ಬಣ್ಣದ ಸ್ಟುಡಿಯೋವಿಂಗಡಿಸದಸ್ಫೂರ್ತಿ ಗಾಥೆ

ಉಡುಪಿಯ ಖ್ಯಾತ ಛಾಯಾಗ್ರಾಹಕ ಫೋಕಸ್ ರಾಘು ಸ್ಫೂರ್ತಿ ಕತೆ: ಬಣ್ಣದ ಸ್ಟುಡಿಯೋ

ಹುಟ್ಟಿದ್ದು ಉಡುಪಿಯ ಕೊಡಂಗಳದಲ್ಲಿ. ಹೆಸರು ರಾಘವೇಂದ್ರ ಕೊಡಂಗಳ. ಎಲ್ಲಾ ಹಳ್ಳಿ ಹುಡುಗರಂತೆ ಕನಸನ್ನು ಹೊತ್ತು ನೆಡೆದವರು. ಅಡ್ಡಿ ಆತಂಕ ಎದುರಾಜದವರೂ ಯಾವತ್ತೂ ಹಿಂದಿರುಗಿ ನೋಡದವರು. ಶ್ರಮದಿಂದ, ಶ್ರದ್ಧೆಯಿಂದ ಫೋಟೋಗ್ರಫಿ ಕಲಿತು ಸ್ಟುಡಿಯೋ ತೆರೆದರು. ಎಷ್ಟು ಚೆಂದ ಫೋಟೋ ತೆಗೆದರು ಅಂದರೆ ಇಡೀ ಊರು ಅವರ ಕ್ಯಾಮೆರಾ ಕಣ್ಣಲ್ಲಿ ಬಂಧಿಯಾಗಬೇಕೆಂಬ ಆಸೆ ಹುಟ್ಟಿಸುವ ಮಟ್ಟಿಗೆ ಫೋಟೋಗ್ರಫಿ ಮಾಡಿದರು. ಅಷ್ಟಕ್ಕೆ ನಿಲ್ಲಿಸಲಿಲ್ಲ. ದೇಶ, ವಿದೇಶ ಸುತ್ತಿದರು. ಅಂತಾರಾಷ್ಟ್ರೀಯ ಮಟ್ಟದ ಛಾಯಾಗ್ರಾಹಕರಾಗಿ ಗುರುತಿಸಿಕೊಂಡರು. ಪುಟ್ಟ ಹಳ್ಳಿಯ ಹುಡುಗನೊಬ್ಬ ಅಂತಾರಾಷ್ಟ್ರೀಯ ಕಂಪನಿ ನಿಕಾನ್ ರಾಯಭಾರಿಯಾಗಿ ಬೆಳೆದ ಸ್ಪೂರ್ತಿ ಕತೆ ಇದು. ಈಗ ಅವರ ಹೆಸರು ಫೋಕಸ್ ರಾಘು. ಅವರ ಕ್ಯಾಮೆರಾ ಕಣ್ಣಿನ ಜಾದೂ ಹೇಗಿದೆ ಅಂತ ಈ ಫೋಟೋಗಳನ್ನು ನೋಡಿ ತಿಳಿಯಬಹುದು.                  

Focusraghu_photoartist

ಉಡುಪಿಯ ಕೊಡಂಗಳ ಎಂಬ ಪುಟ್ಟ ಹಳ್ಳಿ ನನ್ನದು. ನನ್ನ ಪೂರ್ತಿ ಹೆಸರು ರಾಘವೇಂದ್ರ ಕೊಡಂಗಳ. ಛಾಯಾಗ್ರಹಣ ಕ್ಷೇತ್ರದಲ್ಲಿ ಜನ ನನ್ನನ್ನು ಗುರುತಿಸುತ್ತಿರುವುದು ಫೋಕಸ್ ರಾಘು ಅಂತಲೇ.

Focusraghu_photoartist

ನಮ್ಮೂರಿನ ಬಹುತೇಕ ಹುಡುಗರಂತೆ ಮೂಲ ಸೌಕರ್ಯವಿಲ್ಲದ ಮುಳಿ ಹುಲ್ಲಿನ ಮನೆಯಲ್ಲಿ ಬೆಳೆದವ ನಾನು. ಆ ಖುಷಿ ಇವತ್ತಿಗೂ ಹಾಗೇ ಉಳಿದು ಹೋಗಿದೆ. ಆ ಹಸಿವೆಯ ಆ ಕಷ್ಟದ ದಿನಗಳಲ್ಲೂ ಸುತ್ತಲ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ಆಸೆ ನನಗೆ. ಅವತ್ತು ಹಾಗೆ ಬೆರಗಿನ ಕಣ್ಣಲ್ಲಿ ಪ್ರಕೃತಿಯನ್ನು ನೋಡಿದ್ದರಿಂದಲೇ ಇವತ್ತು ಪ್ರಕೃತಿಯನ್ನು ಪ್ರೀತಿಯ ಕಣ್ಣುಗಳಿಂದ ನೋಡಲು ಸಾಧ್ಯವಾಗಿದೆ ಅಂತ ಈಗನ್ನಿಸುತ್ತಿದೆ.   

Focusraghu_photoartist

ಅಮ್ಮನ ಪರಿಶ್ರಮ, ಅಕ್ಕಂದಿರ ಅಕ್ಕರೆಯಿಂದ ಹೈಸ್ಕೂಲು ಮುಗಿಸಿದೆ. ಆಮೇಲೆ ನಮ್ಮದೇ ಸ್ವಂತ ಪ್ರಯತ್ನ. ನಾನೇ ರಜೆಯಲ್ಲಿ ದುಡಿದೆ. ಬಿ.ಕಾಂ ಪದವಿವರೆಗೆ ಓದಿದೆ. ನಂತರ ಉಡುಪಿಯ ಫೋಟೋ ಲ್ಯಾಬ್ ಒಂದರಲ್ಲಿ ಸಹಾಯಕನಾಗಿ ಕೆಲಸ ಶುರು ಮಾಡಿದೆ. ಆನಂತರ “ಐತಾಳ್ ಸ್ಟುಡಿಯೋ”ದಲ್ಲಿ ವಿಡಿಯೋಗ್ರಾಫರ್ ವೃತ್ತಿ. ಒಂದು ದೊಡ್ಡ ಕನಸು ಕಾಣುತ್ತಿದ್ದೆ. ಬೆಳೆಯಬೇಕೆಂಬ ಆಸೆ ಇತ್ತು. ಅಂಥಾ ಹೊತ್ತಲ್ಲೇ ಆಘಾತ ಎದುರಾಯಿತು.

Focusraghu_photoartist

ಇದ್ದಕ್ಕಿದ್ದಂತೆ ಒಂದಿನ ಯಾವುದೋ ತಿರುವಲ್ಲಿ ಅಪಘಾತ ಆಯಿತು. ಬಲಗೈ ಮೂಳೆ ತುಂಡಾಗಿ ಹೋಯಿತು. ಅಂಧಕಾರ ಕವಿದಂತೆ ಬಾಳಲ್ಲಿ. ಬಲಗೈಯಲ್ಲಿ ಏನೂ ಮಾಡೋಕಾಗುತ್ತಿರಲಿಲ್ಲ. ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕೈಯಲ್ಲಿ ಹಣವಿಲ್ಲ. ಚೇತರಿಸಿಕೊಂಡು ಏನೋ ಆಗಬೇಕು ಅಂತಂದುಕೊಳ್ಳುವ ಹೊತ್ತಿನಲ್ಲಿಯೇ ಏನೂ ಮಾಡದಂತಹ ಸ್ಥಿತಿ ಎದುರಾಯಿತು.

Focusraghu_photoartist

ಮತ್ತೆ ಕಷ್ಟದ ದಿನಗಳು. ಹೇಗೋ ಸ್ನೇಹಿತರಿಂದ ಹಣ ಹೊಂದಿಸಿಕೊಂಡು ಶಸ್ತ್ರಚಿಕಿತ್ಸೆ ಮಾಡಿಸಿದೆ. ನಿಧಾನ ಚೇತರಿಸಿಕೊಳ್ಳುತ್ತಾ ಹೋದೆ. ಅಷ್ಟಕ್ಕೆ ಬಿಡಲಿಲ್ಲ. ಸೋಲುವ ಆಸೆ ನನಗೆ ಅವತ್ತೂ ಇರಲಿಲ್ಲ ಇವತ್ತೂ ಇಲ್ಲ. ಮತ್ತೆ ಕನಸು ಕಾಣಲಾರಂಭಿಸಿದೆ. ಆಗ ಪರಿಚಯವಾಗಿದ್ದು ಖ್ಯಾತ ಛಾಯಾಗ್ರಾಹಕ, ನುರಿತ ಛಾಯಾಗ್ರಹಣ ತರಬೇತುದಾರ ಗುರುದತ್ ಕಾಮತ್. ಅವರ ಪಾಠದಿಂದ ನಿಜಕ್ಕೂ ನನ್ನ ಬದುಕು ಬದಲಾಯಿತು. ನನ್ನೊಳಗಿನ ಪ್ರತಿಭೆ ಹೊರತೆಗೆಯಲು ಫೋಟೋಗ್ರಫಿ ವೇದಿಕೆಯಾಯಿತು. ಅದೇ ವೃತ್ತಿಯಾಯಿತು. ಕ್ಯಾಮೆರಾ ನನ್ನ ಪ್ರೀತಿಯಾಯಿತು. ವರ್ಷಗಟ್ಟಲೆ ಫೋಟೋ ತೆಗೆದೆ. ಆಸೆಯಿಂದ ತೆಗೆದೆ. ಜನ ನನ್ನ ಫೋಟೋಗ್ರಫಿ ಗುರುತಿಸತೊಡಗಿದರು. ಉಡುಪಿಯಲ್ಲಿ ತನ್ನ ಸ್ವಂತ ಸ್ಟುಡಿಯೋ ತೆರೆದೆ. ಉಡುಪಿಯ ಜನ ಕೈ ಹಿಡಿದರು. 

Focusraghu_photoartist

ಮದುವೆ ಫೋಟೋಗ್ರಫಿ, ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗಳು ಎಲ್ಲರೂ ಇಷ್ಟಪಟ್ಟರು. ಆದರೆ ನಾನು ಛಾಯಾಗ್ರಹಣ ಕಲೆಯನ್ನು ಅಷ್ಟಕ್ಕೇ ಸೀಮಿತಗೊಳಿಸಬಾರದೆಂಬ ಹಠ ಹಿಡಿದಿದ್ದೆ. ಅವಕಾಶ ಸಿಕ್ಕಾಗಲೆಲ್ಲ ಸುತ್ತಾಡಲು ಶುರು ಮಾಡಿದೆ. ದೇಶದಾದ್ಯಂತ ಪ್ರವಾಸ ಮಾಡಿದೆ. ಅಲೆದಾಡಿದೆ. ಫೋಟೋ ತೆಗೆಯುತ್ತಾ ಬಂದೆ. ವನ್ಯಜೀವಿ, ಪಕ್ಷಿಗಳ ಛಾಯಾಗ್ರಹಣದಲ್ಲೂ ತೊಡಗಿಸಿಕೊಂಡೆ.  ಅವುಗಳಿಂದಾಗಿ ಸುಮಾರು ಹದಿನೈದು ಅಂತರಾಷ್ಟ್ರೀಯ ಪ್ರಶಸ್ತಿ, ಇಪ್ಪತ್ತಕ್ಕೂ ಮಿಗಿಲಾಗಿ ರಾಷ್ಟ್ರ ಮಟ್ಟದ ಗೌರವಗಳು ನನಗೆ ಬಂದವು. ರಾಷ್ಟ್ರ ಮಟ್ಟದ AFIP Distinction ಕೂಡ ಈಗಾಗಲೇ ಲಭಿಸಿದೆ.

Focusraghu_photoartist

ಈ ಸಾಧನೆಗಳನ್ನು ಗುರುತಿಸಿ 2017ರಲ್ಲಿ ನಿಕೋನ್ ಸಂಸ್ಥೆ ತನ್ನ ಪ್ರತಿಷ್ಟಿತ NPS ಸದಸ್ಯತ್ವವನ್ನು ನೀಡಿತ್ತು. ಈ ಬಾರಿ ಅದೇ ಸಂಸ್ಥೆ ನನ್ನನ್ನು ಕರ್ನಾಟಕ ರಾಜ್ಯಕ್ಕೆ Nikon Influencer ಆಗಿ ನೇಮಕ ಮಾಡಿ ದೊಡ್ಡ ಗೌರವ ನೀಡಿದೆ. ಮುಂದೆ ವಿದೇಶಗಳನ್ನೂ ಸುತ್ತಾಡಿ ಚಿತ್ರಗಳ ಮೂಲಕ ಜಗತ್ತನ್ನು ಕಟ್ಟಿಕೊಡುವ ಕನಸು ನನ್ನದು.

ನನ್ನವರ ಅಕ್ಕರೆ, ಜನರು ನನ್ನ ಮೇಲಿಟ್ಟ ನಂಬಿಕೆಯೇ ನನ್ನನ್ನು ಕೈ ಹಿಡಿದು ಮುನ್ನಡೆಸುತ್ತಿದೆ ಎಂದು ನಂಬಿದ್ದೇನೆ.

Related Articles

Leave a Reply

Your email address will not be published. Required fields are marked *

Back to top button