ಸಂಸ್ಕೃತಿ, ಪರಂಪರೆ

ಹೊಯ್ಸಳ ರಾಜರು ನಿರ್ಮಿಸಿದ ವಿಶಿಷ್ಟ ದೇಗುಲ ಹರಿಹರೇಶ್ವರ: ಸುವರ್ಣಲಕ್ಷ್ಮೀ ಬರೆದ ದೇಗುಲ ಪರಿಚಯ

ಒಮ್ಮೊಮ್ಮೆ ನಾವು ಯಾವುದನ್ನೂ ಪ್ಲಾನ್ ಮಾಡಿರುವುದಿಲ್ಲ. ಎಲ್ಲಿಗೋ ಹೋದಾಗ ಮತ್ತೆಲ್ಲಿಗೋ ಹೋಗುವ ಅವಕಾಶ ಸಿಗುತ್ತದೆ. ಹಾಗೆ ದಾರಿಯಲ್ಲಿ ಸಿಕ್ಕಿ ಮನಸ್ಸಲ್ಲಿ ಉಳಿದ ಅಪರೂಪದ ದೇಗುಲದ ಬಗ್ಗೆ ಬರೆದಿದ್ದಾರೆ ಸುವರ್ಣಲಕ್ಷ್ಮೀ. ಕೋಲಾರ ಜಿಲ್ಲೆಯ ಅಡವಿಚಂಬಕೂರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ  

ಕೆಲಸ ನಿರ್ವಹಿಸುತ್ತಿರುವ ಇವರಿಗೆ ಪುಸ್ತಕ ಓದುವುದು ಇಷ್ಟ. ಸಾಹಿತಿಗಳನ್ನು ಭೇಟಿ ಮಾಡುವುದು, ಸಣ್ಣ ಸಣ್ಣ ಪ್ರವಾಸ ಕೈಗೊಳ್ಳುವ ಹವ್ಯಾಸ ಇಟ್ಟುಕೊಂಡಿರುವ ಅವರು ಬರೆದಿರುವ ದೇಗುಲ ದರ್ಶನ ಅನುಭವ.

ಮಧ್ಯಮ ವರ್ಗದ ಜನರಿಗೆ ಪ್ರವಾಸಕ್ಕೆ ಹೋಗಲೆಂದೇ ಸಮಯ ಹಾಗೂ ಹಣದ ಅನುಕೂಲ ಇರುವುದಿಲ್ಲ. ಹಾಗಾಗಿ ಮದುವೆ ಮುಂಜಿಗಳಿಗೆ ದೂರದಲ್ಲಿರುವ ಊರುಗಳಿಗೆ ಹೋದಾಗ ಅಲ್ಲಿ ಸಮೀಪದಲ್ಲಿ ಇರುವ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಅವಕಾಶ ಮಾಡಿಕೊಳ್ಳಬೇಕು. ಈ ರೀತಿ ನಮ್ಮ ಕುಟುಂಬ ನಮ್ಮ ಸ್ನೇಹಿತರಾದ ಈಶಪ್ಪ ಅವರ ಮದುವೆಗೆಂದು ಗದಗ ಜಿಲ್ಲೆಯ ಶಿರಟ್ಟಿ ತಾಲ್ಲೂಕು ಬೆಳ್ಳಟ್ಟಿ ಎಂಬ ಗ್ರಾಮಕ್ಕೆ ಹೋಗಿದ್ದೆವು. 

ಉತ್ತರ ಕರ್ನಾಟಕದ ಮದುವೆ ಅದೇ ಮೊದಲು ನೋಡಿದ್ದು ನಮಗೆ ಹೊಸ ಅನುಭವ ನೀಡಿತು.ಜೋಳದರೊಟ್ಟಿ, ಎಣ್ಣೆಗಾಯಿ, ಬೂಂದಿ, ಗುರೆಳ್ಳು ಚಟ್ನಿ ಪುಡಿ ಮದುವೆ ಊಟದ ವಿಶೇಷವಾಗಿತ್ತು. ಮದುವೆ ಮುಗಿಸಿ ವಾಪಸ್ ಊರಿಗೆ ಬರುವಾಗ ಉತ್ತರ ಕರ್ನಾಟಕದ ಹೆಬ್ಬಾಗಿಲಾದ ಹರಿಹರಕ್ಕೆ ಭೇಟಿ ನೀಡಿದೆವು. ದಾವಣಗೆರೆ ಹರಿಹರ ಅವಳಿ ನಗರಗಳಾಗಿದ್ದು ಹರಿಹರದಲ್ಲಿನ ಹರಿಹರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವುದು ನಮ್ಮ ಉದ್ದೇಶವಾಗಿತ್ತು . 

http://nammaharihar.blogspot.com/

ತುಂಗಭದ್ರಾ ದಡದಲ್ಲಿ ಹೊಯ್ಸಳ ರಾಜರು ನಿರ್ಮಿಸಿದ ಹರಿಹರೇಶ್ವರ ದೇವಸ್ಥಾನ ನಯನ ಮನೋಹರವಾಗಿದೆ. ಕುಸುರಿ ಕೆತ್ತನೆ ಅಮೋಘವಾಗಿದೆ. ಇಲ್ಲಿ ಒಂದೇ ರೀತಿಯ ಕೆತ್ತನೆ 60 ಕಂಬಗಳಿರುವುದು ವಿಶೇಷ. 

ದೇವಸ್ಥಾನದಲ್ಲಿ ಮೂಲಮೂರ್ತಿಯ ಅರ್ಧ ದೇಹ ಹರಿ ಹಾಗೂ ಇನ್ನರ್ಧ ಹರನ ದೇಹ ಇದ್ದು ಹರಿಹರೇಶ್ವರ ಎಂದು ಹೆಸರಿಸಲಾಗಿದೆ. ಮೂರ್ತಿ ಏಳು ಅಡಿ ಎತ್ತರವಿದ್ದು  ಕಣ್ಣುಗಳು ಮನುಷ್ಯರ ಕಣ್ಣುಗಳಂತೆಯೇ ಇವೆ. ಮತ್ತೊಂದು  ವಿಶೇಷ ಅಂದರೆ ದೇವರ ಮುಂದೆ ಎಡ, ಬಲ, ಮುಂದೆ ಎಲ್ಲಿ ನಿಂತು ನೋಡಿದರೂ ದೇವರು ನಮ್ಮನ್ನು ನೋಡುವಂತೆ ಭಾಸವಾಗುತ್ತದೆ.

ಕರಿಕಲ್ಲಿನ ಮೂರ್ತಿಗೆ ಇಂತಹ ಕಣ್ಣು ಕೆತ್ತಲಾದ ಶಿಲ್ಪಿಗೆ ನಮೋ ನಮಃ..  

ದೇವಾಲಯದ ಕಾಂಪೌಂಡ್ ಸಹ ಕಲಾತ್ಮಕವಾಗಿದೆ ಕೆತ್ತಲಾಗಿದೆ.ಮೇಲ್ಛಾವಣಿಯನ್ನೂ ಸಹ ಬಿಡದೆ ಶಿಲ್ಪಿಗಳು ಅವರ ಕೌಶಲ ಮೆರೆದಿದ್ದಾರೆ. ದೇವಾಲಯದ ಇಂಚು ಇಂಚೂ ಕುಸುರಿ ಕೆತ್ತನೆ ಇದ್ದು ಕಣ್ಮನ ತಣಿಸುತ್ತದೆ. ದೇವಾಲಯದ ಆವರಣದಲ್ಲಿ ಎರಡು ದೊಡ್ಡ ದೊಡ್ಡ ಕಲ್ಲಿನ ದೀಪಸ್ತಂಭಗಳಿದ್ದು ವಿಶೇಷ ಸಂದರ್ಭದಲ್ಲಿ ದೀಪಗಳನ್ನು ಉರಿಸಲಾಗುತ್ತದೆ. ದೇವಸ್ಥಾನದ ಭೇಟಿ ನಂತರ ಹತ್ತಿರದ ಖಾನಾವಳಿಯಲ್ಲಿ ರೊಟ್ಟಿ ಊಟ ಸವಿದು ಊರಿಗೆ ಮರಳಿದೆವು.

Related Articles

One Comment

Leave a Reply

Your email address will not be published. Required fields are marked *

Back to top button