ಕೊಟ್ಟಿಗೆಹಾರದ ನೀರುದೋಸೆ: ನಂದೀಶ್ ಬಂಕೇನಹಳ್ಳಿ ರುಚಿಕಟ್ಟು ಬರಹ
ನಂದೀಶ್ ಬಂಕೇನಹಳ್ಳಿ ಯುವ ಕತೆಗಾರ, ಪತ್ರಕರ್ತ. ಕೊಟ್ಟಿಗೆಹಾರ, ಮೂಡಿಗೆರೆಯನ್ನು ವಿಸ್ಮಯದ ಕಣ್ಣುಗಳಿಂದ ನೋಡುತ್ತಾ ಬರೆಯುತ್ತಾ ಬರುತ್ತಿರುವ ಉದಯೋನ್ಮುಖ ಬರಹಗಾರ.
ಒಂದೊಂದು ಊರಿಗೆ ಒಂದೊಂದು ಥರದ ಕ್ಯಾರೆಕ್ಟರ್ ಇರುತ್ತದೆ. ಇನ್ನು ಕೆಲವು ಊರುಗಳು ಕೆಲವು ತಿಂಡಿಗಳಿಗೇ ಪ್ರಸಿದ್ಧವಾಗಿರುತ್ತವೆ. ಆ ಊರಿಗೆ ಹೋದರೆ ಆ ತಿಂಡಿ ತಿನ್ನದೇ ಅಲ್ಲಿಂದ ವಾಪಸ್ ಬರುವಂತಿಲ್ಲ. ಬಂದರೂ ಆ ಊರಿಗೆ ಹೋಗಿ ಆ ತಿಂಡಿ ತಿಂದಿಲ್ವಾ ಅನ್ನೋ ಉದ್ಘಾರ ಕೇಳಿ ಬಂದರೂ ಅಚ್ಚರಿ ಇಲ್ಲ. ಹೀಗೆ ಆಯಾಯ ಊರಿನ ಹೆಸರಿಗೆ ತಾಗಿಕೊಂಡಿರುವ ತಿಂಡಿಗಳ ಬಗ್ಗೆ, ಆ ಊರಿನ ಬಗ್ಗೆ ಪರಿಚಯ ಕೊಡುವ ಬರಹಗಳ ಸರಣಿ ಇದು. ಆರಂಭದಲ್ಲಿ ಮೂಡಿಗೆರೆಯ ಕೊಟ್ಟಿಗೆರೆಯ ನೀರುದೋಸೆ ಬಗ್ಗೆ ನಂದೀಶ್ ಬರೆದಿದ್ದಾರೆ.
ಕರಾವಳಿಯಿಂದ ಬರುವವರಿಗೆ ಮಲೆನಾಡಿನ ಹೆಬ್ಬಾಗಿಲಿನಂತಿರುವ ಕೊಟ್ಟಿಗೆಹಾರ, ಪಶ್ಚಿಮಘಟ್ಟಗಳ ಒಡಲಲ್ಲಿರುವ ಪುಟ್ಟ ಊರು.ಅತ್ತ ದೊಡ್ಡ ಪಟ್ಟಣವೂ ಅಲ್ಲದ, ಇತ್ತ ಹಳ್ಳಿಯೂ ಅಲ್ಲದ ಕೊಟ್ಟಿಗೆಹಾರದ ವಿಶೇಷತೆ ಇರುವುದು ಕರ್ನಾಟಕದ ಪ್ರಸಿದ್ದ ತೀರ್ಥಕ್ಷೇತ್ರಗಳಾದ ಧರ್ಮಸ್ಥಳ ಹೊರನಾಡು ಶೃಂಗೇರಿ ಮುಂತಾದ ಕಡೆಗಳಿಗೆ ಹೋಗಬೇಕಾದರೇ ಕೊಟ್ಟಿಗೆಹಾರ ಹಾದು ಹೋಗಬೇಕು ಎಂಬುದು.ಹಾಸನ ಚಿಕ್ಕಮಗಳೂರಿನಿಂದ ಬರುವ ಪ್ರವಾಸಿಗರಾಗಲಿ, ಕರಾವಳಿ ಭಾಗದಿಂದ ಬರುವ ಪ್ರವಾಸಿಗರಿಗೆ ಕೊಟ್ಟಿಗೆಹಾರ ವೃತ್ತ ಒಂದು ರೀತಿಯ ರಿಪ್ರೆಸ್ ಸೆಂಟರ್.ಅದರಲ್ಲೂ ಚಾರ್ಮಾಡಿ ಮಾರ್ಗವಾಗಿ ಕರಾವಳಿಯಿಂದ ಬರುವ ಪ್ರಯಾಣಿಕರು ಕ್ಷಣಕಾಲ ಕೊಟ್ಟಿಗೆಹಾರದಲ್ಲಿ ಇಳಿದು ಬಿಸಿ ಬಿಸಿ ನೀರುದೋಸೆ ತಿಂದು ಕಾಫಿ ಕುಡಿದರೇ, ಪ್ರಯಾಣದ ದಣಿದು ಕಳೆದು ನವೋಲ್ಲಾಸ ಮೂಡುತ್ತದೆ.ಅಷ್ಟಕ್ಕೂ ಕೊಟ್ಟಿಗೆಹಾರದ ನೀರುದೋಸೆ ಯಾಕಷ್ಟು ಪ್ರಸಿದ್ದಿ? ಎಲ್ಲಾ ಕಡೆಗಳಲ್ಲಿ ಮಾಡುವಂತೇ ಇಲ್ಲಿಯೂ ನೀರುದೋಸೆ ಮಾಡುತ್ತಾರೆ ಎಂಬುದು ನಿಜವಾದರೂ, ಆ ನೀರುದೋಸೆಗೆ ರುಚಿ ಸ್ವಾದ ಪ್ರಸಿದ್ದಿ ಬರಲು ಕಾರಣ ಬೇರೆಯೇ ಇದೆ.ಅದು ಚೈತನ್ಯ ತುಂಬುವ ಸುತ್ತಲಿನ ಹಚ್ಚಸಿರು,ಪ್ರಯಾಣದ ದಣಿವಿನಿಂದ ಉಂಟಾದ ಹಸಿವು.ಸುತ್ತಲಿನ ಪಶ್ಚಿಮಘಟ್ಟಗಳ ಚೆಲುವನ್ನು ಆಸ್ವಾದಿಸುತ್ತಾ, ಆ ಚಳಿಯಲ್ಲಿ ಬಿಸಿಬಿಸಿ ಹಬೆಯಾಡುವ ನೀರುದೋಸೆ ಎಂಥಾವರಿಗೂ ರುಚಿಸಲೇ ಬೇಕು.ಅದರ ಜೊತೆಗೆ ಚಕಚಕನೇ ದೋಸೆ ಹಾಕುವವರ ಕೈಚಳಕದ ಮೋಡಿಯೂ ನೀರುದೋಸೆಯ ಪ್ರಸಿದ್ದಿಗೆ ಕಾರಣ ಎಂದರೆ ತಪ್ಪಾಗಲಾರದು.ಕೊಟ್ಟಿಗೆಹಾರಕ್ಕೆ ಬಂದು ನೀರುದೋಸೆ ತಿನ್ನದೇ ಹೋದರೆ ನಿಮ್ಮ ಪ್ರವಾಸ ಅಪೂರ್ಣವಾಗುವುದು ಎಂದರೆ ಅತಿಶಯೋಕ್ತಿಯಾಗಲಾರದು.