ಕಾರು ಟೂರುದೂರ ತೀರ ಯಾನಬೆರಗಿನ ಪಯಣಿಗರುಸೈಕಲ್ ಹತ್ತು ಊರು ಸುತ್ತುಸ್ಮರಣೀಯ ಜಾಗ

ಮನೆಯಿಂದ ಹೊರಬರದ ಗೃಹಿಣಿಯ ಮಂತ್ರಾಲಯ ಟೂರು: ರೇಷ್ಮಾ ಶೆಟ್ಟಿ ಬರೆದ ಮೊದಲ ಪ್ರವಾಸದ ಮುಗ್ಧ ಕಥನ

ಎಲ್ಲರಿಗೂ ಟೂರು ಹೋಗುವ ಅದೃಷ್ಟ, ಭಾಗ್ಯ, ಅವಕಾಶ ಸಿಗುವುದಿಲ್ಲ. ಮನೆ ಮಕ್ಕಳು ಅಂತ ಮನೆಯಲ್ಲೇ ಇರುವ ಗೃಹಿಣಿಯರು ಯಾವತ್ತಾದರೊಂದು ದಿನ ಟೂರ್ ಹೋದಾಗ ಅನುಭವಿಸುವ ಖುಷಿ ಬೇರೆಯೇ. ಆ ಖುಷಿ, ಆತಂಕ, ತಲ್ಲಣದ ಬರಹವನ್ನು ಬರೆದಿದ್ದು ರೇಷ್ಮಾ ಜೆ ಶೆಟ್ಟಿ. ಅಡಿಗೆ ಮನೆಯಿಂದ ಹೊರಗೆ ಬಂದು ಅಪರೂಪಕ್ಕೆ ಧಾರ್ಮಿಕ ಪ್ರವಾಸ ಹೋಗುವ ಗೃಹಿಣಿಯರ ಪ್ರತಿನಿಧಿಯಂತಿರುವ ಮೂಡಿಗೆರೆಯ ರೇಷ್ಮಾ, ತನ್ನ ಅಕ್ಕನ ಮಗಳು ರೂಪಲ್ ಶೆಟ್ಟಿ ಬರೆದ ಬರಹದಿಂದ ಪ್ರೇರಿತರಾಗಿ ಬರೆದ ಮ್ಯಾಜಿಕ್ ಕಥೆ ಇದು. ಓದಿದ ಯಾರಿಗೇ ಆದರೂ ತಮ್ಮ ಮೊದಲ ಪ್ರವಾಸದ ನೆನಪು ಆಗದೇ ಇರದು.

ಆ ದಿನ ಕೆಲಸ ಮುಗಿಸಿ ಬಂದ ನನ್ನ ಯಜಮಾನರು ನಾವಿಬ್ಬರು ಡಿಸೆಂಬರ್ 31ಕ್ಕೆ ಮಂತ್ರಾಲಯಕ್ಕೆ ಹೋಗುವ ಅಂದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಮದುವೆ ಆಗಿ 7 ತಿಂಗಳ ತನಕ ಮೂಡಿಗೆರೆಯಿಂದ ಮಂಗಳೂರು, ಮಂಗಳೂರಿನಿಂದ ಮೂಡಿಗೆರೆ ಬಿಟ್ಟು ಬೇರೆಲ್ಲೂ ಹೋಗಿರದ ನಾನು ಮಂತ್ರಾಲಯಕ್ಕೆ ಹೋಗುತಿದ್ದೇನೆ ಎನ್ನುವುದೇ ತುಂಬಾ ಖುಷಿ ಕೊಟ್ಟಿತ್ತು.

ಮಂತ್ರಾಲಯ ಹೊರಡೋ ತಯಾರಿ ತುಂಬ ಉತ್ಸಾಹದಲ್ಲೇ ಮಾಡಿಕೊಂಡೆ. ಆಗ ಕೆಲವು ವರ್ಷಗಳ ಹಿಂದೆ ಮಂತ್ರಾಲಯಕ್ಕೆ ಮೂಡಿಗೆರೆಯಿಂದ ನೇರ ಬಸ್ ಸೌಲಭ್ಯ ಇತ್ತು. ಅದು ಬೆಳಿಗ್ಗೆ 4.30ಕ್ಕೆ ಹೊರಟು ಅಲ್ಲಿ ತಲುಪುವಾಗ ರಾತ್ರಿ 12.30 ಆಗುತ್ತಿತ್ತು. ನಾವಿಬ್ಬರು ಡಿಸೆಂಬರ್ 31ಕ್ಕೆ ಮೂಡಿಗೆರೆಯಿಂದ ಮಂತ್ರಾಲಯಕ್ಕೆ ಹೊರಟೆವು. 

ಇಬ್ಬರು ಮೊದಲನೇ ಬಾರಿ ಹೋಗುತ್ತಿರುವುದರಿಂದ ಅಲ್ಲಿ ಎಲ್ಲಿ ಉಳಿದುಕೊಳ್ಳುವುದೆಂದೇ ಗೊತ್ತಿರಲಿಲ್ಲ. ಅದು ಬೇರೆ ಹೊಸ ವರ್ಷದ ಸಂಭ್ರಮ. ರೂಮ್ ಗಳು ಖಾಲಿ ಇರಲಿಲ್ಲ. ಎಲ್ಲವೂ ದುಬಾರಿ ಆಗಿತ್ತು ಮತ್ತು ಭರ್ತಿ ಆಗಿದ್ದವು. ಆ ರಾತ್ರಿ ಮಂತ್ರಾಲಯದ ಬೀದಿ ಬೀದಿ ಎಲ್ಲಾ ಸುತ್ತಾಡಿ ನಾನು, ಇವರು ರೂಮ್ ಸಿಗುವದೇ ಎಂದು ಹುಡುಕಾಡಿದೆವು. ಮೊದಲೇ ಸ್ವಲ್ಪ ಭಯ ಸ್ವಭಾವದ ನಾನು, ಎಲ್ಲೂ ಹೋಗಿ ಅಭ್ಯಾಸ ಇರದ ನಾನು ನಡುಗತೊಡಗಿದೆ. ಏನಾಗುವುದೋ ಏನೋ ಗೊತ್ತಿಲ್ಲದ ಊರು ಬೇರೆ ಎಂದು ಮನಸಲ್ಲಿ ಇದ್ದ ಬದ್ದ ದೇವರಿಗೆ ಕೈ ಮುಗಿಯುತ್ತಿದ್ದೆ. ಬೇಗ ಒಂದು ರೂಮ್ ಸಿಗಲಪ್ಪಾ ಎಂದು ಬೇಡಿಕೊಂಡೆ. ನನ್ನ ಮೊರೆ ದೇವರಿಗೆ ಕೇಳಿಸಿರಬೇಕು. ಸುಮಾರು 2 ಗಂಟೆ ಅಷ್ಟು ಹೊತ್ತಿಗೆ ಒಂದುಕಡೆ ದಿನಕ್ಕೆ 1000 ರೂಪಾಯಿಗೆ ರೂಮ್ ಸಿಕ್ಕಿತು. ಈಗ ಅಷ್ಟಕ್ಕೆ ಸಿಗಲಿಕ್ಕಿಲ್ಲ.

ನಮ್ಮೆದುರು ಬಂದಿದ್ದು ಯಾರು!

ನಡೆದು ನಡೆದು ಕಾಲೆಲ್ಲ ಸೋತು ಹೋಗಿತ್ತು. ಸ್ನಾನ ಮಾಡಿ ಹಾಸಿಗೆಯಲ್ಲಿ ಬಿದ್ದಿದ್ದೊಂದೇ ಗೊತ್ತು ಬೆಳಿಗ್ಗೆ ಆಗಿದ್ದೇ ಗೊತ್ತಾಗಲಿಲ್ಲ. ನೋಡಿದರೆ ಆಗಲೇ 9 ಗಂಟೆ. ಬೇಗ ರೆಡಿಯಾಗಿ ರಾಘವೇಂದ್ರ ಸ್ವಾಮಿ ದರುಶನಕ್ಕೆ ಹೊರಟೆವು. ದೇವಸ್ಥಾನದ ಒಳಗೆ ಹೋಗಿ ಅಲ್ಲಿ ಪೂಜೆ ರಶೀದಿ ಹಿಡಿದು ಪೂಜೆ ಮಾಡಲು ಹೊರಟೆವು. ಅಲ್ಲಿಯವರೆಗೂ ಇದ್ದ ಹಿಂದಿನ ದಿನದ ದಣಿವು ಆಯಾಸ ಎಲ್ಲಾ ಸ್ವಾಮಿ ದರ್ಶನದಿಂದ ಮಾಯವಾಗಿತ್ತು. ದೇವರಿಗೆ ಸುತ್ತು ಹೊಡೆದು ಗರ್ಭಗುಡಿ ಹತ್ತಿರ ಇರುವ ಒಬ್ಬ ಭಟ್ಟರ ಹತ್ರ ನಾವು ಮಾಡಿಸಿದ ರಸೀದಿ ತೋರಿಸಿ ಪೂಜೆ ಬಗ್ಗೆ ಕೇಳಿದೆವು. ಅವರೋ ಯಾವ ಮೂಡಿನಲ್ಲಿ ಇದ್ದರೋ ಗೊತ್ತಿಲ್ಲ. ಆ ಭಟ್ಟರು ಒಂದು ತರಹ ಒರಟಾಗಿ ಸರಿಯಾದ ಮಾಹಿತಿಯನ್ನೂ ಕೊಡಲಿಲ್ಲ. ನಮಗಿಬ್ಬರಿಗೂ ತುಂಬಾ ಬೇಜಾರಾಯಿತು. ನನ್ನ ಯಜಮಾನರು ಹೊರಗಡೆ ಬಂದು ದೇವಸ್ಥಾನದ ಸುತ್ತು ಹೊಡೆಯುತ್ತ ಬೇಜಾರಿನಲ್ಲಿ, ‘ಇಂಥ ಒಳ್ಳೆ ಪವಿತ್ರವಾದ ಜಾಗದಲ್ಲಿ ಪೂಜೆ ಮಾಡುವವರು ಈರೀತಿ ಮಾತನಾಡುವುದ? ನಮಗೆ ಎಲ್ಲಿ ಪೂಜೆ ಮಾಡಿಸಬೇಕೆಂದು ಗೊತ್ತಿದ್ದರೆ ಇವರ ಹತ್ತಿರಾ ಕೇಳುತಿದ್ದೆವಾ? ಇವರಿಗೆಲ್ಲ ಆ ರಾಘವೇಂದ್ರ ಸ್ವಾಮಿಯೇ ಬುದ್ಧಿ ಕೊಡಬೇಕಷ್ಟೆ” ಎಂದರು. ಅದಾಗಿ 5 ನಿಮಿಷ ಆಗಿರಲಿಲ್ಲ ಅಷ್ಟರಲ್ಲಿ ಯಾರು ನಮ್ಮ ಹತ್ತಿರ ಒರಟಾಗಿ ಮಾತನಾಡಿದರೋ ಅವರೇ ನಮ್ಮ ಮುಂದೆ ಬಂದು ತುಂಬಾ ಸೌಜನ್ಯದಿಂದ “ನೀವು ಮಾಡಿಸಿದ ಪೂಜೆ ಇರುವುದು ಬೆಳಿಗ್ಗೆ 5 ಗಂಟೆಗೆ ನಾಳೆ ಬೆಳಿಗ್ಗೆ ಪ್ರಾಂಗಣದ ಹತ್ತಿರ ಇರುವ ಹಾಲ್ ನಲ್ಲಿ ಪೂಜೆ ಮಾಡುತ್ತಾರೆ. ನೀವು ಬೇಗನೆ ಬಂದು ಪೂಜೆ ಮಾಡಿಸಿ” ಅಂತ ಹೇಳಿ ಹೊರಟೇ ಹೋದರು. ನಾನೂ ಇವರೂ ಮುಖ ಮುಖ ನೋಡಿಕೊಂಡೆವು. ಸ್ವಲ್ಪ ಹೊತ್ತಿಗೆ ಮುಂಚೆ ಅಷ್ಟು ಒರಟಾಗಿ ಮಾತನಾಡಿದ ಭಟ್ಟರು ಇವರೇನಾ! ನಿಜವಾಗಲೂ ಇದು ರಾಘವೇಂದ್ರ ಸ್ವಾಮಿ ಮಹಿಮೆಯೇ ಇರಬೇಕೆಂದು ಅನ್ನಿಸಿದ್ದಂತೂ ಸುಳ್ಳಲ್ಲ. 

ದೇಗುಲದ ಪ್ರಾಂಗಣದಲ್ಲಿ ಮಾನವೀಯತೆ

ಆಮೇಲೆ ದೇವಸ್ಥಾನ ಎಲ್ಲಾ ಸುತ್ತು ಹೊಡೆದು ಮಂತ್ರಾಲಯ ಬೀದಿ ಎಲ್ಲಾ ನೋಡಿಕೊಂಡು ಬರೋಣವೆಂದು ಹೊರಟೆವು. ಅಲ್ಲಿ ಒಂದು ಅಂಗಡಿಯಲ್ಲಿ ಒಬ್ಬರ ಪರಿಚಯವಾಯಿತು. ಅವರ ಹೆಸರು ನೆನಪಿಲ್ಲ. ಈಗ ರೆಡ್ಡಿ ಅನ್ನೋದಷ್ಟೇ ನೆನಪಿದೆ. ಕನ್ನಡದಲ್ಲೇ ಮಾತನಾಡಿದರು. ಇನ್ನೊಂದು ಸಾರಿ ಬಂದರೆ ನಮ್ಮಲ್ಲೆ ಉಳಿಯಬೇಕು ನೀವು ಅಂತಾನೂ ಹೇಳಿದರು. ಗುರುತು ಪರಿಚಯ ಇಲ್ಲದ ನಮ್ಮನ್ನು ತುಂಬಾ ಆತ್ಮಿಯವಾಗೇ ನೋಡಿಕೊಂಡರು. ಆಗ ಅನ್ನಿಸಿತ್ತು ಇನ್ನು ಮಾನವೀಯತೆ ಉಳಿದುಕೊಂಡಿದೆ ಎಂದು. 

ನೋಡದೇ ಉಳಿದ ವಿಧಾನಸೌಧ 

ಮಾರನೇ ದಿನ ಬೇಗ ಎದ್ದು ಪೂಜೆ ಮುಗ್ಸಿ ರಾತ್ರಿ ಮೂಡಿಗೆರೆ ಹೊರಡುವುದೆಂದು ಬಸ್ ಸ್ಟಾಂಡ್ ಗೆ ಬಂದರೆ ಮೂಡಿಗೆರೆಗೆ ನಾಳೆ ಬಸ್ ನೈಟ್ ಇಲ್ಲ ಅಂದ್ಬಿಟ್ಟರು. ಇನ್ನೇನ್ ಮಾಡೋದು ಬೆಂಗಳೂರೇ ಹೋಗೋಣ ಅಲ್ಲಿಂದ ಮೂಡಿಗೆರೆ ಹೋದರೆ ಆಯಿತು ಅಂತ ಬೆಂಗಳೂರು ಬಸ್ ಹತ್ತಿದೆವು. ಬೆಂಗಳೂರಿನಲ್ಲಿ ಇವರ ಇಬ್ಬರು ಚಿಕ್ಕಮ್ಮಂದಿರು ಇದ್ದರು. ಹಾಗಾಗಿ ಅಲ್ಲಿ ಹೋಗುವ ಅಂತ ಬಸ್ ಹತ್ತಿದೆವು. ಬಸ್ ಹೊರಟು ಸುಮಾರು 3 ಗಂಟೆ ಆಗುವಾಗ ಯಜಮಾನ್ರು ನನ್ನನ್ನು ಎಬ್ಬಿಸಿ ಅದೇ ನೋಡು ವಿಧಾನಸೌಧ ಅಂತ ಬಸ್ಸಲ್ಲೇ ಕೂತು ತೋರಿಸಿದರು. ನನಗೋ ನಿದ್ದೆ ಕಣ್ಣಲ್ಲಿ ಏನು ನೋಡಿದ್ದೀನಿ ಅಂತಾನೇ ಗೊತ್ತಾಗಲಿಲ್ಲ. ಇವತ್ತಿನವರೆಗೂ ಹತ್ತಿರಹೋಗಿ ವಿಧಾನಸೌಧ ನೋಡುವ ಭಾಗ್ಯ ನನಗೆ ಸಿಗ್ಲೇ ಇಲ್ಲ. 

ಅಲ್ಲಿಂದ ಸುಮಾರು 4 ಗಂಟೆಗೆ ಬೆಂಗಳೂರು ಬಸ್ ಸ್ಟಾಂಡಲ್ಲಿ ಇಳಿದು ಇವರ ಚಿಕ್ಕಮ್ಮನ ಮನೆಗೆ ಹೋಗಲು ರಿಕ್ಷಾ ಹತ್ತಿದೆವು. ಆ ರಿಕ್ಷಾದವನೋ ಯಾವುದೋ ಸಂದಿ ಗೊಂದಿ ಕರ್ಕೊಂಡ್ ಹೋಗಿ ಯಾವುದೋ ಜಾಗದಲ್ಲೇ ನಿಲ್ಲಿಸಿ ಇದೇ ಕಮ್ನಳ್ಳಿ ಅಂತ ಅಂದ. ನಮಗೆ ಅದು ಎಲ್ಲಿ ಅಂತ ಗೊತ್ತಾಗಲಿಲ್ಲ. ಬೆಳಕಾಗೋತನಕ ಕಾಯಲೇಬೇಕಿತ್ತು ನಾವು ಮನೆ ಹುಡುಕಲು. ನನಗಾಗಲೇ ಎದೆ ಡವಡವ ಅನ್ನೋದಿಕ್ಕೆ ಶುರು ಆಗಿತ್ತು. ಮತ್ತೆಲ್ಲಿ ತಗ್ಲಾಕ್ಕೊಂಡು ಬಿಟ್ಟೆವಪ್ಪ ಅಂತ. ನಾವು ರಾಘವೇಂದ್ರ ಸ್ವಾಮಿನಾ ನೋಡಿಬಂದ ಪುಣ್ಯವೋ ಏನೋ.. ಮನೆ ಹುಡುಕೋದು ನೋಡಿ, ಬೆಳಗಿನ ವಾಕ್ ಹೊರಟ ಒಂದು ಮಹಿಳೆ ನಿಂತು ನಮ್ಮ ಹತ್ರ ಯಾರ ಮನೆ ಹುಡುಕುತ್ತಿದ್ದಿರಾ ಅಂತ ಕೇಳಿದರು. ಅಡ್ರೆಸ್ ಹೇಳಿದಾಗ ಓಹ್ ಅವರ ಮನೇನ ಬನ್ನಿ ತೋರಿಸ್ತಿನಿ ಅಂತ ಸರಿಯಾದ ಮನೆಗೆ ಕರ್ಕೊಂಡ್ ಹೋದ್ರು. ಬದುಕಿದೆಯಾ ಬಡಜೀವ ಅನ್ನಿಸಿತ್ತು. 

ಮೊದಲ ಸಲ ಮಂತ್ರಾಲಯಕ್ಕೆ ಹೋದ ಖುಷಿ ಯಾವತ್ತು ಮರೆಯಲಾಗದು.

Related Articles

One Comment

Leave a Reply

Your email address will not be published. Required fields are marked *

Back to top button