ಏಕಾಂಗಿ ಸಂಚಾರಿವಿಂಗಡಿಸದಸ್ಫೂರ್ತಿ ಗಾಥೆ

ಅಮ್ಮ ಕ್ಯಾಂಟೀನ್ ಊಟದಿಂದ ಆರೋವಿಲ್ಲೆಯ ಕೆಫೆವರೆಗೂ: 1800ರೂನಲ್ಲಿ 10 ದಿನ ತಮಿಳುನಾಡು ಸುತ್ತಿದ ಚಂದನಾ ರಾವ್ ಬರೆದ ಸೋಲೋ ಟ್ರಾವೆಲ್ ಕಥನ

ಚಿನ್ನದ ನೆಲ ಕೋಲಾರದ ನಾರಾಯಣಪುರ ಎಂಬ ಸಣ್ಣ ಹಳ್ಳಿಯಿಂದ ಬಂದ ಹುಡುಗಿ. ಬೆಂಗಳೂರು ಕರ್ಮಭೂಮಿ. ಸ್ವಂತ ಕಂಪನಿ ತೆರೆದಿರುವ ಮಹತ್ವಾಕಾಂಕ್ಷಿ. ಸುತ್ತೋದು ಅಂದ್ರೆ ಪ್ರಾಣ. ಹಾಗಾಗಿ ಜಗತ್ತು ಸುತ್ತೋ ಹುಡುಗನನ್ನೇ ಮದ್ವೆ ಆಗಿದ್ದಾರೆ. ಜೀವನ ಪೂರ್ತಿ ಎಷ್ಟು ಸಾಧ್ಯವೋ ಅಷ್ಟು ಜಗತ್ತು ಸುತ್ತಬೇಕು, ಅದೂ ಕಡಿಮೆ ಖರ್ಚಿನಲ್ಲಿ ಎಂಬ ಆಸೆ ಇಟ್ಟುಕೊಂಡಿರುವ ಧೈರ್ಯವಂತೆ ಈ ಚಂದನಾ ರಾವ್. 

Ambarish Shiva

ಹೆಣ್ಣು ಮಕ್ಕಳು ತುಂಬ ಖರ್ಚು ಮಾಡ್ತಾರೆ ಅಂತ ನಂಬಿಕೆ ಇದೆ. ಆದ್ರೆ ಅದು ನಿಜಾನಾ? ನನ್ನ ಪ್ರಕಾರ ಅಲ್ಲ.

Travelories

ಒಬ್ಳೆ ಟ್ರಾವೆಲ್ ಮಾಡಿ ತುಂಬ ದಿನ ಆಗಿತ್ತು. ಹಾಗೆ ಸುಮ್ಮನೆ ನಾನು ಪ್ಲಾನ್ ಮಾಡಿದ್ದು ತಮಿಳುನಾಡಿಗೆ. ಚೆನ್ನೈನಿಂದ ಶುರು ಮಾಡಿ ರಾಮೇಶ್ವರದವರೆಗೆ ಹೋಗುವುದೆಂದು ನಿರ್ಧಾರ ಮಾಡಿದೆ. ಹೋಗೋಕೆ ಮುಂಚೆ ಎಷ್ಟು ಖರ್ಚಾಗುತ್ತೆ ಅಂತ ಗೊತ್ತಿರ್ಲಿಲ್ಲ. ಆದ್ರೆ ಎಲ್ಲಿ ಹೋಗ್ಬೇಕು ಅಂತ ಪ್ಲಾನ್ ಇತ್ತು. ನಾನು ನನ್ನ ಎಲ್ಲಾ ಸಾಂಪ್ರದಾಯಿಕ ಬಟ್ಟೆಗಳನ್ನು ಪ್ಯಾಕ್ ಮಾಡಿದೆ. ಯಾಕೆ ಅಂದ್ರೆ ತಮಿಳುನಾಡು ದೇವಾಲಯಗಳ ನಾಡು. ಅಲ್ಲಿನ ಸಂಸ್ಕೃತಿಯನ್ನು ಗೌರವಿಸೋದು ನನ್ನ ಕರ್ತವ್ಯ. 

ನಾನು ಮೊದಲು ಹೋಗಿದ್ದು ಚೆನ್ನೈಗೆ. ಬೆಂಗಳೂರಿಂದ ಚೆನ್ನೈಗೆ 150ರೂ ಕೊಟ್ಟು ಪ್ಯಾಸೆಂಜರ್ ಟ್ರೈನ್ ನಲ್ಲಿ ಹೊರಟೆ. 

ನನ್ನ ಫೇಸ್ ಬುಕ್ ನಲ್ಲಿ ಚೆನ್ನೈಗೆ ಬರುತ್ತಿರುವೆ ಅಂತ ಅಪ್ಡೇಟ್ ಮಾಡಿಕೊಂಡೆ. ನನ್ನ ಫೇಸ್ಬುಕ್ ಗೆಳತಿ ರೇಖಾ ತುಂಬಾ ಖುಷಿಯಿಂದ ಕಾಲ್ ಮಾಡಿ ನಮ್ ಮನೆಗೆ ಬಾ ಇಲ್ಲೇ ಎರಡು ದಿನ ಇರು ಅಂತ ನನ್ನನ್ನು ಚೆನ್ನೈನಲ್ಲಿ ಹೋಸ್ಟ್ ಮಾಡಿದಳು. ಹಾಗೆ ಅವಳ ಸ್ಕೂಟಿಯಲ್ಲಿ ಊರೆಲ್ಲ ಸುತ್ತಿದ್ವಿ. ಒಳ್ಳೊಳ್ಳೆ ತಿನ್ನೋ ಜಾಗಗಳಿಗೆ ಕರ್ಕೊಂಡ್ ಹೋದ್ಲು. ಎಲ್ಲಿಯೂ ಸಹ ನನ್ನ ಖರ್ಚು ಮಾಡಕ್ಕೆ ಬಿಡಲಿಲ್ಲ. ಎರಡು ದಿನ ಅಲ್ಲಿ ಕಳೆದು ಮತ್ತೆ ಪಾಂಡಿಚೇರಿಗೆ ಸರ್ಕಾರಿ ಬಸ್ ನಲ್ಲಿ ಹೊರಟೆ. ನಮ್ಮ ಸಾಮಾಜಿಕ ಜಾಲತಾಣಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಅದೇ ನಮ್ಮನ್ನು ಕಾಪಾಡುತ್ತದೆ. 

ಚೆನ್ನೈ ನಿಂದ ಪಾಂಡಿಚೇರಿಗೆ 150ರೂ. ಅಲ್ಲಿಂದ ಆರೋವಿಲ್ಲೆಗೆ ಬೈಕಲ್ಲಿ ಬಿಟ್ಟಿ ಸವಾರಿ(hitch hike) ಕೇಳಿ ತಲುಪಿದೆ. ಆರೋವಿಲ್ಲೆ ಸಣ್ಣ ಹಳ್ಳಿ ಆದ್ರೆ ಅಲ್ಲಿ ಎಲ್ಲವೂ ದುಬಾರಿ. ಹಾಗೆ ನಾನು ನನ್ನ ದೊಡ್ಡ ಬೆನ್ನುಹೊರೆಯೊಂದಿಗೆ ಕಡಿಮೆ ದರದ ವಸತಿ ಹುಡುಕಿಕೊಂಡು ಹೊರಟೆ. ದಾರಿಯಲ್ಲಿ ಒಂದು ಟ್ರಾವೆಲ್ ಹಾಸ್ಟೆಲ್ ನನ್ನ ಕಣ್ಣಿಗೆ ಬಿತ್ತು. ಹಾಸ್ಟೆಲ್ ನಲ್ಲಿ ಹಣದ ಬದಲಾಗಿ ಕೌಶಲ್ಯ ವಿನಿಮಯ (skill sharing) ಮೂಲಕ ಮೂರುದಿನಗಳು ಉಳಿದುಕೊಳ್ಳೋಕೆ ಅವಕಾಶ ಸಿಕ್ತು. ನಾನು ಅವರ ಜಾಲತಾಣ ತಯಾರಿಸಲು ಸಹಾಯ ಮಾಡಿದೆ, ಅವರು ನನಗೆ ಉಚಿತ ವಸತಿ ನೀಡಿದರು. ಹಾಗೆಯೇ ಇಲ್ಲಿ ಊಟ ಸ್ವಲ್ಪ ದರ ಜಾಸ್ತಿ. ಹಾಗಾಗಿ ನಾನು ಒಂದು ಸಣ್ಣ ಇಡ್ಲಿ ಹೋಟೆಲ್ ನಲ್ಲಿ ಊಟಕ್ಕೆ ಹೋಗುತ್ತಿದ್ದೆ. 10 ರೂ.ಗಳಿಗೆ ಐದು ಇಡ್ಲಿ ಸಿಗತ್ತೆ ಅಲ್ಲಿ. ಹಾಗೆಯೇ ಊರು ಸುತ್ತೋಕೆ ಒಂದು ಸೈಕಲ್ ಬಾಡಿಗೆಗೆ ಪಡೆದೆ. 3 ದಿನಕ್ಕೆ 100ರೂ. ಆರೋವಿಲ್ಲೆಯು ಅಪರೂಪದ ಜಾಗ. ಇಲ್ಲೊಂದು ವಿಶೇಷವಾದ ಧ್ಯಾನ ಮಂದಿರವಿದೆ. ಪ್ರಪಂಚದ ಹಲವಾರು ದೇಶಗಳಿಂದ ಜನ ಇಲ್ಲಿ ಬಂದು ಯೋಗ, ಧ್ಯಾನ, ನೃತ್ಯ ಇತರ ಸಾಂಸ್ಕೃತಿಕ ವಿಷಯಗಳನ್ನು ಅಭ್ಯಾಸ ಮಾಡುತ್ತಾರೆ.

ಆರೋವಿಲ್ಲೆಯಿಂದ ನಾನು ತಿರುಚನಾಪಲ್ಲಿ (Trichy)ಗೆ ಹೊರಟೆ. ಪಾಂಡಿಚೇರಿಯಿಂದ ತ್ರಿಚಿಗೆ ರೈಲಿನಲ್ಲಿ ಹೋದರೆ 160 ರೂ ಅಷ್ಟೇ. ತ್ರಿಚಿಯಲ್ಲಿ ನನ್ನ ಸಹೋದ್ಯೋಗಿ ರಾಜಿಯ ಪೋಷಕರು ವಾಸವಿದ್ದರು. ನಾನು ಅವರ ಅತಿಥಿಯಾಗಿ ಅವರೊಂದಿಗೆ ಎರಡು ದಿನ ಕಳೆದೆ. ಅವರೊಂದಿಗೆ ನಾನು ಭಾರತದ ಅತಿ ದೊಡ್ಡ ದೇವಾಲಯ ಶ್ರೀರಂಗಂ, ಐತಿಹಾಸಿಕ ಪಟ್ಟಣ ತಂಜಾವೂರ್, ದೇವಾಲಯಗಳ ಪಟ್ಟಣ ಕುಂಭಕೋಣಂ ಭೇಟಿ ಮಾಡಿದೆ. ಇಲ್ಲೆಲ್ಲಾ ನೀವು ಕಡ್ಡಾಯವಾಗಿ ಊಟ ಮಾಡಲೇಬೇಕು. ದೇವಸ್ಥಾನದ ಸಿಬ್ಬಂದಿ ನಿಮ್ಮನ್ನು ಬರಿ ಹೊಟ್ಟೆಯಲ್ಲಿ ಹೋಗೋದಕ್ಕೆ ಬಿಡೋದಿಲ್ಲ. 

ನನ್ನ ಮುಂದಿನ ನಿಲ್ದಾಣ ಪ್ರಾಚೀನ ನಗರ ಮಧುರೈ. ಇಲ್ಲಿನ ವೈಭವೋಪೇತ ದೇವಾಲಯಗಳು ನೋಡೋದೇ ಕಣ್ಣಿಗೆ ಹಬ್ಬ. ಮಧುರೈನಲ್ಲಿ ಸಹ ನಾನು ಟ್ರಾವೆಲ್ ಹಾಸ್ಟೆಲ್ ನಲ್ಲಿ ಉಳಿದುಕೊಂಡೆ. ಇಲ್ಲಿಯೂ ಸಹ ನಾನು ಕೌಶಲ್ಯ ವಿನಿಮಯದ ಮೂಲಕ ನನ್ನ ವೆಚ್ಚವನ್ನು ಭರಿಸಿದೆ. ಊಟಕ್ಕೆ ದೇವಸ್ಥಾನದ ಪ್ರಸಾದ ರೆಡಿ ಇರುತ್ತಿತ್ತು. ಇಲ್ಲಿ ಎರಡು ದಿನಗಳನ್ನು ಕಳೆದು ರಾಮೇಶ್ವರಕ್ಕೆ ಹೊರಟೆ. ಅಲ್ಲಿನ ಧನುಷ್ಟೋಡಿ (dhanushkodi)ಯ ಸೂರ್ಯೋದಯ ನಯನಮನೋಹರವಾಗಿತ್ತು. ಊಟಕ್ಕೆ ಅಮ್ಮ ಕ್ಯಾಂಟೀನಿನ ಬಿಸಿ ಬಿಸಿ ಅನ್ನ ಸಾರು ಕರೆಯುತ್ತಿತ್ತು. ಉಳಿಯಲು ರಾಮೇಶ್ವರದ ಧರ್ಮಛತ್ರಗಳು ಬಹಳ ಅಗ್ಗವಾಗಿ ಸಿಗುತ್ತಿತ್ತು.

ನನ್ನ ಕೊನೆಯ ದಿನ ಕನ್ಯಾಕುಮಾರಿ (kanyakumari)ಗೆ ಹೊರಟೆ. ರಾತ್ರಿಯ ೯ರ ಬಸ್ ನಲ್ಲಿ ಹೊರಟು ಮುಂಜಾನೆ 4ಕ್ಕೆ ಜಾಗ ಸೇರುವುದಿತ್ತು.

ಬಸ್ ಹತ್ತಿದೆ, ಯಾಕೋ ನಂಗೆ ತುಂಬ ಸುಸ್ತಾಗಲು ಶುರುವಾಯ್ತು. ಇದ್ದಕ್ಕಿದ್ದ ಹಾಗೆ ನನ್ನ ಬಿಪಿ ಇಳಿಯತೊಡಗಿತು. ನನ್ನ ಗಾಬರಿಯಾಗಿ ಬಸ್ ಕಂಡಕ್ಟರ್ ಗೆ ನನ್ನ ಸ್ಥಿತಿ ತಿಳಿಸಿದೆ. ಅವರು ತಕ್ಷಣ ಹತ್ತಿರದ ರಾಮ್ನಾಡ್ ಎಂಬ ಸಣ್ಣ ಜಾಗದಲ್ಲಿ ನನ್ನನ್ನು ಇಳಿಸಿ ಹೊರಟೇಬಿಟ್ಟರು. ನನಗೆ ಮೊದಲೇ ಸುಸ್ತು, ಇವರು ನೋಡಿದರೆ ನನ್ನನ್ನು ಮಧ್ಯ ದಾರಿಯಲ್ಲಿ ಬಿಟ್ಟು ಹೋಗಿಬಿಟ್ಟರು. ಆ ಖಾಲಿ ಬಸ್ ಸ್ಟಾಪ್ ನಲ್ಲಿ ನಾನೊಬ್ಬಳೇ ಅನಾಥವಾಗಿ ಕುಸಿದುಬಿಟ್ಟೆ. 

ನನ್ನ ಬೆನ್ನುಹೊರೆ ಬ್ಯಾಗ್ ಎತ್ತಲೂ ಸಹ ನನಗೆ ಶಕ್ತಿ ಇರಲಿಲ್ಲ. ಆಗ ಅಲ್ಲೊಬ್ಬಳು ಹುಡುಗಿ ತನ್ನ ಸ್ಕೂಟಿಯಲ್ಲಿ ತನ್ನ ಗೆಳತಿಯನ್ನು ಬಸ್ ಹತ್ತಿಸಲು ಬಂದಳು. ನನ್ನ ಸ್ಥಿತಿ ನೋಡಿ ನನಗೆ ನೀರು ಕೊಟ್ಟು ಸಹಾಯ ಬೇಕಾ ಅಂತ ಕೇಳಿದಳು. ದಯವಿಟ್ಟು ನನ್ನನ್ನು ಆಸ್ಪತ್ರೆಗೆ ಸೇರಿಸಿ ಅಂತ ಕೇಳಿದೆ. ತಕ್ಷಣ ತನ್ನ ಸ್ಕೂಟಿಯಲ್ಲಿ ನನ್ನ ಹತ್ತಿರದ ಆಸ್ಪತ್ರೆಗೆ ಸೇರಿಸಿದಳು. ಅಲ್ಲಿ ನನಗೆ ಚಿಕಿತ್ಸೆ ನೀಡಿ ಅಂದು ರಾತ್ರಿ ಅಲ್ಲೇ ಇರಲು ಹೇಳಿದರು. ಆ ಹುಡುಗಿ ಆ ಸಮಯದಲ್ಲಿ ಬಂದು ನನಗೆ ದೊಡ್ಡ ಸಹಾಯ ಮಾಡಿದ್ಲು. ಅವಳಿಗೆ ಥ್ಯಾಂಕ್ಸ್ ಹೇಳಿ ಬೀಳ್ಕೊಡುವಾಗ ನಂಗೆ ಅಳು ಬಂದ್ಬಿಡ್ತು. ನಾನು ಈ ಪ್ರವಾಸದಲ್ಲಿ ಸರಿಯಾಗಿ ನೀರು ಕುಡಿಯದ ಕಾರಣ ವಿಪರೀತ ಡಿಹೈಡ್ರೇಷನ್ ಆಗಿತ್ತು.

ಈ ಬೇಸರದಿಂದ ಮುಂದಿನ ದಿನ ನಾನು ಕನ್ಯಾಕುಮಾರಿ ಗೆ ಹೋಗಲೇ ಇಲ್ಲ. ಸೀದಾ ಬೆಂಗಳೂರಿಗೆ ಜನರಲ್ ಬೋಗಿ ಹತ್ತಿ ಹೊರಟು ಬಿಟ್ಟೆ. ಹೀಗೆ ನನ್ನ ಹತ್ತು ದಿನದ ಸಾಹಸಗಾಥೆ ಮುಗಿದಿತ್ತು. 

ಸುರಕ್ಷಿತವಾಗಿ ಹಾಗೂ ಕಡಿಮೆ ದರದಲ್ಲಿ ಸೋಲೋ ಟ್ರಾವೆಲ್ ಮಾಡಲು ನನ್ನ ಕೆಲವು ಸಲಹೆಗಳು:

-ಸರಿಯಾದ ಪ್ಲಾನ್ ಇರಲಿ. (ಎಲ್ಲಿಗೆ, ಹೇಗೆ, ಯಾವಾಗ)

-ಮನೆಯವರಿಗೆ ಪ್ರತಿದಿನ ನಿಮ್ಮ ಪ್ರಯಾಣದ ಬಗ್ಗೆ ಅಪ್ಡೇಟ್ ಮಾಡಿ 

-ಸರ್ಕಾರೀ ಬಸ್ ಗಳಲ್ಲಿ ಹೋಗುವಾಗ ಆದಷ್ಟು ಡ್ರೈವರ್ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳಿ

-ಸ್ಥಳೀಯ ಜನರೊಂದಿಗೆ ವಿನಮ್ರತೆಯೊಂದಿಗೆ ನಡೆದುಕೊಳ್ಳಿ ಹಾಗೂ ಅವರನ್ನು ಗೌರವಿಸಿ 

-ನಾವು ಪ್ರವಾಸ ಹೋಗಿರುವ ಉದ್ದೇಶ ನೆನಪಿನಲ್ಲಿರಲಿ

-ಉಳಿದುಕೊಳ್ಳಲು ಟ್ರಾವೆಲ್ ಹಾಸ್ಟೆಲ್ ಳಿಗೆ ಹೋಗಬಹುದು

-ದೇವಸ್ಥಾನಗಳಲ್ಲಿ ಊಟ ಮಾಡುವುದು ವಿಶಿಷ್ಟವಾದ ಅನುಭವ ನೀಡುತ್ತದೆ 

-ಸಾಕಷ್ಟು ನೀರು ಕುಡಿಯಿರಿ, ನಿದ್ದೆಗೆಡಬೇಡಿ, ಸಾಕಷ್ಟು ವಿಶ್ರಮಿಸಿ

-ನಿಮ್ಮ ಹಣವನ್ನು ಬ್ಯಾಗಿನಲ್ಲಿ ಅಥವಾ ವಸ್ತ್ರದಲ್ಲಿ ಬೇರೆ ಬೇರೆ ಜಾಗಗಳಲ್ಲಿ ಭದ್ರವಾಗಿ ಇಡಿ

Related Articles

Leave a Reply

Your email address will not be published. Required fields are marked *

Back to top button