ಮಾಗೋಡು ಜಲಪಾತಕ್ಕೆ ಹೋದ ಕತೆ ಕೇಳಿ: ಶಶಾಂಕ್ ಕೆಮ್ಮಿಂಜೆ ಬರಹ
ಹುಟ್ಟಿ ಬೆಳೆದ ಊರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ಬೆಳ್ತಂಗಡಿ. ಕೆಲಸ ಕೊಟ್ಟು ಬೆಳೆಸಿದ ಊರು ಬೆಂಗಳೂರು.
ಓದು, ಬೆಳೆಸಿಕೊಂಡ ಹವ್ಯಾಸವಾದರೆ; ಮನಸ್ಸಿಗೆ ಹತ್ತಿರವಾದುದನ್ನು ಬರೆಯುವುದು, ಜೊತೆಜೊತೆಗೆ ಬಂದ ಹವ್ಯಾಸ. ಹೊಸ ಕಲಿಕೆಗಳ ಹುಡುಕಾಟದಲ್ಲಿ, ಕನಸುಗಳ ಕಂಡುಕೊಂಡ ಹುಡುಗ ಶಶಾಂಕ್ ಕೆಮ್ಮಿಂಜೆ.
“ಅಲ್ಲಾ ಮಾರಾಯಾ, ಈ ಹುಲೀನೊ ಚಿರತೇನೊ ಬಂದ್ರೆ ಏನ್ ಗತಿ?”
“ನಿಜ! ಸಂಜೆ 5 ಗಂಟೆಗೇನೇ, ಇಂಥ ಕಾಡಿನ ಮಧ್ಯದಲ್ಲಿ, ಈ ಕಗ್ಗತ್ತಲಿದೆ, ನಂಗ್ಯಾಕೋ ಭಯ ಆಗಿ ಎದೆ ಢವ ಢವ ಅಂತಿದೆ, ಹೋಗ್ಲೇಬೇಕಾ ಅಲ್ಲಿಗೆ?”
ಭಯ ನಮ್ಮನ್ನೆಲ್ಲಾ ಆವರಿಸಿತ್ತು!
ನಮ್ಮ ಕಾರಿನ ಚಾಲಕನೂ ಸೇರಿ ನಾವು ಜನ. ಕಣ್ಣು ಹಾಯಿಸಿದಲ್ಲೆಲ್ಲ ದೆವ್ವದ ಸಿನೆಮಾದಲ್ಲಿ ಮಾತ್ರ ಕಾಣಿಸುವಂಥ ಬೃಹದಾಕಾರದ ಮರಗಳು. ಸುತ್ತಲೂ ಗಾಬರಿ ಹುಟ್ಟಿಸುವಂಥ ನಿಶ್ಶಬ್ದ. ಕೆಲವು ಕಡೆ ಪ್ರಾಣಿಗಳು ಚೀರುವ ಸದ್ದು. ಆನೆ, ಕಾಡು ಕೋಣ ಕಂಡರೂ ಅಚ್ಚರಿಯೇನಲ್ಲಾ!
“ಈ ಕಾಡಿನ ಮಧ್ಯ ಇಷ್ಟೊಂದು ಖಾಲಿ ಜಾಗ, ಬೆಳಕು? ಅಯ್ಯೋ ಮರ ಎಲ್ಲ ಕಡಿದು ಹಾಕಿದಾರೆ! ಏನ್ ಮನುಷ್ಯರೋ ಏನೋ!”
“ಕೆರೆ ಇರ್ಬೇಕು..ಗದ್ದೆ ಥರನೂ ಕಾಣುತ್ತೆ. ಯಾರದೋ ಮನೆ ಬೇರೆ ಕಾಣಿಸ್ತಾ ಇದೆ, ಇಂಥ ಜಾಗದಲ್ಲೂ ಮನೆ ಕಟ್ಟಿರ್ತಾರ?”
ಆ ದಟ್ಟ ಅರಣ್ಯದ ನಡುವೆ ಇಂಥ ದೃಶ್ಯ ಆಶ್ಚರ್ಯ ಅನಿಸಿದ್ರೂ, ಸಮಾಧಾನಗೊಳಿಸಿದ್ದಂತೂ ನಿಜ. ಹಾಗೆಯೇ ಮನುಷ್ಯನ ದುರಾಸೆಯ ವ್ಯಾಪ್ತಿಯನ್ನೂ ಪರಿಚಯಿಸಿತ್ತು. ಎರಡು ನಿಮಿಷ ಕಳೆದಮೇಲೆ ಮತ್ತದೇ ಕತ್ತಲು. ನಮ್ಮವರೆಲ್ಲರಿಗೂ ದಣಿವಾಗಿತ್ತು. ಬೆಳಗ್ಗೆ ಆರು ಗಂಟೆಗೆ ಸುಳ್ಯದಿಂದ ಶುರುವಾಗಿದ್ದ ನಮ್ಮ ಪ್ರಯಾಣ ಉಡುಪಿ, ಮುರುಡೇಶ್ವರ, ಗೋಕರ್ಣ ದಾಟಿ ಯಲ್ಲಾಪುರ ಮೂಲಕ ಹುಬ್ಬಳ್ಳಿ ಕಡೆ ಹೊರಟಿತ್ತು. ನಿರಂತರ ಸಂಚಾರದಿಂದ ನಮ್ಮ ಮನಸ್ಸೆಲ್ಲ ಹುಬ್ಬಳ್ಳಿ ಸೇರಿ ನಿದ್ದೆ ಮಾಡುವ ಯೋಚನೆಯಲ್ಲೇ ಇತ್ತು. ಅದರ ಜೊತೆ ಈ ಕತ್ತಲು, ನೀರವತೆ! ಒಬ್ಬ ಮನುಷ್ಯನೂ ಕಾಣದೆ ಕೈ ಕಾಲುಗಳಲ್ಲಿ ನಡುಕ ಹುಟ್ಟಿಸಿತ್ತು.
ನಾವು ಹೋಗ್ತಾ ಇದ್ದದ್ದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿಯ ಮಾಗೋಡು ಜಲಪಾತಕ್ಕೆ. ಗೋಕರ್ಣದಿಂದ ಯಲ್ಲಾಪುರಕ್ಕೆ ಹೋಗುವ ದಾರಿಯಲ್ಲಿ ಸಿಗುತ್ತದೆ. ಇನ್ನೇನು ಯಲ್ಲಾಪುರಕ್ಕೆ ತಲುಪುವುದರಲ್ಲಿದ್ದೆವು, ಒಬ್ಬ ಸಣ್ಣ ಬಟ್ಟೆಯನ್ನು ಸುತ್ತಿಕೊಂಡ, ತನಗಿಂತಲೂ ದೊಡ್ಡದಾದ ಅಂಗಿಯನ್ನು ಧರಿಸಿದ್ದ ವ್ಯಕ್ತಿ ಕಾಣಸಿಕ್ಕರು. ತಲೆಯ ಮೇಲೆ ಮುಟ್ಟಾಳೆ ಹಾಕಿಕೊಂಡಿದ್ದ ವ್ಯಕ್ತಿ ಅಪ್ಪಟ ಉತ್ತರ ಕನ್ನಡ ಕೃಷಿಕನಂತಿದ್ದರು. ನಾವು ಕೇಳಿದ್ದಕ್ಕೆ ಬಹಳ ವಿನಯತೆಯಿಂದ, ಪಕ್ಕಾ ಉತ್ತರ ಕನ್ನಡ ಶೈಲಿಯಲ್ಲಿ ಉತ್ತರಿಸಿ, ಮಾಗೋಡಿನ ದಾರಿ ತಿಳಿಸಿಕೊಟ್ಟರು. ಸ್ವಲ್ಪ ರಸ್ತೆ ಕೆಟ್ಟು ಹೋಗಿದೆ ಅನ್ನೋ ಸುಳಿವು ಕೊಟ್ಟರು.
ಆ ವ್ಯಕ್ತಿಯ ಚಹರೆಯನ್ನು ಇವತ್ತಿಗೂ ನಾನು ಮರೆತಿಲ್ಲ. ಅದೇನೋ ವಿಶೇಷತೆ ಅವರಲ್ಲಿತ್ತು.
ಈ ಆಸಾಮಿ ಹೇಳಿದ ದಾರಿ ಸರಿ ಇದೆಯೋ ಇಲ್ವೋ ಅಂತ ಗೋಗರೆಯುತ್ತಾ ಹೋಗುತ್ತಿದ್ದೆವು. ಸೂರ್ಯ ತನ್ನ ಅವಧಿ ಮುಗಿಸಿ, ರಾತ್ರಿ ಪಹರೆಗೆ ಚಂದ್ರನನ್ನು ಸ್ವಾಗತಿಸುತ್ತಿದ್ದ. ಅಯ್ಯಪ್ಪೋ ಹುಸ್ಸಪ್ಪೋ ಅನ್ನುತ್ತಿದ್ದ ನಮಗೆ ಕೊನೆಗೂ ಒಂದು ವಾಹನ, ಇನ್ನೊಂದು ಹಳೇ ಕಟ್ಟಡ, ಮತ್ತೊಂದಿಷ್ಟು ಜನ ಕಾಣಸಿಕ್ಕರು. ನಾವು ಜಲಪಾತಕ್ಕೆ ತಲುಪಿದ್ದೆವು. ಕಾರಿನಿಂದ ಇಳಿದು ಜಲಪಾತದ ಕಡೆ ನಡೆಯ ಹೊರಟೆವು. ಪ್ರಯಾಣದ ಸುಸ್ತನ್ನೆಲ್ಲಾ ಈ ಜಾಗ ಮರೆಸುವಂತೆ ಮಾಡಿತ್ತು. ಸುತ್ತ ಹಸಿರು, ಎಂಥ ಕಟುವಾದವನನ್ನೂ ತಂಪಾಗಿಸೋ ಹವೆ. ಕಿರಿದಾಗಿರೋ ದಾರಿಯಲ್ಲಿ ನಿಧಾನವಾಗಿ ಹೆಜ್ಜೆಯಿಡುತ್ತಾ ಹೋದಂತೆಲ್ಲ, ನಮ್ಮಲ್ಲಿ ಉಲ್ಲಾಸ ತುಂಬಿಕೊಳ್ಳುತ್ತಿತ್ತು. ಆ ವಾತಾವರಣವೇ ಹಾಗಿತ್ತು, ಆ ರಮಣೀಯತೆಯನ್ನು ಕಣ್ಣಾರೆ ತುಂಬಿಕೊಂಡರಷ್ಟೆ ಅರಿವಾಗುವುದು.
ಮೆಟ್ಟಿಲುಗಳನ್ನೆಲ್ಲ ಏರಿ ಇಳಿದು, ಆ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದೆವು. ನಾವು ಹೋಗಿದ್ದು ಜೂನ್ ತಿಂಗಳ ಕೊನೆಯಲ್ಲಾದರೂ ಮುಂಗಾರಿನ ದರ್ಶನವಾಗಿರಲಿಲ್ಲ. ಒಂದು ರೀತಿ ಇದಕ್ಕೆಲ್ಲ ನಾವೇ ನೇರ ಹೊಣೆ ಅನಿಸುವುದಿಲ್ಲವೇ? ಧುಮ್ಮುಕ್ಕಿ ಹರಿಯಬೇಕಾಗಿದ್ದ ಬೇಡ್ತಿ ನದಿ ಶಾಂತವಾಗಿತ್ತು. ಆದರೂ ಮನುಷ್ಯರನ್ನ ಕೈಬೀಸಿ ಕರೆಯೋದನ್ನು ನಿಲ್ಲಿಸಿಲ್ಲ.
ಒಂದೇ ದಿನ ಮುರುಡೇಶ್ವರ ಗೋಕರ್ಣದಲ್ಲಿ ರೌದ್ರತೆಯನ್ನು ತನ್ನೊಡಲಲ್ಲಿ ಹಿಡಿದಿಟ್ಟಿರೊ ಕಡಲಿನ ಪ್ರಸನ್ನತೆಯನ್ನು ಅನುಭವಿಸಿದೆವು, ಅದೇ ಭೂಮಿಯಲ್ಲಿ ಕೃಷಿಕನೊಬ್ಬ ದಿನಪೂರ್ತಿ ಬೆವರಿಳಿಸಿ ದುಡಿದ ನಂತರವೂ ಸಂತೋಷದಿಂದ ಮಾತಾಡಿಸುವುದನ್ನು ಕಂಡೆವು, ದಣಿದಿರೋ ಜೀವಗಳಿಗೆ ತಂಪೆರೆಯೋ ಜಲಪಾತ ನೋಡಿದ್ದೆವು! ನಿಸರ್ಗದಿಂದ ನಾವೇನನ್ನು ಪಡೆಯುತ್ತಿದೇವೆಯೋ, ಅದು ಬೆಲೆ ಕಟ್ಟಲಾಗದ್ದಲ್ಲವೇ?. ಹೀಗೆ ಮನದಲ್ಲಿ ಏನೇನೋ ಆಲೋಚನೆಗಳು ಹರಿಯುತ್ತಿದ್ದಾಗ , ಕತ್ತಲಾವರಿಸಿತ್ತು. ಮರಳಿ ಕಾರಿನಲ್ಲಿ ಕುಳಿತು, ಒಂದೊಳ್ಳೆ ಜಾಗಕ್ಕೆ ಬಂದ ಖುಷಿಯಲ್ಲಿ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದೆವು.
ಅಂದಿನಿಂದ ಇಂದಿಗೂ ನನ್ನಲ್ಲಿ ಮೂಡುವ ಪ್ರಶ್ನೆ “ನಾವು ಯಾವಾಗ ಬದಲಾಗೋದು?”