ಏಕಾಂಗಿ ಸಂಚಾರಿವಿಂಗಡಿಸದಸ್ಫೂರ್ತಿ ಗಾಥೆ

ಪಳನಿಯ ಒಡಲಲ್ಲಿ ಕ್ಯಾರೆಟ್ ಗದ್ದೆ ಮತ್ತು ಬೆಳ್ಳುಳ್ಳಿ ಚಟ್ನಿ

ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ಬೆಳೆದ ಹುಡುಗಿ. ಊರು ದಕ್ಷಿಣ ಕನ್ನಡದ ಸುಳ್ಯ. ಸದ್ಯಕ್ಕೆ-ಪ್ರಕೃತಿಯ ಒಡಲಲ್ಲಿ ನೆಲೆಯೂರುವ  ಹಂಬಲದೊಂದಿಗೆ ಬದುಕುತ್ತಿರುವ – ಬೆಂಗಳೂರು ವಾಸಿ. ಕಾಡು ಹಕ್ಕಿಯ ಜಾಡು ಹಿಡಿದು ಮಲೆಗಳ ನೀರವತೆಯಲ್ಲಿ ಒಂದಾಗುವ ನಿರಂತರ ತುಡಿತ, ಹಿಂದೆಂದೂ ಹೋಗದ ಊರುಗಳಲ್ಲಿ ಒಡನಾಟ ಬೆಳೆಸುವ ಖುಷಿ, ನಗರದಿಂದ ಆಗಾಗ ಪಲಾಯನ ಮಾಡುವ ಹಂಬಲ. ಅನುಭವಗಳ ಚಿತ್ರಕ್ಕೆ ಅಕ್ಷರದ ಬಣ್ಣ ಹಚ್ಚುವ ಪ್ರಯತ್ನದಲ್ಲಿರುವ ಜೀವನೋತ್ಸಾಹಿ ಶ್ರದ್ಧಾ ಕುಕ್ಕುಜೆ ಬರೆದ ಅನುಭವ ಕಥನ ಓದುವುದೇ ಖುಷಿ. 

shraddha_kukkuje

ಸುತ್ತಲೂ  ಪಳನಿ ಬೆಟ್ಟಗಳು ಕಾಲಗಳನ್ನ ಗೆದ್ದು ಬಂದ ಗಟ್ಟಿಗಿತ್ತಿಯರಂತೆ ನಿಂತಿರುವಾಗ, ಸಣ್ಣ ಪುಟ್ಟ ತೊರೆಗಳೆಲ್ಲ ಲಗಾಮಿಲ್ಲದೆ ಎದ್ದು ಬಿದ್ದು ಝುಳ್- ಝುಳೂ ಎಂದು ಪುಟಿಯುತ್ತ ಹರಿಯುತ್ತಲೇ ಇತ್ತು. ಹಾಗೆ ಕಣ್ಣು ಹಾಯಿಸಿದಾಗ ಶಾಂತೆಯಂತೆ ಕಾಣುವ ಪಳನಿ, ದಿಟ್ಟಿಸಿ ನೋಡಿದಷ್ಟೂ ಎಷ್ಟೋ ಕಾಲಗಳಿಂದ ಈ ಧರೆಯ ಗುಟ್ಟುಗಳನ್ನೆಲ್ಲ ತನ್ನೊಡಲೊಳಗೆ ಹಾಕಿಕೊಂಡು ಬದುಕುತ್ತಿರುವ, ಸಂಕೀರ್ಣತೆಯನ್ನೇ ಹೊದ್ದು ನಿಂತಿರುವ, ಹಸಿರು ಹಚ್ಚಿಕೊಂಡಿರುವ  ಶ್ಯಾಮಲೆ. ಈ ಬೆಟ್ಟಗಳ ಮಧ್ಯೆ ಒಂದು ಪುಟ್ಟ ಹಳ್ಳಿ. ಹಳ್ಳಿಯ ಅಂಚಿನ್ನಲಿರುವ ಕಡಿಬಂಡೆ ಮೇಲೆ ಆಳವಾದ ಪ್ರಪಾತವನ್ನು ನೋಡುತ್ತ ಕೂತಿದ್ದೆ.

shraddha_kukkuje

ಪರಿಚಯವಿಲ್ಲದ ಊರು, ಮಾತಾಡಲು ಬರದ ಭಾಷೆ, ಹಿಂದೆಂದೂ ಭೇಟಿಯಾಗದ ಕುಟುಂಬದ ಜೊತೆ ಎರಡು ದಿನ ಇದ್ದು ಹೋಗುವ ಕಾರ್ಯಕ್ಕೆ ಕೈ ಹಾಕಿದ್ದೆ. ಜಗತ್ತಿನ ಯಾವುದೇ ಗೊಡವೆಗಳಿಲ್ಲದೆ, ಕಾಡು ದಾಟಿ, ಬೆಟ್ಟಗಳಿಗೆ ಮುಖಮಾಡಿ ನೆಲೆಯೂರಿರುವ ಪ್ರಶಾಂತ ಹಳ್ಳಿ ಅದು. ಕೂಕಲ್! ತಮಿಳುನಾಡಿನ ಕೊಡೈಕೆನಾಲ್ ಇಂದ ಸುಮಾರು 30 ಕಿ.ಮಿ

shraddha_kukkuje

ದೂರದಲ್ಲಿರವ ಪುಟ್ಟ ಹಳ್ಳಿ. ದಿನಕ್ಕೆ ಎರಡು ಬಸ್ಸು. ದಾರಿಯ ಎರಡು ಬದಿಯಲ್ಲಿ ಪೈನ್ ಮರಗಳ ಪರದೆ ಸರಿದಾಗೆಲ್ಲ, ಗುಂಪು ಮನೆಗಳ ಹಳ್ಳಿಗಳು. ಹಸಿರ ಉಟ್ಟು ನಿಂತಿರುವ ಭೂಮಿತಾಯಿಯ ನೆರಿಗೆ ಏನೋ ಎಂಬಂತೆ ತರಾಸಿ ಗದ್ದೆಗಳು. ಇಂಥ ಹಳ್ಳಿಗಳಲ್ಲಿ ಅತಿ ಸುಂದರಿ ಕೂಕಲ್.

shraddha_kukkuje

 ನಾನು ಅಲ್ಲಿ ಹೋದದ್ದಕ್ಕೆ ಹೇಳಿಕೊಳ್ಳುವ ಉದ್ದೇಶ ಏನೂ ಇರಲ್ಲಿಲ್ಲ. ನಗರದ ಗುಂಗು ಹೆಚ್ಚಾಯಿತು ಅಂತ ಅನಿಸಿದಾಗೆಲ್ಲ ಹೀಗೆ ಎಲ್ಲೋ ಗೊತ್ತಿಲ್ಲದ ಊರಿಗೆ ಹೋಗಿ ಎರಡು ದಿನ ಕಾಡು ಮೇಡು ಸುತ್ತಿಕೊಂಡು, ಅಲ್ಲಿಯ ಜನರ ರೀತಿ – ನೀತಿಗಳನ್ನು ಗಮನಿಸುತ್ತಾ, ಅವರ ಅಡುಗೆ ತಿಂಡಿಗಳನ್ನು ಸವಿಯುತ್ತಾ, ಅವರ ಸಾದಾ, ಸರಳ ಜೀವನವನ್ನು ಆನಂದಿಸಿ ವಾಪಸ್ ಗೂಡಿಗೆ ಮರಳುವ ಗೀಳೊಂದನ್ನು ಹಚ್ಚಿಕೊಂಡಿದ್ದೇನೆ. ಹಾಗೆ ಹೋಗಿ ಬಂದಾಗೆಲ್ಲ ಜೀವನದಲ್ಲಿ ಅದೇನೋ ಹೊಸ ಹುರುಪು…

shraddha_kukkuje

ಕಾಡಿನ ನೀರವತೆ, ಹರಿವ ಹಳ್ಳದ ಇಂಪು, ನದಿಯ ದಡದ ಏಕಾಂತ, ಮಲೆಗಳಿಂದ ಒಡ್ಡಿ ಬರುವ ಮಳೆ, ಪರಿಚಯವಿಲ್ಲದ ಜನರ ಉದಾರತೆ, ಪ್ರೀತಿ…ಕುತೂಹಲ ಕೆರಳಿಸುವ ಊರಿನ ಕಥೆಗಳು… ಇದಕ್ಕೆಲ್ಲ ಮನಸು ಆಗಾಗ ಹಾತೊರೆಯುತ್ತದೆ. ಹಾಗನಿಸಿದಾಗೆಲ್ಲ ಹೊರಟೇ ಬಿಡುತ್ತಿದ್ದೆ.

shraddha_kukkuje

ನಾನಿದ್ದ ಮನೆಯೆಲ್ಲಾ ಬೆಳ್ಳುಳ್ಳಿ (ಸು)ವಾಸನೆ. ಅದಕೊಂದಷ್ಟು ಪ್ರೀತಿ ಸೇರಿಸಿ, ಅತಿ ರುಚಿಯಾದ ಚಟ್ನಿ ಮಾಡಿ, ತಟ್ಟೆ ತುಂಬಾ ಇಡ್ಲಿ ಹಾಕಿ ಕೊಟ್ಟಿದ್ದಳು ಬಾನು ಅಕ್ಕ. ಪ್ರವಾಸಿ ಗೆಳೆಯನ ಮೂಲಕ ಪರಿಚಯವಾದ ಬಾನು ಅಕ್ಕನಿಗು ನಂಗೂ ಅಲ್ಲಿಯ ತನಕ ಒಬ್ಬರಿಗೆ ಇನ್ನೊಬ್ಬರ ಅಸ್ತಿತ್ವದ ಅರಿವೇ ಇಲ್ಲದ, 500 ಕಿಲೋಮೀಟರ್ ದೂರದ ಜೀವನದ ಅಂತರ. ಒಂಟಿಯಾಗಿ ಬರೋದದ್ರೆ ನನ್ನ ಮನೇಲೆ ಇರ್ಬೇಕು ಅನ್ನೋ ಆಕೆಯ ಹಟಕ್ಕೆ ಮಣಿದು, ಅಲ್ಲೇ ಬೀಡು ಬಿಡುವ ನಿರ್ಧಾರ ಮಾಡಿದ್ದೆ. ಆಕೆಯ ಜೊತೆಗೆ ಹಳ್ಳಿ ಸುತ್ತಿ, ಕ್ಯಾರಟ್ ಗದ್ದೆಯಲ್ಲಿ ಬೆವರು ಸುರಿಸಿ, ಸ್ಟ್ರಾಬೆರಿ ಹಣ್ಣುಗಳನ್ನು ಸವಿಯುತ್ತ, ಆಕೆಯ ಮಕ್ಕಳೊಂದಿಗೆ ಕಾಡು ದಾರಿಯಲ್ಲಿ ದಿನವನ್ನ ಕಳೆಯುತ್ತಾ ಹೊರಜಗತ್ತಿಗೆ ಅಲ್ಪವಿರಾಮ ಹಾಕಿದ್ದೆ. ಮೊದಲ ಬಾರಿ ಹೋದ ಊರಲ್ಲಿ ಈಗ ನನ್ನದೇ ಅನ್ನೋವಷ್ಟು ಆಪ್ತವಾದ ಕುಟುಂಬ ಇದೆ. ಆ ಮನೆಯಲ್ಲಿ ಇದ್ದಷ್ಟು ಪ್ರೀತಿ ದ್ವಿಗುಣ.

ಮನೆ ಹೊರಗೆ ಕಾಲಿಟ್ಟರೆ ಎದುರಾಗುವುದು ಪಳನಿಗೆ ಎದೆಯೊಡ್ಡಿ ಕೂತಿರುವ ಈ ಕಡಿಬಂಡೆ. ಪ್ರತಿದಿನ ಸಂಜೆ ಅಲ್ಲಿ ಕೂತು ಮನಸಿಗೆ ಬಂದ ಆಲೋಚನೆಗಳನ್ನು ಬಿಡಿ ಬಿಡಿಯಾಗಿ ಬಿಡಿಸಿ, ಅದಕ್ಕೊಂದು ರೂಪ ಕೊಟ್ಟು, ಅಲ್ಲೇ ಬೀಸುತ್ತಿದ್ದ ಗಾಳಿಯಲ್ಲಿ ತೇಲಿಸಿ ಬಿಡುತ್ತಿದ್ದೆ. ಹೀಗೆ ನನಗೆ ಬೇಡವಾದ ವಿಷಯಗಳನ್ನೆಲ್ಲ ಒಮ್ಮೆ ತಿರುವಿ ಹಾಕಿ ಗಾಳಿಯಲ್ಲಿ ತೂರಿ ಬರುವುದು ಕೂಡ ಇಂಥ ಗುರಿಯಿಲ್ಲದ ಸುತ್ತಾಟಗಳ ಸಣ್ಣ ಪುಟ್ಟ ಉದ್ದೇಶ. ಇಲ್ಲೇ.. ಇಂಥಲ್ಲೆ, ನಾನು ಜೀವನಕ್ಕೆ ಬೇಕಾದ  ಉತ್ಸಾಹವನ್ನು ದೋಚಿಕೊಂಡು ಬರುವುದು. 

shraddha_kukkuje

ಆ ದೂರದ ಊರಲ್ಲಿ ನನ್ನ ಮನದ ಒಂದು ಪುಟ್ಟ ಭಾಗವನ್ನು ನೆಟ್ಟು ಬಂದಿದ್ದೇನೆ. ಮತ್ತೊಮ್ಮೆ ಹೋಗಿ ಭಾವನೆಗಳ ನೀರೆರೆದು, ಖುಷಿಯ ಕೊಯ್ಲು ಮಾಡುವ ಹಂಬಲ. ಇಲ್ಲಿ ಬೀಸುವ ಗಾಳಿ, ಪಳನಿಯ ಉಸಿರನ್ನು ಸೋಕಿಸುತ್ತದೆ. ಆಕೆಯ ಮಡಿಲಲ್ಲಿ ಚಂದ್ರನನ್ನು ನೋಡುತ್ತ ಇನ್ನೊಂದಷ್ಟು ಗುಟ್ಟುಗಳನ್ನು ಹೇಳೋದಿದೆ, ಹೋಗಿಬರಲೇ?

Related Articles

Leave a Reply

Your email address will not be published. Required fields are marked *

Back to top button