ಬೆರಗಿನ ಪಯಣಿಗರುವಿಂಗಡಿಸದಸ್ಫೂರ್ತಿ ಗಾಥೆ

ಪುಟ್ಟ ಮಗು ಋತು ಜತೆ ಜಗತ್ತು ಸುತ್ತುವ ಮಾದರಿ ಅಮ್ಮ ಹಿಪ್ಪೀ ರಾಣಿ

ಪುಟ್ಟ ಮಗುವಿನ ಜತೆ ಪ್ರವಾಸ ಕಷ್ಟ ಅನ್ನುವುದು ಬಹುತೇಕ ಅಮ್ಮಂದಿರ ಮಾತು. ಆದರೆ ಹಿಪ್ಪೀ ರಾಣಿ ಅಲಿಯಾಸ್ ಶ್ರುತಿ ಯೋಚನೆ ಎಲ್ಲಕ್ಕಿಂತ ಭಿನ್ನ ಮತ್ತು ವಿಶಿಷ್ಟ. ಮೂಲತಃ ಪ್ರವಾಸ ಪ್ರಿಯೆಯಾಗಿರುವ ಇವರು ಮಗುವಾದ ಮೇಲೆಯೂ ತನ್ನ ಪ್ರವಾಸ ಪ್ರೀತಿ ಬಿಟ್ಟಿಲ್ಲ. ಮಗಳು ಋತು ಹುಟ್ಟಿದ ಆರು ತಿಂಗಳಲ್ಲೇ ಮಗಳನ್ನೆತ್ತಿಕೊಂಡು ಪ್ರವಾಸ ಹೊರಟ ಶ್ರುತಿಯ ಜೀವನದ ಕುರಿತ ಲವಲವಿಕೆಯ ಬರಹ ಬರೆದಿದ್ದು ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ನವ್ಯಶ್ರೀ ಶೆಟ್ಟಿ.

“ಕರುನಾಡು ಸುತ್ತಬೇಕು” ಎನ್ನುವ ಆಸೆ ಹಿಪ್ಪಿ ರಾಣಿ ಖ್ಯಾತಿಯ ಶ್ರುತಿ ಅವರದು. “ಹೊಸ ಹೊಸ ಜಾಗಗಳನ್ನು, ಹೊಸದಾದ ರೀತಿಯಲ್ಲಿ ನೋಡುವುದು ಇಷ್ಟ. ಜನರು ಸಾಮಾನ್ಯವಾಗಿ ಪ್ರಯಾಣಿಸುವ ರೀತಿಗಿಂತ ವಿಭಿನ್ನವಾಗಿ ಪ್ರಯಾಣ ಮಾಡುವ ಆಸೆ” ಎನ್ನುತ್ತಾರೆ ಶ್ರುತಿ.

ಶ್ರುತಿ ಮೂಲತಃ ಬಾಗಲಕೋಟೆ ಜಿಲ್ಲೆಯವರು. ಪ್ರಸುತ್ತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪತಿ ಮತ್ತು ಮಗಳೊಂದಿಗೆ ಟ್ರಾವೆಲ್ ಮಾಡುವುದು ಬಹು ಇಷ್ಟ. ಪ್ರಯಾಣಕ್ಕೆ ಯಾವುದೇ ರೀತಿಯ ಮಾನದಂಡ ಹಾಕಿಕೊಳ್ಳದೆ,ತನಗಿಷ್ಟ ಬಂದ ರೀತಿಯಲ್ಲಿ ಪ್ರಯಾಣ ಮಾಡುವ ಇವರು ‘ಹಿಪ್ಪಿ ರಾಣಿ’ಅಂತನೇ ಫೇಮಸ್.

ಟ್ರಾವೆಲಿಂಗ್ ಕನಸು ಇವರ ಒಳಗೆ ಹುಟ್ಟಿಕೊಂಡ ಆಸೆ. ನಗರ ಪ್ರದೇಶದ ಜಂಜಾಟದ ಬದುಕಿನೊಳಗೆ, ತನ್ನ ನಿತ್ಯದ ದಿನಚರಿ ಮೀರಿ ಬದುಕಬೇಕೆಂದು ಅನ್ನಿಸಿದಾಗೆಲ್ಲ ಪತಿಯ ಜೊತೆಗೂಡಿ ಟ್ರಾವೆಲಿಂಗ್ ಮಾಡುತ್ತಾರೆ.

ಪ್ರವಾಸದ ಸಮಯದಲ್ಲಿ ಯಾವುದೇ ಪೂರ್ವ ನಿರ್ಧರಿತ ಯೋಜನೆ ಹಾಕಿಕೊಳ್ಳದೆ ಟ್ರಾವೆಲ್ ಮಾಡುವ ಶ್ರುತಿ ಅವರಿಗೆ ಕರುನಾಡನ್ನು ಸಂಪೂರ್ಣವಾಗಿ ನೋಡಬೇಕು ಎನ್ನುವ ಆಸೆ.ತುಂಬಾ ಪ್ರಸಿದ್ದ ಸ್ಥಳಗಳಿಗೆ ಹೋಗುವುದಕ್ಕಿಂತ,ಸಾಕಷ್ಟು ವಿಭಿನ್ನತೆ ಹೊಂದಿದ್ದು ಜನ ಮಾನಸದಿಂದ ದೂರ ಇರುವ ಸ್ಥಳಗಳಿಗೆ ಹೋಗುವುದೆಂದರೆ ಇಷ್ಟ. ಪ್ರತಿ ಬಾರಿ ಯಾವುದಾದರೂ ಪ್ರದೇಶಕ್ಕೆ ಹೋದಾಗ ಆ ಸ್ಥಳದ ವಿಶೇಷತೆ ತಿಳಿದುಕೊಳ್ಳುವುದು, ಅಲ್ಲಿನ ಅನುಭವದ ಸುಂದರ ಕಥೆಗಳನ್ನು ಇತರರ ಬಳಿ ಹಂಚಿಕೊಳ್ಳುವುದು ಹೊಸ ಅನುಭವ ನೀಡುತ್ತದೆ ಎಂದು ಹೇಳುತ್ತಾರೆ.

ಪ್ರವಾಸದ ಸಮಯದಲ್ಲಿ ಹೆಚ್ಚಾಗಿ ಸ್ಥಳೀಯವಾಗಿ, ಸಿಗುವ ಸೌಲಭ್ಯ ಬಳಸಿಕೊಳ್ಳುವುದೇ ಉತ್ತಮ. ಅದು ಹಣದ ಉಳಿತಾಯದ ಜೊತೆ ಜೊತೆಗೆ ಸ್ಥಳೀಯ ಸಾರಿಗೆ ವಾಹನದಲ್ಲಿ ಸಂಚರಿಸುವ ಅನುಭವ, ಅಲ್ಲಿನ ರುಚಿ ರುಚಿ ಖಾದ್ಯದ ಆಸ್ವಾದವನ್ನು ಸವಿದಂತೆ ಆಗುತ್ತದೆ ಎನ್ನುವುದು ಇವರ ಅನುಭವದ ಮಾತು.

“ಆಗತಾನೇ ಮಳೆಗಾಲ ಮುಗಿದಿರಬೇಕು,ಚಳಿಗಾಲ ಸನ್ನಿಹಿತವಾಗಿರುವ ಸಮಯವಾಗಿರಬೇಕು. ಆ ಸಮಯದಲ್ಲಿ ಟ್ರಾವೆಲಿಂಗ್ ಮಾಡುವುದು ಮನಸಿಗೆ ಮುದ ನೀಡುತ್ತದೆ. ಅದೊಂದು ಥ್ರಿಲ್ಲಿಂಗ್ ಅನುಭವ ಕೊಡುತ್ತದೆ ಎನ್ನುತ್ತಾರೆ” ಶ್ರುತಿ.

ಟ್ರಾವೆಲಿಂಗ್ ಬಗ್ಗೆ ಆಸಕ್ತಿ ಹೊಂದಿರುವ ಇವರಿಗೆ ಪತಿಯ ಊರು ಕಮಲಶಿಲೆ ಬಹು ಇಷ್ಟ. ನಿಸರ್ಗದ ಎಲ್ಲಾ ವೈಶಿಷ್ಟ್ಯಗಳನ್ನು ಬಾಚಿ ತಬ್ಬಿಕೊಂಡ ಹಾಗೆ ಇರುವ ಕಮಲಶಿಲೆ ಇವರಿಗೆ ಅತ್ಯಂತ ಆಪ್ತವಾದ ಸ್ಥಳ. ತನ್ನ ಮಗುವಿಗೆ ವರ್ಷ ತುಂಬುವ ಮುನ್ನವೇ ಕಮಲಶಿಲೆಯನ್ನೂ ತೋರಿಸಿದ್ದು, ಕಡಲ.ಕಿನಾರೆಯಲ್ಲಿ ಪುಟ್ಟ ಕಂದನನ್ನು ಆಡಿಸಿದ್ದು ಇವರ ಟ್ರಾವೆಲಿಂಗ್ ಪ್ರಪಂಚದ ಸಿಹಿ ನೆನಪು.ಪುಟ್ಟ ಕಂದಮ್ಮನನ್ನು ಕೊಡಗು, ಹಂಪಿಗೆ ಕರೆದುಕೊಂಡು ಹೋಗಿದ್ದು ಸದಾ ನೆನಪಿನಲ್ಲಿ ಇಡುವ ಕ್ಷಣ. ಮಗಳಿಗೆ ಹೊಸ ಹೊಸ ಸ್ಥಳ ತೋರಿಸಬೇಕು, ಅದ್ಭುತ ಎನ್ನುವ ಸ್ಥಳ ಪರಿಚಯ ಮಾಡಿಸಬೇಕೆಂಬ ಹಂಬಲ.

ಸ್ನೇಹಿತರ ಜೊತೆ ಟ್ರಿಪ್ ಹೋದರೆ ತಾವೇ ಅಡುಗೆ ಮಾಡಿಕೊಳ್ಳುವುದು ಇಷ್ಟ. ಐಷಾರಾಮಿ ಕಾರುಗಳಲ್ಲಿ ಪ್ರವಾಸ ಮಾಡುವುದನ್ನು ಬಿಟ್ಟು, ಸ್ಥಳೀಯವಾಗಿ ಸಿಗುವ ವಾಹನಗಳನ್ನು ಬಾಡಿಗೆ ಪಡೆದುಕೊಂಡು ಪ್ರಯಾಣ ಮಾಡುವುದು ಇವರಿಗೆ ಅಚ್ಚುಮೆಚ್ಚು. ಈ ಸಮಯದಲ್ಲಿ  ಶ್ರುತಿ ಅವರಿಗೆ ಪ್ರಯಾಣ ಮಾರ್ಗದಲ್ಲಿ ಒಂದಷ್ಟು ಎಡವಟ್ಟು, ಸಾಹಸ, ಘಟನೆ ಕೂಡ ಎದುರಾಗಿದೆ, ಅವುಗಳಲ್ಲಿ ಊಟಿ ಪಯಣ ಸದಾ ನೆನಪಿನಲ್ಲಿ ಉಳಿಯುತ್ತದೆ. “No adventure is complete without challenge” ಎನ್ನುತ್ತಾರೆ ಶ್ರುತಿ.

ಟ್ರಾವೆಲಿಂಗ್ ಸಮಯ ನಾವು ನಿಸರ್ಗದ ಜೊತೆ ಬೆರೆಯುವಂತೆ ಆಗಬೇಕು. ಸ್ಥಳ ನೋಡುತ್ತಾ ಹೊಸತನ್ನು ಕಲಿಯುತ್ತಿರಬೇಕು. ಇಲ್ಲವೆಂದರೆ ಅದು ಇತರರ ಹಾಗೆ ಸಾಮಾನ್ಯ ಪ್ರವಾಸ ಆಗಿರುತ್ತೆ .ಯಾವುದೇ ವಿಶೇಷತೆ, ಮಜಾ ಇರುವುದಿಲ್ಲ. ನಿಸರ್ಗವನ್ನು ಇಷ್ಟ ಪಡುವ ಯುವ ಸಮುದಾಯ, ಪ್ರವಾಸದ ವೇಳೆ ಐಷಾರಾಮಿ ಸುತ್ತಾಟ ಇಷ್ಟ ಪಡುವ ಬದಲು ಪ್ರವಾಸಿ ಸ್ಥಳದ ಸುತ್ತಲಿನ ವಾತಾವರಣಕ್ಕೆ ಹೊಂದಿಕೊಂಡು ಇರುವುದು ಒಳಿತು. ಅದು ಪ್ರತಿ ಬಾರಿ ಹೊಸ ಲೋಕಾನುಭವ ನೀಡುತ್ತದೆ ಎನ್ನುತ್ತಾರೆ “ಹಿಪ್ಪೀ  ರಾಣಿ” ಖ್ಯಾತಿಯ ಶ್ರುತಿ.

Related Articles

Leave a Reply

Your email address will not be published. Required fields are marked *

Back to top button