ಇವರ ದಾರಿಯೇ ಡಿಫರೆಂಟುತುಂಬಿದ ಮನೆವಿಂಗಡಿಸದಸಂಸ್ಕೃತಿ, ಪರಂಪರೆಸ್ಫೂರ್ತಿ ಗಾಥೆಸ್ಮರಣೀಯ ಜಾಗ

ಅಸ್ಸಾಂನಲ್ಲೊಂದು ಅಪರೂಪದ ರಂಗ ಶಾಲೆ: ಕುಬ್ಜರ ರಂಗ ತಂಡದ ವಿಶಿಷ್ಟ ಕಥೆ

ನಮ್ಮ ಥಿಯೇಟರ್ ಸಮುರಾಯ್ ತಂಡ ಸದಾ ಕ್ರಿಯಾಶೀಲ. ಪ್ರತಿ ವರ್ಷವೂ ತಂಡ ಕಟ್ಟಿಕೊಂಡು ರಂಗಸೇವೆ ಮಾಡುತ್ತಾ ಬಂದಿದ್ದೇವೆ. ಈ ಸಲ ನಮ್ಮ ತಂಡ ಭೇಟಿ ಕೊಟ್ಟಿದ್ದು ಅಸ್ಸಾಮಿಗೆ. ಅಲ್ಲಿ ‘ದಾಪೋನ್ ದ ಮಿರರ್’ ಎಂಬ ಪ್ರಪಂಚದ ಏಕೈಕ ಕುಬ್ಜರ ನಾಟಕ ತಂಡದೊಡನೆ ಕಳೆದ ದಿನಗಳು ಅವಿಸ್ಮರಣೀಯ!

  • ನಂದಕುಮಾರ ಹೂವಿನಹಡಗಲಿ

ಥಿಯೇಟರ್ ಸಮುರಾಯ್ ತಂಡ ಸತತ ಎಂಟು ವರ್ಷ ಕರ್ನಾಟಕದ ವಿವಿಧ ರಂಗಶಾಲೆಯ ರಂಗತಂಡದ  ನಟರನ್ನ ಕೂಡಿಸಿ, ರಂಗಸೇವೆಯನ್ನ ನೀಡುತ್ತಾ ಬಂದಿದೆ. ಹಾಗೆಯೇ ಈ ವರ್ಷ ಕೂಡ ಕರ್ನಾಟಕದ ನೀನಾಸಂ ರಂಗಶಿಕ್ಷಣ ಕೇಂದ್ರ, ಭಾರತೀಯ ರಂಗಶಿಕ್ಷಣ ಕೇಂದ್ರ ರಂಗಾಯಣ, ಸಾಣೆಹಳ್ಳಿ ರಂಗಶಾಲೆ, ಸಂಸ್ಕೃತಿ ಕಾಲೇಜ್ ಹಾಗೂ ವಿಸ್ತಾರ ರಂಗಶಾಲೆ ಈ ಎಲ್ಲ ರಂಗಶಾಲೆಯಲ್ಲಿ ಕಲಿತ ಒಟ್ಟು ಎಂಟು ಸಮುರಾಯ್ ಗಳನ್ನು ಒಳಗೊಂಡ ತಂಡವನ್ನ ಸಜ್ಜುಗೊಳಿಸಿ ಸೀದಾ ಆಸ್ಸಾಂಗೆ ಕಳುಹಿದರು. ಹೊಸ ಅನುಭವ, ಕಲಿಕೆ ನಿಮಗೆ ದಕ್ಕಲಿ ಎಂದು ಹಾರೈಸಿದರು.

ಅಂತೆಯೆ ನಮ್ಮ ಪಯಣ ಶುರುವಾಗಿ ಸೀದಾ ಆಸ್ಸಾಂ ಕಡೆ ಸಾಗಿ, ಆಸ್ಸಾಂನ ತಾಂಗ್ಲಾದ ಹತ್ತಿರವಿರುವ ಅಮರ್ ಗಾಂವ್ ಅನ್ನು ತಲುಪಿತು. ಅಮರ್ ಗಾಂವ್, ಸಂಪೂರ್ಣ ಕಾಂಕ್ರೀಟ್ ಮುಕ್ತ ಹಳ್ಳಿ. ಎಲ್ಲಿ ನೋಡಿದರಲ್ಲಿ ಬಿದಿರುಮನೆಗಳ ಸುಂದರ ಹಳ್ಳಿ. ಅದರಂತೆಯೆ ಅಲ್ಲಿಯೇ ದೊರೆಯುವ ಕಟ್ಟಿಗೆಗಳಿಂದ ನಿರ್ಮಿಸಿದ ‘ದಾಪೋನ್ ದ ಮಿರರ್’ ಎಂಬ ಸುಂದರ  ಕ್ಯಾಂಪಸ್.

‘ದಾಪೋನ್ ದಾ ಮಿರರ್’  ಪ್ರಪಂಚದ ಏಕೈಕ ಕುಬ್ಜರ ರಂಗತಂಡ ಇದನ್ನ ಸ್ಥಾಪಿಸಿದವರು ಪಬಿತ್ರಾ ರಾಭಾ. ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತು, ತಮ್ಮೂರಲ್ಲೆ ನೆಲೆ ನಿಂತು ಈ ಸಂಸ್ಥೆಯನ್ನ ನಡೆಸುತ್ತಿರುವುದು ಶ್ಲಾಘನೀಯ.

ಈ  ಸ್ಥಳಕ್ಕೆ ಬಂದಾಗ ನಮಗಾದ ಆನಂದ ಅಷ್ಟಿಷ್ಟಲ್ಲ. ಒಟ್ಟು ಇಪ್ಪತ್ತು ದಿನದ ನಾಟಕ ಕಲಿಕೆಯೆಂದರೆ ಹೇಳಲಿಕ್ಕಾಗದ ಅನುಭವ. ಐದು ರಾಜ್ಯಗಳನ್ನ ದಾಟಿ ಬಂದರೂ ಇಲ್ಲಿ ನನ್ನ ರಾಜ್ಯ ಕಾಣುತ್ತಿತ್ತು.

ಇಲ್ಲಿಯ ಅಡಿಕೆ ಮತ್ತು ಹಲಸಿನ ಮರ ಹೆಗ್ಗೋಡನ್ನ ನೆನಪಿಸಿದರೆ, ಇಲ್ಲಿಯ ದಾಸ್ವಾಳ ಇತ್ತೀಚೆಗೆ ಬಾಡಿಗೆ ಹಿಡಿದ  ದೊಡ್ಡಮನೆಯ ಹಿತ್ತಲಲ್ಲಿರುವ ನನ್ನ ಪುಟ್ಟ ರೂಮನ್ನ ನೆನಪಿಸುತ್ತಿತ್ತು. ಇಲ್ಲಿಯ ತುಂಬಿ ಹೂವು, ಹಳದಿ ಹೂವು, ತರಕಾರಿ ಮೂಲಂಗಿ ತುಸು ಭಿನ್ನವಾಗಿ ರುಚಿಸಿದರೂ, ನಮ್ಮ ರಾಜ್ಯವನ್ನ ನೆನಪಿಸುತ್ತಿತ್ತು. ದೂರವಿದ್ದಷ್ಟು ಹತ್ತಿರವಾಗುತ್ತಿದ್ದೆ ನನ್ನೂರಿಗೆ.

ನೀವುಇದನ್ನುಇಷ್ಟಪಡಬಹುದು: ಜಬಾರಾ ಎಂಬ ಹಳ್ಳಿಯನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಿದ ಮಾದರಿ ಐಎಎಸ್ ಅಧಿಕಾರಿ ರಜತ್ ಬನ್ಸಲ್

ಇಲ್ಲಿಯ ಕುಬ್ಜ ಕಲಾವಿದರ ಬಗ್ಗೆ ಹೇಳುವುದಾದರೆ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ, ಕೋಮಲ್, ಗಣೇಶ್, ದಿಲೀಪ್, ರಂಜೀತ್, ಪೃಥ್ವಿರಾಜ್, ಪಾರ್ತೋ(ಪಾರ್ಥ), ಕುಬ್ಜದಂಪತಿಗಳಾದ ತೋರಾ ದೀದಿ ಮತ್ತು ನಯನ್ ದಾದ. ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಗಾಗಿ ಪುಟ್ಟ ಬಿದಿರಿನ ಮನೆ ಇದೆ  ಕೆಲಸಕ್ಕೆ ಪುಟ್ಪ ದಿನಸಿ ಅಂಗಡಿ ಕೂಡ ಇದೆ.

 ಇವರೆಲ್ಲರು ಮಾಂತ್ರಿಕ ಕಲಾವಿದರು. ಆಸ್ಸಾಮಿ ರಾಭಾ ಭೋಡೋ ಕಲೆಯ ಸಮ್ಮಿಶ್ರಣ. ಪ್ರತಿಯೊಬ್ಬರು ಹಾಡುತ್ತಾರೆ. ಒಂದಲ್ಲಾ ಒಂದು ವಾದ್ಯವನ್ನ ನುಡಿಸುತ್ತಾರೆ. ಕೊಳಲನ್ನಂತೂ ಅದ್ಭುತವಾಗಿ ನುಡಿಸುತ್ತಾರೆ. ಇವರೆಲ್ಲರಿಗೂ ಒಬ್ಬ ಲೀಡರ್. ಇವ ಕುಬ್ಜನಲ್ಲ, ನನಗಿಂತ ಸ್ವಲ್ಪ ಕುಳ್ಳ. ಆದರೆ ಇವನು ಮುಟ್ಟದ ವಾದ್ಯಗಳಿಲ್ಲ. ಗಿಟಾರ್ ಹಿಡಿದು ತಂಪಾದ ವಾತಾವರಣದಲ್ಲಿ ಹಾಡಲು ಶುರು ಮಾಡಿದರೆ ಮುಗೀತು ನಿಂತಲ್ಲೇ ಮೈ ಮರೆಯುತ್ತೇವೆ.

ಕ್ಯಾಂಪಸ್ನಲ್ಲಿ ಈ ಕುಬ್ಜರಿಗೆ ಸಹಾಯ ಮಾಡಲು ಹೊಲಗದ್ದೆಗಳ ಕೆಲಸ ನೋಡಿಕೊಳ್ಳಲು ನೀಲು, ರಾಘವ್ ಮತ್ತು ಕಪಿಲ್ ಇದ್ದಾರೆ. ತಾಂಗ್ಲಾದಲ್ಲಿನ ಇವರ ಕಛೇರಿಯನ್ನ ನೋಡಿಕೊಳ್ಳುತ್ತಿರುವ ಸನ್ಶ್ರೀ, ಜೂಪಿತೋರಾ ಮತ್ತು ಕಲ್ಯಾಣಿ.

ನಮಗೆ ಬೋಡೋ, ಬೀಹು ಜಾನಪದ ನೃತ್ಯ ಹೆಜ್ಜೆಗಳನ್ನು ಹೇಳಿಕೊಟ್ಟಿದ್ದಾರೆ. ಇಲ್ಲಿನ ಪ್ರತಿಯೊಬ್ಬರು ನನ್ನ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದ್ದಾರೆ

ಮೂರುಹೊತ್ತು ರುಚಿಯಾಗಿ ಅಡುಗೆ ಮಾಡಿ ಬಡಿಸುತ್ತಿದ್ದ ಬಬಿತಾ ಮಾ(ಅಮ್ಮ) ಮತ್ತು ನಬೋನಿತಾ ಬೈನಾ (ಅಕ್ಕ) ನಮ್ಮನ್ನ ಬೀಳ್ಕೊಡುವಾಗ ಅತ್ತರು. ಫಿರ್ ಆನಾ ಅಂದರು. ಮೊನ್ನೆ ನಾ ಊಟ ಮಾಡಿ ಮತ್ತೆ ತಾಲೀಮಿನ ಕಡೆಗೆ ಹೊರಟಾಗ ಬಬಿತಾ ಮಾ ಆಸ್ಸಾಮಿ ಭಾಷೆಯಲ್ಲಿ ದುಃಖಿಸುತ್ತಾ ಏನನ್ನೋ ಹೇಳಿದರು. ಅದು ನನಗೆ ಅರ್ಥ ಆಗಲಿಲ್ಲ.

ಆಗ ನಬೋನಿತಾ ಅಕ್ಕನ ಕಡೆ ನೋಡಿದೆ, “ಕಲ್ ಆಪ್ ಜಾರಹೇ ನಾ ಇಸ್ಲಿಯೆ ಆಪ್ಕೇ ಹಾತ್ ಸೇ ಪಾನೀ ಪೀನಾ ಚಾತಿಹೆ ಅಮ್ಮಾ” ಅಂತ ಅಂದರು. ಅವರಿಬ್ಬರೂ ಊಟ ಮುಗಿಸಿ ಹಾಗೇ ಕೂತಿದ್ದು, ನಾ ಕುಡಿಯಲು ನೀರು ಬಡಿಸಲಿ ಅಂತ ಕಾದಿದ್ದು, ಇಪ್ಪತ್ತು ದಿನ ನಮಗೆ ಅಡುಗೆ ಬಡಿಸಿ ನೀರು ನೀಡಿ ಕುಡಿಯಲು ಸಾಕು ಅಂದರಲ್ಲ, ನನ್ನ ಅವ್ವ ಇವರಲ್ಲಿ ಕಂಡಳು.

ಈ ಎಲ್ಲ ಅನುಭವಕ್ಕೆ  ಅವಕಾಶವನ್ನ ಒದಗಿಸಿದ ಗುರುಗಳಾದ ರಾಘು ಪುರಪ್ಷೇಮನೆ, ಉಮೇಶ್ ಸಾಲಿಯಾನ್, ಸೂರಜ್ ಮೈಸೂರ್ ಹಾಗೂ ಥಿಯೇಟರ್ ಸಮುರಾಯ್ ನ ಎಲ್ಲ ಸದಸ್ಯರಿಗೆ ನಾನು ಆಭಾರಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button