್ದಾಳೆ. ಕರ್ತವ್ಯ ಪಾಲಿಸುವ ನೆಪದಲ್ಲಿ ಬೆರಗಾಗುವುದನ್ನೇ ಮರೆತಿದ್ದಾಳೆ. ಅವಳನ್ನು ಒಮ್ಮೆ ಹೊರಗೆ ಕರೆದುಕೊಂಡು ಬನ್ನಿ. ಅವಳಿಗೆ ಜಗತ್ತು ತೋರಿಸಿ. ಅವಳು ಮತ್ತೆ ಮಗುವಾಗುತ್ತಾಳೆ. ಬೆರಗಾಗುತ್ತಾಳೆ. ಅಮ್ಮನ ಮುಖದಲ್ಲಿ ಖುಷಿ ಕಾಣುವುದಕ್ಕಿಂತ ದೊಡ್ಜ ಖುಷಿ ಈ ಜಗತ್ತಲ್ಲಿ ಬೇರೆ ಯಾವುದೂ ಇಲ್ಲ.

ಶರತ್ ಕೃಷ್ಣನ್ ಹೀಗೆ ಮಾತನಾಡುತ್ತಾ ಹೋಗುತ್ತಾರೆ. 60 ವರ್ಷದ ಅಮ್ಮ ಗೀತಮ್ಮನ ಜತೆ ಜಗತ್ತು ಸುತ್ತಿದ ಕೇರಳದ ತ್ರಿಶೂರಿನ ಈ ಹುಡುಗನ ಫೋಟೋ ಇತ್ತೀಚೆಗೆ ವೈರಲ್ ಆಗಿ ಜಗತ್ತನ್ನೇ ವಿಸ್ಮಯಗೊಳಿಸಿದೆ. ಅದು ಶರತ್ ರನ್ನು ಕೂಡ ಅಚ್ಚರಿಗೊಳಿಸಿದೆ. ಎಲ್ಲರೂ ಬೇರೆಯೇ ದಾರಿಯಲ್ಲಿರುವಾಗ ಅಮ್ಮನನ್ನು ಖುಷಿಪಡಿಸುವ ದಾರಿ ಹಿಡಿದ ಈ ವ್ಯಕ್ತಿಯನ್ನು ಮಾತನಾಡಿಸಿದಾಗ ಅವರ ಬೆರಗಿನ ಕತೆ ಗೊತ್ತಾಯಿತು.

ಶರತ್ ತಂದೆ ಎಂಕೆ ರಾಮಚಂದ್ರನ್. ಬರಹಗಾರ. ಪ್ರವಾಸವನ್ನು ಇಷ್ಟಪಡುವ ವ್ಯಕ್ತಿ. ಕಾಶಿಯಲೆಲ್ಲಾ 250 ಕಿಮೀ ನಡೆದುಹೋದ ಕತೆ ಎಲ್ಲಾ ಇದೆ ಅವರದು. ಅದನ್ನು ನೋಡಿ ಶರತ್ ಗೂ ಮೊದಲಿನಿಂದಲೂ ಪ್ರವಾಸದ ಹುಚ್ಚು. ಗೆಳೆಯರ ಜತೆ ಸಮಯ ಸಿಕ್ಕಾಗೆಲ್ಲಾ ಸುತ್ತಾಡಲು ಹೊರಡುತ್ತಿದ್ದರು. ಒನ್ ಫೈನ್ ಡೇ ಶರತ್ ಗೆ ಅಮ್ಮನ್ನು ನೋಡಿ, ಇವರು ಯಾವತ್ತೂ ಹೊರಗೆ ಹೋಗಲ್ಲ, ಒಳಗೇ ಕೂತಿರುತ್ತಾರೆ ಅಂತ ಅನ್ನಿಸಲು ಶುರುವಾಯಿತು.

ರಾಮಚಂದ್ರನ್ ಅವರನ್ನು ಮದುವೆಯಾಗುವ ಮೊದಲು ಗೀತಮ್ಮ ದುಬೈಯಲ್ಲಿದ್ದರು. ಅಲ್ಲಿಂದ ಬಂದ ಮೇಲೆ ಮನೆ, ಸಂಸಾರ ಅಂತೆಲ್ಲಾ ಆಗಿ ಮನೆಯೊಳಗೇ ಉಳಿದುಬಿಟ್ಟರು. ಮನೆಯಿಂದ ಹೊರಗೆ ಹೋಗುವುದು ಅಂದ್ರೆ ಅವರಿಗೆ ಇಷ್ಟವೇ ಇರಲಿಲ್ಲ. ಆದರೆ ಶರತ್ ಗೆ ಅಮ್ಮನನ್ನು ಹೇಗಾದರೂ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು ಎಂಬ ಆಸೆಯಾಯಿತು. ಅದಕ್ಕಾಗಿ ಒಂದು ಸುಳ್ಳು ಹೇಳಬೇಕಾಗಿ ಬಂತು.
ಅಮ್ಮನಿಗೆ ಹೇಳಿದ ಮೊದಲ ಸುಳ್ಳು
ಆ ಸಂದರ್ಭದಲ್ಲಿ ಅಮ್ಮನಿಗೆ ತುಂಬಾ ಬೇಕಾಗಿದ್ದ ಮುಂಬೈ ಕುಟುಂಬದಲ್ಲಿ ಮಗುವೊಂದು ಜನಿಸಿತ್ತು. ಶರತ್ ತನಗೆ ಬಿಸಿನೆಸ್ ಕೆಲಸಕ್ಕಾಗಿ ಮುಂಬೈಗೆ ಹೋಗಬೇಕು, ನೀನೂ ಬಂದು ಬಿಡು, ಬೆಳಿಗ್ಗೆ ಹೋಗಿ ಸಂಜೆ ಬಂದು ಬಿಡೋಣ ಎಂದರು. ಆದರೆ ಶರತ್ ಗೆ ಬಿಸಿನೆಸ್ ಕೆಲಸ ಇರಲಿಲ್ಲ. ಅಮ್ಮ ಮೊದಲು ಒಪ್ಪಿಕೊಳ್ಳಲಿಲ್ಲ. ಆಮೇಲೆ ಮಗುವಿನ ಕಾರಣಕ್ಕೆ ಸರಿ ಎಂದರು. ಹೀಗೆ ಒಂದು ಸುಳ್ಳಿನಿಂದ ಮೊದಲ ಪ್ರವಾಸ ಶುರುವಾಯಿತು.

ಮುಂಬೈನ ಒಂದು ದಿನದ ಪ್ರವಾಸ ಒಂದು ವಾರ ಮುಂದುವರಿಸಲಾಯಿತು. ಅಮ್ಮ ಖುಷಿಯಾಗಿದ್ದರು. ನಾಸಿಕ್, ಶಿರಡಿ, ಅಜಂತಾ ಎಲ್ಲೋರ ಸುತ್ತಿದ್ದರು. ಅಜಂತಾ, ಎಲ್ಲೋರದಲ್ಲಿ ಅಮ್ಮನಿಗೆ ಅಯ್ಯೋ ಇಲ್ಲಿಗೆ ಬರದೇ ಇದ್ದಿದ್ದರೆ, ಇದನ್ನೆಲ್ಲಾ ನೋಡುವ ಅವಕಾಶವೇ ಇರುತ್ತಿರಲಿಲ್ಲವಲ್ಲ ಅಂತ ಅನ್ನಿಸಿತು. ಅದನ್ನು ಹೇಳಿಯೂ ಬಿಟ್ಟರು.
ಎರಡನೇ ಸುಳ್ಳು
ಮುಂಬೈನಿಂದ ಬಂದು ಸುಮಾರು ಸಮಯವಾದ ಮೇಲೆ ಒಂದು ಬೆಳಿಗ್ಗೆ ಶರತ್ ಒಂದಿನ ಫೋನಲ್ಲಿ ವಾರಾಣಸಿ ಫ್ಲೈಟ್ ಬೆಲೆ ನೋಡುತ್ತಿದ್ದರು. ಅದನ್ನು ನೋಡಿದರೆ ತುಂಬಾ ಫ್ಲೈಟ್ ಟಿಕೆಟ್ ಬೆಲೆ ತುಂಬಾ ಕಡಿಮೆ ಇತ್ತು. ಎರಡು ಟಿಕೆಟ್ ಬುಕ್ ಮಾಡಿದರು. ಅದಕ್ಕೆ ಕಾರಣವಿತ್ತು. ಹಿಂದಿನ ದಿನ ಮುಂಜಾವು ಅವರಿಗೆ ಒಂದು ಕನಸು ಬಿದ್ದಿತ್ತು. ಅಮ್ಮನ ಜತೆ ವಾರಾಣಸಿಯ ಮೆಟ್ಟಿಲ ಮೇಲೆ ನಡೆದುಕೊಂಡು ಹೋಗುವ ಕನಸು.

ಫ್ಲೈಟ್ ಬುಕ್ ಮಾಡಿ ಅಮ್ಮನ ಬಳಿ ಬಂದರೆ ನಾನು ಬರಲ್ಲ ಅಂದುಬಿಟ್ಟರು ಅಮ್ಮ. ಯಾಕೆಂದರೆ ಮನೆ ಹತ್ತಿರದ ದೇಗುಲದಲ್ಲಿ ಆಗ ದೀಪೋತ್ಸವ ಕಾರ್ಯಕ್ರಮ. ನಂಗೆ ದೇವಾಲಯಕ್ಕೆ ಹೋಗಬೇಕು ಎಂದಾಗ ಶರತ್ ಮತ್ತೊಂದು ಸುಳ್ಳು ಹೇಳಿದರು. ನಿನಗಾಗಿ ಅಷ್ಟೊಂದು ದುಬಾರಿ ಟಿಕೆಟ್ ಬುಕ್ ಮಾಡಿದ್ದೇನೆ, ಹೋಗದೇ ಇದ್ದರೆ ನಷ್ಟವಾಗುತ್ತದೆ ಅಂತೆಲ್ಲಾ. ಮೂರು ದಿನದ ಪ್ರವಾಸ ಅಲ್ವಾ ಅಂತ ಅಮ್ಮ ಕಡೆಗೆ ಒಪ್ಪಿಕೊಂಡರು. ವಾರಾಣಸಿಯ ಮೇಲೆ ಅಮ್ಮ ಮಗ ನಡೆದುಹೋದರು.
ಕನಸಲ್ಲಿ ಕಂಡ ದೃಶ್ಯ ನಿಜವಾಗಿತ್ತು. ಅದೊಂದು ಮ್ಯಾಜಿಕ್ ಮೊಮೆಂಟ್. ಜೀವನದಲ್ಲಿ ಎಷ್ಟು ಖರ್ಚು ಮಾಡಿದರೂ ಸಿಗದ ಮಾಯಕದ ಗಳಿಗೆ.

ದಾರಿ ಬದಲಾಯಿತು
ಶರತ್ ಗೂ ಗೀತಮ್ಮನಿಂಗೂ ಖುಷಿಯಾಗಿತ್ತು. ಅದೇ ಖುಷಿಯಲ್ಲಿ ಬಂದು ಟ್ರೇನಲ್ಲಿ ಕುಳಿತಿದ್ದರು. ಅವತ್ತೇ ಅವರ ಫ್ಲೈಟ್ ಇತ್ತು. ಟ್ರೇನಲ್ಲಿ ಕುಳಿತು ಮಲಯಾಳಂನಲ್ಲಿ ಮಾತನಾಡಿದ್ದರು. ಆಗ ಅಲ್ಲಿಗೆ ಟಿಟಿ ಬಂದ. ಮಲಯಾಳಂ ಕೇಳಿ ನಿಂತ. ಅವನೂ ಮಲಯಾಳಂನವನೇ. ಪಾಲಕ್ಕಾಡ್ ನವರು. ಅಲ್ಲಿಗೆ ಇಬ್ಬರೂ ಕನೆಕ್ಟ್ ಆದರು.
ಮಾತನಾಡುತ್ತಾ ಶರತ್ ನೀವೆಲ್ಲಿ ಹೋಗಿ ಬರುತ್ತೀರಿ ಎಂದು ಕೇಳಿದ. ಅದಕ್ಕೆ ಆತ ಶಿಮ್ಲಾ ಹೋಗಿ ಬರೋದು ಎಂದ. ತಕ್ಷಣ ಇಬ್ಬರೂ ಪರಸ್ಪರ ಮುಖ ನೋಡಿಕೊಂಡರು. ಆತ ನೀವು ಅಮ್ಮ, ಮಗ ಶಿಮ್ಲಾ ನೋಡುವುದು ಒಳ್ಳೆಯದು ಎಂದರು.

ಇಬ್ಬರಿಗೂ ಅಷ್ಟೇ ಸಾಕಾಯಿತು. ಫ್ಲೈಟ್ ಕ್ಯಾನ್ಸಲ್ ಆಯಿತು. ಟ್ರೈನಲ್ಲಿ ಶಿಮ್ಲಾಗೆ ಹೋಗುವುದು ಅಂತಾಯಿತು. ಶಿಮ್ಲಾ ಹೇಳಿಕೇಳಿ ಚಳಿಯ ಊರು. ಅಮ್ಮ ಬೇರೆ ಸೀರೆಯಲ್ಲೇ ಬಂದಿದ್ದು. ಅವರು ಎಲ್ಲಿ ಹೋದರೂ ಸೀರೆಯಲ್ಲೇ ಬರುವುದು. ಅವರಿಗೆ ಮಂಕಿಕ್ಯಾಪ್ ಮತ್ತಿತರ ಚಳಿ ತಡೆಯುವ ವಸ್ತ್ರಗಳನ್ನೆಲ್ಲಾ ಖರೀದಿಸಿ ಶಿಮ್ಲಾ ದಾರಿ ಹಿಡಿದರು.
ಅಲ್ಲಿ ಅಮ್ಮ ತನ್ನನ್ನು ತಾನು ಕಂಡುಕೊಳ್ಳತೊಡಗಿದರು. ಮನಸ್ಸೊಳಗೆ ಅಡಗಿದ್ದ ಮಗು ಹೊರಬಂದಿತ್ತು. ಅಮ್ಮನ ಖುಷಿ ಕಂಡು ಶರತ್ ಸಂಭ್ರಮಪಡುತ್ತಿದ್ದರು. ಮೂರು ದಿನದ ಪ್ರವಾಸ 11 ದಿನ ಆಯಿತು.
ಮನೆಗೆ ಬಂದರೆ ತಮ್ಮ ಬೈಯುತ್ತಿದ್ದ. ಅಪ್ಪ ನಗುತ್ತಿದ್ದರು.

60 ವರ್ಷದ ಗೀತಮ್ಮ ಬೈಕ್ ನಲ್ಲಿ ಮನಾಲಿಗೆ ಪಯಣ
ಈ ಎರಡು ಪ್ರವಾಸಗಳ ನಂತರ ಅಮ್ಮ ನಿಜಕ್ಕೂ ಖುಷಿಯಾದರು ಮತ್ತು ಅವರೇ ಮುಂದಿನ ಪ್ರವಾಸ ಪ್ಲಾನ್ ಗಳನ್ನು ಮಾಡತೊಡಗಿದರು. ತಿಂಗಳಿಗೊಂದು ಪ್ರವಾಸ ಹೋಗಬೇಕು ಅಂತ ಹೇಳುತ್ತಿದ್ದರು.
ಹೀಗೆ ಹೇಳುತ್ತಾ ಖುಷಿಯಾಗುತ್ತಾರೆ ಶರತ್. ಅದೇ ಖುಷಿಯಲ್ಲಿ ಮತ್ತೊಂದು ಅಸಾಧ್ಯ ಕತೆಯನ್ನು ಅವರು ಹೇಳಿದರು.
ಲೇಹ್ ಲಡಾಕ್ ನಿಂದ ಮನಾಲಿಗೆ ಹೋಗುವ ಟ್ರಿಪ್ ಅದು. ಆ ಟ್ರಿಪ್ ಕಾರಲ್ಲಿ ಹೋಗಲು ಸಾಧ್ಯವಿಲ್ಲ, ಬೈಕಲ್ಲೇ ಹೋಗಬೇಕು ಎಂದರು ಶರತ್. ಆದರೆ ಅಮ್ಮನಿಗೆ ಬೈಕ್ ನಲ್ಲಿ ಕೂರುವುದು ಆಗಲಿಕ್ಕಿಲ್ಲ ಅನ್ನಿಸಿತು. ಆಮೇಲೆ ಏನೋ ಸರಿ ಅಂತ ಒಪ್ಪಿಕೊಂಡರು. ಆ ಪ್ಲಾನ್ ಆದ ಮೇಲೆ ಸ್ವಲ್ಪ ತಯಾರಿ ಮಾಡಿಕೊಂಡೆವು. ದಿನಾ 5 ಕಿಮೀ ನಡೆಯುತ್ತಿದ್ದರು. ಕೊನೆಗ ಆ ದಿನ ಬಂತು. ಲೇಹ್ ಲಡಾಕ್ ಗೆ ಹೋಗಿ ಅಲ್ಲಿಂದ ಬೈಕ್ ಪಯಣ ಶುರುವಾಯಿತು. ಆರಂಭದಲ್ಲಿ ತುಂಬಾ ನಿಧಾನವಾಗಿ ಹೋದರು ಶರತ್. ಕೆಲವು ಕಿಮೀಗಳಾದ ಮೇಲೆ ಅಮ್ಮನಲ್ಲಿ ಬದಲಾವಣೆಯಾಗಿದ್ದು ಶರತ್ ಗಮನಕ್ಕೆ ಬಂತು.

ಶುರುವಲ್ಲಿ ಮುದುಡಿಕೊಂಡಂತೆ ಕೂತಿದ್ದ ಅಮ್ಮ ಈಗ ಹಾಡತೊಡಗಿದ್ದರು. ಖುಷಿಯಿಂದ ಕೈ ಚಾಚ ತೊಡಗಿದ್ದರು. ಅವರು ನಿಜಕ್ಕೂ ಬೈಕ್ ಪಯಣವನ್ನು ಆಸ್ವಾದಿಸುತ್ತಿದ್ದರು. ಅವರು ಹಕ್ಕಿಯಂತೆ ಹಾರುತ್ತಿರುವಂತೆ ನಂಗೆ ಭಾಸವಾಯಿತು ಅಂತ ಹೇಳುತ್ತಾರೆ ಶರತ್. ಮನಾಲಿ ತಲುಪಿದಾಗ ಮಗುವೇ ಆಗಿದ್ದರು. ಹಿಮವನ್ನು ಕೈಯಲ್ಲಿ ಹಿಡಿದು ಚೆಲ್ಲುತ್ತಿದ್ದರು. ಪುಟಾಣಿಯಂತೆ ವರ್ತಿಸುತ್ತಿದ್ದರು. ಬಾ ಹೋಗೋಣ ಅಂದ್ರು ಅವರು ಬರುತ್ತಿರಲಿಲ್ಲ.
ಅವತ್ತು ನನಗೆ ಒಂದು ಅರ್ಥವಾಯಿತು. ಈ ಜಗತ್ತಲ್ಲಿ ಆಗುವುದಿಲ್ಲ ಅನ್ನುವುದು ಯಾವುದೂ ಇಲ್ಲ. 60 ವರ್ಷದ ನನ್ನಮ್ಮ ಬೈಕಲ್ಲಿ ಕುಳಿತುಕೊಂಡು ಮನಾಲಿಗೆ ಬರಬಹುದಾದರೆ ಬೇರೆ ಯಾರಿಗೂ ಯಾಕೆ ಸಾಧ್ಯವಾಗುವುದಿಲ್ಲ. ನಾವು ಬೈಕಲ್ಲಿ ಕೂರೋಕಾಗಲ್ಲ, ನಡೆಯೋಕಾಗಲ್ಲ ಎಂದೆಲ್ಲಾ ಹೇಳುತ್ತಿರುತ್ತೇವೆ. ಆದರೆ ಅದೆಲ್ಲಾ ಸುಳ್ಳು ಅಂತ ನನ್ನಮ್ಮ ಕಲಿಸಿದುಳು ಎನ್ನುತ್ತಾರೆ ಶರತ್.

ಮನಸ್ಸು ತಾಕಿದ ಮಾತು
ಅಲ್ಲಿಂದ ಬಂದ ಮೇಲೆ ಫಾರಿನ್ ಟೂರ್ ಹೋದರು. ದುಬೈನಲ್ಲಿ ಹಳೇ ಮನೆ ಹುಡುಕಿಕೊಂಡು ಹೋಗಿ ಫೋಟೋ ತೆಗೆದುಕೊಂಡು ಬಂದರು. ಎಲ್ಲಾ ಕನಸಿನ ಊರುಗಳನ್ನೆಲ್ಲಾ ನೋಡಿ ಮುಗಿಸಿದರು.
ಒಮ್ಮೆ ಯಾವುದೋ ಊರಿನಲ್ಲಿ ವರ್ಷಾಂತ್ಯದ ಡಿಜೆ ಪಾರ್ಟಿಗೆ ಅಮ್ಮ, ಮಗ ಹೋಗಿದ್ದರು. ಅಲ್ಲಿ ಒಂದು ಹೊತ್ತಿನಲ್ಲಿ ಡಿಜೆ ಬಂದು ಕೇಳಿದ. ಯಾರು ನೀವು, ಇವರು ನಿಮ್ಮ ಅಮ್ಮನೇ ಎಂದು ಕೇಳಿದ. ಹೌದು ಎಂದೆ. ಅವನು ಸುಮ್ಮನೆ ಹೋದ. ಸ್ವಲ್ಪ ಹೊತ್ತಿನ ನಂತರ ಅಲ್ಲಿದ್ದ ಎಲ್ಲರೂ ನಮ್ಮನ್ನು ಸುತ್ತುವರಿದು ನಿಂತರು. ಎಲ್ಲರೂ ನಮಗಾಗಿ ಚಪ್ಪಾಳೆ ತಟ್ಟುತ್ತಿದ್ದರು. ಅದು ನನ್ನ ಜೀವನದ ಬೆಸ್ಟ್ ಮೊಮೆಂಟ್ ಎನ್ನುತ್ತಾರೆ ಶರತ್.
ಕತೆಯನ್ನೆಲ್ಲಾ ಹೇಳಿ ಶರತ್ ಕೊನೆಗೊಂದು ಮಾತು ಹೇಳಿದರು.

ಪ್ರತಿಯೊಬ್ಬರ ಅಮ್ಮನೂ ತನ್ನ ಮನೆ, ಸಂಸಾರವೆಂಬ ಬಾರ್ಡರ್ ನಿಂದ ಹೊರ ಬರೋಕೆ ಹಿಂಜರಿಯುತ್ತಾರೆ. ತಮ್ಮ ಆಸೆ, ಕನಸುಗಳನ್ನು ಮಕ್ಕಳಿಗಾಗಿ, ಕುಟುಂಬಕ್ಕಾಗಿ ಮರೆಯುತ್ತಾರೆ. ಒಳಗೆ ಕುಳಿತ ಅಮ್ಮಂದಿರನ್ನು ಹೊರಗೆ ಕರೆದುಕೊಂಡು ಬಂದರೆ, ಚೂರು ಪ್ರೋತ್ಸಾಹ ಕೊಟ್ಟರೆ ಅವರು ಮತ್ತೆ ತಮ್ಮ ಶಕ್ತಿ, ಆಸೆ, ಕನಸು ಕಂಡುಕೊಳ್ಳುತ್ತಾರೆ. ಖುಷಿಯಾಗುತ್ತಾರೆ. ಆ ಖುಷಿಗಿಂತ ದೊಡ್ಡದು ಏನಿದೆ ಜಗತ್ತಲ್ಲಿ.
ಅದನ್ನು ಕೇಳಿ ನನ್ನಮ್ಮನ ನೆನಪಾಯಿತು.
ಸ್ಫೂರ್ತಿದಾಯಿ.
ಇಂತಹದೊಂದು ಕನಸು ನನ್ನಲ್ಲಿಯೂ ಇದೆ..ಮನೆಯಲ್ಲಿ ಯೇ ಉಳಿದು ಬಿಡುವ ಅಮ್ಮ ತನ್ನ ಸಂಸಾರ ಅದೆ ಅವಳಿಗೆ ಜಗತ್ತು ಅನ್ನಿಸಿದೆ. ನಿಜಕ್ಕೂ ಶರತ್ ಅವರ ಯೋಜನೆ ಮೆಚ್ಚುವಂತದ್ದು.